Hindi Language| ಎಸ್‌ಎಸ್‌ಎಲ್‌ಸಿಯಲ್ಲಿ ಹಿಂದಿ ಅಂಕಕ್ಕೆ ಬ್ರೇಕ್; ಹೈಕೋರ್ಟ್‌ಗೆ ಪಿಐಎಲ್
ಶೈಕ್ಷಣಿಕ ವಲಯದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ತಜ್ಞರ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ತಕ್ಷಣವೇ ನಿರ್ಧಾರ ಮರುಪರಿಶೀಲನೆಗೆ ಸೂಚಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ರಾಜ್ಯದಲ್ಲಿ ರಾಜಕೀಯ ಕೋಲಾಹಲಕ್ಕೆ ಕಾರಣವಾಗಿರುವ ಎಸ್‌ಎಸ್‌ಎಲ್‌ಸಿ ತೃತೀಯ ಭಾಷಾ ಪರೀಕ್ಷೆಯಲ್ಲಿ ಅಂಕಗಳ ಬದಲಿಗೆ ಗ್ರೇಡ್ ನೀಡುವ ಸರ್ಕಾರದ ತೀರ್ಮಾನ ಈಗ ಕಾನೂನು ಹೋರಾಟಕ್ಕೆ ನಾಂದಿ ಹಾಡಿದೆ.ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರ ಏಕಾಏಕಿ ತೀರ್ಮಾನವು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಹೈಕೋರ್ಟ್ ಗೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗಿದೆ.ಬೆಂಗಳೂರು ನಿವಾಸಿಗಳಾದ ಎಚ್.ಎನ್. ಚಂದನಾ ಮತ್ತು ಎಸ್. ವೆಂಕಟೇಶ್ ಎಂಬುವರು ಸಲ್ಲಿಸಿರುವ ಪಿಐಎಲ್ ನಲ್ಲಿ ಸರ್ಕಾರದ ನಡೆಯನ್ನು ಅಸಂವಿಧಾನಿಕ ಎಂದು ಉಲ್ಲೇಖಿಸಲಾಗಿದೆ. ಶೈಕ್ಷಣಿಕ ವಲಯದಲ್ಲಿ ಯಾವುದೇ ಬದಲಾವಣೆ ಮಾಡುವ ಮುನ್ನ ತಜ್ಞರ ಅಭಿಪ್ರಾಯ ಪಡೆಯದೆ ಏಕಪಕ್ಷೀಯ ನಿರ್ಧಾರ ಕೈಗೊಳ್ಳಲಾಗಿದೆ. ತಕ್ಷಣವೇ ನಿರ್ಧಾರ ಮರುಪರಿಶೀಲನೆಗೆ ಸೂಚಿಸಬೇಕು ಎಂದು ಅರ್ಜಿದಾರರು ಆಗ್ರಹಿಸಿದ್ದಾರೆ.ವಿದ್ಯಾರ್ಥಿಗಳಲ್ಲಿ ಗೊಂದಲ ಮೂಡಿಸಿದ ನಿರ್ಧಾರಪರೀಕ್ಷಾ ಸಮಯದಲ್ಲಿ ಸರ್ಕಾರ ಕೈಗೊಂಡಿರುವ ನಿರ್ಧಾರವು ಲಕ್ಷಾಂತರ ವಿದ್ಯಾರ್ಥಿಗಳಲ್ಲಿ ಅತಂತ್ರ ಸ್ಥಿತಿಗೆ ದೂಡಿದೆ. ಅಲ್ಲದೇ ಸಂವಿಧಾನದ 14 ಮತ್ತು 21ನೇ ವಿಧಿಯಡಿ ನೀಡಲಾದ ಸಮಾನತೆ ಮತ್ತು ಶಿಕ್ಷಣದ ಹಕ್ಕಿಗೆ ಚ್ಯುತಿ ತರುತ್ತದೆ ಎಂಬುದು ಅರ್ಜಿದಾರರ ವಾದವಾಗಿದೆ.ತೃತೀಯ ಭಾಷೆ ಹಿಂದಿ ವಿಷಯದ ಅಂಕಗಳನ್ನು ಗಣನೆಗೆ ತೆಗೆದುಕೊಳ್ಳದೇ ಗ್ರೇಡಿಂಗ್ ಗೆ ಮಾತ್ರ ಪರಿಗಣಿಸುವುದಾಗಿ ಹೇಳಲಾಗಿದೆ. ಆದರೆ, ಇದಕ್ಕೆ ಸಂಬಂಧಿಸಿದಂತೆಸಂಬಂಧಿಸಿದಂತೆ ಯಾವುದೇ ಅಧಿಕೃತ ಗೆಜೆಟ್ ಅಧಿಸೂಚನೆ ಹೊರಬಂದಿಲ್ಲ. ಕೇವಲ ಮೌಖಿಕ ಹೇಳಿಕೆಯ ಆಧಾರದ ಮೇಲೆ ಜಾರಿಗೆ ಹೊರಟಿರುವುದು ಕಾನೂನುಬಾಹಿರ ಎಂದು ಅರ್ಜಿಯಲ್ಲಿ ದೂರಲಾಗಿದೆ.ಸರ್ಕಾರದ ಹೊಸ ನಿಯಮವೇನು?ಸರ್ಕಾರದ ಹೊಸ ನಿಯಮದಂತೆ ತೃತೀಯ ಭಾಷೆಯ ಹಿಂದಿ ಪರೀಕ್ಷೆಯ ಅಂಕಗಳನ್ನು ಒಟ್ಟು ಫಲಿತಾಂಶಕ್ಕೆ ಪರಿಗಣಿಸುವುದಿಲ್ಲ. ಇದರಿಂದ 625 ಅಂಕಗಳ ಬದಲಿಗೆ ಕೇವಲ 525 ಅಂಕಗಳ ಆಧಾರದ ಮೇಲೆ ಫಲಿತಾಂಶ ನಿರ್ಧರಿಸಲಾಗುತ್ತದೆ.ತೃತೀಯ ಭಾಷೆಯ ಪರೀಕ್ಷೆ ಬರೆಯುವುದು ಕಡ್ಡಾಯವಾದರೂ ಕೇವಲ ಎ, ಬಿ, ಸಿ, ಡಿ ಗ್ರೇಡ್‌ಗಳನ್ನು ಮಾತ್ರ ನೀಡಲಾಗುತ್ತದೆ. ಇದರಿಂದ ಯಾವುದೇ ಅನುಕೂಲ ಇರುವುದಿಲ್ಲವೆಂದು ದೂರಿದ್ದಾರೆ.ಹಿಂದಿ ಭಾಷೆಯನ್ನು ಕಡ್ಡಾಯ ಮಾಡದಂತೆ ಹಾಗೂ ಅಂಕಪಟ್ಟಿಯಿಂದ ಹೊರಗಿಡಬೇಕು ಎಂದು ಕನ್ನಡ ಪರ ಸಂಘಟನೆಗಳು ಒತ್ತಾಯಿಸಿದ್ದ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಈ ಮಹತ್ವದ ನಿರ್ಧಾರ ಕೈಗೊಂಡಿತ್ತು.ರಾಜಕೀಯ ಜಿದ್ದಾಜಿದ್ದಿಗೆ ಕಾರಣವಾದ ‘ಭಾಷಾ’ ಸೂತ್ರರಾಜ್ಯ ಸರ್ಕಾರದ ಈ ನಿರ್ಧಾರವು ರಾಜಕೀಯ ಬಣ್ಣ ಪಡೆದುಕೊಂಡಿದೆ. ರಾಜ್ಯ ಸರ್ಕಾರವು ಹಿಂದಿ ಹೇರಿಕೆ ತಡೆಯುವ ನೆಪದಲ್ಲಿ ತ್ರಿಭಾಷಾ ಸೂತ್ರಕ್ಕೆ ಎಳ್ಳುನೀರು ಬಿಟ್ಟು, ಪರೋಕ್ಷವಾಗಿ ದ್ವಿಭಾಷಾ ನೀತಿಯನ್ನು ಜಾರಿಗೊಳಿಸುತ್ತಿದೆ ಎಂದು ಬಿಜೆಪಿ ಟೀಕಿಸಿದೆ. ಮಾಜಿ ಸಚಿವ ಅಶ್ವತ್ಥ್ ನಾರಾಯಣ ಅವರು, ಹಿಂದಿ ವಿಷಯದಲ್ಲಿ ಸರ್ಕಾರ ದೇಶದ್ರೋಹದ ಕೆಲಸ ಮಾಡುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು. ಉರ್ದು ಅಥವಾ ಸಂಸ್ಕೃತವನ್ನು ಪ್ರಥಮ ಭಾಷೆಯಾಗಿ ಓದುವವರಿಗೆ 3ನೇ ಭಾಷೆ ಕನ್ನಡವಾಗಿರುತ್ತದೆ. ಅಂತಹ ವಿದ್ಯಾರ್ಥಿಗಳಿಗೆ ಕನ್ನಡದ ಅಂಕಗಳು ಪರಿಗಣನೆಯಾಗದಿದ್ದರೆ, ಕನ್ನಡ ಭಾಷೆಯ ಮಹತ್ವ ಕುಗ್ಗುವುದಿಲ್ಲವೇ? ಎಂಬ ಪ್ರಶ್ನೆಯೂ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.ಹಿಂದಿ ಶಿಕ್ಷಕರಲ್ಲಿ ಹೆಚ್ಚಿದ ಆತಂಕಎಸ್ಎಸ್ಎಲ್ಸಿ ಪರೀಕ್ಷೆ ಫಲಿತಾಂಶದಲ್ಲಿ ತೃತೀಯ ಭಾಷೆಯ ಅಂಕವನ್ನು ಪರಿಗಣಿಸದೆ ಇರುವ ಸರ್ಕಾರದ ತೀರ್ಮಾನದಿಂ ಹಿಂದಿ ಶಿಕ್ಷಕರು ಆತಂಕಗೊಂಡಿದ್ದಾರೆ. ಸರ್ಕಾರದ ನಿರ್ಧಾರದ ವಿರುದ್ದ ಪರ-ವಿರೋಧದ ಚರ್ಚೆಗಳು ಆರಂಭವಾಗಿದ್ದು, ಕರ್ನಾಟಕ ಸರ್ಕಾರಿ ಪ್ರಾಥಮಿಕ ಶಾಲಾ ಹಿಂದಿ ಶಿಕ್ಷಕರ ಸಂಘದ ಪ್ರಧಾನ ಕಾರ್ಯದರ್ಶಿ ಕೆ. ರಾಮಮೂರ್ತಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.ದ ಫೆಡರಲ್ ಕರ್ನಾಟಕದ ಜತೆ ಮಾತನಾಡಿದ ಅವರು,ತೃತೀಯ ಭಾಷೆಯನ್ನು ಪರೀಕ್ಷೆಗೆ ಅಂಕವನ್ನಾಗಿ ಪರಿಗಣಸದೆ ಇರುವ ತೀರ್ಮಾನದಿಂದ ಹಿಂದಿ ಶಿಕ್ಷಕರಿಗೆ ಬರೆ ಎಳೆದಂತಾಗಿದೆ. ರಾಜ್ಯದಲ್ಲಿ ಸುಮಾರು 3 ಸಾವಿರ ಹಿಂದಿ ಶಿಕ್ಷರಿದ್ದಾರೆ. ಇವರ ಮುಂದಿನ ಭವಿಷ್ಯವೇನು ಎಂಬ ಗೊಂದಲ ಇದೆ. ಹಿಂದಿ ಕಲಿಸಬಹುದು, ಆದರೆ ಮೌಲ್ಯಮಾಪನ ಇಲ್ಲ ಅಂದರೆ ಹೇಗೆ. ಇದರಿಂದ ಹಿಂದಿ ಪಾಠ ಮಾಡುವುದಕ್ಕೆ ಗಂಭೀರತೆ ಇರುವುದಿಲ್ಲ ಎಂದಿದ್ದಾರೆ.ಸರ್ಕಾರದ ತರಾತುರಿಯ ತೀರ್ಮಾನ ಏಕೆ ಎಂಬುದು ಅರ್ಥವಾಗಿಲ್ಲ. ನಮ್ಮ ಜತೆ ಚರ್ಚಿಸದೆ ತೀರ್ಮಾನ ಕೈಗೊಳ್ಳಲಾಗಿದೆ. ಮರಾಠಿ, ಉರ್ದು ಶಾಲೆಯಲ್ಲಿ ತೃತೀಯ ಭಾಷೆ ಕನ್ನಡ ಇರುತ್ತದೆ, ಹಾಗಾದರೆ ಅವರ ಪರಿಸ್ಥಿತಿ ಏನು ಎಂಬ ಪ್ರಶ್ನೆ ಮೂಡುತ್ತದೆ.ಮುಂದಿನ ನಡೆ ಹಾಗೂ ತೀರ್ಮಾನದ ಬಗ್ಗೆ ಹಿಂದಿ ಶಿಕ್ಷಕರ ಸಂಘದ ಸಭೆ ನಡೆಸಿ ಚರ್ಚಿಸಲಾಗುವುದು. ಇದೇ ವೇಳೆ ಬೇರೆ ತೃತೀಯ ಭಾಷೆಯ ಸಂಘದವರ ಜತೆಯೂ ಚರ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಒಟ್ಟಾರೆ ಸರ್ಕಾರ ಕೈಗೊಂಡಿರುವ ನಿರ್ಧಾರವನ್ನು ಹೈಕೋರ್ಟ್ ತಡೆ ಹಿಡಿಯಲಿದೆಯೋ ಅಥವಾ ಮುಂದುವರಿಸಲಿದೆಯೋ ಎಂಬುದು ವಿಚಾರಣೆ ಬಳಿಕ ತಿಳಿಯಲಿದೆ.