Bengaluru Business Corridor| ಹೂಡಿಕೆಗೆ ಬಲ, ರಿಯಲ್‌ ಎಸ್ಟೇಟ್‌ಗೆ ಹೊಸ ಆಯಾಮ!
x

Bengaluru Business Corridor| ಹೂಡಿಕೆಗೆ ಬಲ, ರಿಯಲ್‌ ಎಸ್ಟೇಟ್‌ಗೆ ಹೊಸ ಆಯಾಮ!

ಸುಮಾರು 19 ವರ್ಷಗಳ ಹಿಂದಿನ ಉದ್ದೇಶಿತ ಪೆರಿಫೆರಲ್ ರಿಂಗ್ ರಸ್ತೆ (ಪಿಆರ್ ಆರ್) ಯೋಜನೆ ಇದೀಗ ಬೆಂಗಳೂರು ಬಿಸಿನೆಸ್ ಕಾರಿಡಾರ್ ಆಗಿ ಅನುಷ್ಠಾನಗೊಳ್ಳುತ್ತಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮದ ಬೆಳವಣಿಗೆಗೆ ವೇಗ ಸಿಗಲಿದೆ.


Click the Play button to hear this message in audio format

ʼಬೆಂಗಳೂರು ಬಿಸಿನೆಸ್ ಕಾರಿಡಾರ್ʼ (ಬಿಬಿಸಿ) ಯೋಜನೆಯು ಬೆಂಗಳೂರಿನಲ್ಲಿ ರಿಯಲ್ ಎಸ್ಟೇಟ್ ಮತ್ತು ಹೂಡಿಕೆ ವಲಯದ ಚಹರೆಯನ್ನೇ ಬದಲಿಸಲಿದೆ. ಬೆಂಗಳೂರಿನಲ್ಲಿ ನೈಸ್‌ ರಸ್ತೆಯೊಂದಿಗೆ ಐದು ಮೂಲೆಗಳನ್ನು ಸಂಪರ್ಕಿಸುವ ಫೆರಿಫರಲ್‌ ರಿಂಗ್‌ ರಸ್ತೆ(PRR) ಬೆಂಗಳೂರಿನ ವಾಹನ ದಟ್ಟಣೆ ನಿವಾಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ.

ಬೆಂಗಳೂರು ಬಿಸಿನೆಸ್‌ ಕಾರಿಡಾರ್ ಹಾದು ಹೋಗುವ ಮಾರ್ಗ ಹಾಗೂ ಸಮೀಪದ ನಗರಗಳಾದ ದೇವನಹಳ್ಳಿ, ಹೊಸಕೋಟೆ, ಸರ್ಜಾಪುರ ಮತ್ತು ಕನಕಪುರದಲ್ಲಿ ಭೂಮಿಯ ಮೌಲ್ಯ ಶೇ. 20 ರಿಂದ 40 ರಷ್ಟು ಹೆಚ್ಚಾಗುವ ಸಾಧ್ಯತೆಯಿದೆ. ಐಟಿ ಉದ್ದಿಮೆಗಳು, ಲಾಜಿಸ್ಟಿಕ್ಸ್ ಹಬ್ ಮತ್ತು ಕೈಗಾರಿಕಾ ಕ್ಲಸ್ಟರ್‌ಗಳಿಗೆ ಕಾರಿಡಾರ್ ರಹದಾರಿ ಆಗಲಿದೆ.

ವಾಣಿಜ್ಯ ಕಟ್ಟಡ, ಸಂಕೀರ್ಣಗಳು ತಲೆ ಎತ್ತುವುದರಿಂದ ಹೂಡಿಕೆದಾರರಿಗೆ ಅಗತ್ಯ ಮೂಲಸೌಕರ್ಯ ಸಿಗಲಿದೆ. ಒಟ್ಟು 117 ಕಿ.ಮೀ ಉದ್ದದ ಅಷ್ಟಪಥದ ಬೆಂಗಳೂರು ಬಿಸಿನೆಸ್‌ ಕಾರಿಡಾರ್, ಉತ್ತರ ಮತ್ತು ಪೂರ್ವ ಬೆಂಗಳೂರನ್ನು ಸಂಪರ್ಕಿಸಲಿದೆ. ಹೊರವಲಯಗಳಿಂದ ನಗರ ಪ್ರವೇಶಿಸುವವರಿಗೆ ಸುಗಮ ಸಾರಿಗೆ ವ್ಯವಸ್ಥೆ ಒದಗಿಸಲಿದೆ. ಈಗಾಗಲೇ 7,000 ಕೋಟಿ ಮೌಲ್ಯದ ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲು ರಾಜ್ಯ ಸರ್ಕಾರ ಸಿದ್ಧತೆ ನಡೆಸುತ್ತಿದೆ.

ಹರಿದು ಬರಲಿದೆ ಬಂಡವಾಳ

ಡಿಸಿಎಂ ಡಿ.ಕೆ. ಶಿವಕುಮಾರ್‌ ಅವರು ಯಾವುದೇ ಡಿನೋಟಿಫೈಗೆ ಅವಕಾಶ ಇಲ್ಲದಂತೆ ಭೂಸ್ವಾಧೀನ ಪ್ರಕ್ರಿಯೆ ನಡೆಸುವಂತೆ ಅಧಿಕಾರಿಗಳಿಗೆ ಸೂಚಿಸಿದ ಬಳಿಕ ಹಲವು ಉದ್ಯಮಿಗಳು ಪ್ರಸ್ತಾವಿತ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಸುತ್ತ ಹೂಡಿಕೆಗೆ ಮುಂದಾಗಿದ್ದಾರೆ.

ವಿಶ್ವದ ಅತಿದೊಡ್ಡ ಪರ್ಯಾಯ ಆಸ್ತಿ ವ್ಯವಸ್ಥಾಪನಾ ಸಂಸ್ಥೆಯಾದ ಬ್ಲ್ಯಾಕ್‌ ಸ್ಟೋನ್‌ ಈಗಾಗಲೇ ಬೆಂಗಳೂರಿನಲ್ಲಿ ಹೂಡಿಕೆಗೆ ತೀರ್ಮಾನಿಸಿದೆ. ಬ್ಲ್ಯಾಕ್‌ ಸ್ಟೋನ್‌ ಸಂಸ್ಥೆಯು ವಿಶ್ವದಾದ್ಯಂತ ಒಟ್ಟು 12,500 ಕ್ಕೂ ರಿಯಲ್ ಎಸ್ಟೇಟ್ ಸ್ವತ್ತುಗಳು, 250ಕ್ಕೂ ಹೆಚ್ಚು ವಿವಿಧ ಕಂಪನಿಗಳನ್ನು ಹೊಂದಿದೆ.

ಇನ್ನು ಸಿಂಗಾಪುರ ಮೂಲದ ಜಿಐಸಿ ಗೃಹ ಸಾಲ ಸಂಸ್ಥೆ ಸಹ ಬೆಂಗಳೂರಿನಲ್ಲಿ ಕಚೇರಿ ಸ್ಥಳ ಮತ್ತು ಲಾಜಿಸ್ಟಿಕ್ಸ್ ಪಾರ್ಕ್ ಸ್ಥಾಪನೆಗೆ ಆಸಕ್ತಿ ತೋರಿದೆ. ಇದರಿಂದ ಹೆಚ್ಚು ಸಾಂಸ್ಥಿಕ ಬಂಡವಾಳ ಹರಿದು ಬರುವ ಸಾಧ್ಯತೆ ಇದೆ. ಇದಲ್ಲದೇ ಯೋಜನೆಯಡಿ ರಸ್ತೆಯಲ್ಲದೆ, ಮೆಟ್ರೋ ರೈಲು, ಸಮಗ್ರ ಟೌನ್‌ಶಿಪ್‌ ಮತ್ತು ಆಧುನಿಕ ವಸತಿ ಸಂಕೀರ್ಣಗಳು ತಲೆ ಎತ್ತಲಿವೆ. ಸುಮಾರು 27 ಸಾವಿರ ಕೋಟಿ ವೆಚ್ಚದ ಯೋಜನೆಯಿಂದ ಬೆಂಗಳೂರಿನ ಸಾರಿಗೆ ಹಾಗೂ ವ್ಯವಹಾರಕ್ಕೆ ಹೊಸ ಆಯಾಮ ನೀಡಲಿದೆ. 2 ವರ್ಷಗಳಲ್ಲಿ ʼಬೆಂಗಳೂರು ಬಿಸಿನೆಸ್ ಕಾರಿಡಾರ್ʼ ಯೋಜನೆ ಪೂರ್ಣಗೊಳಿಸಲು ಸರ್ಕಾರ ಗಡುವು ವಿಧಿಸಿದೆ. ಹಾಗಾಗಿ, ಸಿವಿಲ್ ಕಾಮಗಾರಿಗಳಿಗೆ ಟೆಂಡರ್ ಕರೆಯಲು ಸಿದ್ಧತೆ ನಡೆದಿದೆ.

ಮೊದಲ‌ ಹಂತದಲ್ಲಿ ಉತ್ತರ ಕಾರಿಡಾರ್ ನಿರ್ಮಾಣಕ್ಕೆ (ತುಮಕೂರು ರಸ್ತೆಯಿಂದ ಎಲೆಕ್ಟ್ರಾನಿಕ್ಸ್ ಸಿಟಿಗೆ) ಆದ್ಯತೆ ನೀಡಲಿದ್ದು, ನಂತರ ದಕ್ಷಿಣ ಕಾರಿಡಾರ್ ಅಭಿವೃದ್ಧಿ ಕೈಗೆತ್ತಿಕೊಳ್ಳಲು ತೀರ್ಮಾನಿಸಲಾಗಿದೆ. ಬೆಂಗಳೂರಿನ ಪ್ರಮುಖ ವಲಯಗಳಲ್ಲಿ ಸುಗಮ‌ ಸಂಚಾರ ಹಾಗೂ ಜನದಟ್ಟಣೆ ಕಡಿಮೆ ಮಾಡುವ ರೀತಿಯಲ್ಲಿ ಯೋಜನೆ ವಿನ್ಯಾಸಗೊಳಿಸಲಾಗಿದೆ.

ಬಿಬಿಸಿ ಯೋಜನೆಗೆ ಹುಡ್ಕೋ ಸಂಸ್ಥೆ 27 ಸಾವಿರ ಕೋಟಿ ರೂ. ಸಾಲ ನೀಡಲು ಒಪ್ಪಿದೆ. ಉದ್ದೇಶಿತ ಕಾರಿಡಾರ್‌ನಲ್ಲಿ ರಸ್ತೆ, ಮೆಟ್ರೋಗೂ ಸ್ಥಳ ಮೀಸಲಿಡಲಾಗಿದೆ.

ಈ ಮೊದಲು 100 ಮೀಟರ್ ಅಗಲದ ಕಾರಿಡಾರ್ ಮಾರ್ಗಕ್ಕೆ ಯೋಜಿಸಲಾಗಿತ್ತು. ಬಳಿಕ ಅದನ್ನು ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ವೇ ಅಗಲಕ್ಕೆ( 65 ಮೀಟರ್) ಸೀಮಿತ ಮಾಡಲಾಗಿದೆ. ಮೆಟ್ರೋ ಯೋಜನೆಗೆ 5 ಮೀಟರ್ ಕಾಯ್ದಿರಿಸಿ, ಉಳಿದ 30 ಮೀಟರ್ ಭೂಮಿಯಲ್ಲಿ ನಿವೇಶನಗಳನ್ನು ಅಭಿವೃದ್ಧಿಪಡಿಸಿ ರೈತರಿಗೆ ಪರಿಹಾರ ರೂಪದಲ್ಲಿ ನೀಡಲು ಯೋಜಿಸಲಾಗಿದೆ.

ಕಾರಿಡಾರ್‌ ಮಾರ್ಗ ಹೇಗಿದೆ?

ಬೆಂಗಳೂರು ಬಿಸಿನೆಸ್ ಕಾರಿಡಾರ್‌ ಮಾರ್ಗವು ತುಮಕೂರು ರಸ್ತೆಯ ಬೆಂಗಳೂರು ಇಂಟರ್‌ನ್ಯಾಷನಲ್‌ ಎಕ್ಸಿಬ್ಯುಷನ್‌ ಸೆಂಟರ್‌(BIEC) ನಿಂದ ಆರಂಭವಾಗಲಿದೆ. ಅಲ್ಲಿಂದ ಬಳ್ಳಾರಿ ರಸ್ತೆ ದಾಟಿ ಹಳೆ ಮದ್ರಾಸ್ ರಸ್ತೆಯನ್ನು ತಲುಪಲಿದೆ. ಬಳಿಕ ಅದು ಎಲೆಕ್ಟ್ರಾನಿಕ್ಸ್ ಸಿಟಿಯನ್ನು ಸಂಪರ್ಕಿಸಿ ಅಂತಿಮವಾಗಿ ಹೊಸೂರು ರಸ್ತೆ ಜಂಕ್ಷನ್‌ನಲ್ಲಿ ನೈಸ್‌ ರಸ್ತೆಯೊಂದಿಗೆ ಸಂಪರ್ಕ ಸಾಧಿಸಲಿದೆ. ಯಥಾಸ್ಥಿತಿಯಲ್ಲಿ ನೈಸ್‌ ರಸ್ತೆಯು ಮೈಸೂರು ರಸ್ತೆಗೆ ಸಂಪರ್ಕ ಒದಗಿಸುತ್ತಿದೆ.

ಬಿಬಿಸಿ ಕಾರಿಡಾರ್‌ ಜೊತೆಗೆ ಪಿಆರ್‌ಆರ್‌-2 ಸಂಪರ್ಕಕ್ಕಾಗಿ ಮುಖ್ಯ ಸಂಚಾರ ಸಂಪರ್ಕ ರಸ್ತೆ (Major Arterial Road) ಕಡೆಗೆ ಹೆಚ್ಚುವರಿ ಬಿಡಿ ರಸ್ತೆಯನ್ನು ಹೊಂದಿರಲಿದೆ.

8 ಪಥಗಳ ಎಕ್ಸ್‌ಪ್ರೆಸ್‌ ವೇ, 4 ಪಥದ ಸರ್ವಿಸ್ ರಸ್ತೆ ಮತ್ತು ಭವಿಷ್ಯದ ಮೆಟ್ರೋ ಯೋಜನೆಗೆ ಜಾಗ ಮೀಸಲಿಡಲಾಗಿದೆ.

ಪರಿಹಾರಕ್ಕೆ ಪಂಚ ಸೂತ್ರ

ಬೆಂಗಳೂರು ಬಿಸಿನೆಸ್ ಕಾರಿಡಾರ್‌ ಯೋಜನೆಗೆ 2400 ಎಕರೆ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಿದ್ದು, ಭೂ ಪರಿಹಾರ ನೀಡಲು ಸರ್ಕಾರವು ರೈತರಿಗೆ ಐದು ಆಯ್ಕೆಗಳನ್ನು ಕೊಟ್ಟಿದೆ.

ನಗರ ಮಿತಿಯೊಳಗೆ ಭೂಮಿಗೆ ಮಾರ್ಗದರ್ಶಿ ಮೌಲ್ಯದ ಎರಡು ಪಟ್ಟು ಅಥವಾ ಹತ್ತಿರದ ಗ್ರಾಮೀಣ ಪ್ರದೇಶಗಳಲ್ಲಿ 20 ಗುಂಟೆವರೆಗಿನ ಜಮೀನಿಗೆ ಮೂರು ಪಟ್ಟು ನಗದು ಪರಿಹಾರ, ವರ್ಗಾವಣೆ ಮಾಡಬಹುದಾದ ಅಭಿವೃದ್ಧಿ ಹಕ್ಕು (TDR), ರೈತರಿಗೆ ನೆಲದ ವಿಸ್ತೀರ್ಣ ಅನುಪಾತ (FAR) ಹೆಚ್ಚಳ, ಅಭಿವೃದ್ಧಿಪಡಿಸಿದ ವಸತಿ ನಿವೇಶನಗಳ ಹಂಚಿಕೆ ಅಥವಾ ವಾಣಿಜ್ಯ ಭೂಮಿ ಒದಗಿಸುವ ಆಯ್ಕೆಗಳನ್ನು ಮುಂದಿಟ್ಟಿದೆ. ಬಿಬಿಸಿ ಯೋಜನೆಗೆ ಸಂಬಂಧಿಸಿ 948 ಎಕರೆ ಭೂಮಿಗೆ ಪರಿಷ್ಕೃತ ಪರಿಹಾರ ನೀಡಲು ರಾಜ್ಯ ಸಚಿವ ಸಂಪುಟವು ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೂಚಿಸಿದೆ.

ಬಹುತೇಕ ರೈತರು ರಾಜ್ಯ ಸರ್ಕಾರ ಐದೂ ಪರಿಹಾರ ಆಯ್ಕೆಗಳನ್ನು ತಿರಸ್ಕರಿಸಿದ್ದು, ನ್ಯಾಯಾಲಯದ ಮೊರೆ ಹೋಗುವುದಾಗಿ ಎಚ್ಚರಿಸಿದ್ದಾರೆ. ಆದರೆ, ರೈತರ ಎಚ್ಚರಿಕೆಯನ್ನೂ ಪರಿಗಣಿಸದ ಡಿಸಿಎಂ ಡಿ.ಕೆ.ಶಿವಕುಮಾರ್‌ ಅವರು ಭೂಸ್ವಾಧೀನವನ್ನು ಯಾವುದೇ ಕಾರಣಕ್ಕೂ ಕೈ ಬಿಡುವುದಿಲ್ಲ. ನ್ಯಾಯಾಲಯದಲ್ಲಿ ಪರಿಹಾರ ಠೇವಣಿ ಇಟ್ಟಾದರೂ ಭೂಮಿ ಸ್ವಾಧೀನ ಮಾಡಿಕೊಳ್ಳುತ್ತೇವೆ ಎಂದು ಹೇಳಿರುವುದು ಯೋಜನೆ ಜಾರಿಯ ಬದ್ಧತೆಯನ್ನು ಪ್ರದರ್ಶಿಸಿದೆ.

"2007ರಲ್ಲಿ ಫೆರಿಫರಲ್‌ ರಿಂಗ್‌ ರಸ್ತೆಗಾಗಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಲಾಯಿತು. ಈಗ ಅದೇ ಯೋಜನೆ ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಆಗಿದೆ. 18 ವರ್ಷಗಳಲ್ಲಿ ಭೂಮಿಯ ಬೆಲೆ ಗಗನಕ್ಕೇರಿದೆ. ಕೆಲ ಹಳ್ಳಿಗಳಲ್ಲಿ ಪ್ರತಿ ಎಕರೆ 15.60 ಕೋಟಿ ರೂ. ಬೆಲೆ ಬಾಳಲಿದೆ ಎಂದು ಸರ್ಕಾರವೇ ಹೇಳಿದರೂ ಎಕರೆಗೆ 2.25 ಕೋಟಿ ರೂ. ನಿಗದಿ ಮಾಡಿದೆ. ಪ್ರಸ್ತುತ, ಭೂಮಿಯ ಬೆಲೆಯು ಮಾರ್ಗಸೂಚಿ ಮೌಲ್ಯಕ್ಕಿಂತ ಶೇ 60 ರಷ್ಟು ಹೆಚ್ಚಿದೆ. ಹಾಗಾಗಿ ನಾವು ಭೂಮಿ ಕೊಡುವುದಿಲ್ಲ ಎಂದು ವರ್ತೂರು ಸಮೀಪದ ಗುಂಜೂರು ನಿವಾಸಿ ನವೀನ್‌ಕುಮಾರ್‌ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

2007 ರಲ್ಲಿ ಹೊರಡಿಸಿದ ಅಧಿಸೂಚನೆ ಬಳಿಕ ನಾವು ಭೂಮಿಯನ್ನು ಮಾರಾಟ ಮಾಡಲು ಆಗುತ್ತಿಲ್ಲ. ಜಮೀನಿನಲ್ಲಿ ಮನೆ ಕಟ್ಟಲೂ ಆಗುತ್ತಿಲ್ಲ. ಇದರಿಂದ ಬಹುತೇಕ ರೈತಾಪಿ ಕುಟುಂಬಗಳು ಸಮಸ್ಯೆ ಎದುರಿಸುತ್ತಿವೆ ಎಂದು ಅಳಲು ತೋಡಿಕೊಂಡರು.

ಸುಮಾರು ರೈತರಿಗೆ ಪರಿಹಾರ ರೂಪವಾಗಿ ಶಿವರಾಮ ಕಾರಂತ ಬಡಾವಣೆಯಲ್ಲಿ ನಿವೇಶನ ನೀಡಿದ್ದಾರೆ. ಆದರೆ, ಸರ್ಕಾರದ ಈ ಪರಿಹಾರ ಸಾಲದು. ಮಾರ್ಗಸೂಚಿ ಮೌಲ್ಯದಂತೆ ಬೆಲೆ ನಿಗದಿ ಮಾಡಬೇಕು ಎಂದು ಒತ್ತಾಯಿಸಿದರು.

ಇನ್ನು ಬೆಂಗಳೂರು ಬಿಸಿನೆಸ್‌ ಕಾರಿಡಾರ್‌ ಯೋಜನೆಗೆ ಭೂಮಿ ನೀಡಲು ಒಲ್ಲದ ರೈತರು ʼಪಿಆರ್‌ಆರ್‌ ರೈತ ಹಾಗೂ ನಿವೇಶನದಾರರ ಸಂಘʼ ಕಟ್ಟಿಕೊಂಡು ಹೋರಾಟ ಮಾಡುತ್ತಿದ್ದು, ಕಾನೂನು ಸಮರ ನಡೆಸುತ್ತಿದ್ದಾರೆ. ಒಟ್ಟು 1000ಕ್ಕೂ ಹೆಚ್ಚು ರೈತರು ಆಕ್ಷೇಪಣೆಗಳನ್ನು ಸಲ್ಲಿಸಿದ್ದಾರೆ. 2007 ರ ಅಧಿಸೂಚನೆಯ ನಂತರ ಐದು ವರ್ಷಗಳ ಅವಧಿಯಲ್ಲಿ ಯಾವುದೇ ಪರಿಹಾರ ನೀಡದ ಕಾರಣ ಯೋಜನೆಯು ಬಿಡಿಎ ಕಾಯ್ದೆಯ ಸೆಕ್ಷನ್ 27 ರಡಿ ಕಾನೂನುಬದ್ಧ ಅವಧಿ ಮೀರಿದೆ. ಹಾಗಾಗಿ ಸ್ವಾಧೀನ ಮಾಡಿಕೊಳ್ಳಬಾರದು ಎಂಬುದು ರೈತರ ವಾದವಾಗಿದೆ.

ರೈತರು ಮುಂದಿಟ್ಟಿರುವ ಬೇಡಿಕೆಗಳೇನು?

ಫಲವತ್ತಾದ ಕೃಷಿ ಭೂಮಿಯನ್ನು ಭೂಸ್ವಾಧೀನ ಪ್ರಕ್ರಿಯೆಯಿಂದ ತಪ್ಪಿಸಿ, 10–15 ಕಿ.ಮೀ.ದೂರಕ್ಕೆ ಸ್ಥಳಾಂತರಿಸಬೇಕು. 2007 ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ರದ್ದು ಮಾಡಿ, 2025-26 ನೇ ಸಾಲಿನ ಮಾರುಕಟ್ಟೆ ಮೌಲ್ಯದ ಆಧಾರದ ಮೇಲೆ ಹೊಸ ಅಧಿಸೂಚನೆ ಹೊರಡಿಸಬೇಕು.

ʼಪಂಚ ಆಯ್ಕೆʼಯ ಪರಿಹಾರ ಪ್ಯಾಕೇಜ್ (ನಗದು, ಟಿಡಿಆರ್, ಎಫ್‌ಎಆರ್, ಅಭಿವೃದ್ಧಿ ಹೊಂದಿದ ನಿವೇಶನ ಹಾಗೂ ವಾಣಿಜ್ಯ ಭೂಮಿ) ಒಪ್ಪುವುದಿಲ್ಲ. ಇದು ಸರ್ಕಾರದ ಕಣ್ಣೊರೆಸುವ ತಂತ್ರವಾಗಿದೆ ಎಂದು ರೈತರು ದೂರಿದ್ದು, ಹೊಸ ಪರಿಹಾರ ದರಗಳನ್ನು ನಿಗದಿ ಮಾಡಬೇಕು.

ರೈತರು ಸಲ್ಲಿಸಿರುವ ಎಲ್ಲಾ ಆಕ್ಷೇಪಣೆಗಳು ಹೈಕೋರ್ಟ್‌ನಲ್ಲಿ ಮುಕ್ತಾಯ ಆಗುವವರೆಗೂ ಬಿಡಿಎ ಯಾವುದೇ ಪ್ರಕ್ರಿಯೆ ನಡೆಸಬಾರದು ಎಂದು ರೈತರು ಆಗ್ರಹಿಸಿದ್ದಾರೆ.

Read More
Next Story