
ಮಂತ್ರಾಲಯದಲ್ಲಿ ವಿವಾದ- ಕನ್ನಡ ಬೋರ್ಡ್‌ಗಳಿಗೆ ತೆಲುಗು ಭಾಷಿಗರ ಆಕ್ಷೇಪ
ಮಂತ್ರಾಲಯದಲ್ಲಿರುವ ಕನ್ನಡ ಬೋರ್ಡ್‌ಗೆ ತೆಲುಗು ಭಾಷಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದು ಕನ್ನಡಿಗರನ್ನು ಕೆರಳಿಸಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿ ಭಾಗದಲ್ಲಿರುವ ಮಂತ್ರಾಲಯ ದೇವಾಲದಯ ವಿಚಾರದಲ್ಲಿ ಇದೀಗ ಭಾಷಾ ವಿವಾದ ಸೃಷ್ಟಿಯಾಗಿದೆ. ಇದು ಮಂತ್ರಾಲಯ ಶ್ರೀ ರಾಘವೇಂದ್ರ ಸ್ವಾಮಿ ಭಕ್ತರನ್ನು ಕೆಣಕುವ ಪ್ರಯತ್ನ ಆಗಿದೆ. ಮಂತ್ರಾಲಯದ ವಿಚಾರವಾಗಿ ಆಂಧ್ರಪ್ರದೇಶದ ತೆಲುಗು ಭಾಷಿಕರು ಅನವಶ್ಯಕವಾಗಿ ವಿವಾದವೊಂದನ್ನು ಸೃಷ್ಟಿ ಮಾಡಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಈ ವಿಚಾರವು ಭಾರೀ ಸದ್ದು ಮಾಡುತ್ತಿದೆ. ಮಂತ್ರಾಲಯದಲ್ಲಿರುವ ಕನ್ನಡ ಬೋರ್ಡ್‌ಗೆ ತೆಲುಗು ಭಾಷಿಗರು ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಏನಿದು ಬೋರ್ಡ್ ವಿವಾದ?
ಮಂತ್ರಾಲಯದಲ್ಲಿ ಶ್ರೀ ರಾಘವೇಂದ್ರ ಸ್ವಾಮಿಯನ್ನು ಭಕ್ತಿಯಿಂದ ಸ್ಮರಿಸುವ "ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ" ಸಾಲುಗಳಿರುವ ಬೋರ್ಡ್ ಕನ್ನಡದಲ್ಲಿದೆ. ಇದು ತೆಲುಗು ಭಾಷಿಗರು ಅಸಮಾಧಾನಕ್ಕೆ ಕಾರಣವಾಗಿದೆ. ಈ ಬಗ್ಗೆ ತೆಲುಗು ಭಾಷಿಕರು ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಅಭಿಯಾನವೊಂದನ್ನು ಶುರು ಮಾಡಿದ್ದು, ಕನ್ನಡಿಗರನ್ನು ಕೆಣಕಿದೆ.
ಎಕ್ಸ್ ಪೋಸ್ಟ್ ಭಾರೀ ವೈರಲ್
Andhra & Amaravati Updates ಎನ್ನುವ ಸೋಷಿಯಲ್ ಮೀಡಿಯಾ ಖಾತೆಯಿಂದ ಈ ಪೋಸ್ಟ್ ಶೇರ್ ಆಗಿದ್ದು, ಆಂಧ್ರಪ್ರದೇಶ .. ಮಾನ್ಯ ಮುಖ್ಯಮಂತ್ರಿಗಳೇ, ಮಾನ್ಯ ಉಪಮುಖ್ಯಮಂತ್ರಿಗಳೇ, ತೆಲುಗು ಮಂಡಳಿ ಎಲ್ಲಿದೆ ಸರ್? ಮಂತ್ರಾಲಯ ಆಂಧ್ರಪ್ರದೇಶದ ಒಂದು ಭಾಗ, ಅಲ್ಲಿ ತೆಲುಗು ಭಾಷೆಯನ್ನು ಸಂಪೂರ್ಣವಾಗಿ ನಿರ್ಲಕ್ಷಿಸಲಾಗಿದೆ. ಮೊದಲು, ಈ ನಿಟ್ಟಿನಲ್ಲಿ ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳಿ ಎಂದು ಕನ್ನಡದಲ್ಲಿ ಬರೆದಿರುವ "ಪೂಜ್ಯಾಯ ರಾಘವೇಂದ್ರಾಯ ಸತ್ಯ ಧರ್ಮ ರತಾಯಚ ಭಜತಾಂ ಕಲ್ಪವೃಕ್ಷಾಯ ನಮತಾಂ ಕಾಮಧೇನವೇ" ಎನ್ನುವ ಬರಹವಿರುವ ಫೋಟೋವನ್ನು ಪೋಸ್ಟ್ ಮಾಡಿ ಪ್ರಶ್ನೆ ಮಾಡಲಾಗಿದೆ. ಇದಕ್ಕೆ ಹಲವು ತೆಲುಗು ಭಾಷಿಕರು ಸಹಮತ ವ್ಯಕ್ತಪಡಿಸಿ ಟ್ಯಾಗ್ ಮಾಡುತ್ತಿದ್ದು, ಇದೀಗ ಈ ಪೋಸ್ಟ್ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ತೆಲುಗು ಬೋರ್ಡ್ ಬೇಕೆಂದು ಪಟ್ಟು
ಇನ್ನು ಮಂತ್ರಾಲಯ ಆಂಧ್ರದ ಒಂದು ಭಾಗ. ಹೀಗಾಗಿ ಅಲ್ಲಿ ತೆಲುಗು ಬೋರ್ಡ್‌ಗಳನ್ನು ದೊಡ್ಡದಾಗಿ ಹಾಕಬೇಕೆಂದು ತೆಲುಗು ಭಾಷಿಗರು ಒತ್ತಾಯಿಸಿದ್ದಾರೆ. ಬೇರೆ ಭಾಷೆಗಳೂ ಇರಲಿ. ಆದರೆ ತೆಲುಗು ಭಾಷೆಗೆ ಸಿಗಬೇಕಾದ ಮಾನ್ಯತೆ ಸಿಗಲೇಬೇಕು. ತೆಲುಗು ಸಂಸ್ಕೃತಿಯನ್ನು ಬಿಡಲು ಸಾಧ್ಯವೇ ಇಲ್ಲ ಎಂದು ನೆಟ್ಟಿಗರು ಒತ್ತಾಯಿಸಿದ್ದಾರೆ.
ಗೂಗಲ್ ಮ್ಯಾಪ್‌ನಲ್ಲಿ ಬದಲಾವಣೆ ಬೇಕು
ಇನ್ನು ಗೂಗಲ್ ಮ್ಯಾಪ್‌ನಲ್ಲೂ ಕೆಲವೊಂದು ಬದಲಾವಣೆ ಆಗಬೇಕಿದೆ ಎಂದು ನೆಟ್ಟಿಗರು ಆಗ್ರಹಿಸಿದ್ದಾರೆ. ಗೂಗಲ್ ಮ್ಯಾಪ್‌ನಲ್ಲಿ ಶ್ರೀ ರಾಘವೇಂದ್ರ ಸ್ವಾಮಿ ಮಠ ಎನ್ನುವ ಬದಲು ಶ್ರೀ ರಾಘವೇಂದ್ರ ಸ್ವಾಮಿವಾರಿ ಮಠಂ ಎಂದು ಬದಲಾಯಿಸಿ ಎನ್ನುವ ಅಭಿಯಾನವೂ ಸಹ ಕಳೆದ ಕೆಲವು ದಿನಗಳಿಂದ ನಡೆಯುತ್ತಿದೆ. ಆಂಧ್ರಪ್ರದೇಶದ ರಾಯಲಸೀಮಾ ಜಿಲ್ಲೆಯ ಇತರ ರಾಜ್ಯಗಳೊಂದಿಗೆ ಗಡಿ ಹಂಚಿಕೊಳ್ಳುವ ಪ್ರದೇಶಗಳಿಗೆ ನಮ್ಮ ಭಾಷೆಯಲ್ಲಿ ಹೆಸರುಗಳು ಇರಬೇಕು.
ಮಂತ್ರಾಲಯದಲ್ಲಿ ಏನಿದೆ?
ಇನ್ನು ಬಹುತೇಕರು ಮಂತ್ರಾಲಯ ಕರ್ನಾಟಕದಲ್ಲೇ ಇದೆ ಎಂದು ತಿಳಿದುಕೊಂಡಿದ್ದಾರೆ. ಅದು ಇರುವುದು ಕರ್ನಾಟಕ ಮತ್ತು ಆಂಧ್ರಪ್ರದೇಶ ಗಡಿ ಭಾಗದಲ್ಲಿದೆ. ರಾಯಚೂರಿನಿಂದ ಕೂಗಳತೆಯ ದೂರದಲ್ಲಿರುವ ರಾಯರ ಸನ್ನಿಧಿಗೆ ನಿತ್ಯ ಸಾವಿರಾರು ಕನ್ನಡಿಗರು ಭೇಟಿ ಕೊಡುತ್ತಿದ್ದಾರೆ. ದಶಕಗಳಿಂದ ಕನ್ನಡದಲ್ಲೇ ಇರುವ ಬೋರ್ಡ್ ಬಗ್ಗೆ ಈಗ ವಿವಾದವೇಕೆ ಎಂದು ಕನ್ನಡಿಗರು ಪ್ರಶ್ನೆ ಮಾಡಿದ್ದಾರೆ.

