
ರಷ್ಯಾದಿಂದ ಭಾರತ ತೈಲ ಖರೀದಿಸುವುದಿಲ್ಲ: ಶ್ವೇತ ಭವನದಿಂದ ಅಚ್ಚರಿಯ ಘೋಷಣೆ
ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸುವುದಿಲ್ಲ ಮತ್ತು ಅಮೆರಿಕದ ಇಂಧನ, ಕೃಷಿ ಕ್ಷೇತ್ರಗಳಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲಿದೆ ಎಂದು ಅಮೆರಿಕ ಘೋಷಿಸಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತದೊಂದಿಗೆ ಹೊಸ ವ್ಯಾಪಾರ ಒಪ್ಪಂದವನ್ನು ಘೋಷಿಸಿದ ಬೆನ್ನಲ್ಲೇ, ಶ್ವೇತಭವನವು ಈ ಕುರಿತು ಮಹತ್ವದ ಮಾಹಿತಿ ಹಂಚಿಕೊಂಡಿದೆ. ಭಾರತವು ಇನ್ನು ಮುಂದೆ ರಷ್ಯಾದಿಂದ ತೈಲ ಖರೀದಿಸದಿರಲು ನಿರ್ಧರಿಸಿದೆ ಮತ್ತು ಅಮೆರಿಕದ ವಿವಿಧ ಕ್ಷೇತ್ರಗಳಲ್ಲಿ ಬರೋಬ್ಬರಿ $500 ಬಿಲಿಯನ್ (ಅಂದಾಜು ₹41.5 ಲಕ್ಷ ಕೋಟಿ) ಹೂಡಿಕೆ ಮಾಡಲು ಪ್ರಧಾನಿ ಮೋದಿ ಒಪ್ಪಿಕೊಂಡಿದ್ದಾರೆ ಎಂದು ಶ್ವೇತಭವನ ತಿಳಿಸಿದೆ.
ರಷ್ಯಾ ತೈಲ ಖರೀದಿಗೆ ಬಿತ್ತಾ ಬ್ರೇಕ್?
ಶ್ವೇತಭವನದ ಮಾಧ್ಯಮ ಕಾರ್ಯದರ್ಶಿ ಕ್ಯಾರೋಲಿನ್ ಲೀವಿಟ್ ಅವರು ಫೆಬ್ರವರಿ 3ರಂದು ಮಾತನಾಡಿ, "ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಬದ್ಧವಾಗಿದೆ. ಬದಲಾಗಿ ಅಮೆರಿಕದಿಂದ ಮತ್ತು ಸಂಭವನೀಯವಾಗಿ ವೆನೆಜುವೆಲಾದಿಂದ ತೈಲವನ್ನು ಖರೀದಿಸಲಿದೆ. ಇದು ಅಮೆರಿಕದ ಆರ್ಥಿಕತೆ ಮತ್ತು ಜನರಿಗೆ ನೇರ ಲಾಭ ತರಲಿದೆ," ಎಂದು ತಿಳಿಸಿದ್ದಾರೆ.
$500 ಬಿಲಿಯನ್ ಬೃಹತ್ ಹೂಡಿಕೆ
ಪ್ರಧಾನಿ ಮೋದಿ ಮತ್ತು ಅಧ್ಯಕ್ಷ ಟ್ರಂಪ್ ನಡುವಿನ ದೂರವಾಣಿ ಸಂಭಾಷಣೆಯ ನಂತರ ಈ ಒಪ್ಪಂದ ಏರ್ಪಟ್ಟಿದೆ. ಇದರ ಅನ್ವಯ ಭಾರತವು ಅಮೆರಿಕದ ಇಂಧನ ಸಾರಿಗೆ ಮತ್ತು ಕೃಷಿ ಉತ್ಪನ್ನಗಳ ವಲಯದಲ್ಲಿ 500 ಬಿಲಿಯನ್ ಡಾಲರ್ ಹೂಡಿಕೆ ಮಾಡಲು ಮತ್ತು ಖರೀದಿ ಮಾಡಲು ಒಪ್ಪಿಗೆ ಸೂಚಿಸಿದೆ.
ಸುಂಕ ಸಮರಕ್ಕೆ ಅಂತ್ಯ?
ಈ ಒಪ್ಪಂದದ ಭಾಗವಾಗಿ ಅಮೆರಿಕವು ಭಾರತೀಯ ಉತ್ಪನ್ನಗಳ ಮೇಲಿನ ಸುಂಕವನ್ನು ಶೇ. 25 ರಿಂದ ಶೇ. 18ಕ್ಕೆ ಇಳಿಸಿದೆ. ಪ್ರತಿಯಾಗಿ ಭಾರತವು ಅಮೆರಿಕದ ಉತ್ಪನ್ನಗಳ ಮೇಲಿನ ಸುಂಕದ ಅಡೆತಡೆಗಳನ್ನು ಸಂಪೂರ್ಣವಾಗಿ ತೆಗೆದುಹಾಕಲು (ಶೂನ್ಯಕ್ಕೆ ಇಳಿಸಲು) ಮುಂದಾಗಿದೆ ಎಂದು ವರದಿಯಾಗಿದೆ.
ಟ್ರಂಪ್-ಮೋದಿ ಸ್ನೇಹದ ಗೆಲುವು
"ಅಧ್ಯಕ್ಷ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವೆ ಉತ್ತಮ ಬಾಂಧವ್ಯವಿದೆ. ಮೋದಿಯವರ ಮೇಲಿರುವ ಗೌರವದಿಂದಾಗಿ ಈ ಒಪ್ಪಂದ ಸಾಧ್ಯವಾಗಿದೆ. ಇದು ಅಮೆರಿಕದ ಕಾರ್ಮಿಕರು ಮತ್ತು ವ್ಯವಹಾರಗಳಿಗೆ ದೊಡ್ಡ ಜಯ," ಎಂದು ಲೀವಿಟ್ ಬಣ್ಣಿಸಿದ್ದಾರೆ. ಈ ಒಪ್ಪಂದವು ಜಾಗತಿಕ ರಾಜಕೀಯದಲ್ಲಿ ದೊಡ್ಡ ಬದಲಾವಣೆ ತರಲಿದೆ. ರಷ್ಯಾದ ಆರ್ಥಿಕ ಮೂಲವನ್ನು ಕುಗ್ಗಿಸಲು ಅಮೆರಿಕಕ್ಕೆ ಭಾರತದ ಈ ನಿರ್ಧಾರ ದೊಡ್ಡ ಆಸರೆಯಾಗಲಿದೆ. ಅದೇ ಸಮಯದಲ್ಲಿ ಭಾರತಕ್ಕೆ ಅಮೆರಿಕದ ಮಾರುಕಟ್ಟೆಯಲ್ಲಿ ಕಡಿಮೆ ಸುಂಕದ ಲಾಭ ಸಿಗಲಿದೆ ಎನ್ನಲಾಗಿದೆ.

