
Illegal Mining Case| ನ್ಯಾ. ಧುಲಿಯಾ ವರದಿ: ಗಡಿ ಒತ್ತುವರಿ ಪ್ರಕರಣದಲ್ಲಿ ಜನಾರ್ದನ ರೆಡ್ಡಿಗೆ ಮತ್ತೆ ಸಂಕಷ್ಟ?
ಕರ್ನಾಟಕ - ಆಂಧ್ರಪ್ರದೇಶದ ಗಡಿಭಾಗದಲ್ಲಿನ ಗಡಿ ಒತ್ತುವರಿ, ಗಡಿ ಗುರುತುಗಳನ್ನು ಅಳಿಸಿ ಹಾಕಿ, ಅಕ್ರಮ ಗಣಿಗಾರಿಕೆ ಮಾಡಲಾಗಿದೆ ಎಂಬ ಆರೋಪ ಮತ್ತೆ ಜನಾರ್ದನ ರೆಡ್ಡಿಗೆ ಹುರುಳಾಗುವ ಸಾಧ್ಯತೆ ಇದೆ ಎನ್ನಲಾಗಿದೆ.
ಗಡಿರೇಖೆಗಳನ್ನೇ ಅಳಿಸಿ ಹಾಕಿ ಗಣಿಗಾರಿಕೆ ನಡೆಸಿದ ಆರೋಪವು ಶಾಸಕ ಜಿ. ಜನಾರ್ದನ ರೆಡ್ಡಿ ಅವರನ್ನು ಮತ್ತೆ ಸುಳಿಗೆ ಸಿಲುಕಿಸಿದೆ. ಸುಪ್ರೀಂ ಕೋರ್ಟ್ ನೇಮಿಸಿದ್ದ ನ್ಯಾ. ಸುಧಾಂಶು ಧುಲಿಯಾ ಸಮಿತಿಯು ಉನ್ನತ ಮಟ್ಟದ ಸಮಿತಿಯ ವರದಿಯು ಈಗ ರೆಡ್ಡಿ ಪಾಳಯದಲ್ಲಿ ನಡುಕ ಹುಟ್ಟಿಸಿದೆ.
ರಾಜಕೀಯವಾಗಿ ಅಸ್ತಿತ್ವ ಕಂಡುಕೊಳ್ಳುತ್ತಿರುವ ಹೊತ್ತಿನಲ್ಲೇ ಈ ಗಡಿ ವಿವಾದ ಮತ್ತೊಮ್ಮೆ ಸಂಕಷ್ಟಕ್ಕೆ ದೂಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಮಂಗಳವಾರ (ಫೆ.24) ಸುಪ್ರೀಂಕೋರ್ಟ್‌ಗೆ ಸಮಿತಿಯು ತನ್ನ ವರದಿಯನ್ನು ಸಲ್ಲಿಕೆ ಮಾಡುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿನ ಗಡಿ ಒತ್ತುವರಿ, ಅಲ್ಲಿನ ಅಕ್ರಮ ಗಣಿಗಾರಿಕೆ ಪ್ರಕರಣದ ಕೇಂದ್ರಬಿಂದುವಾಗಿದೆ. ಎರಡು ರಾಜ್ಯಗಳ ಗಣಿಗಾರಿಕೆ ಪ್ರದೇಶಗಳಲ್ಲಿ ಗಡಿ ಗುರುತುಗಳನ್ನು ಅಳಿಸಿ ಹಾಕಿ, ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದೆ ಎಂಬ ಆರೋಪ ಮತ್ತೆ ಉರುಳಾಗುವ ಸಾಧ್ಯತೆ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಬಳ್ಳಾರಿ (ಕರ್ನಾಟಕ) ಮತ್ತು ಅನಂತಪುರ (ಆಂಧ್ರಪ್ರದೇಶ) ಜಿಲ್ಲೆಗಳ ನಡುವಿನ ಗಡಿಯಲ್ಲಿರುವ ಸುಂಕಲಮ್ಮ ದೇವಸ್ಥಾನದ ಸುತ್ತಮುತ್ತಲಿನ ಪ್ರದೇಶದಲ್ಲಿ ವ್ಯಾಪಕ ಅಕ್ರಮ ನಡೆದಿದೆ ಎಂದು ಆರೋಪಗಳು ಕೇಳಿಬಂದಿವೆ. ಆಂಧ್ರಪ್ರದೇಶ ಸರ್ಕಾರವು ಈ ಬಗ್ಗೆ ಸುಪ್ರೀಂಕೋರ್ಟ್‌ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿ, ಗಡಿ ಭಾಗದ ಮೈನಿಂಗ್ ಕಂಪನಿಗಳಿಂದ ಅಕ್ರಮ ನಡೆದಿದೆ ಎಂದು ದೂರಿದ್ದರಿಂದ, ಸುಪ್ರೀಂ ಕೋರ್ಟ್ ವಾಸ್ತವಾಂಶ ತಿಳಿಯಲು ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯನ್ನು ರಚಿಸಿತ್ತು. ಸಮಿತಿಯು ತನಿಖೆ ನಡೆಸಿದ್ದು, ಮಂಗಳವಾರ (ಫೆ.24) ತನ್ನ ವರದಿಯನ್ನು ಸುಪ್ರೀಂಕೋರ್ಟ್‌ಗೆ ಸಲ್ಲಿಕೆ ಮಾಡುವ ಸಾಧ್ಯತೆ ಇದೆ.
ನ್ಯಾ.ಸುಧಾಂಶು ಧುಲಿಯಾ ವರದಿಯ ಪ್ರಮುಖ ಅಂಶಗಳು
ನ್ಯಾ.ಸುಧಾಂಶು ಧುಲಿಯಾ ನೇತೃತ್ವದ ಸಮಿತಿಯು ಅತ್ಯಾಧುನಿಕ ಡ್ರೋನ್ ಸಮೀಕ್ಷೆ ಮತ್ತು ತಂತ್ರಜ್ಞಾನ ಬಳಸಿ ಗಡಿ ಭಾಗದ ಅಳತೆ ಮಾಡಿದೆ. ತನಿಖೆಯಲ್ಲಿ ಆಘಾತಕಾರಿ ಅಂಶಗಳು ಹೊರಬಂದಿವೆ. ಕರ್ನಾಟಕದ ಗಡಿಯನ್ನು ದಾಟಿ ಆಂಧ್ರದ ಭಾಗದಲ್ಲಿ ಅಥವಾ ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ಗಣಿಗಾರಿಕೆ ಮಾಡಲಾಗಿದೆ. ಮೂಲ ನಕ್ಷೆಗಳಿಗೂ ಈಗಿನ ವಾಸ್ತವ ಸ್ಥಿತಿಗೂ ವ್ಯತ್ಯಾಸವಿದ್ದು, ಗಣಿ ಕಂಪನಿಗಳು ತಮ್ಮ ಲಾಭಕ್ಕಾಗಿ ಗಡಿ ರೇಖೆಗಳನ್ನು ಬದಲಿಸಿರುವುದು ಪತ್ತೆಯಾಗಿದೆ ಎನ್ನಲಾಗಿದೆ.
ಗಡಿಯಲ್ಲಿರುವ ಐತಿಹಾಸಿಕ ಸುಂಕಲಮ್ಮ ದೇವಸ್ಥಾನದ ಸಮೀಪವೇ ಅಕ್ರಮ ಗಣಿಗಾರಿಕೆ ಮಾಡಲಾಗಿದ್ದು, ಇದರಿಂದ ಪರಿಸರ ಮತ್ತು ಧಾರ್ಮಿಕ ಭಾವನೆಗಳಿಗೂ ಧಕ್ಕೆಯಾಗಿದೆ. ಕರ್ನಾಟಕ ಮತ್ತು ಆಂಧ್ರದ ಗಣಿ ಅನುಮತಿಗಳನ್ನು ಒಂದಕ್ಕೊಂದು ಅದಲು-ಬದಲು ಮಾಡಿ ಅಕ್ರಮ ಅದಿರು ಸಾಗಾಟ ಮಾಡಲಾಗಿದೆ ಎಂಬುದು ತನಿಖೆಯಲ್ಲಿ ಸಾಬೀತಾಗಿದೆ ಎಂದು ಹೇಳಲಾಗುತ್ತಿದೆ.
ಒತ್ತುವರಿ ಪ್ರಮಾಣ
ಜನಾರ್ದನ ರೆಡ್ಡಿಗೆ ಸೇರಿದ ಓಬಳಾಪುರಂ ಮೈನಿಂಗ್ ಕಂಪನಿ ಮತ್ತು ಅನಂತಪುರಂ ಗಣಿ ಕಂಪನಿಗಳು ಅಕ್ರಮದಲ್ಲಿ ಭಾಗಿಯಾಗಿವೆ. ಒಎಂಸಿ ಕಂಪನಿಯಿಂದ ನಡೆದಿರುವ ಅಕ್ರಮವನ್ನು ಮೂರು ಭಾಗಗಳಾಗಿ ಗುರುತಿಸಲಾಗಿದೆ. ಮೊದಲ ಭಾಗದಲ್ಲಿ 25.98 ಹೆಕ್ಟೇರ್ ಪ್ರದೇಶದಲ್ಲಿ, ಎರಡನೇಯದಾಗಿ 39.59 ಹೆಕ್ಟೇರ್ ಪ್ರದೇಶದಲ್ಲಿ ಮತ್ತು ಮೂರನೇದಾಗಿ 68.52 ಹೆಕ್ಟೇರ್ ಪ್ರದೇಶದಲ್ಲಿ ಒತ್ತುವರಿ ನಡೆದು ಗಣಿ ಮಾಡಲಾಗಿದೆ ಎಂದು ಹೇಳಲಾಗಿದೆ. ಇದರಲ್ಲಿ ಅತಿ ಹೆಚ್ಚು ಅಕ್ರಮ ನಡೆದಿದೆ ಎಂದು ಸಿಬಿಐ ಈ ಹಿಂದೆಯೂ ಸಹ ಹೇಳಿತ್ತು. ಇದಲ್ಲದೇ, ಎಎಂಸಿ 6.50 ಹೆಕ್ಟೇರ್ ಪ್ರದೇಶವು ಒತ್ತುವರಿಯಾಗಿರುವ ಬಗ್ಗೆ ಮಾಹಿತಿ ಇದೆ. ಇಷ್ಟೇ ಅಲ್ಲದೇ, ಈ ಕಂಪನಿಗಳ ಜತೆಗೆ
ಬಳ್ಳಾರಿ ಐರನ್ ಓರ್ ಪ್ರೈವೇಟ್ ಲಿಮಿಟೆಡ್ (27.12 ಹೆಕ್ಟೇರ್) ಮತ್ತು ವೈ.ಮಹಾಬಲೇಶ್ವರಪ್ಪ ಅಂಡ್ ಸನ್ಸ್ (20.24 ಹೆಕ್ಟೇರ್) ಕಂಪನಿಗಳ ವಿರುದ್ಧವೂ ಒತ್ತುವರಿಯ ವರದಿಯಾಗಿದೆ. ಒಟ್ಟು ಆರು ಪ್ರಮುಖ ಕಂಪನಿಗಳ ಮೇಲೆ ಈಗ ಕಾನೂನು ಕುಣಿಕೆ ಬಿಗಿಯಾಗುತ್ತಿದೆ. ಜನವರಿಯಲ್ಲಿ ಸುಪ್ರೀಂಕೋರ್ಟ್‌ಗೆ ವರದಿ ಸಲ್ಲಿಕೆಯಾಗಬೇಕಿತ್ತು. ಆದರೆ, ಜನಾರ್ದನ ರೆಡ್ಡಿ ತಮ್ಮ ಪರವಾಗಿ ವಿವರಣೆ ನೀಡಲು ಮತ್ತು ದಾಖಲೆಗಳನ್ನು ಸಲ್ಲಿಸಲು ಸಮಯ ಕೇಳಿದ ಹಿನ್ನೆಲೆಯಲ್ಲಿ ಕಾಲಾವಕಾಶ ನೀಡಲಾಗಿತ್ತು. ಈ ಪ್ರಕ್ರಿಯೆ ಮುಕ್ತಾಯಗೊಂಡಿರುವ ಹಿನ್ನೆಲೆಯಲ್ಲಿ ಮಂಗಳವಾರ ವರದಿ ಸಲ್ಲಿಕೆಯಾಗಲಿದೆ ಎಂದು ಹೇಳಲಾಗಿದೆ.
ವರದಿ ನ್ಯಾಯಾಲಯದ ಕೈ ಸೇರಿದ ಬಳಿಕ ನ್ಯಾಯಾಲಯವು ಯಾವ ರೀತಿಯ ಕಠಿಣ ಕ್ರಮ ಕೈಗೊಳ್ಳಲಿದೆ ಎಂಬುದು ಕುತೂಹಲಕಾರಿಯಾಗಿದೆ.
ಈ ಕುರಿತು ದ ಫೆಡರಲ್ ಕರ್ನಾಟಕ ಜತೆಗೆ ಮಾತನಾಡಿದ ಗಣಿ ಮಾಲೀಕ ಮತ್ತು ರಾಜಕೀಯ ಮುಖಂಡ ಟಪಾಲ್ ಗಣೇಶ್, ಗಡಿ ಒತ್ತುವರಿ ಕೆಲಸವನ್ನು ಮಾಜಿ ಸಚಿವ ಜನಾರ್ದನ ರೆಡ್ಡಿ 2006ರಲ್ಲಿ ಆರಂಭಿಸಿದ್ದರು. ನಂತರ ರಾಜಕೀಯಕ್ಕೆ ಹೋಗಿ ಸಚಿವರಾಗಿದ್ದಲ್ಲದೆ ಬಳ್ಳಾರಿ ಉಸ್ತುವಾರಿ ಸಚಿವರಾದ ಬಳಿಕ ಸಂಪೂರ್ಣ ಹಿಡಿತ ತೆಗೆದುಕೊಂಡು ತಮ್ಮ ವಿರುದ್ಧ ಇರುವ ಆರೋಪಗಳನ್ನು ತೆಗೆದು ಹಾಕುವ ಪ್ರಯತ್ನ ಮಾಡಿದರು. ಗಡಿ ಒತ್ತುವರಿ ವಿರುದ್ಧ ದಶಕಗಳಿಂದ ಹೋರಾಟ ನಡೆಸುತ್ತಿದ್ದೇನೆ. ರಾಜಕೀಯ ಹಸ್ತಕ್ಷೇಪ ಇರುವ ಕಾರಣ ಜನಾರ್ದನ ರೆಡ್ಡಿ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುತ್ತಿಲ್ಲ. ಅಕ್ರಮ ಗಣಿಗಾರಿಕೆ, ಗಡಿ ಒತ್ತುವರಿ ಸೇರಿದಂತೆ ಎಲ್ಲಾ ವರದಿಗಳು ಸ್ಪಷ್ಟವಾಗಿ ಹೇಳಿವೆ. ಕಾನೂನು ಉಲ್ಲಂಘನೆ ಮಾಡಿರುವ ಬಗ್ಗೆ ಉಲ್ಲೇಖ ಇದೆ. ಆದರೂ ಯಾವುದೇ ಕ್ರಮವಾಗುತ್ತಿಲ್ಲ ಎಂದು ಆರೋಪಿಸಿದ್ದಾರೆ.
"ನ್ಯಾ. ಸುಧಾಂಶು ಧುಲಿಯಾ ವರದಿ ಬಳಿಕ ಯಾವುದಾದರೂ ಕಾನೂನು ಕ್ರಮವಾಗಲಿದೆಯೇ ನೋಡಬೇಕು. ಆಂಧ್ರಪ್ರದೇಶದಲ್ಲಿ ಗಣಿಗಾರಿಕೆ ಮಾಡುವ ಬಗ್ಗೆ ಪರವಾನಗಿ ತೆಗೆದುಕೊಂಡ ಜನಾರ್ದನ ರೆಡ್ಡಿ ಕರ್ನಾಟಕದಲ್ಲಿ ಗಣಿಗಾರಿಕೆ ಮಾಡಿರುವ ಬಗ್ಗೆ ವರದಿಯಲ್ಲಿ ತಿಳಿಸಲಾಗಿದೆ. ಈ ಬಗ್ಗೆ ಎಲ್ಲಾ ರೀತಿಯ ದಾಖಲೆಗಳು ಇವೆ. ವರದಿಯಲ್ಲಿಯೂ ಸಹ ಇದರ ಬಗ್ಗೆ ಉಲ್ಲೇಖವಾಗಿದೆ," ಎಂದು ಹೇಳಿದರು.
ಯಾವ ರೀತಿಯಲ್ಲಿ ಪರಿಣಾಮಗಳು ಬೀರಬಹುದು
ಜನಾರ್ದನ ರೆಡ್ಡಿ ತಮ್ಮ ಕೆಆರ್‌ಪಿಪಿ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ, ಮತ್ತೆ ಮುಖ್ಯವಾಹಿನಿಯ ರಾಜಕೀಯದಲ್ಲಿ ಸಕ್ರಿಯರಾಗಲು ಪ್ರಯತ್ನಿಸುತ್ತಿದ್ದಾರೆ. ಇಂತಹ ಸಂದರ್ಭದಲ್ಲಿ ಈ ವರದಿ ಹೊರಬರುವುದು ಅವರ ರಾಜಕೀಯ ಭವಿಷ್ಯಕ್ಕೆ ಹಿನ್ನಡೆಯಾಗಬಹುದು ಎಂದು ನಿರೀಕ್ಷಿಸಲಾಗಿದೆ. ಅಕ್ರಮವಾಗಿ ತೆಗೆದ ಅದಿರಿನ ಮೌಲ್ಯವನ್ನು ಮತ್ತು ಪರಿಸರ ಹಾನಿಯ ದಂಡವನ್ನು ಸರ್ಕಾರ ವಸೂಲಿ ಮಾಡುವ ಸಾಧ್ಯತೆ ಇದೆ. ಈಗಾಗಲೇ ಹಲವು ಪ್ರಕರಣಗಳಲ್ಲಿ ಜಾಮೀನಿನ ಮೇಲೆ ಹೊರಗಿರುವ ಜನಾರ್ದನ ರೆಡ್ಡಿಗೆ, ಈ ಹೊಸ ಸಮೀಕ್ಷೆ ವರದಿ ಮತ್ತಷ್ಟು ಕಾನೂನು ಸಂಕಷ್ಟ ತರಬಹುದು. ಸಿಬಿಐ ತನಿಖೆಗೆ ಇದು ಪೂರಕ ಸಾಕ್ಷಿಯಾಗಲಿದೆ. ಒಂದು ವೇಳೆ ಈ ಪ್ರಕರಣದಲ್ಲಿ ಗಂಭೀರ ಸ್ವರೂಪದ ಶಿಕ್ಷೆಯಾದರೆ, ಅದು ಅವರ ಶಾಸಕ ಸ್ಥಾನದ ಮೇಲೂ ಪರಿಣಾಮ ಬೀರಬಹುದು ಎಂದು ಹೇಳಲಾಗಿದೆ.
ಈ ಪ್ರಕರಣ ಕೇವಲ ಒಬ್ಬ ವ್ಯಕ್ತಿಯದ್ದಲ್ಲ, ಬದಲಿಗೆ ನೈಸರ್ಗಿಕ ಸಂಪನ್ಮೂಲಗಳ ಲೂಟಿ ಮತ್ತು ಎರಡು ರಾಜ್ಯಗಳ ನಡುವಿನ ಗಡಿ ರಕ್ಷಣೆಯ ಪ್ರಶ್ನೆಯಾಗಿದೆ. ಡ್ರೋನ್ ಸರ್ವೇಯಂತಹ ಅತ್ಯಾಧುನಿಕ ತಂತ್ರಜ್ಞಾನ ಬಳಸಿರುವುದರಿಂದ, ಈ ಬಾರಿ ತಾಂತ್ರಿಕ ತಪ್ಪುಗಳು ನಡೆದಿವೆ ಎಂದು ತಪ್ಪಿಸಿಕೊಳ್ಳುವುದು ಕಷ್ಟಕರವಾಗಿದೆ. ಬೆಟ್ಟಗುಡ್ಡಗಳನ್ನೇ ಅಗೆದು ಸಮತಟ್ಟು ಮಾಡಿರುವ ಗಣಿ ಮಾಫಿಯಾ, ಗಡಿಯನ್ನೇ ಬದಲಿಸಿರುವುದು ಕಾನೂನಿನ ದೃಷ್ಟಿಯಿಂದ ಗಂಭೀರ ಅಪರಾಧವಾಗಿದೆ ಎನ್ನಲಾಗಿದೆ.
ಪ್ರಕರಣ ಹಿನ್ನೆಲೆ
2007ರಿಂದ 2011ರ ಅವಧಿಯಲ್ಲಿ ಸರ್ಕಾರಕ್ಕೆ ಅಂದಾಜು 1.5 ಲಕ್ಷ ಕೋಟಿ ರೂ.ಗಳ ನಷ್ಟಕ್ಕೆ ಕಾರಣವಾದ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಶಾಸಕ ಜನಾರ್ದನ ರೆಡ್ಡಿ ಬೆಂಗಳೂರಿನ ಪರಪ್ಪನ ಅಗ್ರಹಾರ ಜೈಲಿನಲ್ಲಿ 2011-2015ರ ಅವಧಿಯಲ್ಲಿ ಜೈಲುವಾಸ ಅನುಭವಿಸಿದ್ದರು. ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ ದಾಖಲಾಗಿರುವ ವಿವಿಧ ಪ್ರಕರಣದಲ್ಲಿ ಆರೋಪಿಯಾಗಿದ್ದಾರೆ. ಈ ನಡುವೆ, ಓಬಳಾಪುರಂ ಮೈನಿಂಗ್ ಕಂಪನಿ ಅಕ್ರಮ ಗಣಿಗಾರಿಕೆ ಪ್ರಕರಣ ಸಂಬಂಧ 14 ವರ್ಷಗಳ ಸುದೀರ್ಘ ವಿಚಾರಣೆಯ ನಂತರ ಜನಾರ್ದನ ರೆಡ್ಡಿಗೆ ಹೈದರಾಬಾದ್ ಸಿಬಿಐ ವಿಶೇಷ ನ್ಯಾಯಾಲಯವು 2025ರ ಮೇ ತಿಂಗಳಲ್ಲಿ 7 ವರ್ಷಗಳ ಜೈಲು ಶಿಕ್ಷೆ ವಿಧಿಸಿತು. ಜನಾರ್ದನ ರೆಡ್ಡಿ 2001ರಲ್ಲಿ ಓಎಂಸಿ ಕಂಪನಿಯನ್ನು ಆರಂಭಿಸಿದ್ದರು. ಅದೇ ಕಂಪನಿಯ ವಿರುದ್ಧದ ತೀರ್ಪಿನಲ್ಲಿ ಶಿಕ್ಷೆ ಪ್ರಕಟವಾಗಿದ್ದು, ಇದಕ್ಕೆ ತಡೆಯಾಜ್ಞೆ ತಂದಿದ್ದಾರೆ. ಇದೇ ಪ್ರಕರಣ ಸಂಬಂಧ ನ್ಯಾ. ಸುಧಾಂಶು ಧುಲಿಯಾ ಸಮಿತಿ ವರದಿ ನೀಡಲಿದೆ ಎಂದು ಹೇಳಲಾಗಿದೆ.

