
ಮುಂಬೈನ ಗ್ಯಾಲಕ್ಸಿ ಮತ್ತು ಗೈಟಿ ಚಿತ್ರಮಂದಿರಗಳಲ್ಲಿ 'ಧುರಂಧರ್: ದಿ ರಿವೇಂಜ್' ಚಿತ್ರದ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ತಾಂತ್ರಿಕ ಕಾರಣಗಳಿಂದಾಗಿ ದಿಢೀರ್ ರದ್ದಾಗಿವೆ
Dhurandhar|ಧುರಂಧರ್ ಚಿತ್ರದ ಪೇಯ್ಡ್ ಪ್ರಿವ್ಯೂ ಶೋ ರದ್ದು: ಮುಂಬೈ ಅಭಿಮಾನಿಗಳಲ್ಲಿ ಭಾರೀ ನಿರಾಸೆ
ಮುಂಬೈನ ಗ್ಯಾಲಕ್ಸಿ ಮತ್ತು ಗೈಟಿ ಚಿತ್ರಮಂದಿರಗಳಲ್ಲಿ 'ಧುರಂಧರ್: ದಿ ರಿವೇಂಜ್' ಚಿತ್ರದ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ತಾಂತ್ರಿಕ ಕಾರಣಗಳಿಂದಾಗಿ ದಿಢೀರ್ ರದ್ದಾಗಿವೆ.
ರಣವೀರ್ ಸಿಂಗ್ ನಟನೆಯ 'ಧುರಂಧರ್: ದಿ ರಿವೇಂಜ್' ಚಿತ್ರದ ಪೇಯ್ಡ್ ಪ್ರಿವ್ಯೂ ಪ್ರದರ್ಶನಗಳು ಮುಂಬೈನ ಗ್ಯಾಲಕ್ಸಿ ಮತ್ತು ಗೈಟಿ ಚಿತ್ರಮಂದಿರಗಳಲ್ಲಿ ದಿಢೀರ್ ರದ್ದಾಗಿದ್ದು, ಅಭಿಮಾನಿಗಳ ಸಂಭ್ರಮ ಆಕ್ರೋಶಕ್ಕೆ ತಿರುಗಿದೆ. ಗ್ಯಾಲಕ್ಸಿಯ ಸಂಜೆ 4:45 ಮತ್ತು ಗೈಟಿಯ 5:15ರ ಪ್ರದರ್ಶನಗಳನ್ನು ರದ್ದುಗೊಳಿಸಿರುವುದು ಸಿನಿಪ್ರೇಮಿಗಳಲ್ಲಿ ತೀವ್ರ ಬೇಸರ ಮೂಡಿಸಿದೆ. ಚಿತ್ರದ ಮೊದಲ ಭಾಗ ದೊಡ್ಡ ಹಿಟ್ ಆಗಿದ್ದರಿಂದ, ಈ ಸೀಕ್ವೆಲ್ ನೋಡಲು ಅಂಧೇರಿಯಂತಹ ದೂರದ ಪ್ರದೇಶಗಳಿಂದಲೂ ಜನ ಆಗಮಿಸಿದ್ದರು. ಆದರೆ ಗಂಟೆಗಟ್ಟಲೆ ಸರತಿಯಲ್ಲಿ ನಿಂತಿದ್ದ ಅಭಿಮಾನಿಗಳಿಗೆ ಕಡೆಯ ಕ್ಷಣದಲ್ಲಿ ಚಿತ್ರದ ಫೈಲ್ ತಲುಪದ ಕಾರಣ ಪ್ರದರ್ಶನವಿಲ್ಲ ಎಂಬ ಮಾಹಿತಿ ನೀಡಲಾಗಿದೆ.
ಕೇವಲ ಮುಂಬೈ ಮಾತ್ರವಲ್ಲದೆ ತಮಿಳುನಾಡು, ಆಂಧ್ರಪ್ರದೇಶ ಮತ್ತು ತೆಲಂಗಾಣದಲ್ಲೂ ಪ್ರಾದೇಶಿಕ ಭಾಷೆಗಳ ಪ್ರಿವ್ಯೂ ಪ್ರದರ್ಶನಗಳು ರದ್ದಾಗಿವೆ. ಚೆನ್ನೈನ ಎಜಿಎಸ್ ಸಿನಿಮಾಸ್ ಮತ್ತು ಕೊಯಮತ್ತೂರಿನ ಬ್ರಾಡ್ವೇ ಸಿನಿಮಾಸ್ ಈ ಬಗ್ಗೆ ಅಧಿಕೃತ ಮಾಹಿತಿ ನೀಡಿ ಹಣ ಮರುಪಾವತಿಯ ಭರವಸೆ ನೀಡಿವೆ.
ಈ ಗೊಂದಲಕ್ಕೆ ಸಂಬಂಧಿಸಿದಂತೆ ನಿರ್ದೇಶಕ ಆದಿತ್ಯ ಧರ್ ಕ್ಷಮೆಯಾಚಿಸಿದ್ದು, ಹಿಂದಿ ಆವೃತ್ತಿಯ ಪ್ರದರ್ಶನಗಳು ನಿಗದಿತ ಸಮಯಕ್ಕೆ ನಡೆಯುತ್ತಿವೆ ಎಂದು ಸ್ಪಷ್ಟಪಡಿಸಿದ್ದಾರೆ. ಪ್ರಾದೇಶಿಕ ಭಾಷೆಯ ಟಿಕೆಟ್ ಪಡೆದವರು ಹಿಂದಿ ಆವೃತ್ತಿಯನ್ನು ಸಬ್‌ಟೈಟಲ್‌ನೊಂದಿಗೆ ನೋಡಬಹುದು ಅಥವಾ ಹಣ ಮರುಪಾವತಿ ಪಡೆಯಬಹುದು ಎಂದು ಅವರು ತಿಳಿಸಿದ್ದಾರೆ.
ಆದಿತ್ಯ ಧರ್ ನಿರ್ದೇಶನದ ಬಹುನಿರೀಕ್ಷಿತ ಆಕ್ಷನ್ ಥ್ರಿಲ್ಲರ್ 'ಧುರಂಧರ್ 2: ದಿ ರಿವೆಂಜ್' ಇಂದು ವಿಶ್ವದಾದ್ಯಂತ ತೆರೆಕಂಡಿದ್ದು, ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಸಾಗರವೇ ಹರಿದುಬರುತ್ತಿದೆ. ಮೊದಲ ಭಾಗದ ಭರ್ಜರಿ ಯಶಸ್ಸಿನ ನಂತರ ಬಂದಿರುವ ಈ ಸೀಕ್ವೆಲ್, ಆರಂಭಿಕ ಪ್ರದರ್ಶನಗಳಿಂದಲೇ ಸೋಷಿಯಲ್ ಮೀಡಿಯಾದಲ್ಲಿ ಹೊಸ ಸಂಚಲನ ಸೃಷ್ಟಿಸಿದೆ. ಪ್ರೇಕ್ಷಕರು ಚಿತ್ರದ ಮೇಕಿಂಗ್ ಮತ್ತು ರಣವೀರ್ ಸಿಂಗ್ ಅಭಿನಯಕ್ಕೆ ಫಿದಾ ಆಗಿದ್ದಾರೆ.
ಚಿತ್ರ ಬಿಡುಗಡೆಗೂ ಮುನ್ನ ಚಿತ್ರತಂಡವು ಅತ್ಯಂತ ರಹಸ್ಯವಾಗಿಟ್ಟಿದ್ದ 'ಬಡೆ ಸಾಹಬ್' ಪಾತ್ರದ ಬಗ್ಗೆ ಈಗ ಎಲ್ಲೆಡೆ ಚರ್ಚೆಯಾಗುತ್ತಿದೆ. ಚಿತ್ರದಲ್ಲಿ ಈ ಪ್ರಭಾವಿ ಮತ್ತು ವಿಲನ್ ಪಾತ್ರವನ್ನು ಯಾರು ನಿರ್ವಹಿಸಿದ್ದಾರೆ ಎಂಬ ಕುತೂಹಲಕ್ಕೆ ಈಗ ತೆರೆ ಬಿದ್ದಿದೆ. ಇತ್ತೀಚಿನ ಅಪ್‌ಡೇಟ್‌ಗಳ ಪ್ರಕಾರ, ಚಿತ್ರದ ಈ 'ಬಡೆ ಸಾಹಬ್' ಪಾತ್ರವು ಅಂಡರ್‌ವರ್ಲ್ಡ್ ಡಾನ್ ದಾವೂದ್ ಇಬ್ರಾಹಿಂನಿಂದ ಪ್ರೇರಿತವಾಗಿದ್ದು, ಇದನ್ನು ಪ್ರತಿಭಾವಂತ ನಟ ದಾನಿಶ್ ಇಕ್ಬಾಲ್ ನಿಭಾಯಿಸಿದ್ದಾರೆ.
ಕರಾಚಿಯ ಭೂಗತ ಲೋಕ ಮತ್ತು ಭಯೋತ್ಪಾದನೆಯ ಜಾಲವನ್ನು ಭೇದಿಸುವ ಕಥೆಯನ್ನು ಹೊಂದಿರುವ ಈ ಚಿತ್ರದಲ್ಲಿ, ವಯಸ್ಸಾದ ಆಕ್ರಮಣಕಾರಿ ಭೂಗತ ದೊರೆಯಾಗಿ ದಾನಿಶ್ ಇಕ್ಬಾಲ್ ಕಾಣಿಸಿಕೊಂಡಿದ್ದಾರೆ. ಅವರ ಗಂಭೀರ ನಟನೆ ಮತ್ತು ಪಾತ್ರದ ತೀವ್ರತೆಯು ಚಿತ್ರಕ್ಕೆ ಹೊಸ ಆಯಾಮ ನೀಡಿದೆ ಎಂದು ಅಭಿಮಾನಿಗಳು ಅಭಿಪ್ರಾಯಪಡುತ್ತಿದ್ದಾರೆ. ರಣವೀರ್ ಸಿಂಗ್ ಅವರ ಹಮ್ಜಾ ಪಾತ್ರ ಮತ್ತು ದಾನಿಶ್ ಅವರ ಬಡೆ ಸಾಹಬ್ ನಡುವಿನ ಸಂಘರ್ಷವು ಪ್ರೇಕ್ಷಕರನ್ನು ತುದಿಗಾಲಿನಲ್ಲಿ ನಿಲ್ಲಿಸುವಂತೆ ಮಾಡಿದೆ.
'ಮಹಾರಾಣಿ 2' ಮತ್ತು 'ಸಂಕಲ್ಪ್' ಚಿತ್ರಗಳ ಮೂಲಕ ಗುರುತಿಸಿಕೊಂಡಿದ್ದ ದಾನಿಶ್ ಇಕ್ಬಾಲ್, ಈಗ 'ಧುರಂಧರ್ 2' ಮೂಲಕ ದೊಡ್ಡ ಮಟ್ಟದ ಯಶಸ್ಸನ್ನು ಕಂಡಿದ್ದಾರೆ.

