ಕರ್ನಾಟಕ-ಆಂಧ್ರ ಗಡಿ ಒತ್ತುವರಿ ಪ್ರಕರಣ: ವರದಿ ಸಲ್ಲಿಕೆಗೆ ಆರು ವಾರ ಕಾಲಾವಕಾಶ ವಿಸ್ತರಿಸಿದ ಸುಪ್ರೀಂ
x

ಕರ್ನಾಟಕ-ಆಂಧ್ರ ಗಡಿ ಒತ್ತುವರಿ ಪ್ರಕರಣ: ವರದಿ ಸಲ್ಲಿಕೆಗೆ ಆರು ವಾರ ಕಾಲಾವಕಾಶ ವಿಸ್ತರಿಸಿದ ಸುಪ್ರೀಂ

ಅರಣ್ಯ ಪ್ರದೇಶದಲ್ಲಿನ ಅನಧಿಕೃತ ಗಣಿಗಾರಿಕೆ ಪ್ರಮಾಣ ಪತ್ತೆ ಮಾಡಬೇಕು. ಡ್ರೋನ್ ಸಮೀಕ್ಷೆ, ಉಪಗ್ರಹ ಚಿತ್ರಗಳ ಮೂಲಕ ವಾಸ್ತವ ಸ್ಥಿತಿಯ ಬಗ್ಗೆ ವರದಿಯಲ್ಲಿರಬೇಕು ಎಂದು ಸುಪ್ರೀಂಕೋರ್ಟ್‌ ಹೇಳಿದೆ.


Click the Play button to hear this message in audio format

ಕರ್ನಾಟಕ ಮತ್ತು ಆಂಧ್ರಪ್ರದೇಶದ ಗಡಿಭಾಗದಲ್ಲಿನ ಅಕ್ರಮ ಗಣಿಗಾರಿಕೆ ಹಾಗೂ ಗಡಿ ಒತ್ತುವರಿ ಪ್ರಕರಣಕ್ಕೆ ಸಂಬಂಧಿಸಿದಂತೆ, ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದ ಸಮಿತಿಗೆ ಅಂತಿಮ ವರದಿ ಸಲ್ಲಿಸಲು ಸುಪ್ರೀಂ ಕೋರ್ಟ್ ಆರು ವಾರಗಳ ಕಾಲಾವಕಾಶ ವಿಸ್ತರಿಸಿದೆ.

ಸುಪ್ರೀಂ ಕೋರ್ಟ್‌ನಲ್ಲಿ ಮಂಗಳವಾರ ನಡೆದ ವಿಚಾರಣೆ ವೇಳೆ ಸಮಿತಿಯು, "ವರದಿ ಸಲ್ಲಿಕೆಗೆ ಹೆಚ್ಚಿನ ಕಾಲಾವಕಾಶದ ಅಗತ್ಯವಿದೆ. ಅಂತಿಮ ವರದಿ ಸಿದ್ಧಪಡಿಸುವ ಕಾರ್ಯ ಪ್ರಗತಿಯಲ್ಲಿದ್ದು, ಅದನ್ನು ಪೂರ್ಣಗೊಳಿಸಲು ಸಮಯ ನೀಡಬೇಕು" ಎಂದು ಮನವಿ ಮಾಡಿತು. ಸಮಿತಿಯ ಈ ಮನವಿಯನ್ನು ಪುರಸ್ಕರಿಸಿದ ನ್ಯಾಯಾಲಯವು ಗಡುವನ್ನು ವಿಸ್ತರಿಸಿ ಆದೇಶ ಹೊರಡಿಸಿತು.

ಸಮಗ್ರ ವರದಿಗೆ ಪೀಠದ ಸೂಚನೆ

ಮುಖ್ಯ ನ್ಯಾಯಮೂರ್ತಿ ಸೂರ್ಯ ಕಾಂತ್ ಮತ್ತು ನ್ಯಾಯಮೂರ್ತಿ ಜೋಯ್ಮಾಲ್ಯ ಬಾಗ್ಚಿ ಅವರಿದ್ದ ಪೀಠವು ವಿಚಾರಣೆ ವೇಳೆ ಮಹತ್ವದ ಸೂಚನೆಗಳನ್ನು ನೀಡಿದೆ. "ಕರ್ನಾಟಕ ಮತ್ತು ಆಂಧ್ರಪ್ರದೇಶದ ನಡುವಿನ ಭೌಗೋಳಿಕ ಗಡಿ ಹಾಗೂ ಗುತ್ತಿಗೆ ನೀಡಲಾದ ಪ್ರದೇಶಗಳ ನಿಖರ ಗಡಿಯನ್ನು ಸಮಿತಿಯು ನಿಗದಿಪಡಿಸಬೇಕು. ಗಣಿ ಕಂಪನಿಗಳು ತಮಗೆ ನೀಡಲಾದ ಗುತ್ತಿಗೆ ಪ್ರದೇಶದ ಹೊರಗೆ ಎಷ್ಟು ಭೂಮಿಯನ್ನು ಒತ್ತುವರಿ ಮಾಡಿಕೊಂಡಿವೆ ಎಂಬ ನಿಖರ ಮಾಹಿತಿಯು ವರದಿಯಲ್ಲಿರಬೇಕು. ಮೀಸಲು ಅರಣ್ಯ ಪ್ರದೇಶಗಳಲ್ಲಿ ನಡೆದ ಅನಧಿಕೃತ ಗಣಿಗಾರಿಕೆಯನ್ನು ಪತ್ತೆಹಚ್ಚಿ, ಡ್ರೋನ್ ಸಮೀಕ್ಷೆ ಮತ್ತು ಉಪಗ್ರಹ ಚಿತ್ರಗಳ ಮೂಲಕ ವಾಸ್ತವ ಸ್ಥಿತಿಯನ್ನು ನ್ಯಾಯಾಲಯಕ್ಕೆ ವಿವರಿಸಬೇಕು" ಎಂದು ತಿಳಿಸಿದೆ.

ತಾಂತ್ರಿಕ ವಿಶ್ಲೇಷಣೆಗೆ ಸಮಯದ ಅಗತ್ಯ

ವಿಚಾರಣೆ ಸಂದರ್ಭದಲ್ಲಿ ಸಮಿತಿಯು, ಈಗಾಗಲೇ ಗಡಿ ಭಾಗದಲ್ಲಿ ಸ್ಥಳ ಪರಿಶೀಲನೆ ಮತ್ತು ತಾಂತ್ರಿಕ ಅಳತೆಗಳನ್ನು ಪೂರ್ಣಗೊಳಿಸಲಾಗಿದೆ ಎಂದು ಮಾಹಿತಿ ನೀಡಿತು. ಆದರೆ, ಅಪಾರ ಪ್ರಮಾಣದ ದತ್ತಾಂಶಗಳನ್ನು (Data) ವಿಶ್ಲೇಷಿಸಿ ಅಂತಿಮ ವರದಿ ಸಿದ್ಧಪಡಿಸಲು ಇನ್ನಷ್ಟು ಸಮಯ ಬೇಕೆಂದು ಕೋರಿತು. ಆಂಧ್ರ ಸರ್ಕಾರದ ಪರ ವಾದ ಮಂಡಿಸಿದ ಹಿರಿಯ ವಕೀಲ ಸಿದ್ಧಾರ್ಥ್ ಲೂತ್ರಾ ಅವರು, ಅಕ್ರಮದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಸಮಿತಿಗೆ ಹೆಚ್ಚಿನ ಸಮಯದ ಅಗತ್ಯವಿದೆ ಎಂದರು.

ಒಎಂಸಿ (OMC) ಕಂಪನಿಯು ವಾದ ಮಂಡಿಸಿ, "ಈ ಹಿಂದೆ ಕೇವಲ ಗಡಿ ಗುರುತಿಸುವಿಕೆಗೆ ಮಾತ್ರ ಒಪ್ಪಿಗೆ ನೀಡಲಾಗಿತ್ತು. ಆದರೆ ಈಗ ಆಂಧ್ರಪ್ರದೇಶ ಸರ್ಕಾರವು ಮೀಸಲು ಅರಣ್ಯ ಪ್ರದೇಶಗಳನ್ನೂ ಸಮೀಕ್ಷೆಗೆ ಒಳಪಡಿಸುವ ಮೂಲಕ ತನ್ನ ವ್ಯಾಪ್ತಿ ಮೀರುತ್ತಿದೆ" ಎಂದು ಆಕ್ಷೇಪಿಸಿತು. ಆದರೆ, ನ್ಯಾಯಾಲಯವು ಈ ವಾದಕ್ಕೆ ಮನ್ನಣೆ ನೀಡದೆ ಸಮಗ್ರ ವರದಿಯ ಅಗತ್ಯತೆಯನ್ನು ಎತ್ತಿ ಹಿಡಿಯಿತು.

ಗಣಿ ಕಂಪನಿಗಳು ಗಡಿ ಮೀರಿ ಅಕ್ರಮವಾಗಿ ಒತ್ತುವರಿ ಮಾಡಿವೆ ಮತ್ತು ಅರಣ್ಯ ಪ್ರದೇಶಗಳನ್ನು ನಾಶಪಡಿಸಿವೆ ಎಂದು ಆಂಧ್ರಪ್ರದೇಶ ಸರ್ಕಾರವು ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು. ಈ ಹಿನ್ನೆಲೆಯಲ್ಲಿ ವಾಸ್ತವಾಂಶಗಳನ್ನು ಪತ್ತೆಹಚ್ಚಲು ಸುಪ್ರೀಂ ಕೋರ್ಟ್ 2025ರ ಸೆಪ್ಟೆಂಬರ್‌ನಲ್ಲಿ ನಿವೃತ್ತ ನ್ಯಾಯಮೂರ್ತಿ ಸುಧಾಂಶು ಧುಲಿಯಾ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿಯನ್ನು ರಚಿಸಿತ್ತು.

ಜನಾರ್ದನ ರೆಡ್ಡಿಗೆ ಎದುರಾಗಬಹುದಾದ ಸಂಕಷ್ಟಗಳು

ಈ ವರದಿ ಸಲ್ಲಿಕೆಯಾದ ನಂತರ ಶಾಸಕ ಜನಾರ್ದನ ರೆಡ್ಡಿ ಮತ್ತು ಅವರ ಕಂಪನಿಗಳಿಗೆ ಸಂಕಷ್ಟ ಎದುರಾಗುವ ಸಾಧ್ಯತೆ ಇದೆ. ಒಂದು ವೇಳೆ ಗಡಿ ಒತ್ತುವರಿ ಸಾಬೀತಾದರೆ, ಸಿಬಿಐ ತನಿಖೆ ನಡೆಸುತ್ತಿರುವ ಅಕ್ರಮ ಗಣಿಗಾರಿಕೆ ಪ್ರಕರಣಕ್ಕೆ ಇದು ಬಲವಾದ ಸಾಕ್ಷಿಯಾಗಲಿದೆ. ಜಾಮೀನಿನ ಮೇಲೆ ಹೊರಗಿರುವ ರೆಡ್ಡಿಯವರಿಗೆ ಇದು ಕಾನೂನುಬದ್ಧವಾಗಿ ಹಿನ್ನಡೆಯಾಗಬಹುದು. ಸುಪ್ರೀಂ ಕೋರ್ಟ್ ಈ ಹಿಂದೆ ಇಂತಹ ಪ್ರಕರಣಗಳಲ್ಲಿ ಮಾಡಿದಂತೆ, ಅಕ್ರಮವಾಗಿ ಗಣಿಗಾರಿಕೆ ಮಾಡಿದ ಅದಿರಿನ ಒಟ್ಟು ಮೌಲ್ಯದ ಮೇಲೆ ಭಾರಿ ದಂಡ ಮತ್ತು ಪರಿಸರ ಪುನಶ್ಚೇತನ ಶುಲ್ಕವನ್ನು ವಿಧಿಸಬಹುದು. ಇದು ನೂರಾರು ಕೋಟಿ ರೂಪಾಯಿಗಳ ಮೊತ್ತವಾಗುವ ಸಾಧ್ಯತೆಯಿದೆ. ಅಲ್ಲದೇ, ಇತ್ತೀಚೆಗಷ್ಟೇ ತಮ್ಮ ಪಕ್ಷವನ್ನು ಬಿಜೆಪಿಯಲ್ಲಿ ವಿಲೀನಗೊಳಿಸಿ ಸಕ್ರಿಯ ರಾಜಕೀಯಕ್ಕೆ ಮರಳಲು ಯತ್ನಿಸುತ್ತಿರುವ ರೆಡ್ಡಿಯವರಿಗೆ ಈ ವರದಿಯು ರಾಜಕೀಯವಾಗಿಯೂ ಪೆಟ್ಟು ನೀಡಬಹುದು ಎನ್ನಲಾಗಿದೆ.

ಟಪಾಲ್ ಗಣೇಶ್ ಹೋರಾಟ

ಈ ಪ್ರಕರಣದ ಹಿಂದೆ ಗಣಿ ಮಾಲೀಕ ಟಪಾಲ್ ಗಣೇಶ್ ಅವರ ಸುದೀರ್ಘ ಹೋರಾಟವಿದೆ. 2006ರಿಂದಲೂ ಗಡಿ ಒತ್ತುವರಿ ವಿರುದ್ಧ ಅವರು ಒಂಟಿ ಹೋರಾಟ ನಡೆಸುತ್ತಾ ಬಂದಿದ್ದಾರೆ. ಗಡಿಗಳನ್ನು ಬದಲಿಸಿ ಅಕ್ರಮ ಗಣಿಗಾರಿಕೆ ನಡೆಸಿರುವುದು ಸತ್ಯವಾಗಿದ್ದು, ನ್ಯಾ. ಸುಧಾಂಶು ಧುಲಿಯಾ ಸಮಿತಿಯ ವರದಿಯು ಸತ್ಯವನ್ನು ಹೊರಹಾಕಲಿದೆ ಎಂಬ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದ್ದಾರೆ.

Read More
Next Story