ಎಪ್ಸ್ಟೀನ್ ಫೈಲ್ಸ್‌ನಲ್ಲಿ ಪ್ರಧಾನಿ ಮೋದಿ ಹೆಸರು; ರಾಹುಲ್‌ ಗಾಂಧಿ ಕಿಡಿ
x
ರಾಹುಲ್‌ ಗಾಂಧಿ ಮತ್ತು ನರೇಂದ್ರ ಮೋದಿ(ಸಂಗ್ರಹ ಚಿತ್ರ)

ಎಪ್ಸ್ಟೀನ್ ಫೈಲ್ಸ್‌ನಲ್ಲಿ ಪ್ರಧಾನಿ ಮೋದಿ ಹೆಸರು; ರಾಹುಲ್‌ ಗಾಂಧಿ ಕಿಡಿ

ಭಾರತ-ಅಮೆರಿಕ ವ್ಯಾಪಾರ ಒಪ್ಪಂದ ಮತ್ತು ಎಪ್ಸ್ಟೀನ್ ಫೈಲ್ಸ್ ಉಲ್ಲೇಖಿಸಿ ಪ್ರಧಾನಿ ಮೋದಿ ವಿರುದ್ಧ ರಾಹುಲ್ ಗಾಂಧಿ ಗಂಭೀರ ಆರೋಪ ಮಾಡಿದ್ದಾರೆ.


ಅಮೆರಿಕದ ಲೈಂಗಿಕ ಅಪರಾಧಿ ಜೆಫ್ರಿ ಎಪ್ಸ್ಟೀನ್‌ಗೆ ಸಂಬಂಧಿಸಿದ ಕೆಲವು ಇಮೇಲ್‌ಗಳು ಮತ್ತು ದಾಖಲೆಗಳಲ್ಲಿ ಪ್ರಧಾನಿ ನರೇಂದ್ರ ಮೋದಿಯವರ ಹೆಸರಿದೆ ಎಂಬ ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಇದೇ ವಿಚಾರವನ್ನಿಟ್ಟುಕೊಂಡು ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವರು ಪ್ರಸ್ತಾಪಿಸಿ, ವಾಗ್ದಾಳಿ ನಡೆಸಿದ್ದಾರೆ.

ವರದಿಗಳ ಪ್ರಕಾರ, ಎಪ್ಸ್ಟೀನ್ ಫೈಲ್ಸ್‌ಗೆ ಸಂಬಂಧಿಸಿದ ಇಮೇಲ್‌ಗಳಲ್ಲಿ ಪ್ರಧಾನಿ ಮೋದಿಯವರ ಹೆಸರು ಕೇವಲ ಅವರ 2017ರ ಅಧಿಕೃತ ಇಸ್ರೇಲ್ ಭೇಟಿಗೆ ಸಂಬಂಧಿಸಿದಂತೆ ಮಾತ್ರ ಉಲ್ಲೇಖವಾಗಿದೆ. ಅಂದರೆ, ಅವರು ಇಸ್ರೇಲ್‌ಗೆ ಭೇಟಿ ನೀಡಿದ ಸಮಯದ ಪ್ರೋಟೋಕಾಲ್ ಅಥವಾ ಕಾರ್ಯಕ್ರಮದ ವಿವರಗಳ ಸಂದರ್ಭದಲ್ಲಿ ಈ ಹೆಸರು ಬಂದಿರಬಹುದು ಎನ್ನಲಾಗಿದೆ. ಈ ವರದಿಗಳನ್ನು ಭಾರತದ ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ಜನವರಿ 31, 2026 ರಂದು ಕಟ್ಟುನಿಟ್ಟಾಗಿ ನಿರಾಕರಿಸಿದೆ.

ರಾಹುಲ್‌ ಆರೋಪ ಏನು?

ಭಾರತ-ಅಮೆರಿಕ ನಡುವಿನ ಇತ್ತೀಚಿನ ವ್ಯಾಪಾರ ಒಪ್ಪಂದದ ವಿಚಾರವಾಗಿ ಪ್ರಧಾನಿಯವರು ಒತ್ತಡಕ್ಕೆ ಮಣಿದಿದ್ದಾರೆ ಮತ್ತು ಅವರ ವರ್ಚಸ್ಸು ರಾಜಿಯಾಗಿದೆ ಎಂದು ರಾಹುಲ್ ಕಿಡಿಕಾರಿದ್ದಾರೆ. "ನರೇಂದ್ರ ಮೋದಿ ಅವರು ಒತ್ತಡಕ್ಕೆ ಸಿಲುಕಿದ್ದಾರೆ. ಕಳೆದ ಕೆಲವು ತಿಂಗಳುಗಳಿಂದ ಸ್ಥಗಿತಗೊಂಡಿದ್ದ ಭಾರತ-ಅಮೆರಿಕ ವ್ಯಾಪಾರ ಒಪ್ಪಂದಕ್ಕೆ ಅವರು ನಿನ್ನೆ ರಾತ್ರಿ ಸಹಿ ಹಾಕಿದ್ದಾರೆ. ಅವರ ಮೇಲೆ ತೀವ್ರ ಒತ್ತಡವಿದೆ ಮತ್ತು ಅವರ ವರ್ಚಸ್ಸಿಗೆ ಧಕ್ಕೆ ಬರುವ ಭೀತಿ ಅವರನ್ನು ಕಾಡುತ್ತಿದೆ. ಪ್ರಧಾನಿಯವರು ನಿಮ್ಮ ಕಠಿಣ ಶ್ರಮವನ್ನು ಈ ಒಪ್ಪಂದದ ಮೂಲಕ ಮಾರಾಟ ಮಾಡಿದ್ದಾರೆ," ಎಂದು ರಾಹುಲ್ ಗಾಂಧಿ ಗಂಭೀರವಾಗಿ ಆರೋಪಿಸಿದರು.

ಅಮೆರಿಕದ ವಿವಾದಾತ್ಮಕ 'ಎಪ್ಸ್ಟೀನ್ ಫೈಲ್ಸ್'ನಲ್ಲಿ ಪ್ರಧಾನಿಯವರ ಹೆಸರಿದೆ ಎಂಬ ವರದಿಗಳನ್ನು ಉಲ್ಲೇಖಿಸಿದ ರಾಹುಲ್, "ಅಮೆರಿಕ ಇನ್ನೂ ಬಿಡುಗಡೆ ಮಾಡದ ಮಾಹಿತಿಗಳು ಆ ಫೈಲ್ಸ್‌ನಲ್ಲಿವೆ. ಈ ವಿಚಾರವಾಗಿ ಮೋದಿ ಅವರ ಮೇಲೆ ಒತ್ತಡ ಹೇರಲಾಗುತ್ತಿದೆ. ಅದಾನಿ ಪ್ರಕರಣ ಮತ್ತು ಎಪ್ಸ್ಟೀನ್ ಫೈಲ್ಸ್ - ಇವೆರಡೂ ಪ್ರಧಾನಿಯವರ ದೌರ್ಬಲ್ಯದ ಅಂಶಗಳಾಗಿವೆ. ಯಾರೋ ಅವರ ವರ್ಚಸ್ಸನ್ನು ರೂಪಿಸಿದರೋ, ಅವರೇ ಈಗ ಆ ವರ್ಚಸ್ಸನ್ನು ಕೆಡಿಸುತ್ತಿದ್ದಾರೆ," ಎಂದು ಹೇಳಿದರು.

ಏನಿದು ಎಪ್ಸ್ಟೀನ್ ಫೈಲ್ಸ್?

ಜೆಫ್ರಿ ಎಪ್ಸ್ಟೀನ್ ಅಮೆರಿಕದ ಒಬ್ಬ ಪ್ರಭಾವಿ ಹಣಕಾಸು ಉದ್ಯಮಿಯಾಗಿದ್ದ. ಆದರೆ ಆತ ದೊಡ್ಡ ಮಟ್ಟದ ಲೈಂಗಿಕ ಹಗರಣ ಮತ್ತು ಬಾಲಕಿಯರ ಸಾಗಣೆ ಜಾಲವನ್ನು ನಡೆಸುತ್ತಿದ್ದ ಎಂಬುದು ಸಾಬೀತಾಗಿತ್ತು. 2019 ರಲ್ಲಿ ಜೈಲಿನಲ್ಲಿದ್ದಾಗಲೇ ಆತ ಅನುಮಾನಾಸ್ಪದವಾಗಿ ಸಾವನ್ನಪ್ಪಿದನು.

ಎಪ್ಸ್ಟೀನ್ ನಡೆಸುತ್ತಿದ್ದ ಅಕ್ರಮ ಕೃತ್ಯಗಳಲ್ಲಿ ಮತ್ತು ಆತನ ಖಾಸಗಿ ದ್ವೀಪಕ್ಕೆ ಭೇಟಿ ನೀಡುತ್ತಿದ್ದವರ ವಿವರಗಳು ಈ ಫೈಲ್‌ಗಳಲ್ಲಿವೆ. ಇವುಗಳಲ್ಲಿ ಹೂಡಿಕೆದಾರರು, ರಾಜಕಾರಣಿಗಳು, ಉದ್ಯಮಿಗಳು ಮತ್ತು ಹಾಲಿವುಡ್ ಸೆಲೆಬ್ರಿಟಿಗಳ ಹೆಸರುಗಳಿವೆ. ಅಮೆರಿಕದ ನ್ಯಾಯಾಲಯದ ಆದೇಶದ ಮೇರೆಗೆ ಕಳೆದ ಒಂದು ವರ್ಷದಿಂದ ಹಂತ ಹಂತವಾಗಿ ಸಾವಿರಾರು ಪುಟಗಳ ದಾಖಲೆಗಳನ್ನು ಸಾರ್ವಜನಿಕವಾಗಿ ಬಿಡುಗಡೆ ಮಾಡಲಾಗುತ್ತಿದೆ.

ಈ ಫೈಲ್‌ನಲ್ಲಿರುವ ಪ್ರಮುಖ ಹೆಸರುಗಳು

ಈ ದಾಖಲೆಗಳಲ್ಲಿ ಕೇವಲ ಹೆಸರು ಇರುವುದರಿಂದ ಮಾತ್ರ ಯಾರೂ ಅಪರಾಧಿ ಎನಿಸಿಕೊಳ್ಳುವುದಿಲ್ಲ. ಆದರೆ ಅವರು ಎಪ್ಸ್ಟೀನ್ ಜೊತೆ ಒಡನಾಟ ಹೊಂದಿದ್ದರು ಎಂಬುದು ಇದರಿಂದ ತಿಳಿಯುತ್ತದೆ. ಈವರೆಗೆ ಅಮೆರಿಕದ ಮಾಜಿ ಅಧ್ಯಕ್ಷ ಬಿಲ್ ಕ್ಲಿಂಟನ್, ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಪ್ರಿನ್ಸ್ ಆಂಡ್ರ್ಯೂ, ಮೈಕ್ರೋಸಾಫ್ಟ್ ಸಂಸ್ಥಾಪಕ ಬಿಲ್ ಗೇಟ್ಸ್, ವಿಜ್ಞಾನಿ ಸ್ಟೀಫನ್ ಹಾಕಿಂಗ್ ಹೆಸರುಗಳು ಈ ಫೈಲ್‌ನಲ್ಲಿ ಪತ್ತೆಯಾಗಿವೆ.

ಪ್ರಧಾನಿ ಮೋದಿ ಕುರಿತ ಉಲ್ಲೇಖದ ಸತ್ಯಾಸತ್ಯತೆ

ಎಪ್ಸ್ಟೀನ್ ದಾಖಲೆಗಳಿಗೆ ಸಂಬಂಧಿಸಿದ ಕೆಲವು ಇಮೇಲ್‌ಗಳಲ್ಲಿ ಪ್ರಧಾನಿ ಮೋದಿಯವರ ಹೆಸರು ಬಂದಿದೆ. ಆದರೆ ಅದು ಕೇವಲ ಅವರ 2017ರ ಅಧಿಕೃತ ಇಸ್ರೇಲ್ ಭೇಟಿಯ ಕಾರ್ಯಕ್ರಮ ಪಟ್ಟಿಯ ಉಲ್ಲೇಖವಾಗಿದೆ. ಅಂದರೆ, ಎಪ್ಸ್ಟೀನ್ ಅಥವಾ ಆತನ ಸಹಚರರು ಹಂಚಿಕೊಂಡ ಕೆಲವು ಸಾರ್ವಜನಿಕ ಲಭ್ಯವಿರುವ ಭೇಟಿಗಳ ಪಟ್ಟಿಯಲ್ಲಿ ಮೋದಿಯವರ ಹೆಸರಿತ್ತು ಅಷ್ಟೆ. ಯಾವುದೇ ಹಗರಣಕ್ಕೂ ಅವರಿಗೂ ಸಂಬಂಧವಿದೆ ಎಂದು ಆ ಫೈಲ್‌ಗಳು ಎಲ್ಲೂ ಹೇಳಿಲ್ಲ.

Read More
Next Story