
KMF Elections| ನಂದಿನಿ ಸಾಮ್ರಾಜ್ಯದ ಚುಕ್ಕಾಣಿ: ಕೈ ಪಾಳಯದ ತ್ರಿಕೋನ ಪೈಪೋಟಿ!
ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್; ರಾಬಕೋವಿ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್; ಕೋಮುಲ್ ಅಧ್ಯಕ್ಷ ಕೆ.ವೈ. ನಂಜೇಗೌಡ ನಡುವೆ ಪೈಪೋಟಿಯಿದೆ. ಇಲ್ಲಿ ಡಿಕೆಶಿ, ಸಿದ್ದರಾಮಯ್ಯ ಬಣ ರಾಜಕಾರಣವಿದೆ.
ರಾಜ್ಯದ ರೈತರ ಜೀವನಾಡಿ, ದೇಶದ ಎರಡನೇ ಅತಿದೊಡ್ಡ ಹಾಲು ಉತ್ಪಾದನಾ ಒಕ್ಕೂಟವಾಗಿರುವ ಕರ್ನಾಟಕ ಹಾಲು ಮಹಾಮಂಡಳಿ (ಕೆಎಂಎಫ್) ಈಗ ರಾಜಕೀಯ ಚದುರಂಗದಾಟದ ಕೇಂದ್ರ ಬಿಂದುವಾಗಿದೆ. ಮಾ.6ರಂದು ನಿಗದಿಯಾಗಿದ್ದ ಕೆಎಂಎಫ್ ಅಧ್ಯಕ್ಷ ಸ್ಥಾನದ ಚುನಾವಣೆ ಮುಂದೂಡಿಕೆಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಹತ್ತಾರು ಚರ್ಚೆಗಳಿಗೆ ದಾರಿ ಮಾಡಿಕೊಟ್ಟಿದೆ.
ಬಜೆಟ್ ಮಂಡನೆಯ ಕಾರಣ ನೀಡಿ ಚುನಾವಣೆ ಮುಂದೂಡಲಾಗಿದ್ದರೂ, ಇದರ ಹಿಂದೆ ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗಿನ ಆಂತರಿಕ ಪೈಪೋಟಿ ಮತ್ತು ಬಣ ರಾಜಕೀಯದ ಪ್ರಭಾವ ಇದೆ ಎಂಬ ಮಾತುಗಳು ಕೇಳಿಬಂದಿವೆ.
ಈ ತಿಂಗಳ (ಮಾರ್ಚ್) ಅಂತ್ಯದ ವೇಳೆಗೆ ಕೆಎಂಎಫ್ ಚುನಾವಣೆ ನಡೆಸಲು ಸರ್ಕಾರ ಸಜ್ಜಾಗಿದೆ. ಆದರೆ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಸಹೋದರ ಹಾಗೂ ಬಮುಲ್ ಅಧ್ಯಕ್ಷ ಡಿ.ಕೆ. ಸುರೇಶ್; ಶಾಸಕ ಮತ್ತು ಕೊಪ್ಪಳ, ಬಳ್ಳಾರಿ ಹಾಗೂ ರಾಯಚೂರು ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ್; ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ. ನಂಜೇಗೌಡ ನಡುವೆ ತೀವ್ರ ಪೈಪೋಟಿ ಏರ್ಪಟ್ಟಿದೆ. ಕಾಂಗ್ರೆಸ್‌ನಲ್ಲಿಯೇ ತ್ರಿಕೋನ ಸ್ಪರ್ಧೆಯ ಜಿದ್ದಾಜಿದ್ದಿ ಉಂಟಾಗಿರುವುದು ರಾಜಕೀಯ ವಲಯದಲ್ಲಿ ತೀವ್ರ ಕುತೂಹಲ ಮೂಡಿಸಿದೆ.
ಬಜೆಟ್ ಮಂಡನೆ, ಅಧಿವೇಶನದ ಹಿನ್ನೆಲೆಯಲ್ಲಿ ಶಾಸಕರು ಹಾಗೂ ಸಚಿವರು ಕಾರ್ಯಮಗ್ನರಾಗಿರುವ ಕಾರಣ ನೀಡಿ ಚುನಾವಣೆಯನ್ನು ಮುಂದೂಡಲಾಗಿದೆ. ಆದರೆ, ರಾಜಕೀಯ ಮೂಲಗಳ ಪ್ರಕಾರ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ನಡುವಿನ ಪೈಪೋಟಿಯನ್ನು ಸದ್ಯಕ್ಕೆ ತಣ್ಣಗಾಗಿಸಲು ಹಾಗೂ ಸರ್ವಸಮ್ಮತ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಕಾಲಾವಕಾಶ ಪಡೆಯುವ ಉದ್ದೇಶದಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎನ್ನಲಾಗುತ್ತಿದೆ. ಮಾರ್ಚ್ ತಿಂಗಳ ಅಂತ್ಯದೊಳಗೆ ಹೊಸ ದಿನಾಂಕ ನಿಗದಿಯಾಗುವ ಸಾಧ್ಯತೆಯಿದೆ ಎಂದು ಮೂಲಗಳು ಹೇಳಿವೆ. ಕಾಂಗ್ರೆಸ್‌ನಲ್ಲಿಯೇ ತ್ರಿಕೋನ ಸ್ಪರ್ಧೆ ಏರ್ಪಟ್ಟಿದೆಯಾದರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಣ ನಡುವಿನ ಕಾದಾಟ ಎಂದೇ ಬಿಂಬಿಸಲಾಗಿದೆ.
ಪ್ರತಿಷ್ಠೆಯ ಪ್ರಶ್ನೆಯಾದ ಚುನಾವಣೆ
ಕೆಎಂಎಫ್ ಕೇವಲ ಒಂದು ಹಾಲಿನ ಸಂಸ್ಥೆಯಲ್ಲ, ಇದು ರಾಜ್ಯದ ಸುಮಾರು 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರನ್ನು ಒಳಗೊಂಡಿರುವ ಬೃಹತ್ ವ್ಯಾಪ್ತಿಯನ್ನು ಹೊಂದಿದೆ. 16 ಜಿಲ್ಲಾ ಹಾಲು ಒಕ್ಕೂಟಗಳನ್ನು ಹೊಂದಿರುವ ಈ ಸಂಸ್ಥೆಯ ವಾರ್ಷಿಕ ವಹಿವಾಟು 25 ಸಾವಿರ ಕೋಟಿ ರೂ.ಗಳಿಗೂ ಅಧಿಕವಾಗಿದೆ. ಇಲ್ಲಿ ಅಧ್ಯಕ್ಷರಾದವರಿಗೆ ರಾಜ್ಯಾದ್ಯಂತ ರೈತರ ಮೇಲೆ ಪ್ರಭಾವ ಬೀರುವ ಅವಕಾಶ ಸಿಗುತ್ತದೆ. ರಾಜಕೀಯವಾಗಿ ಹೇಳುವುದಾದರೆ, ಕೆಎಂಎಫ್ ಮೇಲೆ ಹಿಡಿತ ಸಾಧಿಸುವುದು ಎಂದರೆ ಗ್ರಾಮೀಣ ಮತಬ್ಯಾಂಕ್ ಮೇಲೆ ಹಿಡಿತ ಸಾಧಿಸಿದಂತಾಗುತ್ತದೆ. ಹೀಗಾಗಿಯೇ ಆಡಳಿತಾರೂಢ ಕಾಂಗ್ರೆಸ್ ಪಕ್ಷಕ್ಕೆ ಈ ಸ್ಥಾನವನ್ನು ತನ್ನವರ ಬಳಿಯೇ ಉಳಿಸಿಕೊಳ್ಳುವುದು ಪ್ರತಿಷ್ಠೆಯ ಪ್ರಶ್ನೆಯಾಗಿದೆ.
ಬೆಂಗಳೂರು ಹಾಲು ಒಕ್ಕೂಟದ (ಬಮೂಲ್) ಅಧ್ಯಕ್ಷ ಡಿ.ಕೆ. ಸುರೇಶ್ ಕೆಎಂಎಫ್ ಚುಕ್ಕಾಣಿ ಹಿಡಿಯಲು ಅತ್ಯಂತ ಪ್ರಬಲ ಆಕಾಂಕ್ಷಿಯಾಗಿದ್ದಾರೆ. ಹಳೆ ಮೈಸೂರು ಭಾಗದ ಒಕ್ಕೂಟಗಳ ಬೆಂಬಲವಿದೆ ಎನ್ನಲಾಗಿದೆ. ಸಂಸದರಾಗಿ ಕಾರ್ಯನಿರ್ವಹಿಸಿದ ಅನುಭವ ಹಾಗೂ ಸಂಘಟನಾ ಚಾತುರ್ಯ ಹೊಂದಿರುವ ಸುರೇಶ್ ಕೆಎಂಎಫ್‌ಗೆ ರಾಷ್ಟ್ರೀಯ ಮಟ್ಟದಲ್ಲಿ ಹೊಸ ವೇಗ ನೀಡುವ ಹಂಬಲ ಹೊಂದಿದ್ದಾರೆ. ಡಿ.ಕೆ. ಶಿವಕುಮಾರ್ ಬಣ ಇವರ ಪರವಾಗಿ ಗಟ್ಟಿಯಾಗಿ ನಿಂತಿದೆ. ಕೊಪ್ಪಳ, ಬಳ್ಳಾರಿ ಮತ್ತು ರಾಯಚೂರು ಹಾಲು ಒಕ್ಕೂಟದ ಅಧ್ಯಕ್ಷ ರಾಘವೇಂದ್ರ ಹಿಟ್ನಾಳ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಉತ್ತರ ಕರ್ನಾಟಕ ಭಾಗಕ್ಕೆ ಕೆಎಂಎಫ್ ಅಧ್ಯಕ್ಷ ಸ್ಥಾನ ನೀಡಬೇಕು ಎಂಬ ಬೇಡಿಕೆಯನ್ನು ಇವರು ಮುಂದಿಟ್ಟಿದ್ದಾರೆ.
ಕಳೆದ ಹಲವು ವರ್ಷಗಳಿಂದ ಕೆಎಂಎಫ್ ಅಧ್ಯಕ್ಷ ಸ್ಥಾನ ಹಳೆ ಮೈಸೂರು ಭಾಗದ ನಾಯಕರ ಪಾಲಾಗುತ್ತಿದೆ. ಈ ಬಾರಿ ಉತ್ತರ ಕರ್ನಾಟಕದವರಿಗೆ ನ್ಯಾಯ ಸಿಗಬೇಕು ಎಂಬುದು ಇವರ ವಾದ. ಸಿದ್ದರಾಮಯ್ಯ ಬೆಂಬಲ ಇವರಿಗೆ ಶ್ರೀರಕ್ಷೆಯಾಗಿದೆ. ಇನ್ನು, ಕೋಲಾರ-ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ (ಕೋಮುಲ್) ಅಧ್ಯಕ್ಷ ಕೆ.ವೈ. ನಂಜೇಗೌಡ ಸಹ ರೇಸ್‌ನಲ್ಲಿದ್ದಾರೆ. ಕೋಲಾರ ಜಿಲ್ಲೆಯು ಹೈನುಗಾರಿಕೆಯಲ್ಲಿ ಅಗ್ರಸ್ಥಾನದಲ್ಲಿದೆ. ಹೀಗಾಗಿ ಹೆಚ್ಚು ಹಾಲು ಉತ್ಪಾದಿಸುವ ಜಿಲ್ಲೆಯ ನಾಯಕನಿಗೆ ಕೆಎಂಎಫ್ ಅಧ್ಯಕ್ಷ ಸ್ಥಾನ ಸಿಗಬೇಕು ಎಂಬುದು ಇವರ ಬೆಂಬಲಿಗರ ಒತ್ತಾಯವಾಗಿದೆ.
ಕಾಂಗ್ರೆಸ್ ಮುಖಂಡರಿಗೆ ತಲೆನೋವಾದ ಪೈಪೋಟಿ
ಕಾಂಗ್ರೆಸ್ ಪಕ್ಷಕ್ಕೆ ಈ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕು ಎಂಬುದು ದೊಡ್ಡ ಸಂದಿಗ್ಧತೆಯಾಗಿದೆ. ಸ್ಥಳೀಯ ಸಂಸ್ಥೆಗಳ ಸಮೀಪಿಸುತ್ತಿರುವ ಹೊತ್ತಿನಲ್ಲಿ ದರ್ಭದಲ್ಲಿ ಯಾವುದೇ ಒಂದು ಬಣವನ್ನು ಅಸಮಾಧಾನಗೊಳಿಸುವುದು ಪಕ್ಷಕ್ಕೆ ಅಪಾಯಕಾರಿ ಎಂಬ ಮಾತುಗಳು ಕೇಳಿಬಂದಿವೆ. ಡಿ.ಕೆ. ಸುರೇಶ್ ಅವರಿಗೆ ಸ್ಥಾನ ನೀಡಿದರೆ ಮುಖ್ಯಮಂತ್ರಿ ಬಣ ಅಸಮಾಧಾನಗೊಳ್ಳಬಹುದು. ಹಿಟ್ನಾಳ ಅವರಿಗೆ ನೀಡಿದರೆ ಹಳೆ ಮೈಸೂರು ಭಾಗದ ಪ್ರಬಲ ನಾಯಕರು ಮುನಿಸಿಕೊಳ್ಳಬಹುದು. ನಂಜೇಗೌಡ ಅವರಿಗೆ ನೀಡಿದರೆ ಉತ್ತರ ಕರ್ನಾಟಕ ಭಾಗದವರು ಬೇಸರ ವ್ಯಕ್ತಪಡಿಸುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಸಮನ್ವಯ ಸಮಿತಿ ಮೂಲಕ ಸಂಧಾನ ನಡೆಸಲು ಪಕ್ಷದ ನಾಯಕರು ಮುಂದಾಗಿದ್ದಾರೆ ಎಂದು ಮೂಲಗಳು ಹೇಳಿವೆ.
21 ಮತಗಳಲ್ಲಿ 11 ಮತಗಳ ಅಗತ್ಯ
ರಾಜ್ಯದಲ್ಲಿ ಅಧಿಕೃತವಾಗಿ 16 ಜಿಲ್ಲಾ ಹಾಲು ಒಕ್ಕೂಟಗಳಿವೆ. ಈ 16 ಒಕ್ಕೂಟಗಳ ಅಧ್ಯಕ್ಷರು ಕೆಎಂಎಫ್ ಆಡಳಿತ ಮಂಡಳಿಯ ನಿರ್ದೇಶಕರಾಗಿರುತ್ತಾರೆ ಮತ್ತು ಅವರಿಗೆ ಮತದಾನದ ಹಕ್ಕಿದೆ. ಇದರೊಂದಿಗೆ ರಾಜ್ಯ ಸರ್ಕಾರವು ಹೈನುಗಾರಿಕೆ ಅಥವಾ ಸಹಕಾರ ಕ್ಷೇತ್ರದಲ್ಲಿ ಅನುಭವವಿರುವ ಮೂವರು ವ್ಯಕ್ತಿಗಳನ್ನು ಕೆಎಂಎಫ್ ನಿರ್ದೇಶಕರನ್ನಾಗಿ ನಾಮನಿರ್ದೇಶನ ಮಾಡುತ್ತದೆ. ಇವರಿಗೆ ಅಧ್ಯಕ್ಷರ ಚುನಾವಣೆಯಲ್ಲಿ ಮತ ಹಾಕುವ ಸಂಪೂರ್ಣ ಹಕ್ಕಿರುತ್ತದೆ. ಸಹಕಾರ ಇಲಾಖೆಯ ಮುಖ್ಯಸ್ಥರು ಅಥವಾ ಅವರ ಪರವಾಗಿ ನಿಯೋಜಿತರಾದ ಅಧಿಕಾರಿ ಒಂದು ಮತ ಹೊಂದಿರುತ್ತಾರೆ. ಪಶುಸಂಗೋಪನಾ ಇಲಾಖೆಯ ಕಾರ್ಯದರ್ಶಿ ಅಥವಾ ಅವರ ಪ್ರತಿನಿಧಿ ಒಂದು ಮತದ ಹಕ್ಕು ಹೊಂದಿರುತ್ತಾರೆ.
ಕೆಎಂಎಫ್ ಚುನಾವಣೆಯಲ್ಲಿ 5 ಮತಗಳು ಸಂದಿಗ್ಧ ಪರಿಸ್ಥಿತಿಯ ನಿರ್ಣಾಯಕ ಮತಗಳಾಗಿ ಕೆಲಸ ಮಾಡುತ್ತವೆ. 16 ಜಿಲ್ಲಾ ಒಕ್ಕೂಟಗಳ ಅಧ್ಯಕ್ಷರಲ್ಲಿ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಬೆಂಬಲಿತರು ಇರುತ್ತಾರೆ. ಇವರ ನಡುವೆ ಪೈಪೋಟಿ ಏರ್ಪಟ್ಟು ಮತಗಳು ಸಮನಾಗಿ ಹಂಚಿಕೆಯಾದಾಗ ಸರ್ಕಾರದ ಈ 5 ಮತಗಳು ಯಾರ ಪರವಾಗಿ ಬೀಳುತ್ತವೆಯೋ ಅವರೇ ಅಧ್ಯಕ್ಷರಾಗುತ್ತಾರೆ. ಸಾಮಾನ್ಯವಾಗಿ ಸರ್ಕಾರಿ ನಾಮನಿರ್ದೇಶಿತ ಸದಸ್ಯರು ಮತ್ತು ಅಧಿಕಾರಿಗಳು ಮುಖ್ಯಮಂತ್ರಿ ಅಥವಾ ಸಹಕಾರ ಸಚಿವರ ಸೂಚನೆಯಂತೆ ಮತ ಹಾಕುತ್ತಾರೆ. ಹೀಗಾಗಿ, ರಾಜ್ಯದಲ್ಲಿ ಯಾವ ಪಕ್ಷದ ಸರ್ಕಾರವಿರುತ್ತದೆಯೋ ಆ ಪಕ್ಷದ ಬೆಂಬಲಿತ ಅಭ್ಯರ್ಥಿ ಕೆಎಂಎಫ್ ಅಧ್ಯಕ್ಷರಾಗುವುದು ಸುಲಭವಾಗುತ್ತದೆ. ಆದರೆ, ಕಣಕ್ಕಿಳಿಯುವ ಮೂವರು ಸಹ ಆಡಳಿತ ಪಕ್ಷದ ಸದಸ್ಯರೇ ಆಗಿರುವುದರಿಂದ ಸಂದಿಗ್ಧಿತ ಪರಿಸ್ಥಿತಿ ಎದುರಾದರೆ ಯಾರ ಪರವಾಗಿ ಮತಗಳು ಬೀಳುತ್ತವೆ ಎಂಬುದು ಕೂತುಹಲ ಮೂಡಿಸಿದೆ.

