
- ಮುಖಪುಟ
- ತಾಜಾ ಸುದ್ದಿತಾಜಾ ಸುದ್ದಿ
- ಕರ್ನಾಟಕಕರ್ನಾಟಕ
- ರಾಷ್ಟ್ರೀಯರಾಷ್ಟ್ರೀಯ
- ವಿಶೇಷ ಲೇಖನವಿಶೇಷ ಲೇಖನ
- ಅಭಿಮತ
- ಮನರಂಜನೆಮನರಂಜನೆ
- ಕ್ರೀಡೆಕ್ರೀಡೆ
- ಉದ್ಯೋಗ ವಾರ್ತೆ
- ವಿಡಿಯೋ

ಭಾರತಕ್ಕೆ ಪಾಕಿಸ್ತಾನ ಎಷ್ಟು ದೂರವೋ ಅಷ್ಟೇ ಹತ್ತಿರ. ಅದು ಭಾರತದ ಆತ್ಮಬಿಂಬದೊಂದಿಗೆ ಎಷ್ಟು ಬೆಸೆದುಕೊಂಡು ಬಿಟ್ಟಿದೆ ಎಂದರೆ ಅದನ್ನು ಬಿಟ್ಟುಕೊಡಲು ಸಾಧ್ಯವಿಲ್ಲ.
ಗೂಢಾಚಾರಿಗೆ ಸಂಬಂಧಿಸಿದ ಚಲನಚಿತ್ರ ʼಧುರಂಧರ್ʼ ಬಗ್ಗೆ ಸಾಕಷ್ಟು ವಿಮರ್ಶೆಗಳು ಬಂದಿವೆ. ಆದರೆ ಇದು ಅಂತಹ ಒಂದು ವಿಮರ್ಶೆ ಅಲ್ಲ.
ಮೇಲ್ನೋಟಕ್ಕೆ ಗಮನಿಸಿದರೆ ಈ ಚಿತ್ರವು ಬಲೂಚಿ ವ್ಯಕ್ತಿಯಂತೆ ನಟಿಸುವ ಒಬ್ಬ ಭಾರತೀಯ ಏಜೆಂಟ್ (ರಣವೀರ್ ಸಿಂಗ್) ಕಥೆಯನ್ನು ಹೊಂದಿದೆ. ಆತ ಕರಾಚಿಯ ಕ್ರಿಮಿನಲ್ ಗ್ಯಾಂಗ್ ಸೇರಿಕೊಂಡು ಅಲ್ಲಿ ನಡೆಯುವ ಭಾರತ ವಿರೋಧಿ ಚಟುವಟಿಕೆಗಳ ಬಗ್ಗೆ ಅತ್ಯಮೂಲ್ಯವಾದ ಮಾಹಿತಿಗಳನ್ನು ರವಾನಿಸುತ್ತಿರುತ್ತಾನೆ. ಆದರೆ ಇದರ ಕಥಾ ಹಂದರವು ಭಾರತೀಯರಿಗೆ ಯಾವುದೇ ಅಡೆತಡೆಯಿಲ್ಲದೆ ಪಾಕಿಸ್ತಾನವನ್ನು ಕಲ್ಪಿಸಿಕೊಳ್ಳಲು ಒಂದು ನೆಪವನ್ನು ನೀಡುತ್ತದೆ.
ಒಬ್ಬ ಕರ್ಮಠ ಧರ್ಮಬೀರುವಿಗೆ ನರಕವನ್ನು ಕಲ್ಪಿಸಿಕೊಳ್ಳುವುದು ಎಂದರೆ ಪ್ರತಿಬಂಧಿತ ಮನಸ್ಸನ್ನು ಎಲ್ಲ ಸಂಕೋಲೆಗಳಿಂದ ಕಳಚಿಹಾಕಿದಂತೆ. ಅದೇ ರೀತಿ ಪಾಕಿಸ್ತಾನವನ್ನು ಕಲ್ಪಿಸಿಕೊಳ್ಳುವುದು ಒಬ್ಬ ಭಾರತೀಯ ʼರಾಷ್ಟ್ರವಾದಿʼಗೆ ಸಹಕಾರಿಯಾದೀತು. ಪಾಕಿಸ್ತಾನವು ʼಏನನ್ನು ಬೇಕಾದರೂ ಮಾಡಲು ಸಮರ್ಥವಾಗಿದೆʼ ಎಂಬ ತರ್ಕವನ್ನು ಮುಂದಿಡುವಂತೆಯೇ ಪಾಕಿಸ್ತಾನದ ಹಿನ್ನೆಲೆಯಲ್ಲಿ ನಿರ್ಮಿಸಲಾದ ಭಾರತೀಯ ಚಿತ್ರದಲ್ಲಿ ವಾಸ್ತವವಾಗಿ ಏನನ್ನು ಬೇಕಾದರೂ ಬಿಂಬಿಸಬಹುದು ಎಂಬ ತರ್ಕವನ್ನೂ ಮಾಡಲಾಗುತ್ತದೆ.
ಧುರಂಧರ್ ಚಿತ್ರವು ಕರಾಚಿಯ ಅಪರಾಧ ಜಗತ್ತಿನ ಹಿನ್ನೆಲೆಯಲ್ಲಿ ನಡೆಯುತ್ತದೆ. ಇದರಲ್ಲಿ ಅನಗತ್ಯವಾದ ರಕ್ತಪಾತ ಹಾಗೂ ಚಿತ್ರಹಿಂಸೆಯ ದೃಶ್ಯಗಳೇ ಮಿತಿಮೀರುವಷ್ಟಿವೆ. ಇವೇ ದೃಶ್ಯಗಳನ್ನು ಭಾರತೀಯ ಹಿನ್ನೆಲೆಯಲ್ಲಿ ಚಿತ್ರಿಸಿದ್ದೇ ಹೌದಾಗಿದ್ದರೆ ಬುಹುಶಃ ಈ ಹೊತ್ತಿಗೆ ಚಿತ್ರ ನಿಷೇಧಕ್ಕೆ ಒಳಗಾಗುತ್ತಿತ್ತು.
ಎಲ್ಲವೂ ಅತಿರೇಕ…
ಚಿತ್ರದ ಸಾಹಸದ ದೃಶ್ಯಗಳು ಅತಿರಂಜಿತವಾಗಿವೆ ಎಂದರೂ ಕ್ಲೀಷೆಯಾಗುತ್ತದೆ. ಇವುಗಳಲ್ಲಿ ಬಹುತೇಕ ದೃಶ್ಯಗಳಿಗೆ ಯಾವ ಉದ್ದೇಶ ಕೂಡ ಇರುವುದಿಲ್ಲ. ಜನರ ಶಿರಚ್ಛೇದನ ಮಾಡಲಾಗುತ್ತದೆ, ಬೆರಳುಗಳನ್ನು ಕತ್ತರಿಸಲಾಗುತ್ತದೆ, ಇನ್ನು ಒಬ್ಬ ಗ್ಯಾಂಗಸ್ಟರ್-ನನ್ನು ಮಸೂರ್ ದಾಲ್-ನಂತೆ ಕಾಣುವ ದ್ರವದಲ್ಲಿ ಕುದಿಸಲಾಗುತ್ತದೆ. ಇಷ್ಟೆಲ್ಲದರ ನಡುವೆ ಕೆಲವರನ್ನು ಮೋಟಾರ್ ಸೈಕಲ್-ಗಳಿಗೆ ಕುತ್ತಿಗೆಯನ್ನು ಕಟ್ಟಿ ಜನನಿಬಿಡ ರಸ್ತೆಗಳಲ್ಲಿ ದರದರನೆ ಎಳೆದುಕೊಂಡು ಹೋಗಲಾಗುತ್ತದೆ. ಚಿತ್ರಹಿಂಸೆಗೆ ಒಳಗಾದ ಒಬ್ಬ ಭಾರತೀಯ ಏಜೆಂಟ್-ನ ಮುಖದ ಚರ್ಮಕ್ಕೆ ಹತ್ತಾರು ಸಣ್ಣ ಸಣ್ಣ ಕೊಂಡಿಗಳನ್ನು ಚುಚ್ಚಲಾಗಿರುತ್ತದೆ.
ದೇವರನ್ನು ಹೊಂದಿರುವ ಪ್ರಪಂಚಕ್ಕೆ ನರಕವು ಹೇಗೆ ವಿರುದ್ಧವೋ ಅದೇ ರೀತಿ ನನ್ನ ತಿಳುವಳಿಕೆಯ ಪ್ರಕಾರ ಭಾರತಕ್ಕೆ ಪಾಕಿಸ್ತಾನವು ಕೂಡ ʼವಿರುದ್ಧ ರೂಪʼವಾಗಿದೆ.
ಈ ʼವಿರುದ್ಧ ರೂಪʼ ಎನ್ನುವುದು ಮೂಲಭೂತವಾಗಿ ನಮ್ಮಿಂದ ಭಿನ್ನವಾಗಿರುವ, ಆದರೆ ನಮ್ಮೊಂದಿಗೆ ಅವಿನಾಭಾವ ಸಂಬಂಧವನ್ನು ಹೊಂದಿರುವ ನಮ್ಮ ಸ್ವಯಂ ವ್ಯಾಖ್ಯಾನಕ್ಕೆ ಅತ್ಯಗತ್ಯವಾಗಿ ಬೇಕಾದ ವ್ಯಕ್ತಿತ್ವ. ಸಾಹಿತ್ಯದಲ್ಲಿ ನಮಗೆ ʼದುಷ್ಟ ಅವಳಿʼ ಎಂಬ ಪಾತ್ರದ ಪರಿಚಯವಿದೆ. ಭಾರತ ಮತ್ತು ಪಾಕಿಸ್ತಾನ ಒಟ್ಟಿಗೇ ಹುಟ್ಟಿದ್ದರಿಂದ ಭಾರತೀಯ ರಾಷ್ಟ್ರೀಯವಾದದ ಪರಿಕಲ್ಪನೆಯಲ್ಲಿ ಪಾಕಿಸ್ತಾನವು ಅಂತಹ ಒಂದು ಪಾತ್ರದಂತೆ ಕಾಣಿಸಬಹುದು.
ʼಧುರಂಧರ್ʼ ಚಿತ್ರವನ್ನು ನಿಜ ಜೀವನಕ್ಕೆ ಹತ್ತಿರವಾದುದು ಎಂದು ಕರೆಯಲಾಗುತ್ತದೆ. ಆದರೆ ಚಿತ್ರದಲ್ಲಿರುವ ಕೆಲವು ಪ್ರಣಯ ದೃಶ್ಯಗಳಲ್ಲಿ ಒಬ್ಬ ಭಾರತೀಯ ಏಜೆಂಟ್ ಗ್ಯಾಂಗಿನ ಸಾಮಾನ್ಯ ಸದಸ್ಯನಾಗಿದ್ದರೂ ಒಬ್ಬ ಪ್ರಭಾವೀ ರಾಜಕಾರಣಿಯ ಮಗಳ ಜೊತೆ ಬಿಡುಬೀಸಾಗಿ ಯಾವುದೇ ತೊಂದರೆ ಇಲ್ಲದೆ ಬಹಿರಂಗವಾಗಿ ರಸ್ತೆಗಳಲ್ಲಿ ಅಡ್ಡಾಡುತ್ತಿರುತ್ತಾನೆ.
ಭಾರತ ವಿರೋಧಿ ಪ್ರಮುಖ ಘಟನೆಗಳು (ಉದಾ: 26/11) ಆಕಸ್ಮಿಕವಾಗಿ ಆತನ ಉಪಸ್ಥಿತಿಯಲ್ಲಿಯೇ ನಡೆಯುತ್ತವೆ. ಇದರಿಂದ ಆತನ ಗೂಢಚರ್ಯೆ ಕೆಲಸ ಸುಲಭವಾಗುತ್ತಿರುತ್ತದೆ. ಅಷ್ಟೇ ಅಲ್ಲದೆ ಅಜ್ಮಲ್ ಕಸಬ್-ಗೆ ಬಂದೂಕನ್ನು ನೀಡುವ ದೃಶ್ಯವನ್ನೂ ನಾನು ಕಣ್ಣು ತುಂಬಿಕೊಂದು ಕೃತಾರ್ಥರಾಗುತ್ತೇವೆ.
ಇಂಟರ್ನೆಟ್ ನಲ್ಲಿ ಕರಾಚಿಯ ಯಾವುದೇ ರಸ್ತೆಯ ಚಿತ್ರವನ್ನು ನೋಡಿದರೂ ಕೂಡ ಅಲ್ಲಿನ ಮಹಿಳೆಯರು ತಲೆಯನ್ನು ಮುಚ್ಚಿಕೊಂಡಿರುತ್ತಾರೆ. ಆದರೆ ಈ ಚಿತ್ರ ಅದಕ್ಕೆ ವಿರುದ್ಧವಾಗಿದೆ. ಪಾಕಿಸ್ತಾನದ ಸುಂದರ ಮಹಿಳೆಯರು ತಲೆ ಮುಚ್ಚಿಕೊಂಡಿರುವುದಿಲ್ಲ. ಪಾಕಿಸ್ತಾನದ ಧಾರವಾಹಿಗಳೂ ಕೂಡ ಇದೇ ರೀತಿ ಮಾಡುತ್ತವೆ. ಆದರೆ ಅಷ್ಟಕ್ಕೇ ಅದು ನೈಜ ಎಂದು ಅನಿಸಿಕೊಳ್ಳುವುದಿಲ್ಲ.
ಬದಲಾದ ನಿಲುವು
2014ರ ನಂತರದ ಸಿನೆಮಾಗಳಲ್ಲಿ ಪಾಕಿಸ್ತಾನದ ಚಿತ್ರಣವು ಹೆಚ್ಚು ನೇರ ಮತ್ತು ನಿಷ್ಠುರವಾಗಿ ಮೂಡಿ ಬರುತ್ತಿರುವುದು ವಿಶೇಷ. ಅದಕ್ಕೂ ಮೊದಲು ಇದನ್ನು ಕೇವಲ ಪರೋಕ್ಷವಾಗಿ ಬಿಂಬಿಸಲಾಗುತ್ತಿತ್ತು. ಪಾಕಿಸ್ತಾನವನ್ನು ಒಂದು ʼವಿರುದ್ಧ ಪ್ರತಿಬಿಂಬʼದ ರೂಪಕವಾಗಿ ತೋರಿಸಿದ ಮೊದಲ ಚಿತ್ರಗಳಲ್ಲಿ ಮನೋಜ್ ಕುಮಾರ್ ಅವರ ʼಉಪಕಾರ್ʼ (1967) ಪ್ರಮುಖವಾದುದು. ಇದು 1965ರ ಯುದ್ಧದ ಹಿನ್ನಲೆಯನ್ನು ಒಳಗೊಂಡಿದ್ದರೂ ಮೂಲತಃ ಕುಟುಂಬದ ಆಸ್ತಿ ಹಂಚಿಕೆಗಾಗಿ ಜಗಳವಾಡುವ ಇಬ್ಬರು ಸಹೋದರರ ಕಥೆಯಾಗಿತ್ತು-ಒಬ್ಬ ಒಳ್ಳೆಯವನು ಹಾಗೂ ಮತ್ತೊಬ್ಬ ದಾರಿ ತಪ್ಪಿದವನು.
ಇದೇ ಮಾದರಿಯ ಕಥಹಂದರವನ್ನು ʼದೋ ರಾಸ್ತೆʼ (1969) ಚಿತ್ರದಲ್ಲಿಯೂ ಬಳಸಲಾಯಿತು. ಆದರೆ ಇಲ್ಲಿ ಶಾಂತಿಯನ್ನು ಬಯಸುವ ಹಿರಿಯ ಅಣ್ಣನ (ಬಲರಾಜ್ ಸಾಹ್ನಿ) ಜೊತೆಗೆ ಸ್ವಾರ್ಥಿ ಸಹೋದರನ ವಿರುದ್ಧ ಕಠಿಣವಾಗಿ ವರ್ತಿಸುವ ಮತ್ತೊಬ್ಬ ಕಿರಿಯ ಸಹೋದರನ ಪಾತ್ರವೂ ಇತ್ತು. ಇಲ್ಲಿ ಕಿರಿಯ ಸಹೋದರನನ್ನು ಪಾಕಿಸ್ತಾನದ ವಿಷಯದಲ್ಲಿ ನೆಹರೂ ಅವರ ʼಸಮನ್ವಯ ನೀತಿʼಗಿಂತ ಭಿನ್ನವಾದ ಶಾಸ್ತ್ರಿ ಅವರ ʼಕಠಿಣ ನಿಲುವುʼ ಎಂದು ವ್ಯಾಖ್ಯಾನಿಸಬಹುದು.
ಭಾರತದ ರಾಜಕೀಯ ಪರಿಸ್ಥಿತಿಗೆ ಅನುಗುಣವಾಗಿ ಪಾಕಿಸ್ತಾನದ ಚಿತ್ರಣ ಕೂಡ ಬದಲಾಗುತ್ತ ಹೋಗುತ್ತದೆ ಎಂಬುದರಲ್ಲಿ ಅನುಮಾನವಿಲ್ಲ. ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದ ಕಾಲದಲ್ಲಿ ತೆರೆಕಂಡ ʼಗದರ್: ಏಕ್ ಪ್ರೇಮ್ ಕಥಾʼ (2001) ಹೆಚ್ಚು ಉಗ್ರವಾದ ರಾಷ್ಟ್ರೀಯತೆಯನ್ನು ಹೊಂದಿತ್ತು ಎಂಬುದು ನಿಮಗೆ ನೆನಪಿರಬಹುದು. ಈ ಚಿತ್ರದಲ್ಲಿ ತಾರಾ ಸಿಂಗ್ ತನ್ನ ಪ್ರಿಯತಮೆ ಸಕೀನಾಳನ್ನು ಹುಡುಕುತ್ತ ಹೊಸದಾಗಿ ರಚನೆಯಾದ ಪಾಕಿಸ್ತಾನಕ್ಕೆ ಹೋಗುತ್ತಾನೆ. ಅಲ್ಲಿ ಆತ ಸಾರ್ವಜನಿಕವಾಗಿ ಮತಾಂತರಗೊಂಡು ಪಾಕಿಸ್ತಾನವನ್ನು ಒಪ್ಪಿಕೊಳ್ಳಬೇಕಾದ ಸಂದಿಗ್ಧ ಸ್ಥಿತಿಗೆ ಒಳಗಾಗುತ್ತಾನೆ. ಅದಕ್ಕೆ ಆತ ಸಿದ್ಧನಿದ್ದರೂ ʼಹಿಂದೂಸ್ತಾನ್ ಮುರ್ದಾಬಾದ್ʼ ಎಂದು ಕೂಗಲು ನಿರಾಕರಿಸುತ್ತಾನೆ. ಆ ಬೇಡಿಕೆಯು ಆತನ ಸಹನೆಯ ಮಿತಿಯನ್ನು ಮೀರಿಸುವಂತೆ ಮಾಡುತ್ತದೆ.
ಇಲ್ಲಿ ನಾವು ಒಂದು ಮುಖ್ಯ ಅಂಶವನ್ನು ಗಮನಿಸಬಹುದು: ಪಾಕಿಸ್ತಾನದ ಅಸ್ತಿತ್ವವು ಕೇವಲ ಅದರ ಭಾರತ ವಿರೋಧಿ ಭಾವನೆಯ ಮೇಲೆ ನಿಂತಿದೆ ಎಂಬ ಕಲ್ಪನೆಯನ್ನು ಇಲ್ಲಿ ಬಿತ್ತಲಾಗಿದೆ. ಇದು ಭಾರತೀಯ ರಾಷ್ಟ್ರೀಯತಾವಾದಕ್ಕೂ ಪಾಕಿಸ್ತಾನವನ್ನು ಒಂದು 'ವಿರೋಧಿ'ಯಾಗಿ ಬಿಂಬಿಸುವುದು ಅಗತ್ಯವಿದೆ ಮತ್ತು ಪಾಕಿಸ್ತಾನವೂ ಕೂಡ ಭಾರತದ ಮೇಲಿನ ದ್ವೇಷದ ಮೇಲೆಯೇ ಅವಲಂಬಿತವಾಗಿದೆ ಎಂಬ ಕಲ್ಪನೆಯನ್ನು ಇದು ಸೂಚಿಸುತ್ತದೆ.
ಆದರೆ ನಂತರದ ಸಿನಿಮಾಗಳಲ್ಲಿ ಸ್ವಲ್ಪ ಮೃದು ಧೋರಣೆ ಕಂಡುಬಂದಿತು. 'ವೀರ್ ಝಾರಾ' (2004) ಚಿತ್ರವು ಹೆಚ್ಚು ಸಮತೋಲನದಿಂದ ಕೂಡಿತ್ತು; ಏಕೆಂದರೆ ಅದು ಒಬ್ಬ ಉದಾರವಾದಿ ಪಾಕಿಸ್ತಾನಿ ಮಹಿಳೆ ಸಹಿಷ್ಣು ಮತ್ತು ಪ್ರಜಾಪ್ರಭುತ್ವವಾದಿ ಭಾರತಕ್ಕೆ ವಲಸೆ ಬರುವ ಚಿತ್ರಣವನ್ನು ತೋರಿಸುತ್ತದೆ.
2014ರ ನಂತರ ಧಾರ್ಮಿಕ ಗುರುತು ಪ್ರಮುಖ ವಿಷಯವಾಯಿತು. 'ರಾಝೀ' ಚಿತ್ರದಲ್ಲಿ, ಕಾಶ್ಮೀರದ ಮುಸ್ಲಿಂ ಮಹಿಳೆಯೊಬ್ಬಳು ಉದ್ದೇಶಪೂರ್ವಕವಾಗಿ ಪಾಕಿಸ್ತಾನದ ಮಿಲಿಟರಿ ಕುಟುಂಬವೊಂದಕ್ಕೆ ಮದುವೆಯಾಗಿ, ತನ್ನ ದೇಶಪ್ರೇಮವನ್ನು ಸಾಬೀತುಪಡಿಸಲು ಆ ಕುಟುಂಬಕ್ಕೆ ದ್ರೋಹ ಬಗೆಯುತ್ತಾಳೆ. ಇಲ್ಲಿ ತನಗೆ ಯಾವುದೇ ಹಾನಿ ಮಾಡದ ವ್ಯಕ್ತಿಗಳ ಸಾವನ್ನು ಕೇವಲ ಅನಿವಾರ್ಯ ಸಾವು ನೋವುಗಳು ಎಂಬಂತೆ ಬಿಂಬಿಸಲಾಗಿದೆ.
ಪಾಕಿಸ್ತಾನದ ಅರಾಜಕತೆ ಮತ್ತು ಅವ್ಯವಸ್ಥೆ
'ಧುರಂಧರ್' ಚಿತ್ರದಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು 'ವ್ಯವಸ್ಥೆ' ಮತ್ತು 'ಅವ್ಯವಸ್ಥೆ'ಯನ್ನು ವ್ಯತಿರಿಕ್ತ ರೂಪಗಳಲ್ಲಿ ಚಿತ್ರಿಸಲಾಗಿದೆ. ಭಾರತವನ್ನು ಹೆಚ್ಚಾಗಿ ಸೂಟು ಧರಿಸಿದ ವ್ಯಕ್ತಿಗಳು ಮೇಜಿನ ಸುತ್ತ ಕುಳಿತು ಕಾರ್ಯಾಚರಣೆಗಳನ್ನು ಯೋಜಿಸುವುದರ ಮೂಲಕ ತೋರಿಸಿದರೆ, ಪಾಕಿಸ್ತಾನವನ್ನು ಉದ್ದ ಕೂದಲು, ಗಡ್ಡ ಬಿಟ್ಟಿರುವ ಮತ್ತು ಸ್ವಯಂಚಾಲಿತ ಶಸ್ತ್ರಾಸ್ತ್ರಗಳನ್ನು ಹಿಡಿದಿರುವ, ಪೊಲೀಸರ ಭಯವೇ ಇಲ್ಲದ ಉಗ್ರಗಾಮಿಗಳ ರೀತಿಯಲ್ಲಿ ತೋರಿಸಲಾಗಿದೆ.
ಚಿತ್ರದಲ್ಲಿನ ಏಕೈಕ ಪ್ರಭಾವಿ ಪೊಲೀಸ್ ಅಧಿಕಾರಿ (ಸಂಜಯ್ ದತ್) ಕೂಡ ಕುರ್ತಾ ಪೈಜಾಮ ಧರಿಸಿ, ಉದ್ದ ಕೂದಲು ಬಿಟ್ಟುಕೊಂಡು ಸಣ್ಣಪುಟ್ಟ ಗ್ಯಾಂಗ್ಸ್ಟರ್ಗಳನ್ನು ಕೊಲ್ಲುತ್ತಿರುತ್ತಾನೆ. ಸಿನಿಮಾ ವಿಪರೀತ ಹಿಂಸಾತ್ಮಕವಾಗಿದ್ದರೂ, ಅದೆಲ್ಲವೂ ಕೇವಲ ಕಲ್ಪಿತ ಎಂಬುದು ಸ್ಪಷ್ಟವಾಗಿ ತಿಳಿಯುತ್ತದೆ. ಯಾವುದೇ ಭಯಾನಕ ಪಾತ್ರವೂ ಆ ನಟನಿಗಿಂತ ದೊಡ್ಡದಾಗಿ ಕಾಣಿಸುವುದಿಲ್ಲ, ಇದರಿಂದಾಗಿ ಪ್ರೇಕ್ಷಕರಲ್ಲಿ ನಿಜವಾದ ಕುತೂಹಲ ಅಥವಾ ರೋಮಾಂಚನ ಉಂಟಾಗುವುದಿಲ್ಲ.
ಒಂದು ವಿಶ್ಲೇಷಣೆ
'ಧುರಂಧರ್' ಚಿತ್ರವು ಪಾಕಿಸ್ತಾನವನ್ನು ಯಾಕೆ ಇಷ್ಟೊಂದು ಕಟುವಾಗಿ ಚಿತ್ರಿಸಿದೆ ಎಂಬುದು ಕೇವಲ ಊಹೆಯ ವಿಷಯ, ಆದರೆ ಇದಕ್ಕೆ ಕೇವಲ ಭಾರತೀಯ ರಾಷ್ಟ್ರೀಯತಾವಾದವೊಂದೇ ಕಾರಣವಲ್ಲ.
ಪಾಕಿಸ್ತಾನವು ಈಗ ಚುನಾಯಿತ ನಾಯಕನ ಆಡಳಿತದಲ್ಲಿಲ್ಲ. ತನ್ನನ್ನು ತಾನು ಧಾರ್ಮಿಕ ಮತಾಂಧ ಎಂದು ಬಿಂಬಿಸಿಕೊಳ್ಳಲು ಯತ್ನಿಸುತ್ತಿರುವ ಒಬ್ಬ ಸರ್ವೋಚ್ಚ ಜನರಲ್ ಅಲ್ಲಿನ ಅರಾಜಕತೆಯ ಚಿತ್ರಣಕ್ಕೆ ಕಾರಣವಾಗಿದ್ದಾನೆ. ಬಹುಶಃ 'ಧುರಂಧರ್' ಸಿನಿಮಾ ಈ ಪರಿಸ್ಥಿತಿಯ ಲಾಭ ಮಾಡಿಕೊಳ್ಳಲು ಯತ್ನಿಸಿರಬಹುದು. ಆದರೆ ಇದು ಭಾರತದ ಒಂದು ವಿಚಿತ್ರ ದೌರ್ಬಲ್ಯವನ್ನೂ ಎತ್ತಿ ತೋರಿಸುತ್ತದೆ—ಭಾರತದ ಒಟ್ಟು ಜಿಡಿಪಿಯ ಕೇವಲ 10% ರಷ್ಟು ಮಾತ್ರ ಆರ್ಥಿಕತೆ ಹೊಂದಿರುವ ನೆರೆಯ ರಾಷ್ಟ್ರವು, ಭಾರತೀಯರ ಕಲ್ಪನೆಯನ್ನು ಎಷ್ಟು ಆವರಿಸಿಕೊಂಡಿದೆ ಎಂದರೆ ಅಂತಹ ಸಿನಿಮಾ ಭರ್ಜರಿ ಯಶಸ್ಸು ಕಾಣುತ್ತದೆ.
ಅಖಂಡ ಭಾರತದ ಕನಸು ಮತ್ತು ವಾಸ್ತವ
ಈ ವಿದ್ಯಮಾನವನ್ನು ನಾವು ಅತ್ಯಂತ ಗಹನವಾಗಿ ತನಿಖೆ ಮಾಡಬೇಕಿದೆ. ಯಾಕೆಂದರೆ ಭಾರತ ಮತ್ತು ಪಾಕಿಸ್ತಾನಗಳು ಕೇವಲ ಭೌಗೋಳಿಕ ರಾಜಕೀಯ ವಿರೋಧಿಗಳಲ್ಲ; ಇಲ್ಲಿ 'ಅಖಂಡ ಭಾರತ' ಎಂಬ ಪವಿತ್ರ ಪರಿಕಲ್ಪನೆಯೂ ಅಡಗಿದೆ. ಹಿಂದೂ ಬಲಪಂಥೀಯರು 'ಅಖಂಡ ಭಾರತ'ದ ಬಗ್ಗೆ ಮಾತನಾಡುವಾಗ ವ್ಯಕ್ತಪಡಿಸುವ ಹಂಬಲದಲ್ಲಿ ಕೇವಲ ಪಾಕಿಸ್ತಾನದ ಭೂಪ್ರದೇಶವನ್ನು ವಶಪಡಿಸಿಕೊಳ್ಳುವ ಆಸೆ ಮಾತ್ರ ಇರುವುದಿಲ್ಲ; ಬದಲಿಗೆ, ತಮ್ಮದೇ ಕೆಲವು ಆಚರಣೆಗಳನ್ನು ಹಂಚಿಕೊಳ್ಳುವ ಜನರೊಂದಿಗೆ ಮತ್ತೆ ಒಂದಾಗುವ ಹಂಬಲವೂ ಅಡಗಿದೆ (ಆದರೆ ಆ ಆಚರಣೆಗಳು ನಿಖರವಾಗಿ ಯಾವುವು ಎಂಬುದು ಸ್ಪಷ್ಟವಾಗಿ ತಿಳಿದಿಲ್ಲ).
ಇಸ್ಲಾಮಿಕ್ ಆಕ್ರಮಣಕಾರರು ಮತ್ತು ರಾಜರು ಅನ್ಯಧರ್ಮೀಯರನ್ನು ಹೊರಗಿಟ್ಟಾಗ, ಅದು ಅಂತಿಮವಾಗಿ ವೈವಿಧ್ಯಮಯ ಆಚರಣೆಗಳ ನಡುವೆ ಒಂದು ಸಂಘಟಿತ 'ಹಿಂದೂ ಧರ್ಮ'ದ ಉದಯಕ್ಕೆ ಕಾರಣವಾಯಿತು. ಅದೇ ರೀತಿ, ಇಂದು ಅನೇಕ ಹಿಂದೂ ರಾಷ್ಟ್ರೀಯತಾವಾದಿಗಳು ಪಾಕಿಸ್ತಾನವನ್ನು 'ಇಸ್ಲಾಂನಿಂದ ದಾರಿ ತಪ್ಪಿದ ತಮ್ಮವರೇ ಆದ ಜನ' ಎಂಬಂತೆ ನೋಡುತ್ತಾರೆ.
ಈ ಅಂಶವು ಭಾರತ ಮತ್ತು ಪಾಕಿಸ್ತಾನದ ನಡುವಿನ ಸಂಬಂಧಕ್ಕೆ ವಿಭಿನ್ನ ಅರ್ಥವನ್ನು ನೀಡುತ್ತದೆ ಮತ್ತು ಪಾಕಿಸ್ತಾನವು ಭಾರತದ 'ವಿರುದ್ಧ ಪ್ರತಿಬಿಂಬ' ಎಂಬ ಭಾವನೆಯನ್ನು ಸಮರ್ಥಿಸುತ್ತದೆ.
ಇಂದು ಪಾಕಿಸ್ತಾನವು ಅತ್ಯಂತ ಅಸ್ಥಿರ ಮತ್ತು ಸಂಘರ್ಷದ ಹಂತದ ಮೂಲಕ ಹಾದುಹೋಗುತ್ತಿರುವುದು 'ಧುರಂಧರ್' ಚಿತ್ರದ ಯಶಸ್ಸನ್ನು ವಿವರಿಸುತ್ತದೆ. ಆ ದೇಶವು ಇನ್ನೂ ರಾಷ್ಟ್ರಪ್ರೇಮ ಅಥವಾ ರಾಷ್ಟ್ರೀಯತೆಯಿಂದ ಸರಿಯಾಗಿ ನಿಯಂತ್ರಿಸಲ್ಪಡದ ಒಂದು 'ಅಶಿಸ್ತಿನ ಗುಂಪು' ಎಂಬುದನ್ನು ಈ ಸಿನಿಮಾ ತನ್ನ ಚಿತ್ರಣದ ಮೂಲಕ ಸಾರುತ್ತದೆ.
ಭಾರತೀಯ ಸಿನಿಮಾಗಳಲ್ಲಿ ಬಾಂಗ್ಲಾದೇಶ
ಇಂದು ನಾವು ಪೂರ್ವದಲ್ಲಿ ಮತ್ತೊಂದು ಆತಂಕಕಾರಿ ಬೆಳವಣಿಗೆಯನ್ನು ಎದುರಿಸುತ್ತಿದ್ದೇವೆ, ಅದುವೇ ಶತ್ರುತ್ವದ ಮುನ್ಸೂಚನೆ ನೀಡುತ್ತಿರುವ ಬಾಂಗ್ಲಾದೇಶ.
ಪಶ್ಚಿಮದ (ಪಾಕಿಸ್ತಾನ) ಗಡಿಯು ಹೊಂದಿರುವಂತಹ ಕಟು ಭಾವನೆಗಳನ್ನು ಇದುವರೆಗೆ ಪೂರ್ವದ ಗಡಿಯು ಹೊಂದಿರಲಿಲ್ಲ. ಇದಕ್ಕೆ ಬಂಗಾಳದ ರಾಜಕೀಯದಲ್ಲಿನ ಎಡಪಂಥೀಯ-ಉದಾರವಾದಿ ಸಿದ್ಧಾಂತಗಳ ಪ್ರಭಾವ ಮತ್ತು ಭಾರತದೊಂದಿಗೆ ಸ್ನೇಹಪರವಾಗಿದ್ದ ಅವಾಮಿ ಲೀಗ್ ಕಾರಣವಾಗಿರಬಹುದು. ಆದರೆ ಈಗ ಆ ದೇಶವು ಭಾರತದೊಂದಿಗೆ ರಾಜಕೀಯವಾಗಿ ಭಿನ್ನಾಭಿಪ್ರಾಯಗಳನ್ನು ಹೊಂದುತ್ತಿರುವ ಕಾರಣದಿಂದ (ಬಿಎನ್ಪಿ ವಿಜಯದ ಹೊರತಾಗಿಯೂ), ಮುಂದಿನ ದಿನಗಳಲ್ಲಿ ಬಾಂಗ್ಲಾದೇಶದ ಬಗ್ಗೆ ಸಿನಿಮಾಗಳಲ್ಲಿ ಎಂತಹ ಕಥೆಗಳು ಅಥವಾ ಪುರಾಣಗಳು ಸೃಷ್ಟಿಯಾಗಬಹುದು ಮತ್ತು ಅದನ್ನು ಸಿನಿಮಾ ಜಗತ್ತು ಹೇಗೆ ನೋಡಬಹುದು ಎಂಬುದು ಕುತೂಹಲಕಾರಿಯಾಗಿದೆ.
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

