
ಸಿದ್ದರಾಮಯ್ಯ ಬೆಂಬಲಿಗರ ಸಾಗರೋಲ್ಲಂಘನ: 'ಕೈʼಕಮಾಂಡ್‌ಗೆ ಶುರುವಾಯ್ತು ಹೊಸ ತಲೆನೋವು
ಸಿಎಂ ಸಿದ್ದರಾಮಯ್ಯ ಅವರ ಆಪ್ತ ಶಾಸಕರ ಬಣ ವಿದೇಶಿ ಪ್ರವಾಸ ಕೈಗೊಂಡಿರುವುದು, ವಿರೋಧಿ ಬಣಕ್ಕೆ ನುಂಗಲಾರದ ಬಿಸಿ ತುಪ್ಪವಾಗಿದೆ. ಹೀಗಾಗಿ ಈ ಪ್ರವಾಸದ ಕಾಂಗ್ರೆಸ್ ಹೈಕಮಾಂಡ್‌ಗೆ ದೂರು ಸಲ್ಲಿಕೆಯಾಗಿದೆ.
ರಾಜ್ಯ ರಾಜಕೀಯದ ಅಂಗಳದಲ್ಲಿ ಈಗ 'ವಿದೇಶ ಪ್ರವಾಸ'ದ ಬಿಸಿ ಏರಿದೆ. ಆಡಳಿತಾರೂಢ ಕಾಂಗ್ರೆಸ್ ಪಕ್ಷದೊಳಗೆ ಈ ವಿಚಾರ ದೊಡ್ಡ ಮಟ್ಟದ ಸಂಚಲನಕ್ಕೆ ಕಾರಣವಾಗಿದ್ದು, ಸಿದ್ದರಾಮಯ್ಯ ಮತ್ತು ಅವರ ವಿರೋಧಿ ಬಣದ ನಡುವಿನ ಶೀತಲ ಸಮರ ಈಗ ದೆಹಲಿಯ ಹೈಕಮಾಂಡ್ ಮೆಟ್ಟಿಲೇರಿದೆ !
ಕಾಂಗ್ರೆಸ್ ನಾಯಕತ್ವ ಬದಲಾವಣೆಯ ಹಗ್ಗಜಗ್ಗಾಟದ ನಡುವೆಯೇ ಸಿಎಂ ಸಿದ್ದರಾಮಯ್ಯ ಅವರ ಆಪ್ತ ಬಣದ 21 ಮಂದಿ ಶಾಸಕರು, ಮಂಗಳವಾರ ಸಂಜೆ ದೇವನಹಳ್ಳಿ ವಿಮಾನ ನಿಲ್ದಾಣದಿಂದ ಆಸ್ಟ್ರೇಲಿಯಾಗೆ ತೆರಳಿದ್ದಾರೆ. ಈ ಪ್ರವಾಸ ಕೇವಲ ಮೋಜು-ಮಸ್ತಿಗೆ ಸೀಮಿತವಾಗಿಲ್ಲ. ಇದರ ಹಿಂದೆ ರಾಜಕೀಯ ತಂತ್ರಗಾರಿಕೆ ಅಡಗಿದೆ ಎಂಬ ಆರೋಪ ಕೇಳಿಬಂದಿದೆ.
ಮಂಗಳವಾರ ಶಾಸಕರು ಬೆಂಗಳೂರಿನಿಂದ ವಿಮಾನ ಹತ್ತುತ್ತಿದ್ದಂತೆಯೇ, ಇತ್ತ ದೆಹಲಿಯ ಹೈಕಮಾಂಡ್ ಕಚೇರಿಗೆ ಸಿದ್ದರಾಮಯ್ಯ ವಿರೋಧಿ ಬಣದಿಂದ ಅಂದರೆ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಂದ ಒಂದು ತುರ್ತು ವರದಿ ರವಾನೆಯಾಗಿದೆ ಎನ್ನಲಾಗಿದೆ. ಈ ದೂರಿನಲ್ಲಿ ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೆಸರನ್ನು ಪ್ರಸ್ತಾಪಿಸಲಾಗಿದ್ದು, ʼಈ ಪ್ರವಾಸದ ಹಿಂದೆ ಅವರ 'ರಾಜಕೀಯ ತಂತ್ರಗಾರಿಕೆ' ಅಡಗಿದೆʼ ಎಂದು ರಾಜ್ಯ ಕಾಂಗ್ರೆಸ್‌ನ ಉಸ್ತುವಾರಿ ವೇಣುಗೋಪಾಲ್ ಅವರಿಗೆ ದೂರವಾಣಿ ಮೂಲಕ ದೂರು ಸಲ್ಲಿಸಲಾಗಿದೆ. ಈ ಬಗ್ಗೆ ಖಚಿತ ಮಾಹಿತಿ "ದ ಫೆಡರಲ್ ಕರ್ನಾಟಕ"ಕ್ಕೆ ಲಭ್ಯವಾಗಿದೆ.
ದೂರಿನಲ್ಲಿ ಏನಿದೆ?
ವಿದೇಶಿ ಪ್ರವಾಸಿಗಕ್ಕೆ ಹೋಗಿರುವವರೆಲ್ಲರೂ, ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ವಲಯದ ಶಾಸಕರಾಗಿದಾರೆ. ಜತೆಗೆ ಈ ಪ್ರವಾಸ ಯಾವುದೇ ಅಧಿಕೃತ ಸಮಿತಿ ಇಲ್ಲವೇ ಇಲಾಖೆಯ ಪ್ರವಾಸವಲ್ಲ. ಹೀಗಾಗಿ ಈ ಪ್ರವಾಸ ಸಾಕಷ್ಟು ಅನುಮಾನಕ್ಕೆ ಎಡೆಮಾಡಿಕೊಟ್ಟಿದೆ. ಈ ಪ್ರವಾಸವು ಪ್ರತಿಪಕ್ಷಗಳಿಗೆ ಟೀಕಿಸಲು ಸರಕಾರವೇ ಆಹಾರ ಒದಗಿಸಿದಂತಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ದುಬೈ ಪ್ಲಾನ್ ಮತ್ತು ಸಚಿವರ ತಂಡ!
ದೂರಿನಲ್ಲಿ ಕೇವಲ ಈ ಶಾಸಕರ ಬಗ್ಗೆ ಮಾತ್ರವಲ್ಲದೆ, ಮತ್ತೊಬ್ಬ ಪ್ರಭಾವಿ ಸಚಿವರ ನೇತೃತ್ವದಲ್ಲಿ ಒಂದು ತಂಡ ದುಬೈಗೆ ಹೋಗಲು ಸಿದ್ಧತೆ ನಡೆಸಿತ್ತು ಎಂಬ ಮಾಹಿತಿಯನ್ನೂ ನೀಡಲಾಗಿದೆ ಎನ್ನಲಾಗಿದೆ. "ಮುಖ್ಯಮಂತ್ರಿಗಳು ಮನಸ್ಸು ಮಾಡಿದ್ದರೆ ಈ ಪ್ರವಾಸಕ್ಕೆ ತಡೆ ಹಾಕಬಹುದಿತ್ತು. ಆದರೆ ಅವರು ಸುಮ್ಮನಿರುವುದು ನೋಡಿದರೆ, ತಮ್ಮ ಆಪ್ತರನ್ನು ಒಗ್ಗೂಡಿಸಲು ಅವರು ಈ ಅವಕಾಶ ಮಾಡಿಕೊಟ್ಟಿದ್ದಾರೆ" ಎಂಬುದು ವಿರೋಧಿ ಬಣದ ವಾದ.
ರಾಜಕೀಯ ಲೆಕ್ಕಾಚಾರವೇನು?
ಸದ್ಯ ರಾಜ್ಯದಲ್ಲಿ ನಾಯಕತ್ವ ಬದಲಾವಣೆಯ ಚರ್ಚೆಗಳು ಒಳಗೊಳಗೆ ನಡೆಯುತ್ತಿರುವಾಗಲೇ, ಸಿಎಂ ಆಪ್ತ ಶಾಸಕರು ವಿದೇಶಕ್ಕೆ ಹೋಗಿರುವುದು ಹೈಕಮಾಂಡ್ ಗಮನ ಸೆಳೆದಿದೆ. "ಶಾಸಕರನ್ನು ತಮ್ಮತ್ತ ಸೆಳೆದಿಟ್ಟುಕೊಳ್ಳಲು ಈ ಪ್ರವಾಸವನ್ನು ಆಮಿಷವಾಗಿ ಬಳಸಲಾಗುತ್ತಿದೆ" ಎಂದು ಹೈಕಮಾಂಡ್‌ಗೆ ಮನವರಿಕೆ ಮಾಡುವ ಪ್ರಯತ್ನ ನಡೆದಿದೆ.
ಮುಂದೇನು?
ಈ ಬೆಳವಣಿಗೆಯಿಂದಾಗಿ ಸಿದ್ದರಾಮಯ್ಯ ಬಣ ಮತ್ತು ಡಿ.ಕೆ. ಶಿವಕುಮಾರ್ ಅಥವಾ ಇತರ ಪ್ರಭಾವಿ ನಾಯಕರ ಬಣಗಳ ನಡುವಿನ ಅಂತರ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಹೈಕಮಾಂಡ್ ಈ ಬಗ್ಗೆ ಸಿಎಂ ಅವರಿಂದ ವಿವರಣೆ ಕೇಳುತ್ತದೆಯೇ ಅಥವಾ ಇದನ್ನು ಶಿಸ್ತು ಸಮಿತಿಗೆ ವಹಿಸುತ್ತದೆಯೇ ಎಂಬುದು ಈಗ ಕುತೂಹಲಕ್ಕೆ ಕಾರಣವಾಗಿದೆ.
ಮಾ.3 ರಂದು ವಾಪಸ್ಸು
ಸಚಿವ ಕೆ.ವೆಂಕಟೇಶ್, ಶಾಸಕರಾದ ಪುಟ್ಟರಂಗಶೆಟ್ಟಿ, ಎಚ್.ಡಿ.ತಮ್ಮಯ್ಯ, ಬಸನಗೌಡ ದದ್ದಲ್ ಸೇರಿದಂತೆ 21 ಮಂದಿ ಶಾಸಕರು ಆಸ್ಟ್ರೇಲಿಯಾ ಪ್ರವಾಸ ಕೈಗೊಂಡಿದ್ದು, ಮಾ.3 ರಂದು ಬೆಂಗಳೂರಿಗೆ ವಾಪಸ್ಸಾಗಲಿದ್ದಾರೆ ಎಂಬ ಮಾಹಿತಿ ದೊರೆತಿದೆ.

