Dalai Lama’s birthday : ದಲೈ ಲಾಮಾರ 90ನೇ ಜನ್ಮದಿನ: ನಾನಾ ದೇಶಗಳ ಗಣ್ಯರಿಂದ ಶುಭಾಶಯ
x

Dalai Lama’s birthday : ದಲೈ ಲಾಮಾರ 90ನೇ ಜನ್ಮದಿನ: ನಾನಾ ದೇಶಗಳ ಗಣ್ಯರಿಂದ ಶುಭಾಶಯ

ದಲೈ ಲಾಮಾರ ಜನ್ಮದಿನದ ಸಂಭ್ರಮದಲ್ಲಿ ಕೇಂದ್ರ ಸಚಿವ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಹಾಲಿವುಡ್ ನಟ ರಿಚರ್ಡ್ ಗೇರ್ ಭಾಗವಹಿಸಿದ್ದಾರೆ


ಟಿಬೆಟ್‌ನ ಆಧ್ಯಾತ್ಮಿಕ ನಾಯಕ ದಲೈ ಲಾಮಾ ಅವರು ಇಂದು,( ಜುಲೈ 6ರಂದು) ತಮ್ಮ 90ನೇ ಜನ್ಮದಿನವನ್ನು ಸಂಭ್ರಮದಿಂದ ಆಚರಿಸಿಕೊಂಡಿದ್ದಾರೆ. ವಿಶೇಷ ಸಂದರ್ಭದಲ್ಲಿ ಮೂವರು ಮಾಜಿ ಅಮೆರಿಕ ಅಧ್ಯಕ್ಷರು ವಿಡಿಯೋ ಸಂದೇಶದ ಮೂಲಕ ಶುಭಾಶಯ ಕೋರಿದ್ದಾರೆ. ದಲೈ ಲಾಮಾ ಅವರ ಜನ್ಮದಿನದ ಆಚರಣೆಯಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು, ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಹಾಲಿವುಡ್ ನಟ ರಿಚರ್ಡ್ ಗೇರ್ ಸೇರಿದಂತೆ ಹಲವು ಗಣ್ಯರು ಭಾಗವಹಿಸಿದ್ದರು.

ತಮ್ಮ ಜನ್ಮದಿನದ ಮುನ್ನಾ ದಿನ, ದಲೈ ಲಾಮಾ ಅವರು ತಮ್ಮ ಅನುಯಾಯಿಗಳಿಗೆ, ಎಲ್ಲರೊಂದಿಗೆ ಕರುಣೆಯಿಂದ ವರ್ತಿಸುವಂತೆ ಮನವಿ ಮಾಡಿದ್ದಾರೆ. ಇದೇ ವೇಳೆ ಮಾನವೀಯ ಮೌಲ್ಯಗಳನ್ನು ಉತ್ತೇಜಿಸುವುದು ಮತ್ತು ಧಾರ್ಮಿಕ ಸೌಹಾರ್ದತೆ ಬೆಳೆಸುವುದರ ಮೇಲೆ ತಾವು ಗಮನ ಕೇಂದ್ರೀಕರಿಸುವುದಾಗಿ ಅವರು ತಿಳಿಸಿದ್ದಾರೆ. "ನಾನು ಕೇವಲ ಒಬ್ಬ ಸರಳ ಬೌದ್ಧ ಭಿಕ್ಷು; ಸಾಮಾನ್ಯವಾಗಿ ನಾನು ಜನ್ಮದಿನದ ಆಚರಣೆಯಲ್ಲಿ ತೊಡಗಿಕೊಳ್ಳುವುದಿಲ್ಲ. ಆದರೆ, ನೀವು ನನ್ನ ಜನ್ಮದಿನಕ್ಕೆ ಸಂಬಂಧಿಸಿದ ಕಾರ್ಯಕ್ರಮಗಳನ್ನು ಆಯೋಜಿಸುತ್ತಿರುವುದರಿಂದ ಕೆಲವು ಆಲೋಚನೆಗಳನ್ನು ಹಂಚಿಕೊಳ್ಳಲು ಬಯಸುತ್ತೇನೆ" ಎಂದು ಅವರು ಹೇಳಿದ್ದಾರೆ.

"ಅಭಿವೃದ್ಧಿಗಾಗಿ ಶ್ರಮಿಸುವುದು ಮುಖ್ಯವಾದರೂ, ಒಳ್ಳೆಯ ಹೃದಯವನ್ನು ಬೆಳೆಸುವ ಮೂಲಕ ಮನಸ್ಸಿನ ಶಾಂತಿಯನ್ನು ಸಾಧಿಸುವುದು ಮತ್ತು ಕೇವಲ ಆತ್ಮೀಯರಿಗೆ ಮಾತ್ರವಲ್ಲ, ಎಲ್ಲರಿಗೂ ಕರುಣೆ ತೋರಿಸುವುದು ಅತ್ಯಂತ ಮುಖ್ಯ. ಇದರಿಂದ ನೀವು ಈ ಜಗತ್ತನ್ನು ಉತ್ತಮವಾಗಿಸಲು ಕೊಡುಗೆ ನೀಡುತ್ತೀರಿ" ಎಂದು ಅವರು ತಮ್ಮ ಸಂದೇಶದಲ್ಲಿ ಒತ್ತಿ ಹೇಳಿದರು.

ಮೋದಿ ಶುಭಾಶಯ

ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು X (ಹಿಂದಿನ ಟ್ವಿಟರ್) ಮೂಲಕ ದಲೈ ಲಾಮಾ ಅವರಿಗೆ ಶುಭಾಶಯ ಕೋರಿದರು: "ದಲೈ ಲಾಮಾ ಅವರ 90ನೇ ಜನ್ಮದಿನದಂದು 1.4 ಬಿಲಿಯನ್ ಭಾರತೀಯರೊಂದಿಗೆ ನಾನು ಅವರಿಗೆ ಶುಭಾಶಯ ಕೋರುತ್ತೇನೆ. ಅವರು ಪ್ರೀತಿ, ಕರುಣೆ, ತಾಳ್ಮೆ ಮತ್ತು ನೈತಿಕ ಶಿಸ್ತಿನ ಶಾಶ್ವತ ಸಂಕೇತವಾಗಿದ್ದಾರೆ. ಅವರ ಸಂದೇಶವು ಎಲ್ಲ ಧರ್ಮಗಳಿಂದ ಗೌರವ ಮತ್ತು ಮೆಚ್ಚುಗೆಯನ್ನು ಗಳಿಸಿದೆ. ಅವರ ಆರೋಗ್ಯ ಮತ್ತು ದೀರ್ಘಾಯುಷ್ಯಕ್ಕಾಗಿ ನಾವು ಪ್ರಾರ್ಥಿಸುತ್ತೇವೆ." ಎಂದು ಬರೆದಿದ್ದಾರೆ.

ಮೆಕ್‌ಲಿಯೋಡ್‌ಗಂಜ್‌ನ ಟಿಬೆಟಿಯನ್ ಸಮುದಾಯವು ದಲೈ ಲಾಮಾ ಅವರ ಜನ್ಮದಿನದ ಸಂಭ್ರಮವನ್ನು ಭಾನುವಾರದಿಂದ ಒಂದು ವಾರದವರೆಗೆ ಆಚರಿಸುತ್ತಿದೆ. ಈ ಆಚರಣೆಗಳಲ್ಲಿ ಧಾರ್ಮಿಕ ಸಮ್ಮೇಳನಗಳು, ಯುವ ಒಕ್ಕೂಟದ ಕಾರ್ಯಕ್ರಮಗಳು, ಚಲನಚಿತ್ರ ಪ್ರದರ್ಶನಗಳು ಮತ್ತು ಟಿಬೆಟಿಯನ್ ಆಧ್ಯಾತ್ಮಿಕ ನಾಯಕನ ದೀರ್ಘಾಯುಷ್ಯಕ್ಕಾಗಿ ವಿಶೇಷ ಪ್ರಾರ್ಥನೆಗಳು ಸೇರಿವೆ.

ದಲೈ ಲಾಮಾ ಅವರ ಜನ್ಮದಿನದ ಸಂಭ್ರಮಾಚರಣೆಯಲ್ಲಿ ಕೇಂದ್ರ ಸಚಿವರಾದ ಕಿರಣ್ ರಿಜಿಜು (ಇವರು ಬೌದ್ಧ ಧರ್ಮದ ಅನುಯಾಯಿ), ರಾಜೀವ್ ರಂಜನ್ ಸಿಂಗ್, ಅರುಣಾಚಲ ಪ್ರದೇಶದ ಮುಖ್ಯಮಂತ್ರಿ ಪೇಮಾ ಖಂಡು ಮತ್ತು ಹಾಲಿವುಡ್ ನಟ ರಿಚರ್ಡ್ ಗೇರ್ ಸೇರಿದಂತೆ ಹಲವು ಪ್ರಮುಖ ವ್ಯಕ್ತಿಗಳು ಭಾಗವಹಿಸಿ ಶುಭ ಕೋರಿದರು.

Read More
Next Story