
ಟ್ರಂಪ್ ಸುಂಕ ʻಸಮರʼ- ದ.ಕೊರಿಯಾ ಸರಕುಗಳ ಮೇಲೆ ಆಮದು ತೆರಿಗೆ ಶೇ. 25ಕ್ಕೆ ಏರಿಕೆ
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದಕ್ಷಿಣ ಕೊರಿಯಾದ ವಾಹನಗಳು, ಔಷಧಗಳು ಮತ್ತು ಮರಮುಟ್ಟುಗಳ ಮೇಲೆ ಆಮದು ಸುಂಕವನ್ನು ಶೇಕಡಾ 25ಕ್ಕೆ ಹೆಚ್ಚಿಸಿದ್ದಾರೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೋಮವಾರ ದಕ್ಷಿಣ ಕೊರಿಯಾದ ಉತ್ಪನ್ನಗಳ ಮೇಲೆ ಆಮದು ಸುಂಕವನ್ನು ಭಾರಿ ಪ್ರಮಾಣದಲ್ಲಿ ಹೆಚ್ಚಿಸುವುದಾಗಿ ಘೋಷಿಸಿದ್ದಾರೆ. ಕಳೆದ ವರ್ಷ ಘೋಷಿಸಲಾದ ವ್ಯಾಪಾರ ಒಪ್ಪಂದಕ್ಕೆ ದಕ್ಷಿಣ ಕೊರಿಯಾದ ಸಂಸತ್ತು ಇನ್ನೂ ಅನುಮೋದನೆ ನೀಡದ ಕಾರಣ ಈ ಕಠಿಣ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದಾರೆ.
ಟ್ರಂಪ್ ಹೇಳಿದ್ದೇನು?
ಅಮೆರಿಕ ಅಧ್ಯಕ್ಷರು ಸಾಮಾಜಿಕ ಜಾಲತಾಣದ ಮೂಲಕ ಕೆಲವು ಬದಲಾವಣೆಗಳನ್ನು ಘೋಷಿಸಿದ್ದಾರೆ. ದಕ್ಷಿಣ ಕೊರಿಯಾದಿಂದ ಆಮದು ಮಾಡಿಕೊಳ್ಳುವ ವಾಹನಗಳು ಮರಮುಟ್ಟು ಮತ್ತು ಔಷಧೀಯ ಉತ್ಪನ್ನಗಳ ಮೇಲೆ ತೆರಿಗೆ ಹೆಚ್ಚಳವಾಗಲಿದೆ. ಇತರ ಎಲ್ಲಾ ಸರಕುಗಳ ಮೇಲಿನ ಆಮದು ತೆರಿಗೆಯನ್ನು ಶೇಕಡಾ 15ರಿಂದ ಶೇಕಡಾ 25ಕ್ಕೆ ಏರಿಸಲಾಗಿದೆ. ಅಮೆರಿಕವು ಒಪ್ಪಂದದ ಪ್ರಕಾರ ಸುಂಕ ಕಡಿತಗೊಳಿಸಲು ಸಿದ್ಧವಿದ್ದರೂ, ದಕ್ಷಿಣ ಕೊರಿಯಾ ತನ್ನ ಶಾಸನಾತ್ಮಕ ಪ್ರಕ್ರಿಯೆಗಳನ್ನು ವಿಳಂಬ ಮಾಡುತ್ತಿರುವುದು ಟ್ರಂಪ್ ಕೆಂಗಣ್ಣಿಗೆ ಕಾರಣವಾಗಿದೆ.
ರಾಜತಾಂತ್ರಿಕ ಬಿಕ್ಕಟ್ಟು
ಟ್ರಂಪ್ ಈ ಹಿಂದೆಯೇ ದಕ್ಷಿಣ ಕೊರಿಯಾದ ಹ್ಯುಂಡೈ ಉತ್ಪಾದನಾ ಘಟಕದ ಮೇಲೆ ವಲಸೆ ಅಧಿಕಾರಿಗಳಿಂದ ದಾಳಿ ನಡೆಸುವ ಮೂಲಕ ಉಭಯ ದೇಶಗಳ ಸಂಬಂಧದಲ್ಲಿ ಬಿರುಕು ಮೂಡಿಸಿದ್ದರು. ಈಗಿನ ಸುಂಕ ಏರಿಕೆಯು ದಕ್ಷಿಣ ಕೊರಿಯಾ ಅಮೆರಿಕದಲ್ಲಿ ಹೂಡಿಕೆ ಮಾಡಲು ಒಪ್ಪಿಕೊಂಡಿದ್ದ 350 ಬಿಲಿಯನ್ ಡಾಲರ್ ಹೂಡಿಕೆಯ ಮೇಲೂ ಪರಿಣಾಮ ಬೀರಬಹುದು ಎನ್ನಲಾಗುತ್ತಿದೆ.
ಇದಕ್ಕೆ ಪ್ರತಿಕ್ರಿಯಿಸಿರುವ ದಕ್ಷಿಣ ಕೊರಿಯಾ ಅಧ್ಯಕ್ಷರ ಕಚೇರಿ, "ಅಮೆರಿಕ ನಮಗೆ ಅಧಿಕೃತವಾಗಿ ಈ ಬಗ್ಗೆ ಮಾಹಿತಿ ನೀಡಿಲ್ಲ" ಎಂದು ಹೇಳಿದೆ. ಸದ್ಯ ಕೆನಡಾ ಪ್ರವಾಸದಲ್ಲಿರುವ ದಕ್ಷಿಣ ಕೊರಿಯಾದ ಕೈಗಾರಿಕಾ ಸಚಿವ ಕಿಮ್ ಜಂಗ್-ಕ್ವಾನ್ ಅವರು ಶೀಘ್ರದಲ್ಲೇ ಅಮೆರಿಕಕ್ಕೆ ತೆರಳಿ ವಾಣಿಜ್ಯ ಕಾರ್ಯದರ್ಶಿ ಹೊವಾರ್ಡ್ ಲುಟ್ನಿಕ್ ಅವರೊಂದಿಗೆ ಮಾತುಕತೆ ನಡೆಸಲಿದ್ದಾರೆ.
ಟ್ರಂಪ್ ಸುಂಕ ಸಮರ
ಇದು ಕೇವಲ ದಕ್ಷಿಣ ಕೊರಿಯಾಕ್ಕೆ ಸೀಮಿತವಾಗಿಲ್ಲ. ಟ್ರಂಪ್ ಕಳೆದ ವಾರವಷ್ಟೇ ಗ್ರೀನ್‌ಲ್ಯಾಂಡ್ ನಿಯಂತ್ರಣಕ್ಕಾಗಿ ಎಂಟು ಯುರೋಪಿಯನ್ ರಾಷ್ಟ್ರಗಳಿಗೆ ಎಚ್ಚರಿಕೆ ನೀಡಿದ್ದರು. ಅಲ್ಲದೆ, ಕೆನಡಾವು ಚೀನಾದೊಂದಿಗೆ ವ್ಯಾಪಾರ ಸಂಬಂಧ ಬೆಳೆಸಿದರೆ ಆ ದೇಶದ ಸರಕುಗಳ ಮೇಲೆ ಶೇಕಡಾ 100ರಷ್ಟು ತೆರಿಗೆ ವಿಧಿಸುವುದಾಗಿ ಬೆದರಿಕೆ ಹಾಕಿದ್ದಾರೆ. ಟ್ರಂಪ್ ಅವರ ಈ ಹಠಾತ್ ನಿರ್ಧಾರಗಳು ಜಾಗತಿಕ ಆರ್ಥಿಕತೆಯ ಮೇಲೆ ಅಸ್ಥಿರತೆಯ ನೆರಳು ಬೀರಲಿವೆ ಎಂದು ಆರ್ಥಿಕ ತಜ್ಞರು ಆತಂಕ ವ್ಯಕ್ತಪಡಿಸಿದ್ದಾರೆ.

