
Movie Review: ಧುರಂಧರ್: ದಿ ರಿವೆಂಜ್| ಸವಕಲು ಮಾದರಿ, ದಿಕ್ಕು ತಪ್ಪಿಸುವ ತಂತ್ರ, ಆದರೂ ಪ್ರೇಕ್ಷಕರ ಮೆಚ್ಚುಗೆಗೆ ಅರ್ಹ
ಧುರಂಧರ್: ದಿ ರಿವೆಂಜ್ ಪ್ರೇಕ್ಷಕರನ್ನು ಮೆಚ್ಚಿಸಲು ಶತ ಪ್ರಯತ್ನ ನಡೆಸುತ್ತದೆ... ಆದಿತ್ಯ ಧರ್ ನಿರ್ದೇಶನ ಕ್ಲೀಷೆಗಳಿಂದ ಕೂಡಿದ ಚಿತ್ರಕಥೆಯನ್ನು ಉಳಿಸಿಕೊಳ್ಳುವಲ್ಲಿ ಚಾಣಾಕ್ಷತನ ತೋರಿದೆ.
ಸಿನೆಮಾ ಎನ್ನುವುದು ನಿಜಕ್ಕೂ ಅದೃಷ್ಟವಂತ ಕಲಾಪ್ರಕಾರವೇ? ಎಂಬ ಪ್ರಶ್ನೆಯನ್ನು ಪುಷ್ಟೀಕರಿಸುವ ರೂಪದಲ್ಲಿ ʼಧುರಂಧರ್ʼ ಚಿತ್ರದ ಅನೇಕ ಸಂಗತಿಗಳು ನಮ್ಮ ಕಣ್ಣ ಮುಂದೆ ಅನಾವರಣಗೊಳ್ಳುತ್ತದೆ.
ʼಧುರಂಧರ್ʼ ಚಿತ್ರದ ಸಂಕಲನಕಾರ ಶಿವಕುಮಾರ್ ವಿ. ಪಣಿಕ್ಕರ್ ಮತ್ತು ಸಂಗೀತ ನಿರ್ದೇಶಕ ಶಾಶ್ವತ್ ಸಚದೇವ್ ಅವರಿಗೆ ಆದಿತ್ಯ ಧರ್ ತುಂಬು ಹೃದಯದ ಧನ್ಯವಾದಗಳನ್ನು ಸಮರ್ಪಿಸುತ್ತಿರಬಹುದು. ಯಾಕೆಂದರೆ ಸುಮಾರು ಎಂಟು ಗಂಟೆಗಳ ಕಾಲ ಸುದೀರ್ಘವಾಗಿ ನಡೆಯುವ (ಎರಡು ಭಾಗಗಳು ಸೇರಿ) ಇಂತಹ ಅತಿಯಾದ ರಕ್ತಪಾತದ ಕತೆಯನ್ನು ಒಂದು ವಿಶೇಷ ಅನುಭವವನ್ನಾಗಿ ಮಾಡುವಲ್ಲಿ ಇವರಿಬ್ಬರು ಯಶಸ್ವಿಯಾಗಿದ್ದಾರೆ ಎಂದು ಬರಹಗಾರ-ನಿರ್ದೇಶಕ ಆದಿತ್ಯ ಧರ್ ಅವರು ರಹಸ್ಯವಾಗಿ ಒಪ್ಪಿಕೊಳ್ಳುತ್ತಿರಬಹುದು.
ನಿಜ, ಏಕತಾನತೆಯಿಂದ ಕೂಡಿದ ಕತೆಯನ್ನು ಸಾಮಾನ್ಯ ಪ್ರೇಕ್ಷಕರಿಗೂ ಆಸಕ್ತಿ ಹುಟ್ಟಿಸುವಂತೆ ಮಾಡುವ ಪಣಿಕ್ಕರ್ ಅವರ ಅವಿರತ ಶ್ರಮ ಮತ್ತು ಅಗತ್ಯ ಇಲ್ಲದೇ ಇದ್ದರೂ ಪ್ರತಿಯೊಂದು ತಿರುವನ್ನೂ ವ್ಯಂಗ್ಯದ ಮೂಲಕ ವೈಭವೀಕರಿಸುವ ಸಚದೇವ್ ಅವರ ಪ್ರಯತ್ನ ಇಲ್ಲದೇ ಹೋಗಿದ್ದರೆ ʼಧುರಂಧರ್ʼನ ಎರಡೂ ಭಾಗಗಳು ತನ್ನ ದೊಡ್ಡ ಮಟ್ಟದ ನಿರೀಕ್ಷೆಗಳನ್ನು ಉಳಿಸಿಕೊಳ್ಳುವುದು ಸಾಧ್ಯವಾಗದ ಮಾತಾಗಿ ಪರಿಣಮಿಸುತ್ತಿತ್ತು ಎಂಬುದು ಆದಿತ್ಯ ಧರ್ ಅವರಿಗೆ ತಿಳಿದೇ ಇದೆ. ಈ ಚಿತ್ರದ ತಾಂತ್ರಿಕ ನೈಪುಣ್ಯಕ್ಕಾಗಿ ಇದರ ಸಮಸ್ಯಾತ್ಮಕ ರಾಜಕೀಯವನ್ನು ಉದ್ದೇಶಪೂರ್ವಕವಾಗಿಯೇ ಕಡೆಗಣಿಸುತ್ತಿದ್ದಾರೆ. ಇವೆಲ್ಲ ಅಂಶಗಳು ಸಿನೆಮಾ ನಿಜಕ್ಕೂ ಅದೃಷ್ಟವಂತ ಕಲಾಪ್ರಕಾರ ಎಂಬುದಕ್ಕೆ ಸಾಕ್ಷಿ ಒದಗಿಸುತ್ತವೆ.
ಹಾಗಿದ್ದಲ್ಲಿ ಈ ಎಲ್ಲ ಬಾಹ್ಯ ಅಲಂಕಾರಗಳು ಅತಿಯಾದ ಜಾಣ್ಮೆಯನ್ನು ಪ್ರದರ್ಶಿಸಲು ಹೋಗಿ ಎಡವಿ ಬಿದ್ದಿರುವ ಕತೆ ಹೇಳುವ ಶೈಲಿಯನ್ನೇ ಸರಿಪಡಿಸಬಲ್ಲುದೇ? ಭರೋಬ್ಬರಿ 229 ನಿಮಿಷಗಳ ಸುದೀರ್ಘ ಅವಧಿಯನ್ನು ತಮ್ಮ ಮನಸ್ಸಿಗೆ ತೋಚಿದಂತೆ ಆರು ಅಧ್ಯಾಯಗಳಾಗಿ ವಿಂಗಡಿಸುವ ಆಯ್ಕೆಯಿಂದ ಚಿತ್ರದ ಮೂಲ ವಿಷಯಗಳಿಗೆ ಯಾವುದಾದರೂ ಘನತೆ ತುಂಬುವುದೇ? ಕೇವಲ ಭಯೋತ್ಪಾದನೆಯ ಪ್ರತಿಪಾದಕರನ್ನು ಮಾತ್ರ ಗುರಿಯಾಗಿ ಮಾಡಿಕೊಂಡು ಯಾವುದೇ ದೇಶ ಅಥವಾ ಸಮುದಾಯವನ್ನು ಸಾಮಾನ್ಯ ದೃಷ್ಟಿಯಲ್ಲಿ ನೋಡುವುದಿಲ್ಲ ಎಂದು ಭರವಸೆ ನೀಡುವ ಇಂತಹ ಸೇಡಿನ ಕಥೆಯಲ್ಲಿ ಇನ್ನೂ ಮಾನವೀಯತೆ ಉಳಿದಿರಲು ಸಾಧ್ಯವೇ?
ʼಧುರಂಧರ್ʼ ಚಿತ್ರದಿಂದ ಇಂತಹ ಪ್ರಶ್ನೆಗಳಿಗೆ ಉತ್ತರಗಳನ್ನು ನೀರೀಕ್ಷಿಸುವುದು ತಪ್ಪು ಎಂದು ಅನ್ನಿಸಬಹುದು. ಒಟ್ಟಾರೆ ಪರಿಕಲ್ಪನೆಯ ಹಿನ್ನೆಲೆಯಲ್ಲಿ ಗಮನಿಸಿದಾಗ ಹಾಗೆ ಅನಿಸುವುದು ಸಹಜ. ಆದರೆ ಯಾವುದೇ ಒಂದು ವಿಷಯವಸ್ತು ತನ್ನದೇ ಆದ ತಾತ್ವಿಕ ಗಟ್ಟಿತನವನ್ನು ಹೊಂದಿರಲಿ ಎಂದು ಅಪೇಕ್ಷಿಸುವುದು ತರ್ಕಬದ್ಧವೇ ಆಗಿದೆ. ಅದರಲ್ಲೂ ವಿಶೇಷವಾಗಿ ಆದಿತ್ಯ ಧರ್ ಸೃಷ್ಟಿಸಿರುವ ಈ ಕಾಲ್ಪನಿಕ ಹಾಗೂ ನೈಜತೆಗಳನ್ನು ಸಮಪಾಕ ಮಾಡಿದ ಲೋಕವು ಅಂತಹ ಅನೇಕ ಸಾಧ್ಯತೆಗಳನ್ನು ನೀಡುವಾಗ ಇದು ಸಹಜವೇ ಆಗಿದೆ.
ಅವರ ಬಳಿ ರಾಷ್ಟ್ರದ ಕರ್ತವ್ಯದ ಹೊಣೆಯನ್ನು ಹೊತ್ತಿರುವ ಹಾಗೂ ವೈಯಕ್ತಿಕ ಭೂತಕಾಲದ ನೆನಪುಗಳಿಂದ ಮಾನಸಿಕವಾಗಿ ಜರ್ಝರಿತವಾಗಿರುವ ಒಬ್ಬ ನಾಯಕನಿದ್ದಾನೆ. ಅವರ ಮುಂದೆ ಗಡಿಯಾಚೆಗೆ ಇರುವ ಗುಪ್ತಚರ ಲೋಕವಿದೆ. ಅಲ್ಲಿ ಸಂವಹನದ ಕೊರತೆಯ ಕಾರಣದಿಂದ ಯಾವುದೇ ಉತ್ತರಗಳು ಸುಲಭವಾಗಿ ಸಿಗುವುದಿಲ್ಲ. ಪ್ರೀತಿ, ನಷ್ಟ, ಕ್ರೋಧ, ನಂಬಿಕೆ ಮತ್ತು ನಿಷ್ಠೆಯಂತಹ ಹತ್ತು ಹಲವು ಭಾವನೆಗಳನ್ನು ಬಳಸಿಕೊಳ್ಳುವ ಅವಕಾಶ ಅವರ ಮುಂದೆ ಇದೆ. ಧರ್ ಮಾಡಬೇಕಿರುವುದು ಇಷ್ಟೇ-ಕೇವಲ ಹಿಂಸೆ ಹಾಗೂ ಗುಂಡಿನ ಚಕಮಕಿಗೆ ಆದ್ಯತೆ ನೀಡದಂತೆ ತಡೆಯುವುದು.
ಇವೆಲ್ಲಕ್ಕೆ ಬದಲಾಗಿ, ʼಧುರಂಧರ್ʼ ಸರಣಿಯ ಎರಡನೇ ಭಾಗವಾದ ʼಧುರಂಧರ್: ದಿ ರಿವೇಂಜ್ʼ ಚಿತ್ರವು ತುಷ್ಟೀಕರಿಸುವ ಒಂದು ಸುದೀರ್ಘ ಮತ್ತು ಅಸಹ್ಯಕರ ವರದಿಯನ್ನು ಜಗ್ಗಾಡಿದಂತೆ ಭಾಸವಾಗುತ್ತದೆ. ಚಿತ್ರ ಆರಂಭವಾಗುವುದೇ ಅಪಹರಣಕ್ಕೆ ಒಳಗಾಗಿ ಕ್ರೂರವಾಗಿ ಅತ್ಯಾಚಾರಕ್ಕೆ ಒಳಗಾದ ತನ್ನ ತಂಗಿಗಾಗಿ ಹುಡುಕಾಡುವ ಹತಾಶ ಪಾತ್ರದ ದೃಶ್ಯದ ಮೂಲಕ. ಅಂತಃಕರಣದಲ್ಲಿ ಒರತೆಯ ಚುಂಗುಗಳನ್ನು ಎಬ್ಬಿಸುವ ಮತ್ತು ಕರುಣಾಜನಕ ಕ್ಷಣಕ್ಕೆ ʼಅರಿ ಅರಿ ತೇರಿ ಮೇರಿ ಎಕ್ ಜಿಂದ್ರಿʼ ಎಂಬ ಅಬ್ಬರದ ಹಾಡಿನ ಹಿನ್ನೆಲೆಯನ್ನು ಒದಗಿಸಲಾಗಿದೆ.
ಮತ್ತೊಂದು ದೃಶ್ಯದಲ್ಲಿ ಪಾಕಿಸ್ತಾನದ ಮಾಜಿ ಸೇನಾ ಅಧಿಕಾರಿ ಬೋಲ್ಡ್ ಆಗಿ ಹೇಳುವ ಮಾತಿದೆ; “ಭಾರತದ ವಿಶ್ವವಿದ್ಯಾಲಯಗಳಿಗೆ ಮತ್ತು ಇತರ ವೇದಿಕೆಗಳಿಗೆ ಅಪಾರ ಹಣವನ್ನು ಸುರಿದರೂ 2014ರಲ್ಲಿ ತಪ್ಪು ವ್ಯಕ್ತಿಯೇ ಪ್ರಧಾನಿಯಾದರು.” 2016ರಲ್ಲಿ ಭಾರತದಲ್ಲಿ ನಡೆದ ಒಂದು ನೈಜ ಘಟನೆಯನ್ನು ʼಗ್ರೀನ್ ಲೀಫ್ʼ ಎಂಬ ವಿಶೇಷ ಕಾರ್ಯಾಚಣೆಯ ಬೆಂಬಲದೊಂದಿಗೆ ತೋರಿಸಲಾಗಿದೆ. ಅದು ಅಂದಿನ ಸರ್ಕಾರ ನಡೆಸಿದ ಒಂದು ಮಾಸ್ಟರ್ ಸ್ಟ್ರೋಕ್ ಎಂಬುದನ್ನು ಬಿಂಬಿಸುವ ಉದ್ದೇಶದಿಂದಲೇ ಹೀಗೆ ಮಾಡಲಾಗಿದೆ ಎಂಬುದು ಸ್ಪಷ್ಟ.
ಇದ್ದಕ್ಕಿದ್ದಂತೆ ಖಾಲಿಸ್ತಾನಿ ಉಗ್ರರು ಕತೆಯೊಳಗೆ ಪ್ರವೇಶ ಮಾಡುತ್ತಾರೆ. ಪಂಜಾಬಿನ ಮಾದಕದ್ರವ್ಯ ವ್ಯಸನದ ಸಮಸ್ಯೆಯನ್ನು ಬಿಂಬಿಸುವುದು ಇದರ ಮುಖ್ಯ ಉದ್ದೇಶ. ಜೊತೆಗೆ ಅಯೋಧ್ಯೆ ಮಂದಿರ ವಿಷಯವನ್ನೂ ತುರುಕಲಾಗುತ್ತದೆ ಮತ್ತು ಇದೇ ಮಾದರಿಯಲ್ಲಿ ಭಾರತದ ಬಹುದೊಡ್ಡ ಶತ್ರು ʼಬಡೆ ಸಾಹೆಬ್ʼ ಎಂಬ ಪಾತ್ರವನ್ನು ವಿಚಿತ್ರ ರೀತಿಯಲ್ಲಿ ಪರಿಚಯಿಸಲಾಗುತ್ತದೆ. ಹಿಂಸಾಚಾರವಂತೂ ಅಸಹ್ಯ ಹುಟ್ಟಿಸುವ ಮಟ್ಟಕ್ಕೆ ಬೆಳೆಯುತ್ತದೆ. ಚಿತ್ರದ ಸಂಭಾಷಣೆಗಳೂ ಸೂಕ್ಷ್ಮತೆ ಕಳೆದುಕೊಳ್ಳುತ್ತದೆ. ಅದು, “ಘುಸ್ ಕೆ ಜವಾಬ್ʼ ಎಂಬ ಧಾಟಿಯಲ್ಲಿ ನೇರವಾಗಿ ಪಟ್ಟು ನೀಡುತ್ತದೆ. ಕೇವಲ ಬಹುಸಂಖ್ಯಾತ ರಾಜಕೀಯ ಪಕ್ಷಗಳನ್ನು ಮಾತ್ರವಲ್ಲದೆ ಚಿತ್ರದ ಪ್ರೇಕ್ಷಕರ ಬಹುಸಂಖ್ಯಾತ ಅಭಿಪ್ರಾಯವನ್ನು ಕೂಡ ಓಲೈಸಲು ಎಲ್ಲ ರೀತಿಯ ಅತಿಶಯೋಕ್ತಿಗಳನ್ನೂ ಇಲ್ಲಿ ಬಳಸಿಕೊಳ್ಳಲು ಹಿಂಜರಿದಿಲ್ಲ.
ಬಾಲಿಶ-ಅವಾಸ್ತವಿಕ
ವಾಸ್ತವದಲ್ಲಿ ನಿರ್ದೇಶಕ ಧರ್ ಅವರು ಆಸಕ್ತಿದಾಯಕ ಪಾತ್ರಗಳನ್ನು ಸೃಷ್ಟಿಸುವುದನ್ನೇ ಮರೆತುಬಿಟ್ಟಿದ್ದಾರೆ ಎಂಬುದೇ ಢಾಳಾಗಿ ಕಾಣುವ ಹಾಗೆ ತಮ್ಮದೇ ಸ್ವಯಂಘೋಷಿತ ಗುರಿಗಳಲ್ಲೇ ಮುಳುಗಿ ಹೋಗಿರುವುದು ಕಾಣುತ್ತದೆ. ವಿಶೇಷವಾಗಿ ಯುದ್ಧಕೋರ ಹಮ್ಜಾ ಮತ್ತು ವಿನಮ್ರ ಸೇನಾಕಾಂಕ್ಷಿ ಜಸ್ಕೀರತ್ ಸಿಂಗ್ ರಂಗಿ ಎಂಬೆರಡು ಪಾತ್ರಗಳಲ್ಲಿ ರಣವೀರ್ ಸಿಂಗ್ ಅವರ ಅಪಾರ ಬದ್ಧತೆಯ ನಟನೆಗೆ ಪೂರಕವಾಗಿ, ಗಟ್ಟಿಕಾಳುಗಳಂತೆ ನಿಲ್ಲುವ ಪಾತ್ರಗಳೇ ಇಲ್ಲದಂತಾಗಿದೆ.
ಸಂಜಯ್ ದತ್ ಅವರ ಎಸ್.ಪಿ. ಚೌಧರಿ ಅಸ್ಲಾಂ ಪಾತ್ರವು ಏಕತಾನತೆ, ಕ್ರೂರತೆಯಲ್ಲೇ ಮುಳುಗಿಹೋಗುತ್ತದೆ. ಇನ್ನು ಅರ್ಜುನ್ ರಾಂಪಾಲ್ ಅವರು ಐಎಸ್ಐ ಅಧಿಕಾರಿ ಇಕ್ಬಾಲ್ ಪಾತ್ರದ ಮೂಲಕ ಭಯ ಹುಟ್ಟಿಸುವ ಯಾವ ಅವಕಾಶವನ್ನೂ ಬಳಸಿಕೊಳ್ಳದೇ ಎಡವಿದ್ದಾರೆ.
ಈ ಇಕ್ಬಾಲ್ ಪಾತ್ರಕ್ಕೆ ಚಕ್ರಕುರ್ಚಿಯಲ್ಲಿರುವ ತಂದೆಯ (ಸುರಿಂದರ್ ವಿಕ್ಕಿ) ಒಂದು ಉಪಕಥೆ ಇದೆ. ಅದರಲ್ಲಿ ಈವರೆಗೂ ಭಾರತವನ್ನು ಧ್ವಂಸ ಮಾಡದೇ ಇದ್ದುದಕ್ಕಾಗಿ ತಂದೆಯು ತನ್ನ ಮಗನನ್ನು ತೀವ್ರವಾಗಿ ತರಾಟೆಗೆ ತೆಗೆದುಕೊಳ್ಳುತ್ತಾನೆ, ಹಿಯಾಳಿಸುತ್ತಾನೆ. ಈ ಸಂಭಾಷಣೆಗಳ ಉದ್ದೇಶವಾದರೂ ಏನು? ಪ್ರೇಕ್ಷಕರನ್ನು ಬೆಚ್ಚಿಬೀಳಿಸಬೇಕು ಎಂಬುದು. ಆದರೆ ಆ ಬೈಗುಳದ ಮಾತುಗಳು ತೀರಾ ಬಾಲಿಶವಾಗಿ ಮತ್ತು ಅಸಹಜವಾಗಿ ಕಾಣಿಸುತ್ತದೆ. ಕಟ್ಟಕಡೆಯಲ್ಲಿ ಯಾವುದೇ ಪಾಕಿಸ್ತಾನಿ ವ್ಯಕ್ತಿ ಹಮ್ಜಾಗೆ ತಕ್ಕುನಾದ ಸವಾಲು ನೀಡಲು ಸಾಧ್ಯವಾಗಲಿಲ್ಲ ಎಂಬುದು ಇಡೀ ಚಿತ್ರ ತಂಡಕ್ಕೆ ಒಂದು ಸಣ್ಣ ಗೆಲುವಿನಂತೆ ಅನ್ನಿಸಬಹುದು.
ಒಂದು ಹಂತದಲ್ಲಿ ಆರ್.ಮಾಧವನ್ ಅವರ ಅಜಯ್ ಸನ್ಯಾಲ್ (ಭಾರತೀಯ ಗುಪ್ತಚರ ಮುಖ್ಯಸ್ಥ) ಜಸ್ಕಿರತ್‌ನನ್ನು ಅಂಡರ್‌ಕವರ್ ಕಾರ್ಯಾಚರಣೆಗೆ ಕಳುಹಿಸಲು ಒಪ್ಪಿಸುವ ಸಂದರ್ಭ ಬಂದಾಗ ʼಹಮ್ ಮರ್ದ್ ಹೇ” (ನಾವು ಪುರುಷರು) ಎಂಬ ಸಮರ್ಥನೆಯನ್ನು ಬಳಸುತ್ತಾರೆ. ತನ್ನ ಕೊನೆಯ ಉಸಿರು ಇರುವ ತನಕವೂ ಹೋರಾಡುವುದು ಒಬ್ಬ ಪುರುಷನ ಕರ್ತವ್ಯ ಎಂದೂ ಮುಂದುವರಿದು ಹೇಳುತ್ತಾರೆ ಸನ್ಯಾಲ್.
ಬಹುಷಃ ಇದೇ ದೃಷ್ಟಿಕೋನದಿಂದ ಈ ಚಿತ್ರದ ಕತೆಯಲ್ಲಿ ಎರಡಕ್ಕಿಂತ ಹೆಚ್ಚು ಮಹಿಳಾ ಪಾತ್ರಗಳನ್ನು ಹೊಂದಿಲ್ಲ ಅನಿಸುತ್ತದೆ. ಚಿತ್ರದಲ್ಲಿರುವ ಸಾರಾ ಅರ್ಜುನ್ ಅವರ ಯಾಲಿನಾ ಪಾತ್ರ ಭಾವನಾತ್ಮಕವಾಗಿ ಸಶಕ್ತವಾಗಿದ್ದರೂ ಆಕೆಗೆ ಕಥೆಯಲ್ಲಿ ಪ್ರಾಮುಖ್ಯತೆ ಏನೂ ಇಲ್ಲ. ಇನ್ನೂ ಒಂದು ಸಂಗತಿ ಎಂದರೆ, ವಂಚನೆಯ ಅಡಿಯಲ್ಲಿ ಸಂಪೂರ್ಣ ಹೂತುಹೋದ ಮದುವೆಯಂತಹ ಸಂಕೀರ್ಣವಾದ ಎಳೆಯನ್ನು ಅತ್ಯಂತ ಸುಲಭವಾಗಿ ಮತ್ತು ತಮಗೆ ಅನುಕೂಲವಾಗುವ ರೀತಿಯಲ್ಲಿ ಬಗೆಹರಿಸಲಾಗಿದೆ.
ಆಕ್ಷನ್ ಕೋರಿಯೋಗ್ರಫಿ ಮತ್ತು ಕ್ಯಾಮೆರಾ ಕೈಚಳ
ಧುರಂಧರ್: ದಿ ರಿವೆಂಜ್' ಉದ್ದೇಶಪೂರ್ವಕವಾಗಿಯೇ ಪ್ರೇಕ್ಷಕರನ್ನು ಮೆಚ್ಚಿಸಲು ಪ್ರಯತ್ನಿಸುತ್ತದೆ ಮತ್ತು ಆದಿತ್ಯ ಧರ್ ಅವರ ನಿರ್ದೇಶನವು ಕ್ಲೀಷೆಗಳಿಂದ ಕೂಡಿದ ಚಿತ್ರಕಥೆಯನ್ನು ಭಾಗಶಃ ಉಳಿಸಿಕೊಳ್ಳುವಲ್ಲಿ ಚಾಣಾಕ್ಷತನ ತೋರಿದೆ. ಮೊದಲ ಭಾಗದಂತೆಯೇ, ಈ ಚಿತ್ರದಲ್ಲಿಯೂ ಆಕ್ಷನ್ ಕೋರಿಯೋಗ್ರಫಿ ಮತ್ತು ಕ್ಯಾಮೆರಾ ಕೆಲಸದಿಂದಾಗಿ ಒಂದು ಲಯ ದಕ್ಕಿದೆ.
ಆದರೂ, ಚಿತ್ರದಲ್ಲಿ ಪ್ರೌಢಿಮೆ ಮತ್ತು ಸ್ಪಷ್ಟವಾದ ಉದ್ದೇಶದ ಕೊರತೆಯಿದೆ. ಆರಂಭದಿಂದಲೇ ಈ ಸಿನಿಮಾ ತನ್ನ ಸಿದ್ಧಾಂತ ಮತ್ತು ದೃಢತೆಯನ್ನು ಬಿಟ್ಟುಕೊಟ್ಟು, ಪ್ರೇಕ್ಷಕರ ಬೇಡಿಕೆಗಳಿಗೆ ತಕ್ಕ ಸರಕು ಸರಬರಾಜು ಮಾಡುವ ಏಜೆಂಟ್ನಂತೆ ವರ್ತಿಸುತ್ತದೆ; ನಿಮಗೆ ಪಾತ್ರಗಳ ವ್ಯಕ್ತಿತ್ವಗಳು ಹಠಾತ್ತಾಗಿ ಬದಲಾಗಬೇಕೇ? ಇಗೋ ಇಲ್ಲಿದೆ. ಕಳೆದ ಬಾರಿ ನಾವು ನಿಮಗೆ 'ರಂಭಾ ಹೋ' ನೀಡಿದ್ದೆವು, ಈ ಬಾರಿ 'ತಮ್ಮಾ ತಮ್ಮಾ ಲೋಗೇ' (ಅಥವಾ ರಾಸ್ಪುಟಿನ್ ಅಥವಾ ತಿರ್ಚಿ ಟೋಪೀವಾಲೆ) ಬೇಕೇ? ಪ್ರತಿಯೊಬ್ಬರೂ ಸಂಭ್ರಮಿಸಲಿ ಎಂಬ ಕಾರಣಕ್ಕಾಗಿ ನಾಯಕನು ಮಾರಣಾಂತಿಕ ಸಂಕಷ್ಟದಿಂದ ಅತ್ಯಂತ ಸುಲಭವಾಗಿ ಹೊರಬರುವಂತೆ ಮಾಡಿದರೆ ಹೇಗಿರುತ್ತದೆ? ಇವೆಲ್ಲವೂ ಸರಕುಗಳನ್ನು ಪೂರೈಸುವ ಕೆಲಸ.
ನೈಜ ಬದುಕಿನ ವ್ಯಕ್ತಿಗಳ ಕಾಲ್ಪನಿಕ ಆವೃತ್ತಿಗಳು ನಮಗೆ ತೃಪ್ತಿದಾಯಕವಾದ ರೀತಿಯಲ್ಲಿ ನ್ಯಾಯ ಒದಗಿಸುವುದನ್ನು ನೋಡಬೇಕು ಎಂಬುದು ನಮ್ಮ ಆಸೆ. ಅದಕ್ಕೆ ತುಪ್ಪ ಸುರಿಯುವ ರೀತಿಯಲ್ಲಿ ಈ ಕ್ಷಣಿಕ ಸುಖಗಳ ಮಿಶ್ರಣ ಮಾಡಿ ಉಣಬಡಿಸುವ ಪ್ರಯತ್ನವೇ ಆದಿತ್ಯ ಧರ್ ಅವರ ಈ ಚಿತ್ರ.
ಇದೇ ಅವರ ಶೈಲಿ ಎಂದು ಹೇಳಬಹುದು. ಅವರ ಚೊಚ್ಚಲ ಸಿನೆಮಾ ʼಉರಿ:ದಿ ಸರ್ಜಿಕಲ್ ಸ್ಟ್ರೈಕ್ʼ (ಈ ಹೊಸ ಚಿತ್ರದಲ್ಲೂ ಅದರ ಉಲ್ಲೇಖವಿದೆ) ಇದೇ ಹಾದಿಯಲ್ಲಿ ಸಾಗಿತ್ತು. ʼಧುರಂಧರ್ʼಗೆ ದೊಡ್ಡ ಕ್ಯಾನ್ವಾಸ್ ಇತ್ತಾದರೂ ಅದಕ್ಕಿಂತ ಭಿನ್ನವಾಗಿಯೇನೂ ಕಾಣುವುದಿಲ್ಲ. ಆದರೆ ಇದರಲ್ಲಿ ಧರ್ ಶೈಲಿ ಎಷ್ಟು ಭಾಗ ಮತ್ತು ತಂತ್ರಗಾರಿಕೆ ಮೂಲಕ ದಿಕ್ಕು ತಪ್ಪಿಸುವುದು ಎಷ್ಟು ಭಾಗ ಎಂದು ಕೇಳಿದರೆ, ಕ್ಷಣಿಕ ತೃಪ್ತಿಯೇ ಶಾಶ್ವತ ಪರಿಹಾರ ಎಂಬಂತೆ ಬಿಂಬಿಸುವುದಷ್ಟೇ ಇದರ ಉದ್ದೇಶ ಎಂದು ಉತ್ತರಿಸಬೇಕಾಗುತ್ತದೆ.
ಇನ್ನೂ ಒಂದು ಅರ್ಥದಲ್ಲಿ ಹೇಳುವುದಾದರೆ ಇಂತಹ ಸಿನೆಮಾಗಳನ್ನು ನಿಜವಾದ ಪ್ರಭಾವಶಾಲಿ ವ್ಯಕ್ತಿಗಳು ಮಾಡಿದರೆ ನಮ್ಮ ಪ್ರಶ್ನೆಗಳಿಗೆ ಪರ್ಯಾಯ ಉತ್ತರ ಸಿಗಬಲ್ಲುದೇ? ಕಲೆಯನ್ನು ರಾಜಕೀಯದಿಂದ ಪ್ರತ್ಯೇಕಗೊಳಿಸುವ ನೆಪವಾಗಲಿ ಅಥವಾ ಇಂತಹ ಹಗಲುಗನಸಿನ ಆವೃತ್ತಿಯನ್ನು ಒಂದು ಪ್ರತ್ಯೇಕ ಪ್ರಕಾರವೆಂದು (ಉದಾ: ಕ್ವೆಂಟಿನ್ ಟ್ಯಾರಂಟಿನೊ ಅವರ ʼಇಂಗ್ಲೋರಿಯಸ್ ಬಾಸ್ಟರ್ಡ್ಸ್ ) ಪರಿಗಣಿಸುವುದಾಗಲಿ ಇದಕ್ಕೆ ಅನ್ವಯವಾಗುವುದಿಲ್ಲ. ಯಾಕೆಂದರೆ ಈ ಸಿನೆಮಾ ಇತರ ಕೆಲವೇ ಕೆಲವು ಸಿನೆಮಾಗಳಿಗೆ ಸಿಗುವಂತಹ ಭವ್ಯವಾದ ರಾಜಕೀಯ ಮತ್ತು ಸೈದ್ಧಾಂತಿಕ ಪ್ರಾಯೋಜಕತ್ವವನ್ನು ಪಡೆದುಕೊಂಡಿರುವ ಗಮನಾರ್ಹ.

