
ಟಿವಿಕೆ ಮುಖ್ಯಸ್ಥ ವಿಜಯ್
ತಮಿಳುನಾಡು ಚುನಾವಣೆ: ವಿಜಯ್‌ಗೆ ಡಿಸಿಎಂ ಪಟ್ಟ; 80 ಸೀಟುಗಳ ಆಫರ್ ನೀಡಿದ ಬಿಜೆಪಿ?
ತಮಿಳುನಾಡಿನಲ್ಲಿ ನಟ ವಿಜಯ್ ಅವರಿಗಿರುವ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರನ್ನು ಸೆಳೆಯುವುದು ಬಿಜೆಪಿಯ ಪ್ರಮುಖ ಗುರಿಯಾಗಿದೆ.
ಮುಂಬರುವ ತಮಿಳುನಾಡು ವಿಧಾನಸಭೆ ಚುನಾವಣೆಗೂ ಮುನ್ನ, ನಟ ಹಾಗೂ ರಾಜಕಾರಣಿ ವಿಜಯ್ ಅವರ ತಮಿಳಗ ವೆಟ್ರಿ ಕಳಗಂ (TVK) ಪಕ್ಷದೊಂದಿಗೆ ಮೈತ್ರಿ ಮಾಡಿಕೊಳ್ಳಲು ಬಿಜೆಪಿ ತೀವ್ರ ಕಸರತ್ತು ನಡೆಸುತ್ತಿದೆ. ಮೂಲಗಳ ಪ್ರಕಾರ, ಉಭಯ ಪಕ್ಷಗಳ ನಡುವಿನ ಮಾತುಕತೆಗಳು ಅಂತಿಮ ಹಂತ ತಲುಪಿದ್ದು, ವಿಜಯ್ ಅವರಿಗೆ ಉಪಮುಖ್ಯಮಂತ್ರಿ (Deputy CM) ಸ್ಥಾನ ಹಾಗೂ ಅವರ ಪಕ್ಷಕ್ಕೆ ಸುಮಾರು 80 ವಿಧಾನಸಭಾ ಕ್ಷೇತ್ರಗಳನ್ನು ಬಿಟ್ಟುಕೊಡಲು ಬಿಜೆಪಿ ಮುಂದಾಗಿದೆ ಎನ್ನಲಾಗಿದೆ.
ತಮಿಳುನಾಡಿನಲ್ಲಿ ನಟ ವಿಜಯ್ ಅವರಿಗಿರುವ ಅಪಾರ ಅಭಿಮಾನಿ ಬಳಗ ಮತ್ತು ಯುವ ಮತದಾರರನ್ನು ಸೆಳೆಯುವುದು ಬಿಜೆಪಿಯ ಪ್ರಮುಖ ಗುರಿಯಾಗಿದೆ. ತಮಿಳುನಾಡು ಚುನಾವಣೆಯಲ್ಲಿ ಅಲ್ಪ ಪ್ರಮಾಣದ ಮತಗಳಿಕೆ ಕೂಡ ದೊಡ್ಡ ಬದಲಾವಣೆ ತರಬಲ್ಲದು ಎಂಬುದನ್ನು ಅರಿತಿರುವ ಬಿಜೆಪಿ ನಾಯಕರು, ಕನಿಷ್ಠ ಎರಡು ಶೇಕಡಾ ಮತಗಳು ಕೂಡ ಹಲವು ಕ್ಷೇತ್ರಗಳಲ್ಲಿ ಗೆಲುವಿನ ದಿಕ್ಕನ್ನು ಬದಲಾಯಿಸಬಲ್ಲವು ಎಂದು ನಂಬಿದ್ದಾರೆ. ಈ ಮೈತ್ರಿ ಪ್ರಯತ್ನದಲ್ಲಿ ಹೊರ ರಾಜ್ಯದ ಉಪಮುಖ್ಯಮಂತ್ರಿಯೊಬ್ಬರು ಮಧ್ಯಸ್ಥಿಕೆ ವಹಿಸಿ ಮಾತುಕತೆ ನಡೆಸುತ್ತಿದ್ದಾರೆ ಎಂಬ ಮಾಹಿತಿಯೂ ಇದೆ.
ವಿಜಯ್ ಮತ್ತು ಟಿವಿಕೆ ಪಕ್ಷದ ನಿಲುವು
ಬಿಜೆಪಿ ಉಪಮುಖ್ಯಮಂತ್ರಿ ಸ್ಥಾನದ ಆಫರ್ ನೀಡಿದ್ದರೂ, ವಿಜಯ್ ಅವರು ಮುಖ್ಯಮಂತ್ರಿ (CM) ಸ್ಥಾನದ ಮೇಲೆ ಕಣ್ಣಿಟ್ಟಿದ್ದು, ಇದು ಮಾತುಕತೆಯಲ್ಲಿ ಪ್ರಮುಖ ಅಂಶವಾಗಿ ಉಳಿದಿದೆ. ಜೊತೆಗೆ, ಎನ್‌ಡಿಎ (NDA) ಜೊತೆ ಕೈಜೋಡಿಸುವ ಬಗ್ಗೆ ವಿಜಯ್ ಅವರ ಆಪ್ತ ವಲಯದಲ್ಲಿ ಅಸಮಾಧಾನ ವ್ಯಕ್ತವಾಗಿದೆ. ಸ್ವತಂತ್ರ ಹಾಗೂ ಹೊಸ ರಾಜಕೀಯ ಪರ್ಯಾಯವಾಗಿ ಪಕ್ಷವನ್ನು ಕಟ್ಟುತ್ತಿರುವ ಈ ಆರಂಭಿಕ ಹಂತದಲ್ಲೇ ರಾಷ್ಟ್ರೀಯ ಮೈತ್ರಿಕೂಟದೊಂದಿಗೆ ಸೇರುವುದರಿಂದ ಪಕ್ಷದ ವಿಶ್ವಾಸಾರ್ಹತೆಗೆ ಧಕ್ಕೆಯಾಗಬಹುದು ಎಂದು ಅವರ ಸಲಹೆಗಾರರು ಆತಂಕ ವ್ಯಕ್ತಪಡಿಸಿದ್ದಾರೆ.
ಟಿವಿಕೆ ಪಕ್ಷದ ಹಿಂದಿನ ಘೋಷಣೆ
ಈ ಹಿಂದೆ ನಡೆದ ಪಕ್ಷದ ಕಾರ್ಯಕಾರಿಣಿ ಸಭೆಯಲ್ಲಿ, ಟಿವಿಕೆ ಯಾವುದೇ 'ಸ್ವಾರ್ಥದ ಮೈತ್ರಿ' ಮಾಡಿಕೊಳ್ಳುವುದಿಲ್ಲ ಎಂದು ವಿಜಯ್ ಘೋಷಿಸಿದ್ದರು. ಅಲ್ಲದೆ, 2026 ರ ಚುನಾವಣೆಗೆ ವಿಜಯ್ ಅವರನ್ನೇ ಮುಖ್ಯಮಂತ್ರಿ ಅಭ್ಯರ್ಥಿಯಾಗಿ ಬಿಂಬಿಸಲು ಪಕ್ಷ ನಿರ್ಣಯ ಕೈಗೊಂಡಿತ್ತು. ಪ್ರಸ್ತುತ ನಡೆಯುತ್ತಿರುವ ಈ ಬೆಳವಣಿಗೆಗಳು ತಮಿಳುನಾಡು ರಾಜಕೀಯದಲ್ಲಿ ತೀವ್ರ ಕುತೂಹಲ ಮೂಡಿಸಿದ್ದು, ವಿಜಯ್ ಅವರ ಅಂತಿಮ ನಿರ್ಧಾರ ಏನಿರಲಿದೆ ಎಂಬುದು ಕಾದು ನೋಡಬೇಕಿದೆ.

