
ಸಹಕಾರಿ ರಂಗಕ್ಕೆ ಗ್ರಹಣ: ಮುಚ್ಚುವ ಹಂತಕ್ಕೆ ರಾಜ್ಯದ 3,400ಕ್ಕೂ ಹೆಚ್ಚು ಸೊಸೈಟಿಗಳು!
ಸೊಸೈಟಿಗಳು ಬಾಗಿಲು ಮುಚ್ಚಲು ಬಾಹ್ಯ ಕಾರಣಗಳಿಗಿಂತ ಆಂತರಿಕ ಕಾರಣಗಳೇ ಹೆಚ್ಚಾಗಿವೆ. ಅರ್ಹತೆ ನೋಡದೆ, ಕೇವಲ ಪ್ರಭಾವಕ್ಕೊಳಗಾಗಿ ಕೋಟ್ಯಂತರ ರೂ. ಸಾಲ ನೀಡಿರುವುದು ಮೂಲಭೂತ ಸಮಸ್ಯೆಯಾಗಿದೆ.
"ಎಲ್ಲರಿಗಾಗಿ ಒಬ್ಬ, ಒಬ್ಬನಿಗಾಗಿ ಎಲ್ಲರೂ" ಎಂಬ ಧ್ಯೇಯದೊಂದಿಗೆ ಆರಂಭವಾದ ಸಹಕಾರಿ ಸಂಘಗಳು ಸಾಲ ಸೌಲಭ್ಯ ನೀಡಿ ಜನಸಾಮಾನ್ಯರನ್ನು ಆರ್ಥಿಕವಾಗಿ ಸದೃಢಗೊಳಿಸುವ ಗುರಿ ಹೊಂದಿದ್ದವು. ಆದರೆ, ಇತ್ತೀಚಿನ ವರ್ಷಗಳಲ್ಲಿ ಸಹಕಾರ ರಂಗಕ್ಕೆ ಗ್ರಹಣ ಹಿಡಿದಂತಿದೆ.
ಮೂಲ ಉದ್ದೇಶದಿಂದ ದಾರಿ ತಪ್ಪಿರುವ ರಾಜ್ಯದ ಸುಮಾರು 3,400ಕ್ಕೂ ಹೆಚ್ಚು ಸಹಕಾರಿ ಸಂಘಗಳು ಇಂದು ನಷ್ಟದ ಸುಳಿಯಲ್ಲಿ ಸಿಲುಕಿ, ಬಾಗಿಲು ಮುಚ್ಚುವ ಅಂಚಿಗೆ ಬಂದು ತಲುಪಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ.
ಕೃಷಿ ಪತ್ತಿನ ಸಂಘಗಳು, ಹೈನುಗಾರಿಕೆ ಸಂಘಗಳು, ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಮತ್ತು ಸೌಹಾರ್ದ ಸಹಕಾರಿ ಸಂಘಗಳು ಸೇರಿದಂತೆ ರಾಜ್ಯದಲ್ಲಿ ಪ್ರಸ್ತುತ ಸುಮಾರು 48 ಸಾವಿರಕ್ಕೂ ಹೆಚ್ಚು ವಿವಿಧ ರೀತಿಯ ಸಹಕಾರಿ ಸಂಘಗಳು ನೋಂದಣಿಯಾಗಿವೆ. ನೋಂದಣಿಯಾಗಿರುವ ಒಟ್ಟು ಸಹಕಾರಿ ಸಂಘಗಳ ಪೈಕಿ ಗಮನಾರ್ಹ ಸಂಖ್ಯೆಯ ಸಂಘಗಳು ಇಂದು ಅಸ್ತಿತ್ವಕ್ಕಾಗಿ ಹೋರಾಡುತ್ತಿವೆ. 3,400ಕ್ಕೂ ಹೆಚ್ಚು ಸೊಸೈಟಿಗಳು ಕಾರ್ಯನಿರ್ವಹಿಸದ ಸ್ಥಿತಿಯಲ್ಲಿವೆ ಅಥವಾ ದಿವಾಳಿಯಾಗುವ ಹಂತಕ್ಕೆ ತಲುಪಿವೆ. ಈ ಪೈಕಿ ಕೃಷಿ ಪತ್ತಿನ ಸಹಕಾರ ಸಂಘಗಳು ಮಾತ್ರವಲ್ಲದೆ, ಪಟ್ಟಣ ಸಹಕಾರಿ ಬ್ಯಾಂಕ್‌ಗಳು ಮತ್ತು ಗೃಹ ನಿರ್ಮಾಣ ಸಂಘಗಳು ಕೂಡ ಸೇರಿವೆ ಎಂದು ಸಹಕಾರ ಇಲಾಖೆಯ ಮೂಲಗಳು ಹೇಳಿವೆ.
ದೇಶಾದ್ಯಂತ ಸುಮಾರು 1.40 ಲಕ್ಷ ಸಹಕಾರಿ ಬ್ಯಾಂಕ್ ಹಾಗೂ ಸೊಸೈಟಿಗಳು ಈಗಾಗಲೇ ಬಾಗಿಲು ಮುಚ್ಚಿವೆ. ಕೇಂದ್ರ ಸಹಕಾರ ಸಚಿವಾಲಯದ ರಾಷ್ಟ್ರೀಯ ಸಹಕಾರ ಸಂಘದ ದತ್ತಾಂಶದ ಪ್ರಕಾರ, 2025ರ ನವೆಂಬರ್ ವೇಳೆಗೆ ದೇಶಾದ್ಯಂತ 1,39,823 ಕೋ-ಆಪರೇಟಿವ್ ಸೊಸೈಟಿಗಳು ನಿಷ್ಕ್ರಿಯವಾಗಲಿವೆ. ಪ್ರಸ್ತುತ 48,537 ಸೊಸೈಟಿಗಳು ನಷ್ಟದಲ್ಲಿದ್ದು, ನಿರ್ವಹಣೆ ಮಾಡಲಾಗದ ಸ್ಥಿತಿಯಲ್ಲಿವೆ. ಸಹಕಾರಿ ರಂಗದಲ್ಲಿ ಮುಂಚೂಣಿಯಲ್ಲಿದ್ದ ಕರ್ನಾಟಕದಲ್ಲಿಯೂ ಪರಿಸ್ಥಿತಿ ಭಿನ್ನವಾಗಿಲ್ಲ. ರಾಜ್ಯದಲ್ಲಿ ಒಟ್ಟು 3,446 ಸೊಸೈಟಿಗಳು ಈಗಾಗಲೇ ನಿಷ್ಕ್ರಿಯವಾಗಿ ಬೀಗ ಹಾಕಿಕೊಂಡಿವೆ.
ಇದಲ್ಲದೆ, ಇನ್ನೂ 3,131 ಸೊಸೈಟಿಗಳು ತೀವ್ರ ನಷ್ಟದಲ್ಲಿದ್ದು, ಅವು ಯಾವುದೇ ಕ್ಷಣದಲ್ಲಿ ಮುಚ್ಚುವ ಹಂತಕ್ಕೆ ತಲುಪಿವೆ. ಮಧ್ಯಪ್ರದೇಶದಲ್ಲಿ 18,423 ಮತ್ತು ಉತ್ತರ ಪ್ರದೇಶದಲ್ಲಿ 17,180 ಸಂಘಗಳು ನಿಷ್ಕ್ರಿಯಗೊಂಡಿವೆ. ರಾಜಸ್ಥಾನದಂತಹ ದೊಡ್ಡ ರಾಜ್ಯಗಳಲ್ಲೂ ಸಹಕಾರಿ ರಂಗ ಕುಸಿಯುತ್ತಿದೆ. ಗುಜರಾತ್ ಮತ್ತು ತೆಲಂಗಾಣದಲ್ಲಿ ಸಕ್ರಿಯ ಸೊಸೈಟಿಗಳ ಸಂಖ್ಯೆ ಹೆಚ್ಚಿದ್ದರೂ, ಅಲ್ಲಿನ ದಿವಾಳಿಯಾಗುತ್ತಿರುವ ಸಂಸ್ಥೆಗಳ ಸಂಖ್ಯೆಯೂ ಸಹ ಗಣನೀಯವಾಗಿದೆ ಎಂದು ಹೇಳಲಾಗಿದೆ.
ಸೊಸೈಟಿಗಳ ಪತನಕ್ಕೆ ಪ್ರಮುಖ ಕಾರಣಗಳು ಬೇಕಾಬಿಟ್ಟಿ ಸಾಲ, ಅವ್ಯವಹಾರ
ಸಹಕಾರಿ ಸೊಸೈಟಿಗಳು ಬಾಗಿಲು ಮುಚ್ಚಲು ಬಾಹ್ಯ ಕಾರಣಗಳಿಗಿಂತ ಆಂತರಿಕ ಕಾರಣಗಳೇ ಹೆಚ್ಚಾಗಿವೆ. ಅರ್ಹತೆ ನೋಡದೆ, ಕೇವಲ ಪ್ರಭಾವಕ್ಕೊಳಗಾಗಿ ಬೇಕಾಬಿಟ್ಟಿ ಕೋಟ್ಯಂತರ ರೂ. ಸಾಲ ನೀಡಿರುವುದು ಮೂಲಭೂತ ಸಮಸ್ಯೆಯಾಗಿದೆ. ಸರಿಯಾದ ದಾಖಲಾತಿಗಳಿಲ್ಲದೆ ನೀಡಿದ ಸಾಲಗಳು ಮರುಪಾವತಿಯಾಗದೆ ಸೊಸೈಟಿಗಳ ಖಜಾನೆ ಖಾಲಿ ಮಾಡಿವೆ.
ಯಾವುದೇ ಸ್ಥಿರ ಆಸ್ತಿ ಅಥವಾ ಚಿನ್ನದಂತಹ ಭದ್ರತೆಯನ್ನು ಅಡಮಾನ ಇರಿಸಿಕೊಳ್ಳದೆ ಸಾಲ ವಿತರಿಸಿರುವುದು ದೊಡ್ಡ ತಪ್ಪು. ವಸೂಲಾತಿಗೆ ಹೋದಾಗ ಜಪ್ತಿ ಮಾಡಲು ಯಾವುದೇ ಆಸ್ತಿ ಇಲ್ಲದಿರುವುದು ಸೊಸೈಟಿಗಳನ್ನು ಸಂಕಷ್ಟಕ್ಕೆ ತಳ್ಳಿದೆ.
ಸೊಸೈಟಿಯ ಠೇವಣಿದಾರರ ಹಣವನ್ನು ಅಧ್ಯಕ್ಷರು ಅಥವಾ ನಿರ್ದೇಶಕರು ತಮ್ಮ ಸ್ವಂತ ಉದ್ಯಮಗಳಿಗೆ ಅಥವಾ ವೈಯಕ್ತಿಕ ಲಾಭಕ್ಕೆ ಬಳಸಿಕೊಂಡಿರುವುದು ತನಿಖೆಗಳಲ್ಲಿ ಬಹಿರಂಗವಾಗಿದೆ. ಇದು ನಂಬಿಕೆಯ ದ್ರೋಹ ಮಾತ್ರವಲ್ಲದೆ, ಕಾನೂನುಬಾಹಿರ ಕೃತ್ಯವಾಗಿದೆ. ನಕಲಿ ದಾಖಲೆಗಳನ್ನು ಸೃಷ್ಟಿಸಿ ಸಾಲ ನೀಡುವುದು, ಇಲ್ಲವೇ ಶೂನ್ಯ ಭದ್ರತೆಯ ಮೇಲೆ ಕೋಟ್ಯಂತರ ರೂ. ಸಾಲ ವಿತರಿಸುವುದು ಸಾಮಾನ್ಯವಾಗಿದೆ. ದೊಡ್ಡ ಮೊತ್ತದ ಹಣ ದುರುಪಯೋಗವಾದಾಗ ಸೊಸೈಟಿಗಳ ಆರ್ಥಿಕ ಅಡಿಪಾಯವೇ ಕುಸಿಯುತ್ತಿದೆ ಎಂಬ ಅಭಿಪ್ರಾಯಗಳು ವ್ಯಕ್ತವಾಗಿವೆ.
ಸಾಲ ವಸೂಲಾತಿಯಲ್ಲಿ ವಿಫಲತೆ
ಸೊಸೈಟಿಗಳು ನೀಡಿದ ಸಾಲ ವಾಪಸ್ ಬಾರದಿರುವುದು ದೊಡ್ಡ ಸಮಸ್ಯೆಯಾಗಿದೆ. ರಾಜಕೀಯ ಪ್ರಭಾವ ಬಳಸಿ ಪಡೆದ ಸಾಲಗಳು ವಸೂಲಾಗುತ್ತಿಲ್ಲ. ಇದರ ಜೊತೆಗೆ, ಸರ್ಕಾರದ ಸಾಲ ಮನ್ನಾ ಯೋಜನೆಗಳ ನಿರೀಕ್ಷೆಯಲ್ಲಿ ಗ್ರಾಹಕರು ಸಾಲ ಮರುಪಾವತಿ ಮಾಡುವುದನ್ನು ನಿಲ್ಲಿಸುತ್ತಿದ್ದಾರೆ. ವಸೂಲಾತಿಯಾಗದ ಸಾಲಗಳು ಹೆಚ್ಚಾದಂತೆ, ಸೊಸೈಟಿಗಳ ಆವರ್ತಕ ನಿಧಿ ಖಾಲಿಯಾಗಿ, ಹೊಸ ಸಾಲ ನೀಡಲು ಅಥವಾ ಠೇವಣಿದಾರರಿಗೆ ಹಣ ಮರಳಿಸಲು ಸಾಧ್ಯವಾಗುತ್ತಿಲ್ಲ ಎನ್ನಲಾಗಿದೆ.
ಸಕಾಲಕ್ಕೆ ಚುನಾವಣೆ ನಡೆಯದಿರುವುದು ಹಾಗೂ ಆಡಳಿತಾತ್ಮಕ ವೈಫಲ್ಯ
ಪ್ರಜಾಪ್ರಭುತ್ವ ಮಾದರಿಯಲ್ಲಿ ನಡೆಯಬೇಕಾದ ಸಹಕಾರಿ ಸಂಘಗಳಲ್ಲಿ ಸಕಾಲಕ್ಕೆ ಚುನಾವಣೆಗಳು ನಡೆಯುತ್ತಿಲ್ಲ. ಆಡಳಿತ ಮಂಡಳಿಯ ಅವಧಿ ಮುಗಿದರೂ ರಾಜಕೀಯ ಹಿತಾಸಕ್ತಿ ಅಥವಾ ನ್ಯಾಯಾಲಯದ ತಡೆಗಳಿಂದಾಗಿ ಚುನಾವಣೆಗಳು ವಿಳಂಬವಾಗುತ್ತಿವೆ. ಇಂತಹ ಸಂದರ್ಭಗಳಲ್ಲಿ ಸರ್ಕಾರ ನೇಮಿಸುವ ಆಡಳಿತಾಧಿಕಾರಿಗಳ ಆಡಳಿತದಲ್ಲಿ ಸಂಘಗಳು ಸೊರಗುತ್ತಿವೆ. ಚುನಾಯಿತ ಪ್ರತಿನಿಧಿಗಳಿಲ್ಲದಿದ್ದಾಗ ಹೊಣೆಗಾರಿಕೆ ಕಡಿಮೆಯಾಗಿ, ನಿರ್ವಹಣೆಯಲ್ಲಿ ನಿರ್ಲಕ್ಷ್ಯ ಉಂಟಾಗುತ್ತಿದೆ. ಆಡಳಿತ ಮಂಡಳಿಯ ಸದಸ್ಯರು ಅಧಿಕಾರಕ್ಕೆ ಅಂಟಿಕೊಂಡಿರುವುದು ಅಥವಾ ರಾಜಕೀಯ ಪ್ರಭಾವದಿಂದ ಅಧಿಕಾರಿಗಳ ನೇಮಕವಾಗುವುದು ಸಂಸ್ಥೆಯ ಕಾರ್ಯಕ್ಷಮತೆಯನ್ನು ಕುಗ್ಗಿಸಿದೆ.
ಲೆಕ್ಕಪರಿಶೋಧನೆ ಸರಿಯಾಗಿ ನಡೆಯದಿರುವುದು ಮತ್ತು ಆಡಿಟ್ ವರದಿಗಳಲ್ಲಿನ ಲೋಪದೋಷಗಳನ್ನು ಮುಚ್ಚಿಡುವುದು ಸಂಸ್ಥೆಗಳ ಅವನತಿಗೆ ಕಾರಣ ಎಂದು ಹೇಳಲಾಗಿದೆ.
ಐಟಿ ತನಿಖೆಯಲ್ಲಿ ಬಹಿರಂಗವಾದ ಕರಾಳ ಸತ್ಯಗಳು
ಆದಾಯ ತೆರಿಗೆ ಇಲಾಖೆಯ ತನಿಖೆಯು ಸಹಕಾರಿ ಸೊಸೈಟಿಗಳು ಹೇಗೆ ಅಕ್ರಮ ಚಟುವಟಿಕೆಗಳ ಕೇಂದ್ರಗಳಾಗಿವೆ ಎಂಬುದನ್ನು ಎತ್ತಿ ತೋರಿಸಿದೆ. ಕಪ್ಪು ಹಣವನ್ನು ಸಕ್ರಮವಾಗಿ ಪರಿವರ್ತಿಸಲು ಸೊಸೈಟಿಗಳನ್ನು ಬಳಸಿಕೊಳ್ಳಲಾಗುತ್ತಿದೆ. ಜನರ ಠೇವಣಿ ಹಣವನ್ನು ಸಂಘದ ಉದ್ದೇಶಗಳಿಗೆ ಬಳಸುವ ಬದಲು, ರಿಯಲ್ ಎಸ್ಟೇಟ್ ಮತ್ತು ವ್ಯಾಪಾರ ವಹಿವಾಟುಗಳಲ್ಲಿ ಹೂಡಿಕೆ ಮಾಡಲಾಗಿದೆ. ಅಸ್ತಿತ್ವದಲ್ಲಿಲ್ಲದ ಸಂಸ್ಥೆಗಳ ಚೆಕ್‌ಗಳನ್ನು ಡಿಸ್ಕೌಂಟ್ ಮಾಡುವುದು ಮತ್ತು ಆಸ್ತಿ ಮೌಲ್ಯಕ್ಕಿಂತ ಮೂರು ಪಟ್ಟು ಹೆಚ್ಚು ಸಾಲ ನೀಡುವುದು ಈ ವಲಯದಲ್ಲಿನ ದೊಡ್ಡ ಹಗರಣವಾಗಿದೆ ಎಂದು ಐಟಿ ಮೂಲಗಳು ಹೇಳಿವೆ.
ವೃತ್ತಿಪರತೆಯ ಕೊರತೆ
ಇಂದಿನ ಸ್ಪರ್ಧಾತ್ಮಕ ಯುಗದಲ್ಲಿ ವಾಣಿಜ್ಯ ಬ್ಯಾಂಕ್‌ಗಳು ಆಧುನಿಕ ತಂತ್ರಜ್ಞಾನದೊಂದಿಗೆ ಗ್ರಾಹಕರನ್ನು ಸೆಳೆಯುತ್ತಿವೆ. ಆದರೆ, ಹೆಚ್ಚಿನ ಸಹಕಾರಿ ಸಂಘಗಳು ಇಂದಿಗೂ ಹಳೆಯ ಪದ್ಧತಿಯಲ್ಲೇ ಕಾರ್ಯನಿರ್ವಹಿಸುತ್ತಿವೆ. ಸಿಬ್ಬಂದಿಗಳಲ್ಲಿ ವೃತ್ತಿಪರತೆಯ ಕೊರತೆ, ಸಮರ್ಪಕ ಆಡಿಟಿಂಗ್ ವ್ಯವಸ್ಥೆ ಇಲ್ಲದಿರುವುದು ಮತ್ತು ಬದಲಾಗುತ್ತಿರುವ ಆರ್ಥಿಕ ನೀತಿಗಳಿಗೆ ತಕ್ಕಂತೆ ಹೊಂದಿಕೊಳ್ಳದಿರುವುದು ಈ ಸಂಘಗಳ ಅವನತಿಗೆ ಕಾರಣವಾಗಿದೆ.
ಅಲ್ಲದೇ, ಸಹಕಾರಿ ರಂಗವು ರಾಜಕೀಯ ನಾಯಕರ ತರಬೇತಿ ಶಾಲೆಗಳಂತಾಗಿವೆ. ಸಂಘದ ಅಭಿವೃದ್ಧಿಗಿಂತ ರಾಜಕೀಯ ಲಾಭಕ್ಕಾಗಿ ಸಂಘಗಳನ್ನು ಬಳಸಿಕೊಳ್ಳಲಾಗುತ್ತಿದೆ. ಮತ ಬ್ಯಾಂಕ್ ರಾಜಕಾರಣಕ್ಕಾಗಿ ಅನರ್ಹರಿಗೆ ಸಾಲ ನೀಡುವುದು, ಸಾಲ ವಸೂಲಾತಿಗೆ ಅಡ್ಡಿಪಡಿಸುವುದು ಸಂಘಗಳ ಆರ್ಥಿಕ ಆರೋಗ್ಯವನ್ನು ಹಾಳುಮಾಡುತ್ತಿದೆ ಎಂಬ ಆರೋಪಗಳು ಕೇಳಿಬಂದಿವೆ.
ಜನಸಾಮಾನ್ಯರ ಮೇಲಿನ ಪರಿಣಾಮ
ಸಹಕಾರಿ ಸೊಸೈಟಿಗಳು ಮುಚ್ಚುವುದರಿಂದ ಕೇವಲ ಒಂದು ಕಟ್ಟಡಕ್ಕೆ ಬೀಗ ಬೀಳುವುದಿಲ್ಲ, ಬದಲಾಗಿ ಸಾವಿರಾರು ಮಧ್ಯಮ ವರ್ಗದ ಜನರ ಬದುಕಿನ ಉಳಿತಾಯ ಪೆಟ್ಟು ಬೀಳಲಿದೆ. ಠೇವಣಿದಾರರು ತಮ್ಮ ಹಣದ ಸುರಕ್ಷತೆಯ ಬಗ್ಗೆ ಆತಂಕದಲ್ಲಿದ್ದಾರೆ. ಜನರು ತಮ್ಮ ಜೀವನದ ಉಳಿತಾಯವನ್ನು ನಂಬಿಕೆಯಿಂದ ಈ ಸೊಸೈಟಿಗಳಲ್ಲಿ ಇಟ್ಟಿರುತ್ತಾರೆ. ಸಂಘವು ನಷ್ಟಕ್ಕೀಡಾದಾಗ ಠೇವಣಿದಾರರು ತಮ್ಮ ಹಣಕ್ಕಾಗಿ ಬೀದಿಗಿಳಿದು ಹೋರಾಡಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಸಹಕಾರಿ ವ್ಯವಸ್ಥೆಯ ಮೇಲಿದ್ದ ನಂಬಿಕೆಯೇ ಸಡಿಲಗೊಳ್ಳುತ್ತಿದೆ.
ಗ್ರಾಮೀಣ ಭಾಗದಲ್ಲಿ ಸುಲಭವಾಗಿ ಸಿಗುತ್ತಿದ್ದ ಸಾಲ ಸೌಲಭ್ಯ ಇಲ್ಲವಾಗಿ, ಜನರು ಮತ್ತೆ ಖಾಸಗಿ ಲೇವಾದೇವಿದಾರರ ಹತ್ತಿರ ಹೋಗಿ ಹೆಚ್ಚಿನ ಬಡ್ಡಿಗೆ ಸಾಲ ಪಡೆದು ಸಾಲದ ಸುಳಿಗೆ ಸಿಲುಕುತ್ತಿದ್ದಾರೆ.
ಸುಧಾರಣಾ ಕ್ರಮಗಳ ಅಗತ್ಯ
ಸಹಕಾರ ಸಂಘಗಳು ಮುಚ್ಚುವ ಹಂತಕ್ಕೆ ತಲುಪುತ್ತಿರುವ ಕುರಿತು ದ ಫೆಡರಲ್ ಕರ್ನಾಟಕ ಜತೆ ಮಾತನಾಡಿದ ನಿವೃತ್ತ ಐಎಎಸ್ ಅಧಿಕಾರಿ ಸಿ.ಸೋಮಶೇಖರ್, "ಪ್ರತಿಯೊಂದು ಸೊಸೈಟಿಯ ಲೆಕ್ಕಪತ್ರಗಳನ್ನು ವರ್ಷಕ್ಕೊಮ್ಮೆ ಕಡ್ಡಾಯವಾಗಿ ಮತ್ತು ಪಾರದರ್ಶಕವಾಗಿ ಲೆಕ್ಕಪರಿಶೋಧನೆ ಮಾಡಬೇಕು. ಅಕ್ರಮ ಕಂಡುಬಂದಲ್ಲಿ ತಕ್ಷಣವೇ ಆಡಳಿತ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಬೇಕು," ಎಂದು ಹೇಳಿದ್ದಾರೆ.
"ಸಹಕಾರಿ ಸಂಘಗಳನ್ನು ರಾಜಕೀಯದಿಂದ ಮುಕ್ತಗೊಳಿಸಿ, ಕೇವಲ ಆರ್ಥಿಕ ಉದ್ದೇಶಗಳಿಗಾಗಿ ಮಾತ್ರ ಬಳಸುವಂತಾಗಬೇಕು. ಸಾಲ ನೀಡುವಾಗ ಪಕ್ಷಪಾತವಿಲ್ಲದೆ ಕೇವಲ ಅರ್ಹತೆಯನ್ನು ಪರಿಗಣಿಸಬೇಕು. ಠೇವಣಿದಾರರಿಗೆ ಮತ್ತು ಸಂಘದ ಸದಸ್ಯರಿಗೆ ಅವರ ಹಕ್ಕುಗಳು ಮತ್ತು ಸಂಘದ ಕಾರ್ಯವೈಖರಿಯ ಬಗ್ಗೆ ಅರಿವು ಮೂಡಿಸಬೇಕು. ಇಲ್ಲದಿದ್ದರೆ ಮುಂದೊಂದು ದಿನ ಸಹಕಾರ ಸಂಘಗಳು ಇಲ್ಲದಂತಾಗುವ ಪರಿಸ್ಥಿತಿ ನಿರ್ಮಾಣವಾದರೂ ಅಚ್ಚರಿ ಇಲ್ಲ," ಎಂದೂ ಸೋಮಶೇಖರ್ ಎಂದು ಹೇಳಿದರು.

