
ಲೋಕಸಭೆ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ
ರೂಪಾಯಿ ಮೌಲ್ಯ ಕುಸಿತ, ಬೆಲೆ ಏರಿಕೆ ಭೀತಿ: ಕೇಂದ್ರ ಸರ್ಕಾರದ ವಿರುದ್ಧ ರಾಹುಲ್ ಗಾಂಧಿ ವಾಗ್ದಾಳಿ
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಶುಕ್ರವಾರ ರೂಪಾಯಿ ಮೌಲ್ಯವು 93.08ಕ್ಕೆ ಕುಸಿದಿದ್ದು, ಇದು ಸಾಮಾನ್ಯ ಜನರ ಬದುಕಿನ ಮೇಲೆ ನೇರ ಹಾಗೂ ಆಳವಾದ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಮೆರಿಕನ್ ಡಾಲರ್ ಎದುರು ಭಾರತೀಯ ರೂಪಾಯಿ ಮೌಲ್ಯವು ಸಾರ್ವಕಾಲಿಕ ಕುಸಿತ ಕಂಡು 100ರ ಗಡಿಯತ್ತ ಸಾಗುತ್ತಿರುವುದು ಹಾಗೂ ಕೈಗಾರಿಕಾ ಇಂಧನ ದರಗಳು ಗಣನೀಯವಾಗಿ ಹೆಚ್ಚಾಗುತ್ತಿರುವುದು ದೇಶದಲ್ಲಿ ಮುಂಬರುವ ಭೀಕರ ಹಣದುಬ್ಬರದ ಸ್ಪಷ್ಟ ಮುನ್ಸೂಚನೆಗಳಾಗಿವೆ ಎಂದು ಲೋಕಸಭೆಯ ವಿಪಕ್ಷ ನಾಯಕ ರಾಹುಲ್ ಗಾಂಧಿ ತೀವ್ರ ಕಳವಳ ವ್ಯಕ್ತಪಡಿಸಿದ್ದಾರೆ.
ಪಶ್ಚಿಮ ಏಷ್ಯಾದಲ್ಲಿ ನಡೆಯುತ್ತಿರುವ ಯುದ್ಧದ ಪರಿಣಾಮವಾಗಿ ಶುಕ್ರವಾರ ರೂಪಾಯಿ ಮೌಲ್ಯವು 93.08ಕ್ಕೆ ಕುಸಿದಿದ್ದು, ಇದು ಸಾಮಾನ್ಯ ಜನರ ಬದುಕಿನ ಮೇಲೆ ನೇರ ಹಾಗೂ ಆಳವಾದ ಪರಿಣಾಮ ಬೀರಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಚುನಾವಣೆಗಳ ಬಳಿಕ ಬೆಲೆ ಏರಿಕೆ ಬರೆ
ಇರಾನ್ ಯುದ್ಧದ ನಡುವೆ ರೂಪಾಯಿ ಮೌಲ್ಯ ಕುಸಿಯುತ್ತಿರುವುದನ್ನು ಕೇಂದ್ರ ಸರ್ಕಾರವು ಸಾಮಾನ್ಯ ಪ್ರಕ್ರಿಯೆ ಎಂದು ಬಿಂಬಿಸುತ್ತಿದ್ದರೂ, ವಾಸ್ತವ ಚಿತ್ರಣ ಬೇರೆಯೇ ಇದೆ ಎಂದು ರಾಹುಲ್ ಗಾಂಧಿ ವಿಶ್ಲೇಷಿಸಿದ್ದಾರೆ. ರೂಪಾಯಿ ಕುಸಿತದಿಂದಾಗಿ ಉತ್ಪಾದನೆ ಮತ್ತು ಸಾರಿಗೆ ವೆಚ್ಚಗಳು ದುಬಾರಿಯಾಗಲಿದ್ದು, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ದಿಮೆಗಳು (ಎಂಎಸ್‌ಎಂಇ) ತೀವ್ರ ಸಂಕಷ್ಟಕ್ಕೆ ಸಿಲುಕಲಿವೆ. ಜೊತೆಗೆ ದಿನನಿತ್ಯದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಲಿದ್ದು, ವಿದೇಶಿ ಸಾಂಸ್ಥಿಕ ಹೂಡಿಕೆದಾರರು (ಎಫ್‌ಐಐ) ತಮ್ಮ ಬಂಡವಾಳವನ್ನು ಹಿಂಪಡೆಯುವುದರಿಂದ ಷೇರುಪೇಟೆಯ ಮೇಲೂ ಭಾರೀ ಒತ್ತಡ ಬೀಳಲಿದೆ ಎಂದು ಅವರು ವಿವರಿಸಿದ್ದಾರೆ.
ಪಶ್ಚಿಮ ಬಂಗಾಳ, ಅಸ್ಸಾಂ, ಕೇರಳ, ತಮಿಳುನಾಡು ಮತ್ತು ಪುದುಚೇರಿ ವಿಧಾನಸಭೆ ಚುನಾವಣೆಗಳು ಮುಗಿದ ಬೆನ್ನಲ್ಲೇ ಪೆಟ್ರೋಲ್, ಡೀಸೆಲ್ ಮತ್ತು ಅಡುಗೆ ಅನಿಲ (ಎಲ್‌ಪಿಜಿ) ದರಗಳು ಗಣನೀಯವಾಗಿ ಹೆಚ್ಚಾಗುವುದು ಖಚಿತವಾಗಿದೆ. ಪ್ರಧಾನಿ ಮೋದಿ ನೇತೃತ್ವದ ಆಡಳಿತಕ್ಕೆ ಯಾವುದೇ ಸ್ಪಷ್ಟ ದಿಕ್ಕು ಅಥವಾ ಕಾರ್ಯತಂತ್ರವಿಲ್ಲ, ಕೇವಲ ಬಾಣಲೆ ಮಾತುಗಳಷ್ಟೇ ಉಳಿದಿವೆ. ಸರ್ಕಾರ ಏನು ಹೇಳುತ್ತಿದೆ ಎಂಬುದಕ್ಕಿಂತ, ನಿಮ್ಮ ತಟ್ಟೆಯಲ್ಲಿ ಏನು ಉಳಿದಿದೆ ಎಂಬುದು ಸದ್ಯದ ನೈಜ ಪ್ರಶ್ನೆಯಾಗಿದೆ ಎಂದು ಅವರು ಮಾರ್ಮಿಕವಾಗಿ ಟೀಕಿಸಿದ್ದಾರೆ.
ಪಶ್ಚಿಮ ಏಷ್ಯಾ ಬಿಕ್ಕಟ್ಟು ಮತ್ತು ಆರ್ಥಿಕ ಹೊಡೆತ
ಅಮೆರಿಕ, ಇಸ್ರೇಲ್ ಮತ್ತು ಇರಾನ್ ನಡುವಿನ ಭೀಕರ ಯುದ್ಧವು ಭಾರತದಲ್ಲಿ ಗಂಭೀರ ಆರ್ಥಿಕ ಬಿಕ್ಕಟ್ಟಿಗೆ ಕಾರಣವಾಗಿದೆ. ಹಾರ್ಮುಜ್ ಜಲಸಂಧಿಯ ಮೂಲಕ ನಡೆಯುತ್ತಿದ್ದ ಇಂಧನ ಆಮದು ಮತ್ತು ವ್ಯಾಪಾರ ಮಾರ್ಗಗಳಲ್ಲಿ ತೀವ್ರ ವ್ಯತ್ಯಯ ಉಂಟಾಗಿದ್ದು, ಕೃಷಿ, ಜವಳಿ ಮತ್ತು ಉತ್ಪಾದನಾ ವಲಯಗಳು ತಲ್ಲಣಗೊಂಡಿವೆ. ಪರ್ಷಿಯನ್ ಕೊಲ್ಲಿಯಲ್ಲಿ 3.2 ಲಕ್ಷ ಟನ್ ಎಲ್‌ಪಿಜಿ ಸೇರಿದಂತೆ 2 ದಶಲಕ್ಷ ಟನ್‌ಗೂ ಅಧಿಕ ಇಂಧನ ಕಾರ್ಗೋಗಳು ಸಿಲುಕಿಕೊಂಡಿವೆ. ಶೇಕಡಾ 90ರಷ್ಟು ಇಂಧನ ಆಮದು ಇದೇ ಮಾರ್ಗದಲ್ಲಿ ನಡೆಯುವುದರಿಂದ, ಉಂಟಾಗಿರುವ ಕೊರತೆ ನೀಗಿಸಲು ಕೇಂದ್ರ ಸರ್ಕಾರವು ಅಗತ್ಯ ವಸ್ತುಗಳ ಕಾಯ್ದೆಯಡಿ ಎಲ್‌ಪಿಜಿ ಸಿಲಿಂಡರ್ ಬುಕಿಂಗ್ ಅಂತರವನ್ನು ಕನಿಷ್ಠ 25 ದಿನಗಳಿಗೆ ಹೆಚ್ಚಿಸುವ ಮೂಲಕ ಕಟ್ಟುನಿಟ್ಟಿನ ಪಡಿತರ ವ್ಯವಸ್ಥೆಯನ್ನು ಜಾರಿಗೊಳಿಸಿದೆ.
ಜತಾಂತ್ರಿಕ ಮಧ್ಯಪ್ರವೇಶಕ್ಕೆ ಶಶಿ ತರೂರ್ ಆಗ್ರಹ
ಇದೇ ವೇಳೆ ಕಾಂಗ್ರೆಸ್ ಹಿರಿಯ ನಾಯಕ ಶಶಿ ತರೂರ್ ಕೂಡ ದೇಶದ ಇಂಧನ ಭದ್ರತೆಯ ಮೇಲಾಗುತ್ತಿರುವ ವ್ಯತಿರಿಕ್ತ ಪರಿಣಾಮಗಳ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ. ಪಶ್ಚಿಮ ಏಷ್ಯಾದ ಯುದ್ಧ ದೀರ್ಘಕಾಲ ಮುಂದುವರಿದರೆ, ಇಂಧನ ಆಮದಿಗೆ ಸಂಬಂಧಿಸಿದಂತೆ ನವದೆಹಲಿಗೆ ಹೆಚ್ಚಿನ ಆಯ್ಕೆಗಳು ಉಳಿಯುವುದಿಲ್ಲ ಎಂದು ಅವರು ಎಚ್ಚರಿಸಿದ್ದಾರೆ. ಭಾರತವು ಶೇಕಡಾ 60 ರಿಂದ 80ರಷ್ಟು ಎಲ್‌ಎನ್‌ಜಿ ಮತ್ತು ಎಲ್‌ಪಿಜಿಯನ್ನು ಕತಾರ್ ಹಾಗೂ ಇತರೆ ಕೊಲ್ಲಿ ರಾಷ್ಟ್ರಗಳಿಂದ ಆಮದು ಮಾಡಿಕೊಳ್ಳುತ್ತಿದೆ. ಆದರೆ ಈಗ ಅತ್ಯಲ್ಪ ಪ್ರಮಾಣದಲ್ಲಿ ಮಾತ್ರ ಇಂಧನ ಪೂರೈಕೆಯಾಗುತ್ತಿದ್ದು, ಆರ್ಥಿಕತೆಯ ಮೇಲೆ ಭಾರೀ ಹೊಡೆತ ಬೀಳುತ್ತಿದೆ. ಈ ಬಿಕ್ಕಟ್ಟನ್ನು ಶಮನಗೊಳಿಸಲು ಭಾರತವು ಕೇವಲ ವೀಕ್ಷಕನಾಗಿ ಉಳಿಯದೆ, ಪಶ್ಚಿಮ ಏಷ್ಯಾದಲ್ಲಿ ಉದ್ವಿಗ್ನತೆ ತಗ್ಗಿಸಲು ರಾಜತಾಂತ್ರಿಕವಾಗಿ ಸಕ್ರಿಯ ಹಾಗೂ ಪ್ರಮುಖ ಪಾತ್ರ ವಹಿಸಬೇಕು ಎಂದು ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ.

