ಇಂಗ್ಲಿಷ್ ಭಾಷೆಗಿರುವ ಅಧಿಕಾರ ಮತ್ತು ಸವಲತ್ತುಗಳ ಪ್ರಭಾವಳಿ ಕಳಚಲು ಹೆಚ್ಚು ಸಾರ್ವತ್ರಿಕಗೊಳಿಸಿ
x

ಭಾರತೀಯ ಭಾಷೆಗಳು ತಮ್ಮ ವೈಭವಪೂರ್ಣವಾದ ಸಾಮರ್ಥ್ಯವನ್ನು ಅರಿತುಕೊಳ್ಳಲು ಇಂಗ್ಲಿಷ್ ಭಾಷೆಯ ಪರಿಣಾಮಕಾರಿ ಬೋಧನೆಯನ್ನು ಶಾಲಾ ಶಿಕ್ಷಣದ ಆತ್ಮವನ್ನಾಗಿ ಮಾಡಿಕೊಳ್ಳಬೇಕು. ಹಾಗಿದ್ದಾಗ ಮಾತ್ರ ಇಂಗ್ಲಿಷ್ ಒಂದು ಅಪೇಕ್ಷೆಯಾಗದೇ ಎಲ್ಲ ಪ್ರೌಢಶಾಲಾ ಪದವೀಧರರಿಗೆ ಒಂದು ಸಹಜ ಸೌಲಭ್ಯವಾಗುತ್ತದೆ. (ಪ್ರಾತಿನಿಧಿಕ ಚಿತ್ರ)

ಇಂಗ್ಲಿಷ್ ಭಾಷೆಗಿರುವ ಅಧಿಕಾರ ಮತ್ತು ಸವಲತ್ತುಗಳ ಪ್ರಭಾವಳಿ ಕಳಚಲು ಹೆಚ್ಚು ಸಾರ್ವತ್ರಿಕಗೊಳಿಸಿ

ಇಂಗ್ಲಿಷ್ ನಲ್ಲಿ ವ್ಯಾಪಕವಾಗಿರುವ ಪ್ರಾವೀಣ್ಯತೆಯನ್ನು ಬಳಸಿಕೊಂಡಾಗ ಮಾತ್ರ ಭಾರತೀಯ ಭಾಷೆಗಳು ವಿಕಸನ ಹೊಂದಲು ಮತ್ತು ಅದರ ಸಂಕೀರ್ಣತೆಯನ್ನು ಪಡೆದುಕೊಳ್ಳಲು ಸಾಧ್ಯವಾಗುತ್ತದೆ.


‘ಇಂಗ್ಲಿಷ್ ನಲ್ಲಿ ಮಾತನಾಡುವವರು ತಲೆ ತಗ್ಗಿಸುವಂತಹ ದಿನ ಬರುತ್ತದೆ’ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಹೇಳಿಕೆಗೆ ನಿರೀಕ್ಷಿತ ಪ್ರತಿಕ್ರಿಯೆಗಳು ವ್ಯಕ್ತವಾಗಿವೆ. ಭಾರತದೊಳಗೆ ಮತ್ತು ಜಾಗತೀಕರಣಗೊಳ್ಳುತ್ತಿರುವ ಪ್ರಪಂಚಕ್ಕೆ ಅಗತ್ಯ ಸಂಪರ್ಕ ಭಾಷೆಯಾಗಿ, ಜ್ಞಾನ ಸಂಪಾದನೆಯ ಭಾಷೆಯಾಗಿ ಮತ್ತು ಚೀನಾಕ್ಕಿಂತ ಭಾರತಕ್ಕೆ ಸ್ಪರ್ಧಾತ್ಮಕವಾಗಿ ಮೇಲುಗೈ ಸಾಧಿಸುವ ಭಾಷೆಯಾಗಿ ಇಂಗ್ಲಿಷ್ ಎಷ್ಟು ಉಪಯುಕ್ತವಾಗಿವೆ ಎಂಬುದನ್ನು ಈ ಪ್ರತಿಕ್ರಿಯೆಗಳು ಬೊಟ್ಟುಮಾಡಿವೆ. ಕೆಲವರು ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ, ಇಂಗ್ಲಿಷ್ ಈಗ ವಿದೇಶಿ ಭಾಷೆಯಾಗಿ ಉಳಿದಿಲ್ಲ ಭಾರತೀಯರು ತಮ್ಮದೇ ಶೈಲಿಯ ಭಾರತೀಯ ಇಂಗ್ಲಿಷ್ ಆವೃತ್ತಿಯನ್ನು ಅಭಿವೃದ್ಧಿಪಡಿಸಿದ್ದಾರೆ ಎಂದು ಹೇಳಿದ್ದಾರೆ.

ಹಾಗಾಗಿ ಇಂಗ್ಲಿಷ್ ಮಾತನಾಡುತ್ತಿದ್ದೇನೆ ಎಂಬ ಕಾರಣಕ್ಕೆ ಯಾರೊಬ್ಬರೂ ತಲೆತಗ್ಗಿಸಬೇಕಾದ ಅಗತ್ಯವೇನೂ ಇಲ್ಲ. ಅದೇ ಹೊತ್ತಿನಲ್ಲಿ ತಮಗೆ ಇಂಗ್ಲಿಷ್ ಭಾಷೆ ಮಾತನಾಡುವ ಸಾಮರ್ಥ್ಯವಿದೆ ಎಂಬ ಜಂಬದಿಂದ ಇಂಗ್ಲಿಷ್ ತಿಳಿಯದೇ ಇರುವ ಮಂದಿಯನ್ನು ಕೀಳಾಗಿ ಪರಿಗಣಿಸುವ ಅಗತ್ಯ ಸುತಾರಾಂ ಇಲ್ಲ.

ಅಧಿಕಾರದ ಭಾಷೆ

ಭಾಷಾ ವೈವಿಧ್ಯತೆಯನ್ನು ಹೊಂದಿದ ಭಾರತೀಯರ ನಡುವೆ ಸಂವಹನವನ್ನು ಸುಲಭವಾಗಿಸುವ ಮತ್ತು ಭಾರತೀಯ ಸೇವಾ ಉದ್ಯಮಕ್ಕೆ ಜಾಗತಿಕವಾಗಿ ಸ್ಪರ್ಧಾತ್ಮಕ ಮೇಲುಗೈಯನ್ನು ಕಲ್ಪಿಸುವ ಇಂಗ್ಲಿಷ್ ಕೇವಲ ನಿಖರವಾದ ಮತ್ತು ಸೊಗಸಾದ ಅಭಿವ್ಯಕ್ತಿಯನ್ನು ಹೊಂದಿದ ಭಾಷೆ ಮಾತ್ರವಲ್ಲ. ಭಾರತದಲ್ಲಿ ಇಂಗ್ಲಿಷ್ ಸಾಂಸ್ಕೃತಿಕ ಪ್ರಾಬಲ್ಯವನ್ನು ಹೊಂದಿದ ಅಧಿಕಾರದ ಭಾಷೆ. ಇಂಗ್ಲಿಷ್ ಮಾತನಾಡುವ ಜನ ಹಿಂದಿನ ವಸಾಹತುಶಾಹಿ ಆಡಳಿತಗಾರರ ಭಾಷೆಯ ಮೇಲಿನ ತಮ್ಮ ಪ್ರಭುತ್ವವನ್ನು ಸಾರಲು ಒಂದು ಅಸ್ತ್ರವನ್ನಾಗಿ ಅದನ್ನು ಪ್ರಯೋಗಿಸುತ್ತಾರೆ. ಜೊತೆಗೆ ಭಾರತೀಯ ಭಾಷೆಗಳನ್ನು ಪುಂಖಾನುಪುಂಖವಾಗಿ ಮಾತನಾಡುವವರ ಮೇಲೆ ನಿಯಂತ್ರಣ ಸಾಧಿಸಲು ಹಾಗೂ ಗಣ್ಯರಿಗೆಂದೇ ಮೀಸಲಾದ ಉನ್ನತ ಸ್ಥಾನಗಳಲ್ಲಿ ಪ್ರಾಶಸ್ತ್ಯವನ್ನು ಪಡೆಯಲು ಇಂಗ್ಲಿಷ್ ನ್ನು ಬಳಸುತ್ತಾರೆ.

ವಾಸ್ತವವಾಗಿ, ಭಾರತದಲ್ಲಿ ಇಂಗ್ಲಿಷ್ ಭಾಷೆ ಸಾಮಾಜಿಕ ಪಾರಮ್ಯದ ಭಾಷೆಯಾಗುವುದನ್ನು ತಡೆಯಬೇಕು. ಐರೋಪ್ಯ ಒಕ್ಕೂಟದಲ್ಲಿ ಅದಕ್ಕೆ ಯಾವ ಸ್ಥಾನಮಾನವಿದೆಯೋ ಅಂತಹ ಸ್ಥಾನಮಾನ ದಕ್ಕುವಂತೆ ಮಾಡಬೇಕು. ಈ ಭಾಷೆಯನ್ನು ಮಾತನಾಡುವವರಿಗೆ ಕ್ರಿಯಾತ್ಮಕ ಉಪಯುಕ್ತತತೆಯನ್ನು ನೀಡಬೇಕೇ ಹೊರತು ಊಹಾತ್ಮಕ ಶ್ರೇಷ್ಠತೆಯನ್ನಲ್ಲ.

ಸಾರ್ವತ್ರಿಕಗೊಳಿಸಿ

ಇಂಗ್ಲಿಷ್ ನ್ನು ಸಾರ್ವತ್ರಿಕಗೊಳಿಸಿದಾಗ ಮಾತ್ರ ಅದಕ್ಕಿರುವ ಸವಲತ್ತುಗಳ ಪ್ರಭಾವಳಿಯನ್ನು ಕಳಚಿಹಾಕಲು ಸಾಧ್ಯ. ಇದಕ್ಕಿರುವ ಮಾರ್ಗವೆಂದರೆ ಭಾರತವು ತನ್ನ ಶಾಲೆಗಳಲ್ಲಿ ಇಂಗ್ಲಿಷ್ ಬೋಧನೆಯನ್ನು ವ್ಯಾಪಕವಾಗಿ ಹೆಚ್ಚಿಸಬೇಕು. ಇಂಗ್ಲಿಷ್ ನ್ನು ಬೋಧನಾ ಮಾಧ್ಯಮವಾಗಿ ಬಳಸುವುದರಿಂದ ಮಾತ್ರ ಮಕ್ಕಳು ಆ ಭಾಷೆಯಲ್ಲಿ ನಿಪುಣರಾಗುತ್ತಾರೆ ಎಂಬ ನಂಬಿಕೆ ಭಾರತದಲ್ಲಿ ವ್ಯಾಪಕವಾಗಿದೆ. ಅಂದರೆ ಮಕ್ಕಳು ಏಕಕಾಲದಲ್ಲಿ ಇತಿಹಾಸ, ಭೂಗೋಳ, ಗಣಿತ ಮತ್ತು ವಿಜ್ಞಾನವನ್ನು ಒಂದೇ ಭಾಷೆಯಲ್ಲಿ ಕಲಿಯುವಂತೆ ಒತ್ತಡ ಹೇರುವುದು. ಮನೆಯಲ್ಲಿ, ಟಿವಿ ಅಥವಾ ಇತರ ಕಾರ್ಯಕ್ರಮಗಳಲ್ಲಿ ಎಂದಿಗೂ ಇಂಗ್ಲಿಷ್ ನ್ನು ಕೇಳದ ಮಕ್ಕಳಿಗೆ ಇಂಗ್ಲಿಷ್ ನಲ್ಲಿ ಬೋಧನೆ ಮಾಡುವುದು ಎಂದರೆ ಇಂಗ್ಲಿಷೂ ಸೇರಿದಂತೆ ಏನನ್ನೂ ಕಲಿಯದೇ ಇರುವುದು ಎಂದು ಅರ್ಥ.

ಮಕ್ಕಳು ಕಡ್ಡಾಯವಾಗಿ ತಮ್ಮ ಮಾತೃಭಾಷೆಯನ್ನು ಕಲಿಯಬೇಕು ಮತ್ತು ಜೊತೆಯಲ್ಲಿ ಇಂಗ್ಲಿಷ್ ನ್ನೂ ಕಲಿಯಬೇಕು. ಸ್ಕಾಂಡಿನೇವಿಯನ್ ರಾಷ್ಟ್ರಗಳಲ್ಲಿ ಇದೇ ರೀತಿಯ ವ್ಯವಸ್ಥೆ ಇದೆ. ಅಲ್ಲಿನ ಮಕ್ಕಳು ಇಂಗ್ಲಿಷ್ ಭಾಷೆ ಮತ್ತು ಕೆಲವರಿಗೆ ಜರ್ಮನಿಯ ಜೊತೆ ಜೊತೆಗೇ ಸ್ವೀಡಿಷ್, ನಾರ್ವೆ, ಡ್ಯಾನಿಶ್ ಅಥವಾ ಐಸ್-ಲ್ಯಾಂಡಿನ ಭಾಷೆಯಲ್ಲಿ ನೈಪುಣ್ಯತೆಯನ್ನು ಪಡೆದು ಶಾಲೆಯಿಂದ ಹೊರಬರುತ್ತಾರೆ. ಅವರಿಗೆ ಇಂಗ್ಲಿಷ್ ಪ್ರಾಬಲ್ಯ ಸಾಧಿಸುವ ಭಾಷೆಯಲ್ಲ, ಬದಲಾಗಿ ಅವಕಾಶದ ಭಾಷೆ. ಭಾರತದಲ್ಲಿಯೂ ಇಂತಹ ವ್ಯವಸ್ಥೆ ಇರಬೇಕು.

ಹಾತೊರೆಯದ ಚೀನಾ, ದ.ಕೋರಿಯಾ

ಚೀನಾ ಮತ್ತು ದಕ್ಷಿಣ ಕೋರಿಯಾದಲ್ಲಿ ಏನಾಗಿದೆ? ಅವರು ಇಂಗ್ಲಿಷ್ ಗಾಗಿ ಹಾತೊರೆಯದೇ ಆರ್ಥಿಕವಾಗಿ ಸಾಕಷ್ಟು ಮುಂಚೂಣಿಯಲ್ಲಿದ್ದಾರೆ. ಭಾರತಕ್ಕೂ ಇದು ಯಾಕೆ ಸಾಧ್ಯವಿಲ್ಲ? ಕೊರಿಯಾದ ಪ್ರತಿಯೊಬ್ಬರೂ ಕೊರಿಯನ್ ಭಾಷೆ ಮಾತನಾಡುತ್ತಾರೆ. ಪರಸ್ಪರ ಸಂವಹನ ನಡೆಸಲು ಅವರಿಗೆ ಇನ್ನೊಂದು ಭಾಷೆಯ ಅಗತ್ಯವಿಲ್ಲ. ಕ್ಯಾಂಟನೀಸ್ (ಚೀನಾದ ಉಪಭಾಷೆ) ಮ್ಯಾಂಡರಿನ್ (ಚೀನಾದ ಅಧಿಕೃತ ಆಡುಭಾಷೆ)ಗಿಂತ ಭಿನ್ನವಾಗಿದ್ದರೂ ಎಲ್ಲ ಚೀನಿಯರು ಚೈನೀಸ್ ಮಾತನಾಡುತ್ತಾರೆ. ಎಲ್ಲಕ್ಕಿಂತ ಮುಖ್ಯವಾಗಿ ಎರಡೂ ದೇಶಗಳು ಸ್ಥಳೀಯ ಭಾಷೆಯನ್ನು ಮಾತನಾಡಲು ಬಾರದವರಿಗೆ ಸೇವೆಗಳನ್ನು ಒದಗಿಸುವುದು ಆಕಸ್ಮಿಕವಾದರೂ ವಸ್ತುಗಳನ್ನು ತಯಾರಿಸುವ ಮೂಲಕ ಅಭಿವೃದ್ಧಿ ಪಥದಲ್ಲಿ ಸಾಗುತ್ತಿವೆ.

ಭಾರತಕ್ಕೆ ಅಗತ್ಯವಾಗಿರುವುದು ಇತರ ಭಾರತೀಯರ ಜೊತೆ ಸಂವಹನವನ್ನು ನಡೆಸಲು ಎಲ್ಲರಿಗೂ ಅರ್ಥವಾಗುವ ಸಂಪರ್ಕ ಭಾಷೆ ಅಥವಾ ಅಂತಹ ಒಂದಕ್ಕಿಂತ ಹೆಚ್ಚು ಭಾಷೆಗಳು. ಭಾರತೀಯ ಅರ್ಥ ವ್ಯವಸ್ಥೆಯ ಬಹುದೊಡ್ಡ ಭಾಗವೆಂದರೆ ಮಾತಿನ ಸಂವಹನದ ಮುಖ್ಯವಾದ ಸೇವೆಗಳನ್ನು ನೀಡುವುದು. ಈ ಎರಡೂ ಉದ್ದೇಶಗಳಿಗೆ ಇಂಗ್ಲಿಷ್ ಅಗತ್ಯ.

ಗಣಿತ ಅಥವಾ ಇತಿಹಾಸದ ಕಲಿಕೆಯನ್ನು ಕೆಲವರು ಶಿಕ್ಷಣದ ಮಹತ್ವಾಕಾಂಕ್ಷೆಯ ಭಾಗವೆಂದು ಪರಿಗಣಿಸುತ್ತಾರೆ. ಅದು ಸ್ವಾಭಾವಿಕ ಕೂಡ. ಹಾಗಂತ ಇಂಗ್ಲಿಷ್ ಹಲವರಿಗೆ ಎಂದಿಗೂ ಸಾಧಿಸಲಾಗದ ಮಹತ್ವಾಕಾಂಕ್ಷೆಯ ಗುರಿಯಾಗಿಯೇ ಉಳಿದಿದೆ. ಅದಕ್ಕೆ ಮುಖ್ಯ ಕಾರಣ ಭಾರತದಲ್ಲಿ ಭಾಷೆಯನ್ನು ಕಲಿಸುವ ವಿಧಾನ.

ಜ್ಞಾನವು ನಾಗಾಲೋಟದಲ್ಲಿ ಮುನ್ನುಗ್ಗುತ್ತಿರುವುದರಿಂದ ನಿಖರತೆ ಮತ್ತು ನಿರಂತರ ಉನ್ನತೀಕರಣದ ಹೆಸರಿನಲ್ಲಿ ಸಂಕೀರ್ಣ ವಿಷಯಗಳನ್ನು ಕಲಿಸಲು ಭಾರತವು ಭಾರತೀಯ ಭಾಷೆಗಳನ್ನು ಬಳಸಿಕೊಳ್ಳಬಹುದೇ? ಮೆಡಿಸಿನ್, ಎಂಜಿನಿಯರಿಂಗ್ ಮತ್ತು ಕಾನೂನನ್ನು ಗುಜರಾತಿ, ಒಡಿಯಾ ಮತ್ತು ಮಲಯಾಳಂನಲ್ಲಿ ಕಲಿಸಬಹುದೇ? ಲ್ಯಾಟಿನ್ ಅಥವಾ ಗ್ರೀಕ್ ಗೆ ಬದಲಾಗಿ ಇಂಗ್ಲಿಷ್, ಫ್ರೆಂಚ್ ಅಥವಾ ಜರ್ಮನ್ ನಂತಹ ಯುರೋಪಿನ ಯಾವುದೇ ಸ್ಥಳೀಯ ಭಾಷೆಯಲ್ಲಿ ಮೆಡಿಸಿನ್, ಅಂಕಗಣಿತ ಮತ್ತು ತತ್ವಶಾಸ್ತ್ರವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಯೋಚನೆಯನ್ನು ಕೇಳಿ ಹಲವರು ನಕ್ಕಂತೆ, ಇದನ್ನೂ ಕೇಳಿ ಅನೇಕರು ನಗಬಹುದು.

ತಾಂತ್ರಿಕ ಪದಗಳಿಗೆ ಸ್ಥಳೀಯ ಸಮಾನಾರ್ಥಕ ಪದ

ಶಿಕ್ಷಣವು ಜನಸಮೂಹಕ್ಕೆ ವ್ಯಾಪಿಸಿಕೊಂಡಂತೆ ಆರೋಗ್ಯ ಸೇವೆ ಮತ್ತು ಶಾಲಾಶಿಕ್ಷಣವು ಕೇವಲ ಗಣ್ಯರ ಪಾಲಾಗಿ ಉಳಿಯಲಿಲ್ಲ. ಬದಲಾಗಿ ಸಾಮಾನ್ಯ ಅವಶ್ಯಕತೆಗಳಾಗಿ ಬದಲಾದವು. ಜೊತೆಗೆ ಯುರೋಪಿಯನ್ ಭಾಷೆಗಳು ಸಂಕೀರ್ಣತೆಯನ್ನು ಸಡಿಲಗೊಳಿಸುವ ಸಾಮರ್ಥ್ಯವನ್ನು ಹೊಂದಿದ ಭಾಷೆಗಳಾಗಿ ವಿಕಸನಹೊಂದಿದವು. ಆದರೆ ಅನೇಕ ತಾಂತ್ರಿಕ ಪದಗಳನ್ನು ಲ್ಯಾಟಿನ್ ಅಥವಾ ಗ್ರೀಕ್ ನಿಂದ ಎರವಲು ಪಡೆಯಲಾಯಿತು. ಅದು ‘ಪೆರಿಕಾರ್ಡಿಯಂ’ (pericardium) ಅಥವಾ ‘ನೆಮೊಫಿಲಿಯಾ’ (nemophilia.) ಎಂಬ ಪದಗಳಾಗಿರಬಹುದು. ಅದೇ ರೀತಿ ಭಾರತೀಯ ಭಾಷೆಗಳು ಸಾಮಾನ್ಯವಾಗಿ ಬಳಕೆಯಾಗುವ ತಾಂತ್ರಿಕ ಪದಗಳಿಗೆ ಸ್ಥಳೀಯ ಸಮಾನಾರ್ಥಕ ಪದಗಳನ್ನು ಸೃಷ್ಟಿಸುವ ಪ್ರಯತ್ನವನ್ನು ಮಾಡಬಾರದು. ಅದಕ್ಕೆ ಬದಲಾಗಿ ಇಂಗ್ಲಿಷ್ ನಲ್ಲಿ ಬಳಸಲಾಗುವ ಪದಗಳನ್ನೆ ಬಳಸಬೇಕು. ಯಾಕೆಂದರೆ ಅವೆಲ್ಲವೂ ಬಹುತೇಕ ಲ್ಯಾಟಿನ್ ಮತ್ತು ಗ್ರೀಕ್ ಮೂಲವನ್ನು ಹೊಂದಿವೆ.

ಅಪೇಕ್ಷೆಯಲ್ಲ ಸೌಲಭ್ಯ

ಅಂತಹ ಸಂಕೀರ್ಣತೆ ಮತ್ತು ವಿಭಿನ್ನ ಕ್ಷೇತ್ರಗಳಲ್ಲಿ ನಿರಂತರ ಜ್ಞಾನವನ್ನು ಉನ್ನತೀಕರಿಸಲು ಭಾರತೀಯ ಭಾಷೆಗಳು ಜನಸಮುದಾಯವನ್ನು ಹೆಚ್ಚು ಹೆಚ್ಚು ತಲುಪಬೇಕು. ಅವರು ಇಂಗ್ಲಿಷ್ ನಲ್ಲಿ ಉತ್ತಮ ಪರಿಣಿತಿಯನ್ನು ಹೊಂದಿರಬೇಕು. ವಿವಿಧ ಭಾಷೆಗಳಲ್ಲಿ ಪರಿಣಿತ ಭಾಷಾಂತರಕಾರರು ಅದನ್ನು ಸಾರ್ವತ್ರಿಕಗೊಳಿಸಬೇಕು. ಇದರಿಂದ ಇಂಗ್ಲಿಷ್ ನಲ್ಲಿ ಸರಿಸುಮಾರು ಸಾರ್ವತ್ರಿಕ ಪ್ರಾವೀಣ್ಯತೆಯನ್ನು ಬಯಸಲು ಸಾಧ್ಯವಾಗುತ್ತದೆ.

ಇಂಗ್ಲಿಷ್ ನಲ್ಲಿರುವ ಪರಿಣಾಮಕಾರಿ ಬೋಧನೆಯನ್ನು ಶಾಲಾ ಶಿಕ್ಷಣದ ಅವಿಭಾಜ್ಯ ಅಂಗವನ್ನಾಗಿ ಮಾಡಿದರೆ, ಭಾರತೀಯ ಭಾಷೆಗಳು ತಮ್ಮ ವೈಭವದ ಸಂಪೂರ್ಣ ಸಾಮರ್ಥ್ಯವನ್ನು ಅರಿತುಕೊಳ್ಳಲು ಸಾಧ್ಯವಾಗುತ್ತದೆ. ಇದರಿಂದ ಇಂಗ್ಲಿಷ್ ಒಂದು ಆಕಾಂಕ್ಷೆಯಾಗಿ ಉಳಿಯದೆ ಎಲ್ಲ ಪ್ರೌಢಶಾಲಾ ಪದವೀಧರರಿಗೆ ಒಂದು ಸ್ವಯಂಚಾಲಿತ ಸೌಲಭ್ಯವಾಗಿ ಉಳಿಯುತ್ತದೆ.

ನಮ್ಮ ಮಕ್ಕಳಿಗೆ ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಬೇಕು ಎಂಬ ಭಾರತೀಯ ಪೋಷಕರ ಕನಸನ್ನು ನನಸು ಮಾಡಿದರೆ ಏನಾಗುತ್ತದೆ ಹೇಳಿ? ಜಗತ್ತಿನಲ್ಲಿರುವ 7000ಕ್ಕೂ ಅಧಿಕ ಭಾಷೆಗಳ ಪೈಕಿ ಐರಿಷ್ ಮತ್ತು ವೆಲ್ಷ್ ನಂತಹ ಶೇ.40ರಷ್ಟು ಭಾಷೆಗಳು ಸಾಯುತ್ತಿವೆ ಎಂದು ಅಂದಾಜು ಮಾಡಲಾಗಿದೆ. ಭಾರತೀಯ ಭಾಷೆಗಳು ಕೂಡ ಸಾಯುವ ಭಾಷೆಗಳ ಪಟ್ಟಿಯಲ್ಲಿ ಸೇರಿಕೊಳ್ಳುತ್ತವೆ. ಪ್ರತಿಯೊಂದು ಭಾಷೆಯೂ ಕೂಡ ನಿರ್ದಿಷ್ಟ ಪ್ರದೇಶದ ಮನುಷ್ಯರ ಅನುಭವದಿಂದ ವಿಕಸನ ಹೊಂದಿದ ಅದೃಷ್ಟದ ನಿಧಿ.

ಹಾಗಾದರೆ ಹಿಂದಿಯನ್ನು ಇಂಗ್ಲಿಷ್ ಗೆ ಪರ್ಯಾಯವಾಗಿ ಮಾಡಿದರೆ ಹೇಗೆ? ಅದು ಎಲ್ಲಾ ಆಧುನಿಕ ಭಾರತೀಯ ಭಾಷೆಗಳ ಪೈಕಿ ತೀರಾ ಇತ್ತೀಚಿನ ಮತ್ತು ಅತ್ಯಂತ ಕಡಿಮೆ ವಿಕಾಸ ಹೊಂದಿದ ಭಾಷೆ. ಉತ್ತರ ಭಾರತದ ಹಿಂದೂಗಳ ಉಪಯೋಗಕ್ಕಾಗಿ ಬೈಬಲ್ ನ್ನು ಭಾಷಾಂತರಿಸಲು ನಿರ್ದಿಷ್ಟ ಭಾಷೆಯ ಕೊರತೆ ಇದ್ದಿದ್ದರಿಂದ ಕ್ರಿಶ್ಚಿಯನ್ ಮಿಷಿನರಿಗಳು, ಎಲ್ಲ ಉತ್ತರ ಭಾರತೀಯರ ಸಾಮಾನ್ಯ ಭಾಷೆಯಾಗಿದ್ದ ಹಿಂದೂಸ್ತಾನಿ ಅಥವಾ ರೇಖ್ತಾವನ್ನು ಪ್ರತ್ಯೇಕಸಿದರು. ಹಿಂದೂ ಮೂಲಭೂತವಾದಿಗಳು ಉರ್ದುವಿನಿಂದ ಇದನ್ನು ಪ್ರತ್ಯೇಕಿಸಲು ಬಳಸಿಕೊಂಡರು.

ಹಿಂದಿ ಯಾರಿಗೂ ಮಾತೃಭಾಷೆಯಲ್ಲ. ಅದು ಅವಧಿ, ಕೌರವಿ, ಲಂಬಾಡಿ ಮತ್ತು ಮಾರ್ವಾರಿಯಿಂದ ಆರಂಭಿಸಿ ಪಶ್ಚಿಮದ ಪಹರಿಯ ವರೆಗಿನ ನಲವತ್ತಕ್ಕೂ ಹೆಚ್ಚು ಭಾಷೆಗಳಿಗೆ ಸಲ್ಲುತ್ತದೆ. ಆದರೆ ಇವುಗಳನ್ನು ಈಗ ಹಿಂದಿಯ ಉಪಭಾಷೆ ಎಂದು ವರ್ಗೀಕರಿಸಲಾಗಿದೆ. ಒಂದು ಭಾಷೆ ಎಂದರೆ ಸೇನೆ ಮತ್ತು ನೌಕಾಪಡೆಯನ್ನು ಹೊಂದಿರುವ ಉಪಭಾಷೆ ಎಂದು ಹೇಳಲಾಗುತ್ತದೆ. ಮೈಥಿಲಿ ಮತ್ತು ಭೋಜ್-ಪುರಿ ಹಾಗೆ ಪ್ರತಿಪಾದಿಸಿಕೊಂಡಿವೆ, ಉಳಿದವು ಮಾಡಿಲ್ಲ, ಅಷ್ಟೇ.

ಬಾಲಿವುಡ್ ನ ಹಿಂದೂಸ್ತಾನಿ ಕೃಪೆಯಿಂದ ಬೆಳೆಯುತ್ತಿರುವ ಹಿಂದಿಯೂ ಸೇರಿದಂತೆ ಎಲ್ಲ ಭಾರತೀಯ ಭಾಷೆಗಳೂ ಇಂಗ್ಲಿಷ್ ನ್ನು ಸರ್ವವ್ಯಾಪಿ ಸೌಲಭ್ಯವಾಗಿ ಬಳಸಿಕೊಂಡು ವಿಕಸನ ಹೊಂದಲಿ.

(ಎಲ್ಲ ವಲಯದ ಅಭಿಪ್ರಾಯಗಳು ಮತ್ತು ದೃಷ್ಟಿಕೋನಗಳನ್ನು ಪ್ರಸ್ತುತಪಡಿಸುವ ಪ್ರಯತ್ನವನ್ನು ದ ಫೆಡರಲ್ ಮಾಡುತ್ತದೆ. ಈ ಲೇಖನದಲ್ಲಿ ವ್ಯಕ್ತಪಡಿಸಲಾದ ಮಾಹಿತಿ, ಯೋಚನೆಗಳು ಮತ್ತು ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದೇ ಆಗಿರುತ್ತವೆ ಮತ್ತು ಅವು ಫೆಡರಲ್ ನ ದೃಷ್ಟಿಕೋನಗಳನ್ನು ಬಿಂಬಿಸುವುದಿಲ್ಲ).


Read More
Next Story