
ಸಚಿವ ಕೃಷ್ಣಬೈರೇಗೌಡ ಕಂದಾಯ ಇಲಾಖೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
4 ಜಿಲ್ಲೆ ʼಎಸಿʼಗಳ ಸಭೆ; 6 ತಿಂಗಳು ಮೀರಿದ ಪ್ರಕರಣಗಳ ಇತ್ಯರ್ಥಕ್ಕೆ ಕಂದಾಯ ಸಚಿವರ ಸೂಚನೆ
ರಾಜ್ಯದ ಉಪವಿಭಾಗಾಧಿಕಾರಿ ನ್ಯಾಯಾಲಯಗಳಲ್ಲಿ 19,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ 13,000 ಪ್ರಕರಣಗಳು ನಾಲ್ಕು ಜಿಲ್ಲೆಯಲ್ಲೇ ಬಾಕಿ ಇವೆ ಎಂದು ಸಚಿವ ಕೃಷ್ಣ ಬೈರೇಗೌಡ ಬೇಸರ ವ್ಯಕ್ತಪಡಿಸಿದರು.
ರಾಜ್ಯದ ಉಪವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಉಳಿದಿರುವ ಶೇ.70ಕ್ಕಿಂತ ಹೆಚ್ಚು ಪ್ರಕರಣಗಳು ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ ಹಾಗೂ ತುಮಕೂರು ಜಿಲ್ಲೆಯಲ್ಲೇ ಇದ್ದು, ಆರು ತಿಂಗಳು ಮೀರಿದ ಎಲ್ಲ ಪ್ರಕರಣಗಳನ್ನು ಮಾರ್ಚ್ ಅಂತ್ಯದ ವೇಳೆಗೆ ವಿಲೇಮಾರಿ ಮಾಡುವಂತೆ ಕಂದಾಯ ಸಚಿವ ಕೃಷ್ಣ ಬೈರೇಗೌಡ ತಿಳಿಸಿದರು.
ಬುಧವಾರ (ಜ.7) ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿ ಬಾಕಿ ಪ್ರಕರಣಗಳ ವಿಲೇವಾರಿಗೆ ಸಂಬಂಧಿಸಿದಂತೆ ನಡೆದ ಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಉಪ ವಿಭಾಗಾಧಿಕಾರಿಗಳ ನ್ಯಾಯಾಲಯದಲ್ಲಿರುವ ಪ್ರಕರಣಗಳನ್ನು ತಿಂಗಳಾಂತ್ಯಕ್ಕೆ ಗಣನೀಯವಾಗಿ ಕಡಿಮೆ ಮಾಡಬೇಕು ಎಂದರು.
19 ಸಾವಿರ ಪ್ರಕರಣ ಬಾಕಿ
ಬೆಂಗಳೂರು ಸುತ್ತಮುತ್ತ ನಾಲ್ಕು ಜಿಲ್ಲೆಗಳಲ್ಲೇ ಹೆಚ್ಚಿನ ಸಂಖ್ಯೆಯ ಪ್ರಕರಣಗಳು ಬಾಕಿ ಉಳಿದಿವೆ. ಬೇರೆ ಜಿಲ್ಲೆಗಳ ಅಧಿಕಾರಿಗಳನ್ನು ಕೇಳುವುದೂ ಕಷ್ಟ. ಒಟ್ಟಾರೆ ರಾಜ್ಯದಲ್ಲಿ 19,000 ಪ್ರಕರಣಗಳು ಬಾಕಿ ಇವೆ. ಈ ಪೈಕಿ 13,000 ಪ್ರಕರಣಗಳು ಈ ನಾಲ್ಕು ಜಿಲ್ಲೆಗಳಲ್ಲೇ ಬಾಕಿ ಉಳಿದಿವೆ ಎಂದು ಬೇಸರ ವ್ಯಕ್ತಪಡಿಸಿದರು.
ಅನರ್ಹ ಪ್ರಕರಣ ವಿಲೇವಾರಿ ಮಾಡಿ
ದಾಖಲೆಗಳು ಕಾಣೆ, ಆರ್‌ಸಿಸಿಎಂಎಸ್‌ನಲ್ಲಿ ವಿಲೇವಾರಿ ಆಗದ, ಅನರ್ಹ ಪ್ರಕರಣಗಳನ್ನಾದರೂ ಜನವರಿ ಅಂತ್ಯದೊಳಗೆ ವಿಲೇವಾರಿ ಮಾಡಬೇಕು. ಎಲ್ಲಾ ಅಧಿಕಾರಿಗಳಿಗೂ ತಮ್ಮ ಎದುರಿನ ಸವಾಲು ಹಾಗೂ ಪರಿಹಾರ ಎರಡರ ಬಗ್ಗೆಯೂ ಅರಿವಿದೆ. ಸುಲಭ ಪ್ರಕರಣಗಳನ್ನು ಮೊದಲು ಇತ್ಯರ್ಥಗೊಳಿಸಬೇಕು. ಎಸಿ ಕೋರ್ಟ್ ಪ್ರಕರಣಗಳ ವಿಚಾರದಲ್ಲಿ ರಾಜ್ಯಾದ್ಯಂತ ಉತ್ತಮ ಪ್ರಗತಿ ಸಾಧಿಸಲಾಗಿದೆ. ಈ ನಾಲ್ಕು ಜಿಲ್ಲೆಗಳಲ್ಲೇ ಕಳೆದ ಅಕ್ಟೋಬರ್‌ನಲ್ಲಿ 15,364 ಪ್ರಕರಣ ಬಾಕಿ ಇತ್ತು. ಆದರೆ, ಪ್ರಸ್ತುತ ಆ ಸಂಖ್ಯೆ 13,610ಕ್ಕೆ ಇಳಿಸಲಾಗಿದೆ. ಆದೇಶಕ್ಕಾಗಿ ಕಾಯ್ದಿರಿಸಿರುವ ಹಾಗೂ ಅನರ್ಹ ಪ್ರಕರಣಗಳನ್ನು ಶೀಘ್ರ ಇತ್ಯರ್ಥಗೊಳಿಸಿದರೆ ಈ ಸಂಖ್ಯೆ ಮತ್ತಷ್ಟು ಸುಧಾರಿಸಲಿದೆ ಎಂದರು.
ಪ್ರಗತಿ ಪರಿಶೀಲನಾ ಸಭೆ ವ್ಯರ್ಥ
ಫೆಬ್ರವರಿ ಮೊದಲ ವಾರದಲ್ಲಿ ನಾಲ್ಕೂ ಜಿಲ್ಲೆಯ ಅಧಿಕಾರಿಗಳ ಮತ್ತೊಂದು ಸುತ್ತಿನ ಸಭೆ ನಡೆಸಿ ಅದರ ಆಧಾರದಲ್ಲಿ ರಾಜ್ಯದ ಎಲ್ಲಾ ಎಸಿಗಳ ಜೊತೆ ಪ್ರಗತಿ ಪರಿಶೀಲನಾ ಸಭೆ ಮಾಡಲಾಗುವುದು. ಈ ನಾಲ್ಕೂ ಜಿಲ್ಲೆಗಳಲ್ಲಿ ಸುಧಾರಣೆ ಕಾಣದೆ, ಇಡೀ ರಾಜ್ಯದ ಪ್ರಗತಿ ಪರಿಶೀಲನಾ ಸಭೆ ವ್ಯರ್ಥವಾಗುತ್ತದೆ. ಪ್ರತಿ ಶನಿವಾರ ಎಸಿಗಳ ಪ್ರಗತಿಯ ಬಗ್ಗೆ ಗಮನ ವಹಿಸಲು ನೂತನ ಕಂದಾಯ ಆಯುಕ್ತೆ ಮೀನಾ ನಾಗರಾಜ್ ಸಿ.ಎನ್. ಅವರಿಗೆ ಸೂಚನೆ ನೀಡಿದರು.

