ದಲೈಲಾಮ ಉತ್ತರಾಧಿಕಾರಿ, ಹಸೀನಾ ರಾಜಕೀಯ ತಂತ್ರ: ಭಾರತದ ಹಗ್ಗದ ಮೇಲಿನ ನಡಿಗೆ
x
ಟಿಬೆಟಿನ ಬೌದ್ಧ ಧರ್ಮಗುರು ದಲೈಲಾಮ ಮತ್ತು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ ಅವರಿಗೆ ಭಾರತ ನಿರಂತರ ಬೆಂಬಲ ನೀಡುತ್ತ ಬಂದಿದೆ. ಆದರೆ ಭಾರತ ಇದರ ಪರಿಣಾಮಗಳನ್ನು ಎದುರಿಸಲು ಸಿದ್ಧವಿದೆಯೇ?

ದಲೈಲಾಮ ಉತ್ತರಾಧಿಕಾರಿ, ಹಸೀನಾ ರಾಜಕೀಯ ತಂತ್ರ: ಭಾರತದ ಹಗ್ಗದ ಮೇಲಿನ ನಡಿಗೆ

ಈಗ ಭಾರತಕ್ಕೆ ಸವಾಲಾಗಿರುವುದು ತನ್ನದೇ ನೆಲದಲ್ಲಿರುವ ಗಡಿಪಾರಾಗಿರುವ ಇಬ್ಬರು ಪ್ರಾದೇಶಿಕ ನಾಯಕರ ವಿಚಾರದಲ್ಲಿ. ಅವರೆಂದರೆ ಟಿಬೆಟಿನ ಧರ್ಮಗುರು ದಲೈಲಾಮ ಮತ್ತು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ.


ಪಶ್ಚಿಮ ಏಷ್ಯಾದಲ್ಲಿ ಯುದ್ಧ ನಿರತ ರಾಷ್ಟ್ರಗಳಾದ ಇರಾನ್ ಮತ್ತು ಇಸ್ರೇಲ್ ಅಥವಾ ಉಕ್ರೇನ್ ಮೇಲೆ ಸಮರ ಸಾರಿರುವ ಪುಟಿನ್ ವಿಚಾರದಲ್ಲಿ ರಷ್ಯಾ ಮತ್ತು ಪಶ್ಚಿಮದ ನಡುವೆ ಸೂಕ್ಷ್ಮ ಸಮತೋಲನವನ್ನು ಕಾಯ್ದುಕೊಳ್ಳುವುದು ಭಾರತದ ರಾಜತಂತ್ರಕ್ಕೆ ಬಹುದೊಡ್ಡ ಸವಾಲಾಗಿದೆ.

ಆದರೆ ಈಗ ಭಾರತಕ್ಕೆ ಸವಾಲಾಗಿರುವುದು ತನ್ನದೇ ನೆಲದಲ್ಲಿರುವ ಗಡಿಪಾರಾಗಿರುವ ಇಬ್ಬರು ಪ್ರಾದೇಶಿಕ ನಾಯಕರ ವಿಚಾರದಲ್ಲಿ. ಅವರೆಂದರೆ ಟಿಬೆಟಿನ ಧರ್ಮಗುರು ದಲೈಲಾಮ ಮತ್ತು ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ್ ಹಸೀನಾ. ಇವರಿಬ್ಬರ ಉಪಸ್ಥಿತಿಯಿಂದಾಗಿ ಭಾರತ ಬಹಳ ದೊಡ್ಡ ಸವಾಲಿಗೆ ಮುಖಾಮುಖಿಯಾಗುವ ಪರಿಸ್ಥಿತಿ ಬಂದಿದೆ.

ದಲೈಲಾಮ ಅವರ ಉತ್ತರಾಧಿಕಾರಿಯ ವಿಚಾರದಲ್ಲಿ ಭಾರತ ತಳೆದ ನಿಲುವಿನಿಂದ ಚೀನಾ ಅಸಮಾಧಾನಗೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ. ಇಂತಹ ಧಾರ್ಮಿಕ ಪ್ರಕ್ರಿಯೆಯನ್ನು ಟಿಬೆಟ್ ಧರ್ಮಗುರು ಮತ್ತು ಅವರ ಸಮುದಾಯಕ್ಕೆ ಬಿಡುವುದೊಳಿತು ಎಂದು ಭಾರತ ಹೇಳಿತ್ತು.

ಕೇಂದ್ರ ಸಚಿವ ಕಿರೆನ್ ರಿಜಿಜು ಅವರು ನೀಡಿರುವ ಹೇಳಿಕೆ ಚೀನಾಗೆ ಅಸಾಧ್ಯ ಕಿರಿಕಿರಿ ಉಂಟುಮಾಡಿದೆ. ರಿಜಿಜು ಅವರು ಹೇಳಿಕೇಳಿ ಅರುಣಾಚಲ ಪ್ರದೇಶಕ್ಕೆ ಸೇರಿದ ಬೌದ್ಧ ಧರ್ಮದವರು. ಈ ಅರುಣಾಚಲ ಪ್ರದೇಶವನ್ನು ‘ದಕ್ಷಿಣ ಟಿಬೆಟ್’ ಎಂದು ಹೇಳಿಕೊಂಡಿರುವ ಚೀನಾ, ಅದು ತನ್ನ ನೆಲ ಎಂದು ಬಹಳ ಕಾಲದಿಂದ ವಾದಿಸುತ್ತ ಬಂದಿದೆ.

ಹಾರೈಕೆಗೂ ಆಕ್ಷೇಪ

ದಲೈಲಾಮಾ ಅವರ 90ನೇ ಜನ್ಮದಿನಕ್ಕೆ ಪ್ರಧಾನಿ ನರೇಂದ್ರ ಮೋದಿ ಶುಭಾಶಯ ಹೇಳಿದ್ದನ್ನು ಕೂಡ ಚೀನಾಕ್ಕೆ ಸಹಿಸಿಕೊಳ್ಳಲು ಸಾಧ್ಯವಾಗಿಲ್ಲ. ಈ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಚೀನಾದ ವಿದೇಶಾಂಗ ಕಚೇರಿಯ ವಕ್ತಾರರು, ತನ್ನ ಆಂತರಿಕ ವ್ಯವಹಾರದಲ್ಲಿ ಯಾವುದೇ ರೀತಿಯಲ್ಲಿ ಮಧ್ಯಪ್ರವೇಶ ಮಾಡುವುದನ್ನು ಸಹಿಸುವುದಿಲ್ಲ ಎಂದು ಹೇಳಿದೆ.

ತಮ್ಮ ಮರಣದ ಬಳಿಕ ‘ದಲೈಲಾಮ’ ಎಂಬ ಧರ್ಮಸಂಸ್ಥೆಯನ್ನು ಮುಂದುವರಿಸಬೇಕೇ ಎನ್ನುವ ಬಗ್ಗೆ ತಾವಿನ್ನೂ ನಿರ್ಧಾರ ಕೈಗೊಂಡಿಲ್ಲ ಎಂದು ಹೇಳುವ ಮೂಲಕ ಈಗಿನ ದಲೈಲಾಮ ಅವರು 2024ರ ಅಂತ್ಯದ ವರೆಗೆ ಚೀನಾವನ್ನು ತುದಿಗಾಲ ಮೇಲೆ ನಿಲ್ಲುವಂತೆ ಮಾಡಿದ್ದರು.

ಈ ವಿಚಾರದಲ್ಲಿ ಅವರು ನಕಾರಾತ್ಮಕವಾಗಿ ನಿರ್ಧಾರ ಕೈಗೊಂಡಿದ್ದರೆ, ಉತ್ತರಾಧಿಕಾರದ ಸಮಸ್ಯೆ ಉದ್ಭವಿಸುತ್ತಿರಲಿಲ್ಲ ಮತ್ತು ಟಿಬೆಟಿಯನ್ ಸಮುದಾಯದ ನಾಯಕತ್ವವು ಧರ್ಮಶಾಲಾ ಮೂಲದ ಚುನಾಯಿತ ಗಡಿಪಾರು ಸರ್ಕಾರ ಮತ್ತು ಸೀಕ್ಯೋಂಗ್ (ಅಧ್ಯಕ್ಷರು) ನಡೆಸುವ ಸೆಂಟ್ರಲ್ ಟಿಬೆಟಿಯನ್ ಆಡಳಿತಕ್ಕೆ ಹಸ್ತಾಂತರವಾಗುತ್ತಿತ್ತು.

ವಾಸ್ತವದಲ್ಲಿ ಟಿಬೆಟ್ ಸಮುದಾಯಕ್ಕೆ ಸೇರಿದ ಬಹುತೇಕ ಸಂಗತಿಗಳನ್ನು ದಲೈಲಾಮ ಅವರು ಈಗಾಗಲೇ ಸೀಕ್ಯೋಂಗ್ ಮತ್ತು ಅವರ ಸರ್ಕಾರಕ್ಕೆ ಬಿಟ್ಟುಕೊಟ್ಟಿದ್ದಾರೆ.

ಟಿಬೆಟಿನ ವಿಶಿಷ್ಟ ಅಸ್ತಿತ್ವ

ಅಷ್ಟಿದ್ದೂ ಅಂತಹ ಅಧಿಕಾರವು ದಲೈಲಾಮ ಅವರಿಗಿರುವ ಆಧ್ಯಾತ್ಮಿಕ ಆಕರ್ಷಣೆಯನ್ನು ತಗ್ಗಿಸುವುದಿಲ್ಲ. ಹಾಗಾಗಿ ಇದು ಟಿಬೆಟಿನ ಒಳಗೆ ಮತ್ತು ಹೊರಗೆ ಟಿಬೆಟಿಯನ್ ಸಮುದಾಯದ ಮೇಲೆ ಅವರ ನಿರಂತರ ಪ್ರಭಾವವನ್ನು ಮುಂದುವರಿಸುತ್ತದೆ. ಜೊತೆಗೆ ಪ್ರಪಂಚದ ಕಣ್ಣಿನಲ್ಲಿ ಟಿಬೆಟಿನ ವಿಶಿಷ್ಟ ಅಸ್ತಿತ್ವವನ್ನು ಜೀವಂತವಾಗಿ ಇರಿಸುತ್ತದೆ.

ಟಿಬೆಟಿಯನ್ ಗಡಿಪಾರು ಸರ್ಕಾರ ಚೀನಾದ ಪಾಲಿಗೆ ಯಾವತ್ತಿದ್ದರೂ ಸವಾಲೇ ಆಗಿದೆ. ಆದರೆ ದಲೈಲಾಮ ಎಂಬ ಸಾಂಸ್ಥಿಕ ರೂಪ ಇಲ್ಲದೇ ಹೋದರೆ ಗಡಿಪಾರು ಸರ್ಕಾರಕ್ಕೆ ಚೀನಾ ಪ್ರತ್ಯೇಕವಾದಿ ಎಂಬ ಹಣೆಪಟ್ಟಿ ಕಟ್ಟಿ ಇದಕ್ಕೆ ನಿಮ್ಮ ನೆಲದಲ್ಲಿ ಬೆಂಬಲ ನೀಡದಂತೆ ಒತ್ತಡ ಹೇರುತ್ತದೆ.

ಟಿಬೆಟ್ ಯಾವತ್ತಿದ್ದರೂ ಚೀನಾದ ಅವಿಭಾಜ್ಯ ಅಂಗವೆಂದು ಭಾರತ ಮಾನ್ಯಮಾಡಿದೆ ಮತ್ತು ತನ್ನ ಉತ್ತರದ ನೆರೆಯ ರಾಷ್ಟ್ರದೊಂದಿಗಿನ ಇಡೀ ದ್ವಿಪಕ್ಷೀಯ ಸಂಬಂಧವನ್ನು ಅಪಾಯಕ್ಕೆ ಗುರಿಪಡಿಸಲು ಅದು ಸಿದ್ಧವಿಲ್ಲ.

ಜಾಣ ನಡೆ

ತಮ್ಮ ಉತ್ತರಾಧಿಕಾರಿ ಏನಿದ್ದರೂ ‘ಮುಕ್ತ ಜಗತ್ತಿನಲ್ಲಿ’ ಅಂದರೆ ಚೀನಾದ ಹೊರಗೆ ಜನಿಸಿರಬೇಕು ಎಂದು ದಲೈಲಾಮ ಅವರು ಈ ವರ್ಷದ ಆರಂಭದಲ್ಲಿ ಪ್ರಕಟಗೊಂಡ ತಮ್ಮ Voice of voiceless ಎಂಬ ಕೃತಿಯಲ್ಲಿ ಹೇಳಿದ್ದು ಚೀನಾವನ್ನು ಮತ್ತಷ್ಟು ಕೆರಳಿಸಿದ್ದರಲ್ಲಿ ಅಚ್ಚರಿಯಿಲ್ಲ.

ದಲೈಲಾಮ ಉತ್ತರಾಧಿಕಾರಿಯ ಆಯ್ಕೆ ಟಿಬೆಟ್ ನೊಳಗೇ ನಡೆದರೆ ಚೀನಾ ಸರ್ಕಾರ ಯಾವುದೇ ಪಾತ್ರ ನಿರ್ವಹಿಸದಂತಾಗುತ್ತದೆ. ಅದನ್ನೊಂದು ಜಾಣ ನಡೆ ಎಂದೇ ಪರಿಭಾವಿಸಲಾಗಿದೆ.

1950ರ ದಶಕದಲ್ಲಿ ಟಿಬೆಟ್-ನ್ನು ಸ್ವಾಧೀನಪಡಿಸಿಕೊಂಡ ಚೀನಾ ಅಂದಿನಿಂದಲೂ ದಲೈಲಾಮ ಧಾರ್ಮಿಕ ವ್ಯವಸ್ಥೆಯನ್ನು ದುರ್ಬಲಗೊಳಿಸುವಲ್ಲಿ ವಿಫಲವಾಗಿದೆ. ಪ್ರಸಕ್ತ ದಲೈಲಾಮ ಚೀನಾದ ಹೊರಗೇ ತಮ್ಮ ಉತ್ತರಾಧಿಕಾರಿಯನ್ನು ಆಯ್ಕೆ ಮಾಡಿದರೆ ಆಗ ಚೀನಾ ತನ್ನದೇ ಆದ ದಲೈಲಾಮ ಅವರನ್ನು ಆಯ್ಕೆಮಾಡಿ ಟಿಬೆಟಿಯನ್ನರ ಮೇಲೆ ಹೇರುವ ಪ್ರಯತ್ನಮಾಡಬಹುದು.

ಇದರಿಂದಾಗುವ ಫಲಿತಾಂಶ: ಚೀನಾ ಬೆಂಬಲಿತ ದಲೈಲಾಮ ಮತ್ತು ಈಗಿನ ದಲೈಲಾಮ ಅವರಿಂದ ಆಯ್ಕೆಯಾದ ಇನ್ನೊಬ್ಬ ದಲೈಲಾಮ ಹೀಗೆ ಎರಡು ದಲೈಲಾಮಗಳು ಉದ್ಭವವಾಗಬಹುದು.

ಈಗಿರುವ ದಲೈಲಾಮ ಅವರನ್ನು ಚೀನಾ ‘ಪ್ರತ್ಯೇಕವಾದಿ’, ‘ವಿಘಟನಾವಾದಿ’ ಮತ್ತು ‘ಕುರಿ ಚರ್ಮ ಹೊದ್ದ ತೋಳ’ ಎಂದೆಲ್ಲ ಹಣೆಪಟ್ಟಿ ಹಚ್ಚಿದರೂ ಟಿಬೆಟ್ ಧರ್ಮಗುರು ಟಿಬೆಟ್ ಸ್ವಾತಂತ್ರ್ಯಕ್ಕಾಗಿ ಸಶಸ್ತ್ರ ದಂಗೆಗೆ ಬೆಂಬಲ ನೀಡುವುದನ್ನು ತಪ್ಪಿಸಿದ್ದಾರೆ ಎಂಬುದು ದಿಟ. 1950ರ ದಶಕದ ಉತ್ತರಾರ್ಧದಲ್ಲಿ ಖಾಂಪಾಸ್ ಸಶಸ್ತ್ರ ದಂಗೆಯ ರೀತಿಯಲ್ಲಿಯೇ ಈ ಮಾರ್ಗವನ್ನು ಅವರು ಅನುಸರಿಸಲಿಲ್ಲ. ಅದಕ್ಕೆ ಬದಲಾಗಿ ಟಿಬೆಟ್ ಭವಿಷ್ಯವನ್ನು ನಿರ್ಧರಿಸಲು ಚೀನಾ ಜೊತೆಗೆ ಮಾತುಕತೆ ನಡೆಸುವ ಪ್ರಯತ್ನ ಮಾಡಿದ್ದಾರೆ.

ಜಿನ್-ಪಿಂಗ್ ಲೆಕ್ಕಾಚಾರ

ತಮ್ಮ ಅಧ್ಯಕ್ಷ ಅವಧಿಯ ಆರಂಭದಲ್ಲಿ ದಲೈಲಾಮ ಅವರನ್ನು ಮಾತುಕತೆಗೆ ಆಹ್ವಾನಿಸುವ ಸೂಚನೆ ಇತ್ತಾದರೂ ಕ್ಸೀ ಜಿನ್-ಪಿಂಗ್ ಅವರು ಅದರಿಂದ ಹಿಂದೆ ಸರಿದಿದ್ದರು. ಹಾಗೆ ಮಾಡುವುದರಿಂದ ತಮ್ಮ ‘ಸ್ಟ್ರಾಂಗ್ ಮ್ಯಾನ್’ (ಬಲಶಾಲಿ ನಾಯಕ) ವರ್ಚಸ್ಸಿಗೆ ಧಕ್ಕೆ ಉಂಟಾಗುತ್ತದೆ ಎಂದು ಅವರು ಭಾವಿಸಿರಬಹುದು. ಅಷ್ಟು ಮಾತ್ರವಲ್ಲದೆ ಇಂತಹುದೊಂದು ಕಠಿಣ ನಿರ್ಧಾರವನ್ನು ಕೈಗೊಳ್ಳುವುದರಿಂದ ಪಕ್ಷದ ಮೇಲಿನ ಅವರ ಹಿಡಿತವನ್ನು ತಪ್ಪಿಸಲು ಭಿನ್ನಮತೀಯರಿಗೆ ಉತ್ತೇಜನ ನೀಡಿದಂತಾಗುತ್ತದೆ ಎಂಬುದು ಅವರ ಲೆಕ್ಕಾಚಾರವಾಗಿರಬಹುದು.

ಒಂದು ವೇಳೆ ಅಂತಹ ಮಾತುಕತೆಯೇನಾದರೂ ನಡೆದು ಟಿಬೆಟಿಯನ್ನರಿಗೆ ಹೆಚ್ಚಿನ ಸ್ವಾಯತ್ತತೆ ಹಾಗೂ ಧಾರ್ಮಿಕ ಹಕ್ಕುಗಳನ್ನು ನೀಡಿದ್ದಿದ್ದರೆ ಅಂತಹ ದೀರ್ಘಕಾಲದ ಕಗ್ಗಂಟನ್ನು ಬಗೆಹರಿಸಲು ಚೀನಾಗೆ ಅನುಕೂಲವಾಗುತ್ತಿತ್ತು ಎಂದು ಅನೇಕರು ನಂಬಿದ್ದಾರೆ. ವಸಾಹತೋತ್ತರ ಭಾರತದಲ್ಲಿ ಜನಾಂಗೀಯ ಪ್ರತ್ಯೇಕತೆಯನ್ನು ಪರಿಹರಿಸಲು ಅಂತಹ ಮಾರ್ಗವನ್ನು ಕಂಡುಕೊಳ್ಳಲಾಗಿತ್ತು. ಆದರೆ ಕಮ್ಯುನಿಸ್ಟ್ ಚೀನಾ ಅಥವಾ ಸೇನಾ ಪ್ರಾಬಲ್ಯದ ಪಾಕಿಸ್ತಾನದಲ್ಲಿ ಇಂತಹ ಕ್ರಮಗಳಿಗೆ ಬೆಂಬಲವಿದ್ದಂತೆ ಕಾಣಲಿಲ್ಲ.

ಈ ಎಲ್ಲ ಕಾರಣಗಳಿಂದಾಗಿ ಟಿಬೆಟ್ ಕಗ್ಗಂಟು ಜೀವಂತವಾಗಿ ಉಳಿದುಬಿಟ್ಟಿತು ಮತ್ತು ಉಳಿಯಲಿದೆ. ಜೊತೆಗೆ ಭಾರತವೂ ಅದರೊಳಗೆ ಸಿಲುಕಿಕೊಂಡಿದೆ. ಇತ್ತೀಚೆಗೆ ಭಾರತ ಮತ್ತು ಚೀನಾ ನಡುವಿನ ಗಡಿ ತಂಟೆ ಕುರಿತ ಮಾತುಕತೆಯಲ್ಲಿ ತಕ್ಕಮಟ್ಟಿನ ಪ್ರಗತಿ ಕಂಡುಬಂದಿತ್ತು. ಆದರೆ ಈಗೇನಾದರೂ ದಲೈಲಾಮ ಉತ್ತರಾಧಿಕಾರಿ ಆಯ್ಕೆ ವಿಚಾರದಲ್ಲಿ ಭಾರತ ಧರ್ಮಗುರುವಿನ ಬೆಂಬಲಕ್ಕೆ ನಿಂತರೆ ಮಾತುಕತೆಗೆ ಕಡಿವಾಣ ಬೀಳಬಹುದು ಮತ್ತು ಚೀನಾದ ಸೇನೆ (PLA)ಹಿಮಾಲಯದ ಗಡಿಯುದ್ದಕ್ಕೂ ತನ್ನ ಪ್ರಚೋದನಕಾರಿ ಆಕ್ರಮಣಗಳನ್ನು ಮತ್ತೆ ಶುರುಹಚ್ಚಿಕೊಳ್ಳಬಹುದು.

ಚೀನಾ ಮೊದಲಿಂದಲೂ ಡೊಕ್ಲಾಮ್ ಮೇಲೆ ಕಣ್ಣಿಟ್ಟಿದೆ. ಯಾಕೆಂದರೆ ಭಾರತದ ಮುಖ್ಯಭಾಗವನ್ನು ಈಶಾನ್ಯ ರಾಜ್ಯಗಳಿಗೆ ಸಂಪರ್ಕ ಕಲ್ಪಿಸುವ ಸಿಲಿಗುರಿ ಕಾರಿಡಾರ್ ಮೇಲೆ ಪ್ರಾಬಲ್ಯ ಸಾಧಿಸಲು ಪಿಎಲ್ಎಗೆ ಸಹಾಯ ಮಾಡುತ್ತದೆ. ಇದರಿಂದಾಗಿಯೇ 2017ರಲ್ಲಿ ಡೊಕ್ಲಾಮ್ ನಲ್ಲಿ ಪಿಎಲ್ಎ ಮತ್ತು ಭಾರತೀಯ ಸೇನೆಯ ನಡುವೆ ಉದ್ವಿಗ್ನ ಪರಿಸ್ಥಿತಿ ಉದ್ಭವಿಸಲು ಕಾರಣವಾಗಿತ್ತು. ಭಾರತದ ಸೇನಾ ಮುಖ್ಯಸ್ಥ ಜನರಲ್ ಉಪೇಂದ್ರ ದ್ವಿವೇದಿ ಅವರು ಇತ್ತೀಚೆಗೆ ಭೂತಾನ್ ಗೆ ಭೇಟಿ ನೀಡಿದ ಸಂದರ್ಭದಲ್ಲಿ ಭಾರತದ ನಿಲುವನ್ನು ಸ್ಪಷ್ಟವಾಗಿ ತಿಳಿಸಲಾಗಿದೆ.

ಗಡಿ ತಂಟೆಗೆ ಮತ್ತೆ ಜೀವ ನೀಡುವುದು ಮತ್ತು ನೆರೆಹೊರೆಯಲ್ಲಿ ಪ್ರತಿಕೂಲವಾದ ಕ್ರಮಗಳನ್ನು ಕೈಗೊಳ್ಳುವುದರ ಜೊತೆಗೇ, ಚೀನಾ ಭಾರತದ ಈಶಾನ್ಯ ರಾಜ್ಯಗಳಲ್ಲಿ ದಂಗೆ ಹೊತ್ತಿಕೊಳ್ಳಲು ಕುಮ್ಮುಕ್ಕು ನೀಡಬಹುದು. ಇನ್ನು ಔಷಧ ಉತ್ಪನ್ನಗಳಲ್ಲಿ ಬಳಸುವ ಅತ್ಯಂತ ನಿರ್ಣಾಯಕ ಎಪಿಐನಂತಹ ಅಂಶಗಳನ್ನು ನಿರಾಕರಿಸುವ ವಿಚಾರದಲ್ಲಿ ಮಾತನಾಡುವುದೇ ಬೇಡ.

ಸವಾಲಾದ ಹಸೀನಾ

ದಲೈಲಾಮ ಅವರಾದರೂ 1959ರಿಂದಲೂ ಭಾರತದಲ್ಲಿದ್ದಾರೆ. ಆದರೆ ಬಾಂಗ್ಲಾದೇಶದ ಪದಚ್ಯುತ ಪ್ರಧಾನಿ ಶೇಖ ಹಸೀನಾ ಅವರು ಕಳೆದ ಸುಮಾರು ಒಂದು ವರ್ಷದಿಂದ ಭಾರತದಲ್ಲಿ ಆಶ್ರಯ ಪಡೆದಿದ್ದಾರೆ. ಕಳೆದ ವರ್ಷದ ಆಗಸ್ಟ್ ತಿಂಗಳಲ್ಲಿ ನಡೆದ ವಿದ್ಯಾರ್ಥಿ-ಯುವಕರ ಕ್ಷಿಪ್ರ ದಂಗೆಯಲ್ಲಿ ಅವರನ್ನು ಪದಚ್ಯುತಗೊಳಿಸಲಾಗಿತ್ತು.

ಬ್ಯಾಂಕಾಕ್ ನಲ್ಲಿ ನಡೆದ BIMSTEC ಶೃಂಗಸಭೆಯ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿಯಾದ ಬಾಂಗ್ಲಾದೇಶದ ಮಧ್ಯಂತರ ಸರ್ಕಾರದ ಮುಖ್ಯ ಸಲಹೆಗಾರ ಮುಹಮ್ಮದ್ ಯೂನುಸ್ ಅವರು, ಹಸೀನಾ ಅವರನ್ನು ನಿಯಂತ್ರಿಸುವಂತೆ ಕೇಳಿಕೊಂಡಿದ್ದಾರೆ. ಆದರೆ ಅದಕ್ಕೆ ಮೋದಿ ಅವರು ನಿರಾಕರಿಸಿದ್ದಾರೆ. ಇಂದಿನ ಸಾಮಾಜಿಕ ಮಾಧ್ಯಮದ ಯುಗದಲ್ಲಿ ಶೇಖ್ ಹಸೀನಾ ಅವರ ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ನಿರಾಕರಿಸಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದ್ದರು.

ಬಾಂಗ್ಲಾದಲ್ಲಿ ಹಸೀನಾ ಅವರ ವಿರುದ್ಧ ಅಸಂಖ್ಯಾತ ಪ್ರಕರಣಗಳು ದಾಖಲಾಗಿವೆ. ಅವುಗಳ ವಿಚಾರಣೆಗಾಗಿ ಅವರನ್ನು ಕೋರ್ಟ್ ಮುಂದೆ ತಂದು ನಿಲ್ಲಿಸಲು ಆಕೆಯನ್ನು ಗಡಿಪಾರುಮಾಡುವಂತೆ ಮಧ್ಯಂತರ ಸರ್ಕಾರ ಈಗಾಗಲೇ ಅಧಿಕೃತವಾಗಿ ಮನವಿ ಮಾಡಿದೆ. ಹಸೀನಾ ಅವರ ಗೈರುಹಾಜರಿಯಲ್ಲಿಯೇ ಅವರ ವಿಚಾರಣೆ ನಡೆಸಲಾಗುತ್ತಿದೆ.

ವಾಸ್ತವದಲ್ಲಿ, ಅಂತಾರಾಷ್ಟ್ರೀಯ ಯುದ್ಧ ಅಪರಾಧಿಗಳ ನ್ಯಾಯಮಂಡಳಿಯಲ್ಲಿ ದಾಖಲಾದ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಹಸೀನಾ ಅವರು ಈಗಾಗಲೇ ಶಿಕ್ಷೆಗೆ ಒಳಗಾಗಿದ್ದಾರೆ. ಆಕೆಯ ಸರ್ಕಾರವೇ ನೇಮಕ ಮಾಡಿದ್ದ ವಕೀಲರು ಈ ಪ್ರಕರಣಗಳು ಯುದ್ಧ ಅಪರಾಧಗಳ ನ್ಯಾಯಮಂಡಳಿಯ ವ್ಯಾಪ್ತಿಯಲ್ಲಿಯೇ ಬರುವುದಿಲ್ಲ ಎಂದು ಸವಾಲೆತ್ತಿದ್ದಾರೆ. ಯಾಕೆಂದರೆ ಆರೋಪಿಸಲಾದ ಯಾವ ಅಪರಾಧವೂ ಯುದ್ಧದ ಸಂದರ್ಭದಲ್ಲಿ ನಡೆದಿರಲಿಲ್ಲ.

ಆದರೆ ನ್ಯಾಯದ ಕಟಕಟೆಯಲ್ಲಿ ಶೇಖ್ ಹಸೀನಾ ಅವರನ್ನು ನಿಲ್ಲಿಸುವ ಸಲುವಾಗಿ ಅವರನ್ನು ದೇಶಕ್ಕೆ ಕರೆತರಲು ಬಾಂಗ್ಲಾದೇಶ ಸರ್ಕಾರವು ಇಂಟರ್-ಪೋಲ್ ಸಹಾಯವನ್ನು ಕೇಳಿರುವುದರಿಂದ ಭಾರತವು ಈಗ ಅಡಕತ್ತರಿಯಲ್ಲಿ ಸಿಲುಕಿಕೊಂಡಿದೆ. ಎಲ್ಲಕ್ಕಿಂತ ಮುಖ್ಯವಾಗಿ ಉಭಯ ರಾಷ್ಟ್ರಗಳ ನಡುವೆ ಹಸ್ತಾಂತರ ಒಪ್ಪಂದ ಜಾರಿಯಲ್ಲಿದೆ. ಇನ್ನೂ ಆಸಕ್ತಿಯ ಸಂಗತಿ ಎಂದರೆ ಈ ಒಪ್ಪಂದವನ್ನು ಹಸೀನಾ ಅಧಿಕಾರದಲ್ಲಿದ್ದಾಗಲೇ ಸಹಿಹಾಕಲಾಗಿತ್ತು.

ಬಾಂಗ್ಲಾಗೆ ಇರುಸುಮುರಿಸು

ಹಸೀನಾ ಅವರು ಬಾಂಗ್ಲಾದೇಶದಲ್ಲಿರುವ ಹಾಗೂ ಭಾರತಕ್ಕೆ ಪಲಾಯನ ಮಾಡಿದ ತಮ್ಮ ಪಕ್ಷದ ನಾಯಕರು ಹಾಗೂ ಕಾರ್ಯಕರ್ತರ ಜೊತೆ ವಾಟ್ಸಾಪ್ ಮತ್ತು ಟೆಲಿಗ್ರಾಮ್ ನಂತಹ ಆನ್ಲೈನ್ ಅಪ್ಲಿಕೇಶನ್ ಗಳ ಮೂಲಕ ನಿರಂತರ ಸಂಪರ್ಕದಲ್ಲಿದ್ದಾರೆ. ಇದು ಅಲ್ಲಿನ ಮಧ್ಯಂತರ ಸರ್ಕಾರಕ್ಕೆ ಇನ್ನಷ್ಟು ಇರುಸುಮುರಿಸು ಉಂಟುಮಾಡಿದೆ.

ಯೂನುಸ್ ಸರ್ಕಾರದ ಮೇಲಿನ ಮಾತಿನ ದಾಳಿಯನ್ನು ಹಸೀನಾ ಅವರು ನಿರಂತರವಾಗಿ ಮುಂದುವರಿಸಿದ್ದಾರೆ. ಇದು ಢಾಕಾದಲ್ಲಿ ಮಧ್ಯಂತರ ಸರ್ಕಾರದ ವಿರುದ್ಧ ಆಂದೋಲನ ನಡೆಸಲು ಪಕ್ಷದ ಕಾರ್ಯಕರ್ತರನ್ನು ಸಜ್ಜುಗೊಳಿಸಲು ಈ ತಂತ್ರ ಬಳಸಿದ್ದಾರೆ ಎಂದು ಅಂದಾಜು ಮಾಡಲಾಗಿದೆ.

“ಯೂನುಸ್ ಅವರು ಇಸ್ಲಾಮಿಕ್ ಉಗ್ರಗಾಮಿಗಳು ಮತ್ತು ವಿದೇಶಿ ಪೋಷಕರ ಸಹಾಯದಿಂದ ಬಲವಂತವಾಗಿ ಮತ್ತು ಪಿತೂರಿಯ ಮೂಲಕ ಅಕ್ರಮ ಸರ್ಕಾರವನ್ನು ಮುನ್ನಡೆಸುತ್ತಿರುವ ನಾಯಕ” ಎಂದು ಹಸೀನಾ ಟೀಕಿಸಿದ್ದಾರೆ.

ಯೂನುಸ್ ಅವರು ಅಮೆರಿಕ, ಚೀನಾ ಮತ್ತು ಪಾಕಿಸ್ತಾನದ ಜೊತೆ ಉತ್ತಮ ಬಾಂಧವ್ಯವನ್ನು ಹೊಂದಿದ್ದಾರೆ. ಅವಾಮಿ ಲೀಗ್ ತಮ್ಮ ಸರ್ಕಾರದ ಮೇಲೆ ಒತ್ತಡ ಹೇರುವ ಸಲುವಾಗಿ ನೆರೆಯ ನೆಲೆ ಬಳಕೆ ಮಾಡುವುದನ್ನು ತಪ್ಪಿಸಲು ಹಸೀನಾ ಅವರ ಗಡಿಪಾರು ವಿಚಾರವನ್ನು ಯೂನುಸ್ ಪ್ರಮುಖವಾಗಿ ಪರಿಗಣಿಸಿರಬಹುದು.

ಇವೆಲ್ಲದರ ನಡುವೆ ಸಾವಿರಾರು ಮಂದಿ ಅವಾಮಿ ಲೀಗ್ ನಾಯಕರು ಮತ್ತು ಬೆಂಬಲಿಗರು ಭಾರತದಲ್ಲಿ ಗುಪ್ತ ಒಪ್ಪಂದದೊಂದಿಗೆ ಠಿಕಾಣಿ ಹೂಡಿರುವುದು ಯೂನುಸ್ ಚಿಂತೆಗೆ ಕಾರಣವಾಗಿದೆ.

ದಲೈಲಾಮ ಪ್ರಕರಣದಲ್ಲಿ ಆದಂತೆಯೇ ಹಸೀನಾ ಪ್ರಕರಣದಲ್ಲಿಯೂ ಕೂಡ ಭಾರತವು ಹಸೀನಾ ಬೆಂಬಲಕ್ಕೆ ನಿಂತಿದೆ. ದಲೈಲಾಮ ಅವರ ಪ್ರಕರಣದಲ್ಲಾದರೆ ಭಾರತದ ಬೆಂಬಲವಿರುವುದು ರಾಜಕೀಯ ಕಾರಣಕ್ಕಲ್ಲ ಬದಲಾಗಿ ಆಧ್ಯಾತ್ಮಿಕ ಕಾರಣಕ್ಕೆ. ಆದರೆ ಹಸೀನಾ ವಿಚಾರದಲ್ಲಿ ಮಾತ್ರ ಅದು ರಾಜಕೀಯ ಕಾರಣವೆನ್ನುವುದು ಸ್ಪಷ್ಟ. ಅವರ ದಿವಂಗತ ತಂದೆ ಶೇಖ್ ಮುಜಿಬುರ್ ರೆಹೆಮಾನ್ ಮತ್ತು ಹಸೀನಾ ಅವರು ಭಾರತದ ನಂಬಿಕಸ್ಥ ಮಿತ್ರರಾಗಿದ್ದರು. ಅವರು ಅಧಿಕಾರದಲ್ಲಿದ್ದಾಗ ದ್ವಿಪಕ್ಷೀಯ ಸಂಬಂಧದಲ್ಲಿ ಸಾಕಷ್ಟು ಸುಧಾರಣೆ ಉಂಟಾಗಿತ್ತು.

ಮೇಲೆ ಪ್ರಸ್ತಾಪ ಮಾಡಿದ ಎರಡೂ ಪ್ರಕರಣಗಳಲ್ಲಿ ಬೆಂಬಲವನ್ನು ಹಿಂದಕ್ಕೆ ಪಡೆದಿದ್ದೇ ಆದರೆ ಭಾರತವನ್ನು ದುರ್ಬಲ ಎಂದು ವ್ಯಾಖ್ಯಾನಿಸಲಾಗುತ್ತದೆ. ಪ್ರಾದೇಶಿಕ ಶಕ್ತಿಯಾಗಿ ಜಾಗತಿಕ ವೇದಿಕೆಯಲ್ಲಿ ಪ್ರಮುಖ ಪಾತ್ರ ವಹಿಸಬೇಕು ಎಂಬ ಮಹತ್ವಾಕಾಂಕ್ಷೆಯನ್ನು ಹೊಂದಿರುವ ಮತ್ತು ಬಲಿಷ್ಠ ನಾಯಕನ ಚಿತ್ರಣವನ್ನು ಪಡೆದಿರುವ ಪ್ರಧಾನಿ ಮೋದಿ ಅವರಿಗೆ ಇದು ಸ್ವೀಕಾರಾರ್ಹ ಸಂಗತಿಯಲ್ಲ. ಆದರೆ ಪರಿಣಾಮಗಳನ್ನು ಎದುರಿಸಲು ಭಾರತ ಯಾವತ್ತೂ ಸಿದ್ಧವಿದೆ ಎಂಬುದು ಇದರ ಅರ್ಥವಾಗಿದೆ.


Read More
Next Story