
ಚಿನ್ನಸ್ವಾಮಿಯಲ್ಲಿ ಐಪಿಎಲ್ ಸಂಭ್ರಮಕ್ಕೆ ಇನ್ನೂ ಸಿಗದ ಗ್ರೀನ್ ಸಿಗ್ನಲ್: ಆರ್‌ಸಿಬಿ ಮೌನಕ್ಕೆ ಕಾರಣವೇನು?
ನಮ್ಮ ಅಭಿಮಾನಿಗಳೇ ಆರ್‌ಸಿಬಿಯ ಜೀವಾಳ. ನಾವು ಯಾವಾಗಲೂ ಅಭಿಮಾನಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಪಂದ್ಯಗಳ ಆಯೋಜನೆಗೆ ವಿಧಿಸಲಾದ ಷರತ್ತುಗಳು ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಹೇಳಿಕೆ ನೀಡಿದೆ.
ಪ್ರತಿಷ್ಠಿತ ಎಂ. ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ 2026ರ ಐಪಿಎಲ್ ಪಂದ್ಯಗಳ ಆಯೋಜನೆ ಕುರಿತು ನಡೆಯುತ್ತಿರುವ ಹಗ್ಗಜಗ್ಗಾಟ ಈಗ ಕುತೂಹಲಕಾರಿ ಘಟ್ಟಕ್ಕೆ ತಲುಪಿದೆ. ಕರ್ನಾಟಕ ಸರ್ಕಾರ ಮತ್ತು ಕೆಎಸ್‌ಸಿಎ (KSCA) ಪಂದ್ಯಗಳ ಆಯೋಜನೆಗೆ ಹಸಿರು ನಿಶಾನೆ ತೋರಿದ್ದರೂ, ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಫ್ರಾಂಚೈಸಿಯು ಈ ಬಗ್ಗೆ ಇನ್ನೂ ಅಂತಿಮ ತೀರ್ಮಾನ ಕೈಗೊಳ್ಳದೆ ಅಂತರ ಕಾಯ್ದುಕೊಂಡಿದೆ.
ಬುಧವಾರ ಅಧಿಕೃತ ಹೇಳಿಕೆ ಬಿಡುಗಡೆ ಮಾಡಿರುವ ಆರ್‌ಸಿಬಿ ಆಡಳಿತ ಮಂಡಳಿ, ಮೈದಾನದಲ್ಲಿ ಪಂದ್ಯಗಳನ್ನು ನಡೆಸಲು ಅನುಮತಿ ನೀಡಿದ ಸರ್ಕಾರದ ಕ್ರಮವನ್ನು ಸ್ವಾಗತಿಸಿದೆ. ಆದರೆ, "ಕೆಲವು ತಾಂತ್ರಿಕ ಅಂಶಗಳು ಮತ್ತು ಅಸ್ಪಷ್ಟತೆಗಳು ಇನ್ನೂ ಉಳಿದಿವೆ" ಎಂದು ಹೇಳುವ ಮೂಲಕ ತಕ್ಷಣಕ್ಕೆ ಯಾವುದೇ ನಿರ್ಧಾರ ಕೈಗೊಳ್ಳಲು ನಿರಾಕರಿಸಿದೆ. ಈ "ಅಸ್ಪಷ್ಟ" ವಿಷಯಗಳ ಬಗ್ಗೆ ಸಂಪೂರ್ಣ ಮಾಹಿತಿ ಪಡೆದ ನಂತರವಷ್ಟೇ ಜವಾಬ್ದಾರಿಯುತ ನಿರ್ಧಾರ ತೆಗೆದುಕೊಳ್ಳುವುದಾಗಿ ತಂಡ ತಿಳಿಸಿದೆ.
ದುರಂತದ ನೆರಳು ಮತ್ತು ಸುರಕ್ಷತೆಯ ಆತಂಕ
ಕಳೆದ ವರ್ಷ ಅಂದರೆ ಜೂನ್ 4ರಂದು ಆರ್‌ಸಿಬಿ ತಂಡದ ಐಪಿಎಲ್ ಜಯದ ಸಂಭ್ರಮಾಚರಣೆಯ ವೇಳೆ ಕ್ರೀಡಾಂಗಣದ ಹೊರಗೆ ಸಂಭವಿಸಿದ ಕಾಲ್ತುಳಿತದಲ್ಲಿ 11 ಮಂದಿ ಮೃತಪಟ್ಟಿದ್ದರು. ಈ ಕಹಿ ಘಟನೆಯ ನಂತರ ಚಿನ್ನಸ್ವಾಮಿ ಮೈದಾನದಲ್ಲಿ ಪಂದ್ಯಗಳನ್ನು ನಿಷೇಧಿಸಲಾಗಿತ್ತು. ಈಗ ಪಂದ್ಯಗಳ ಆಯೋಜನೆಗೆ ಸರ್ಕಾರ 'ಷರತ್ತುಬದ್ಧ' ಅನುಮತಿ ನೀಡಿದ್ದು, ಆರ್‌ಸಿಬಿ ತಂಡವು ಅಭಿಮಾನಿಗಳ ಸುರಕ್ಷತೆಯ ವಿಷಯದಲ್ಲಿ ಯಾವುದೇ ರಾಜಿ ಮಾಡಿಕೊಳ್ಳಲು ಸಿದ್ಧವಿಲ್ಲ ಎಂದು ಸ್ಪಷ್ಟಪಡಿಸಿದೆ.
ನಮ್ಮ ಅಭಿಮಾನಿಗಳೇ ಆರ್‌ಸಿಬಿಯ ಜೀವಾಳ. ನಾವು ಯಾವಾಗಲೂ ಅಭಿಮಾನಿಗಳಿಗೆ ಮೊದಲ ಆದ್ಯತೆ ನೀಡುತ್ತೇವೆ. ಪಂದ್ಯಗಳ ಆಯೋಜನೆಗೆ ವಿಧಿಸಲಾದ ಷರತ್ತುಗಳು ಮತ್ತು ಸುರಕ್ಷತಾ ವ್ಯವಸ್ಥೆಯನ್ನು ಅರ್ಥಮಾಡಿಕೊಳ್ಳಬೇಕಿದೆ ಎಂದು ಆರ್‌ಸಿಬಿ ಫ್ರಾಂಚೈಸಿ ಹೇಳಿಕೆ ನೀಡಿದೆ.
ಕೆಎಸ್‌ಸಿಎ ಪಟ್ಟು
ಅದಕ್ಕೂ ಮೊದಲು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಕೆಎಸ್‌ಸಿಎ ಅಧ್ಯಕ್ಷ ವೆಂಕಟೇಶ್ ಪ್ರಸಾದ್, ಕ್ರೀಡಾಂಗಣದಲ್ಲಿ ಮೂಲಸೌಕರ್ಯ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ ಮತ್ತು ಪಂದ್ಯಗಳನ್ನು ನಡೆಸಲು ಎಲ್ಲ ರೀತಿಯಲ್ಲಿ ತಯಾರಾಗಿದ್ದೇವೆ ಎಂದು ತಿಳಿಸಿದ್ದರು. "ಪಂದ್ಯಗಳನ್ನು ನಡೆಸಲು ಆರ್‌ಸಿಬಿಗೆ ಈಗ ಮುಕ್ತ ಅವಕಾಶವಿದೆ, ನಿರ್ಧಾರ ತೆಗೆದುಕೊಳ್ಳುವುದು ಅವರಿಗೆ ಬಿಟ್ಟ ವಿಚಾರ" ಎಂದು ಹೇಳುವ ಮೂಲಕ ಜವಾಬ್ದಾರಿಯನ್ನು ಫ್ರಾಂಚೈಸಿಯ ಮೇಲೆ ಹಾಕಿದ್ದರು.
ಎಂ. ಚಿನ್ನಸ್ವಾಮಿ ಕ್ರೀಡಾಂಗಣ
ಅಭಿಮಾನಿಗಳ ನಿರೀಕ್ಷೆ
ಬೆಂಗಳೂರಿನ ಕ್ರಿಕೆಟ್ ಪ್ರೇಮಿಗಳು ತಮ್ಮ ನೆಚ್ಚಿನ ತಂಡವನ್ನು ತವರು ನೆಲದಲ್ಲೇ ನೋಡಲು ಕಾತರರಾಗಿದ್ದಾರೆ. ಆದರೆ, ಆರ್‌ಸಿಬಿ ಮಂಡಳಿಯು ಸರ್ಕಾರದ ಷರತ್ತುಗಳನ್ನು ಕೂಲಂಕಷವಾಗಿ ಪರಿಶೀಲಿಸಿದ ನಂತರವಷ್ಟೇ ಮುಂದಿನ ಹೆಜ್ಜೆ ಇಡಲಿದೆ. ಸದ್ಯದ ಪರಿಸ್ಥಿತಿಯಲ್ಲಿ ಐಪಿಎಲ್ 2026ರ ಬೆಂಗಳೂರು ಪಂದ್ಯಗಳು ನಡೆಯುತ್ತವೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆಗೆ ಉತ್ತರ ಸಿಗಲು ಮತ್ತಷ್ಟು ದಿನಗಳ ಕಾಯುವಿಕೆ ಅನಿವಾರ್ಯ.

