
ಯುರೋಪ್ ಮೇಲಿನ ಟ್ರಂಪ್ ಸುಂಕ ರದ್ದು; ಕುಸಿಯಲಿದೆಯೇ ಚಿನ್ನ-ಬೆಳ್ಳಿ ಬೆಲೆ?
ದಾವೋಸ್ WEF ಶೃಂಗಸಭೆಯಲ್ಲಿ ಅಮೆರಿಕ ಅಧ್ಯಕ್ಷ ಟ್ರಂಪ್ ಯುರೋಪ್ ಮೇಲಿನ ಸುಂಕ ರದ್ದುಗೊಳಿಸುವ ಮೂಲಕ ಜಾಗತಿಕ ಮಾರುಕಟ್ಟೆಗೆ ನಿರಾಳತೆ ನೀಡಿದ್ದಾರೆ.
ವಿಶ್ವ ಆರ್ಥಿಕ ವೇದಿಕೆಯ (WEF) ಶೃಂಗಸಭೆಯ ನಡುವೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಯುರೋಪಿಯನ್ ರಾಷ್ಟ್ರಗಳ ಮೇಲೆ ಹೇರಲುದ್ದೇಶಿಸಿದ್ದ ಸುಂಕದ ಎಚ್ಚರಿಕೆಯನ್ನು ಹಿಂಪಡೆಯುವ ಮೂಲಕ ಜಾಗತಿಕ ಮಾರುಕಟ್ಟೆಗೆ ದೊಡ್ಡ ಸಮಾಧಾನ ನೀಡಿದ್ದಾರೆ. ನ್ಯಾಟೋ (NATO) ಮುಖ್ಯಸ್ಥ ಮಾರ್ಕ್ ರಟ್ಟೆ ಅವರೊಂದಿಗೆ ನಡೆಸಿದ ಸಭೆಯ ನಂತರ, ಆರ್ಕ್ಟಿಕ್ ಮತ್ತು ಗ್ರೀನ್‌ಲ್ಯಾಂಡ್ ಭದ್ರತೆಗೆ ಸಂಬಂಧಿಸಿದಂತೆ "ಶಾಶ್ವತ ಒಪ್ಪಂದ"ವೊಂದಕ್ಕೆ ಚೌಕಟ್ಟು ಸಿದ್ಧಪಡಿಸಲಾಗಿದೆ ಎಂದು ತಿಳಿಸಿರುವ ಟ್ರಂಪ್, ಫೆಬ್ರವರಿ 1ರಿಂದ ಜಾರಿಗೆ ಬರಬೇಕಿದ್ದ ಸುಂಕಗಳನ್ನು ರದ್ದುಗೊಳಿಸಿದ್ದಾರೆ. ಈ ಸುದ್ದಿಯಿಂದಾಗಿ ಅಮೆರಿಕದ ಷೇರು ಮಾರುಕಟ್ಟೆಗಳು ಪುಟಿದೆದ್ದಿದ್ದು, ಭಾರತದ ಸೆನ್ಸೆಕ್ಸ್ ಮತ್ತು ನಿಫ್ಟಿ ಕೂಡ ಇಂದು ಏರಿಕೆ ಕಾಣುವ ನಿರೀಕ್ಷೆಯಿದೆ.
ನ್ಯಾಟೋ ಮುಖ್ಯಸ್ಥರೊಂದಿಗೆ ಟ್ರಂಪ್ ಮಾಡಿಕೊಂಡಿರುವ 'ಆರ್ಕ್ಟಿಕ್ ಫ್ರೇಮ್‌ವರ್ಕ್' ಒಪ್ಪಂದದಿಂದಾಗಿ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಡಾಲರ್ ಮೌಲ್ಯ ಬಲಗೊಳ್ಳುವ ಸಾಧ್ಯತೆ ಇದೆ. ಮತ್ತೊಂದೆಡೆ ಚಿನ್ನ ಮತ್ತು ಬೆಳ್ಳಿ ದರಗಳೂ ಇಳಿಕೆಯಾಗುವ ಸಾಧ್ಯತೆ ಇದೆ.
ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ಕುಸಿತ?
ಟ್ರಂಪ್ ಅವರ ಈ ನಿರ್ಧಾರದಿಂದ ಜಾಗತಿಕವಾಗಿ ವ್ಯಾಪಾರ ಸಮರದ ಭೀತಿ ಕಡಿಮೆಯಾಗಿದೆ. ಯುರೋಪ್ ಒಕ್ಕೂಟವು ಅಮೆರಿಕದ ವಿರುದ್ಧ ಬಳಸಲು ಸಿದ್ಧಪಡಿಸಿದ್ದ 'ಟ್ರೇಡ್ ಬಜೂಕಾ' ಅಸ್ತ್ರವನ್ನು ಸದ್ಯಕ್ಕೆ ಕೈಬಿಟ್ಟಿದೆ. ಇದರ ಪರಿಣಾಮವಾಗಿ ಸುರಕ್ಷಿತ ಹೂಡಿಕೆಯಾದ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಇಂದು ಕುಸಿತ ಕಂಡುಬರುವ ಸಾಧ್ಯತೆಯಿದೆ. ಭಾರತದ ಹೂಡಿಕೆದಾರರು ಕೂಡ ಟ್ರಂಪ್ ಮತ್ತು ಪ್ರಧಾನಿ ಮೋದಿ ನಡುವಿನ ಉತ್ತಮ ಸಂಬಂಧ ಹಾಗೂ ಸಂಭವನೀಯ ಭಾರತ-ಅಮೆರಿಕ ವ್ಯಾಪಾರ ಒಪ್ಪಂದದ ನಿರೀಕ್ಷೆಯಲ್ಲಿದ್ದು, ಮಾರುಕಟ್ಟೆಯಲ್ಲಿ ಸಕಾರಾತ್ಮಕ ವಾತಾವರಣ ನಿರ್ಮಾಣವಾಗಿದೆ.
ಬೆಲೆ ಕುಸಿತಕ್ಕೆ ಕಾರಣಗಳು
ಭೌಗೋಳಿಕ ರಾಜಕೀಯ ಶಾಂತಿ: ಯುರೋಪ್ ಮತ್ತು ಅಮೆರಿಕ ನಡುವಿನ ವ್ಯಾಪಾರ ಸಮರದ ಭೀತಿ ದೂರವಾಗಿರುವುದು ಹೂಡಿಕೆದಾರರಲ್ಲಿ ವಿಶ್ವಾಸ ಮೂಡಿಸಿದೆ.
ಡಾಲರ್ ಮೌಲ್ಯ: ಟ್ರಂಪ್ ಅವರ ಆರ್ಥಿಕ ಸುಧಾರಣೆಗಳ ನಿರ್ಧಾರದಿಂದ ಅಮೆರಿಕನ್ ಡಾಲರ್ ಬಲಗೊಂಡರೆ, ಚಿನ್ನದ ಬೆಲೆಯಲ್ಲಿ ಇಳಿಕೆ ಕಂಡುಬರುವುದು ಸಹಜ.
ಷೇರು ಮಾರುಕಟ್ಟೆ ಚೇತರಿಕೆ: ಸುಂಕ ರದ್ಧತಿಯಿಂದಾಗಿ ಜಾಗತಿಕ ಷೇರು ಮಾರುಕಟ್ಟೆಗಳು ಏರಿಕೆ ಕಾಣುವ ನಿರೀಕ್ಷೆಯಿದ್ದು, ಹೂಡಿಕೆದಾರರು ಚಿನ್ನದಿಂದ ಷೇರುಗಳತ್ತ ಹಣ ವರ್ಗಾಯಿಸಬಹುದು.
ಹೀಗಾಗಿ, ಇಂದು ಮತ್ತು ಮುಂಬರುವ ದಿನಗಳಲ್ಲಿ ಚಿನ್ನ ಮತ್ತು ಬೆಳ್ಳಿಯ ಬೆಲೆಯಲ್ಲಿ ಸ್ವಲ್ಪ ಮಟ್ಟದ ಕುಸಿತ ಅಥವಾ ಸ್ಥಿರತೆ ಕಂಡುಬರುವ ಸಾಧ್ಯತೆಯಿದೆ ಎಂದು ಮಾರುಕಟ್ಟೆ ತಜ್ಞರು ಅಂದಾಜಿಸಿದ್ದಾರೆ.
ನಮಗೆ ಸಂಬಂಧವಿಲ್ಲ ಎಂದ ಪುಟಿನ್
ಇದೇ ವೇಳೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರು ಗ್ರೀನ್‌ಲ್ಯಾಂಡ್ ವಿವಾದದಿಂದ ದೂರ ಉಳಿದಿದ್ದಾರೆ. "ಗ್ರೀನ್‌ಲ್ಯಾಂಡ್‌ನಲ್ಲಿ ಏನಾಗುತ್ತದೆ ಎಂಬುದು ನಮಗೆ ಸಂಬಂಧವಿಲ್ಲದ ವಿಚಾರ, ಅದು ಅವರವರ ಒಳಜಗಳ" ಎಂದು ಪುಟಿನ್ ಲೇವಡಿ ಮಾಡಿದ್ದಾರೆ. 1867ರಲ್ಲಿ ರಷ್ಯಾವು ಅಲಾಸ್ಕಾವನ್ನು ಅಮೆರಿಕಕ್ಕೆ ಕೇವಲ 7.2 ಮಿಲಿಯನ್ ಡಾಲರ್‌ಗೆ ಮಾರಾಟ ಮಾಡಿದ್ದನ್ನು ನೆನಪಿಸಿದ ಅವರು, ಡೆನ್ಮಾರ್ಕ್ ಈ ಹಿಂದೆ ಗ್ರೀನ್‌ಲ್ಯಾಂಡ್ ಅನ್ನು 'ವಸಾಹತು'ವಿನಂತೆ ಕ್ರೂರವಾಗಿ ನಡೆಸಿಕೊಂಡಿದೆ ಎಂದು ಟೀಕಿಸಿದ್ದಾರೆ.
ಅಮೆರಿಕವು ಗ್ರೀನ್‌ಲ್ಯಾಂಡ್ ಅನ್ನು ಖರೀದಿಸುವ ಶಕ್ತಿಯನ್ನು ಹೊಂದಿದೆ ಎಂದು ಅಭಿಪ್ರಾಯಪಟ್ಟಿರುವ ಅವರು, ಇದರಲ್ಲಿ ರಷ್ಯಾದ ಯಾವುದೇ ಹಿತಾಸಕ್ತಿ ಇಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

