
ತಮಿಳುನಾಡು ಚುನಾವಣೆ 2026: ಯಾರೊಂದಿಗೂ ಮೈತ್ರಿ ಇಲ್ಲ, ಏಕಾಂಗಿ ಸ್ಪರ್ಧೆ ಘೋಷಿಸಿದ ನಟ ವಿಜಯ್!
Five states Election 2026| ತಮಿಳುನಾಡು ವಿಧಾನಸಭಾ ಚುನಾವಣೆಯಲ್ಲಿ ತಮಿಳಗ ವೆಟ್ರಿ ಕಳಗಂ (TVK) ಪಕ್ಷವು ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ನಟ ವಿಜಯ್ ಘೋಷಿಸಿದ್ದಾರೆ.
ತಮಿಳುನಾಡು ರಾಜಕೀಯದಲ್ಲಿ ಸಂಚಲನ ಮೂಡಿಸಿರುವ ನಟ, ತಮಿಳಗ ವೆಟ್ರಿ ಕಳಗಂ (TVK) ಅಧ್ಯಕ್ಷ ವಿಜಯ್, ಮುಂಬರುವ 2026ರ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಪಕ್ಷವು 'ಏಕಾಂಗಿ'ಯಾಗಿ ಸ್ಪರ್ಧಿಸಲಿದೆ ಎಂದು ಘೋಷಿಸಿದ್ದಾರೆ. ಇದರೊಂದಿಗೆ ಕಳೆದ ಕೆಲವು ದಿನಗಳಿಂದ ಕೇಳಿಬರುತ್ತಿದ್ದ ಮೈತ್ರಿ ವದಂತಿಗಳಿಗೆ ಅವರು ಪೂರ್ಣವಿರಾಮ ಹಾಕಿದ್ದಾರೆ.
ಬುಧವಾರ ಮಹಾಬಲಿಪುರಂನಲ್ಲಿ ಆಯೋಜಿಸಿದ್ದ ಇಫ್ತಾರ್ ಕೂಟದಲ್ಲಿ ಮಾತನಾಡಿದ ವಿಜಯ್, "ನಮ್ಮ ಪಕ್ಷವು ಯಾವುದೇ ದೊಡ್ಡ ಪಕ್ಷಗಳೊಂದಿಗೆ, ಅಂದರೆ ಬಿಜೆಪಿ ನೇತೃತ್ವದ ಎನ್ಡಿಎ ಅಥವಾ ಎಐಎಡಿಎಂಕೆಯೊಂದಿಗೆ ಕೈಜೋಡಿಸುವುದಿಲ್ಲ. ನಾವು ಸ್ವತಂತ್ರವಾಗಿ ಸ್ಪರ್ಧಿಸಿ, ಸ್ವಂತ ಬಲದ ಮೇಲೆ ಸರ್ಕಾರ ರಚಿಸುತ್ತೇವೆ" ಎಂದು ಸ್ಪಷ್ಟಪಡಿಸಿದರು.
'ವದಂತಿಗಳನ್ನು ನಂಬಬೇಡಿ, ನಾನು ಜನರ ಟೀಮ್ನಲ್ಲಿ ಇದ್ದೇನೆ'
ರಾಜಕೀಯ ಪ್ರವೇಶಿಸಿದ ದಿನದಿಂದಲೂ ತಮ್ಮ ಪಕ್ಷವನ್ನು ಯಾವುದಾದರೊಂದು ಮೈತ್ರಿಕೂಟದ ಭಾಗ ಎಂದು ಬಿಂಬಿಸಲಾಗುತ್ತಿದೆ ಎಂದು ವಿಜಯ್ ಅಸಮಾಧಾನ ವ್ಯಕ್ತಪಡಿಸಿದರು. "ನಾನು ಯಾವುದೇ ಟೀಮ್ನಲ್ಲಿ ಇಲ್ಲ; ನಾನು ಜನರ ತಂಡದಲ್ಲಿದ್ದೇನೆ. ಸೋಶಿಯಲ್ ಜಸ್ಟಿಸ್ (ಸಾಮಾಜಿಕ ನ್ಯಾಯ) ಮತ್ತು ಜಾತ್ಯತೀತತೆ ನಮ್ಮ ಸಿದ್ಧಾಂತ. ಕೋಮುವಾದಿ ಶಕ್ತಿಗಳ ವಿರುದ್ಧ ನಮ್ಮ ಹೋರಾಟ ಮುಂದುವರಿಯುತ್ತದೆ" ಎಂದು ಅವರು ಗುಡುಗಿದರು.
ಬಿಜೆಪಿ ಆಫರ್ ತಿರಸ್ಕರಿಸಿದರೇ ವಿಜಯ್?
ಟಿವಿಕೆ ಪಕ್ಷಕ್ಕೆ ಬಿಜೆಪಿ ದೊಡ್ಡ ಆಫರ್ ನೀಡಿದೆ ಎಂಬ ವದಂತಿಗಳು ಹಬ್ಬಿದ್ದವು. ಉಪಮುಖ್ಯಮಂತ್ರಿ ಪಟ್ಟ ಮತ್ತು 80ಕ್ಕೂ ಹೆಚ್ಚು ಸೀಟುಗಳನ್ನು ಎನ್ಡಿಎ ಮೈತ್ರಿಕೂಟದಲ್ಲಿ ನೀಡಲು ಬಿಜೆಪಿ ಮುಂದಾಗಿತ್ತು ಎಂಬ ವರದಿಗಳಿದ್ದವು. ಇತ್ತೀಚೆಗೆ ಪಕ್ಷದ ನಾಯಕ ಆಧವ್ ಅರ್ಜುನ್ ಕೂಡ "ವಿಜಯ್ ಅವರಿಗೆ ಸಿಎಂ ಪಟ್ಟದ ಆಫರ್ ಬಂದಿತ್ತು" ಎಂದು ಹೇಳಿಕೆ ನೀಡಿದ್ದು ಚರ್ಚೆಗೆ ಕಾರಣವಾಗಿತ್ತು. ಆದರೆ, ಈ ಎಲ್ಲಾ ಮಾತುಕತೆಗಳನ್ನು ವಿಜಯ್ ಈಗ ಅಧಿಕೃತವಾಗಿ ತಳ್ಳಿಹಾಕಿದ್ದಾರೆ.
2026ರಲ್ಲಿ ಜಿದ್ದಾಜಿದ್ದಿನ ಸ್ಪರ್ಧೆ
ವಿಜಯ್ ಅವರ ಈ ನಿರ್ಧಾರದಿಂದಾಗಿ 2026ರ ತಮಿಳುನಾಡು ವಿಧಾನಸಭಾ ಚುನಾವಣೆ ಅತ್ಯಂತ ಕುತೂಹಲಕಾರಿಯಾಗಲಿದ್ದು, ರಾಜ್ಯದಲ್ಲಿ ಬಹುಕೋನ ಸ್ಪರ್ಧೆ ಏರ್ಪಡುವ ಸಾಧ್ಯತೆಯಿದೆ. ಈಗ ಕಣದಲ್ಲಿ ಆಡಳಿತಾರೂಢ ಡಿಎಂಕೆ ನೇತೃತ್ವದ ಜಾತ್ಯತೀತ ಕೂಟ, ಎಐಎಡಿಎಂಕೆ-ಬಿಜೆಪಿ ಒಳಗೊಂಡ ಎನ್ಡಿಎ ಮೈತ್ರಿ, ಸೀಮನ್ ಅವರ ನಾಮ್ ತಮಿಳರ್ ಕಚ್ಚಿ (NTK) ಮತ್ತು ಈಗ ಹೊಸದಾಗಿ ಶಕ್ತಿಪ್ರದರ್ಶನಕ್ಕೆ ಇಳಿದಿರುವ ವಿಜಯ್ ಅವರ ಟಿವಿಕೆ (TVK) ಪಕ್ಷಗಳು ಪ್ರಬಲ ಶಕ್ತಿಗಳಾಗಿ ಗುರುತಿಸಿಕೊಂಡಿವೆ. ಈ ನಾಲ್ಕು ಪ್ರಮುಖ ಬಣಗಳ ನಡುವಿನ ನೇರ ಹಣಾಹಣಿಯು ತಮಿಳುನಾಡಿನ ಸಾಂಪ್ರದಾಯಿಕ ದ್ರಾವಿಡ ರಾಜಕಾರಣಕ್ಕೆ ಹೊಸ ಆಯಾಮ ನೀಡುವ ಮುನ್ಸೂಚನೆ ನೀಡಿದೆ.
ಯುವ ಸಮೂಹವೇ ವಿಜಯ್ ಬಲ
ರಾಜಕೀಯ ವಿಶ್ಲೇಷಕರ ಪ್ರಕಾರ, ವಿಜಯ್ ಅವರಿಗೆ ನಗರ ಪ್ರದೇಶಗಳಲ್ಲಿ ಮತ್ತು ಯುವಜನತೆಯಲ್ಲಿ ಭಾರಿ ಬೆಂಬಲವಿದೆ. ಆದರೆ, ಗ್ರಾಮೀಣ ಭಾಗದಲ್ಲಿ ಪಕ್ಷದ ಸಂಘಟನೆ ಮತ್ತು ಚುನಾವಣಾ ಅನುಭವದ ಕೊರತೆ ಅವರಿಗೆ ಸವಾಲಾಗಬಹುದು. ಮೊದಲ ಬಾರಿಗೆ ಚುನಾವಣಾ ಕಣಕ್ಕಿಳಿಯುತ್ತಿರುವ ವಿಜಯ್, 'ಸ್ಟಾರ್ ಪವರ್' ಮೂಲಕ ಎಷ್ಟರಮಟ್ಟಿಗೆ ಮತ ಸೆಳೆಯಲಿದ್ದಾರೆ ಎಂಬುದು ಈಗ ಕುತೂಹಲದ ವಿಷಯ.

