
ವೈಷ್ಣವಿ ಅಡ್ಕರ್ ಆಟದ ವೈಖರಿ
ಐಟಿಎಫ್ W100 ಟೆನಿಸ್ನ ಫೈನಲ್ ತಲುಪಿದ ಮೊದಲ ವೈಷ್ಣವಿ ಅಡ್ಕರ್ ಐತಿಹಾಸಿಕ ಸಾಧನೆ
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ವರ್ಲ್ಡ್ ನಂ. 126 ಮತ್ತು ಎರಡನೇ ಶ್ರೇಯಾಂಕದ ಥೈಲ್ಯಾಂಡ್‌ನ ಲ್ಯಾನ್‌ಲನ ಟರರುಡೀ ಅವರನ್ನು 6-3, 6-3 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ.
ಭಾರತದ ಟೆನಿಸ್ ಇತಿಹಾಸದಲ್ಲಿ ಹೊಸ ಅಧ್ಯಾಯ ಬರೆದ ಪುಣೆಯ 21 ವರ್ಷದ ವೈಷ್ಣವಿ ಅಡ್ಕರ್ ಅವರು, ಕೆಪಿಬಿ ಟ್ರಸ್ಟ್ ಐಟಿಎಫ್ ಮಹಿಳಾ ಓಪನ್ W100 ಬೆಂಗಳೂರು 2026ರಲ್ಲಿ ಐಟಿಎಫ್ W100 ಫೈನಲ್ ಸೇರಿದ ಮೊದಲ ಭಾರತೀಯ ಮಹಿಳಾ ಟೆನಿಸ್ ಆಟಗಾರ್ತಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶನಿವಾರ ನಡೆದ ಸೆಮಿಫೈನಲ್‌ನಲ್ಲಿ ಅವರು ವರ್ಲ್ಡ್ ನಂ. 126 ಮತ್ತು ಎರಡನೇ ಶ್ರೇಯಾಂಕದ ಥೈಲ್ಯಾಂಡ್‌ನ ಲ್ಯಾನ್‌ಲನ ಟರರುಡೀ ಅವರನ್ನು 6-3, 6-3 ಅಂತರದಲ್ಲಿ ಸೋಲಿಸಿ ಫೈನಲ್ ಪ್ರವೇಶಿಸಿದ್ದಾರೆ. ವರ್ಲ್ಡ್ ನಂ. 690 ರ ಹ್ಯಾಂಕಿಂಗ್‌ನೊಂದಿಗೆ ವೈಲ್ಡ್ ಕಾರ್ಡ್ ಪ್ರವೇಶ ಪಡೆದಿದ್ದ ಅಡ್ಕರ್, ಸ್ಪರ್ಧೆಯ ಉದ್ದಕ್ಕೂ ಎರಡು ಟಾಪ್-150 ಮತ್ತು ಒಬ್ಬ ಟಾಪ್-250 ಆಟಗಾರ್ತಿಯನ್ನು ಮಣಿಸಿ ಈ ಸಾಧನೆ ಮಾಡಿದ್ದಾರೆ.
ಗೆಲುವಿನ ಬಳಿಕ ಸಂಭ್ರಮಾಚರಣೆ ಮಾಡಿದ ವೈಷ್ಣವಿ ಅಡ್ಕರ್
ಸಾನಿಯಾ ಮಿರ್ಜಾ ನಂತರ ಭಾರತದ ಇತಿಹಾಸ
2009ರಲ್ಲಿ ಸಾನಿಯಾ ಮಿರ್ಜಾ ಅವರು ಥೈಲ್ಯಾಂಡ್‌ನ ಪಟ್ಟಾಯಾದಲ್ಲಿ ನಡೆದ ಡಬ್ಲ್ಯೂಟಿಎ ಇಂಟರ್ನ್ಯಾಷನಲ್ ಫೈನಲ್ ಸೇರಿದ ನಂತರ, 17 ವರ್ಷಗಳ ಬಳಿಕ ಒಬ್ಬ ಭಾರತೀಯ ಮಹಿಳೆ ಐಟಿಎಫ್ W100 ಅಥವಾ ಅದಕ್ಕಿಂತ ಮೇಲ್ಮಟ್ಟದ ಟೂರ್ನಮೆಂಟ್‌ನ ಫೈನಲ್ ತಲುಪಿದ ಐತಿಹಾಸಿಕ ಗಳಿಗೆ ಇಂದು ಮೂಡಿಬಂದಿದೆ.
ಪ್ರಬಲ ಸೆಮಿಫೈನಲ್ ಪ್ರದರ್ಶನ
ಆಟದ ಉದ್ದಕ್ಕೂ ಶಾಂತ ಮನಸ್ಥಿತಿ ಮತ್ತು ಅಗ್ರಾಸಿವ್ ಬೇಸ್‌ಲೈನ್ ಆಟ ಪ್ರದರ್ಶಿಸಿದ ಅಡ್ಕರ್, ಮೊದಲ ಸೆಟ್‌ನ ಏಳನೇ ಗೇಮ್‌ನಲ್ಲಿ ನಿರ್ಣಾಯಕ ಬ್ರೇಕ್ ಸಾಧಿಸಿ ಹಿಡಿತ ಸಾಧಿಸಿದರು. ಎರಡನೇ ಸೆಟ್‌ನಲ್ಲಿ ಟರರುಡೀ ಒಮ್ಮೆ ಬ್ರೇಕ್ ಪಡೆದು ಪುನರಾಗಮನ ಮಾಡಲು ಯತ್ನಿಸಿದರೂ, ಅಡ್ಕರ್ ಅವರ ಎರಡು ಬ್ಯಾಕ್‌ಹ್ಯಾಂಡ್ ವಿನ್ನರ್‌ಗಳು ಸ್ಪರ್ಧೆಯ ಪ್ರವಾಹವನ್ನು ಮತ್ತೆ ತಮ್ಮ ಕಡೆಗೆ ತಿರುಗಿಸಿಕೊಂಡವು. ಅಂತಿಮವಾಗಿ ಒಂದು ಫೋರ್‌ಹ್ಯಾಂಡ್ ವಿನ್ನರ್‌ನೊಂದಿಗೆ ಮ್ಯಾಚ್ ಗೆದ್ದ ಅಡ್ಕರ್, ತಮ್ಮ ಭಾವನೆಗಳನ್ನು ಹೀಗೆ ಹಂಚಿಕೊಂಡರು: "ನಾನು ನಾಳೆ ಫೈನಲ್ ಆಡಲಿದ್ದೇನೆ ಎಂಬುದನ್ನು ಇನ್ನೂ ನಂಬಲು ಸಾಧ್ಯವಾಗುತ್ತಿಲ್ಲ. ಕೆಎಸ್‌ಎಲ್‌ಟಿಎ ನೀಡಿದ ಈ ಅವಕಾಶವನ್ನು ಸದುಪಯೋಗಪಡಿಸಿಕೊಂಡ ತೃಪ್ತಿ ಇದೆ."
ಫೈನಲ್ ಮತ್ತು ಡಬಲ್ಸ್ ಫಲಿತಾಂಶ
ಭಾನುವಾರ ಫೈನಲ್‌ನಲ್ಲಿ ಅಡ್ಕರ್ ಅವರ ಎದುರಾಳಿ, ಕಳೆದ ವಾರ ಐಟಿಎಫ್ W75 ಪುಣೆ ಚಾಂಪಿಯನ್ ಆದ ಬೆಲ್ಜಿಯಂನ ಮೂರನೇ ಸೀಡ್ ಹ್ಯಾನಿ ವ್ಯಾಂಡೆವಿಂಕೆಲ್ (ವರ್ಲ್ಡ್ ನಂ. 124). ಅವರು ಪೋಲಿನಾ ಐಯ್ಯಾಟ್ಸೆಂಕೊ ಅವರನ್ನು 6-4, 7-6(5) ಅಂತರದಲ್ಲಿ ಸೋಲಿಸಿ ಫೈನಲ್ ಸೇರಿದ್ದಾರೆ. ಇದೇ ದಿನ ನಡೆದ ಡಬಲ್ಸ್ ಫೈನಲ್‌ನಲ್ಲಿ ಜಪಾನ್‌ನ ಮಿಸಾಕಿ ಮತ್ಸುದ ಮತ್ತು ಎರಿ ಶಿಮಿಜು ಜೋಡಿ, ಭಾರತದ ಅಂಕಿತಾ ರೈನಾ ಮತ್ತು ಇಂಡೋನೇಷ್ಯಾದ ಪ್ರಿಸ್ಕಾ ಮ್ಯಾಡೆಲಿನ್ ನ್ಯೂಗ್ರೋಹೊ ಜೋಡಿಯನ್ನು 6-4, 3-6, 10-5 ಅಂತರದಲ್ಲಿ ಸೋಲಿಸಿ ಪ್ರಶಸ್ತಿ ಗೆದ್ದರು.

