KMF Elections| ಸಿಎಂ, ಡಿಸಿಎಂ ಬಣ ಪ್ರತಿಷ್ಠೆ ; ಕೆಎಂಎಫ್‌  ಹಿಡಿತಕ್ಕೆ ʼಕೈʼಕಾಳಗ
x

KMF Elections| ಸಿಎಂ, ಡಿಸಿಎಂ ಬಣ ಪ್ರತಿಷ್ಠೆ ; ಕೆಎಂಎಫ್‌ ಹಿಡಿತಕ್ಕೆ ʼಕೈʼಕಾಳಗ

ತ್ರಿಕೋನ ಕಾಳಗದ ನಡುವೆ ಹಾಲಿನ ಚುನಾವಣೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ. ಸಹಕಾರ ರಂಗದ ಮೇಲೆ ಯಾರು ಹಿಡಿತ ಸಾಧಿಸಲಿದ್ದಾರೆ ಎಂಬುದನ್ನು ಕಾದು ನೋಡಬೇಕಿದೆ.


ರಾಜ್ಯ ರಾಜಕೀಯದಲ್ಲಿ ಮುಖ್ಯಮಂತ್ರಿ ಕುರ್ಚಿಗಾಗಿ ನಡೆಯುತ್ತಿರುವ ಗುದ್ದಾಟಗಳ ನಡುವೆಯೇ ಈಗ "ಕರ್ನಾಟಕ ಹಾಲು ಮಹಾಮಂಡಳ"ದ (ಕೆಎಂಎಫ್‌) ಅಧ್ಯಕ್ಷ ಸ್ಥಾನಕ್ಕಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್‌ ಅವರ ನಡುವೆ ಮತ್ತೊಂದು ಸುತ್ತಿನ ಕಾಳಗ ನಡೆಯಲು ಕಣ ಸಜ್ಜಾಗಿದೆ.

ತನಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡಬೇಕೆಂದು ಪಟ್ಟು ಹಿಡಿದಿರುವ ಡಿ.ಕೆ.ಶಿವಕುಮಾರ್‌, ತಮ್ಮ ಸಹೋದರ ಡಿ.ಕೆ. ಸುರೇಶ್‌ ಅವರಿಗೆ ಕೆಎಂಎಫ್‌ ಅಧ್ಯಕ್ಷ ಸ್ಥಾನ ಕೊಡಿಸಲು ತೆರೆಮರೆಯ ಕಸರತ್ತು ಆರಂಭಿಸಿದ್ದಾರೆ. ಈಗಾಗಲೇ ಬೆಂಗಳೂರು ಹಾಲು ಒಕ್ಕೂಟ- ಬಮೂಲ್‌(Bengaluru Cooperative Milk Union Ltd) ಅಧ್ಯಕ್ಷರಾಗಿರುವ ಡಿ.ಕೆ. ಸುರೇಶ್‌ ಅವರು ಕೆಎಂಎಫ್‌ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿದ್ದಾರೆ. ಇನ್ನೊಂದೆಡೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಮ್ಮ ಆಪ್ತರಿಗೆ ಕೆಎಂಎಫ್‌ ಖುರ್ಚಿ ನೀಡಲು ಹರಸಾಹಸ ಪಡುತ್ತಿದ್ದಾರೆ. ಹೀಗಾಗಿ ಕೈಪಾಳಯದಲ್ಲೇ ಕಾಳಗ ನಡೆಯುವ ಮೂಲಕ ಚುನಾವಣೆ ಸಾಕಷ್ಟು ಕುತೂಹಲಗಳಿಗೆ ಕಾರಣವಾಗಿದೆ.

ಕೆಎಂಎಫ್‌ ಮೇಲೆ ಹಿಡಿತ ಸಾಧಿಸುವ ಉದ್ದೇಶದಿಂದ ಡಿ.ಕೆ. ಶಿವಕುಮಾರ್‌ ಅವರು ಸಹೋದರನನ್ನು ಅಖಾಡಕ್ಕೆ ಇಳಿಸಿ, ಬಮೂಲ್‌ ಅಧ್ಯಕ್ಷರನ್ನಾಗಿ ಮಾಡಿದ್ದರು. ‌ಜಿಲ್ಲಾ ಒಕ್ಕೂಟದಿಂದ ಮಹಾಒಕ್ಕೂಟಕ್ಕೆ ಕಳುಹಿಸುವ ಶಿವಕುಮಾರ್‌ ರಣತಂತ್ರ ಅರಿತ ಸಿಎಂ ಸಿದ್ದರಾಮಯ್ಯ ಅವರು ಠಕ್ಕರ್‌ ನೀಡಲೆಂದೇ ರಾಬಕೊವಿ (ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ) ಅಧ್ಯಕ್ಷ ಸ್ಥಾನಕ್ಕೆ ರಾಘವೇಂದ್ರ ಹಿಟ್ನಾಳ್‌ ಅವರನ್ನು ಅವಿರೋಧವಾಗಿ ಆಯ್ಕೆಯಾಗುವಂತೆ ನೋಡಿಕೊಂಡಿದ್ದರು. ಹೀಗಿರುವಾಗ ಕೆಎಂಎಫ್‌ ಅಧ್ಯಕ್ಷ ಸ್ಥಾನಕ್ಕಾಗಿ ಸಿಎಂ ಹಾಗೂ ಡಿಸಿಎಂ ನಡುವಿನ ಹೋರಾಟಗಳು ಕಾಂಗ್ರೆಸ್‌ ಪಾಳಯದಲ್ಲಿ ಮತ್ತೊಂದು ಸುತ್ತಿನ ಬಿರುಕಿಗೂ ಕಾರಣವಾಗಬಹುದು. ಇಬ್ಬರು ನಾಯಕರ ಬೆಂಗಲಿಗರ ನಡುವೆ ಈ ಚುನಾವಣೆ ಪ್ರತಿಷ್ಠೆಯ ಕಣವೂ ಆಗಿದೆ.

ಯಾರ್ಯಾರಿದ್ದಾರೆ ರೇಸ್‌ನಲ್ಲಿ?

ಅಧ್ಯಕ್ಷ ಸ್ಥಾನಕ್ಕಾಗಿ ಸಿದ್ದರಾಮಯ್ಯ ಅವರ ಬಳಿ ಇಬ್ಬರು ಅಭ್ಯರ್ಥಿಗಳಿದ್ದರೆ, ಡಿ.ಕೆ.ಶಿವಕುಮಾರ್‌ ಬಳಿ ಒಬ್ಬರಿದ್ದಾರೆ. ಈ ಹಿಂದೆಯು ಸಹ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ ಭೀಮಾ ನಾಯ್ಕ್ ಅಧ್ಯಕ್ಷರಾಗಿದ್ದರು. ಈ ಬಾರಿಯೂ ತಮ್ಮ ಬಣಕ್ಕೆ ಅಧ್ಯಕ್ಷ ಸ್ಥಾನ ಸಿಗುವಂತೆ ಸಿದ್ದರಾಮಯ್ಯ ಯೋಜನೆ ರೂಪಿಸಿಕೊಂಡಿದ್ದು, ರಾಘವೇಂದ್ರ ಹಿಟ್ನಾಳ್ ಮತ್ತು ಕೆ.ವೈ. ನಂಜೇಗೌಡ ಹೆಸರು ಮುನ್ನಲೆಗೆ ತಂದಿದ್ದಾರೆ. ಆದರೆ ತಮ್ಮ ಸಹೋದರ ಡಿಕೆ ಸುರೇಶ್‌ಗೆ ಅಧ್ಯಕ್ಷ ಸ್ಥಾನ ಕೊಡಿಸುವ ನಿಟ್ಟಿನಲ್ಲಿ ಡಿಕೆ ಶಿವಕುಮಾರ್ ಸಹ ಕಾರ್ಯತಂತ್ರಗಳನ್ನು ಎಣೆಯುತ್ತಿದ್ದಾರೆ.

ಡಿ.ಕೆ.ಸುರೇಶ್‌ಗೆ ಯಾಕೆ?

ಕಳೆದ ಲೋಕಸಭಾ ಚುನಾವಣೆಯಲ್ಲಿ ಸೋಲುಕಂಡಿರುವ ಡಿ.ಕೆ.ಸುರೇಶ್‌, ಕನಕಪುರದ ಭೂ ಸಕ್ರಮಣ ಸಮಿತಿಯ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡರು. ಬಳಿಕ ಗ್ರೇಟರ್‌ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ ಸದಸ್ಯರಾದರು. ಆನಂತರ ಬಮೂಲ್‌ ಚುನಾವಣೆಯಲ್ಲಿ ಅವಿರೋಧ ಅಧ್ಯಕ್ಷರಾಗಿ ಆಯ್ಕೆಯಾದರು. ಅಂದಿನಿಂದಲೇ ಕೆಎಂಎಫ್‌ ಅಧ್ಯಕ್ಷರಾಗಿ ಡಿ.ಕೆ.ಸುರೇಶ್‌ ಅಧಿಕಾರ ವಹಿಸಿಕೊಳ್ಳಲಿದ್ದಾರೆ ಎಂಬೆಲ್ಲ ಚರ್ಚೆಗಳು ನಡೆಯುತ್ತಲೇ ಇವೆ. ರಾಜ್ಯದಲ್ಲಿ ಒಂದು ಕೋಟಿಗೂ ಅಧಿಕ ಲೀಟರ್‌ ಹಾಲು ಪೂರೈಸುವ ಮೂಲಕ ಸಾವಿರಾರು ಕೋಟಿ ವ್ಯವಹಾರ ನಡೆಸುವ ಕೆಎಂಎಫ್‌ಗೆ ಅಧ್ಯಕ್ಷರಾಗುವುದು ಪ್ರತಿಷ್ಠೆಯ ವಿಷಯವು ಆಗಿದೆ.

ಎಲ್ಲ ಹಾಲೂ ಒಕ್ಕೂಟಗಳಿಗಿಂತ ಬಮೂಲ್‌ (ಬೆಂಗಳೂರು ನಗರ, ಗ್ರಾಮಾಂತರ, ರಾಮನಗರ)ನಲ್ಲಿ ಅತೀ ಹೆಚ್ಚು ಹಾಲು ಪೂರೈಸುತ್ತಿದೆ. ಜತೆಗೆ ರೈತರ ಸಹಕಾರದ ಮೂಲಕ ಮುಂದಿನ ಚುನಾವಣೆಯ ಹಾದಿ ಸುಗಮಗೊಳಿಸಿಕೊಳ್ಳಬಹುದೆಂಬ ಲೆಕ್ಕಚಾರಗಳು ಡಿಕೆ ಸಹೋದರರಲ್ಲಿವೆ. ಕಳೆದ ಬಾರಿ ಅಂದರೆ ಬಿಜೆಪಿ ಸರ್ಕಾರ ಇದ್ದವೇಳೆ, ಕೆಎಂಎಫ್‌ ಅಧ್ಯಕ್ಷ ಸ್ಥಾನವನ್ನು ಸಿದ್ದರಾಮಯ್ಯ ಅವರಿಗೂ ನಿಕಟರಾಗಿರುವ ಬಾಲಚಂದ್ರ ಜಾರಕಿಹೊಳೆ ವಹಿಸಿಕೊಂಡಿದ್ದರು.

ಸಿದ್ದರಾಮಯ್ಯ ಬಣಕ್ಕೆ ಯಾಕೆ?

ಮುಖ್ಯಮಂತ್ರಿ ಕುರ್ಚಿ ಬಿಡದ ಸಿದ್ದರಾಮಯ್ಯ, ಕೆಎಂಎಫ್‌ ಅಧ್ಯಕ್ಷ ಸ್ಥಾನವನ್ನು ಅಷ್ಟು ಸುಲಭವಾಗಿ ಡಿಕೆಶಿ ಬಣಕ್ಕೆ ಬಿಟ್ಟುಕೊಡುವುದಿಲ್ಲ. ರಾಬಕೊವಿ (ರಾಯಚೂರು, ಬಳ್ಳಾರಿ, ಕೊಪ್ಪಳ, ವಿಜಯನಗರ) ಚುನಾವಣೆಯಲ್ಲಿ ಸಿದ್ದರಾಮಯ್ಯ ಅವರ ಆಪ್ತರಾದ ಕೊಪ್ಪಳ ಶಾಸಕ ರಾಘವೇಂದ್ರ ಹಿಟ್ನಾಳ್‌ ಅವಿರೋಧವಾಗಿ ಆಯ್ಕೆಯಾಗಿದ್ದು, ಇದೀಗ ಕೆಎಂಎಫ್‌ ಅಧ್ಯಕ್ಷ ಗಾದಿಯ ಮೇಲೂ ಕಣ್ಣಿಟ್ಟಿದ್ದಾರೆ.

ಈಚೆಗೆ, ಲೋಕೋಪಯೋಗಿ ಸಚಿವ ಸತೀಶ್‌ ಜಾರಕೊಹೊಳಿ ಅವರನ್ನು ಭೇಟಿ ಮಾಡಿ ಚರ್ಚಿಸಿರುವುದು ರಾಜಕೀಯ ಮಹತ್ವ ಪಡೆದುಕೊಂಡಿತ್ತು. ಶಾಸಕ ರಾಘವೇಂದ್ರ ಹಿಟ್ನಾಳ್‌ ಅವರಿಗೆ ಮಾಜಿ ಸಚಿವ ಬಿ.ನಾಗೇಂದ್ರ ಸೇರಿದಂತೆ ಬಳ್ಳಾರಿ ಕೆಲ ಶಾಸಕರು ಹಾಗೂ ಸಿಎಂ ಅವರು ಬೆಂಬಲ ವ್ಯಕ್ತಪಡಿಸಿದ್ದರು. ಸತೀಶ್‌ ಜಾರಕಿಹೊಳಿ ಜತೆ ಚರ್ಚೆ ನಡೆದಿದೆ ಎನ್ನಲಾಗಿದೆ. ಜತೆಗೆ ಮಾಲೂರು ಶಾಸಕರೂ ಆದ ಕೋಲಾರ ಹಾಲು ಒಕ್ಕೂಟದ ಅಧ್ಯಕ್ಷ ಕೆ.ವೈ.ನಂಜೇಗೌಡ, ತಾನೂ ಕೂಡ ಕೆಎಂಎಫ್‌ ಅಧ್ಯಕ್ಷ ಸ್ಥಾನದ ಆಕಾಂಕ್ಷಿ ಎಂದು ಹೇಳಿಕೊಂಡಿದ್ದರು. ಸಿಎಂ ಸಿದ್ದರಾಮಯ್ಯ ಅವರು ಈ ಹಿಂದೆಯೇ ಕೆಎಂಎಫ್‌ ಅಧ್ಯಕ್ಷರನ್ನಾಗಿ ಮಾಡುವ ಭರವಸೆ ನೀಡಿದ್ದರು. ಸಿಎಂ ಕೊಟ್ಟ ಮಾತಿನಿಂತೆ ನಡೆದುಕೊಳ್ಳುತ್ತಾರೆ ಎಂಬ ವಿಶ್ವಾಸವಿದೆ ಎನ್ನುವ ಮೂಲಕ ಒಂದು ರೀತಿಯಲ್ಲಿ ಕಾಂಗ್ರೆಸ್‌ನಲ್ಲೇ ತ್ರಿಕೋನ ಕಾಳಗದ ಸುಳಿವು ನೀಡಿದ್ದಾರೆ.

ಏನೇ ಇದ್ದರೂ, ಅಂತಿಮವಾಗಿ ಸಿದ್ದರಾಮಯ್ಯ ತಮ್ಮ ಆಪ್ತರಿಬ್ಬರಲ್ಲಿ ಒಬ್ಬರನ್ನು ಕೆಎಂಎಫ್‌ ಅಧ್ಯಕ್ಷ ಚುನಾವಣೆಗೆ ಅಭ್ಯರ್ಥಿಯಾಗುವಂತೆ ನೋಡಿಕೊಳ್ಳಲು ತಂತ್ರ ರೂಪಿಸಿದ್ದಾರೆ ಎನ್ನಲಾಗಿದೆ. ಇಲ್ಲದಿದ್ದರೆ ಅವರದೇ ಬಣದ ಇಬ್ಬರ ನಡುವೆ ಮತ ಹಂಚಿಕೆಯಾಗಿ ಡಿಕೆಶಿ ಸೋದರ ಗೆಲುವು ಸಾಧಿಸುವ ಅವಕಾಶ ಇರುವುದರಿಂದ ಸಿದ್ದರಾಮಯ್ಯ ಬಣದವರು ಹೆಚ್ಚು ಜಾಗರೂಕರಾಗಿದ್ದಾರೆ ಎನ್ನಲಾಗಿದೆ.

ಚುನಾವಣೆ ತಡವಾಗಿದ್ದು ಏಕೆ?

ಅನೇಕ ತೊಡಕುಗಳ ಕಾರಣದಿಂದಾಗಿ ನಿರಂತರವಾಗಿ ಮುಂದೂಡಲ್ಪಡುತ್ತಿದ್ದ ಕೆಎಂಎಫ್‌ ಚುನಾವಣೆ ಮಾ.6 ರಂದು ನಡೆಯುವ ಸಾಧ್ಯತೆಗಳಿವೆ. 20 ತಿಂಗಳ ಹಿಂದೆಯೇ ಕೆಎಂಎಫ್‌ ಅಧಿಕಾರಾವಧಿ ಪೂರ್ಣಗೊಂಡಿದ್ದರೂ, ಕಾನೂನು ತೊಡಕುಗಳಿಂದ ಚುನಾವಣೆ ಮುಂದೆ ಹೋಗುತ್ತಲೇ ಇತ್ತು. 2024 ರ ಜು.7 ರಂದು ಆಡಳಿತ ಮಂಡಳಿ ಅವಧಿ ಮುಕ್ತಾಯಗೊಂಡಿತ್ತು. ಅಂದು ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಆಡಳಿತಾಧಿಕಾರಿ ನೇಮಕ ನಡೆದಿರಲಿಲ್ಲ. ಬಳಿಕ ಸಹಕಾರ ಸಂಘಗಳ ನಿಬಂಧಕ ಟಿ.ಎಚ್‌.ಎಂ.ಕುಮಾರ್‌ ಅವರನ್ನು ಆರು ತಿಂಗಳ ಅವಧಿಗೆ ಆನಂತರ 2025 ರ ಜೂ. 4 ರಂದು ಆಡಳಿತಾಧಿಕಾರಿಯಾಗಿ ನೇಮಿಸಲಾಗಿತ್ತು.

ರಾಜ್ಯದಲ್ಲಿನ 16 ಹಾಲು ಒಕ್ಕೂಟಗಳ ಚುನಾವಣೆಯಲ್ಲಿ 15 ಹಾಲು ಒಕ್ಕೂಟಗಳಿಗೆ ಚುನಾವಣೆ ನಡೆದು, ಅಧ್ಯಕ್ಷ-ಉಪಾಧ್ಯಕ್ಷರ ಆಯ್ಕೆ ನಡೆದಿತ್ತು. ಆದರೆ, ಚಿಕ್ಕಬಳ್ಳಾಪುರ ಹಾಲು ಒಕ್ಕೂಟದ ನೇಮಕದ ವಿವಾದ ನ್ಯಾಯಾಲಯದ ಮೆಟ್ಟಿಲು ಏರಿತ್ತು. ಹೀಗಾಗಿ ಚುನಾವಣೆ ಮುಂದೂಡಲ್ಪಡುತ್ತಲೆ ಇತ್ತು. ನ್ಯಾಯಾಲಯದ ನಿರ್ದೇಶನದಂತೆ ಚಿಕ್ಕಬಳ್ಳಾಪುರ ಹಾಲು ಒಕ್ಕೂಟದಲ್ಲಿನ ಅಧ್ಯಕ್ಷರ ಆಯ್ಕೆಗೆ ಫೆ.16 ರಂದು ಚುನಾವಣೆ ಮುಗಿದು ಅಧ್ಯಕ್ಷರ ನಡೆಯಬೇಕಿದೆ. ಕರ್ನಾಟಕ ರಾಜ್ಯ ಸಹಕಾರ ಚುನಾವಣಾ ಆಯೋಗಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಅಂದು ಅಧ್ಯಕ್ಷರ ಆಯ್ಕೆಯು ಪೂರ್ಣಗೊಳ್ಳಲಿದೆ.

ಹೀಗಾಗಿ ಚುನಾವಣಾ ಆಯೋಗದ ಆಯುಕ್ತರಾದ ಎಂ.ನಾಗಲಾಂಬಿಕಾದೇವಿ ಮುಂದಿನ ವಾರದೊಳಗೆ ಕೆಎಂಎಫ್‌ ಆಡಳಿತ ಮಂಡಳಿಯ ದಿನಾಂಕ ಘೋಷಿಸುವ ಸಾಧ್ಯತೆಗಳಿದ್ದು, ಮಾ. 6 ರಂದು ಚುನಾವಣೆ ನಡೆಯಲಿದೆ ಎಂದು ಅಂದಾಜಿಸಲಾಗಿದೆ.

ಮತದಾರರು ಯಾರು?

ಕೆಎಂಎಫ್ (KMF) ಅಧ್ಯಕ್ಷರ ಚುನಾವಣೆಯಲ್ಲಿ "ಕೆಎಂಎಫ್ ಆಡಳಿತ ಮಂಡಳಿಯ ನಿರ್ದೇಶಕರು" (Board of Directors) ಮತದಾರರಾಗಿರುತ್ತಾರೆ. ಇಲ್ಲಿ ರೈತರು ಆರಿಸಿದ ಜಿಲ್ಲಾ ಒಕ್ಕೂಟಗಳ ಅಧ್ಯಕ್ಷರು ಇಲ್ಲಿ ಮತದಾರರಾಗುತ್ತಾರೆ. 16 ಒಕ್ಕೂಟಗಳ ಅಧ್ಯಕ್ಷರು ಸೇರಿ ಸರ್ಕಾರದಿಂದ ನಾಮನಿರ್ದೇಶನಗೊಂಡ ಕೆಲವು ಅಧಿಕಾರಿಗಳು ಕೂಡ ಮತದಾನದ ಹಕ್ಕನ್ನು ಹೊಂದಿರುತ್ತಾರೆ.

ಯಾವ್ಯಾವ ಒಕ್ಕೂಟಗಳಿವೆ

ರಾಜ್ಯದಲ್ಲಿ ಒಟ್ಟು 16 ಹಾಲು ಒಕ್ಕೂಟಗಳಿವೆ. ಬೆಂಗಳೂರು ಹಾಲು ಒಕ್ಕೂಟ (BAMUL), (ಬೆಂಗಳೂರು ನಗರ, ಬೆಂಗಳೂರು ಗ್ರಾಮಾಂತರ, ರಾಮನಗರ ಜಿಲ್ಲೆಗಳನ್ನು ಒಳಗೊಂಡಿದೆ),ಕೋಲಾರ ಹಾಲು ಒಕ್ಕೂಟ (KOMUL), ಮಂಡ್ಯ ಹಾಲು ಒಕ್ಕೂಟ (MANMUL), ಮೈಸೂರು ಹಾಲು ಒಕ್ಕೂಟ (MYMUL), ತುಮಕೂರು ಹಾಲು ಒಕ್ಕೂಟ (TUMUL), ಹಾಸನ ಹಾಲು ಒಕ್ಕೂಟ (HAMUL), ಶಿವಮೊಗ್ಗ ಹಾಲು ಒಕ್ಕೂಟ (SHIMUL) - (ಶಿವಮೊಗ್ಗ, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಗಳನ್ನು ಒಳಗೊಂಡಿದೆ), ದಕ್ಷಿಣ ಕನ್ನಡ ಹಾಲು ಒಕ್ಕೂಟ (DKMUL) - (ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳನ್ನು ಒಳಗೊಂಡಿದೆ), ಧಾರವಾಡ ಹಾಲು ಒಕ್ಕೂಟ (DAMUL) - (ಧಾರವಾಡ, ಗದಗ ಮತ್ತು ಉತ್ತರ ಕನ್ನಡ ಜಿಲ್ಲೆಗಳನ್ನು ಒಳಗೊಂಡಿದೆ), ಬೆಳಗಾವಿ ಹಾಲು ಒಕ್ಕೂಟ (BEMUL), ಕಲಬುರಗಿ ಹಾಲು ಒಕ್ಕೂಟ (GUMUL) - (ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳನ್ನು ಒಳಗೊಂಡಿದೆ), ವಿಜಯಪುರ ಹಾಲು ಒಕ್ಕೂಟ (BIMUL) - (ವಿಜಯಪುರ ಮತ್ತು ಬಾಗಲಕೋಟೆ ಜಿಲ್ಲೆಗಳನ್ನು ಒಳಗೊಂಡಿದೆ), ಬಳ್ಳಾರಿ ಹಾಲು ಒಕ್ಕೂಟ (RBKMUL) - (ರಾಯಚೂರು, ಬಳ್ಳಾರಿ ಮತ್ತು ಕೊಪ್ಪಳ ಜಿಲ್ಲೆಗಳನ್ನು ಒಳಗೊಂಡಿದೆ), ಚಿಕ್ಕಬಳ್ಳಾಪುರ ಹಾಲು ಒಕ್ಕೂಟ (CHIMUL) - (ಕೋಲಾರ ಒಕ್ಕೂಟದಿಂದ ವಿಭಜನೆಯಾಗಿದೆ), ಚಾಮರಾಜನಗರ ಹಾಲು ಒಕ್ಕೂಟ (CHAMUL) - (ಮೈಸೂರು ಒಕ್ಕೂಟದಿಂದ ವಿಭಜನೆಯಾಗಿದೆ), ಹಾವೇರಿ ಹಾಲು ಒಕ್ಕೂಟ (Haveri Milk Union) - (ಧಾರವಾಡ ಒಕ್ಕೂಟದಿಂದ ವಿಭಜನೆಯಾಗಿದೆ)

Read More
Next Story