ಆಂಧ್ರಪ್ರದೇಶ-ಕರ್ನಾಟಕ ಬೊಕ್ಕಸಕ್ಕೆ ಹೊರೆ: ಗಡಿಭಾಗದ ಅಕ್ರಮ ಗಣಿ ಲೂಟಿ ಅನಾವರಣ ಮಾಡಿದ ನ್ಯಾ.ಧುಲಿಯಾ ಸಮಿತಿ?
x
ಜನಾರ್ದನ ರೆಡ್ಡಿ ಮತ್ತು ಜ. ಧುಲಿಯಾ ಅವರ ಚಿತ್ರ

ಆಂಧ್ರಪ್ರದೇಶ-ಕರ್ನಾಟಕ ಬೊಕ್ಕಸಕ್ಕೆ ಹೊರೆ: ಗಡಿಭಾಗದ ಅಕ್ರಮ ಗಣಿ ಲೂಟಿ ಅನಾವರಣ ಮಾಡಿದ ನ್ಯಾ.ಧುಲಿಯಾ ಸಮಿತಿ?

Illegal Mining| ಗಾಲಿ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರ ಮೈನಿಂಗ್ ಕಂಪನಿ (ಓಎಂಸಿ) ಹಾಗೂ ಇತರ ಸಂಸ್ಥೆಗಳು ನಡೆಸಿವೆ ಎನ್ನಲಾದ ಗಣಿ ಅಕ್ರಮವನ್ನು ಸಮಿತಿ ಬಿಚ್ಚಿಟ್ಟಿದೆ ಎನ್ನಲಾಗಿದೆ.


ಕರ್ನಾಟಕ ಹಾಗೂ ಆಂಧ್ರಪ್ರದೇಶದ ಗಡಿ ಭಾಗದಲ್ಲಿ ದಶಕಗಳ ಕಾಲ ನಡೆದಿದೆ ಎನ್ನಲಾದ ಗಡಿ ಒತ್ತುವರಿ, ಅಕ್ರಮ ಗಣಿಗಾರಿಕೆಯ ಕರಾಳ ಮುಖ ಈಗ ಅನಾವರಣಗೊಂಡಿದೆ. ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯ ವರದಿಯು, ಅಕ್ರಮದ ಹಲವು ಮಜಲುಗಳನ್ನು ಅನಾವರಣಗೊಳಿಸಿದೆ.

ಉಭಯ ರಾಜ್ಯಗಳ ಗಡಿ ಭಾಗದ ಅರಣ್ಯ ಪ್ರದೇಶಗಳಲ್ಲಿ ನಡೆದ ಕಬ್ಬಿಣದ ಅದಿರು ಬೇಟೆ, ಕೇವಲ ಆರ್ಥಿಕ ವ್ಯವಹಾರವಾಗಿರಲಿಲ್ಲ. ಅದು ಕಾನೂನು, ಪರಿಸರ ಮತ್ತು ವ್ಯವಸ್ಥೆಯ ಮೇಲೆ ನಡೆದ ಅಕ್ರಮದ ದಾಳಿಯಾಗಿದೆ. ಶಾಸಕ ಗಾಲಿ ಜನಾರ್ದನ ರೆಡ್ಡಿ ಮಾಲೀಕತ್ವದ ಓಬಳಾಪುರ ಮೈನಿಂಗ್ ಕಂಪನಿ (ಓಎಂಸಿ) ಹಾಗೂ ಇತರ ಸಂಸ್ಥೆಗಳು ನಡೆಸಿದ ವ್ಯವಸ್ಥಿತ ಲೂಟಿಯನ್ನು ಎಳೆಎಳೆಯಾಗಿ ಬಿಚ್ಚಿಟ್ಟಿದೆ ಎಂದು ಹೇಳಲಾಗಿದೆ.

ಅಕ್ರಮ ಅದಿರಿನ ಮೌಲ್ಯ ನೂರಾರು ಕೋಟಿ ರೂಪಾಯಿಗಳದ್ದಾಗಿದ್ದು, ರಾಯಧನ ಪಾವತಿಸದೆ ನಡೆಸಲಾದ ಈ ಅಕ್ರಮದಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶ ಎರಡೂ ರಾಜ್ಯಗಳ ಬೊಕ್ಕಸಕ್ಕೆ ಭಾರಿ ನಷ್ಟವುಂಟಾಗಿದೆ ಎಂದು ಧುಲಿಯಾ ಸಮಿತಿಗೆ ಮನವರಿಕೆಯಾಗಿದೆ ಎಂದು ಹೇಳಲಾಗಿದೆ.

ಸುಧಾಂಶು ಧುಲಿಯಾ ಸಮಿತಿಯ ವರದಿಯಲ್ಲಿ ಅತ್ಯಾಧುನಿಕ ಜಿಯೋ-ಮ್ಯಾಪಿಂಗ್ ಹಾಗೂ ತಾಂತ್ರಿಕ ಸಮೀಕ್ಷೆಯ ಮೂಲಕ ಹಲವು ಸ್ಫೋಟಕ ಸತ್ಯಗಳನ್ನು ಬಹಿರಂಗಗೊಳಿಸಿದೆ. ಅನುಮತಿ ಪಡೆದ ಪ್ರದೇಶಕ್ಕಿಂತ ಹೊರಗೆ ಬರೋಬ್ಬರಿ 8.16 ಹೆಕ್ಟೇರ್ ಪ್ರದೇಶದಲ್ಲಿ ಅಕ್ರಮ ಗಣಿಗಾರಿಕೆ ನಡೆಸಿರುವುದು, ಅರಣ್ಯದೊಳಗೆ ನಿಯಮಬಾಹಿರವಾಗಿ ಕಿಲೋಮೀಟರ್‌ಗಟ್ಟಲೆ ರಸ್ತೆಗಳನ್ನು ನಿರ್ಮಿಸಿರುವುದು ಮತ್ತು ಪಕ್ಕದ ಗಣಿ ಮಾಲೀಕರಿಗೆ ಸೇರಿದ ಜಾಗವನ್ನೂ ಬಿಡದೆ ಲೂಟಿ ಮಾಡಿರುವುದು ವರದಿಯಲ್ಲಿ ಸಾಬೀತಾಗಿದೆ. ಸರ್ಕಾರಿ ಬೊಕ್ಕಸಕ್ಕೆ ಕೋಟ್ಯಂತರ ರೂಪಾಯಿ ನಷ್ಟ ಉಂಟುಮಾಡುವುದರ ಜತೆಗೆ ನಿಸರ್ಗದತ್ತವಾದ ಅರಣ್ಯ ಸಂಪತ್ತನ್ನು ಜನಾರ್ದನ ರೆಡ್ಡಿ ಕಂಪನಿಗಳು ತಮ್ಮ ಸ್ವಾರ್ಥಕ್ಕಾಗಿ ಹೇಗೆ ನಾಶ ಮಾಡಿವೆ ಎಂಬುದನ್ನು ವರದಿ ಉಲ್ಲೇಖ ಮಾಡಲಾಗಿದೆ.

ಅಕ್ರಮದಲ್ಲಿ ಓಬಳಾಪುರ ಮೈನಿಂಗ್ ಕಂಪನಿಯ ಸಿಂಹಪಾಲು

ಇಡೀ ಹಗರಣದ ಕೇಂದ್ರಬಿಂದುವಾಗಿರುವುದು ಬಿಜೆಪಿ ಶಾಸಕ, ಮಾಜಿ ಸಚಿವ ಜನಾರ್ದನ ರೆಡ್ಡಿ ನೇತೃತ್ವದ ಒಎಂಸಿ ಕಂಪನಿಯಾಗಿದೆ. ಸಮಿತಿಯ ವರದಿಯ ಪ್ರಕಾರ, ಪತ್ತೆಯಾದ ಒಟ್ಟು 8.16 ಹೆಕ್ಟೇರ್ ಅಕ್ರಮ ಪ್ರದೇಶದಲ್ಲಿ 5.43 ಹೆಕ್ಟೇರ್ ಅರಣ್ಯ ಭೂಮಿಯನ್ನು ಕೇವಲ ಒಎಂಸಿ ಕಂಪನಿಯೇ ಅಕ್ರಮವಾಗಿ ಬಳಕೆ ಮಾಡಿಕೊಂಡಿದೆ. ಇದು ಗಣಿಗಾರಿಕೆ ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದ್ದು, ಅರಣ್ಯ ಸಂರಕ್ಷಣಾ ಕಾಯ್ದೆಯನ್ನು ಗಾಳಿಗೆ ತೂರಲಾಗಿದೆ ಎಂಬ ಆರೋಪ ಕೇಳಿಬಂದಿದೆ.

ಸರ್ಕಾರದ ಅನುಮತಿ ಇಲ್ಲದೆ ಅರಣ್ಯದೊಳಗೆ ನುಗ್ಗಿ ಗಣಿಗಾರಿಕೆ ನಡೆಸಿರುವುದು ಕಂಪನಿಯ ಕಾನೂನುಬಾಹಿರ ದುಸ್ಸಾಹಸವನ್ನು ಎತ್ತಿ ತೋರಿಸುತ್ತದೆ. ಒಎಂಸಿ ಕಂಪನಿಯ ಅಕ್ರಮಗಳು ಕೇವಲ ಸರ್ಕಾರಿ ಅಥವಾ ಅರಣ್ಯ ಭೂಮಿಗೆ ಸೀಮಿತವಾಗಿಲ್ಲ. ಸಮಿತಿಯು ಅತ್ಯಂತ ಗಂಭೀರವಾದ ಅಂಶವೊಂದನ್ನು ಹೊರಹಾಕಿದ್ದು, ಒಎಂಸಿ ಕಂಪನಿಯು ತನ್ನ ನೆರೆಯ ಗಣಿ ಮಾಲೀಕರಾದ ವೈಎಂಎಸ್ ಮತ್ತು ಬಿಐಒಪಿ ಕಂಪನಿಗಳಿಗೆ ಸೇರಿದ ಸುಮಾರು 5.63 ಹೆಕ್ಟೇರ್ ಜಾಗವನ್ನು ಒತ್ತುವರಿ ಮಾಡಿಕೊಂಡು ಅಲ್ಲಿನ ಅದಿರನ್ನು ಲೂಟಿ ಮಾಡಿದೆ. ವೈಎಂಸಿ ಕಂಪನಿಗೆ ಸೇರಿದ 3.94 ಹೆಕ್ಟೇರ್ ಜಾಗದಲ್ಲಿ ಜನಾರ್ದನ ರೆಡ್ಡಿ ಒಎಂಸಿ ಕಂಪನಿಯು ಅಕ್ರಮವಾಗಿ ಗಣಿಗಾರಿಕೆ ನಡೆಸಿದೆ ಎನ್ನಲಾಗಿದೆ.

ಅಂತೆಯೇ ಬಿಐಒಪಿ ಕಂಪನಿಗೆ ಸೇರಿದ 1.69 ಹೆಕ್ಟೇರ್ ಜಾಗದಲ್ಲಿಯೂ ಒಎಂಸಿ ಕಂಪನಿಯೇ ಅತಿಕ್ರಮಣ ಮಾಡಿ ಲೂಟಿ ಮಾಡಿದೆ. ಜಿಯೋ-ನಕ್ಷೆಗಳ ಆಧಾರದ ಮೇಲೆ ಸಮಿತಿಯು ಈ ವಾದವನ್ನು ಪುಷ್ಟೀಕರಿಸಿದೆ. ಇದು ಉದ್ಯಮವೊಂದರ ವ್ಯವಹಾರಿಕ ನೀತಿಗಳ ಸಂಪೂರ್ಣ ಪತನವನ್ನು ಬಿಂಬಿಸುತ್ತದೆ. ಅಕ್ಕಪಕ್ಕದ ಕಂಪನಿಗಳ ಗಡಿಯನ್ನೂ ಲೆಕ್ಕಿಸದೆ ನಡೆದ ಈ ಲೂಟಿಯು ಆ ಕಾಲದಲ್ಲಿದ್ದ ರಾಜಕೀಯ ಪ್ರಭಾವ ಮತ್ತು ಅಧಿಕಾರ ದುರುಪಯೋಗಕ್ಕೆ ಸಾಕ್ಷಿಯಾಗಿದೆ ಎಂದು ಸಮಿತಿಗೆ ಮನವರಿಕೆಯಾಗಿದೆ ಎಂದು ಮೂಲಗಳು ತಿಳಿಸಿವೆ.

ಪರಿಸರ, ಅರಣ್ಯದ ಮೇಲೆ ಬೀರಿದ ದುಷ್ಪರಿಣಾಮ

ಗಣಿಗಾರಿಕೆ ಎಂದರೆ ಕೇವಲ ಅದಿರು ತೆಗೆಯುವುದಲ್ಲ, ಅದಕ್ಕೆ ಪೂರಕವಾಗಿ ಸಾರಿಗೆ ವ್ಯವಸ್ಥೆಯೂ ಬೇಕು. ಅದಿರು ಸಾಗಾಣಿಕೆಗಾಗಿ ಅರಣ್ಯ ಪ್ರದೇಶದ ಒಳಗೆ ಯಾವುದೇ ಅನುಮತಿ ಇಲ್ಲದೆ ಒಂಬತ್ತು ಕಚ್ಚಾ ರಸ್ತೆಗಳನ್ನು ನಿರ್ಮಿಸಲಾಗಿದೆ. ಈ ರಸ್ತೆಗಳ ಒಟ್ಟು ಉದ್ದ ಸುಮಾರು 7.47 ಕಿಲೋಮೀಟರ್‌ಗಳಾಗಿದ್ದು, ಇದಕ್ಕಾಗಿ 3.98 ಹೆಕ್ಟೇರ್ ಅರಣ್ಯ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ.

ದಟ್ಟ ಅರಣ್ಯದಲ್ಲಿದ್ದ ಮರಗಿಡಗಳನ್ನು ಕಡಿದು ಹಾಕಿ ರಸ್ತೆ ನಿರ್ಮಿಸಿದ್ದರಿಂದ ಜೀವವೈವಿಧ್ಯಕ್ಕೆ ದೊಡ್ಡ ಧಕ್ಕೆಯಾಗಿದೆ. ಬೆಟ್ಟದ ಪ್ರದೇಶದಲ್ಲಿ ಅವೈಜ್ಞಾನಿಕವಾಗಿ ರಸ್ತೆ ನಿರ್ಮಿಸಿರುವುದರಿಂದ ಮಣ್ಣಿನ ಸವೆತ ಉಂಟಾಗಿ, ಪರಿಸರ ಅಸಮತೋಲನಕ್ಕೆ ಕಾರಣವಾಗಿದೆ.

ಅಕ್ರಮ ರಸ್ತೆಗಳ ನಿರ್ಮಾಣ ಮತ್ತು ನಿರಂತರ ಲಾರಿಗಳ ಸಂಚಾರದಿಂದ ವನ್ಯಜೀವಿಗಳ ನೆಮ್ಮದಿಗೆ ಭಂಗ ಬಂದಿದೆ. ಗಣಿಗಾರಿಕೆಯಿಂದಾಗಿ ಅಂತರ್ಜಲ ಮಟ್ಟ ಕುಸಿದಿದೆ ಮತ್ತು ಗುಡ್ಡಗಳ ಮೇಲಿನ ಮಳೆನೀರು ಸಂಗ್ರಹವಾಗುವ ಹಾದಿಗಳು ಮುಚ್ಚಿಹೋಗಿವೆ. ಸಾಗಾಣಿಕೆ ರಸ್ತೆಗಳಿಂದಾಗಿ ಏಳುವ ಕೆಂಪು ಧೂಳು ಸುತ್ತಮುತ್ತಲ ಗ್ರಾಮಸ್ಥರ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಬೀರಿದೆ.

9 ಕಚ್ಚಾ ರಸ್ತೆಗಳ ನಿರ್ಮಾಣ

ಗಣಿಗಾರಿಕೆ ಕಂಪನಿಗಳ ಮಿತಿಮೀರಿದ ದುರಾಸೆಯಿಂದಾಗಿ ರಾಜ್ಯದ ಅರಣ್ಯ ಸಂಪತ್ತು ಅಕ್ಷರಶಃ ಬಲಿಯಾಗುತ್ತಿದೆ. ನಿಯಮಗಳನ್ನು ಗಾಳಿಗೆ ತೂರಿ ಅರಣ್ಯ ಪ್ರದೇಶದಲ್ಲಿ ಅಕ್ರಮವಾಗಿ ರಸ್ತೆ ನಿರ್ಮಿಸಿರುವುದು ಹಾಗೂ ನೂರಾರು ಟನ್ ತ್ಯಾಜ್ಯವನ್ನು ಕಾಡಿನೊಳಗೆ ಸುರಿದು ಪರಿಸರ ನಾಶ ಮಾಡಿರುವುದು ತನಿಖಾ ಸಮಿತಿಯ ವರದಿಯಿಂದ ಬಯಲಾಗಿದೆ. ಅದಿರು ಸಾಗಾಣಿಕೆಯನ್ನು ಸುಲಭಗೊಳಿಸಿಕೊಳ್ಳಲು ಈ ಕಂಪನಿಗಳು ಅರಣ್ಯ ಇಲಾಖೆಯ ಅನುಮತಿ ಇಲ್ಲದೆ ಸುಮಾರು 7.47 ಕಿಲೋಮೀಟರ್ ಉದ್ದದ 9 ಕಚ್ಚಾ ರಸ್ತೆಗಳನ್ನು ನಿರ್ಮಿಸಿವೆ. ಈ ರಸ್ತೆಗಳ ನಿರ್ಮಾಣಕ್ಕಾಗಿ ಅರಣ್ಯದ ಒಳಭಾಗದ ಸುಮಾರು 3.98 ಹೆಕ್ಟೇರ್ ಭೂಮಿಯನ್ನು ಅಕ್ರಮವಾಗಿ ಒತ್ತುವರಿ ಮಾಡಿಕೊಳ್ಳಲಾಗಿದೆ ಎಂದು ಸಮಿತಿ ಗಂಭೀರವಾಗಿ ಗುರುತಿಸಿದೆ.

ಸಾಮಾನ್ಯವಾಗಿ ಗಣಿಗಾರಿಕೆ ಮಾಡುವಾಗ ಬರುವ ನಿರುಪಯುಕ್ತ ಮಣ್ಣು ಹಾಗೂ ಕಲ್ಲುಗಳನ್ನು ವಿಲೇವಾರಿ ಮಾಡಲು ಸರ್ಕಾರದಿಂದ ಪ್ರತ್ಯೇಕ ಜಾಗವನ್ನು ನಿಗದಿಪಡಿಸಲಾಗಿರುತ್ತದೆ. ಆದರೆ, ಆ ನಿಗದಿತ ಜಾಗಕ್ಕೆ ತ್ಯಾಜ್ಯ ಸಾಗಿಸುವ ವೆಚ್ಚವನ್ನು ಉಳಿಸುವ ಉದ್ದೇಶದಿಂದ, ಕಂಪನಿಗಳು ಅಕ್ಕಪಕ್ಕದ ದಟ್ಟ ಅರಣ್ಯವನ್ನೇ ಕಸದ ತೊಟ್ಟಿಯನ್ನಾಗಿ ಬಳಸಿಕೊಂಡಿವೆ. ಸಮಿತಿಯ ವರದಿಯ ಪ್ರಕಾರ, ವೈಎಂಎಸ್‌ ಕಂಪನಿ 1.56 ಹೆಕ್ಟೇರ್ ಅರಣ್ಯ ಭೂಮಿ ನಾಶ ಮಾಡಿದ್ದು, ಬಿಐಒಪಿ ಕಂಪನಯು 1.76 ಹೆಕ್ಟೇರ್ ಅರಣ್ಯದಲ್ಲಿ ತ್ಯಾಜ್ಯ ವಿಲೇವಾರಿ ಮಾಡಿದೆ. ಒಎಂಸಿ ಕಂಪನಿಯು ಒಂದೆಡೆ 1.75 ಹೆಕ್ಟೇರ್ ಅರಣ್ಯ ಪ್ರದೇಶ ಹಾಳು ಮಾಡಿದರೆ, ಮತ್ತೊಂದೆಡೆ 0.49 ಹೆಕ್ಟೇರ್ ಅರಣ್ಯ ಭೂಮಿಯಲ್ಲಿ ಕಸದ ರಾಶಿ ಹಾಕಿದೆ ಎಂದು ಹೇಳಲಾಗಿದೆ.

ಆಂಧ್ರಪ್ರದೇಶ, ಕರ್ನಾಟಕ ಸರ್ಕಾರಗಳ ಬೊಕ್ಕಸಕ್ಕೆ ಹೊರೆ

ಅಕ್ರಮವಾಗಿ ತೆಗೆಯಲಾದ ಅದಿರಿನ ಮೌಲ್ಯ ನೂರಾರು ಕೋಟಿ ರೂಪಾಯಿಗಳಷ್ಟಾಗುತ್ತದೆ. ಸರ್ಕಾರದ ಅನುಮತಿ ಇಲ್ಲದೆ, ರಾಯಧನ ಪಾವತಿಸದೆ ನಡೆಸಲಾದ ಈ ಗಣಿಗಾರಿಕೆಯಿಂದ ಕರ್ನಾಟಕ ಹಾಗೂ ಆಂಧ್ರಪ್ರದೇಶ ಎರಡೂ ರಾಜ್ಯಗಳ ಬೊಕ್ಕಸಕ್ಕೆ ಭಾರಿ ನಷ್ಟವುಂಟಾಗಿದೆ. ಕೇವಲ ವೈಯಕ್ತಿಕ ಲಾಭಕ್ಕಾಗಿ ಸಾರ್ವಜನಿಕ ಸಂಪತ್ತನ್ನು ಲೂಟಿ ಮಾಡಿರುವುದು ಇಲ್ಲಿ ಸ್ಪಷ್ಟವಾಗಿ ಗೋಚರಿಸುತ್ತದೆ. ಈ ಹಗರಣವನ್ನು ಪತ್ತೆ ಹಚ್ಚುವಲ್ಲಿ ಧುಲಿಯಾ ಸಮಿತಿಯು ಬಳಸಿದ 'ಜಿಯೋ-ಮ್ಯಾಪಿಂಗ್' ಮತ್ತು ಉಪಗ್ರಹ ಚಿತ್ರಣಗಳು ನಿರ್ಣಾಯಕ ಪಾತ್ರ ವಹಿಸಿವೆ. ಗಣಿಗಾರಿಕೆ ನಡೆದ ಪ್ರದೇಶದ ಹಳೆಯ ಮತ್ತು ಹೊಸ ನಕ್ಷೆಗಳನ್ನು ತುಲನೆ ಮಾಡಿದಾಗ, ಗಡಿ ರೇಖೆಗಳು ಹೇಗೆ ಬದಲಾಗಿವೆ ಮತ್ತು ಅರಣ್ಯ ಭೂಮಿ ಹೇಗೆ ಕಣ್ಮರೆಯಾಗಿದೆ ಎಂಬುದು ವೈಜ್ಞಾನಿಕವಾಗಿ ಸಾಬೀತಾಗಿದೆ ಎಂದು ಮೂಲಗಳು ಹೇಳಿವೆ.

ರಾಜ್ಯ ಸರ್ಕಾರ, ಐಎಎಸ್‌ ಅಧಿಕಾರಿಗಳ ವಿಫಲದ ಫಲ

ದ ಫೆಡರಲ್‌ ಕರ್ನಾಟಕ ಜತೆ ಮಾತನಾಡಿದ ಉದ್ಯಮಿ, ಟಪಾಲ್ ಗಣೇಶ್, ರಾಜ್ಯದ ಅರಣ್ಯ ಸಂಪತ್ತನ್ನು ಗಣಿಗಾರಿಕೆ ಕಂಪನಿಗಳು ಅಕ್ರಮವಾಗಿ ನುಂಗಿ ಹಾಕುತ್ತಿರುವುದು ಕೇವಲ ಕಂಪನಿಗಳ ದುರಾಸೆಯಲ್ಲ, ಬದಲಿಗೆ ಇದು ಸರ್ಕಾರದ ವ್ಯವಸ್ಥಿತ ವೈಫಲ್ಯ ಮತ್ತು ಉನ್ನತ ಅಧಿಕಾರಿಗಳ ಬೇಜವಾಬ್ದಾರಿತನದ ಫಲ ಎಂದು ತೀವ್ರವಾಗಿ ಕಿಡಿಕಾರಿದ್ದಾರೆ. ಭ್ರಷ್ಟಾಚಾರದ ಜಾಲದಲ್ಲಿ ಸರ್ಕಾರ ಮತ್ತು ಐಎಎಸ್‌ ಅಧಿಕಾರಿಗಳ ವೈಫಲ್ಯವೂ ಇದೆ. ಉನ್ನತ ಸ್ಥಾನದಲ್ಲಿರುವ ಅಧಿಕಾರಿಗಳಿಗೆ ತಳಮಟ್ಟದಲ್ಲಿ ಏನು ನಡೆಯುತ್ತಿದೆ ಎಂಬ ಅರಿವಿರುತ್ತದೆ. ಆದರೆ, ಗಣಿಗಾರಿಕೆ ಕಂಪನಿಗಳ ಪ್ರಭಾವಕ್ಕೆ ಮಣಿದು ಅಥವಾ ವೈಯಕ್ತಿಕ ಲಾಭಕ್ಕಾಗಿ ಅವರು ತಮ್ಮ ಕರ್ತವ್ಯವನ್ನು ಮರೆತಿದ್ದಾರೆ. ಅರಣ್ಯ ಸಂರಕ್ಷಣಾ ಕಾಯ್ದೆಗಳಿದ್ದರೂ, ಐಎಎಸ್ ಅಧಿಕಾರಿಗಳು ಈ ಕಂಪನಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ. ಇದು ಇಡೀ ಅಧಿಕಾರಶಾಹಿಯ ನೈತಿಕ ಪತನವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ.

ಕೇವಲ ಗಣಿಗಾರಿಕೆ ಕಂಪನಿಗಳ ಮೇಲೆ ದಂಡ ವಿಧಿಸಿದರೆ ಸಾಲದು, ಈ ಅಕ್ರಮಕ್ಕೆ ಬೆಂಬಲ ನೀಡಿದ ಅಥವಾ ತಡೆಗಟ್ಟುವಲ್ಲಿ ವಿಫಲರಾದ ಅಧಿಕಾರಿಗಳನ್ನೂ ಜೈಲಿಗೆ ಕಳುಹಿಸಬೇಕು. ಸರ್ಕಾರದ ವೈಫಲ್ಯದಿಂದಾಗಿ ರಾಜ್ಯದ ನೈಸರ್ಗಿಕ ಸಂಪತ್ತು ಲೂಟಿಯಾಗುತ್ತಿದೆ. ಮುಖ್ಯಮಂತ್ರಿಗಳು ಈ ಕೂಡಲೇ ಮಧ್ಯಪ್ರವೇಶಿಸಿ, ಈ ಅಕ್ರಮದಲ್ಲಿ ಭಾಗಿಯಾದ ಪ್ರತಿಯೊಬ್ಬ ಅಧಿಕಾರಿಯ ವಿರುದ್ಧವೂ ಶಿಸ್ತು ಕ್ರಮ ಜರುಗಿಸಬೇಕು. ಆಂಧ್ರಪ್ರದೇಶ ಸರ್ಕಾರದಂತೆ ರಾಜ್ಯ ಸರ್ಕಾರವು ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.

Read More
Next Story