The Federal @ Bailakuppe | ಟಿಬೆಟ್‌ ತೊರೆದು ಕಳೆಯಿತು 6 ದಶಕ; ತವರಿಗೆ ಮರಳುವ ತವಕ
x
ಧರ್ಮಗುರು ದಲೈ ಲಾಮಾ ಭೇಟಿ ಮಾಡಿ ಆಶೀರ್ವಾದ ಪಡೆದ ವಯೋವೃದ್ಧ ಥಿನ್ಲೆ

The Federal @ Bailakuppe | ಟಿಬೆಟ್‌ ತೊರೆದು ಕಳೆಯಿತು 6 ದಶಕ; ತವರಿಗೆ ಮರಳುವ ತವಕ

ಬೈಲಕುಪ್ಪೆಯ ಟಿಬೆಟಿಯನ್‌ ಸೆಟ್ಲ್‌ಮೆಂಟ್‌ನಲ್ಲಿದೆ ವೃದ್ಧಾಶ್ರಮ. ಚೀನಾ ಟಿಬೆಟ್​ ಆಕ್ರಮಿಸಿಕೊಂಡಾಗ ದಲೈ ಲಾಮಾ ಹಿಂಬಾಲಿಸಿಕೊಂಡು ಬಂದಿದ್ದ 80 ಸಾವಿರ ಟಿಬೆಟಿಯನ್ನರಲ್ಲಿ ಕೆಲವರು ಬೈಲಕುಪ್ಪೆಯಲ್ಲಿದ್ದಾರೆ. ಎಲ್ಲರದರೂ ಸ್ವತಂತ್ರ ಟಿಬೆಟಿನ ಕನಸು.


ಇವರ ವಯಸ್ಸು 80 ವರ್ಷ. ಹೆಸರು ಥಿನ್ಲೆ. ಟಿಬೆಟ್​ ಅನ್ನು ಚೀನಾ ಆಕ್ರಮಿಸಿಕೊಂಡ ಬಳಿಕ ಧರ್ಮಗುರು ದಲೈ ಲಾಮಾ ಅವರನ್ನು ಹಿಂಬಾಲಿಸಿಕೊಂಡು ಬರಿಗೈಯಲ್ಲಿ ಬಂದಿದ್ದ ಸುಮಾರು 80 ಸಾವಿರಕ್ಕೂ ಹೆಚ್ಚು ಟಿಬೆಟಿಯನ್ ಬೌದ್ದರಲ್ಲಿ ಇವರೂ ಕೂಡ ಒಬ್ಬರು.

ಟಿಬೆಟ್ ಎಂದಾಕ್ಷಣ ಥಿನ್ಲೆ ಕಣ್ಣುಗಳು ಹೊಳೆಯುತ್ತವೆ. ಮುಖದಲ್ಲಿ ಮಂದಹಾಸ ಮೂಡುತ್ತದೆ. ಸಂತಸ ಅವರ ಮುಖಭಾವದಲ್ಲಿ ಎದ್ದು ಕಾಣುತ್ತದೆ. ಮತ್ತೆ ನಮ್ಮ ದೇಶಕ್ಕೆ ಹೋಗುತ್ತೇವೆ ಎಂಬ ಭರವಸೆಯನ್ನು ಕಣ್ಣಲ್ಲಿಯೇ ವ್ಯಕ್ತಪಡಿಸುತ್ತಾರೆ.

ಇವರಂತೆಯೆ ದೇಶ ತೊರೆದು ಬಂದಿರುವ ವಯೋವೃದ್ಧರು ಬೈಲಕುಪ್ಪೆಯ ಈ ವೃದ್ಧಾಶ್ರಮ (ಓಲ್ಡ್​ ಪೀಪಲ್ಸ್​ ಹೋಮ್-ಒಪಿಎಚ್​) ದಲ್ಲಿದ್ದಾರೆ. ಎಲ್ಲರದ್ದು ಒಂದೊಂದು ಕಥೆ. ಮತ್ತೆ ಟಿಬೆಟ್​ಗೆ ಹಿಂದಿರುಗುತ್ತೇವೆ. ಧರ್ಮಗುರು ದಲೈ ಲಾಮಾ ತಮ್ಮೆಲ್ಲರನ್ನೂ ಟಿಬೆಟ್​ಗೆ ಕರೆದೊಯ್ಯುತ್ತಾರೆ ಎಂಬ ಭರವಸೆ ಜೀವನದ ಸಂಧ್ಯಾಕಾಲದಲ್ಲಿರುವ ಈ ವಯೋವೃದ್ಧರಲ್ಲಿದೆ.

ಬೈಲಕುಪ್ಪೆ ಟಿಬೆಟಿಯನ್ ಸೆಟಲ್ಮೆಂಟ್​ಗೆ ಇತ್ತೀಚೆಗೆ ದಲೈ ಲಾಮಾ ಬಂದಿರುವುದು ಇವರ ಸಂತೋಷಕ್ಕೆ ಕಾರಣವಾಗಿದೆ. ಮೊಣಕಾಲು ಚಿಪ್ಪು ಬದಲಿ ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಟಿಬೆಟಿಯನ್ ಧರ್ಮಗುರು 14ನೇ ದಲೈ ಲಾಮಾ ಇಲ್ಲಿನ ತಷಿ ಲುಂಪೊ ಮೋನಾಸ್ಟರಿಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಜನವರಿ 4ರಂದು ಇಲ್ಲಿಗೆ ಬಂದಿರುವ ದಲೈ ಲಾಮಾ, ಫೆಬ್ರವರಿ 5 ರಂದು ಧರ್ಮಶಾಲಾಕ್ಕೆ ಹಿಂದಿರುಗಲಿದ್ದಾರೆ.

ದಲೈ ಲಾಮಾ ಅವರೊಂದಿಗೆ ನಡೆದು ಬಂದವರು

ಮೈಸೂರು ಜಿಲ್ಲೆಯ ಬೈಲಕುಪ್ಪೆ ಟಿಬೆಟಿಯನ್ ಸೆಟಲ್ಮೆಂಟ್​ ಭಾರತದ ಎರಡನೇ ಅತಿದೊಡ್ಡ ಟಿಬೆಟಿಯನ್ ಕ್ಯಾಂಪ್ ಆಗಿದೆ. ಆರಂಭದಲ್ಲಿ ಅಂದರೆ 1961ರಲ್ಲಿ ಸುಮಾರು 25 ಸಾವಿರ ಟಿಬೆಟಿಯೆನ್ ನಿರಾಶ್ರಿತರಿಗೆ ಇಲ್ಲಿ ಸೂರು ಕಲ್ಪಿಸಲಾಗಿತ್ತು. ಆದರೆ ಈಗ ಅವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ ಸುಮಾರು 12,500 ಟಿಬೆಟಿಯನ್ನರು ವಾಸ್ತವ್ಯ ಮಾಡುತ್ತಿದ್ದಾರೆ. ಪ್ರತ್ಯೇಕ ಟಿಬೆಟಿಯನ್ ಕೋರ್ಟ್​ ಇರುವಂತೆ, ಬೈಲಕುಪ್ಪೆಯಲ್ಲಿ ಟಿಬೆಟಿಯನ್ನರಿಗಾಗಿ ವೃದ್ಧಾಶ್ರಮವೂ ಇದೆ. ಈ ವೃದ್ಧಾಶ್ರಮದಲ್ಲಿ 40 ವಯೋವೃದ್ಧರು ತಮ್ಮ ಅಂತಿಮ ಕಾಲ ಕಳೆಯಲು ವ್ಯವಸ್ಥೆ ಮಾಡಲಾಗಿದೆ. ಸಧ್ಯಕ್ಕೆ ಇಲ್ಲಿ 36 ವಯೋವೃದ್ಧರು ಜೀವನ ಕಳೆಯುತ್ತಿದ್ದಾರೆ.

ಏಕಾಏಕಿ ಚೀನಾ ಟಬೆಟ್​ ಅನ್ನು ಆಕ್ರಮಿಸಿಕೊಂಡಾಗ ಜೀವ ಉಳಿಸಿಕೊಳ್ಳಲು ಧರ್ಮಗುರು 14ನೇ ದಲೈ ಲಾಮಾ 1959 ರಲ್ಲಿ ಭಾರತಕ್ಕೆ ಬಂದು ಆಶ್ರಯ ಪಡೆದರು. ಆಗ ಅವರೊಂದಿಗೆ ಇಲ್ಲಿರುವವರೂ ನಡೆದುಕೊಂಡು ಬಂದವರು ಎಂಬುದು ವಿಶೇಷ.

ನನ್ನ ದೇಶ, ನನ್ನ ಮನೆ ನೆನಪಾಗುತ್ತಲೇ ಇರುತ್ತದೆ

ನಾನು ಟಿಬೆಟ್‌ನಲ್ಲಿ ಹುಟ್ಟಿದ್ದೇನೆ. ನಾನು ನನ್ನ ಮನೆ-ದೇಶವನ್ನು ತುಂಬಾ ಮಿಸ್ ಮಾಡಿಕೊಳ್ಳುತ್ತೇನೆ. ಮತ್ತೆ ಟಿಬೆಟ್​ಗೆ ಹೋಗಲು ನನಗೆ ಇಷ್ಟವಿದೆ. ಅದಕ್ಕಾಗಿ ಕಾಯುತ್ತಿದ್ದೇನೆ. ಜೊತೆಗೆ ನನಗೆ ಆಶ್ರಯ ನೀಡಿದ್ದಕ್ಕಾಗಿ ಭಾರತಕ್ಕೆ ನಾನು ಕೃತಜ್ಞನಾಗಿದ್ದೇನೆ. ನಾವು ಭಾರತಕ್ಕೆ ಬರಿಗೈಯಲ್ಲಿ ಬಂದಿದ್ದೆವು. ಮೇಲೆ ಆಕಾಶ ಮತ್ತು ಕೆಳಗೆ ಭೂಮಿ ಬಿಟ್ಟರೆ ಏನೂ ಇರಲಿಲ್ಲ. ಇಲ್ಲಿ ಮನೆ ಕಟ್ಟಿಕೊಳ್ಳಲೂ ನಾವು ಹೆಣಗಾಡಿದೆವು ಎಂದು ವಿವರಿಸಿದರು ಥಿನ್ಲೆ.

ಅವರಿಗೆ ಟಿಬೆಟಿಯನ್ ಭಾಷೆ ಬಿಟ್ಟರೆ ಬೇರೆ ಭಾಷೆ ಬರುವುದಿಲ್ಲ. ಅದನ್ನು ಕನ್ನಡದಲ್ಲಿ ʼದ ಫೆಡರಲ್ ಕರ್ನಾಟಕʼ​ಕ್ಕೆ ಭಾಷಾಂತರಿಸಿದ್ದು ಒಪಿಎಚ್​ ನೋಡಿಕೊಳ್ಳುತ್ತಿರುವ ಅಲ್ಲಿನ ವ್ಯವಸ್ಥಾಪಕ ಸಿರಿಂಗ್ ಪಾಲ್ದೆನ್. 33 ವಯಸ್ಸಿನ ಸಿರಿಂಗ್ ಪಾಲ್ದೆನ್ ಬೈಲಕುಪ್ಪೆಯಲ್ಲಿ ಹುಟ್ಟಿ ಬೆಳೆದಿದ್ದಾರೆ. ಅವರು ಕನ್ನಡವನ್ನು ತುಂಬ ಚೆನ್ನಾಗಿ ಮಾತನಾಡುತ್ತಾರೆ.

ಚೀನಾ ಕಣ್ಣಲ್ಲಿ ದೇಶಭ್ರಷ್ಟರು ಈ ವೃದ್ಧರು

ಹೀಗೆ ಬಂದಿದ್ದವರೆಲ್ಲ ಈಗ ಈ ವೃದ್ಧಾಶ್ರಮದಲ್ಲಿದ್ದಾರೆ. ವೃದ್ಧ ಥಿನ್ಲೆ ಅವರಂತೆಯೆ ಉಳಿದವರೆಲ್ಲರೂ ತಮ್ಮ ದೇಶ ತೊರೆದು ಬಂಧು-ಬಾಂಧವರನ್ನು ಬಿಟ್ಟು ಭಾರತಕ್ಕೆ ಬಂದವರೇ. ಚೀನಾ ಇವರಿಗೆ ದೇಶಭ್ರಷ್ಟರು ಎಂಬ ಹಣೆಪಟ್ಟಿ ಕಟ್ಟಿದೆ. ಆದರೂ ಕೂಡ ಒಂದಲ್ಲ ಒಂದು ದಿನ ತಮ್ಮ ತಾಯ್ನಾಡಿಗೆ ಹಿಂದಿರುಗುತ್ತೇವೆ ಎಂಬ ಭರವಸೆಯೂ ಇವರಿಗಿದೆ. ಆದರೆ ಈಗಾಗಲೇ ಚೀನಾ ಟಿಬೆಟ್​ ತನ್ನದೇ ದೇಶದ ಭಾಗವೆಂದು ಘೊಷಣೆ ಮಾಡಿ ಆಗಿದೆ. ಏಷ್ಯಾದ ಬಲಾಢ್ಯ ರಾಷ್ಟ್ರವಾಗಿರುವ ಚೀನಾದಿಂದ ತಮ್ಮ ಟಿಬೆಟ್​ ಅನ್ನು ಮರಳಿ ಪಡೆಯುತ್ತೇವೆ ಎಂಬ ವಿಶ್ವಾಸವು ಈ ವಯೋವೃದ್ಧರ ಮುಖದಲ್ಲಿ ಕಂಡುಬರುತ್ತದೆ.

ಕೆಲವರಿಗೆ ಸಂಬಂಧಿಕರಿದ್ದಾರೆ, ಕೆಲವರಿಗೆ ಇಲ್ಲ

ಬೈಲಕುಪ್ಪೆ ಒಪಿಎಚ್​ನಲ್ಲಿರುವ 36 ವೃದ್ಧರಲ್ಲಿ ಕೆಲವರಿಗೆ ಸಂಬಂಧಿಕರು, ಮಕ್ಕಳು ಇದ್ದಾರೆ. ಕೆಲವರಿಗೆ ಯಾರೂ ಇಲ್ಲ. ದೇಶಕ್ಕಾಗಿ ತಂದೆ-ತಾಯಿಗಳನ್ನು ಬಿಟ್ಟು ಬಂದಿದ್ದವರು ತಾಯ್ನಾಡಿಗೆ ಹಿಂದಿರುಗುವ ಭರವಸೆಯಲ್ಲಿಯೇ ಇಡೀ ಜೀವನವನ್ನು ಒಂಟಿಯಾಗಿ ಕಳೆದಿದ್ದಾರೆ. ಇನ್ನು ಕೆಲವರ ಮಕ್ಕಳು ಉದ್ಯೋಗ ಅರಸಿಕೊಂಡು ಹೋಗಿ ವಿದೇಶದಲ್ಲಿ ವಾಸಿಸುತ್ತಿದ್ದಾರೆ. ಆದರೆ ಈ ವಯೋವೃದ್ಧರಿಗೆ ತಮ್ಮ 2ನೇ ತಾಯ್ನಾಡಾಗಿರುವ ಭಾರತವನ್ನು ಬಿಟ್ಟು ಹೋಗಲು ಮನಸ್ಸಿಲ್ಲ. ಹೀಗಾಗಿ ಈ ವೃದ್ಧಾಶ್ರಮದಲ್ಲಿದ್ದುಕೊಂಡು ತಮ್ಮ ಜೀವನದ ಕೊನೆ ಕಾಲವನ್ನು ಭಾರತದಲ್ಲಿಯೇ ಕಳೆಯಲು ನಿರ್ಧರಿಸಿದ್ದಾರೆ.

ಹೊರದೇಶಗಳಲ್ಲಿರುವ ಟಿಬೆಟಿಯನ್ನರ ದೇಣಿಗೆ

ಬೈಲಕುಪ್ಪೆಯನ್ನು ತೊರೆದು ವಿದೇಶಗಳಲ್ಲಿ ಉದ್ಯೋಗ ಮಾಡುತ್ತಿರುವ ಟಿಬೆಟಿಯನ್ನರು ಕೊಡುವ ದೇಣಿಗೆಯಿಂದ ಈ ವೃದ್ಧಾಶ್ರಮ ನಡೆಯುತ್ತಿದೆ. ಜೊತೆಗೆ ಇಲ್ಲಿರುವ ಕೆಲವರ ಮಕ್ಕಳೂ ಕೂಡ ವಿದೇಶದಲ್ಲಿದ್ದಾರೆ. ಅವರೂ ದೇಣಿಗೆಯನ್ನು ಕೊಡುತ್ತಾರೆ. 80 ರಿಂದ 100 ವಯೋಮಾನದ ವೃದ್ಧರು ಇಲ್ಲಿದ್ದಾರೆ. ಇವರೆಲ್ಲರನ್ನೂ ದಲೈ ಲಾಮಾ ಜನವರಿ 9 ರಂದು ಭೇಟಿ ಮಾಡಿದ್ದರಂತೆ. ಜೀವಮಾನದಲ್ಲಿ ಒಮ್ಮೆಯಾದರೂ ದಲೈ ಲಾಮಾ ಅವರಿಂದ ಆಶೀರ್ವಾದ ಪಡೆಯಬೇಕು ಎಂಬುದು ಪ್ರತಿಯೊಬ್ಬ ಟಿಬೆಟಿಯನ್ನರ ಆಶಯ. ಹೀಗಾಗಿ ಮತ್ತೊಮ್ಮೆ ದಲೈ ಲಾಮಾ ತಮ್ಮನ್ನು ಮತ್ತೊಮ್ಮೆ ಭೇಟಿ ಮಾಡಿರುವುದು ಇವರೆಲ್ಲರಿಗೂ ಹೊಸ ಭರವಸೆ ಮೂಡಿಸಿದೆ.

Read More
Next Story