Mantralaya Guest House| ನೀರಿನಲ್ಲೂ ಹರಿಯುತ್ತಿದೆ ವಿದ್ಯುತ್, ಪಸರಿದೆ ದುರ್ನಾತ, ರಾಯ ಭಕ್ತರಿಗೆ ಜೀವಭಯ!
x

Mantralaya Guest House| ನೀರಿನಲ್ಲೂ ಹರಿಯುತ್ತಿದೆ ವಿದ್ಯುತ್, ಪಸರಿದೆ ದುರ್ನಾತ, ರಾಯ ಭಕ್ತರಿಗೆ ಜೀವಭಯ!

2022ರ ಆಗಸ್ಟ್‌ನಲ್ಲಿ ಅತ್ಯಂತ ಸಂಭ್ರಮದಿಂದ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಕಟ್ಟಡವು ಕೇವಲ ಮೂರೇ ವರ್ಷಗಳಲ್ಲಿ ಅಕ್ಷರಶಃ ನರಕದ ದ್ವಾರವಾಗಿ ಮಾರ್ಪಟ್ಟಿರುವುದು ತಲೆತಗ್ಗಿಸುವಂತಾಗಿದೆ.


ಮಂತ್ರಾಲಯದಲ್ಲಿ ರಾಜ್ಯದ ಭಕ್ತರ ಅನುಕೂಲಕ್ಕಾಗಿ ರಾಜ್ಯ ಸರ್ಕಾರವು ಕೋಟ್ಯಂತರ ರೂ. ವೆಚ್ಚ ಮಾಡಿ ನಿರ್ಮಿಸಿರುವ ಕರ್ನಾಟಕ ಅತಿಥಿ ಗೃಹವು ಭ್ರಷ್ಟಾಚಾರ, ವ್ಯವಸ್ಥಿತ ನಿರ್ಲಕ್ಷ್ಯ ಮತ್ತು ಅವ್ಯವಸ್ಥೆಯ ಆಗರವಾಗಿ ಮಾರ್ಪಟ್ಟಿದೆ.

2022ರ ಆಗಸ್ಟ್‌ನಲ್ಲಿ ಅತ್ಯಂತ ಸಂಭ್ರಮದಿಂದ ಲೋಕಾರ್ಪಣೆಗೊಂಡ ಈ ಸುಸಜ್ಜಿತ ಕಟ್ಟಡವು ಕೇವಲ ಮೂರೇ ವರ್ಷಗಳಲ್ಲಿ ಅಕ್ಷರಶಃ ನರಕದ ದ್ವಾರವಾಗಿ ಮಾರ್ಪಟ್ಟಿರುವುದು ತಲೆತಗ್ಗಿಸುವಂತಾಗಿದೆ.

50 ಶೌಚಾಲಯಗಳ ಸ್ವಚ್ಛತೆಗೆ ಇರುವುದು ಕೇವಲ ಇಬ್ಬರು ಸಿಬ್ಬಂದಿ. ಫ್ಲಷ್ ವ್ಯವಸ್ಥೆಯೇ ಇಲ್ಲದೆ ಶೌಚಾಲಯಗಳು ನಾರುತ್ತಿವೆ. ನೀರಿಗಾಗಿ ಇಟ್ಟಿದ್ದ 8 ಸಿಂಟೆಕ್ಸ್ ಪೈಕಿ 5 ಒಡೆದು ಹೋಗಿವೆ. ಡ್ರೈನೇಜ್ ಪೈಪ್‌ಗಳು ಒಡೆದು ಯಾತ್ರಾರ್ಥಿಗಳು ದುರ್ವಾಸನೆಯಲ್ಲಿ ಕಾಲ ಕಳೆಯುವಂತಾಗಿದೆ. ಗೀಸರ್ ವೈರಿಂಗ್ ಲೋಪದಿಂದ ಶಾರ್ಟ್ ಸರ್ಕ್ಯೂಟ್ ಉಂಟಾಗುತ್ತಿದ್ದು, ನಲ್ಲಿ ನೀರಿನಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಇದು ಜೀವಹಾನಿಗೆ ಆಹ್ವಾನ ನೀಡುವಂತಿದೆ. ಇವೆಲ್ಲವು ರಾಯಚೂರು ಜಿಲ್ಲಾ ಲೋಕಾಯುಕ್ತ ಪೊಲೀಸರ ತನಿಖಾ ವರದಿಯಲ್ಲಿ ಬಹಿರಂಗಗೊಂಡಿವೆ.

ಮಂತ್ರಾಲಯಕ್ಕೆ ಉಪಲೋಕಾಯುಕ್ತ ನ್ಯಾ. ಕೆ.ಎನ್. ಫಣೀಂದ್ರ ಭೇಟಿ ನೀಡಿದ್ದ ವೇಳೆ ಅತಿಥಿ ಗೃಹದ ದುಸ್ಥಿತಿಯನ್ನು ಕಂಡು ತೀವ್ರ ಆಘಾತಕ್ಕೊಳಗಾದರು. ಭಕ್ತರಿಗಾಗಿ ಮೀಸಲಾದ ಜಾಗವು ಗಬ್ಬೆದ್ದು ನಾರುತ್ತಿರುವುದನ್ನು ಗಮನಿಸಿದ ಅವರು, ತಕ್ಷಣವೇ ತನಿಖೆಗೆ ಆದೇಶಿಸಿದರು. ಅವರ ಸೂಚನೆಯಂತೆ ರಾಯಚೂರು ಲೋಕಾಯುಕ್ತ ಡಿವೈಎಸ್‌ಪಿ ರವಿ ಪುರುಷೋತ್ತಮ್ ಅತಿಥಿ ಗೃಹದ ಮೇಲೆ ದಾಳಿ ನಡೆಸಿ, ಅಲ್ಲಿನ ವಾಸ್ತವ ಸ್ಥಿತಿಯ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಕೆ ಮಾಡಿದ್ದಾರೆ. ವರದಿಯು ಅತಿಥಿ ಗೃಹದಲ್ಲಿ ನಡೆಯುತ್ತಿರುವ ವ್ಯವಸ್ಥಿತ ಭ್ರಷ್ಟಾಚಾರ ಮತ್ತು ಆಡಳಿತಾತ್ಮಕ ವೈಫಲ್ಯವನ್ನು ಅನಾವರಣಗೊಳಿಸಿದೆ.

ತನಿಖಾ ವರದಿಯಲ್ಲಿ ಪತ್ತೆಯಾದ ಸತ್ಯಗಳು

ನೈರ್ಮಲ್ಯದ ಸಂಪೂರ್ಣ ವೈಫಲ್ಯ

50 ವಿಶಾಲವಾದ ಕೊಠಡಿಗಳನ್ನು ಹೊಂದಿರುವ ಅತಿಥಿ ಗೃಹದಲ್ಲಿ ಕಾರ್ಯನಿರ್ವಹಿಸಲು ಕೇವಲ 11 ಜನ ಸಿಬ್ಬಂದಿ ಇದ್ದಾರೆ. ಅದರಲ್ಲಿ ಒಬ್ಬರು ಪತ್ರಾಂಕಿತ ವ್ಯವಸ್ಥಾಪಕರು, ಇನ್ನುಳಿದವರೆಲ್ಲರೂ ದಿನಗೂಲಿ ನೌಕರರಾಗಿದ್ದಾರೆ. ಆಘಾತಕಾರಿ ಅಂಶವೆಂದರೆ, 50 ಕೊಠಡಿಗಳ ಶೌಚಾಲಯಗಳನ್ನು ಸ್ವಚ್ಛಗೊಳಿಸಲು ಕೇವಲ ಇಬ್ಬರು ಸಿಬ್ಬಂದಿಗಳನ್ನು ಮಾತ್ರ ನಿಯೋಜಿಸಲಾಗಿದೆ. ಶೌಚಾಲಯಗಳಲ್ಲಿ ಫ್ಲಶ್ ವ್ಯವಸ್ಥೆ ಸಂಪೂರ್ಣವಾಗಿ ಕೆಟ್ಟುಹೋಗಿದ್ದು, ಇಡೀ ಆವರಣವು ದುರ್ವಾಸನೆಯಿಂದ ಕೂಡಿದೆ. ಯಾತ್ರಾರ್ಥಿಗಳು ಕನಿಷ್ಠ ಸೌಲಭ್ಯವೂ ಇಲ್ಲದೆ ಪರದಾಡುವಂತಾಗಿದೆ.

ಹದಗೆಟ್ಟ ನೀರಿನ ವ್ಯವಸ್ಥೆ

ಅತಿಥಿ ಗೃಹದ ಜೀವನಾಡಿಯಂತಿರುವ ನೀರಿನ ವ್ಯವಸ್ಥೆ ಸಂಪೂರ್ಣವಾಗಿ ಹದಗೆಟ್ಟಿದೆ. 8 ಸಿಂಟೆಕ್ಸ್ ಟ್ಯಾಂಕ್‌ಗಳ ಪೈಕಿ 5 ಈಗಾಗಲೇ ಒಡೆದು ಹೋಗಿವೆ. ಅಂದರೆ ಶೇ. 60ಕ್ಕೂ ಹೆಚ್ಚು ನೀರಿನ ಸಂಗ್ರಹಣಾ ಸಾಮರ್ಥ್ಯ ನಾಶವಾಗಿದೆ. ಕಟ್ಟಡದ ವಿನ್ಯಾಸದಲ್ಲಿಯೇ ಗಂಭೀರ ಲೋಪಗಳಿರುವುದು ಕಂಡುಬಂದಿದೆ. ವೈಜ್ಞಾನಿಕವಾಗಿ ಚೇಂಬರ್‌ಗಳನ್ನು ನಿರ್ಮಿಸದ ಕಾರಣ, ಒಳಚರಂಡಿ ನೀರು ಪದೇ ಪದೇ ಬ್ಲಾಕ್ ಆಗಿ ಹೊರಹರಿಯುತ್ತಿದೆ. ಇದರಿಂದಾಗಿ ಅತಿಥಿ ಗೃಹದ ಸುತ್ತಮುತ್ತ ಸೊಳ್ಳೆಗಳ ಹಾವಳಿ ಮತ್ತು ಅಸಹನೀಯ ದುರ್ವಾಸನೆ ಹರಡಿದೆ. ಪುಣ್ಯಕ್ಷೇತ್ರಕ್ಕೆ ಬರುವ ಭಕ್ತರು ನೆಮ್ಮದಿಯಿಂದ ಉಸಿರಾಡಲೂ ಸಾಧ್ಯವಾಗದ ಸ್ಥಿತಿ ಇಲ್ಲಿದೆ. 2022ರಲ್ಲಿ ಉದ್ಘಾಟನೆಗೊಂಡ ಕಟ್ಟಡ ಇಷ್ಟು ಬೇಗ ಇಂತಹ ಸ್ಥಿತಿಗೆ ತಲುಪಿದ್ದು, ಕಳಪೆ ಕಾಮಗಾರಿಯ ಅನುಮಾನ ವ್ಯಕ್ತವಾಗಿದೆ.

ವಿದ್ಯುತ್‌ ಅವಘಡ ಭೀತಿ

ವರದಿಯಲ್ಲಿ ಉಲ್ಲೇಖಿಸಲಾದ ಅತ್ಯಂತ ಭಯಾನಕ ಅಂಶವೆಂದರೆ ಗೀಸರ್ ವೈರಿಂಗ್ ಲೋಪ. ಇಲ್ಲಿನ ಬಾತ್ ರೂಮ್‌ಗಳಲ್ಲಿ ಗೀಸರ್ ಆನ್ ಮಾಡಿದರೆ ನಲ್ಲಿಯ ನೀರಿನಲ್ಲಿ ಮತ್ತು ಬಟನ್‌ಗಳಲ್ಲಿ ವಿದ್ಯುತ್ ಪ್ರವಹಿಸುತ್ತಿದೆ. ಭಕ್ತರು ಸ್ನಾನಕ್ಕೆ ನೀರು ಬಿಡುವಾಗ ಪ್ರಾಣಭಯದಿಂದ ಇರಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ನೀರಿನಲ್ಲಿ ವಿದ್ಯುತ್ ಪ್ರವಹಿಸುವುದು ಯಾವುದೇ ಕ್ಷಣದಲ್ಲಿ ಯಾತ್ರಾರ್ಥಿಗಳ ಪ್ರಾಣಕ್ಕೆ ಕುತ್ತು ತರಬಹುದು. ಇಲ್ಲಿ ತಂಗುವ ಭಕ್ತರು ಸ್ನಾನ ಮಾಡಲು ಹೋದಾಗ ಜೀವಂತವಾಗಿ ಮರಳಿ ಬರುತ್ತಾರೆಯೇ ಎಂಬ ಭೀತಿ ಕಾಡುತ್ತಿದೆ. ಇಂತಹ ಗಂಭೀರ ಸಮಸ್ಯೆಯನ್ನು ಗಮನಕ್ಕೆ ತಂದರೂ ಸರಿಪಡಿಸದಿರುವುದು ವ್ಯವಸ್ಥಾಪಕರ ದಿವ್ಯ ನಿರ್ಲಕ್ಷ್ಯಕ್ಕೆ ಸಾಕ್ಷಿಯಾಗಿದೆ.

ಎಸಿ ರೂಂಗಳ ಹೆಸರಲ್ಲಿ ವಂಚನೆ

ಅತಿಥಿ ಗೃಹದಲ್ಲಿ 10 ಎಸಿ ಕೊಠಡಿಗಳಿವೆ. ಆದರೆ ಇವುಗಳಲ್ಲಿ 6 ಎಸಿಗಳು ಕಾರ್ಯನಿರ್ವಹಿಸುತ್ತಿಲ್ಲ. ಹೀಗಿದ್ದರೂ ಸಹ, ಯಾತ್ರಾರ್ಥಿಗಳಿಂದ ಎಸಿ ಕೊಠಡಿಯ ಪೂರ್ಣ ದರವನ್ನೇ ವಸೂಲಿ ಮಾಡಲಾಗುತ್ತಿದೆ. ಇದು ಭಕ್ತರಿಗೆ ಮಾಡುತ್ತಿರುವ ನೇರ ವಂಚನೆಯಾಗಿದೆ. ಎಸಿ ಕೆಲಸ ಮಾಡದಿದ್ದರೂ ಸಹ ದಿನಕ್ಕೆ 1,400 ರೂ. ಅಥವಾ 12 ಗಂಟೆಗಳಿಗೆ 700 ರೂ. ವಸೂಲಿ ಮಾಡಲಾಗುತ್ತಿದೆ. ಇದು ಕಾನೂನುಬಾಹಿರವಾಗಿದೆ. ಯಾತ್ರಾರ್ಥಿಗಳಿಗೆ ಕನಿಷ್ಠ ಸೌಕರ್ಯವನ್ನೂ ನೀಡದೆ ಗರಿಷ್ಠ ಹಣ ಪಡೆಯುವುದು ವಂಚನೆ ಮಾಡಿದಂತಾಗುತ್ತದೆ. ಅತಿಥಿ ಗೃಹದ ಆಡಳಿತ ಮಂಡಳಿಯು ಯಾತ್ರಾರ್ಥಿಗಳಿಂದ ಹಗಲು ದರೋಡೆ ನಡೆಸುತ್ತಿದೆ. ಸ್ನಾನಕ್ಕೆ ಒಂದು ಬಕೆಟ್ ಬಿಸಿನೀರು ಪಡೆಯಲು ಭಕ್ತರಿಂದ ತಲಾ ೩೦ ರೂಪಾಯಿ ವಸೂಲಿ ಮಾಡಲಾಗುತ್ತಿದೆ. ಸರ್ಕಾರದ ಸೌಲಭ್ಯಗಳನ್ನು ಉಚಿತವಾಗಿ ಅಥವಾ ರಿಯಾಯಿತಿ ದರದಲ್ಲಿ ನೀಡಬೇಕಾದ ಸಿಬ್ಬಂದಿ, ತಮ್ಮ ವೈಯಕ್ತಿಕ ಲಾಭಕ್ಕಾಗಿ ಭಕ್ತರನ್ನು ಪೀಡಿಸುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

ನುದಾನದ ದುರ್ಬಳಕೆ

50 ಕೊಠಡಿಗಳ ಇಷ್ಟು ದೊಡ್ಡ ಅತಿಥಿ ಗೃಹದ ನಿರ್ವಹಣೆಗೆ ಪ್ರತಿ ತಿಂಗಳು ಕೇವಲ 15 ಸಾವಿರ ರೂ.ಗಳನ್ನು ನೀಡಲಾಗುತ್ತಿದೆ ಎನ್ನಲಾಗಿದೆ. 15 ಸಾವಿರ ರೂ.ನಲ್ಲಿ 50 ಕೊಠಡಿಗಳ ಸ್ವಚ್ಛತೆ, ಫಿನೈಲ್, ಸೋಪು, ಬಲ್ಬ್‌ಗಳು ಮತ್ತು ಸಣ್ಣಪುಟ್ಟ ರಿಪೇರಿಗಳನ್ನು ಮಾಡುವುದು ಅಸಾಧ್ಯ. ಈ ಅಲ್ಪ ಮೊತ್ತವು ಸರ್ಕಾರದ ಅಸಡ್ಡೆಯನ್ನು ತೋರಿಸುತ್ತದೆಯೇ ಅಥವಾ ಬಂದ ಹಣವನ್ನು ಅಧಿಕಾರಿಗಳು ಜೇಬಿಗೆ ಇಳಿಸಿಕೊಳ್ಳುತ್ತಿದ್ದಾರೆಯೇ ಎಂಬ ಅನುಮಾನ ಮೂಡುತ್ತದೆ. ಒಂದು ಕೊಠಡಿಯ ನಿರ್ವಹಣೆಗೆ ತಿಂಗಳಿಗೆ ಕೇವಲ 300 ರೂಪಾಯಿ ನಿಗದಿಪಡಿಸುವುದು ಹಾಸ್ಯಾಸ್ಪದ ಎನ್ನಲಾಗಿದೆ.

ರೂಮ್‌ಗಳಲ್ಲಿ ಒದಗಿಸಲಾಗುವ ಹಾಸಿಗೆಗಳಲ್ಲಿ ತಿಗಣೆ ಮತ್ತು ಸೊಳ್ಳೆಗಳ ಕಾಟ ವಿಪರೀತವಾಗಿದೆ. ಬೆಡ್ ಶೀಟ್‌ಗಳನ್ನು ದಿನನಿತ್ಯ ಬದಲಾಯಿಸದೆ, ಅದೇ ಅಶುದ್ಧ ಶೀಟ್‌ಗಳನ್ನು ಬಳಸಲಾಗುತ್ತಿದೆ. ದೂರದ ಊರುಗಳಿಂದ ವಿಶ್ರಾಂತಿಗಾಗಿ ಬರುವ ಯಾತ್ರಾರ್ಥಿಗಳು ನಿದ್ರೆಯಿಲ್ಲದೆ ರಾತ್ರಿ ಕಳೆಯುವಂತಾಗಿದೆ. ಅಲ್ಲದೇ, ಅತಿಥಿ ಗೃಹದ ಆವರಣವು ಕಾಡಿನಂತೆ ಮಾರ್ಪಟ್ಟಿದೆ. ಗಿಡಗಂಟಿಗಳು, ಮುಳ್ಳಿನ ಗಿಡಗಳು ಬೆಳೆದು ನಿಂತಿವೆ. ಕೊಠಡಿಗಳ ಕಿಟಕಿಗಳಲ್ಲಿ ಧೂಳು ತುಂಬಿದೆ. ಮಂತ್ರಾಲಯದಂತಹ ಉಷ್ಣವಲಯದ ಪ್ರದೇಶದಲ್ಲಿ ಸೋಲಾರ್ ವಿದ್ಯುತ್ ಅಳವಡಿಸಲು ಹೇರಳ ಅವಕಾಶವಿದೆ. ಆದರೆ ಅದನ್ನು ಅಳವಡಿಸದೆ ಇರುವುದು ಆಡಳಿತ ಮಂಡಳಿಯ ದೂರದೃಷ್ಟಿಯ ಕೊರತೆಯನ್ನು ತೋರಿಸುತ್ತದೆ. ಸೋಲಾರ್ ಅಳವಡಿಸಿದ್ದರೆ ವಿದ್ಯುತ್ ಬಿಲ್ ಉಳಿತಾಯವಾಗುವುದಲ್ಲದೆ, ಬಿಸಿನೀರಿನ ಸಮಸ್ಯೆಯೂ ಶಾಶ್ವತವಾಗಿ ಪರಿಹರಿಸಲ್ಪಡುತ್ತಿತ್ತು ಎಂದು ವರದಿ ಹೇಳಿದೆ.

ಉಪಲೋಕಾಯುಕ್ತರ ಆಕ್ರೋಶ

ಮಂತ್ರಾಲಯದಲ್ಲಿನ ರಾಜ್ಯದ ಅತಿಥಿಗೃಹದಲ್ಲಿನ ಅವ್ಯವಸ್ಥೆಗಳನ್ನು ಕಣ್ಣಾರೆ ಕಂಡ ಉಪಲೋಕಾಯುಕ್ತ ನ್ಯಾ. ಕೆ.ಎನ್.ಫಣೀಂದ್ರ ಮತ್ತು ನ್ಯಾ. ಬಿ.ವೀರಪ್ಪ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಅತಿಥಿ ಗೃಹದ ವ್ಯವಸ್ಥಾಪಕ ಆಂಜನೇಯಲು ಮತ್ತು ಸಹಾಯಕ ನರಸನಗೌಡ ಅವರ ಮೇಲೆ ಸ್ವಯಂಪ್ರೇರಿತ ದೂರು ದಾಖಲಿಸಲಾಗಿದೆ. ಇಂತಹ ಭ್ರಷ್ಟ ಅಧಿಕಾರಿಗಳು ಇರುವವರೆಗೆ ಯಾವುದೇ ಸುಧಾರಣೆ ಅಸಾಧ್ಯ ಎಂದು ಕಿಡಿಕಾರಿದ್ದಾರೆ. ಸರ್ಕಾರದ ಗಮನಕ್ಕೆ ತರಲಾಗಿದ್ದು, ಸೂಕ್ತ ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಲಾಗಿದೆ. ಕೇವಲ ಮೂರು ವರ್ಷಗಳಲ್ಲಿ ಕಟ್ಟಡ ಈ ಸ್ಥಿತಿಗೆ ತಲುಪಲು ಕಾರಣವಾದ ಕಳಪೆ ಕಾಮಗಾರಿಯ ಬಗ್ಗೆ ತನಿಖೆಯಾಗಬೇಕು. ಕನಿಷ್ಠ 20-25 ಜನ ನುರಿತ ಸಿಬ್ಬಂದಿಗಳನ್ನು ತಕ್ಷಣವೇ ನೇಮಿಸಬೇಕು. ವಿದ್ಯುತ್ ವೈರಿಂಗ್ ಮತ್ತು ಪ್ಲಂಬಿಂಗ್ ಸಮಸ್ಯೆಗಳನ್ನು ಯುದ್ಧೋಪಾದಿಯಲ್ಲಿ ಸರಿಪಡಿಸಬೇಕು. ಬಿಸಿನೀರು ಮತ್ತು ವಿದ್ಯುತ್ ಉಳಿತಾಯಕ್ಕಾಗಿ ಸೋಲಾರ್ ವ್ಯವಸ್ಥೆಯನ್ನು ಅಳವಡಿಸಬೇಕು ಮತ್ತು ಯಾತ್ರಾರ್ಥಿಗಳು ನೇರವಾಗಿ ದೂರು ನೀಡಲು ‘ಕ್ಯೂಆರ್ ಕೋಡ್’ ಅಥವಾ ಸಹಾಯವಾಣಿ ವ್ಯವಸ್ಥೆ ಜಾರಿಗೆ ತರಬೇಕು ಎಂದು ಸೂಚನೆ ನೀಡಿದ್ದಾರೆ.

Read More
Next Story