ದ್ವಿಭಾಷಾ ಸೂತ್ರದತ್ತ ಕರ್ನಾಟಕ: ಎಸ್‌ಎಸ್‌ಎಲ್‌ಸಿಗೆ  ಹಿಂದಿ ಕಡ್ಡಾಯವಲ್ಲ; 525 ಗರಿಷ್ಠ ಅಂಕ,  ಹಿಂದಿ ಲೆಕ್ಕಕ್ಕಿಲ್ಲ
x

ದ್ವಿಭಾಷಾ ಸೂತ್ರದತ್ತ ಕರ್ನಾಟಕ: ಎಸ್‌ಎಸ್‌ಎಲ್‌ಸಿಗೆ ಹಿಂದಿ ಕಡ್ಡಾಯವಲ್ಲ; 525 ಗರಿಷ್ಠ ಅಂಕ, ಹಿಂದಿ ಲೆಕ್ಕಕ್ಕಿಲ್ಲ

ಹಿಂದಿ ಭಾಷೆ ಅನುಷ್ಠಾನ ವಿಚಾರದಲ್ಲಿ ತನ್ನ ನಿರ್ಧಾರವೇ ಅಂತಿಮ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಸೆಡ್ಡು ಹೊಡೆದಿದೆ. ದ್ವಿಭಾಷಾ ಸೂತ್ರಕ್ಕೆ ಜೈ ಎಂದಿದೆ.


Click the Play button to hear this message in audio format

ಕರ್ನಾಟಕದಲ್ಲಿ ಇನ್ನು ಮುಂದೆ ಮೂರನೇ ಭಾಷೆ ಕಡ್ಡಾಯವಲ್ಲ ರಾಜ್ಯ ಸರ್ಕಾರ ಘೋಷಣೆ ಮಾಡಿದೆ. ಈ ವರ್ಷದಿಂದಲೇ ಮೂರನೇ ಭಾಷೆಗೆ ಕೇವಲ ಗ್ರೇಡಿಂಗ್ ಪದ್ಧತಿಯನ್ನು ಅಳವಡಿಸಲಾಗುವುದು ಎಂದು ಸ್ಪಷ್ಟಪಡಿಸಿದ್ದಾರೆ.

ಇದು ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷಾ ಫಲಿತಾಂಶಕ್ಕೂ ಅನ್ವಯವಾಗಲಿದೆ. ಆ ಮೂಲಕ ಹಿಂದಿ ಭಾಷೆಯ ಅನುಷ್ಠಾನ ಮತ್ತು ಪ್ರೋತ್ಸಾಹದ ವಿಚಾರದಲ್ಲಿ ತನ್ನ ನಿರ್ಧಾರವೇ ಅಂತಿಮ ಎಂಬ ಸ್ಪಷ್ಟ ಸಂದೇಶ ರವಾನಿಸುವ ಮೂಲಕ ಕರ್ನಾಟಕ ಸರ್ಕಾರ ಕೇಂದ್ರಕ್ಕೆ ಸೆಡ್ಡು ಹೊಡೆದಿದೆ. ಈ ಮೂಲಕ ಕೇಂದ್ರ ಸರ್ಕಾರದ 'ಹಿಂದಿ ಹೇರಿಕೆ'ಯ ಪ್ರಯತ್ನಗಳಿಗೆ ಪ್ರಬಲ ಪ್ರತಿರೋಧ ಒಡ್ಡಿರುವುದಲ್ಲದೆ, ರಾಜ್ಯದ ಭಾಷಾ ಸ್ವಾಯತ್ತತೆಯನ್ನು ಎತ್ತಿಹಿಡಿದಿದೆ.

ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವ ಮಧು ಬಂಗಾರಪ್ಪ ಶುಕ್ರವಾರ (ಮಾರ್ಚ್​ 27) ಈ ಬಗ್ಗೆ ವಿವರಣೆ ನೀಡಿದ್ದಾರೆ. ಸಿಎಂ ಸಿದ್ದರಾಮಯ್ಯ ಅವರ ಜತೆ ಮಾತನಾಡಿದ ಬಳಿಕ ಈ ನಿರ್ಧಾರ ಕೈಗೊಂಡಿರುವುದಾಗಿ ಅವರು ಮಾಧ್ಯಮಗೋಷ್ಠಿಯಲ್ಲಿ ಸ್ಪಷ್ಟಪಡಿಸಿದ್ದಾರೆ.

ತೃತೀಯ ಭಾಷೆ ಹಿಂದಿ ಪರೀಕ್ಷೆ ನಡೆಸುವುದಕ್ಕೆ ಕನ್ನಡಪರ ಸಂಘಟನೆಗಳು ಸೇರಿದಂತೆ ರಾಜ್ಯಾದ್ಯಂತ ಭಾರೀ ವಿರೋಧ ವ್ಯಕ್ತವಾಗಿತ್ತು. ಏತನ್ಮಧ್ಯೆ, 31ರಂದು ನಡೆಯಬೇಕಾಗಿದ್ದ ಪರೀಕ್ಷೆಯನ್ನು ಮಹಾವೀರ ಜೈನ ಜಯಂತಿ ಹಿನ್ನೆಲೆಯಲ್ಲಿ ಒಂದು ದಿನ ಮೊದಲೇ ಮಾಡಲು ನಿರ್ಧರಿಸಲಾಗಿತ್ತು. ಇದೀಗ ಈ ಪರೀಕ್ಷೆಯ ಅಂಕ ಪರಿಗಣಿಸುವುದಿಲ್ಲ ಎಂದು ಅವರು ಸ್ಪಷ್ಟವಾಗಿ ಹೇಳಿದ್ದಾರೆ.

625 ಅಂಕಗಳಿಗೆ ಅಲ್ಲ, 525 ಅಂಕಗಳಿಗೆ ಪರೀಕ್ಷೆ, ಆದರೂ ಲೆಕ್ಕಕ್ಕಿಲ್ಲ

ರಾಜ್ಯದಲ್ಲಿ ಇದುವರೆಗೆ 625 ಅಂಕಗಳಿಗೆ ನಡೆಯುತ್ತಿದ್ದ ಪರೀಕ್ಷೆಯನ್ನು ಇನ್ನು ಮುಂದೆ 525 ಅಂಕಗಳಿಗೆ ಇಳಿಸಲು ಸರ್ಕಾರ ತೀರ್ಮಾನಿಸಿದೆ. ಮೂರನೇ ಭಾಷೆಯಾಗಿರುವ ಹಿಂದಿ ಭಾಷೆಯನ್ನು ಕಡ್ಡಾಯವಾಗಿ ಹೇರಬಾರದು ಎಂದು ಸಾರ್ವಜನಿಕರು ಹಾಗೂ ವಿವಿಧ ಸಂಘಟನೆಗಳಿಂದ ತೀವ್ರ ಒತ್ತಡಗಳು ಕೇಳಿಬಂದಿದ್ದವು. ಒಟ್ಟು 1,64,000 ವಿದ್ಯಾರ್ಥಿಗಳು ಮೂರನೇ ಭಾಷೆಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದು, ಅದರಲ್ಲಿ 1,48,000 ವಿದ್ಯಾರ್ಥಿಗಳು ಕೇವಲ ಹಿಂದಿ ಭಾಷೆಯಲ್ಲಿಯೇ ಫೇಲ್ ಆಗಿರುವ ಆತಂಕಕಾರಿ ದತ್ತಾಂಶವನ್ನು ಸಚಿವರು ಮುಂದಿಟ್ಟಿದ್ದಾರೆ.

ಈ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮೂರನೇ ಭಾಷೆಗೆ ಕಡ್ಡಾಯವಾಗಿ ಪರೀಕ್ಷೆ ಬರೆಯಬೇಕಾದರೂ, ಅದರ ಅಂಕಗಳನ್ನು ಮುಖ್ಯ ಫಲಿತಾಂಶಕ್ಕೆ ಪರಿಗಣಿಸದೆ ಕೇವಲ ಗ್ರೇಡ್ ನೀಡುವ ವ್ಯವಸ್ಥೆಯನ್ನು ಈ ಶೈಕ್ಷಣಿಕ ವರ್ಷದಿಂದಲೇ ಜಾರಿಗೆ ತರಲಾಗುತ್ತಿದೆ. ಅಧಿಕೃತ ಆದೇಶವು ಇದೇ ತಿಂಗಳ ಅಂತ್ಯದೊಳಗೆ ಹೊರಬೀಳಲಿದೆ ಎಂದು ಸಚಿವ ಮಧು ಬಂಗಾರಪ್ಪ ತಿಳಿಸಿದ್ದಾರೆ.

ರಾಜ್ಯ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ

ರಾಜ್ಯದ ಶಾಲಾ ಶಿಕ್ಷಣ ವ್ಯವಸ್ಥೆಯಲ್ಲಿ ಮಹತ್ವದ ಬದಲಾವಣೆ ತರಲು ಸರ್ಕಾರ ಮುಂದಾಗಿದ್ದು, ಈ ಕುರಿತು ಸಿಬಿಎಸ್‌ಇ (CBSE) ಮತ್ತು ಇತರ ರಾಜ್ಯಗಳ ಪಾಲಿಸಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ ತೀರ್ಮಾನ ಕೈಗೊಳ್ಳಲಾಗುವುದು ಶಿಕ್ಷಣ ಸಚಿವರು ಹೇಳಿದ್ದಾರೆ. ಈ ಬಗ್ಗೆ ಈಗಾಗಲೇ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳೊಂದಿಗೆ ಚರ್ಚಿಸಲಾಗಿದ್ದು, ಇತರ ರಾಜ್ಯಗಳಲ್ಲಿನ ಶಿಕ್ಷಣ ಪದ್ಧತಿಯ ಮಾಹಿತಿಯನ್ನು ಕೋರಲಾಗಿದೆ. ಇಲಾಖೆಯಿಂದ ಸ್ಪಷ್ಟನೆ ದೊರೆತ ತಕ್ಷಣ ಈ ಕುರಿತಾದ ಗೊಂದಲಗಳು ಬಗೆಹರಿಯಲಿವೆ.

ರಾಜ್ಯದಲ್ಲಿ ಸದ್ಯ ಚಾಲ್ತಿಯಲ್ಲಿರುವ ತ್ರಿಭಾಷಾ ಸೂತ್ರದ ಅನ್ವಯ ಹಿಂದಿಯನ್ನು ಮೂರನೇ ಭಾಷೆಯಾಗಿ ಬಳಸಲಾಗುತ್ತಿದೆ. ಆದರೆ, ಹಿಂದಿ ಹೇರಿಕೆ ಮಾಡಬಾರದು ಎಂಬ ಬಗ್ಗೆ ಸಾರ್ವಜನಿಕರಿಂದ ಮತ್ತು ವಿವಿಧ ಸಂಘಟನೆಗಳಿಂದ ತೀವ್ರ ಒತ್ತಡ ಹಾಗೂ ಮನವಿಗಳು ಬಂದಿದ್ದವು. ಈ ಹಿನ್ನೆಲೆಯಲ್ಲಿ, ಈ ವರ್ಷದಿಂದಲೇ ಮೂರನೇ ಭಾಷೆಯನ್ನು ಕಡ್ಡಾಯ ವಿಷಯದಿಂದ ಹೊರಗಿಡಲು ನಿರ್ಧರಿಸಲಾಗಿದೆ. ಇನ್ನು ಮುಂದೆ 3ನೇ ಭಾಷೆಯು ಕೇವಲ 'ಗ್ರೇಡಿಂಗ್'ಗೆ ಮಾತ್ರ ಸೀಮಿತವಾಗಲಿದ್ದು, ವಾರ್ಷಿಕ ಅಂಕಗಳ ಪಟ್ಟಿಗೆ ಪರಿಗಣನೆಯಾಗುವುದಿಲ್ಲ ಎಂದವರು ಸ್ಪಷ್ಟನೆ ನೀಡಿದ್ದಾರೆ.

ರಾಜ್ಯದಲ್ಲಿ ದ್ವಿಭಾಷಾ ಸೂತ್ರ ತರಲು ಮುನ್ನುಡಿ?

ಇದು ರಾಜ್ಯದಲ್ಲಿ ಜಾರಿಯಲ್ಲಿರುವ ತ್ರಿಭಾಷಾ ಸೂತ್ರಕ್ಕೆ ಸೆಡ್ಡು ಹೊಡೆದು ದ್ವಿಭಾಷಾ ಸೂತ್ರ ಜಾರಿಗೆ ತರುವ ಬಗ್ಗೆ ರಾಜ್ಯದಲ್ಲಿ ಆಗಾಗ ಚರ್ಚೆಯಾಗುತ್ತಲೇ ಇತ್ತು. ಕೇಂದ್ರ ಸರ್ಕಾರದ ತ್ರಿಭಾಷಾ ನೀತಿಗೆ ದಕ್ಷಿಣ ಭಾರತದ ರಾಜ್ಯಗಳಿಂದ ವ್ಯಾಪಕ ವಿರೋಧ ವ್ಯಕ್ತವಾದ ಹಿನ್ನೆಲೆಯಲ್ಲಿ ದ್ವಿಭಾಷಾ ನೀತಿ ಜಾರಿ ಸಂಬಂಧ ರಾಜ್ಯ ಸರ್ಕಾರ ಚಿಂತನೆಯನ್ನೂ ನಡೆಸಿತ್ತು. ಅದರ ಪೂರ್ವಭಾವಿಯಾಗಿ ಹಿಂದಿ ಪರೀಕ್ಷೆ ಅಂಕಗಳ ಅಗತ್ಯ ಇಲ್ಲ ಎನ್ನುವ ನಿರ್ಧಾರಕ್ಕೆ ಸರ್ಕಾರ ಬಂದಿದೆ.

ರಾಜ್ಯದಲ್ಲಿ ತ್ರಿಭಾಷಾ ನೀತಿ ಕೈ ಬಿಟ್ಟು ದ್ವಿಭಾಷಾ ನೀತಿ ಜಾರಿ ಮಾಡುವಂತೆ ಸಾಹಿತಿಗಳು, ಹೋರಾಟಗಾರರು ಹಾಗೂ ಕನ್ನಡ ಪರ ಸಂಘಟನೆಗಳ ಒತ್ತಾಯಿಸಿದ್ದವು. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೂ ಈ ಬಗ್ಗೆ ಆಗಾಗ ತಮ್ಮ ನಿಲುವು ವ್ಯಕ್ತಪಡಿಸುತ್ತಲೇ ಇದ್ದರು. "ಕಾಂಗ್ರೆಸ್ ನೇತೃತ್ವದ ರಾಜ್ಯ ಸರ್ಕಾರ ದ್ವಿಭಾಷಾ ನೀತಿಯ ಪರವಾಗಿದೆ," ಎಂದು ಘೋಷಣೆಯನ್ನೂ ಮಾಡಿದ್ದರು.

ದೇಶವ್ಯಾಪಿ ಹಿಂದಿ ಹೇರಿಕೆಗೆ ಮುಂದಾಗಿರುವ ಕೇಂದ್ರ ಸರ್ಕಾರ ಆ ಸಲುವಾಗಿ ಶಿಕ್ಷಣ ಹಾಗೂ ಆಡಳಿತದಲ್ಲಿ ತ್ರಿಭಾಷಾ ನೀತಿ ಜಾರಿಗೆ ತಂದಿದೆ. ಆದರೆ, ದಕ್ಷಿಣ ರಾಜ್ಯಗಳು ಕೇಂದ್ರದ ನೀತಿಗೆ ಆಕ್ಷೇಪ ವ್ಯಕ್ತಪಡಿಸಿವೆ. ಪ್ರಸ್ತುತ, ತಮಿಳುನಾಡು ಹೊರತುಪಡಿಸಿದರೆ ಉಳಿದ ಎಲ್ಲಾ ರಾಜ್ಯಗಳಲ್ಲೂ ತ್ರಿಭಾಷಾ ನೀತಿ ಜಾರಿಯಲ್ಲಿದೆ. ಹಿಂದಿ ಹೇರಿಕೆಗೆ ತಮಿಳುನಾಡು, ಕರ್ನಾಟಕ ಸೇರಿದಂತೆ ದಕ್ಷಿಣದ ಹಲವು ರಾಜ್ಯಗಳು ವಿರೋಧ ವ್ಯಕ್ತಪಡಿಸುತ್ತಲೇ ಇವೆ. ಮಹಾರಾಷ್ಟ್ರದಲ್ಲೂ ಬಿಜೆಪಿ ನೇತೃತ್ವದ ಮಹಾಯುತಿ ಸರ್ಕಾರ ಕೂಡ ತ್ರಿಭಾಷಾ ನೀತಿ ರದ್ದುಪಡಿಸಿ, ದ್ವಿಭಾಷಾ ನೀತಿಗೆ ಒತ್ತು ನೀಡಿತ್ತು.

"ಈಗಾಗಲೇ ಪ್ರತಿ ವರ್ಷ ಪ್ರಥಮ ದರ್ಜೆಯಲ್ಲಿ ಉತ್ತೀರ್ಣರಾಗುತ್ತಿದ್ದ ಒಂದು ಲಕ್ಷಕ್ಕೂ ಹೆಚ್ಚು ವಿದ್ಯಾರ್ಥಿಗಳು ಈಗಿರುವ ತ್ರಿಭಾಷಾ ಸೂತ್ರದ ಅನುಸಾರ ಹಿಂದಿ ಭಾಷೆಯಲ್ಲಿ ನಪಾಸಾಗುವ ಮೂಲಕ ಭವಿಷ್ಯ ಕಳೆದುಕೊಳ್ಳುವ ಭೀತಿ ಎದುರಾಗಿದೆ. ಈಗಾಗಲೇ ಆಮ್ ಆದ್ಮಿ ಪಕ್ಷವು ಪಂಜಾಬ್ ಹಾಗೂ ದೆಹಲಿಯಲ್ಲಿ ದ್ವಿಭಾಷಾ ನೀತಿ ಜಾರಿಗೆ ತಂದಿದೆ. ಇತ್ತೀಚೆಗೆ ಮಹಾರಾಷ್ಟ್ರ ಸರ್ಕಾರ ಕೂಡ ಹೋರಾಟಗಾರರ ಒತ್ತಡಕ್ಕೆ ಮಣಿದು ತ್ರಿಭಾಷಾ ಸೂತ್ರ ಕೈಬಿಟ್ಟಿದೆ. ಹಾಗಾಗಿ ರಾಜ್ಯದ ಲಕ್ಷಾಂತರ ಮಕ್ಕಳ ಶಿಕ್ಷಣದ ಭವಿಷ್ಯವನ್ನು ಕಾಪಾಡುವ ದಿಶೆಯಲ್ಲಿ ಮುಂಬರುವ ವಿಧಾನಸಭಾ ಅಧಿವೇಶನದಲ್ಲಿ ದ್ವಿಭಾಷಾ ನೀತಿ ಮಸೂದೆ ಮಂಡಿಸಿ, ಅಂಗೀಕಾರ ಮಾಡಬೇಕು," ಎಂದು ಕನ್ನಡ ಪರ ಹೋರಾಟಗಾರರು ಆಗ್ರಹಿಸಿದ್ದರು.

ಕರ್ನಾಟಕದಲ್ಲಿ ಕನ್ನಡ ಮತ್ತು ಇಂಗ್ಲಿಷ್ ಒಳಗೊಂಡ ದ್ವಿಭಾಷಾ ನೀತಿ ಜಾರಿ ಮಾಡುವಂತೆ ಒತ್ತಾಯಿಸಿ ಕನ್ನಡ ಅಭಿವೃದ್ಧಿ ಪ್ರಾಧಿಕಾರ ಕೂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪತ್ರ ಬರೆದಿತ್ತು. "ನಮ್ಮ ಭೂಮಿ, ನಮ್ಮ ಆಡಳಿತ" ಸಂಘಟನೆಯ ರಮೇಶ್ ಬೆಲ್ಲಂಕೊಂಡ ಅವರು ಸಲ್ಲಿಸಿದ್ದ ಮನವಿಯೊಂದಿಗೆ ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ಅವರು ಸಿಎಂ ಸಿದ್ದರಾಮಯ್ಯ ಅವರು ಪತ್ರ ಬರೆದು ದ್ವಿಭಾಷಾ ನೀತಿಗೆ ಒತ್ತಾಯಿಸಿದ್ದರು. ಹಿಂದಿ ಹೇರಿಕೆಯನ್ನು ಬಲವಾಗಿ ವಿರೋಧಿಸುವ ಮತ್ತು ಶಿಕ್ಷಣ, ಆಡಳಿತ ಮತ್ತು ಸಾರ್ವಜನಿಕ ಸಂವಹನದಲ್ಲಿ ಕನ್ನಡ, ಇಂಗ್ಲಿಷ್ ಮಾತ್ರ ಕಡ್ಡಾಯ ಭಾಷೆಗಳನ್ನಾಗಿ ಮಾಡಬೇಕು. ಕೇಂದ್ರ ಸರ್ಕಾರದ ಈ ನೀತಿಯು ಯುಪಿಎಸ್‌ಸಿ, ಎಸ್‌ಎಸ್‌ಸಿ ಮತ್ತು ಬ್ಯಾಂಕಿಂಗ್ ಪರೀಕ್ಷೆ ನೇಮಕಾತಿ ಪ್ರಕ್ರಿಯೆಗಳಲ್ಲಿ ಹಿಂದಿ ಭಾಷಿಕರನ್ನು ಬೆಂಬಲಿಸುವ ತಂತ್ರ ಒಳಗೊಂಡಿದೆ ಎಂದು ದೂರಿದ್ದರು.

ಶಾಲಾ ಪ್ರವೇಶ ವಯೋಮಿತಿ ಸಡಿಲಿಕೆ

ಒಂದನೇ ತರಗತಿಗೆ ಸೇರ್ಪಡೆಯಾಗುವ ಮಕ್ಕಳ ವಯೋಮಿತಿ ವಿಚಾರದಲ್ಲಿ ಸರ್ಕಾರ ಎರಡು ತಿಂಗಳ ವಿನಾಯಿತಿಯನ್ನು ಇದೇ ವೇಳೆ ಪ್ರಕಟಿಸಲಾಗಿದೆ. ಹೊಸ ನಿಯಮಾವಳಿಗಳ ಪ್ರಕಾರ ಎಲ್‌ಕೆಜಿಗೆ ಸೇರುವ ಮಗುವಿಗೆ 3 ವರ್ಷ 10 ತಿಂಗಳು, ಯುಕೆಜಿಗೆ 4 ವರ್ಷ 10 ತಿಂಗಳು ಹಾಗೂ ಒಂದನೇ ತರಗತಿಗೆ ಸೇರ್ಪಡೆಗೊಳ್ಳಲು ಕನಿಷ್ಠ 5 ವರ್ಷ 10 ತಿಂಗಳು ನಿಗದಿಪಡಿಸಲಾಗಿದೆ. ಈ ವಯೋಮಿತಿ ನಿಯಮ ಹಾಗೂ ಸಡಿಲಿಕೆಯು ಕೇವಲ ರಾಜ್ಯ ಪಠ್ಯಕ್ರಮದ ಶಾಲೆಗಳಿಗೆ ಮಾತ್ರವಲ್ಲದೆ ಸಿಬಿಎಸ್‌ಇ ಹಾಗೂ ಐಸಿಎಸ್‌ಇ ಶಾಲೆಗಳಿಗೂ ಕಡ್ಡಾಯವಾಗಿ ಅನ್ವಯವಾಗಲಿದೆ. ಇತರ ರಾಜ್ಯಗಳ ನೀತಿಗಳನ್ನು ಹಾಗೂ ಕೇಂದ್ರ ಮಂಡಳಿಗಳ ಪಾಲಿಸಿಗಳನ್ನು ಕೂಲಂಕಷವಾಗಿ ಪರಿಶೀಲಿಸಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ಜೊತೆ ಚರ್ಚಿಸಿದ ನಂತರ ಈ ಸ್ಪಷ್ಟ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಸಚಿವರು ವಿವರಿಸಿದ್ದಾರೆ.

ಸಾಮಾಜಿಕ ಜಾಲತಾಣ ನಿರ್ಬಂಧ

ಮಕ್ಕಳನ್ನು ಸಾಮಾಜಿಕ ಜಾಲತಾಣಗಳಿಂದ ದೂರವಿಡುವ ನಿಟ್ಟಿನಲ್ಲಿ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವನ್ನು ಸಚಿವರು ಸಮರ್ಥಿಸಿಕೊಂಡಿದ್ದು, ಇದೊಂದು ಗಂಭೀರ ಸಾಮಾಜಿಕ ಸಮಸ್ಯೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣಗಳ ಬಳಕೆಯನ್ನು ಕೇವಲ ಸರ್ಕಾರದ ಮಟ್ಟದಲ್ಲಿ ನಿಯಂತ್ರಿಸಲು ಸಾಧ್ಯವಿಲ್ಲ, ಬದಲಾಗಿ ಪ್ರತಿಯೊಂದು ಮನೆಯಿಂದಲೂ ಪೋಷಕರು ಈ ನಿರ್ಬಂಧವನ್ನು ಆರಂಭಿಸಬೇಕಾದ ಅನಿವಾರ್ಯತೆ ಇದೆ ಎಂದು ಅವರು ಕರೆ ನೀಡಿದ್ದಾರೆ. ಮಕ್ಕಳ ಭವಿಷ್ಯ ಹಾಗೂ ಹಿತಾಸಕ್ತಿಯನ್ನು ಗಮನದಲ್ಲಿಟ್ಟುಕೊಂಡು ಸರ್ಕಾರ ಈ ಬ್ಯಾನ್ ಜಾರಿಗೆ ತಂದಿದೆ. ಇದರ ಜೊತೆಗೆ, ಶಾಲಾ ಮಕ್ಕಳಲ್ಲಿ ನೈತಿಕ ಮೌಲ್ಯಗಳನ್ನು ಬೆಳೆಸುವ ಉದ್ದೇಶದಿಂದ ಈ ಶೈಕ್ಷಣಿಕ ವರ್ಷದಿಂದಲೇ ನೈತಿಕ ವಿಜ್ಞಾನ (Moral Science) ಪುಸ್ತಕಗಳನ್ನು ಸರ್ಕಾರದ ವತಿಯಿಂದಲೇ ಉಚಿತವಾಗಿ ವಿತರಿಸಲು ತೀರ್ಮಾನಿಸಲಾಗಿದೆ ಎಂದು ಮಧು ಬಂಗಾರಪ್ಪ ಪ್ರಕಟಿಸಿದ್ದಾರೆ.

ಇಲಾಖೆಯ ಸಾಧನೆ ಹಾಗೂ ತೇರ್ಗಡೆ ಅಂಕ ಇಳಿಕೆ

ಶಿಕ್ಷಣ ಸಚಿವರಾಗಿ ಅಧಿಕಾರ ವಹಿಸಿಕೊಂಡು ಎರಡು ಮುಕ್ಕಾಲು ವರ್ಷಗಳು ಪೂರ್ಣಗೊಂಡಿದ್ದು, ಇದೇ ಮೊದಲ ಬಾರಿಗೆ ಇಲಾಖೆಯಲ್ಲಿ ಮಹತ್ವದ ಮಸೂದೆಯೊಂದನ್ನು ಜಾರಿಗೆ ತಂದಿರುವುದು ತಮಗೆ ತೀವ್ರ ಸಂತಸ ತಂದಿದೆ ಎಂದು ಅವರು ಹೇಳಿದ್ದಾರೆ. ಶಿಕ್ಷಣ ಇಲಾಖೆಯು ಅತ್ಯಂತ ದೊಡ್ಡ ಹಾಗೂ ವ್ಯಾಪಕವಾಗಿರುವ ಇಲಾಖೆಯಾಗಿದ್ದರೂ, ಇರುವ ಸಮಸ್ಯೆಗಳನ್ನು ಸಮರ್ಥವಾಗಿ ಬಗೆಹರಿಸಲಾಗುತ್ತಿದೆ. ವಿದ್ಯಾರ್ಥಿಗಳ ಪಾಸ್​ ಅಂಕವನ್ನು 33ಕ್ಕೆ ಇಳಿಸಿರುವ ಸರ್ಕಾರದ ಇತ್ತೀಚಿನ ನಿರ್ಧಾರಕ್ಕೂ ಉತ್ತಮ ಸ್ಪಂದನೆ ವ್ಯಕ್ತವಾದೆ ಎಂದು ಅವರು ಹೇಳಿದ್ದಾರೆ.

Read More
Next Story