ಧುರಂಧರ್ 2| ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ, ವಿಮರ್ಶೆಯಲ್ಲಿ ಅಪಸ್ವರ - ಚಿತ್ರದ ವಿರುದ್ಧ ‘ಪ್ರೊಪಗಾಂಡಾ’ ಆರೋಪ
x

ರಣವೀರ್ ಸಿಂಗ್ ಅಭಿನಯದ 'ಧುರಂಧರ್: ದಿ ರಿವೇಂಜ್' ಸಿನಿಮಾ ಬಾಕ್ಸ್ ಆಫೀಸ್‌ನಲ್ಲಿ ಅಬ್ಬರಿಸುತ್ತಿದ್ದರೂ, ಪ್ರೊಪಗಾಂಡಾ ಆರೋಪಕ್ಕೆ ಗುರಿಯಾಗಿದೆ.

ಧುರಂಧರ್ 2| ಬಾಕ್ಸ್ ಆಫೀಸ್‌ನಲ್ಲಿ ಅಬ್ಬರ, ವಿಮರ್ಶೆಯಲ್ಲಿ ಅಪಸ್ವರ - ಚಿತ್ರದ ವಿರುದ್ಧ ‘ಪ್ರೊಪಗಾಂಡಾ’ ಆರೋಪ

ಧುರಂಧರ್ 2' ಸಿನಿಮಾ ಬಗ್ಗೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಜಸ್ಕಿರತ್ ಸಿಂಗ್ ರಂಗಿ ಪಾತ್ರದಲ್ಲಿ ರಣವೀರ್ ಮಿಂಚಿದ್ದರೆ, ಚಿತ್ರದ ಕಥೆಯ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ದೊಡ್ಡ ಚರ್ಚೆ ನಡೆಯುತ್ತಿದೆ.


Click the Play button to hear this message in audio format

ಬಾಲಿವುಡ್ ನಟ ರಣವೀರ್ ಸಿಂಗ್ ಅಭಿನಯದ ಬಹುನಿರೀಕ್ಷಿತ ‘ಧುರಂಧರ್: ದಿ ರಿವೇಂಜ್’ ಸಿನಿಮಾ ತೆರೆಕಂಡು ಭರ್ಜರಿ ಪ್ರದರ್ಶನ ಕಾಣುತ್ತಿದೆ. ಆದರೆ, ಸಿನಿಮಾದ ತಾಂತ್ರಿಕ ಶ್ರೀಮಂತಿಕೆ ಮತ್ತು ನಟನೆಯನ್ನು ಮೆಚ್ಚುತ್ತಿರುವ ಪ್ರೇಕ್ಷಕರ ನಡುವೆ, ಒಂದು ವರ್ಗದ ಜನರು ಈ ಚಿತ್ರವನ್ನು ರಾಜಕೀಯ ಪ್ರೇರಿತ ‘ಪ್ರೊಪಗಾಂಡಾ’ ಎಂದು ಟೀಕಿಸುತ್ತಿದ್ದಾರೆ.

ಮಲಯಾಳಂನ ಖ್ಯಾತ ಸಿನಿಮಾ ‘ಭೀಷ್ಮ ಪರ್ವಂ’ ಚಿತ್ರದ ಬರಹಗಾರ ದೇವದತ್ ಶಾಜಿ ಅವರು ಈ ಚಿತ್ರದ ಬಗ್ಗೆ ಗಂಭೀರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಬರೆದುಕೊಂಡಿರುವ ಅವರು, "ಒಂದು ಸಿನಿಮಾ ತಪ್ಪು ಕಲ್ಪನೆಯನ್ನು ಸರಿ ಎಂದು ಬಿಂಬಿಸಲು ಉನ್ನತ ಮಟ್ಟದ ತಾಂತ್ರಿಕತೆಯನ್ನು ಬಳಸಿದರೆ, ಅಲ್ಲಿ ತಾಂತ್ರಿಕ ಕೌಶಲವು ಜನರನ್ನು ದಿಕ್ಕು ತಪ್ಪಿಸುವ ಮಾಡುವ ಸಾಧನವಾಗಿ ಬದಲಾಗುತ್ತದೆ" ಎಂದು ಮಾರ್ಮಿಕವಾಗಿ ಟೀಕಿಸಿದ್ದಾರೆ. ನೇರವಾಗಿ ಚಿತ್ರದ ಹೆಸರನ್ನು ಉಲ್ಲೇಖಿಸದಿದ್ದರೂ, ಅವರ ಈ ಮಾತುಗಳು ಧುರಂಧರ್ ಚಿತ್ರದ ವಿರುದ್ಧವೇ ಇದೆ ಎಂದು ಸಿನಿಮಾ ವಲಯದಲ್ಲಿ ಚರ್ಚೆಯಾಗುತ್ತಿದೆ.

ಆದಿತ್ಯ ಧರ್ ಅವರ ಈ ಸಿನಿಮಾವು ಭಾರತೀಯ ಗುಪ್ತಚರ ಸಂಸ್ಥೆಯ ಏಜೆಂಟ್ ಹಮ್ಜಾ ಅಲಿ ಮಜಾರಿ ಪಾಕಿಸ್ತಾನದ ಭೂಗತ ಲೋಕ ಮತ್ತು ಭಯೋತ್ಪಾದನೆಯ ಜಾಲವನ್ನು ಹೇಗೆ ಹತ್ತಿಕ್ಕುತ್ತಾನೆ ಎಂಬ ಕಥೆಯನ್ನು ಹೊಂದಿದೆ. ಚಿತ್ರದಲ್ಲಿ ರಣವೀರ್ ಸಿಂಗ್ ಜೊತೆಗೆ ಆರ್. ಮಾಧವನ್, ಸಂಜಯ್ ದತ್, ಅರ್ಜುನ್ ರಾಂಪಾಲ್ ಮುಂತಾದ ಘಟಾನುಘಟಿ ಕಲಾವಿದರು ನಟಿಸಿದ್ದಾರೆ.

ಟೀಕೆಗಳೇನು?

ಸಿನಿಮಾದಲ್ಲಿ ತೋರಿಸಲಾದ ಅತಿರೇಕದ ದೇಶಭಕ್ತಿ, ಕೆಲವು ಸಮುದಾಯಗಳನ್ನು ಗುರಿಯಾಗಿಸಿ ಚಿತ್ರಿಸಿರುವ ರೀತಿ ಮತ್ತು ಸರ್ಕಾರದ ನಿರ್ಧಾರಗಳನ್ನು ಸಮರ್ಥಿಸುವ ಧಾಟಿಯ ದೃಶ್ಯಗಳು ಟೀಕೆಗೆ ಗುರಿಯಾಗಿವೆ. ವಿಮರ್ಶಕರು ಕೂಡ ಚಿತ್ರದ ಮೇಕಿಂಗ್ ಅನ್ನು ಕೊಂಡಾಡಿದ್ದರೂ, ಚಿತ್ರದ ಒಳಾರ್ಥವು ಒಂದು ನಿರ್ದಿಷ್ಟ ಅಜೆಂಡಾವನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ಈಗಾಗಲೇ ನೂರಾರು ಕೋಟಿ ಗಳಿಸಿರುವ ಈ ಸಿನಿಮಾ, ಒಂದು ಕಡೆ ಕಮರ್ಷಿಯಲ್ ಯಶಸ್ಸು ಕಾಣುತ್ತಿದ್ದರೆ, ಇನ್ನೊಂದೆಡೆ ಸೃಜನಶೀಲ ಸ್ವಾತಂತ್ರ್ಯ ಮತ್ತು ಪ್ರೊಪಗಾಂಡಾ ನಡುವಿನ ಹೊಸ ಚರ್ಚೆಗೆ ನಾಂದಿ ಹಾಡಿದೆ.

ಬಾಲಿವುಡ್‌ನ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಧುರಂಧರ್ 2: ದಿ ರಿವೆಂಜ್' ಬಾಕ್ಸ್ ಆಫೀಸ್‌ನಲ್ಲಿ ಅಕ್ಷರಶಃ ಸುನಾಮಿ ಎಬ್ಬಿಸಿದೆ. ಈ ಸಿನಿಮಾ ಮೊದಲ ದಿನವೇ ಬರೋಬ್ಬರಿ 102 ಕೋಟಿ ರೂಪಾಯಿಗಳಿಗೂ ಅಧಿಕ ನೆಟ್ ಕಲೆಕ್ಷನ್ ಮಾಡುವ ಮೂಲಕ ಇತಿಹಾಸ ನಿರ್ಮಿಸಿದೆ.

ವಿಶೇಷವೆಂದರೆ, ಅಧಿಕೃತ ಬಿಡುಗಡೆಗೂ ಮುನ್ನ ನಡೆದ ಪೇಯ್ಡ್ ಪ್ರೀಮಿಯರ್ ಶೋಗಳಿಂದಲೇ ಈ ಚಿತ್ರವು ಸುಮಾರು 43 ಕೋಟಿ ರೂಪಾಯಿಗಳನ್ನು ಗಳಿಸಿತ್ತು. ಇದನ್ನು ಸೇರಿಸಿದರೆ ಚಿತ್ರದ ಒಟ್ಟು ಮೊದಲ ದಿನದ ಕಲೆಕ್ಷನ್ 145.55 ಕೋಟಿ ರೂಪಾಯಿಗಳಿಗೆ ತಲುಪಿದೆ. ಹಿಂದಿ ಆವೃತ್ತಿಯೊಂದರಿಂದಲೇ ಅಂದಾಜು 99.10 ಕೋಟಿ ರೂಪಾಯಿ ಹರಿದು ಬಂದಿದ್ದು, ಇದು ಬಾಲಿವುಡ್ ಚಿತ್ರವೊಂದರ ಸಾರ್ವಕಾಲಿಕ ದಾಖಲೆಯ ಓಪನಿಂಗ್ ಆಗಿದೆ. ದಕ್ಷಿಣ ಭಾರತದ ಭಾಷೆಗಳಾದ ತೆಲುಗು, ತಮಿಳು, ಕನ್ನಡ ಮತ್ತು ಮಲಯಾಳಂನಲ್ಲೂ ಚಿತ್ರವು ಉತ್ತಮ ಪ್ರದರ್ಶನ ಕಾಣುತ್ತಿದೆ.

ಕಳೆದ ವರ್ಷ ಬಿಡುಗಡೆಯಾಗಿದ್ದ ಮೊದಲ ಭಾಗ 'ಧುರಂಧರ್' ಮೊದಲ ದಿನ 27 ಕೋಟಿ ರೂಪಾಯಿ ಗಳಿಸಿತ್ತು. ಆದರೆ ಈಗ ಸೀಕ್ವೆಲ್ ಅದರ ನಾಲ್ಕು ಪಟ್ಟು ಹೆಚ್ಚು ಗಳಿಕೆ ಮಾಡಿರುವುದು ಚಿತ್ರದ ಮೇಲಿರುವ ನಿರೀಕ್ಷೆಯನ್ನು ಸಾಬೀತುಪಡಿಸಿದೆ. ಜಾಗತಿಕ ಮಟ್ಟದಲ್ಲಿಯೂ ಚಿತ್ರವು ಭರ್ಜರಿ ಬೇಟೆಯಾಡುತ್ತಿದ್ದು, ಮೊದಲ ದಿನವೇ 230 ಕೋಟಿ ರೂಪಾಯಿಗಳ ಒಟ್ಟು ಕಲೆಕ್ಷನ್ ದಾಟುವ ಸಾಧ್ಯತೆ ಇದೆ ಎಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ. ರಣವೀರ್ ಸಿಂಗ್ ಅವರ ನಟನೆ ಮತ್ತು ಆದಿತ್ಯ ಧರ್ ಅವರ ಮೇಕಿಂಗ್‌ಗೆ ಪ್ರೇಕ್ಷಕರು ಫಿದಾ ಆಗಿದ್ದು, ವಾರಾಂತ್ಯದಲ್ಲಿ ಈ ಮೊತ್ತ ಇನ್ನೂ ದೊಡ್ಡ ಮಟ್ಟಕ್ಕೆ ಏರುವ ನಿರೀಕ್ಷೆಯಿದೆ.

Read More
Next Story