
ʻಗ್ರೀನ್‌ಲ್ಯಾಂಡ್ʼ ಖರೀದಿಗೆ ಟ್ರಂಪ್ ಮಾಸ್ಟರ್ ಪ್ಲಾನ್? ಈ ದ್ವೀಪದ ಮೇಲೆ ಅಮೆರಿಕಕ್ಕೆ ಏಕಿಷ್ಟು ಮೋಹ?
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಗ್ರೀನ್‌ಲ್ಯಾಂಡ್ ಖರೀದಿಸಲು ಹೊಸ 'ಫ್ರೇಮ್‌ವರ್ಕ್ ಒಪ್ಪಂದ' ಘೋಷಿಸಿದ್ದಾರೆ. ಏನಿದು ವಿವಾದ? ಸಂಪೂರ್ಣ ಇತಿಹಾಸ ಮತ್ತು ವಿಶ್ಲೇಷಣೆ ಇಲ್ಲಿದೆ.
ಜಗತ್ತಿನ ಅತಿದೊಡ್ಡ ದ್ವೀಪ 'ಗ್ರೀನ್‌ಲ್ಯಾಂಡ್' ಅನ್ನು ಹೇಗಾದರೂ ಮಾಡಿ ಅಮೆರಿಕದ ವಶಕ್ಕೆ ಪಡೆಯಲೇಬೇಕು ಎಂದು ಹಠಕ್ಕೆ ಬಿದ್ದಿರುವ ಅಧ್ಯಕ್ಷ ಡೊನಾಲ್ಡ್ ಟ್ರಂಪ್, ಇದೀಗ ಇಡೀ ಜಗತ್ತೇ ಬೆರಗಾಗುವಂತಹ ಹೊಸ ರಾಜತಾಂತ್ರಿಕ ದಾಳ ಉರುಳಿಸಿದ್ದಾರೆ. ದಶಕಗಳಿಂದ ಡೆನ್ಮಾರ್ಕ್‌ನ ಸಾರ್ವಭೌಮತ್ವಕ್ಕೆ ಒಳಪಟ್ಟಿರುವ ಈ ಮಂಜಿನ ದ್ವೀಪವನ್ನು ಖರೀದಿಸಲು 'ಫ್ರೇಮ್‌ವರ್ಕ್ ಒಪ್ಪಂದ' (Framework Deal) ಸಿದ್ಧವಾಗಿದೆ ಎಂದು ಘೋಷಿಸುವ ಮೂಲಕ ಟ್ರಂಪ್, ಅಂತರಾಷ್ಟ್ರೀಯ ರಾಜಕೀಯದಲ್ಲಿ ಹೊಸ ಸಂಚಲನ ಮೂಡಿಸಿದ್ದಾರೆ. ಒಂದು ಕಡೆ ಸೇನಾ ಬಲದ ಬೆದರಿಕೆ, ಮತ್ತೊಂದೆಡೆ ಆರ್ಥಿಕ ದಿಗ್ಬಂಧನದ ಎಚ್ಚರಿಕೆಗಳ ನಡುವೆ ದಾವೋಸ್‌ನಲ್ಲಿ ನಡೆದ ಈ ಹಠಾತ್ ಬೆಳವಣಿಗೆಯಿಂದ ಗ್ರೀನ್‌ಲ್ಯಾಂಡ್ ನಿಜಕ್ಕೂ ಅಮೆರಿಕದ ಪಾಲಾಗಲಿದೆಯೇ? ಎಂಬ ಆತಂಕ, ಕುತೂಹಲ ಜಗತ್ತಿನಾದ್ಯಂತ ಮೂಡಿದೆ.
ಏನಿದು 'ಫ್ರೇಮ್‌ವರ್ಕ್' ಒಪ್ಪಂದ?
ನ್ಯಾಟೋ (NATO) ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ನಡೆಸಿದ ಸುದೀರ್ಘ ಮಾತುಕತೆಯ ನಂತರ ಟ್ರಂಪ್ ಈ ಘೋಷಣೆ ಮಾಡಿದ್ದಾರೆ.
• ಸೇನೆ ಬಳಸುವುದಿಲ್ಲ: ಈ ಹಿಂದೆ ಗ್ರೀನ್‌ಲ್ಯಾಂಡ್ ಅನ್ನು ವಶಪಡಿಸಿಕೊಳ್ಳಲು ಬಲಪ್ರಯೋಗ ಮಾಡುವುದಾಗಿ ಹೇಳಿದ್ದ ಟ್ರಂಪ್, ಈಗ ಆ ನಿರ್ಧಾರದಿಂದ ಹಿಂದೆ ಸರಿದಿದ್ದಾರೆ.
• ಸುಂಕದ ಬೆದರಿಕೆ ವಾಪಸ್: ಗ್ರೀನ್‌ಲ್ಯಾಂಡ್ ಹಸ್ತಾಂತರಕ್ಕೆ ವಿರೋಧ ವ್ಯಕ್ತಪಡಿಸಿದ್ದ ಬ್ರಿಟನ್ ಸೇರಿದಂತೆ 8 ಯುರೋಪಿಯನ್ ರಾಷ್ಟ್ರಗಳ ಮೇಲೆ ವಿಧಿಸಬೇಕಿದ್ದ ಶೇ. 10ರಷ್ಟು ಆಮದು ಸುಂಕವನ್ನು (Tariffs) ಸದ್ಯಕ್ಕೆ ತಡೆಹಿಡಿಯಲಾಗಿದೆ.
• ಆರ್ಕ್ಟಿಕ್ ಭದ್ರತೆ: ಈ ಒಪ್ಪಂದವು ಕೇವಲ ಗ್ರೀನ್‌ಲ್ಯಾಂಡ್ ಮಾತ್ರವಲ್ಲದೆ ಇಡೀ ಆರ್ಕ್ಟಿಕ್ ಪ್ರದೇಶದ ಭದ್ರತೆಗೆ ಸಂಬಂಧಿಸಿದ್ದಾಗಿದೆ.
ದಾವೋಸ್‌ನಲ್ಲಿ ನ್ಯಾಟೋ ಪ್ರಧಾನ ಕಾರ್ಯದರ್ಶಿ ಮಾರ್ಕ್ ರುಟ್ಟೆ ಅವರೊಂದಿಗೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ದ್ವಿಪಕ್ಷೀಯ ಸಭೆ ನಡೆಸಿದರು.
ಡೆನ್ಮಾರ್ಕ್ ವಿರೋಧ
ಒಪ್ಪಂದದ ಬಗ್ಗೆ ಟ್ರಂಪ್ ಉತ್ಸಾಹ ತೋರುತ್ತಿದ್ದರೂ, ಡೆನ್ಮಾರ್ಕ್ ಮತ್ತು ಗ್ರೀನ್‌ಲ್ಯಾಂಡ್ ಸರ್ಕಾರಗಳು ತಮ್ಮ ನಿಲುವನ್ನು ಸ್ಪಷ್ಟಪಡಿಸಿವೆ. ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಅವರು "ನಾವು ಎಲ್ಲದರ ಬಗ್ಗೆಯೂ ಚರ್ಚೆ ಮಾಡಬಹುದು, ಆದರೆ ನಮ್ಮ ದೇಶದ ಸಾರ್ವಭೌಮತ್ವದ ವಿಚಾರದಲ್ಲಿ ರಾಜಿ ಮಾಡಿಕೊಳ್ಳಲು ಸಾಧ್ಯವೇ ಇಲ್ಲ" ಎಂದು ಕಡಾಖಂಡಿತವಾಗಿ ಹೇಳಿದ್ದಾರೆ.
ಡೆನ್ಮಾರ್ಕ್ ಸರ್ಕಾರ ಮತ್ತು ಗ್ರೀನ್‌ಲ್ಯಾಂಡ್‌ನ ಸ್ಥಳೀಯ ನಾಯಕರು ಈ ಪ್ರಸ್ತಾವನೆಯನ್ನು ಸ್ಪಷ್ಟವಾಗಿ ತಿರಸ್ಕರಿಸಿದ್ದಾರೆ. "ಗ್ರೀನ್‌ಲ್ಯಾಂಡ್ ಮಾರಾಟಕ್ಕಿಲ್ಲ, ಆದರೆ ಸಹಕಾರಕ್ಕೆ ಮುಕ್ತವಾಗಿದೆ" ಎಂಬುದು ಅವರ ನಿಲುವು. ಜನರ ಹಕ್ಕುಗಳು ಮತ್ತು ಸಂಸ್ಕೃತಿಯನ್ನು ಹಣಕ್ಕೆ ಮಾರಲು ಸಾಧ್ಯವಿಲ್ಲ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.
ಗ್ರೀನ್‌ಲ್ಯಾಂಡ್‌ನ ಪೂರ್ಣ ಪ್ರಮಾಣದ ಮಾಲೀಕತ್ವ ಸಿಗದಿದ್ದರೂ, ಅಮೆರಿಕವು ಈ ಕೆಳಗಿನ ಮಾರ್ಗಗಳನ್ನು ಅನುಸರಿಸುವ ಸಾಧ್ಯತೆ ಇದೆ.
ಸಣ್ಣ ಭಾಗಗಳ ಹಸ್ತಾಂತರ: ಸೈಪ್ರಸ್‌ನಲ್ಲಿ ಬ್ರಿಟನ್ ಹೊಂದಿರುವ ಸೇನಾ ನೆಲೆಗಳಂತೆ, ಗ್ರೀನ್‌ಲ್ಯಾಂಡ್‌ನ ಕೆಲವು ನಿರ್ದಿಷ್ಟ ಭಾಗಗಳಲ್ಲಿ ಅಮೆರಿಕಕ್ಕೆ ಸಾರ್ವಭೌಮ ಅಧಿಕಾರ ನೀಡುವ ಬಗ್ಗೆ ಚರ್ಚೆ ನಡೆಯುತ್ತಿದೆ.
ಗುವಾಂಟನಾಮೊ ಬೇ ಮಾದರಿ: ಕ್ಯೂಬಾದಲ್ಲಿರುವ ಅಮೆರಿಕದ ಸೇನಾ ನೆಲೆಯಂತೆ, ಗ್ರೀನ್‌ಲ್ಯಾಂಡ್‌ನ ಕೆಲವು ಆಯಕಟ್ಟಿನ ಜಾಗಗಳನ್ನು ದೀರ್ಘಕಾಲದ ಲೀಸ್ (Lease) ಆಧಾರದ ಮೇಲೆ ಅಮೆರಿಕದ ಸಂಪೂರ್ಣ ನಿಯಂತ್ರಣಕ್ಕೆ ನೀಡುವ ಸಾಧ್ಯತೆಗಳಿವೆ.
ಗೋಲ್ಡನ್ ಡೋಮ್: ಅಮೆರಿಕವು ತನ್ನ ಅದ್ಯುನಿಕ ಕ್ಷಿಪಣಿ ರಕ್ಷಣಾ ವ್ಯವಸ್ಥೆಯಾದ 'ಗೋಲ್ಡನ್ ಡೋಮ್' ಅನ್ನು ಗ್ರೀನ್‌ಲ್ಯಾಂಡ್‌ನಲ್ಲಿ ಅಳವಡಿಸಲು ಬಯಸಿದೆ.
ಅಮೆರಿಕಕ್ಕೆ ಗ್ರೀನ್‌ಲ್ಯಾಂಡ್ ಏಕೆ ಬೇಕು?
ರಷ್ಯಾ ಮತ್ತು ಚೀನಾ ಬೆದರಿಕೆ: ಆರ್ಕ್ಟಿಕ್ ಪ್ರದೇಶದಲ್ಲಿ ರಷ್ಯಾ ಮತ್ತು ಚೀನಾದ ಹಡಗುಗಳ ಸಂಚಾರ ಹೆಚ್ಚುತ್ತಿದೆ. ಡೆನ್ಮಾರ್ಕ್ ಬಳಿ ಇವರನ್ನು ತಡೆಯುವ ಶಕ್ತಿ ಇಲ್ಲ, ಹೀಗಾಗಿ ಅಮೆರಿಕ ಈ ಜಾಗವನ್ನು ನಿಯಂತ್ರಿಸುವುದು ಅನಿವಾರ್ಯ ಎಂಬುದು ಟ್ರಂಪ್ ವಾದ.
ಅಪಾರ ಖನಿಜ ಸಂಪತ್ತು: ಗ್ರೀನ್‌ಲ್ಯಾಂಡ್ ಅಡಿಯಲ್ಲಿ ತೈಲ, ನೈಸರ್ಗಿಕ ಅನಿಲ ಮತ್ತು ಅತಿ ಅಪರೂಪದ ಭೂಮಿಯ ಮೂಲಧಾತುಗಳು ಅಡಗಿವೆ ಎಂದು ಅಂದಾಜಿಸಲಾಗಿದೆ. ಸ್ಮಾರ್ಟ್‌ಫೋನ್‌ಗಳು ಮತ್ತು ಎಲೆಕ್ಟ್ರಿಕ್ ವಾಹನಗಳ ತಯಾರಿಕೆಗೆ ಇವು ಅತ್ಯಗತ್ಯ.
ಹವಾಮಾನ ಬದಲಾವಣೆ ಮತ್ತು ಹೊಸ ಮಾರ್ಗಗಳು: ಮಂಜುಗಡ್ಡೆ ಕರಗುತ್ತಿರುವುದರಿಂದ ಆರ್ಕ್ಟಿಕ್ ಮೂಲಕ ಹೊಸ ಹಡಗು ಸಂಚಾರ ಮಾರ್ಗಗಳು ತೆರೆದುಕೊಳ್ಳುತ್ತಿವೆ. ಇದು ಜಾಗತಿಕ ವ್ಯಾಪಾರಕ್ಕೆ ಹೊಸ ಹಾದಿ ಕಲ್ಪಿಸುತ್ತದೆ.
ಈ ಹಿಂದೆಯೂ ನಡೆದಿತ್ತು ಖರೀದಿ ಪ್ರಯತ್ನಗಳು
ಗ್ರೀನ್‌ಲ್ಯಾಂಡ್ ಮೇಲೆ ಅಮೆರಿಕ ಕಣ್ಣಿಟ್ಟಿರುವುದು ನಿನ್ನೆಯ ಮೊನ್ನೆಯ ವಿಷಯವಲ್ಲ. ಕಳೆದ ಒಂದೂವರೆ ಶತಮಾನದಿಂದಲೂ ಅಮೆರಿಕದ ವಿವಿಧ ಅಧ್ಯಕ್ಷರು ಈ ಆಯಕಟ್ಟಿನ ದ್ವೀಪವನ್ನು ತನ್ನದಾಗಿಸಿಕೊಳ್ಳಲು ಪ್ರಯತ್ನಿಸುತ್ತಲೇ ಬಂದಿದ್ದಾರೆ.
1867: ವಿಲಿಯಂ ಸೆವಾರ್ಡ್
ಅಮೆರಿಕದ ಅಂದಿನ ಸ್ಟೇಟ್ ಸೆಕ್ರೆಟರಿ ವಿಲಿಯಂ ಸೆವಾರ್ಡ್ (William Seward) ಅವರು ಗ್ರೀನ್‌ಲ್ಯಾಂಡ್ ಖರೀದಿಯ ಮೊದಲ ಪ್ರಸ್ತಾವನೆಯನ್ನು ಮುಂದಿಟ್ಟಿದ್ದರು. ಇದೇ ವರ್ಷದಲ್ಲಿ ಅಮೆರಿಕವು ರಷ್ಯಾದಿಂದ 'ಅಲಾಸ್ಕಾ'ವನ್ನು ಖರೀದಿಸಿತ್ತು. ಅಲಾಸ್ಕಾದ ಯಶಸ್ಸಿನ ಬೆನ್ನಲ್ಲೇ ಸೆವಾರ್ಡ್ ಅವರು ಗ್ರೀನ್‌ಲ್ಯಾಂಡ್ ಮತ್ತು ಐಸ್‌ಲ್ಯಾಂಡ್ ಅನ್ನು ಖರೀದಿಸಿದರೆ ಉತ್ತರ ಅಮೆರಿಕದ ರಕ್ಷಣಾ ವಲಯ ಭದ್ರವಾಗುತ್ತದೆ ಎಂದು ವಾದಿಸಿದ್ದರು. ಆ ಸಮಯದಲ್ಲಿ ಅಮೆರಿಕದ ಸಂಸತ್ತು ಈ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಲಿಲ್ಲ, ಹೀಗಾಗಿ ಇದು ಆರಂಭಿಕ ಹಂತದಲ್ಲೇ ನಿಂತುಹೋಯಿತು.
1946: ಹ್ಯಾರಿ ಟ್ರೂಮನ್ ಅವಧಿಯ 100 ಮಿಲಿಯನ್ ಡಾಲರ್ ಆಫರ್
ಎರಡನೇ ಮಹಾಯುದ್ಧ ಮುಗಿದ ನಂತರ ಗ್ರೀನ್‌ಲ್ಯಾಂಡ್‌ನ ಭೌಗೋಳಿಕ ಮಹತ್ವ ಅಮೆರಿಕಕ್ಕೆ ಅರಿವಾಯಿತು. ಶೀತಲ ಸಮರದ (Cold War) ಮುನ್ಸೂಚನೆಯಾಗಿ ಅಂದಿನ ಅಧ್ಯಕ್ಷ ಹ್ಯಾರಿ ಟ್ರೂಮನ್ ನೇರ ಪ್ರಸ್ತಾವನೆ ಸಲ್ಲಿಸಿದರು. ಅಮೆರಿಕವು ಡೆನ್ಮಾರ್ಕ್‌ಗೆ ಗ್ರೀನ್‌ಲ್ಯಾಂಡ್ ಹಸ್ತಾಂತರಿಸಲು 100 ಮಿಲಿಯನ್ ಡಾಲರ್ (ಬಂಗಾರದ ರೂಪದಲ್ಲಿ) ನೀಡುವುದಾಗಿ ಅಧಿಕೃತವಾಗಿ ಆಫರ್ ನೀಡಿತು. ಹಣದ ಬದಲಿಗೆ ಅಲಾಸ್ಕಾದ ಕೆಲವು ಆಯಕಟ್ಟಿನ ಭಾಗಗಳನ್ನು ಡೆನ್ಮಾರ್ಕ್‌ಗೆ ವಿನಿಮಯ ಮಾಡಿಕೊಳ್ಳುವ ಮಾತುಕತೆಯೂ ನಡೆದಿತ್ತು. ಡೆನ್ಮಾರ್ಕ್ ಈ ಆಫರ್ ಅನ್ನು ನಯವಾಗಿ ತಿರಸ್ಕರಿಸಿತು. ಆದರೆ, 1951ರಲ್ಲಿ ನಡೆದ ಒಪ್ಪಂದದ ಪ್ರಕಾರ ಗ್ರೀನ್‌ಲ್ಯಾಂಡ್‌ನಲ್ಲಿ ಅಮೆರಿಕ ತನ್ನ ಸೇನಾ ನೆಲೆಯನ್ನು ಸ್ಥಾಪಿಸಲು ಅವಕಾಶ ಪಡೆಯಿತು.
2019: ಡೊನಾಲ್ಡ್ ಟ್ರಂಪ್ ಮತ್ತು 'ರಿಯಲ್ ಎಸ್ಟೇಟ್' ಸಂಚಲನ
2019ರಲ್ಲಿ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು "ಗ್ರೀನ್‌ಲ್ಯಾಂಡ್ ಖರೀದಿಸುವುದು ಒಂದು ದೊಡ್ಡ ರಿಯಲ್ ಎಸ್ಟೇಟ್ ವ್ಯವಹಾರವಿದ್ದಂತೆ" ಎಂದು ಹೇಳುವ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದ್ದರು. ಟ್ರಂಪ್ ಅವರ ಈ ಹೇಳಿಕೆಯನ್ನು ಡೆನ್ಮಾರ್ಕ್ ಪ್ರಧಾನಿ ಮೆಟ್ಟೆ ಫ್ರೆಡೆರಿಕ್‌ಸೆನ್ ಅವರು "ಹಾಸ್ಯಾಸ್ಪದ" (Absurd) ಎಂದು ಕರೆದರು. ಇದರಿಂದ ಕೆರಳಿದ ಟ್ರಂಪ್, ತಮ್ಮ ಡೆನ್ಮಾರ್ಕ್ ಪ್ರವಾಸವನ್ನೇ ರದ್ದುಗೊಳಿಸಿದ್ದರು. ಈ ಬಾರಿ ಅಮೆರಿಕದ ಆಸಕ್ತಿಗೆ ಮುಖ್ಯ ಕಾರಣ ಚೀನಾದ ಹಸ್ತಕ್ಷೇಪ. ಗ್ರೀನ್‌ಲ್ಯಾಂಡ್‌ನ ವಿಮಾನ ನಿಲ್ದಾಣಗಳನ್ನು ಅಭಿವೃದ್ಧಿಪಡಿಸಲು ಚೀನಾ ಮುಂದಾಗಿದ್ದು ಅಮೆರಿಕದ ನಿದ್ದೆಗೆಡಿಸಿತ್ತು.
ನ್ಯಾಟೋ ಭವಿಷ್ಯದ ಮೇಲೆ ಪರಿಣಾಮ
ಒಂದು ವೇಳೆ ಅಮೆರಿಕವು ತನ್ನದೇ ನ್ಯಾಟೋ ಮಿತ್ರ ರಾಷ್ಟ್ರವಾದ ಡೆನ್ಮಾರ್ಕ್ ಮೇಲೆ ಬಲಪ್ರಯೋಗ ಮಾಡಿದರೆ, ಅದು ನ್ಯಾಟೋ ಮೈತ್ರಿಕೂಟದ ಅಂತ್ಯಕ್ಕೆ ನಾಂದಿಯಾಗಬಹುದು. ಹೀಗಾಗಿ ಮಾರ್ಕ್ ರುಟ್ಟೆ ಅವರು ಸಂಧಾನಕಾರರಾಗಿ ಮಧ್ಯಪ್ರವೇಶಿಸಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಪ್ರಯತ್ನಿಸುತ್ತಿದ್ದಾರೆ.

