
love mocktail 3| ಧುರಂಧರ್ ಅಬ್ಬರದ ನಡುವೆ ಕನ್ನಡದ 'ಲವ್ ಮಾಕ್‌ಟೇಲ್ 3' ನಾಳೆ ತೆರೆಗೆ
'ಲವ್ ಮಾಕ್‌ಟೇಲ್' ಸರಣಿಯ ಈ ಮೂರನೇ ಭಾಗವು ಕೇವಲ ಪ್ರೇಮಕಥೆಯಷ್ಟೇ ಅಲ್ಲದೆ, ತಂದೆ ಮತ್ತು ಮಗಳ ನಡುವಿನ ಅಪಾರ ಬಾಂಧವ್ಯವನ್ನು ಭಾವನಾತ್ಮಕವಾಗಿ ತೆರೆದಿಡಲಿದೆ. '
ಸ್ಯಾಂಡಲ್‌ವುಡ್ ನಟ ಡಾರ್ಲಿಂಗ್ ಕೃಷ್ಣ ಹಾಗೂ ಮಿಲನಾ ನಾಗರಾಜ್ ಕಾಂಬಿನೇಷನ್‌ನ ಬಹುನಿರೀಕ್ಷಿತ 'ಲವ್ ಮಾಕ್‌ಟೇಲ್ 3' ಸಿನಿಮಾ ಮಾರ್ಚ್ 19 ರಂದು ರಾಜ್ಯಾದ್ಯಂತ ತೆರೆಕಾಣಲು ಸಿದ್ಧವಾಗಿದೆ. ವಿಶೇಷವೆಂದರೆ, ಈ ಹಿಂದೆ ಇದೇ ದಿನಾಂಕದಂದು ಬಿಡುಗಡೆಯಾಗಬೇಕಿದ್ದ 'ಟಾಕ್ಸಿಕ್' ಸಿನಿಮಾದ ಜಾಗಕ್ಕೆ ಈಗ ಆದಿ ಮತ್ತು ನಿಧಿಮಾ ತಂಡ ಲಗ್ಗೆ ಇಡುತ್ತಿದೆ. ಆದರೆ ಇದು ಪೂರ್ವ ನಿಯೋಜಿತ ಯೋಜನೆಯಲ್ಲ, ಬದಲಿಗೆ ಆಕಸ್ಮಿಕವಾಗಿ ಒದಗಿಬಂದ ಸುಸಂದರ್ಭ ಎಂದು ಚಿತ್ರತಂಡ ಹಂಚಿಕೊಂಡಿದೆ.
'ಲವ್ ಮಾಕ್‌ಟೇಲ್' ಸಿನಿಮಾ ಎಂಬ ಕಲ್ಪನೆಯೇ ಆಕಸ್ಮಿಕವಾಗಿ ಹುಟ್ಟಿಕೊಂಡಿದ್ದು ಎಂದು ಸ್ಮರಿಸುವ ನಟ ಹಾಗೂ ನಿರ್ದೇಶಕ ಕೃಷ್ಣ, ಯಾವುದೇ ಹೆಚ್ಚಿನ ಆಲೋಚನೆ ಮಾಡದೆ ಕೇವಲ ಒಂದು ಸಣ್ಣ ಎಳೆಯನ್ನು ನಂಬಿ ಚಿತ್ರ ನಿರ್ದೇಶನಕ್ಕೆ ಇಳಿದಿದ್ದಾಗಿ ತಿಳಿಸಿದ್ದಾರೆ. ಈ ಹಿಂದಿನ ಭಾಗಗಳು ಪ್ರೇಮಿಗಳ ದಿನಾಚರಣೆಯ ಸುಮಾರಿಗೆ ಬಿಡುಗಡೆಯಾಗಿದ್ದವು. ಆದರೆ ಈ ಬಾರಿ ಯುಗಾದಿ ಹಬ್ಬದ ಹಿನ್ನೆಲೆ ಸಿನಿಮಾ ಬಿಡುಗಡೆಗೊಳ್ಳುತ್ತಿದೆ. ಲವ್ ಮಾಕ್‌ಟೇಲ್ 2' ಸಿನಿಮಾದ ಅಂತ್ಯದಲ್ಲಿ ಮಗುವನ್ನು ದತ್ತು ಪಡೆದಿದ್ದ ಆದಿ, ಈಗ ಆ ಮಗಳೊಂದಿಗೆ ತನ್ನ ಜೀವನವನ್ನು ಹೇಗೆ ಕಟ್ಟಿಕೊಳ್ಳುತ್ತಾನೆ ಮತ್ತು ಆತನ ಬದುಕಿನಲ್ಲಿ ನಿಧಿಮಾ ಪಾತ್ರದ ಪ್ರಭಾವ ಹೇಗಿರುತ್ತದೆ ಎಂಬುದೇ ಈ ಚಿತ್ರದ ಮುಖ್ಯ ಆಕರ್ಷಣೆ.
ಕೃಷ್ಣ ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ಬದಲಾವಣೆ ತಂದ ಈ ಸರಣಿ, 'ಹುಚ್ಚ 2' ನಂತಹ ಸಿನಿಮಾಗಳು ನಿರೀಕ್ಷಿತ ಯಶಸ್ಸು ನೀಡದಿದ್ದಾಗ ಹುಟ್ಟಿಕೊಂಡಿದ್ದಾಗಿದೆ. ಕಳೆದ ಆರು ವರ್ಷಗಳಿಂದ ಈ ಕಥೆಯೊಂದಿಗೆ ಬೆಳೆದಿರುವ ಚಿತ್ರತಂಡ, ಈ ಮೂರನೇ ಭಾಗದಲ್ಲಿ ತಂದೆ-ಮಗಳ ನಡುವಿನ ಬಾಂಧವ್ಯದ ಎಳೆಯನ್ನು ಬಹಳ ಭಾವನಾತ್ಮಕವಾಗಿ ಕಟ್ಟಿಕೊಟ್ಟಿದೆ. ಸಿನಿಮಾದಲ್ಲಿ ನಿಧಿಮಾ ಪಾತ್ರ ಇರುತ್ತದೆಯೇ ಎಂಬ ಕುತೂಹಲಕ್ಕೆ ಉತ್ತರಿಸಿರುವ ಕೃಷ್ಣ, ನಿಧಿಮಾ ಇಲ್ಲದೆ ಈ ಪ್ರಪಂಚ ಪರಿಪೂರ್ಣವಲ್ಲ ಎಂದು ಮಾರ್ಮಿಕವಾಗಿ ಉತ್ತರಿಸಿದ್ದಾರೆ.
ಕೇವಲ 25 ದಿನಗಳಲ್ಲಿ ಈ ಸಿನಿಮಾದ ಚಿತ್ರೀಕರಣವನ್ನು ಮುಗಿಸಿರುವುದು ವಿಶೇಷ. ನಕುಲ್ ಅಭ್ಯಂಕರ್ ಸಂಗೀತ ನೀಡಿದ್ದು, ಶ್ರೀ ಕ್ರೇಜಿ ಮೈಂಡ್ಸ್ ಛಾಯಾಗ್ರಹಣ ಹಾಗೂ ಸಂಕಲನದ ಜವಾಬ್ದಾರಿ ಹೊತ್ತಿದ್ದಾರೆ. ದಿಲೀಪ್ ರಾಜ್, ಶ್ವೇತಾ ಪ್ರಸಾದ್, ರಜನಿ ಭಾರದ್ವಾಜ್ ಮತ್ತು ವೈಶಾಲಿ ದೀಪಕ್ ಸೇರಿದಂತೆ ಹಲವು ಕಲಾವಿದರು ತಾರಾಗಣದಲ್ಲಿದ್ದಾರೆ.

