Neeraj Chopra : ಟೆನಿಸ್ ಆಟಗಾರ್ತಿ ಹಿಮಾನಿ ಮೋರ್ ಕೈ ಹಿಡಿದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ
Neeraj Chopra :ಜಾವೆಲಿನ್ ಪಟು ತಮ್ಮ ಜೀವನದ ವಿಶೇಷ ಕ್ಷಣದ ಫೋಟೋಗಳನ್ನು ಅವರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಏಕಾಏಕಿ ಫೋಟೋಗಳನ್ನು ನೋಡಿ ಹಲವರಿಗೆ ಆಶ್ಚರ್ಯ ಉಂಟಾಗಿದೆ.
ಟೋಕಿಯೊ ಒಲಿಂಪಿಕ್ಸ್ ಚಿನ್ನದ ಪದಕ ವಿಜೇತ ಭಾರತದ ಜಾವೆಲಿನ್ ಎಸೆತಗಾರ ನೀರಜ್ ಚೋಪ್ರಾ (Neeraj Chopra) ಸರಳ ಸಮಾರಂಭದಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಅವರು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುವ ಕುರಿತು ಯಾವುದೇ ಸುಳಿವುಗಳನ್ನು ನೀಡದೇ ಅಚ್ಚರಿ ಮೂಡಿಸಿದ್ದಾರೆ. ಚಿನ್ನದ ಹುಡುಗ ಈಗ ಹಿಮಾನಿ ಮೋರ್ (Himani Mor) ಎಂಬುವರನ್ನು ಬಾಳ ಸಂಗಾತಿಯಾಗಿ ಸ್ವೀಕರಿಸಿದ್ದಾರೆ.
ಜಾವೆಲಿನ್ ಪಟು ತಮ್ಮ ಜೀವನದ ವಿಶೇಷ ಕ್ಷಣದ ಫೋಟೋಗಳನ್ನು ಅವರು ಸಾಮಾಜಿಕ ಮಾಧ್ಯಮ ಖಾತೆಗಳಲ್ಲಿ ಹಂಚಿಕೊಂಡಿದ್ದಾರೆ. ಏಕಾಏಕಿ ಫೋಟೋಗಳನ್ನು ನೋಡಿ ಹಲವರಿಗೆ ಆಶ್ಚರ್ಯ ಉಂಟಾಗಿದೆ. ಕುಟುಂಬದ ಮಂದಿ ಹಾಗೂ ಆಪ್ತ ಗೆಳೆಯರೊಂದಿಗೆ ಮದುವೆ ನಡೆದಿದೆ. ಹೀಗಾಗಿ ಅವರು ಫೋಟೋಗಳನ್ನು ಶೇರ್ ಮಾಡುತ್ತಿದ್ದಂತೆಯೇ ಇಂಟರ್ನೆಟ್ನಲ್ಲಿ ಸಂಚಲನ ಮೂಡಿದೆ.
ಯಾರು ಯುವತಿ ?
ಸ್ಟಾರ್ ಅಥ್ಲೀಟ್ ನ ಕೈ ಹಿಡಿದ ಯುವತಿಯ ಹೆಸರು ಹಿಮಾನಿ. ಅವರು ಹರಿಯಾಣದ ಲಾರ್ಸೌಲಿ ಮೂಲದವರು. ಅಮೆರಿಕದಲ್ಲಿ ಶಿಕ್ಷಣ ಪಡೆಯುತ್ತಿದ್ದಾರೆ. . ಪಾಣಿಪತ್ನ ಲಿಟಲ್ ಏಂಜಲ್ಸ್ ಶಾಲೆಯಲ್ಲಿ ಶಾಲಾ ಶಿಕ್ಷಣ ಪೂರ್ಣಗೊಳಿಸಿದ ಹಿಮಾನಿ, ದೆಹಲಿ ವಿಶ್ವವಿದ್ಯಾಲಯದ ಮಿರಾಂಡಾ ಹೌಸ್ನಿಂದ ರಾಜ್ಯಶಾಸ್ತ್ರ ಮತ್ತು ದೈಹಿಕ ಶಿಕ್ಷಣದಲ್ಲಿ ಪದವಿ ಪಡೆದಿದ್ದಾರೆ. ಇದೀಗ ಉನ್ನತ ಶಿಕ್ಷಣಕ್ಕಾಗಿ ವಿದೇಶಕ್ಕೆ ಹಾರಿದ್ದಾರೆ.
ಮೆಕ್ಕಾರ್ಮಾಕ್ ಐಸೆನ್ಬರ್ಗ್ ಸ್ಕೂಲ್ ಆಫ್ ಮ್ಯಾನೇಜ್ಮೆಂಟ್ನಲ್ಲಿ (McCormack Isenberg School of Management) ಕ್ರೀಡಾ ನಿರ್ವಹಣೆ ವಿಜ್ಞಾನ ಮತ್ತು ಆಡಳಿತದಲ್ಲಿ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿದ್ದಾರೆ. ಅದಕ್ಕೂ ಮುನ್ನ ಸೌತ್ಈಸ್ಟರ್ನ್ ಲೂಯಿಸಿಯಾನ ವಿಶ್ವವಿದ್ಯಾಲಯದಲ್ಲಿಯೂ ವ್ಯಾಸಂಗ ಮಾಡಿದ್ದಾರೆ. ಅಂದ ಹಾಗೆ ಹಿಮಾನಿ ಟೆನಿಸ್ ಆಟಗಾರ್ತಿ . ಹೀಗಾಗಿ ಫ್ರಾಂಕ್ಲಿನ್ ಪಿಯರ್ಸ್ ವಿಶ್ವವಿದ್ಯಾಲಯದಲ್ಲಿ ಅರೆಕಾಲಿಕ ಸಹಾಯಕ ತರಬೇತುದಾರರಾಗಿ ಕೆಲಸವನ್ನೂ ಮಾಡಿದ್ದಾರೆ.
ಪ್ರಸ್ತುತ ಅಮ್ಹೆರ್ಸ್ಟ್ ಕಾಲೇಜಿನ ಟೆನಿಸ್ ತಂಡವನ್ನು ನಿರ್ವಹಿಸುತ್ತಿರುವ ಹಿಮಾನಿ, ಅಲ್ಲಿ ಗ್ರಾಜುಯೇಟ್ ಅಸಿಸ್ಟೆಂಟ್ ಆಗಿದ್ದಾರೆ.
ಫೋಟೋ ಹಂಚಿಕೊಂಡ ನೀರಜ್
ನೀರನ್ ಸೋಷಿಯಲ್ ಮೀಡಿಯಾ ಪೋಸ್ಟ್ ಮೂಲಕ ಮದುವೆ ಕುರಿತು ಹೇಳಿಕೊಂಡರು. “ನಾನು ನನ್ನ ಕುಟುಂಬದ ಉಪಸ್ಥಿತಿಯೊಂದಿಗೆ ನನ್ನ ಜೀವನದ ಹೊಸ ಅಧ್ಯಾಯವನ್ನು ಆರಂಭಿಸಿದ್ದೇನೆ. ಪ್ರತಿಯೊಬ್ಬರ ಆಶೀರ್ವಾದಕ್ಕೂ ನಾವು ಕೃತಜ್ಞರಾಗಿರುತ್ತೇವೆ,” ಎಂದು ಚೋಪ್ರಾ ಮದುವೆ ಸಮಾರಂಭದ ಫೋಟೋಗಳನ್ನು ಹಂಚಿಕೊಂಡು ಹೇಳಿಕೊಂಡಿದ್ದಾರೆ.
ಹನಿಮೂನ್ ನಲ್ಲಿ ನವ ಜೋಡಿ
ನೀರಜ್ ಚೋಪ್ರಾ ಮದುವೆ ಬಗ್ಗೆ ಅವರ ಚಿಕ್ಕಪ್ಪ ಮಾತನಾಡಿ, ಮದುವೆ ಭಾರತದಲ್ಲೇ ನಡೆಯಿತು. ದಂಪತಿ ಈಗ ಹನಿಮೂನ್ಗೆ ತೆರಳಿದ್ದಾರೆ ಎಂದರು. “ಹೌದು, ಎರಡು ದಿನಗಳ ಹಿಂದೆ ಭಾರತದಲ್ಲಿಯೇ ಮದುವೆ ನಡೆಯಿತು. ಅದು ಎಲ್ಲಿ ನಡೆಯಿತು ಎಂದು ನಾನು ಹೇಳಲು ಸಾಧ್ಯವಿಲ್ಲ” ಎಂದು ಹರಿಯಾಣದ ಪಾಣಿಪತ್ ಬಳಿಯ ಖಾಂಡ್ರಾದಲ್ಲಿರುವ ಹಳ್ಳಿಯಲ್ಲಿ ನೀರಜ್ ಚಿಕ್ಕಪ್ಪ ಹೇಳಿದ್ದಾರೆ.