
ಭಾರತದಲ್ಲಿ ತಗ್ಗಿದ ಅಸಮಾನತೆ: ವಿಶ್ವ ಬ್ಯಾಂಕ್ ವಾದ ಯಾಕೆ ಹಾಸ್ಯಾಸ್ಪದ
ಸರ್ವೇಸಾಮಾನ್ಯವಾದ ಗ್ರಾಹಕ ಸರಕುಗಳು ಮಾರಾಟವಾಗದೆ ಪ್ರತಿ ಮಾರಾಟಗಾರ ಪ್ರೀಮಿಯಂ ಉತ್ಪನ್ನಗಳ ಬೆನ್ನು ಹತ್ತಿರುವ ಈ ಕಾಲದಲ್ಲಿ ಭಾರತದಲ್ಲಿ ಅಸಮಾನತೆಯ ಪ್ರಮಾಣ ಕಡಿಮೆಯಾಗುತ್ತಿದೆ ಎನ್ನುವುದು ಕಟ್ಟುಕಥೆ.
ಅನಾದಿ ಕಾಲದಲ್ಲಿ ರಾಜಕುಮಾರ ಮತ್ತು ರಾಜಕುಮಾರಿಯರು, ಮಾಟಗಾತಿಯರು ಮತ್ತು ದುಷ್ಟ ಮಲತಾಯಿಗಳ ಬಗ್ಗೆ ಹೇಳುತ್ತ ಕಟ್ಟಕಡೆಯಲ್ಲಿ ಮುಖ್ಯ ಪಾತ್ರಗಳೆಲ್ಲ ಎಂದೆಂದಿಗೂ ಸುಖವಾಗಿ ಬಾಳಿ ಬದುಕಿದವು ಎಂದು ಬರೆಯಲಾಗುತ್ತಿತ್ತು. ಇಂಥವನ್ನೆಲ್ಲ ನಾವು ಸಾಕಷ್ಟು ಹಿಂದೆ ಮಾತನಾಡುತ್ತಿದ್ದೆವು ಎಂದು ನೀವು ಭಾವಿಸಿದ್ದರೆ ಅದು ಶುದ್ಧ ತಪ್ಪು ಅಂತಹ ತಪ್ಪು ಕಲ್ಪನೆಗಳನ್ನು ಹೋಗಲಾಡಿಸಲೆಂದೇ ವಿಶ್ವ ಬ್ಯಾಂಕ್ ಆಧುನಿಕ ಕಟ್ಟುಕಥೆಗಳೊಂದಿಗೆ ನಮ್ಮ ಮುಂದೆ ಹಾಜರಾಗಿದೆ
ಈ ಕಥೆಗಳಲ್ಲಿ ಹಾರುವ ರತ್ನಗಂಬಳಿಗಳು ಅಥವಾ ಬಹು ತಲೆಯ ರಾಕ್ಷಸರೇನೂ ಇಲ್ಲ. ಆದರೆ ಅಸಮಾನತೆ ಮತ್ತು ತಲಾ ಅದಾಯದ ವಿಷಯದಲ್ಲಿ ಸಿರಿವಂತ ಮತ್ತು ಬಡ ರಾಷ್ಟ್ರಗಳ ನಡುವಿನ ಅಂತರವೇ ಇದರ ಮುಖ್ಯಪಾತ್ರಗಳು. ಈ ವರದಿಯಲ್ಲಿ ಒಳಗೊಂಡಿರುವ ಬೋಳೆಸ್ವಭಾವದ ಮಕ್ಕಳಿಗೆ ಹೇಳಬಹುದಾದ ಕಟ್ಟುಕಥೆಯ ಮನರಂಜನೆಯು ಭಾರತ ವಿಶ್ವದ ನಾಲ್ಕನೇ ಕನಿಷ್ಠ ಅಸಮಾನತೆಯ ದೇಶ ಎಂಬುದಾಗಿ ಪ್ರತಿಪಾದಿಸುತ್ತದೆ
ಭಾರತವು ಅಸಮಾನತೆಯನ್ನು ಗಣನೀಯವಾಗಿ ತಗ್ಗಿಸಿದೆ ಮತ್ತು ಅದೊಂದು ಅಭೂತಪೂರ್ವ ಸಾಧನೆ ಎಂದು ಬಡಾಯಿಕೊಚ್ಚಿಕೊಳ್ಳುವ ಸರ್ಕಾರ ಮತ್ತು ಅದರ ಹಿಂಬಾಲಕರು ಅದೊಂದು ತೀರಾ ಸಣ್ಣ ಸಂಗತಿ ಎಂಬುದನ್ನೂ ತಿಳಿಯಲಾರದ ಸ್ಥಿತಿಯಲ್ಲಿದ್ದಾರೆ.
‘ಭಾರತದ ಅನುಭೋಗ ಆಧಾರಿತ ಗಿನಿ ಸೂಚ್ಯಂಕವು 2022-12ರಲ್ಲಿ ಇದ್ದ 28.8ರ ಅಂಕದಿಂದ 2022-23ರಲ್ಲಿನ 25.5 ಅಂಕಕ್ಕೆ ಸುಧಾರಿಸಿದೆ' ಎಂದು ವಿಶ್ವ ಬ್ಯಾಂಕಿನ ಬಡತನ ಮತ್ತು ಸಮಾನತೆಯ ಸಂಕ್ಷಿಪ್ತ ವರದಿ ತಿಳಿಸುತ್ತದೆ. ಆದರೆ ಈ ಹೇಳಿಕೆಯನ್ನು ಅದು ಈ ಕೆಳಗಿನ ಅಂಶಗಳೊಂದಿಗೆ ಪ್ರಮಾಣೀಕರಿಸುತ್ತದೆ “ದತ್ತಾಂಶಗಳ ಮಿತಿಯ ಕಾರಣದಿಂದ ಅಸಮಾನತೆಯನ್ನು ಕೀಳಂದಾಜು ಮಾಡಬಹುದು. ಇದಕ್ಕೆ ಪ್ರತಿಯಾಗಿ ವಿಶ್ವ ಬ್ಯಾಂಕ್ ಅಸಮಾನತೆ ದತ್ತಾಂಶವು ಆದಾಯದಲ್ಲಿನ ಅಸಮಾನತೆಯು 2004ರಲ್ಲಿದ್ದ 52ರ ಗಿನಿ ಅಂಕವು 2023ರಲ್ಲಿ 62ಕ್ಕೆ ಏರಿಕೆ ಕಂಡಿದೆ” ಎಂದು ತಿಳಿಸುತ್ತದೆ.
ಅನುಭೋಗದ ಅಸಮಾನತೆ: ಈ ಪ್ರಮಾಣೀಕರಣಕ್ಕೂ ಮೊದಲು ಗಮನಿಸಬೇಕಾದ ಮಹತ್ವದ ಅಂಶವೇನೆಂದರೆ, ಅನುಭೋಗವನ್ನು ಆಧರಿಸಿದ ಅಸಮಾನತೆಯನ್ನು ಇಲ್ಲಿ ಪ್ರಸ್ತಾಪ ಮಾಡಲಾಗಿದೆಯೇ ಹೊರತು ಆದಾಯ ಆಧಾರಿತ ಅಸಮಾನತೆ ಅಲ್ಲ ಎನ್ನುವುದು. ಇದರಿಂದ ಮಾತ್ರ ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗುತ್ತದೆ. ಅನುಭೋಗವನ್ನು ಆಧರಿಸಿದ ಅಸಮಾನತೆಯು ಸಾಮಾನ್ಯವಾಗಿ ಆದಾಯ ಆಧಾರಿತ ಅಸಮಾನತೆಗಿಂತ ಕಡಿಮೆಯೇ ಇರುತ್ತದೆ.
ಮುಕೇಶ್ ಅಂಬಾನಿ ಅವರು ನ್ಯೂಯಾರ್ಕ್ ನಲ್ಲಿ 19 ಡಾಲರ್-ಗೆ ಒಂದರಂತೆ ಮಾರಾಟ ಮಾಡಲಾಗುವ ಜಪಾನಿ ಸ್ಟ್ರಾಬೆರಿಗಳನ್ನು ತಿನ್ನಲು ಶಕ್ತರು. ಈ ದುಬಾರಿ ಹಣ್ಣುಗಳಿಗಾಗಿ ಹಣ ಖರ್ಚು ಮಾಡಲು ಅವರಿಗೆ ಮನಸ್ಸಿದ್ದರೂ ಕೂಡ ಅವರು ಎಷ್ಟು ಹಣ್ಣುಗಳನ್ನು ತಿನ್ನಲು ಸಾಧ್ಯ? ನಿಜವಾದ ಸಿರಿವಂತ ಮನುಷ್ಯ ಅತಿರೇಕದ ಬಳಕೆಯನ್ನು ಕೂಡ ತ್ಯಜಿಸುತ್ತಾನೆ. ವಾಸ್ತವದಲ್ಲಿ ಬಡವರಿಗಿಂತ ಶ್ರೀಮಂತರು ಹೆಚ್ಚು ಉಳಿತಾಯ ಮಾಡುತ್ತಾರೆ.
ಸಿರಿವಂತರ ಖರ್ಚು: ಹಾಗಂತ ಭಾರತದಲ್ಲಿ ಅನುಭೋಗದ (ಬಳಕೆಯ) ಅಸಮಾನತೆ ಇಷ್ಟೊಂದು ಪ್ರಮಾಣದಲ್ಲಿ ಕಡಿಮೆಯಾಗಲು ಇದೊಂದೇ ಕಾರಣವಲ್ಲ. ಭಾರತದ ಬಳಕೆಗೆ ಸಂಬಂಧಿಸಿದ ಸಮೀಕ್ಷೆಗಳು ಸಿರಿವಂತರ ಖರ್ಚುಗಳನ್ನು ಕರಾರುವಕ್ಕಾಗಿ ಲೆಕ್ಕಹಾಕುವಲ್ಲಿ ಸಂಪೂರ್ಣ ವಿಫಲವಾಗಿವೆ. 2023-24ರ ಮಾಸಿಕ ತಲಾ ಬಳಕೆಯ ವೆಚ್ಚ (MPCE)ದ ದತ್ತಾಂಶವನ್ನು ಬಿಡುಗಡೆಮಾಡಿದಾಗ ಇದನ್ನು ವ್ಯಾಪಕವಾಗಿ ಚರ್ಚೆ ಮಾಡಲಾಗಿತ್ತು. ಆದರೆ ಅದನ್ನೀಗ ಪುನರುಚ್ಚರಿಸುವುದು ಯೋಗ್ಯವಾಗಿದೆ.
ಈ ಸಮೀಕ್ಷೆಗಳನ್ನು ನಡೆಸುವ ವಿಧಾನವು ಈಗ ಬದಲಾಗಿದೆ. ಅಂದರೆ ಪ್ರಶ್ನಾವಳಿಗಳನ್ನು ಕೇಳುವುದು ಮತ್ತು ಜನರು ತಾವು ಸೇವಿಸಿದನ್ನು ನೆನಪಿಸಿಕೊಳ್ಳಲು ಕೇಳುವ ಅವಧಿ ಹಾಗೂ ಇಂತಹ ಸಮೀಕ್ಷೆಗಳನ್ನು ನಡೆಸುವ ಪಟ್ಟಣಗಳು ಮತ್ತು ಹಳ್ಳಿಗಳ ಆಯ್ಕೆಯಂತಹ ವಿಚಾರಗಳು ಇದರಲ್ಲಿ ಒಳಗೊಂಡಿವೆ.
ಒಂದು ವೇಳೆ ನೀವು ಪಟ್ಟಣದ ಮಗ್ಗುಲಲ್ಲಿರುವ ಗ್ರಾಮಗಳನ್ನು ಆಯ್ಕೆಮಾಡಿಕೊಂಡರೆ ದಾಖಲಾದ ಬಳಕೆಯ ಪ್ರಮಾಣವು ಛತ್ತೀಸಗಢದ ಅರಣ್ಯದ ಬಳಿಯಿರುವ ಕುಗ್ರಾಮಕ್ಕಿಂತ ಅಧಿಕವಾಗಿರುತ್ತದೆ.
ಇದು ಕಾಲಾನಂತರದಲ್ಲಿ ಅನುಭೋಗದ ನ್ಯಾಯಸಮ್ಮತ ಹೋಲಿಕೆಯ ಮೇಲೆ ನಿಶ್ಚಿತವಾಗಿ ಪರಿಣಾಮ ಬೀರುತ್ತದೆ.
ದಾರಿತಪ್ಪಿಸುವ ಅಂಕಿ-ಅಂಶಗಳು: ಈಗ 2022-23ರ ಸಮೀಕ್ಷೆಯ ಫಲಿತಾಂಶಗಳ ಮೇಲೆ ಕಣ್ಣು ಹಾಯಿಸೋಣ. ನಗರ ಪ್ರದೇಶದ ನಿವಾಸಿಗಳ ಪೈಕಿ ಶೇ.5ರಷ್ಟು ಸಿರಿವಂತರು ಪ್ರತಿ ತಿಂಗಳು ಪ್ರತಿಯೊಬ್ಬರಿಗೆ ಮಾಡುವ ಖರ್ಚು 20,824 ರೂ. ಎಂದು ಅದು ವರದಿಯಲ್ಲಿ ತಿಳಿಸಿದೆ. ಈ ಸಂಖ್ಯೆಯನ್ನು ಯಾರಾದರೂ ನಿಜವೆಂದು ನಂಬಲು ಸಾಧ್ಯವೇ?
ಭಾರತದ ಈ ಶೇ.5ರಷ್ಟು ಸಿರಿವಂತರಲ್ಲಿ ನಾಲ್ಕು ಮಂದಿ ಸದಸ್ಯರು ಆಮದು ಮಾಡಿದ ವೈನ್ ನೀಡುವ ರೆಸ್ಟೋರಂಟ್ ನಲ್ಲಿ ಲಘು ಉಪಹಾರಕ್ಕಾಗಿ ಸೇರಿಕೊಂಡರೆ ತಗಲುವ ಖರ್ಚಿಗೆ ಇದು ಸಮವಾಗಿದೆ.
ಈ ಎರಡೂವರೆ ಲಕ್ಷ ರೂಪಾಯಿಗಳ ವಾರ್ಷಿಕ ವೆಚ್ಚದ ಮೊತ್ತದಲ್ಲಿ ಎಷ್ಟು ಮದುವೆ, ವಿದೇಶಿ ರಜಾದಿನಗಳು, ಡಿಸೈನರ್ ಬಟ್ಟೆಗಳನ್ನು ಖರೀದಿ ಮಾಡಲು ಎಷ್ಟು ಮಂದಿಗೆ ಸಾಧ್ಯವಾಗಬಹುದು?
ನಿಮ್ಮ ಅನುಭೋಗದ ಮೊತ್ತವೆಷ್ಟು ಎಂದು ಸಮೀಕ್ಞಾ ಪ್ರಶ್ನೆಗಳೊಂದಿಗೆ ಬರುವವರಿಗೆ ತಮ್ಮ ಕಡಿಮೆ ಆದಾಯವನ್ನು ತೋರಿಸುವವರು ಸಮಾಜದಲ್ಲಿ ಶೇ.5ರಷ್ಟು ಜನ ಮಾತ್ರ ಅಲ್ಲ. ಶೇ.70ರಿಂದ 80ರ ಶ್ರೇಣಿಯಲ್ಲಿ ಇರುವವರ ತಲಾ ಬಳಕೆಯು 7,673 ರೂ. ಎಂದು ಅಂದಾಜು ಮಾಡಲಾಗುತ್ತದೆ. ಅಂದರೆ ಇದರ ಪ್ರಕಾರ ನಗರ ಪ್ರದೇಶಗಳಲ್ಲಿ ನಾಲ್ಕು ಜನರ ಕುಟುಂಬಕ್ಕೆ ಮಾಸಿಕ ಬಳಕೆಯ ವೆಚ್ಚ 30,692 ರೂ.
ರಾಷ್ಟ್ರೀಯ ರಾಜಧಾನಿ ಪ್ರದೇಶದಲ್ಲಿ ಅಥವಾ ಮುಂಬೈನಲ್ಲಿ ಚಾಲಕ ಮತ್ತು ಮನೆಗೆಲಸ ಮಾಡುವ ಆತನ ಪತ್ನಿ ಸೇರಿ ಮಾಸಿಕ 40 ಸಾವಿರ ರೂ. ಗಳಿಸುವುದಿಲ್ಲವೇ? ಅವರು ಭಾರತದ ಉನ್ನತ ಶ್ರೇಣಿಯ ಶೇ.30ರಷ್ಟು ಗ್ರಾಹಕರಲ್ಲಿ ಒಬ್ಬರಾಗುವುದಿಲ್ಲವೇ?
ಸರ್ಕಾರವು ಬಿಡುಗಡೆ ಮಾಡಿದ ಮಾಸಿಕ ತಲಾ ಬಳಕೆಯ ಅಂಕಿ-ಅಂಶಗಳು ದಾರಿತಪ್ಪಿಸುತ್ತವೆ ಎಂಬುದು ಇದರಿಂದ ಸ್ಪಷ್ಟವಾಯಿತು.
ಬಳಕೆಯ ಅಂಕಿ-ಅಂಶಗಳು ನಾಪತ್ತೆ: ಈಗ ನಾವು ರಾಷ್ಟ್ರೀಯ ಅಂಕಿ-ಅಂಶ ಕಚೇರಿ (NSO) ಬಿಡುಗಡೆ ಮಾಡಿರುವ ಅಂಕಿ-ಅಂಶಗಳ ಕಡೆಗೆ ಒಮ್ಮೆ ದೃಷ್ಟಿ ಹಾಯಿಸೋಣ. ಈ ಅಂಕಿ-ಅಂಶಗಳು ಜಿಡಿಪಿ ಮಾತ್ರವಲ್ಲದೆ ಖಾಸಗಿ ಅಂತಿಮ ಬಳಕೆಯ ವೆಚ್ಚವನ್ನು ಒದಗಿಸುತ್ತದೆ.
ಗ್ರಾಮೀಣ ಪ್ರದೇಶಗಳಿಗೆ ಸರಾಸರಿ ಮಾಸಿಕ ತಲಾವಾರು ಬಳಕೆಯನ್ನು ಪಡೆಯಲು ಒಟ್ಟು ಗ್ರಾಮೀಣ ಜನಸಂಖ್ಯೆಯೊಂದಿಗೆ ಗುಣಿಸಿದರೆ, ನಗರ ಪ್ರದೇಶಗಳಿಗೆ ಸರಾಸರಿ ಮಾಸಿಕ ತಲಾವಾರು ಬಳಕೆಯನ್ನು ಪಡೆಯಲು ಒಟ್ಟು ನಗರ ಜನಸಂಖ್ಯೆಯೊಂದಿಗೆ ಗುಣಿಸಿ ಈ ಎರಡೂ ಸಂಖ್ಯೆಗಳನ್ನು ಒಟ್ಟುಗೂಡಿಸಿದರೆ ನಮಗೆ ಒಟ್ಟು ಅಂತಿಮ ಬಳಕೆಯ ವೆಚ್ಚ ಲಭ್ಯವಾಗಬೇಕು. ಇದರಲ್ಲಿ ಸಹಜವಾಗಿ ಜೈಲಿನಲ್ಲಿರುವವರು, ಗಡಿಯಲ್ಲಿ ಸೇವೆ ಸಲ್ಲಿಸುತ್ತಿರುವ ಸಶಸ್ತ್ರ ಪಡೆಗಳು, ಅಲೆಮಾರಿಗಳು ಮುಂತಾದವರ ಬಳಕೆಯನ್ನು ಕಳೆಯಬೇಕು. ಆ ಒಟ್ಟು ಮೊತ್ತಕ್ಕೆ 12ರಿಂದ ಗುಣಿಸಿದರೆ ನಮಗೆ ಅಂತಿಮ ವಾರ್ಷಿಕ ಬಳಕೆ ವೆಚ್ಚವು ಸಿಗುತ್ತದೆ.
ನಮಗದು ಸಿಗದು: ಸಮೀಕ್ಷೆಗಳ ಮೂಲಕ ಸಂಗ್ರಹಿಸಲಾದ ತಲಾವಾರು ಬಳಕೆ ವೆಚ್ಚವೇನಿದೆ, ಅದು ರಾಷ್ಟ್ರೀಯ ಆದಾಯ ಖಾತೆಗಳಲ್ಲಿ ವರದಿಯಾಗಿರುವ ಬಳಕೆ ವೆಚ್ಚದ ಕೇವಲ ಶೇ.49ರಷ್ಟು ಮಾತ್ರ.
ಕಾಣೆಯಾಗಿರುವ ಬಹುಪಾಲು ಬಳಕೆ ವೆಚ್ಚವು ಶ್ರೀಮಂತರು ಸಮೀಕ್ಷೆ ಮಾಡಲು ಬಂದವರಿಗೆ ವರದಿ ಮಾಡಲು ಸಮಯ ಅಥವಾ ಆಸಕ್ತಿಯಿಲ್ಲದ ಕಾರಣಕ್ಕೆ ಹುಟ್ಟಿಕೊಂಡ ವೆಚ್ಚಗಳು. ಸಮೀಕ್ಷೆಗಳು ಒಟ್ಟು ಬಳಕೆಯ ಅರ್ಧದಷ್ಟನ್ನು ಮತ್ತು ಶ್ರೀಮಂತರ ಬಳಕೆಯ ಅಧಿಕ ಪ್ರಮಾಣವನ್ನು ಕೈಬಿಡುವುದರಿಂದ ಬಳಕೆ ಆಧಾರಿತವಾದ ಅಸಮಾನತೆಯ ಅಳತೆಗೋಲುಗಳು ಕಣ್ಣಿಗೆ ರಂಗುರಂಗಾಗಿ ಕಾಣುತ್ತವೆ.

ನಾವು ಈಗ ‘Gini coefficient’ ಎಂಬ ಪದವನ್ನು ಸರಳವಾಗಿ ವಿವರಿಸುವ ಪ್ರಯತ್ನವನ್ನು ಮಾಡೋಣ. ಇದರ ಆರಂಭಿಕ ಹಂತವೆಂದರೆ ಲಾರೆನ್ಸ್ ಕರ್ವ್ (Lorenz curve). ಇದನ್ನು ಮೊದಲು ಪ್ರಸ್ತಾಪ ಮಾಡಿದ್ದು ಅಮೆರಿಕದ ಅರ್ಥಶಾಸ್ತ್ರಜ್ಞ. ಈ ವಿಧಾನಕ್ಕೆ ಆತನ ಹೆಸರನ್ನೇ ಇಡಲಾಗಿದೆ.
ಇಲ್ಲಿ ನೀಡಲಾಗಿರುವ ಗ್ರಾಫ್ ಹೈಸ್ಕೂಲ್ ಮಟ್ಟದ ವಿದ್ಯಾರ್ಥಿಗಳಿಗೂ ಚಿರಪರಿಚಿತ. ಇದರಲ್ಲಿರುವ X ಅಕ್ಷದ ಮೇಲೆ (ಸಮಾನಾಂತರ ದಿಕ್ಕಿನಲ್ಲಿ) ಜನಸಂಖ್ಯೆಯನ್ನು ಮತ್ತು Y ಅಕ್ಷದ ಮೇಲೆ ಅವರ ಸಂಚಿತ ಆದಾಯ (ಅಥವಾ ಬಳಕೆ ಅಥವಾ ಸಂಪತ್ತು)ವನ್ನು ಗಮನಿಸಬಹುದು.
ಒಂದು ತರಗತಿಯಲ್ಲಿ ಐವತ್ತು ವಿದ್ಯಾರ್ಥಿಗಳಿದ್ದಾರೆ ಎಂದು ಭಾವಿಸಿ. ಆ ಐವತ್ತೂ ವಿದ್ಯಾರ್ಥಿಗಳಿಗೂ ಶಿಕ್ಷಕರು ಒಂದೊಂದು ಚಾಕಲೇಟ್ ನೀಡಿದ್ದಾರೆ. X ಅಕ್ಷದ ಮೇಲೆ ತರಗತಿಯಲ್ಲಿರುವ ವಿದ್ಯಾರ್ಥಿಗಳ ಅನುಪಾತವನ್ನು ಶೇ.1ರಿಂದ 100ರ ವರೆಗೆ ಗುರುತುಮಾಡುತ್ತೀರಿ. ಅದೇ ರೀತಿ ಲಂಬ (Y) ಅಕ್ಷದ ಮೇಲೆ ಸಂಚಿತವಾಗಿ ಹಸ್ತಾಂತರಿಸಲಾದ ಚಾಕಲೇಟ್-ಗಳ ಅನುಪಾತವನ್ನು ಶೇ.1ರಿಂದ ಶೇ.100ರ ವರೆಗೆ ಗುರುತಿಸುತ್ತೀರಿ.
ನಮ್ಮ ಈ ಕ್ಲಾಸ್-ರೂಂನಲ್ಲಿನ ಚಾಕಲೇಟ್ ಉದಾಹರಣೆಯಲ್ಲಿ, ತಲಾ ಶೇ.10ರಷ್ಟು ವಿದ್ಯಾರ್ಥಿಗಳ ಗುಂಪು ಐದು ಮತ್ತು ತಲಾ ಶೇ.10ರಷ್ಟು ಚಾಕಲೇಟ್ ಗಳ ಗುಂಪು ಐದು ಚಾಕಲೇಟ್ ಗಳನ್ನು ಒಳಗೊಂಡಿರುತ್ತದೆ. ಶೇ.10ರ ಗುಂಪನ್ನು ದಶಾಂಶ (decile) ಎಂತಲೂ, ಶೇ.1ರ ಗುಂಪನ್ನು ಶೇಕಡಾವಾರು (percentile) ಮತ್ತು ಶೇ.20ರ ಗುಂಪನ್ನು ದ್ವಿಂಶತಿ (quintile) ಹಾಗೂ ಅನಿರ್ದಿಷ್ಟ ಪ್ರಮಾಣವನ್ನು ಮಿಶ್ರಕ (fractile) ಎಂತಲೂ ಕರೆಯಲಾಗುತ್ತದೆ.
ಮೊದಲ ಶೇ.10ರಷ್ಟು ವಿದ್ಯಾರ್ಥಿಗಳು ಶೇ.10ರಷ್ಟು ಚಾಕಲೇಟ್-ಗಳನ್ನು ಪಡೆಯುತ್ತಾರೆ. ವಿದ್ಯಾರ್ಥಿಗಳ ಶೇ.10ರ ಪ್ರಮಾಣಕ್ಕಾಗಿ X-ಅಕ್ಷದ ಮೇಲಿನ ಬಿಂದುವಿನಲ್ಲಿ ಒಂದು ಲಂಬವಾದ ಗೆರೆಯನ್ನು ಮತ್ತು ಶೇ.10ರಷ್ಟು ವಿದ್ಯಾರ್ಥಿಗಳು ಪಡೆದ ಚಾಕಲೇಟ್ ಪ್ರಮಾಣಕ್ಕಾಗಿ Y-ಅಕ್ಷದ ಮೇಲಿನ ಬಿಂದುವಿನಲ್ಲಿ ಇನ್ನೊಂದು ಅಡ್ಡ ಗೆರೆಯನ್ನು ಎಳೆಯಿರಿ. ಇದು ಮತ್ತೇ ಶೇ.10 ಆಗಿರುತ್ತದೆ.
ಈ ಗೆರೆಗಳು ಛೇದಿಸುವ ಬಿಂದುವು ವಿದ್ಯಾರ್ಥಿಗಳ ಜನಸಂಖ್ಯೆಯಲ್ಲಿ ಚಾಕಲೇಟ್ ಗಳ ನಿರ್ದಿಷ್ಟ ಹಂಚಿಕೆಯನ್ನು ಪ್ರತಿನಿಧಿಸುತ್ತದೆ. ಇದನ್ನು 10,10 ಎಂದು ತೋರಿಸಲಾಗಿದೆ. ಮುಂದಿನ ಶೇ.10ಕ್ಕಾಗಿ ಇದನ್ನು ಪುನರಾವರ್ತನೆ ಮಾಡಿ. ಅಂದರೆ X-ಅಕ್ಷದ ಮೇಲಿನ ಶೇ.20ರ ಗುರುತಿನಲ್ಲಿ ಮತ್ತು ಚಾಕಲೇಟ್ ಅಕ್ಷದ ಮೇಲಿನ ಶೇ.20ರ ಗುರುತಿನಲ್ಲಿ ನಿಮಗೆ ಸಿಗುವ ಛೇದಕ ಬಿಂದು 20,20.
ಇದನ್ನು ಶೇ.100ರ ವರೆಗೂ ಮುಂದುವರಿಸಿ. ಈಗ ಶೂನ್ಯ ಶೇಕಡ ವಿದ್ಯಾರ್ಥಿಗಳು ಶೂನ್ಯ ಪ್ರಮಾಣದಷ್ಟು ಚಾಕಲೇಟ್ ಗಳನ್ನು ಪಡೆದಿರುತ್ತಾರೆ. ಈ ಹಂಚಿಕೆಯ ಛೇದನ ಬಿಂದುವು ಲಂಬ ಮತ್ತು ಅಡ್ಡ ಅಕ್ಷಗಳ ಛೇದನ ಬಿಂದುವಾಗಿರುತ್ತದೆ. ಅಂದರೆ 0,0. ಈಗ ಚಾರ್ಟ್ ನಲ್ಲಿರುವ ಛೇದನ ಬಿಂದುವನ್ನು ಸೇರಿಸಿದರೆ ಮೂಲ ಬಿಂದುವಿನಿಂದ (0,0) ಎರಡೂ ಅಕ್ಷಗಳಿಗೆ 45 ಡಿಗ್ರಿ ಕೋನದಲ್ಲಿ ವಿಸ್ತರಿಸುವ ಒಂದು ನೇರ ರೇಖೆ ಲಭ್ಯವಾಗುತ್ತದೆ.
ಲಾರೆನ್ಸ್ ಕರ್ವ್: ತರಗತಿಯಲ್ಲಿರುವ ವಿದ್ಯಾರ್ಥಿಗಳ ನಡುವೆ ಚಾಕಲೇಟ್ ಗಳನ್ನು ಸಂಪೂರ್ಣ ಸಮಾನವಾಗಿ ಹಂಚಿಕೆ ಮಾಡುವ ದೃಷ್ಟಿಯಿಂದ ಲಾರೆನ್ಸ್ ಕರ್ವ್ ಬಳಸಲಾಗಿದೆ.
ಒಂದು ವೇಳೆ ಶಿಕ್ಷಕರು ಚಾಕಲೇಟ್ ಗಳನ್ನು ಸಮಪ್ರಮಾಣದಲ್ಲಿ ಹಂಚಿಕೆ ಮಾಡದೆ ಪರೀಕ್ಷೆಗಳಲ್ಲಿ ವಿದ್ಯಾರ್ಥಿಗಳು ಹೇಗೆ ಕಾರ್ಯನಿರ್ವಹಿಸಿದರು ಎಂಬುದರ ಆಧಾರದಲ್ಲಿ ಬಹುಮಾನ ನೀಡಲು ಅಥವಾ ದಂಡ ವಿಧಿಸಲು ನಿರ್ಧರಿಸಿದರೆ ಆಗ ಲಾರೆನ್ಸ್ ಕರ್ವ್ ನೇರವಾಗಿರುವುದಿಲ್ಲ, ಬದಲಾಗಿ ಬಾಗುತ್ತದೆ.
ಸಮಾನಾಂತರ ಅಕ್ಷದಲ್ಲಿ ವಿದ್ಯಾರ್ಥಿಗಳನ್ನು ಗುರುತಿಸುತ್ತೀರಿ ಮತ್ತು ಅವರನ್ನು ದಶಾಂಶಗಳಾಗಿ (ಶೇ.10ರ ಗುಂಪುಗಳು) ವಿಂಗಡನೆ ಮಾಡುತ್ತೀರಿ. ಇದರಲ್ಲಿ ಕಡಿಮೆ ಅಂಕಗಳನ್ನು ಪಡೆದವರು ಎಡಭಾಗದ ದಶಾಂಶದಲ್ಲಿ ಮತ್ತು ಹೆಚ್ಚು ಅಂಕಗಳನ್ನು ಗಳಿಸಿದವರು ತೀರಾ ಬಲಭಾಗದಲ್ಲಿ ಇರುತ್ತಾರೆ. ನೀವು ಪಡೆಯುವ ಚಾಕ್ಲೇಟ್ ವಿತರಣೆ ಏನಿದ್ದರೂ ಸಂಪೂರ್ಣ ಸಮಾನ ವಿತರಣೆಯ ರೇಖೆಯ ಕೆಳಗೆ ಚಲಿಸುತ್ತದೆ. ಇದರಿಂದ ಕಡಿಮೆ ಅಂಕ ಪಡೆದ ದಶಾಂಶವು ಶೇ.10ಕ್ಕಿಂತ ಕಡಿಮೆ ಚಾಕ್ಲೇಟ್ ಪಡೆಯುತ್ತದೆ. ಬಾಟಮ್ ನಲ್ಲಿರುವ ಶೇ.20ರಷ್ಟು ವಿದ್ಯಾರ್ಥಿಗಳು ಶೇ.20ಕ್ಕಿಂತ ಕಡಿಮೆ ಚಾಕ್ಲೇಟ್ ಪಡೆಯುತ್ತಾರೆ.
ಬಹುತೇಕ ವಿದ್ಯಾರ್ಥಿಗಳು ಮಧ್ಯಮ ಪ್ರಮಾಣದ ಅಂಕಗಳನ್ನು ಗಳಿಸುವ ಕಾರಣ, ಕೆಳ ಕ್ರಮಾಂಕದಲ್ಲಿ ಇರುವ ವಿದ್ಯಾರ್ಥಿಗಳಿಗೆ ಎರಡು ಮತ್ತು ಮೂರನೇ ದಶಾಂಶದ ಬಳಿಕ ಚಾಕ್ಲೇಟ್ ಹಂಚಿಕೆಯ ಪ್ರಮಾಣವು ಹೆಚ್ಚಾಗಲು ಆರಂಭವಾಗುತ್ತದೆ ಹಾಗೂ ಏಳನೇ ದಶಾಂಶದ ನಂತರ ತೀವ್ರವಾಗಿ ಏರಿಕೆಯಾಗುತ್ತದೆ. ಒಂದು ವೇಳೆ 50ರ ಸಣ್ಣ ಮಾದರಿಗೆ ಛೇದಕ ಬಿಂದುಗಳನ್ನು ಸೇರಿಸಿದರೆ ರೇಖೆಯು ಸುಗಮವಾಗಿರುವುದಿಲ್ಲ.
ಒಂದು ವೇಳೆ ಹಿರಿಯ ಮಾಧ್ಯಮಿಕ (+2) ಪರೀಕ್ಷೆ ತೆಗೆದುಕೊಳ್ಳುವವರನ್ನು ವಿದ್ಯಾರ್ಥಿ ಸಂಖ್ಯೆ ಎಂದು ಊಹಿಸಿದರೆ ಸುಗಮವಾದ ಕರ್ವ್ ಸಿಗುತ್ತದೆ. ಇವೆಲ್ಲ ಯೋಚನೆಯನ್ನು ನೀವು ಗ್ರಾಫ್ ನಿಂದ ಪಡೆದುಕೊಳ್ಳಬಹುದು.
ಈ ಲಾರೆನ್ಸ್ ಕರ್ವ್ 45 ಡಿಗ್ರಿ ಗೆರೆಯಿಂದ ಇನ್ನೂ ಮುಂದಕ್ಕೆ ಚಲಿಸುತ್ತ ಹೋದಹಾಗೆ ಹಂಚಿಕೆಯಲ್ಲಿ ಅಸಮಾನತೆ ಕೂಡ ಹೆಚ್ಚುತ್ತ ಹೋಗುತ್ತದೆ.
ಪರಿಪೂರ್ಣ ಸಮಾನತೆ/ ಅಸಮಾನತೆ: ಈ ‘Gini coefficient’ (ಗಿನಿ ಗುಣಾಂಕ) ಪರಿಪೂರ್ಣ ಸಮಾನತೆ ಮತ್ತು ವಾಸ್ತವಿಕ ಹಂಚಿಕೆ ನಡುವಿನ ಅಂತರವನ್ನು ಅಳೆಯುತ್ತದೆ. ಪರಿಪೂರ್ಣ ಸಮಾನತೆಯ ಕೆಳಗಿರುವ ರೇಖೆ ಮತ್ತು ಲಾರೆನ್ಸ್ ಕರ್ವ್ ಕೆಳಗಿರುವ ಪ್ರದೇಶದ ನಡುವೆ ಇರುವ ವ್ಯತ್ಯಾಸವನ್ನು ಸಮಾನತೆ ರೇಖೆಯ ಕೆಳಗಿರುವ ಪ್ರದೇಶದ ಅನುಪಾತದಲ್ಲಿ ಲೆಕ್ಕಹಾಕುತ್ತದೆ.
ಒಂದು ವೇಳೆ ಲಾರೆನ್ಸ್ ಕರ್ವ್ ಮತ್ತು ಸಮಾನತೆಯ ರೇಖೆಯ ಜೊತೆಯಾದರೆ ಸಮಾನತೆ ರೇಖೆಯ ಕೆಳಗಿನ ಪ್ರದೇಶ ಮತ್ತು ಲಾರೆನ್ಸ್ ಕರ್ವ್ ಕೆಳಗಿನ ಪ್ರದೇಶವು ಒಂದೇ ಆಗುತ್ತದೆ ಮತ್ತು ಎರಡರ ನಡುವಿನ ವ್ಯತ್ಯಾಸವು ಶೂನ್ಯವೇ ಆಗಿರುತ್ತದೆ. ಸೊನ್ನೆಯನ್ನು ಯಾವುದರಿಂದ ಬಾಗಿಸಿದರೂ ಸೊನ್ನೆಯೇ ಆಗುತ್ತದೆ. ಒಂದು ಪರಿಪೂರ್ಣ ಸಮ ಸಮಾಜದಲ್ಲಿ ಗಿನಿ ಗುಣಾಂಕವು ಸೊನ್ನೆಯಾಗಿರುತ್ತದೆ.
ಒಂದು ಸಮಾಜದಲ್ಲಿ ಒಬ್ಬ ವ್ಯಕ್ತಿಗೆ ಎಲ್ಲವೂ ಸಿಕ್ಕುಬಿಟ್ಟರೆ ಆಗ ಲಾರೆನ್ಸ್ ಕರ್ವ್ ಸಮಾನಾಂತರ ಅಕ್ಷವನ್ನು ಅಪ್ಪಿಕೊಳ್ಳುತ್ತದೆ ಮತ್ತು ಅದರ ಕೆಳಗಿನ ಪ್ರದೇಶವು ಶೂನ್ಯವೇ ಆಗಿರುತ್ತದೆ. ಸಮಾನತೆ ರೇಖೆಯ ಕೆಳಗಿರುವ ಪ್ರದೇಶ ಮತ್ತು ಲಾರೆನ್ಸ್ ಕರ್ವ್ ಕೆಳಗಿನ ಪ್ರದೇಶದ ನಡುವಿನ ವ್ಯತ್ಯಾಸವು ಸಮಾನತೆ ರೇಖೆಯ ಕಳೆಗಿನ ಪ್ರದೇಶದ ಒಟ್ಟು ಮೊತ್ತವಾಗಿರುತ್ತದೆ. ಜೊತೆಗೆ ಸಮಾನತೆ ರೇಖೆಯ ಕೆಳಗಿನ ಪ್ರದೇಶಕ್ಕೆ ಅದರ ಅನುಪಾತವು 1-ಆಗಿರುತ್ತದೆ.
ಪರಿಪೂರ್ಣ ಸಮಾನತೆಯು ಗಿನಿ ಗುಣಾಂಕವನ್ನು ಸೊನ್ನೆಯಾಗಿ ಮಾಡುತ್ತದೆ ಮತ್ತು ಪರಿಪೂರ್ಣ ಅಸಮಾನತೆ ಗಿನಿ ಗುಣಾಂಕವನ್ನು ಒಂದನ್ನಾಗಿ ಮಾಡುತ್ತದೆ. ಇದೇ ವಾಸ್ತವ ಜಗತ್ತಿನಲ್ಲಿ ಈ ಗುಣಾಂಕವು ಸೊನ್ನೆ ಮತ್ತು ಒಂದರ ನಡುವೆ ಇರುತ್ತದೆ. ಇದು ಕಡಿಮೆ ಇದ್ದಷ್ಟೂ ಸಮ ಸಮಾಜವಿರುತ್ತದೆ.
ಒಂದು ಉತ್ಪ್ರೇಕ್ಷೆ: ಥಾಮಸ್ ಪಿಕೆಟ್ಟಿ ಮತ್ತು ಅವರ ತಂಡ ಅಳತೆ ಮಾಡಿದ ಮತ್ತು ಜಾಗತಿಕ ಅಸಮಾನತೆ ದತ್ತಾಂಶದಲ್ಲಿ ನೀಡಲಾದ ಆದಾಯದ ಅಸಮಾನತೆಯು ಉತ್ಪ್ರೇಕ್ಷೆಯಾಗಿರಬಹುದು.
ಭಾರತದಲ್ಲಿ ವಸತಿ ಮತ್ತು ಆಟೊಮೊಬೈಲ್ ಗಳಿಂದ ಆರಂಭಿಸಿ ಬಟ್ಟೆ ಮತ್ತು ರಸಭಕ್ಷ್ಯ ಆಹಾರಗಳ ವರೆಗೆ ಎಲ್ಲವೂ ಪ್ರೀಮಿಯಂ ಆಗುತ್ತಿವೆ. ಆದರೆ ಸಾಮೂಹಿಕ ಬಳಕೆಯ ಸರಕುಗಳ ಮಾರಾಟ ತಳಕಚ್ಚುತ್ತಿವೆ. ಆದರೆ ಷೇರು ಮಾರುಕಟ್ಟೆಗಳು ಮತ್ತು ತಂತ್ರಜ್ಞಾನ ಮೌಲ್ಯಮಾಪನಗಳು ನಿಯಮಿತವಾಗಿ ಕೋಟ್ಯಧಿಪತಿಗಳು ಮತ್ತು ಲಕ್ಷಾದಿಪತಿಗಳನ್ನು ಸೃಷ್ಟಿಸುತ್ತಿವೆ.
ಈ ಎಲ್ಲಾ ಹಿನ್ನೆಲೆಯಲ್ಲಿ ಭಾರತದಲ್ಲಿ ಅಸಮಾನತೆಯ ಪ್ರಮಾಣ ತಗ್ಗುತ್ತಿದೆ ಎನ್ನುವುದು ತೀರಾ ನಗೆಪಾಟಲಿನ ವಿಷಯ. ಆದರೆ ನಗುವುದಕ್ಕಿಂತ ಉತ್ತಮ ಔಷಧ ಬೇರಿಲ್ಲ. ನಾವು ಎಂದೆಂದಿಗೂ ಸುಖವಾಗಿ ಜೀವಿಸದೇ ಹೋದರೂ ಅಲ್ಪ ಕಾಲವಾದರೂ ಬದುಕಬಹುದು. ಥ್ಯಾಂಕ್ಸ್ ವಿಶ್ವ ಬ್ಯಾಂಕ್.