Subramanian Swamy Interview| ಮೋದಿಯ ಸರ್ಕಾರದ ವಿದೇಶಾಂಗ ನೀತಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ!
x
ಸುಬ್ರಮಣಿಯನ್‌ ಸ್ವಾಮಿಯವರ ಸಂದರ್ಶನ

Subramanian Swamy Interview| ಮೋದಿಯ ಸರ್ಕಾರದ ವಿದೇಶಾಂಗ ನೀತಿ ವಿರುದ್ಧ ಸುಬ್ರಮಣಿಯನ್ ಸ್ವಾಮಿ ಕಿಡಿ!

ಭಾರತದ ಆರ್ಥಿಕತೆ ಹದಗೆಟ್ಟಿದೆ ಮತ್ತು ದೇಶವು ಅಮೆರಿಕದ ಆರ್ಥಿಕ ವಸಾಹತಿನಂತಾಗಿದೆ ಎಂದು ಮಾಜಿ ಸಚಿವ ಸುಬ್ರಮಣಿಯನ್ ಸ್ವಾಮಿ ಕಟುವಾಗಿ ಟೀಕಿಸಿದ್ದಾರೆ. ಇರಾನ್ ಬಿಕ್ಕಟ್ಟು, ಮೋದಿ ಸರ್ಕಾರ ಮತ್ತು ತಮಿಳುನಾಡು ರಾಜಕೀಯದ ಬಗ್ಗೆ ಸ್ವಾಮಿ ಅವರ ಪೂರ್ಣ ಸಂದರ್ಶನ ಇಲ್ಲಿದೆ.


ಖ್ಯಾತ ಅರ್ಥಶಾಸ್ತ್ರಜ್ಞ ಮತ್ತು ಮಾಜಿ ಕೇಂದ್ರ ಸಚಿವ ಸುಬ್ರಮಣಿಯನ್ ಸ್ವಾಮಿ ಅವರು ಇತ್ತೀಚೆಗೆ 'ದಿ ಫೆಡರಲ್' ಸಂಸ್ಥೆಗೆ ನೀಡಿದ ವಿಶೇಷ ಸಂದರ್ಶನದಲ್ಲಿ ಭಾರತದ ಆರ್ಥಿಕತೆ, ವಿದೇಶಾಂಗ ನೀತಿ ಮತ್ತು ತಮಿಳುನಾಡು ರಾಜಕೀಯದ ಕುರಿತು ಕೆಲವೊಂದು ಪ್ರಮುಖ ಸಂಗತಿಗಳನ್ನು ಬಿಚ್ಚಿಟ್ಟಿದ್ದಾರೆ. 86ನೇ ವಯಸ್ಸಿನಲ್ಲೂ ತಮ್ಮ ನೇರನುಡಿಗಳಿಂದ ಗಮನ ಸೆಳೆದಿರುವ ಸ್ವಾಮಿ ಅವರ ಸಂದರ್ಶನದ ವಿವರ ಇಲ್ಲಿದೆ.

ಆರ್ಥಿಕತೆಯಲ್ಲಿ ಭಾರತ ಮೇಲೆ ಅಮೆರಿಕದ ಹಿಡಿತ

ಭಾರತದ ಪ್ರಸ್ತುತ ಆರ್ಥಿಕ ನೀತಿಗಳ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಸ್ವಾಮಿ, "ಒಂದು ರೀತಿಯಲ್ಲಿ ಭಾರತವು ಆರ್ಥಿಕವಾಗಿ ಅಮೆರಿಕದ ವಸಾಹತು ಆಗಿ ಮಾರ್ಪಟ್ಟಿದೆ" ಎಂದು ಗಂಭೀರವಾಗಿ ಆರೋಪಿಸಿದ್ದಾರೆ. ಅಮೆರಿಕವು ರಷ್ಯಾ ಅಥವಾ ಇರಾನ್‌ನಿಂದ ತೈಲ ಖರೀದಿಸದಂತೆ ಭಾರತಕ್ಕೆ ನಿರ್ಬಂಧ ಹೇರುತ್ತಿರುವುದು ಮತ್ತು ಭಾರತವು ಅಮೆರಿಕದ ಅನುಮತಿಗೆ ಕಾಯುತ್ತಿರುವುದು ದೇಶದ ಸಾರ್ವಭೌಮತ್ವಕ್ಕೆ ಧಕ್ಕೆ ತಂದಿದೆ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನಾನು ಅಮೆರಿಕ ವಿರೋಧಿಯಲ್ಲ, ಅಲ್ಲಿಯೇ ಪ್ರೊಫೆಸರ್ ಆಗಿದ್ದವನು. ಆದರೆ ನಮ್ಮ ಆರ್ಥಿಕ ಸ್ವತಂತ್ರವನ್ನು ಅಡವಿಡುವುದು ಸರಿಯಲ್ಲ" ಎಂದಿದ್ದಾರೆ.

ವಿದೇಶಾಂಗ ನೀತಿ ಮತ್ತು ಇರಾನ್ ಬಿಕ್ಕಟ್ಟು

ಇರಾನ್ ಮತ್ತು ಇಸ್ರೇಲ್ ನಡುವಿನ ಸಂಘರ್ಷದ ಬಗ್ಗೆ ಮಾತನಾಡಿದ ಅವರು, ವಿಶ್ವಸಂಸ್ಥೆಯನ್ನು ಬದಿಗೊತ್ತಿ ಅಮೆರಿಕ ಮತ್ತು ಇಸ್ರೇಲ್ ದಾಳಿ ನಡೆಸುತ್ತಿರುವುದು ಪ್ರಜಾಪ್ರಭುತ್ವಕ್ಕೆ ದೊಡ್ಡ ಹೊಡೆತ ಎಂದಿದ್ದಾರೆ. ಪ್ರಧಾನಿ ಮೋದಿಯವರ ಇಸ್ರೇಲ್ ಭೇಟಿಯನ್ನು ಟೀಕಿಸಿದ ಅವರು, "ಮೋದಿಯವರು ಯಾವುದೇ ಅಧಿಕೃತ ಆಮಂತ್ರಣವಿಲ್ಲದೆ ಇಸ್ರೇಲ್‌ಗೆ ಹೋಗಿದ್ದರು, ಅದರಿಂದ ದೇಶಕ್ಕೆ ಯಾವುದೇ ಪ್ರಯೋಜನವಾಗಿಲ್ಲ. ಜಾಗತಿಕ ವೇದಿಕೆಯಲ್ಲಿ ಭಾರತ ಇಂದು ಅಪ್ರಸ್ತುತವಾಗಿದೆ" ಎಂದು ಟೀಕಿಸಿದ್ದಾರೆ.

ತಮಿಳುನಾಡು ರಾಜಕೀಯ: ಡಿಎಂಕೆ 'ಅಜೇಯ'

ತಮಿಳುನಾಡಿನ ರಾಜಕೀಯ ಚಿತ್ರಣದ ಬಗ್ಗೆ ಮಾತನಾಡುತ್ತಾ, ಪ್ರಸ್ತುತ ಪರಿಸ್ಥಿತಿಯಲ್ಲಿ ಡಿಎಂಕೆ (DMK) ಪಕ್ಷವನ್ನು ಸೋಲಿಸುವುದು ಅಸಾಧ್ಯ ಎಂದು ಅವರು ಭವಿಷ್ಯ ನುಡಿದಿದ್ದಾರೆ. ಬಿಜೆಪಿ-ಎಐಎಡಿಎಂಕೆ ಮೈತ್ರಿಯಿಂದ ಯಾವುದೇ ಪ್ರಯೋಜನವಿಲ್ಲ, ಡಿಎಂಕೆ ಸಂಘಟಿತ ಶಕ್ತಿಯನ್ನು ಎದುರಿಸುವ ತಾಕತ್ತು ಇವರಿಗಿಲ್ಲ ಎಂದಿದ್ದಾರೆ.

ವಿಜಯ್ ಅವರ ರಾಜಕೀಯ ಪ್ರವೇಶದಿಂದ ಡಿಎಂಕೆ ಮೇಲೆ ಯಾವುದೇ ಪರಿಣಾಮ ಬೀರದು ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ. "ನನಗೆ ತಮಿಳುನಾಡಿನ ಜವಾಬ್ದಾರಿ ನೀಡಿದರೆ ನಾನು ಡಿಎಂಕೆಯನ್ನು ಸೋಲಿಸಬಲ್ಲೆ, ಆದರೆ ಹೈಕಮಾಂಡ್ ಅದಕ್ಕೆ ಸಿದ್ಧವಿಲ್ಲ" ಎಂದು ಅವರು ಮಾರ್ಮಿಕವಾಗಿ ನುಡಿದಿದ್ದಾರೆ.

ಸಂಸತ್ ಮತ್ತು ಆರ್ಥಿಕತೆಯ ಸ್ಥಿತಿ

ಕಳೆದ ಎರಡು ವರ್ಷಗಳಿಂದ ಭಾರತದ ಆರ್ಥಿಕತೆ ಹದಗೆಟ್ಟಿದೆ ಎಂದು ಸ್ವಾಮಿ ಆರೋಪಿಸಿದ್ದಾರೆ. "ಸಂಸತ್ತಿನಲ್ಲಿ ಅರ್ಥಪೂರ್ಣ ಚರ್ಚೆಗಳೇ ನಡೆಯುತ್ತಿಲ್ಲ, ಕೇವಲ ಕೂಗಾಟ ಮಾತ್ರ ಇದೆ. ಆರ್ಥಿಕತೆಯ ಬಗ್ಗೆ ಬಹಿರಂಗ ಚರ್ಚೆಗೆ ಬರಲು ಮೋದಿಯವರ ತಂಡಕ್ಕೆ ಭಯವಿದೆ" ಎಂದು ಅವರು ಸವಾಲು ಹಾಕಿದ್ದಾರೆ.

ಸಂಸತ್‌ನಿಂದ ದೂರ ಉಳಿದಿದ್ದೇಕೆ?

ಆರು ಬಾರಿ ಸಂಸದರಾಗಿದ್ದರೂ ಈ ಬಾರಿ ದೂರ ಉಳಿದಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, "ಮೋದಿಯವರು ನನಗೆ ಸಂಸತ್ತಿನಲ್ಲಿ ಮಾತನಾಡಲು ಅವಕಾಶ ನೀಡುತ್ತಿಲ್ಲ. ವಿದೇಶಾಂಗ ನೀತಿ ಇರಲಿ ಅಥವಾ ಗೋಹತ್ಯೆ ನಿಷೇಧದಂತಹ ವಿಷಯಗಳಿರಲಿ, ನನ್ನ ವಾದಗಳನ್ನು ಮಂಡಿಸಲು ಅವರು ಬಿಡುವುದಿಲ್ಲ. ಹಾಗಾಗಿ ಸಂಸತ್ತಿಗೆ ಹೋಗಿ ಪ್ರಯೋಜನವೇನಿದೆ?" ಎಂದು ಪ್ರಶ್ನಿಸಿದ್ದಾರೆ.

Read More
Next Story