
ಯುವ ಕಾಂಗ್ರೆಸ್ ಕಾರ್ಯಕರ್ತರು ಅರೆಬೆತ್ತಲೆ ಪ್ರತಿಭಟನೆ ನಡೆಸಿದರು.
ಎಐ ಇಂಪ್ಯಾಕ್ಟ್ ಸಮ್ಮಿಟ್ ವೇಳೆ ಯುವ ಕಾಂಗ್ರೆಸ್ 'ಅರೆಬೆತ್ತಲೆʼ ಪ್ರತಿಭಟನೆ
ಪ್ರಧಾನಮಂತ್ರಿ ಮೋದಿ ಅವರು ಎಐ ಶೃಂಗಸಭೆನಲ್ಲಿ ದೇಶದ ಗುರುತನ್ನು ಕಾರ್ಪೊರೇಟ್ ಶಕ್ತಿಗಳ ಮುಂದೆ ಒತ್ತೆ ಇಟ್ಟಿದ್ದಾರೆ ಎಂದು ಯುವ ಕಾಂಗ್ರೆಸ್ ಆರೋಪಿಸಿದೆ.
ರಾಜಧಾನಿ ದೆಹಲಿಯ ಭಾರತ ಮಂಟಪಂನಲ್ಲಿ ನಡೆಯುತ್ತಿರುವ ಎಐ ಇಂಪ್ಯಾಕ್ಟ್ ಸಮ್ಮಿಟ್ ಕಾರ್ಯಕ್ರಮದ ವೇಳೆ ಭಾರತೀಯ ಯುವ ಕಾಂಗ್ರೆಸ್ ಕಾರ್ಯಕರ್ತರು ಶುಕ್ರವಾರ (ಫೆ. 20) 'ಅರೆಬೆತ್ತಲೆ ಪ್ರತಿಭಟನೆ' ನಡೆಸಿ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಮೇಲೆ ತೀವ್ರ ಆರೋಪ ಮಾಡಿದ್ದಾರೆ.
ಯುವ ಕಾಂಗ್ರೆಸ್ ಕಾರ್ಯಕರ್ತರು ಭಾರತ ಮಂಟಪಂ ಬಳಿ ಅರೆಮೈಯಲ್ಲಿ ಧರಣಿ ನಡೆಸಿ ಘೋಷಣೆ ಕೂಗಿದ್ದಾರೆ. ಪ್ರಧಾನಮಂತ್ರಿ ಮೋದಿ ಅವರು ಎಐನಂಥ ಶೃಂಗಸಭೆನಲ್ಲಿ ದೇಶದ ಹೆಗ್ಗುರತನ್ನು ಕಾರ್ಪೊರೇಟ್ ಶಕ್ತಿಗಳ ಮುಂದೆ ಒತ್ತೆ ಇಟ್ಟಿದ್ದಾರೆ ಎಂದು ಕಾಂಗ್ರೆಸ್ ಆರೋಪಿಸಿದೆ.
ಯೂತ್ ಕಾಂಗ್ರೆಸ್ ಹೇಳಿದ್ದೇನು?
"ಶೃಂಗಸಭೆನ ಪ್ರಭಾವಳಿ ಹಿಂದೆ ನಿಂತು ಸತ್ಯವನ್ನು ಮರೆಮಾಚಲು ಸಾಧ್ಯವಿಲ್ಲ. ರಾಷ್ಟ್ರೀಯ ಹಿತಾಸಕ್ತಿಗಿಂತ ಕಾರ್ಪೊರೇಟ್ ಹಿತಾಸಕ್ತಿ ಮೇಲುಗೈ ಸಾಧಿಸುತ್ತಿರುವಾಗ, ವಿದೇಶ ನೀತಿಯಲ್ಲಿ ಮೃದುತ್ವ ಎದ್ದು ಕಾಣುತ್ತಿರುವಾಗ, ಪ್ರತಿಭಟನೆ ಒಂದು ಕರ್ತವ್ಯವಾಗುತ್ತದೆ" ಎಂದು ಯುವ ಕಾಂಗ್ರೆಸ್ ಎಕ್ಸ್ನಲ್ಲಿ ಬರೆದುಕೊಂಡಿದೆ. ದೆಹಲಿ ಯುವ ಕಾಂಗ್ರೆಸ್ ಕೂಡ, "ವಿದೇಶ ನೀತಿ ಕಾರ್ಪೊರೇಟ್ ಒತ್ತಡಕ್ಕೆ ಮಣಿದಾಗ, ಪ್ರಧಾನಮಂತ್ರಿ ಮೋದಿ 'ಹೊಂದಾಣಿಕೆ ಪ್ರಧಾನಮಂತ್ರಿ' ಎಂಬ ಸತ್ಯ ಮನವರಿಕೆಯಾಗುತ್ತದೆ" ಎಂದು ಆರೋಪಿಸಿದೆ.
ನಾಲ್ವರ ಬಂಧನ; ತನಿಖೆ ಶುರು
ಪ್ರತಿಭಟನೆ ಸಂಬಂಧ ದೆಹಲಿ ಪೊಲೀಸರು ನಾಲ್ಕರಿಂದ ಐದು ಮಂದಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಪ್ರತಿಭಟನಾಕಾರರು ಪಾಸ್ ಅಥವಾ ಕ್ಯೂಆರ್ ಕೋಡ್ ಮೂಲಕ ಸ್ಥಳ ಪ್ರವೇಶಿಸಿದ್ದಾರೆಯೇ ಎಂದು ತನಿಖೆ ನಡೆಸಲಾಗುತ್ತಿದೆ.
ಬಿಜೆಪಿ ಖಂಡನೆ
ಈ ಘಟನೆಯನ್ನು 'ರಾಷ್ಟ್ರೀಯ ಅವಮಾನ' ಎಂದು ಬಿಜೆಪಿ ಬಣ್ಣಿಸಿದೆ. "ಭಾರತ ಜಾಗತಿಕ ಎಐ ಸಮ್ಮಿಟ್ ಆತಿಥ್ಯ ವಹಿಸಿ ತಂತ್ರಜ್ಞಾನ ಮಹಾಶಕ್ತಿಯಾಗಿ ತನ್ನನ್ನು ಪ್ರಸ್ತುತಪಡಿಸಿಕೊಳ್ಳುತ್ತಿರುವ ಈ ಸಂದರ್ಭದಲ್ಲಿ, ಕಾಂಗ್ರೆಸ್ ಜಗತ್ತಿನ ವೇದಿಕೆಯಲ್ಲಿ ಭಾರತವನ್ನು ಮುಜುಗರಕ್ಕೀಡುಮಾಡಲು ಉದ್ದೇಶಪೂರ್ವಕವಾಗಿ ಅವ್ಯವಸ್ಥೆ ಸೃಷ್ಟಿಸಿದೆ" ಎಂದು ಬಿಜೆಪಿ ಆರೋಪಿಸಿದೆ.

