ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಅಂಕಕ್ಕಿಲ್ಲ ಮನ್ನಣೆ: ಆತಂಕದಲ್ಲಿ ಸಾವಿರಾರು ಹಿಂದಿ ಶಿಕ್ಷಕರು
x

ಎಸ್ಸೆಸ್ಸೆಲ್ಸಿ ತೃತೀಯ ಭಾಷೆ ಅಂಕಕ್ಕಿಲ್ಲ ಮನ್ನಣೆ: ಆತಂಕದಲ್ಲಿ ಸಾವಿರಾರು ಹಿಂದಿ ಶಿಕ್ಷಕರು

ಹಿಂದಿ ಭಾಷೆಯ ಅಂಕ ಪರಿಗಣಿಸದಿರುವ ಸಮಸ್ಯೆ ಕೇವಲ ಹಿಂದಿ ಶಿಕ್ಷಕರಿಗೆ ಮಾತ್ರವಲ್ಲ, ಮರಾಠಿ, ಉರ್ದು, ಕೊಂಕಣಿ ಮತ್ತು ಇತರೆ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧಿಸುವ ಕನ್ನಡ ಶಿಕ್ಷಕರಿಗೂ ಸಮಸ್ಯೆಯಾಗಲಿದೆ.


Click the Play button to hear this message in audio format

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ತೃತೀಯ ಭಾಷೆಯ ಅಂಕ ಪರಿಗಣನೆಗೆ ತೆಗೆದುಕೊಳ್ಳದಿರುವ ಕುರಿತ ರಾಜ್ಯ ಸರ್ಕಾರದ ಐತಿಹಾಸಿಕ ನಿರ್ಧಾರವು ಶೈಕ್ಷಣಿಕ ವಲಯದಲ್ಲಿ ರಾಜಕೀಯ ಕೋಲಾಹಲದ ಜತೆಗೆ ಆತಂಕ ತಂದೊಡ್ಡಿದೆ. ದ್ವಿಭಾಷಾ ನೀತಿಗೆ ಪೂರಕವಾಗಿ ತೆಗೆದುಕೊಂಡಿರುವ ತನ್ನ ನಿರ್ಧಾರವನ್ನು ಸರ್ಕಾರ ಸಮರ್ಥಿಸಿಕೊಂಡರೆ, ಕನ್ನಡ ಪರ ಸಂಘಟನೆಗಳು ಸ್ವಾಗತಿಸಿವೆ. ಆದರೆ, ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಸುಮಾರು 3500 ಹಿಂದಿ ಶಿಕ್ಷಕರಿಗೆ ಸರ್ಕಾರದ ನಿರ್ಧಾರ ನಿದ್ದೆಗೆಡಿಸಿದೆ.

ಅನಿಶ್ಚಿತತೆಯಲ್ಲಿ ಹಿಂದಿ ಶಿಕ್ಷಕರ ಭವಿಷ್ಯ

ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ ಪ್ರಸ್ತುತ 3 ಸಾವಿರ, ಪ್ರೌಢಶಾಲೆಗಳಲ್ಲಿ 3500 ಕಾಯಂ ಹಿಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಎಸ್ಎಸ್ಎಲ್‌ಸಿ ಪರೀಕ್ಷೆಯಲ್ಲಿ ತೃತೀಯ ಭಾಷೆಗೆ ಕೇವಲ ಗ್ರೇಡಿಂಗ್ ನೀಡುವುದರಿಂದ ಪ್ರೌಢಶಾಲೆಯ ಹಿಂದಿ ಶಿಕ್ಷಕರ ಭವಿಷ್ಯವು ಅನಿಶ್ಚಿತತೆಯಲ್ಲಿ ಮುಳುಗಿದೆ.

"ಪರೀಕ್ಷೆ ಫಲಿತಾಂಶಕ್ಕೆ ಅಂಕಗಳನ್ನೇ ಪರಿಗಣಿಸದಿದ್ದರೆ ವಿದ್ಯಾರ್ಥಿಗಳು ಹಿಂದಿ ವಿಷಯವನ್ನು ಗಂಭೀರವಾಗಿ ತೆಗೆದುಕೊಳ್ಳುವುದಿಲ್ಲ. ಮೌಲ್ಯಮಾಪನವಿಲ್ಲದ ಶಿಕ್ಷಣಕ್ಕೆ ಅರ್ಥವಿರುವುದಿಲ್ಲ," ಎಂದು ಶಿಕ್ಷಕರ ಅಳಲು ತೋಡಿಕೊಂಡಿದ್ದಾರೆ.

"ಸರ್ಕಾರದ ನಿರ್ಧಾರದಿಂದ ಹಿಂದಿ ಶಿಕ್ಷಕರಿಗೆ ದೊಡ್ಡ ಹೊಡೆತ ಬಿದ್ದಿದೆ. ಹಿಂದಿ ಭಾಷೆ ಕಲಿಸಬಹುದು, ಆದರೆ, ಅದಕ್ಕೆ ಮೌಲ್ಯಮಾಪನ ಇಲ್ಲ ಎಂದರೆ ತರಗತಿಯಲ್ಲಿ ಪಾಠ ಮಾಡುವಾಗ ವಿದ್ಯಾರ್ಥಿಗಳಲ್ಲಿ ಗಂಭೀರತೆ ಇರುವುದಿಲ್ಲ, ವಿದ್ಯಾರ್ಥಿಗಳು ಮತ್ತು ಪೋಷಕರು ಈ ವಿಷಯವನ್ನು ಕಡೆಗಣಿಸುವ ಸಾಧ್ಯತೆ ಇದೆ. ಹಿಂದಿ ಶಿಕ್ಷಕರು, ಪೋಷಕರೊಂದಿಗೆ ಯಾವುದೇ ಚರ್ಚೆ ನಡೆಸದೇ ಇಷ್ಟು ಅವಸರವಾಗಿ ತೀರ್ಮಾನ ಕೈಗೊಂಡಿರುವುದು ಯಾಕೆ ಎಂಬುದೇ ಅರ್ಥವಾಗುತ್ತಿಲ್ಲ." ಎಂದು ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ.ರಾಮಮೂರ್ತಿ 'ದ ಫೆಡರಲ್ ಕರ್ನಾಟಕ'ಕ್ಕೆ ತಿಳಿಸಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಮೂಲ ವಿದ್ಯಾರ್ಹತೆ ಟಿಸಿಎಚ್‌ ಆಗಿರುವುದರಿಂದ ಯಾವುದೇ ಸಮಸ್ಯೆ ಆಗುವುದಿಲ್ಲ, ಹಿಂದಿ ಶಿಕ್ಷಕರು ತತ್ಸಮಾನ ಪ್ರಮಾಣಪತ್ರ ಪಡೆದಿರುತ್ತಾರೆ. ಆಗೊಮ್ಮೆ ಹಿಂದಿ ಶಿಕ್ಷಕರು ಬೇಡ ಎಂದರೆ ಬೇರೆ ಯಾವುದಾದರೂ ವಿಷಯವನ್ನು ಬೋಧಿಸಲು ಅವಕಾಶ ಇರಲಿದೆ. ಇಲ್ಲಿ ಪ್ರೌಢಶಾಲೆ ಶಿಕ್ಷಕರಿಗೆ ಮಾತ್ರ ಸಮಸ್ಯೆ ಎದುರಾಗಲಿದೆ ಎಂದು ಹೇಳಿದರು.

ಕನ್ನಡ ಶಿಕ್ಷಕರಿಗೂ ಬಿಸಿ?

ಎಸ್ಎಸ್ಎಲ್‌ಸಿ ಪರೀಕ್ಷೆ ಫಲಿತಾಂಶಕ್ಕೆ ಹಿಂದಿ ಭಾಷೆಯ ಅಂಕ ಪರಿಗಣಿಸದಿರುವ ಸಮಸ್ಯೆ ಕೇವಲ ಹಿಂದಿ ಶಿಕ್ಷಕರಿಗೆ ಮಾತ್ರ ಸೀಮಿತವಲ್ಲ. ಮರಾಠಿ, ಉರ್ದು, ಕೊಂಕಣಿ ಮತ್ತು ಇತರ ಅಲ್ಪಸಂಖ್ಯಾತ ಭಾಷಾ ಮಾಧ್ಯಮದ ಶಾಲೆಗಳಲ್ಲಿ ಕನ್ನಡವನ್ನು ತೃತೀಯ ಭಾಷೆಯಾಗಿ ಬೋಧಿಸುವ ಕನ್ನಡ ಶಿಕ್ಷಕರಿಗೂ ಸಮಸ್ಯೆಯಾಗಲಿದೆ. ಸರ್ಕಾರದ ನಿರ್ಧಾರದಿಂದ ಉರ್ದು, ಮರಾಠಿ ಶಾಲೆಗಳಲ್ಲಿ ಕನ್ನಡದ ಕಲಿಕೆಯ ಮೇಲೆಯೂ ನಕಾರಾತ್ಮಕ ಪರಿಣಾಮ ಬೀರುವ ಆತಂಕ ಎದುರಾಗಿದೆ.

"ತೃತೀಯ ಭಾಷೆ ಹಿಂದಿಗೆ ಗ್ರೇಡ್ ನೀಡುವ ಸರ್ಕಾರದ ನಿರ್ಧಾರ ಸರಿಯಾಗಿದೆ. ಮಕ್ಕಳಿಗೆ ಹಿಂದಿ ಅನಗತ್ಯವಾಗಿ ಹೊರೆಯಾಗಿತ್ತು. ಇನ್ನು ಹಿಂದಿ ಕಲಿಸುವ ಶಿಕ್ಷಕರಿಗೆ ಉದ್ಯೋಗದಲ್ಲಿ ಯಾವುದೇ ತೊಂದರೆಯಾಗುವುದಿಲ್ಲ ಎಂದು ಶಿಕ್ಷಣ ಸಚಿವರು ಹೇಳಿದ್ದಾರೆ. ಹಿಂದಿ ಕಲಿಸುವ ಶಿಕ್ಷಕರು ನಮ್ಮ ಕನ್ನಡದವರು. ಅವರಿಗೆ ಶಾಲೆಯಲ್ಲಿ ಬೇರೆ ಕೆಲಸಗಳು ಮಾಡುವ ಅವಕಾಶವೂ ಇದೆ.‌ ಹಿಂದಿ ಕಲಿಸುವ ಶಿಕ್ಷಕರಿಗೆ ಯಾವುದೇ ತೊಂದರೆಯಾಗುವುದಿಲ್ಲ" ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪ್ರೊ.ಪುರುಷೋತ್ತಮ ಬಿಳಿಮಲೆ ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ಪ್ರತಿಭಟನೆಯ ಹಾದಿಯಲ್ಲಿ ಶಿಕ್ಷಕರ ಸಂಘ

ಸರ್ಕಾರದ ಏಕಪಕ್ಷೀಯ ನಿರ್ಧಾರದ ವಿರುದ್ಧ ಹೋರಾಟ ನಡೆಸಲು ಶಿಕ್ಷಕರ ಸಂಘಗಳು ಸಜ್ಜಾಗುತ್ತಿವೆ. ಈಗಾಗಲೇ ಹಿಂದಿ ಶಿಕ್ಷಕರ ಸಂಘಗಳೊಂದಿಗೆ ಸಭೆ ನಡೆಸಲಾಗಿದೆ. ಪದವೀಧರರ ಕ್ಷೇತ್ರ ಹಾಗೂ ಶಿಕ್ಷಕರ ಕ್ಷೇತ್ರದಿಂದ ಆಯ್ಕೆಯಾಗಿರುವ 14 ಮಂದಿ ವಿಧಾನಪರಿಷತ್‌ ಸದಸ್ಯರಿಗೂ ಈ ಸಂಬಂಧ ಮನವರಿಕೆ ಮಾಡಿಕೊಡಲಾಗಿದೆ. ರಾಜ್ಯ ಸರ್ಕಾರದ ನಿರ್ಧಾರವನ್ನು ಹೈಕೋರ್ಟ್‌ನಲ್ಲಿ ಪ್ರಶ್ನಿಸಲಾಗಿದೆ. ಅಲ್ಲದೇ ರಾಜ್ಯಪಾಲರಿಗೂ ದೂರು ನೀಡಲಾಗಿದೆ ಎಂದು ಸರ್ಕಾರಿ ಪ್ರೌಢಶಾಲೆ ಹಿಂದಿ ಶಿಕ್ಷಕರ ಸಂಘಟನೆಯ ಮುಖಂಡ ವೇಣು ಮಾನ್ವಿ ಅವರು ʼದ ಫೆಡರಲ್‌ ಕರ್ನಾಟಕʼಕ್ಕೆ ತಿಳಿಸಿದರು.

ತೃತೀಯ ಭಾಷೆಯ ಅಂಕಗಳನ್ನು ಪರೀಕ್ಷೆ ಫಲಿತಾಂಶಕ್ಕೆ ಪರಿಗಣಿಸದಿರುವ ನಿರ್ಧಾರವು ಕೇವಲ ಹಿಂದಿ ಶಿಕ್ಷಕರಿಗೆ ಮಾತ್ರವಲ್ಲ, ತೃತೀಯ ಭಾಷೆಯಲ್ಲಿರುವ ಇತರೆ (ಸಂಸ್ಕೃತ, ಉರ್ದು, ತೆಲುಗು, ಮರಾಠಿ, ಕೊಂಕಣಿ, ತುಳು ಇತ್ಯಾದಿ) ಭಾಷೆಗಳ ಶಿಕ್ಷಕರಿಗೂ ಸಮಸ್ಯೆಯಾಗಲಿದೆ ಎಂದು ಹೇಳಿದರು.

ಹಿಂದಿ ಭಾಷೆಯ ಅಂಕಗಳನ್ನು ಎಸ್‌ಎಸ್‌ಎಲ್‌ಸಿ ಫಲಿತಾಂಶಕ್ಕೆ ಪರಿಗಣಿಸದೇ ಹೋದರೆ ಭವಿಷ್ಯದಲ್ಲಿ ಹಿಂದಿ ಶಿಕ್ಷಕರ ನೇಮಕಾತಿಗಳು ಸ್ಥಗಿತವಾಗಲಿವೆ. ಗ್ರೇಡಿಂಗ್‌ ನೀಡುವುದಾದರೆ ಅದಕ್ಕೆ ಶಿಕ್ಷಕರ ಅಗತ್ಯವೇ ಇರುವುದಿಲ್ಲ. ಈಗಾಗಲೇ ಖಾಸಗಿ ಸಂಸ್ಥೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 15 ಸಾವಿರ ಹಿಂದಿ ಶಿಕ್ಷಕರ ಬದುಕು ಅತಂತ್ರವಾಗಲಿದೆ. ರಾಜ್ಯದಲ್ಲಿ ತೃತೀಯ ಭಾಷೆಯಡಿ 9 ಪ್ರಾದೇಶಿಕ ಭಾಷೆಗಳು ಬರಲಿವೆ. ಸುಮಾರು 33 ಸಾವಿರ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಹಿಂದಿ ಭಾಷೆಯ ಅಂಕಗಳು ನಗಣ್ಯ ಎಂದು ಹೇಳಿದರೆ ವಿದ್ಯಾರ್ಥಿಗಳಲ್ಲಿ ಕಲಿಕೆಯ ಗಂಭೀರತೆಯೇ ಕಳೆದು ಹೋಗಲಿದೆ ಎಂದು ತಿಳಿಸಿದರು.

ಸರ್ಕಾರಿ ಪ್ರೌಢಶಾಲೆಗಳಲ್ಲಿ ಹಿಂದಿ ಶಿಕ್ಷಕರ ಸಂಖ್ಯೆ

ರಾಜ್ಯದ ಸರ್ಕಾರಿ ಪ್ರೌಢಶಾಲೆಗಳಲ್ಲಿ ಒಟ್ಟು 5,060 ಹಿಂದಿ ಶಿಕ್ಷಕರ ಹುದ್ದೆಗಳು ಮಂಜೂರಾಗಿವೆ. ಪ್ರಸ್ತುತ ಸುಮಾರು 3,532 ಖಾಯಂ ಹಿಂದಿ ಶಿಕ್ಷಕರು ಕಾರ್ಯನಿರ್ವಹಿಸುತ್ತಿದ್ದಾರೆ. ಸರಿಸುಮಾರು 1,528 ಹಿಂದಿ ಶಿಕ್ಷಕರ ಹುದ್ದೆಗಳು ಖಾಲಿ ಇವೆ. ಖಾಲಿ ಇರುವ ಹುದ್ದೆಗಳಲ್ಲಿ ಬೋಧನೆಗೆ ತೊಂದರೆಯಾಗದಂತೆ ಸರ್ಕಾರವು ಅತಿಥಿ ಶಿಕ್ಷಕರನ್ನು ನೇಮಿಸಿಕೊಂಡಿದೆ. ಒಟ್ಟಾರೆ ಗುಣಮಟ್ಟದ ಶಿಕ್ಷಣ ಮತ್ತು ಭಾಷಾ ಸಮಾನತೆಯ ಹೆಸರಿನಲ್ಲಿ ಸರ್ಕಾರ ತಂದಿರುವ ಈ ಬದಲಾವಣೆಗಳು, ಸಾವಿರಾರು ಶಿಕ್ಷಕರ ವೃತ್ತಿ ಬದುಕನ್ನು ಅತಂತ್ರ ಸ್ಥಿತಿಗೆ ದೂಡುವ ಆತಂಕ ಹೆಚ್ಚಾಗಿದೆ.

ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ಹಿಂದಿ ಶಿಕ್ಷಕರ ವಿಲೀನ

2017ರ ವೃಂದ ಮತ್ತು ನೇಮಕಾತಿ ನಿಯಮಗಳ ಅನ್ವಯ ಪ್ರಾಥಮಿಕ ಶಾಲಾ ಹಿಂದಿ ಸಹ ಶಿಕ್ಷಕರನ್ನು ಪಿಎಸ್‌ಟಿ (1 ರಿಂದ 5 ನೇ ತರಗತಿ) ಹಿಂದಿ ಶಿಕ್ಷಕರೆಂದು ಪರಿಗಣಿಸಲಾಗಿದೆ. ಆದರೆ, 1ರಿಂದ 5ನೇ ತರಗತಿಗಳಲ್ಲಿ ಹಿಂದಿ ವಿಷಯ ಬೋಧನೆಗೆ ಅವಕಾಶ ಇರುವುದಿಲ್ಲ. ಹಿಂದಿ ವಿಷಯವು 6ನೇ ತರಗತಿಯಿಂದ ಪ್ರಾರಂಭವಾಗುವ ಕಾರಣ ಮಕ್ಕಳ ಗುಣಾತ್ಮಕ ಶಿಕ್ಷಣ ಹಾಗೂ ಮಕ್ಕಳ ಶೈಕ್ಷಣಿಕ ಹಿತದೃಷ್ಟಿಯಿಂದ ಪಿಎಸ್‌ಟಿ ಹಿಂದಿ ಶಿಕ್ಷಕರನ್ನು ಜಿಪಿಟಿ (6 ರಿಂದ 8 ನೇ ತರಗತಿ) ಶಿಕ್ಷಕರೆಂದು ಪರಿಗಣಿಸಬೇಕು. ಇನ್ನು ಹಿಂದಿ ಶಿಕ್ಷಕರು ಮತ್ತು ಕನ್ನಡ ಶಿಕ್ಷಕರ ಮೂಲ ವಿದ್ಯಾರ್ಹತೆ ಒಂದೇ ಆಗಿರುವುದರಿಂದ ಹಿಂದಿ ಶಿಕ್ಷಕರನ್ನು ಪಿ.ಎಸ್.ಟಿ ಕನ್ನಡ ಶಿಕ್ಷಕರೆಂದು ಪರಿಗಣಿಸಲು ವಿಧಾನ ಪರಿಷತ್ ಸದಸ್ಯ ಎಸ್.ವಿ. ಸಂಕನೂರ ಅವರು ಸಾರ್ವಜನಿಕ ಶಿಕ್ಷಣ ಇಲಾಖೆ ಪ್ರಧಾನ ಕಾರ್ಯದರ್ಶಿಗೆ ಪತ್ರ ಬರೆದಿದ್ದರು.

ಇದಕ್ಕೆ ಪ್ರತಿಕ್ರಿಯೆ ನೀಡಿದ್ದ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು, ರಾಜ್ಯದ ಸರ್ಕಾರಿ ಪ್ರಾಥಮಿಕ ಶಾಲೆಗಳಲ್ಲಿ 1 ರಿಂದ 5 ನೇ ತರಗತಿಗಳಿಗೆ ಹಿಂದಿ ಭಾಷೆ ಇಲ್ಲವಾದ್ದರಿಂದ ಈ ಹಿಂದೆ ಪಿಯುಸಿ, ಟಿ.ಸಿ.ಹೆಚ್ ಹಾಗೂ ಡಿ.ಇಡಿ ವಿದ್ಯಾರ್ಹತೆ ಆಧಾರದ ಮೇಲೆ ನೇಮಕಗೊಂಡಿದ್ದ ಹಿಂದಿ ಶಿಕ್ಷಕರನ್ನು ಪ್ರಾಥಮಿಕ ಶಾಲಾ ಶಿಕ್ಷಕರ ವೃಂದದಲ್ಲಿ ವಿಲೀನಗೊಳಿಸಲಾಗಿದೆ ಎಂದು ಹೇಳಿದ್ದರು.

Read More
Next Story