
ಕೆಎಂಎಫ್‌ಗೆ ಸರ್ಕಾರದ ಬೂಸ್ಟರ್ ಡೋಸ್: ಸರ್ಕಾರಿ ಕಾರ್ಯಕ್ರಮಗಳಲ್ಲಿ ಇನ್ಮುಂದೆ 'ನಂದಿನಿ' ಉತ್ಪನ್ನಗಳೇ ಕಡ್ಡಾಯ!
ರಾಜ್ಯದ ಹೆಮ್ಮೆಯ ಬ್ರಾಂಡ್ 'ನಂದಿನಿ'ಯನ್ನು ಜಾಗತಿಕ ಮಟ್ಟಕ್ಕೆ ಕೊಂಡೊಯ್ಯಲು ಮತ್ತು ಹೈನುಗಾರಿಕೆ ನಂಬಿರುವ ಲಕ್ಷಾಂತರ ರೈತರ ಬಾಳಿಗೆ ಆಸರೆಯಾಗಲು ರಾಜ್ಯ ಸರ್ಕಾರವು ಐತಿಹಾಸಿಕ ತೀರ್ಮಾನ ಕೈಗೊಂಡಿದೆ.
ಖಾದಿ ನೇಯುವ ನೇಕಾರರನ್ನು ಪ್ರೋತ್ಸಾಹಿಸಲು ಸರ್ಕಾರಿ ಸಿಬ್ಬಂದಿಗೆ ತಿಂಗಳಿಗೊಮ್ಮೆ ಕಡ್ಡಾಯವಾಗಿ ಖಾದಿ ಬಟ್ಟೆ ಧರಿಸುವಂತೆ ಸೂಚಿಸಿದ್ದ ರಾಜ್ಯ ಸರ್ಕಾರ, ಇದೀಗ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬಾಗಿರುವ ಹೈನುಗಾರಿಕೆ ಹಾಗೂ ಸ್ಥಳೀಯ ರೈತರ ಹಿತ ಕಾಯಲು ಮತ್ತೊಂದು ಮಹತ್ವದ ಹೆಜ್ಜೆಯನ್ನಿಟ್ಟಿದೆ.
ಕರ್ನಾಟಕ ಹಾಲು ಮಹಾಮಂಡಳಿಯನ್ನು (KMF) ಬಲಪಡಿಸುವ ಮತ್ತು ಖಾಸಗಿ ಕಂಪನಿಗಳ ಪೈಪೋಟಿಯಿಂದ ರಕ್ಷಿಸುವ ನಿಟ್ಟಿನಲ್ಲಿ, ಮುಖ್ಯಮಂತ್ರಿಗಳು ಹಾಗೂ ಸಚಿವರ ಸಭೆಗಳು ಸೇರಿದಂತೆ ರಾಜ್ಯ ಸರ್ಕಾರದ ವತಿಯಿಂದ ನಡೆಯುವ ಎಲ್ಲಾ ಅಧಿಕೃತ ಸಭೆ, ಸಮಾರಂಭ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಕೇವಲ 'ನಂದಿನಿ' ಬ್ರಾಂಡ್‌ನ ಉತ್ಪನ್ನಗಳನ್ನು ಮಾತ್ರ ಬಳಸುವುದು ಕಡ್ಡಾಯ ಎಂದು ಕಟ್ಟುನಿಟ್ಟಿನ ಆದೇಶ ಹೊರಡಿಸಲಾಗಿದೆ.
ಬಮೂಲ್ ಅಧ್ಯಕ್ಷ ಡಿ.ಕೆ ಸುರೇಶ್ ಅವರು ಈ ಮಾಹಿತಿಯನ್ನು ಎಕ್ಸ್ಫೋಸ್ಟ್ ಮಾಡುವ ಈ ಮಾಹಿತಿಯನ್ನು ಪ್ರಕಟಿಸಿದ್ದಾರೆ. ಆದರೆ ಕೆಎಂಎಫ್ (ಕರ್ನಾಟಕ ಹಾಲು ಉತ್ಪಾದಕರ ಮಹಾ ಮಂಡಲ)ದ ಸಾಮಾಜಿಕ ಜಾಲತಾಣಗಳಲ್ಲಿ ಇಂಥ ಯಾವುದೇ ಮಾಹಿತಿ ಶೇರ್ ಆಗಿಲ್ಲ.
ಖಾಸಗಿ ಬೇಕರಿ ಸಿಹಿ, ಪ್ಲಾಸ್ಟಿಕ್ ಮಿನರಲ್ ವಾಟರ್‌ಗೆ ಬ್ರೇಕ್
ಈ ಆದೇಶದ ಅನ್ವಯ, ಇನ್ಮುಂದೆ ಸರ್ಕಾರಿ ಸಭೆಗಳಲ್ಲಿ ಖಾಸಗಿ ಬೇಕರಿಗಳ ಸಿಹಿ ತಿಂಡಿಗಳ ಬದಲು ಕಡ್ಡಾಯವಾಗಿ ನಂದಿನಿಯ ಜನಪ್ರಿಯ ಪೇಡಾ, ಮೈಸೂರು ಪಾಕ್ ಮತ್ತು ಇತರ ಸಿಹಿತಿಂಡಿಗಳನ್ನು ಮಾತ್ರ ನೀಡಬೇಕು. ಅತಿಥಿಗಳಿಗೆ ಸತ್ಕರಿಸಲು ಬಳಸುವ ಮಜ್ಜಿಗೆ, ಮೊಸರು ಮತ್ತು ಫ್ಲೇವರ್ಡ್ ಮಿಲ್ಕ್ ಕೂಡ ನಂದಿನಿ ಬ್ರಾಂಡ್‌ನದ್ದೇ ಆಗಿರಬೇಕು.
ಇಷ್ಟು ದಿನ ಮಾರುಕಟ್ಟೆಯಲ್ಲಿ ಲಭ್ಯವಿದ್ದ ವಿವಿಧ ಖಾಸಗಿ ಕಂಪನಿಗಳ ಪ್ಲಾಸ್ಟಿಕ್ ಮಿನರಲ್ ವಾಟರ್ ಬಾಟಲಿಗಳಿಗೂ ಬ್ರೇಕ್ ಬಿದ್ದಿದ್ದು, ಇನ್ಮುಂದೆ ಪರಿಸರ ಸ್ನೇಹಿ ಪರ್ಯಾಯಗಳನ್ನು ಮಾತ್ರ ಬಳಸಬೇಕು ಎಂದು ಸೂಚಿಸಲಾಗಿದೆ. ಒಟ್ಟಾರೆಯಾಗಿ ಸರ್ಕಾರಿ ಅನುದಾನದಡಿ ನಡೆಯುವ ಯಾವುದೇ ಕಾರ್ಯಕ್ರಮಗಳಲ್ಲಿ ಖಾಸಗಿ ಡೈರಿ ಉತ್ಪನ್ನಗಳ ಬಳಕೆಯನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ.
25 ಲಕ್ಷ ರೈತರಿಗೆ ನೇರ ಲಾಭ, 'ವೋಕಲ್ ಫಾರ್ ಲೋಕಲ್' ಮಂತ್ರ
ರಾಜ್ಯದ ಹೈನುಗಾರಿಕೆಯನ್ನು ಉಳಿಸಿ ಬೆಳೆಸುವುದು ಈ ಆದೇಶದ ಹಿಂದಿರುವ ಪ್ರಮುಖ ಉದ್ದೇಶವಾಗಿದೆ. ಕೆಎಂಎಫ್ ಲಾಭದಾಯಕವಾಗಿ ನಡೆದರೆ ಅದರ ನೇರ ಪ್ರಯೋಜನ ರಾಜ್ಯದ 25 ಲಕ್ಷಕ್ಕೂ ಹೆಚ್ಚು ಹಾಲು ಉತ್ಪಾದಕ ರೈತರಿಗೆ ತಲುಪುತ್ತದೆ. ಸರ್ಕಾರಿ ಮಟ್ಟದಲ್ಲಿಯೇ ಉತ್ಪನ್ನಗಳಿಗೆ ಭಾರಿ ಬೇಡಿಕೆ ಸೃಷ್ಟಿಯಾಗುವುದರಿಂದ ರೈತರಿಂದ ಸಂಗ್ರಹಿಸುವ ಹಾಲಿಗೆ ಸ್ಥಿರವಾದ ಮಾರುಕಟ್ಟೆ ಸಿಗಲಿದೆ. ಅಮುಲ್‌ನಂತಹ ಹೊರರಾಜ್ಯದ ಬ್ರಾಂಡ್‌ಗಳು ಮತ್ತು ಖಾಸಗಿ ಕಂಪನಿಗಳು ತೀವ್ರ ಪೈಪೋಟಿ ನೀಡುತ್ತಿರುವಾಗ, ಸರ್ಕಾರವೇ ತನ್ನ ಸ್ವಂತ ಬ್ರಾಂಡ್ ಅನ್ನು ಕಡ್ಡಾಯಗೊಳಿಸಿ ಪ್ರೋತ್ಸಾಹಿಸುವ ಮೂಲಕ 'ಸ್ಥಳೀಯ ಉತ್ಪನ್ನಗಳಿಗೆ ದನಿ' (Vocal for Local) ನೀಡುವ ಕೆಲಸ ಮಾಡುತ್ತಿದೆ.
ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಕೆಎಂಎಫ್‌ಗೆ ಬಲ
ಇತ್ತೀಚೆಗಷ್ಟೇ ನಂದಿನಿ ಉತ್ಪನ್ನಗಳು ಅಂತರಾಷ್ಟ್ರೀಯ ಕ್ರಿಕೆಟ್ ಟೂರ್ನಿಗಳ ಪ್ರಾಯೋಜಕತ್ವದ ಮೂಲಕ ವಿದೇಶಿ ಮಾರುಕಟ್ಟೆಗಳಲ್ಲೂ ಭಾರಿ ಮನ್ನಣೆ ಗಳಿಸುತ್ತಿವೆ. ಈ ಬೆನ್ನಲ್ಲೇ ರಾಜ್ಯ ಸರ್ಕಾರವು ಆಡಳಿತಾತ್ಮಕ ಮಟ್ಟದಲ್ಲಿ ಈ ಮಹತ್ವದ ಆದೇಶ ಹೊರಡಿಸಿರುವುದು ಕೆಎಂಎಫ್‌ನ ಆತ್ಮವಿಶ್ವಾಸವನ್ನು ಮತ್ತಷ್ಟು ಹೆಚ್ಚಿಸಿದೆ. ಖಾಸಗೀಕರಣದ ಭರಾಟೆಯ ನಡುವೆ ರೈತರ ಪರವಾಗಿ ನಿಂತಿರುವ ಸರ್ಕಾರದ ಈ ನಡೆ ಸಾರ್ವಜನಿಕ ವಲಯದಲ್ಲೂ ವ್ಯಾಪಕ ಮೆಚ್ಚುಗೆಗೆ ಪಾತ್ರವಾಗಿದೆ.

