
ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ವಿಜಯ್
ತಮಿಳುನಾಡು ರಾಜಕೀಯ: ಎನ್‌ಡಿಎ ಮೈತ್ರಿ ವದಂತಿಗಳಿಗೆ ತೆರೆ ಎಳೆದ ವಿಜಯ್; ಜಾತ್ಯತೀತ ಸಿದ್ಧಾಂತವೇ ಅಂತಿಮ!
ತಮ್ಮ ಪಕ್ಷದ ಜಾತ್ಯತೀತ ಅಸ್ಮಿತೆ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳೊಂದಿಗೆ ಎಂದಿಗೂ, ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಟ ಹಾಗೂ ತಮಿಳಗ ವೆಟ್ರಿ ಕಳಗಂ (ಟಿವಿಕೆ) ಸಂಸ್ಥಾಪಕ ವಿಜಯ್, ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ತಾವು ಎಐಎಡಿಎಂಕೆ ಅಥವಾ ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳಲಿದ್ದಾರೆ ಎಂಬ ಊಹಾಪೋಹಗಳಿಗೆ ಅಧಿಕೃತವಾಗಿ ತೆರೆ ಎಳೆದಿದ್ದಾರೆ.
ತಮ್ಮ ಪಕ್ಷದ ಜಾತ್ಯತೀತ ಅಸ್ಮಿತೆ ಹಾಗೂ ಸಾಮಾಜಿಕ ನ್ಯಾಯದ ಸಿದ್ಧಾಂತಗಳೊಂದಿಗೆ ಎಂದಿಗೂ, ಯಾರೊಂದಿಗೂ ರಾಜಿ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಖಡಕ್ ಆಗಿ ಸ್ಪಷ್ಟಪಡಿಸಿರುವ ಅವರು, ಮುಂಬರುವ ಚುನಾವಣೆಯಲ್ಲಿ ಟಿವಿಕೆ ಪಕ್ಷವು ಸ್ವತಂತ್ರವಾಗಿ ಕಣಕ್ಕಿಳಿಯಲಿದೆ ಎಂದು ಘೋಷಿಸಿದ್ದಾರೆ.
ಇಫ್ತಾರ್ ಕೂಟದಲ್ಲಿ ವದಂತಿಗಳಿಗೆ ತಿರುಗೇಟು
ಮಾಮಲ್ಲಪುರಂನ ಪಂಚತಾರಾ ಹೋಟೆಲ್‌ನಲ್ಲಿ ತಮ್ಮ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ವಿಜಯ್, ತಮ್ಮ ರಾಜಕೀಯ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. "ಪಕ್ಷವನ್ನು ಆರಂಭಿಸಿದ ಹೊಸತರಲ್ಲಿ ನಮ್ಮ ಎದುರಾಳಿಗಳು ನಮ್ಮನ್ನು ಯಾವುದೋ ಒಂದು ನಿರ್ದಿಷ್ಟ ಗುಂಪಿಗೆ ಸೇರಿಸಲು ಯತ್ನಿಸಿದ್ದರು. ಆದರೆ, ನಮ್ಮ ಜೊತೆಗಿರುವ ಬೃಹತ್ ಜನಬೆಂಬಲವನ್ನು ನೋಡಿದ ನಂತರ, ಈಗ ನಾವು ಅವರೊಂದಿಗೆ ಮೈತ್ರಿ ಮಾಡಿಕೊಳ್ಳಲಿದ್ದೇವೆ, ಇವರೊಂದಿಗೆ ಕೈಜೋಡಿಸಲಿದ್ದೇವೆ ಎಂಬ ಸುಳ್ಳು ಸುದ್ದಿಗಳನ್ನು ಹಬ್ಬಿಸುತ್ತಿದ್ದಾರೆ," ಎಂದು ಅವರು ವಿರೋಧಿಗಳ ವಿರುದ್ಧ ವ್ಯಂಗ್ಯವಾಡಿದ್ದಾರೆ. ಇಂತಹ ಸುಳ್ಳು ಸುದ್ದಿಗಳಿಂದ ಗೊಂದಲಕ್ಕೊಳಗಾಗದಂತೆ ಅವರು ತಮ್ಮ ಬೆಂಬಲಿಗರಿಗೆ ಹಾಗೂ ಜನತೆಗೆ ಎಚ್ಚರಿಕೆ ನೀಡಿದ್ದಾರೆ.
ಚತುಷ್ಕೋನ ಸ್ಪರ್ಧೆಗೆ ವೇದಿಕೆ ಸಜ್ಜು
"ನಮ್ಮ ಪಕ್ಷವು ಸದಾ ಕಾಲ ಜಾತ್ಯತೀತವಾಗಿರಲಿದೆ. ನಾವು ನಮ್ಮ ಸ್ವತಂತ್ರ ಬಲದಿಂದಲೇ ತಮಿಳುನಾಡಿನಲ್ಲಿ ಸರ್ಕಾರ ರಚಿಸುತ್ತೇವೆ. ಈ ವಿಚಾರದಲ್ಲಿ ಯಾರ ಜೊತೆಗೂ ಒಪ್ಪಂದ ಮಾಡಿಕೊಳ್ಳುವುದಿಲ್ಲ. ದೇವರ ದಯೆ ಮತ್ತು ಜನರ ಆಶೀರ್ವಾದದಿಂದ ನಾವು ನಮ್ಮ ಗುರಿ ತಲುಪುತ್ತೇವೆ," ಎಂದು ವಿಜಯ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ. ಆಡಳಿತಾರೂಢ ಡಿಎಂಕೆಯನ್ನು ಅಧಿಕಾರದಿಂದ ಇಳಿಸಲು ಬಿಜೆಪಿಯು ವಿಜಯ್ ಅವರ ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬ ವದಂತಿಗಳು ಜೋರಾಗಿದ್ದವು. ಇದೀಗ ವಿಜಯ್ ಅವರ ಸ್ಪಷ್ಟ ನಿಲುವಿನಿಂದಾಗಿ ತಮಿಳುನಾಡು ಚುನಾವಣೆಯಲ್ಲಿ ಡಿಎಂಕೆ, ಎಐಎಡಿಎಂಕೆ-ಬಿಜೆಪಿ ನೇತೃತ್ವದ ಎನ್‌ಡಿಎ, ಟಿವಿಕೆ ಹಾಗೂ ತಮಿಳಗ ನ್ಯಾಷನಲಿಸ್ಟ್ ನಾಮ್ ತಮಿಳರ್ ಕಚ್ಚಿ ಪಕ್ಷಗಳ ನಡುವೆ ಭಾರೀ ಪೈಪೋಟಿಯ ಚತುಷ್ಕೋನ ಸ್ಪರ್ಧೆ ಏರ್ಪಡುವುದು ಬಹುತೇಕ ಖಚಿತವಾಗಿದೆ.
ಸಿಬಿಐ ವಿಚಾರಣೆ ಮತ್ತು ಸಿಎಂ ಹುದ್ದೆಯ ಆಫರ್
ಕರೂರು ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಸಿಬಿಐ ಎದುರು ವಿಜಯ್ ಅವರು ಮೂರನೇ ಬಾರಿ ವಿಚಾರಣೆಗೆ ಹಾಜರಾದ ಬಳಿಕ, ಅವರು ಎನ್‌ಡಿಎ ಮೈತ್ರಿಕೂಟ ಸೇರಲಿದ್ದಾರೆ ಎಂಬ ವದಂತಿಗಳು ತೀವ್ರಗೊಂಡಿದ್ದವು. ಆದರೆ, ಅವರು ಮೊದಲಿನಿಂದಲೂ ಮೈತ್ರಿಕೂಟದಿಂದ ಅಂತರ ಕಾಯ್ದುಕೊಂಡೇ ಬಂದಿದ್ದಾರೆ. ಈ ಕುರಿತು ಇತ್ತೀಚೆಗಷ್ಟೇ ಪ್ರತಿಕ್ರಿಯಿಸಿದ್ದ ಟಿವಿಕೆ ಪ್ರಧಾನ ಕಾರ್ಯದರ್ಶಿ ಆಧವ್ ಅರ್ಜುನ, "ಚುನಾವಣೆಯಲ್ಲಿ 50:50 ಅನುಪಾತದಲ್ಲಿ ಸೀಟು ಹಂಚಿಕೆ ಮಾಡಿಕೊಳ್ಳುವುದು ಮತ್ತು ಎರಡೂವರೆ ವರ್ಷಗಳ ಕಾಲ ವಿಜಯ್ ಅವರಿಗೆ ಮುಖ್ಯಮಂತ್ರಿ ಸ್ಥಾನ ಬಿಟ್ಟುಕೊಡುವ ಬಂಪರ್ ಆಫರ್ ಒಂದು ಮತ್ತೊಂದು ಪಕ್ಷದಿಂದ ಬಂದಿತ್ತು. ಆದರೆ, ವಿಜಯ್ ಅವರು ಈ ಪ್ರಸ್ತಾವನೆಯನ್ನು ಸಾರಾಸಗಟಾಗಿ ತಿರಸ್ಕರಿಸಿದ್ದಾರೆ," ಎಂದು ಮಾಹಿತಿ ನೀಡಿದ್ದರು.

