
ಕಸ್ಟಡಿ ಸಾವುಗಳ ಅಂಕುಶಕ್ಕೆ ಸರ್ಕಾರ, ಕೋರ್ಟ್, ನಾಗರಿಕ ಸಂಘಟನೆಗಳು ಕಾರ್ಯಪ್ರವೃತ್ತವಾಗಲಿ
ಪೊಲೀಸ್ ಎನ್ಕೌಂಟರ್ ಗಳು, ಪೊಲೀಸ್ ಕಸ್ಟಡಿಯಲ್ಲಿ ಚಿತ್ರಹಿಂಸೆ ಎನ್.ಎಚ್.ಆರ್.ಸಿ ಮಾರ್ಗಸೂಚಿಗಳು ಹಾಗೂ ಸಾಂವಿಧಾನಿಕ ಕಾರ್ಯವಿಧಾನಗಳ ಸ್ಪಷ್ಟ ಉಲ್ಲಂಘನೆ. ಈ ಹಿನ್ನೆಲೆಯಲ್ಲಿ ಕಾನೂನು ಜಾರಿಗೊಳಿಸುವ ಸಿಬ್ಬಂದಿಯನ್ನು ನಿಯಂತ್ರಿಸಲು ಇದು ಸಕಾಲವಾಗಿದೆ
ಅದು ದಕ್ಷಿಣ ತಮಿಳು ನಾಡಿನ ಹಳ್ಳಿ. ಅಂದು ಅಲ್ಲಿನ ಮಂದಿರದ ಭಕ್ತೆಯೊಬ್ಬರು ದೂರು ದಾಖಲಿಸುತ್ತಾರೆ. ಮಿಂಚಿನ ವೇಗದಲ್ಲಿ ಕಾರ್ಯಪ್ರವೃತ್ತರಾದ ಪೊಲೀಸರು ಭದ್ರತಾ ಸಿಬ್ಬಂದಿಯನ್ನು ಬಂಧಿಸುತ್ತಾರೆ. ಆದರೆ ಇದು ಭದ್ರತಾ ಸಿಬ್ಬಂದಿ ಅಜಿತ್ ಕುಮಾರ್ ಎಂಬಾತನಿಗೆ ಚಿತ್ರಹಿಂಸೆ ಮತ್ತು ಆತನ ಸಾವಿಗೆ ಕಾರಣವಾಗುತ್ತದೆ.
ಇದು ಸಂಭವಿಸಿದ್ದು ತಮಿಳು ನಾಡಿನ ಶಿವಗಂಗಾ ಜಿಲ್ಲೆಯ ತಿರುಪ್ಪುವನಂ ಎಂಬಲ್ಲಿ. ಅಜಿತ್ ಕುಮಾರ್ ಭಕ್ತೆಯ ಆಭರಣವನ್ನು ಕಳವು ಮಾಡಿದ ಎಂದು ಆರೋಪಿಸಲಾಗುತ್ತದೆ. ಆತನಿಂದ ತಪ್ಪೊಪ್ಪಿಗೆಯನ್ನು ಪಡೆಯಲು ನಡೆದಿದೆ ಎನ್ನಲಾದ ಭೀಕರ ಚಿತ್ರಹಿಂಸೆ ಮತ್ತು ಅತ್ಯಂತ ಕೀಳುದರ್ಜೆಯ ವಿಧಾನಗಳು ಅಂತಿಮವಾಗಿ ಯುವಕನ ಸಾವಿಗೆ ಕಾರಣವೆಂದು ಮರಣೋತ್ತರ ಪರೀಕ್ಷಾ ವರದಿ ಹೇಳುತ್ತದೆ.
ಘಟನೆಯ ಬಳಿಕ ಮದ್ರಾಸ್ ಹೈಕೋರ್ಟಿನ ಮದುರೈ ಪೀಠದ ಮುಂದೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಕೆಯಾಗುತ್ತದೆ. ಮರಣೋತ್ತರ ಪರೀಕ್ಷಾ ವರದಿಯೂ ಸೇರಿದಂತೆ ಎಲ್ಲ ದಾಖಲೆಗಳನ್ನು ಸಲ್ಲಿಸುವಂತೆ ಹೈಕೋರ್ಟ್ ಪೀಠ ನಿರ್ದೇಶಿಸುತ್ತದೆ. ಇದರಿಂದ ಯುವಕನ ದೇಹದಲ್ಲಿ 42ಕ್ಕೂ ಹೆಚ್ಚು ಗಾಯಗಳಾಗಿರುವುದು ಬಹಿರಂಗವಾಗುತ್ತದೆ.
ಸ್ಟಾಲಿನ್ ಮಾದರಿ ನಡೆ
ಇನ್ನೇನು ಈ ವಿಚಾರವನ್ನು ಮುಂದಿಟ್ಟುಕೊಂಡು ವಿರೋಧ ಪಕ್ಷಗಳು ಕಣಕ್ಕಿಳಿಯುವ ಮೊದಲೇ ತಮಿಳು ನಾಡು ಮುಖ್ಯಮಂತ್ರಿ ಎಂ.ಕೆ.ಸ್ಟಾಲಿನ್ ಅವರು ಎಲ್ಲರನ್ನೂ ಮೀರಿಸುವಂತೆ ತಕ್ಷಣ ಕಾರ್ಯಪ್ರವೃತ್ತರಾಗುತ್ತಾರೆ. ಈ ಪ್ರಕರಣಕ್ಕೆ ಸಂಬಂಧಿಸಿ ಅವರು ಆರು ಕಾನ್-ಸ್ಟೇಬಲ್ ಗಳನ್ನು ಬಂಧಿಸುವಂತೆ ಆದೇಶ ಹೊರಡಿಸುತ್ತಾರೆ, ಒಬ್ಬರು ಡಿಎಸ್ಪಿಯನ್ನು ಅಮಾನತು ಮಾಡುತ್ತಾರೆ ಮತ್ತು ಕಸ್ಟಡಿ ಸಾವು ಸಂಭವಿಸಿದ ಶಿವಗಂಗಾ ಜಿಲ್ಲೆಯ ಪೊಲೀಸ್ ವರಿಷ್ಠಾಧಿಕಾರಿಯನ್ನು ಕಡ್ಡಾಯವಾಗಿ ಕಾಯುವಂತೆ ಮಾಡುತ್ತಾರೆ.
ಪ್ರಕರಣಕ್ಕೆ ಸಂಬಂಧಿಸಿ ಪರಿಹಾರ ನೀಡಬೇಕು ಎಂಬ ಬೇಡಿಕೆ ಬರುವ ಮೊದಲೇ ಸರ್ಕಾರ ಅಜಿತ್ ಕುಮಾರ್ ಸಹೋದರನಿಗೆ ಉದ್ಯೋಗವನ್ನು ಕೊಟ್ಟಿದ್ದು ಮಾತ್ರವಲ್ಲದೆ ಅವರ ಕುಟುಂಬಕ್ಕೆ ಮನೆ ನಿರ್ಮಿಸಲು ಮೂರು ಸೆಂಟ್ಸ್ ಭೂಮಿಯನ್ನೂ ನೀಡುತ್ತದೆ. ಸಾಮಾನ್ಯ ಸಂಪ್ರದಾಯಕ್ಕೆ ವಿರುದ್ಧವಾಗಿ ಸ್ಟಾಲಿನ್ ಅವರು ಮೃತಪಟ್ಟ ಯುವಕನ ಕುಟುಂಬಕ್ಕೆ ತಕ್ಷಣ ದೂರವಾಣಿ ಕರೆಮಾಡಿ ಸಂತಾಪ ಸೂಚಿಸಿದ್ದಲ್ಲದೆ ಇಂತಹ ಘಟನೆ ಸಂಭವಿಸಿದ್ದಕ್ಕಾಗಿ ಕ್ಷಮೆಯನ್ನೂ ಕೇಳುತ್ತಾರೆ.
ಈ ಮಧ್ಯೆ, ಅಜಿತ್ ಕುಮಾರ್ ವಿರುದ್ಧ ಅಧಿಕೃತವಾಗಿ ಎಫ್.ಐ.ಆರ್ ಕೂಡ ದಾಖಲಿಸಲಿಲ್ಲ ಮತ್ತು ಆಭರಣ ಕಳ್ಳತನದ ಬಗ್ಗೆ ತನಿಖೆ ನಡೆಸಲು ವಿಶೇಷ ತಂಡವನ್ನು ರಚನೆ ಮಾಡದೇ ಯುವಕನಿಗೆ ಚಿತ್ರಹಿಂಸೆ ನೀಡಲಾಯಿತು ಎಂಬುದು ಪೊಲೀಸರ ವಿರುದ್ಧವಿರುವ ಆರೋಪ.
ಸಿಬಿಐ ತನಿಖೆಗೆ ಆದೇಶ
ಬಂಧಿತರಾಗಿ ಮದುರೈನ ಸೆಂಟ್ರಲ್ ಜೈಲಿನಲ್ಲಿರುವ ತಪ್ಪಿತಸ್ಥ ಪೊಲೀಸರ ವಿರುದ್ಧದ ತನಿಖೆಯಲ್ಲಿ ಸ್ಥಳೀಯ ಪೊಲೀಸರು ಪೂರ್ವಗ್ರಹಪೀಡಿತರಾಗಿ ಕೆಲಸ ಮಾಡಬಹುದು ಎಂಬ ಅನುಮಾನವಿದ್ದ ಕಾರಣ ಮುಖ್ಯಮಂತ್ರಿ ಸ್ಟಾಲಿನ್ ಈ ಕ್ರಿಮಿನಲ್ ಪ್ರಕರಣವನ್ನು ಏಕಪಕ್ಷೀಯವಾಗಿ ಸಿಬಿಐಗೆ ಹಸ್ತಾಂತರಿಸಿದರು.
ಪ್ರತಿಪಕ್ಷಗಳಾದ ಅಣ್ಣಾಡಿಎಂಕೆ ಮತ್ತು ಬಿಜೆಪಿ ಆರಂಭಿಸಿದ್ದ ರಾಜಕೀಯ ಪ್ರಚಾರಕ್ಕೆ ಇದು ದೊಡ್ಡ ಹಿನ್ನಡೆಯುಂಟುಮಾಡಿತು. ಅದರಲ್ಲೂ ತನಿಖೆಯನ್ನು ಸಿಬಿಐಗೆ ಹಸ್ತಾಂತರಿಸಿದ್ದಕ್ಕೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು ಅಚ್ಚರಿಯ ವಿಷಯವಾಗಿತ್ತು. 2026ರಲ್ಲಿ ವಿಧಾನಸಭಾ ಚುನಾವಣೆ ನಡೆಯಲಿರುವ ಹಿನ್ನೆಲೆಯಲ್ಲಿ ಇವೆಲ್ಲವೂ ಮಹತ್ವ ಪಡೆದುಕೊಂಡಿವೆ.
ಈ ಪ್ರಕರಣದ ವಿಚಾರಣೆಯ ವೇಳೆ ಮದುರೈ ಪೀಠದ ಇಬ್ಬರು ನ್ಯಾಯಾಧೀಶರು ಎತ್ತಿರುವ ಅನೇಕ ಪ್ರಶ್ನೆಗಳಿಗೆ ಸರ್ಕಾರದ ವಕೀಲರ ಬಳಿ ಯಾವುದೇ ಉತ್ತರವಿಲ್ಲ.
ಆರೋಪಿತ ವ್ಯಕ್ತಿಗಳಿಗೆ ಪೊಲೀಸ್ ಠಾಣೆಯಲ್ಲಿ ಚಿತ್ರಹಿಂಸೆ ನೀಡುವುದು ಮತ್ತು ನಕಲಿ ಎನ್ಕೌಂಟರ್ ನಲ್ಲಿ ಅವರನ್ನು ಕೊಲ್ಲುವ ಪ್ರವೃತ್ತಿಯು ಅತ್ಯಂತ ವಿಷಾದದ ಸಂಗತಿಯಾಗಿದೆ.
2021ರಲ್ಲಿ ಡಿಎಂಕೆ ಸರ್ಕಾರ ಅಧಿಕಾರ ವಹಿಸಿಕೊಳ್ಳುವುದಕ್ಕೆ ಕೆಲವೇ ಸಮಯ ಮೊದಲು ಸಥಾನಕುಲಂನಲ್ಲಿ ಅತ್ಯಂತ ಆಘಾತಕಾರಿ ಘಟನೆ ಸಂಭವಿಸಿತ್ತು. ಸ್ಥಳೀಯ ವರ್ತಕರಾದ ತಂದೆ ಮತ್ತು ಮಗ ಇಬ್ಬರಿಗೂ ಪೊಲೀಸ್ ಕಸ್ಟಡಿಯಲ್ಲಿದ್ದಾಗಲೇ ಚಿತ್ರಹಿಂಸೆ ನೀಡಲಾಯಿತು ಎಂದು ಆರೋಪಿಸಲಾಗುತ್ತದೆ. ಗಾಯಗೊಂಡವರನ್ನು ಪ್ರತ್ಯಕ್ಷವಾಗಿ ನೋಡದೆಯೇ ರಿಮಾಂಡ್ ಮ್ಯಾಜಿಸ್ಟ್ರೇಟರು ಇಬ್ಬರನ್ನೂ ನ್ಯಾಯಾಂಗ ಬಂಧನಕ್ಕೆ ಒಳಪಡಿಸುವಂತೆ ಆದೇಶಿಸಿದ್ದರು.
ಆದರೆ ಜೈಲು ಸಿಬ್ಬಂದಿ ಇಬ್ಬರೂ ಆರೋಪಿಗಳನ್ನು ಜೈಲಿಗೆ ಸೇರಿಸಿಕೊಳ್ಳಲು ನಿರಾಕರಿಸಿದರು; ಯಾಕೆಂದರೆ ಆ ಹೊತ್ತಿಗೆ ಅವರಿಬ್ಬರೂ ಶವವಾಗಿದ್ದರು. ಈ ಇಡೀ ಘಟನೆ ರಾಜ್ಯಾದ್ಯಂತ ಭಾರೀ ಆಕ್ರೋಶಕ್ಕೆ ಕಾರಣವಾಯಿತು.
ಸಿಬಿಐ ತನಿಖೆಯ ಆಧಾರದಲ್ಲಿ ಈ ಪ್ರಕರಣದಲ್ಲಿ ಶಾಮೀಲಾಗಿರುವ ಪೊಲೀಸರು ಈಗ ಕೊಲೆ ಆರೋಪದ ವಿಚಾರಣೆಯನ್ನು ಎದುರಿಸಬೇಕಾಯಿತು. ಈ ಭೀಕರ ಘಟನೆ ನಡೆದು ನಾಲ್ಕು ವರ್ಷಗಳು ಕಳೆದು ಹೋಗಿವೆ. ವಿಚಾರಣೆ ಇನ್ನೇನು ಮುಕ್ತಾಯದ ಹಂತದಲ್ಲಿದ್ದು ಯಾವುದೇ ಕ್ಷಣದಲ್ಲಿ ತೀರ್ಪು ಹೊರಬೀಳುವ ನಿರೀಕ್ಷೆಯಿದೆ.
ಹೆಚ್ಚಿದ ಕಸ್ಟಡಿ ಹಿಂಸೆ: 2021ರಲ್ಲಿ ನಡೆದ ಸಥಾನ್ ಕುಲಂ ಪ್ರಕರಣ ಮತ್ತು 2025ರ ಶಿವಗಂಗಾ ಪ್ರಕರಣದ ನಡುವೆ ತಮಿಳುನಾಡಿನಾದ್ಯಂತ ಒಟ್ಟು 24 ಎನ್ಕೌಂಟರ್ ಸಾವು ಮತ್ತು ಕಸ್ಟಡಿ ಹಿಂಸಾಚಾರ ಪ್ರಕರಣಗಳು ಸಂಭವಿಸಿವೆ. ರಾಷ್ಟ್ರದ ಇನ್ಯಾವ ಕಡೆಯೂ ಇಷ್ಟೊಂದು ಪ್ರಕರಣಗಳು ನಡೆದಿರುವ ಬಗ್ಗೆ ವರದಿಯಾಗಿಲ್ಲ.
ಯಾವುದೇ ಅಪರಾಧಕ್ಕೆ ತಕ್ಷಣ ಪರಿಹಾರ ಬೇಕು ಎಂದು ಜನ ನಿರೀಕ್ಷಿಸುತ್ತಾರೆ. ಪೊಲೀಸರು ಎನ್ಕೌಂಟರ್ ಮಾಡಿ ಅಪರಾಧಿಗಳ ಹತ್ಯೆ ನಡೆಸುವುದನ್ನು ಸ್ವಾಗತಿಸುತ್ತಾರೆ. ಆದರೆ ಅಪರಾಧಗಳನ್ನು ತಗ್ಗಿಸಲು ಕಟ್ಟುನಿಟ್ಟಾಗಿ ಕಾರ್ಯವಿಧಾನಗಳನ್ನು ರೂಪಿಸಬೇಕು ಎಂಬ ಕೂಗಿಗೆ ಬೆಲೆಯೇ ಇಲ್ಲವಾಗಿದೆ.
ಅವಿಭಜಿತ ಆಂಧ್ರ ಪ್ರದೇಶದಲ್ಲಿ ಮಾವೋವಾದಿಗಳನ್ನು ಎನ್ಕೌಂಟರ್ ನಡೆಸಿ ಹತ್ಯೆಮಾಡಿದ ದೂರುಗಳ ವಿಚಾರಣೆ ನಡೆಸಿದ್ದ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (NHRC) ಈ ವಿಚಾರದಲ್ಲಿ ನಿರ್ದಿಷ್ಟವಾದ ಮಾರ್ಗಸೂಚಿಗಳನ್ನು ನೀಡಿದೆ.
ಪೊಲೀಸರು ಜವಾಬ್ದಾರರಾಗಿರುವ ಎನ್ಕೌಂಟರ್ ಹತ್ಯೆಯನ್ನು ಸರಿಯಾದ ತನಿಖೆ ನಡೆಸದೇ ಬಿಡುವಂತಿಲ್ಲ ಎಂದು ಎನ್.ಎಚ್.ಆರ್.ಸಿ ಸ್ಪಷ್ಟವಾಗಿ ತಿಳಿಸಿದೆ. ಪ್ರತಿಯೊಂದು ಎನ್ಕೌಂಟರ್ ಹತ್ಯೆಯೂ ಕೊಲೆಯೇ ಆಗಿದೆ. ಅದನ್ನು ಸಮರ್ಥಿಸುವುದು ಅಥವಾ ಇನ್ನೇನೋ ಮಾಡುವುದನ್ನು ಕೋರ್ಟಿನ ಮುಂದೆ ನಡೆಯುವ ಸೂಕ್ತ ವಿಚಾರಣೆಯ ಮೂಲಕವೇ ನಿರ್ಧರಿಸಬೇಕಾಗುತ್ತದೆ ಎಂದೂ ಅದು ಹೇಳಿದೆ.
ಆತ್ಮರಕ್ಷಣೆಗೆ ಈ ಕೆಲಸ ಮಾಡಲಾಗಿದೆ ಎಂದು ಪೊಲೀಸರು ಹೇಳಿಕೊಂಡರೂ ಕೂಡ ಅದು ಸಮಂಜಸವಾದ ವಿವರಣೆಯೇ ಎಂಬುದರ ಮೌಲ್ಯಮಾಪನ ಮಾಡಿ, ಕೋರ್ಟ್ ಅದನ್ನು ಒಪ್ಪಬೇಕಾಗುತ್ತದೆ. ಇಲ್ಲದೆ ಹೋದರೆ ಪೊಲೀಸರು ನಡೆಸಿದ ಅತಿರೇಕದ ವರ್ತನೆಗೆ ಅವರನ್ನು ಹೊಣೆಗಾರರನ್ನಾಗಿ ಮಾಡಿ ಶಿಕ್ಷೆಗೆ ಒಳಪಡಿಸಬೇಕಾಗುತ್ತದೆ.
ಏಕರೂಪದ ಕಾರ್ಯವಿಧಾನಗಳಿಲ್ಲ: ಎನ್.ಎಚ್.ಆರ್.ಸಿ. ನಿರ್ದೇಶನಗಳೇನಿದ್ದರೂ ಕಾಗದಪತ್ರಗಳ ಮೇಲೆಯೇ ಉಳಿದುಬಿಟ್ಟಿವೆ. ಕೋರ್ಟ್ ಗಳು ಮಧ್ಯಪ್ರವೇಶ ಮಾಡಿದಾಗಲಷ್ಟೇ ಆತ್ಮರಕ್ಷಣೆಯ ಹೆಸರಿನಲ್ಲಿ ಅಮಾಯಕರನ್ನು ಎನ್ಕೌಂಟರ್ ಮಾಡಿ ಕೊಲೆ ಮಾಡಿದ ತಪ್ಪಿತಸ್ಥ ಪೊಲೀಸರನ್ನು ವಿಚಾರಣೆಗೆ ಒಳಪಡಿಸಲಾಗುತ್ತದೆ. ಎನ್ಕೌಂಟರ್ ಸಾವುಗಳ ವಿಚಾರದಲ್ಲಿ ಕೇಂದ್ರ ಅಥವಾ ಯಾವುದೇ ರಾಜ್ಯ ಸರ್ಕಾರದಿಂದ ಯಾವುದೇ ರೀತಿಯ ಏಕರೂಪದ ಕಾರ್ಯವಿಧಾನವನ್ನು ಅಭಿವೃದ್ಧಿಪಡಿಸಲಾಗಿಲ್ಲ.
ಮಹಿಳಾ ಪಶುವೈದ್ಯರೊಬ್ಬರ ಅತ್ಯಾಚಾರಕ್ಕೆ ಸಂಬಂಧಿಸಿದ ಹೈದರಾಬಾದ್ ಘಟನೆಯ ಬಳಿಕ ಕೆಲವು ಯುವಕರನ್ನು ಸ್ಥಳೀಯ ಪೊಲೀಸರು ಬಂಧಿಸಿ ಹತ್ಯೆಗೈದಿದ್ದರು. ಇದಕ್ಕೆ ನಂತರ ಆತ್ಮರಕ್ಷಣಾ ಎನ್ಕೌಂಟರ್ ಎಂದು ಹಣೆಪಟ್ಟಿ ಕಟ್ಟಲಾಯಿತು. ಸುಪ್ರೀಂ ಕೋರ್ಟ್ ಇದರ ತನಿಖೆಗೆ ಸುಪ್ರೀಂ ಕೋರ್ಟಿನ ನಿವೃತ್ತ ನ್ಯಾಯಮೂರ್ತಿ ವಿ.ಎಸ್.ಸಿರ್ಪುಕರ್ ಅವರ ನೇತೃತ್ವದಲ್ಲಿ ಆಯೋಗವನ್ನು ನೇಮಕಮಾಡಿತು.
ಆಯೋಗ ಸಲ್ಲಿಸಿದ ವರದಿಯ ಪ್ರಕಾರ ಪೊಲೀಸರ ಪಾತ್ರ ಅನುಮಾನಾಸ್ಪದ ಎಂಬುದು ಬಯಲಾಯಿತು. ಈಗ ಇದರಲ್ಲಿ ಶಾಮೀಲಾದ ಪೊಲೀಸರನ್ನು ವಿಚಾರಣೆಗೆ ಒಳಪಡಿಸಲಾಗುತ್ತಿದೆ.
ತಾತ್ಕಾಲಿಕ ಪರಿಹಾರಗಳು
ಇಂತಹ ವಿಚಾರದಲ್ಲಿ ತಾತ್ಕಾಲಿಕ ಪರಿಹಾರಗಳಿಗಾಗಿ ಯಾವತ್ತೂ ಕಾಯುತ್ತ ಇರಲು ಸಾಧ್ಯವಿಲ್ಲ. ಹಾಗಾಗಿ ಪೊಲೀಸರ ಕಾನೂನು ಬಾಹಿರ ನಡವಳಿಕೆಗಳನ್ನು ಕಾನೂನು ಮೂಲಕ ನಿಯಂತ್ರಿಸುವ ಕಾಲ ಸನ್ನಿಹಿತವಾಗಿದೆ.
ಬಹುಷಃ ತಮಿಳು ನಾಡಿನ ತಿರುಪ್ಪುವನಂ ಘಟನೆಯು ಈ ವಿಚಾರದಲ್ಲಿ ನಮಗೆ ಮಾದರಿಯಾಗಬೇಕಿದೆ. ಯುವಕ ಅಜಿತ್ ಕುಮಾರ್ ಸಾವಿನ ಬಳಿಕ ರಾಜ್ಯ ಸರ್ಕಾರ ಸ್ವಯಂಪ್ರೇರಿತವಾಗಿ ಪ್ರಕರಣವನ್ನು ಸಿಬಿಐಗೆ ವರ್ಗಾಯಿಸಿದ್ದಲ್ಲದೆ ಸಂತ್ರಸ್ತ ಕುಟುಂಬದ ಪುರ್ನವಸತಿಗೆ ಕ್ರಮ ಕೈಗೊಂಡಿತು ಮತ್ತು ಈ ದುರದೃಷ್ಟಕರ ಸಾವಿಗೆ ಮುಖ್ಯಮಂತ್ರಿಯವರೇ ಕ್ಷಮೆ ಕೇಳಿದರು.
ಎಲ್ಲಕ್ಕಿಂತ ಮುಖ್ಯವಾಗಿ ಇದಕ್ಕೊಂದು ಸಾಂಸ್ಥಿಕ ಚೌಕಟ್ಟನ್ನು ರೂಪಿಸಬೇಕಾಗಿದೆ. ಇದರಿಂದ ಶಂಕಿತ ಕ್ರಿಮಿನಲ್ ಗಳ ಅಪರಾಧ ಕಡಿತ ಮತ್ತು ಶಿಕ್ಷೆಗೆ ಎನ್ಕೌಂಟರ್ ಹತ್ಯೆಯೇ ಪರಿಹಾರವಾಗುವುದು ತಪ್ಪುತ್ತದೆ.
ನಾಗರಿಕ ಸಮಾಜ ಒಳಗೊಳ್ಳಲಿ: ಪೊಲೀಸ್ ಠಾಣೆಗಳು ಈಗ ಸಿಸಿಟಿವಿಗಳ (ಅನೇಕ ಸಂದರ್ಭಗಳಲ್ಲಿ ಅವು ಕೆಲಸ ಮಾಡುವುದಿಲ್ಲ) ಕಣ್ಗಾವಲಿಗೆ ಒಳಗಾಗಿರುವ ಕಾರಣ ಚಿತ್ರಹಿಂಸೆಗಳು ನಡೆಯುವ ತಾಣಗಳು ಖಾಸಗಿ ಕಟ್ಟಡಗಳು ಹಾಗೂ ಗಾರ್ಡನ್ ಗಳಿಗೆ ಶಿಫ್ಟ್ ಆಗಿವೆ.
ಪೊಲೀಸರಿಗೆ ಅವರ ತರಬೇತಿ ಕೇಂದ್ರಗಳಲ್ಲಿ ತರಬೇತಿ ನೀಡಿ ಅವರನ್ನು ಸಂವೇದನಾಶೀಲರನ್ನಾಗಿ ಮಾಡುವುದು ಅಥವಾ ಸಂವಿಧಾನದ 21 ಮತ್ತು 22ನೇ ವಿಧಿಗಳ ಅಡಿಯಲ್ಲಿ ಸಾಂವಿಧಾನಿಕ ಸುರಕ್ಷತೆಗಳನ್ನು ಖಚಿತಪಡಿಸುವುದಷ್ಟೇ ಸಾಕಾಗುವುದಿಲ್ಲ.
ಕಾನೂನು ಜಾರಿಗೊಳಿಸುವ ಸಂಸ್ಥೆಗಳನ್ನು ಕೂಡ ನಾಗರಿಕ ಸಮಾಜದ ನಿಯಂತ್ರಣಕ್ಕೆ ಒಳಪಡಿಸುವ ಸಮಯ ಈಗ ಬಂದಿದೆ.
ನಾಗರಿಕ ಸಮಾಜದಿಂದ ಜೈಲುಗಳಿಗೆ ಆಗಾಗ್ಗೆ ಭೇಟಿ ನೀಡುವ ‘ಸಂದರ್ಶಕರು’ ಇರುವಂತೆಯೇ ಪ್ರತಿ ಪೊಲೀಸ್ ಠಾಣೆಗೂ ನಾಗರಿಕ ಸಮಾಜಗಳ ಸಮಿತಿ ಇರಬೇಕು. ನಿರಂತರ ನಿಗಾ ವಹಿಸಬೇಕು.
ಗಾಳಿಗೆ ತೂರಿದ ಡಿಕೆ ಬಸು ಮಾರ್ಗಸೂಚಿಗಳು
ಡಿ.ಕೆ. ಬಸು ಪ್ರಕರಣದಲ್ಲಿ (1996) ಸುಪ್ರೀಂ ಕೋರ್ಟ್ ನೀಡಿದ, ವಿಚಾರಣಾಪೂರ್ವ ಆರೋಪಿಯ ಹಕ್ಕುಗಳು ಮತ್ತು ಉಲ್ಲಂಘಿಸುವವರಿಗೆ ನೀಡುವ ಶಿಕ್ಷೆಯ ಸ್ವರೂಪಕ್ಕೆ ಸಂಬಂಧಿಸಿದ ಮಾರ್ಗಸೂಚಿಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಆದರೂ ಇಂತಹ ಉಲ್ಲಂಘನೆಗಳನ್ನು ಮೊದಲು ಪರಿಶೀಲಿಸುವವರು ರಿಮಾಂಡ್ ಮ್ಯಾಜಿಸ್ಟ್ರೇಟ್ ಗಳು. ಅವರು ಕೆಲವೊಮ್ಮೆ ಯಾವುದೇ ಕಾನೂನು ಉಲ್ಲಂಘನೆಯನ್ನು ನಿಯಂತ್ರಿಸುವ ತಮ್ಮ ಕರ್ತವ್ಯಗಳಲ್ಲಿ ವಿಫಲರಾಗಿರುತ್ತಾರೆ.
ಡಿ.ಕೆ.ಬಸು ಮಾರ್ಗಸೂಚಿಗಳ ಪ್ರಕಾರ ಶಿಕ್ಷೆ ವಿಧಿಸಬೇಕಾದ ಹೈಕೋರ್ಟ್ ಗಳು, ತಮ್ಮ ವಿಸ್ತೃತ ನ್ಯಾಯಾಂಗ ಕುಟುಂಬದ ಸದಸ್ಯರ ವಿರುದ್ಧ ಕ್ರಮ ಕೈಗೊಳ್ಳಲು ಹಿಂಜರಿಯುತ್ತಿವೆ. ಇದಕ್ಕೆ ಕಾರಣವೇನೆಂಬುದು ಅವರಿಗೆ ಮಾತ್ರ ತಿಳಿದಿದೆ.
ಹೈಕೋರ್ಟ್ ಗಳು ಆಡಳಿತಾತ್ಮಕವಾಗಿ ಇದನ್ನು ಮಾಡದೇ ಹೋದರೆ ನ್ಯಾಯಾಂಗದ ವಿಚಾರಣೆಗಳಲ್ಲಿ ದಾರಿತಪ್ಪಿದ ಸರ್ಕಾರಗಳನ್ನು ಸಾರ್ವಜನಿಕವಾಗಿ ತರಾಟೆಗೆ ತೆಗೆದುಕೊಳ್ಳುವುದರಿಂದ ಏನು ಪ್ರಯೋಜನ? ಇಂತಹ ಖಂಡನೆಗಳು ದಾಖಲೆಯ ಭಾಗವಾಗಿಯಷ್ಟೇ ಉಳಿಯುತ್ತವೆ. ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಆಡಳಿತವು ಜನರ ಮನಸ್ಸಿನಲ್ಲಿ ಯಾವತ್ತೂ ಅನುಮಾನಾಸ್ಪದವಾಗಿಯೇ ಮುಂದುವರಿಯುತ್ತದೆ.