Protest at Delhi AI Summit: You are already naked, Modi tells Congress
x

ಪ್ರಧಾನಮಂತ್ರಿ ನರೇಂದ್ರ ಮೋದಿ 

ದೆಹಲಿ ಎಐ ಶೃಂಗಸಭೆಯಲ್ಲಿನ ಪ್ರತಿಭಟನೆ: 'ನೀವು ಈಗಾಗಲೇ ಬೆತ್ತಲಾಗಿದ್ದೀರಿ' ಎಂದು ಕಾಂಗ್ರೆಸ್​​ಗೆ ತಿವಿದ ಮೋದಿ

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಜೆಗಳು ಹಗಲಿರುಳು ಶ್ರಮಿಸುತ್ತಿದ್ದರೆ, ಕೆಲವು ರಾಜಕೀಯ ಪಕ್ಷಗಳಿಗೆ ದೇಶದ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ.


Click the Play button to hear this message in audio format

ದೆಹಲಿಯಲ್ಲಿ ನಡೆದ 'ಎಐ ಇಂಪ್ಯಾಕ್ಟ್ ಶೃಂಗಸಭೆ'ಯಲ್ಲಿ ಕಾಂಗ್ರೆಸ್ ನಾಯಕರು ನಡೆಸಿದ 'ಶರ್ಟ್‌ಲೆಸ್' (ಅರೆಬೆತ್ತಲೆ) ಪ್ರತಿಭಟನೆಯನ್ನು ಪ್ರಧಾನಿ ನರೇಂದ್ರ ಮೋದಿ ತೀವ್ರವಾಗಿ ಖಂಡಿಸಿದ್ದಾರೆ. ಭಾನುವಾರ (ಫೆಬ್ರವರಿ 22) ಉತ್ತರ ಪ್ರದೇಶದ ಮೀರತ್‌ನಲ್ಲಿ ನಮೋ ಭಾರತ್ ರೈಲು ಮತ್ತು ಮೀರತ್ ಮೆಟ್ರೋ ರೈಲು ವಿಸ್ತರಣೆ ಯೋಜನೆಗಳಿಗೆ ಚಾಲನೆ ನೀಡಿದ ಬಳಿಕ ಸಾರ್ವಜನಿಕ ರ್‍ಯಾಲಿಯನ್ನುದ್ದೇಶಿಸಿ ಮಾತನಾಡಿದ ಅವರು, ಅಂತರರಾಷ್ಟ್ರೀಯ ಮಟ್ಟದ ಕಾರ್ಯಕ್ರಮವನ್ನು ಕಾಂಗ್ರೆಸ್ ತನ್ನ 'ಕೊಳಕು ಮತ್ತು ಬೆತ್ತಲೆ' ರಾಜಕೀಯದ ಅಖಾಡವಾಗಿ ಪರಿವರ್ತಿಸಿದೆ ಎಂದು ತೀವ್ರ ವಾಗ್ದಾಳಿ ನಡೆಸಿದ್ದಾರೆ.

ದೇಶವನ್ನು ಅಭಿವೃದ್ಧಿಯತ್ತ ಕೊಂಡೊಯ್ಯಲು ಪ್ರಜೆಗಳು ಹಗಲಿರುಳು ಶ್ರಮಿಸುತ್ತಿದ್ದರೆ, ಕೆಲವು ರಾಜಕೀಯ ಪಕ್ಷಗಳಿಗೆ ದೇಶದ ಯಶಸ್ಸನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ ಎಂದು ಪ್ರಧಾನಿ ಮೋದಿ ಕಿಡಿಕಾರಿದ್ದಾರೆ. ಕಾಂಗ್ರೆಸ್‌ನ ಇಂತಹ ಕೃತ್ಯಗಳು ಆ ಪಕ್ಷವು ಸೈದ್ಧಾಂತಿಕವಾಗಿ ಎಷ್ಟು ದಿವಾಳಿಯಾಗಿದೆ ಮತ್ತು ಕೀಳುಮಟ್ಟಕ್ಕೆ ಇಳಿದಿದೆ ಎಂಬುದನ್ನು ಸ್ಪಷ್ಟವಾಗಿ ತೋರಿಸುತ್ತದೆ. ದೇಶವನ್ನು ದೂಷಿಸುವುದೇ ಅವರ ಕಾಯಕವಾಗಿದೆ. ಲಗಾಮಿಲ್ಲದ ಮತ್ತು ಅತಿರೇಕದ ವರ್ತನೆ ತೋರುತ್ತಿರುವ ಕಾಂಗ್ರೆಸ್ ನಾಯಕರು ದೇಶವನ್ನು ನಾಶಮಾಡಲು ಹೊರಟಿದ್ದಾರೆ ಎಂದು ಅವರು ಗಂಭೀರ ಆರೋಪ ಮಾಡಿದ್ದಾರೆ.

ಜಾಗತಿಕ ಕಾರ್ಯಕ್ರಮದಲ್ಲಿ 'ಬೆತ್ತಲೆ' ರಾಜಕೀಯ

ದೆಹಲಿಯಲ್ಲಿ ನಡೆದ ಕೃತಕ ಬುದ್ಧಿಮತ್ತೆ (AI) ಶೃಂಗಸಭೆಯಲ್ಲಿ 80ಕ್ಕೂ ಹೆಚ್ಚು ದೇಶಗಳ ಪ್ರತಿನಿಧಿಗಳು ಹಾಗೂ 20 ರಾಷ್ಟ್ರಗಳ ಮುಖ್ಯಸ್ಥರು ಭಾಗವಹಿಸಿದ್ದು ದೇಶಕ್ಕೆ ಹೆಮ್ಮೆಯ ವಿಷಯವಾಗಿತ್ತು. ಆದರೆ, ಕಾಂಗ್ರೆಸ್ ಮತ್ತು ಅದರ ಬೆಂಬಲಿಗರು ಭಾರತದ ಜಾಗತಿಕ ಕಾರ್ಯಕ್ರಮವನ್ನು ತಮ್ಮ ನಾಚಿಕೆಗೇಡಿನ ರಾಜಕೀಯ ಅಖಾಡವನ್ನಾಗಿ ಮಾಡಿಕೊಂಡರು ಎಂದು ಮೋದಿ ಟೀಕಿಸಿದ್ದಾರೆ. ವಿದೇಶಿ ಅತಿಥಿಗಳೆದುರು ಬಟ್ಟೆ ಬಿಚ್ಚಿ ಪ್ರತಿಭಟಿಸಿದ ನಾಯಕರನ್ನುದ್ದೇಶಿಸಿ ಮಾತನಾಡಿದ ಅವರು, "ನೀವು ಈಗಾಗಲೇ 'ಬೆತ್ತಲಾಗಿದ್ದೀರಿ' ಎಂಬುದು ಇಡೀ ದೇಶಕ್ಕೆ ತಿಳಿದಿದೆ. ಹೀಗಿರುವಾಗ, ಮತ್ತಷ್ಟು ಬಟ್ಟೆ ಬಿಚ್ಚಿ ಪ್ರದರ್ಶನ ಮಾಡುವ ಅಗತ್ಯವೇನಿತ್ತು?" ಎಂದು ಕಟುವಾಗಿ ಪ್ರಶ್ನಿಸಿದ್ದಾರೆ.

ದೇಶದ ವರ್ಚಸ್ಸಿಗೆ ಧಕ್ಕೆ, ವಿಪಕ್ಷಗಳ ಪ್ರಶಂಸೆ

ಕಾಂಗ್ರೆಸ್ ನಾಯಕರು ನನ್ನನ್ನು ದ್ವೇಷಿಸುತ್ತಾರೆ ಮತ್ತು ನನ್ನ ಸಮಾಧಿ ತೋಡಲು ಬಯಸುತ್ತಾರೆ. ಅವರು ನನ್ನ ತಾಯಿಯನ್ನು ನಿಂದಿಸಲು ಕೂಡ ಹಿಂಜರಿಯುವುದಿಲ್ಲ. ಅವರು ಬಿಜೆಪಿ ಮತ್ತು ಎನ್‌ಡಿಎ ಮೈತ್ರಿಕೂಟವನ್ನು ವಿರೋಧಿಸುವುದನ್ನು ನಾವು ರಾಜಕೀಯವಾಗಿ ಸಹಿಸಿಕೊಳ್ಳಬಹುದು. ಆದರೆ ಜಾಗತಿಕ ಶೃಂಗಸಭೆಯು ಬಿಜೆಪಿಯ ಕಾರ್ಯಕ್ರಮವಾಗಿರಲಿಲ್ಲ, ಅದು ದೇಶದ ಕಾರ್ಯಕ್ರಮವಾಗಿತ್ತು ಎಂಬುದನ್ನು ಕಾಂಗ್ರೆಸ್ ಮರೆಯಬಾರದಿತ್ತು ಎಂದು ಮೋದಿ ಬೇಸರ ವ್ಯಕ್ತಪಡಿಸಿದ್ದಾರೆ. ಆದರೆ, ತೃಣಮೂಲ ಕಾಂಗ್ರೆಸ್ , ಡಿಎಂಕೆ ಬಹುಜನ ಸಮಾಜ ಪಕ್ಷ ಮತ್ತು ನ್ಯಾಷನಲ್ ಕಾನ್ಫರೆನ್ಸ್‌ನಂತಹ ಇತರ ವಿರೋಧ ಪಕ್ಷಗಳು ಈ ಪ್ರತಿಭಟನೆಯಲ್ಲಿ ಭಾಗಿಯಾಗಿಲ್ಲ. ಸತ್ಯ ಮತ್ತು ರಾಷ್ಟ್ರೀಯ ಹೆಮ್ಮೆಯ ಪರವಾಗಿ ನಿಂತು ಕಾಂಗ್ರೆಸ್ ಕೃತ್ಯವನ್ನು ಖಂಡಿಸಿದ ಈ ಪಕ್ಷಗಳ ನಿಲುವಿಗೆ ಪ್ರಧಾನಿ ಕೃತಜ್ಞತೆ ಸಲ್ಲಿಸಿದ್ದಾರೆ.

ಪ್ರಧಾನಿ ಕುರ್ಚಿಗಾಗಿ ಸಂಸತ್ತಿನಲ್ಲಿ ರಂಪಾಟ

ಕಳೆದ ಫೆಬ್ರವರಿ 4ರಂದು ಬಜೆಟ್ ಅಧಿವೇಶನದಲ್ಲಿ ಮಹಿಳಾ ಸಂಸದರು ಬ್ಯಾನರ್‌ಗಳನ್ನು ಹಿಡಿದು ಲೋಕಸಭೆಯಲ್ಲಿ ಪ್ರಧಾನಿ ಆಸನದತ್ತ ನುಗ್ಗಿ ಕಲಾಪ ಮುಂದೂಡುವಂತೆ ಮಾಡಿದ ಘಟನೆಯನ್ನೂ ಮೋದಿ ಪ್ರಸ್ತಾಪಿಸಿದ್ದಾರೆ. ಪ್ರಧಾನಿ ಹುದ್ದೆಗೇರಲು ಮೊದಲು ಜನರ ಹೃದಯ ಗೆಲ್ಲಬೇಕು, ಮಹಿಳಾ ಸಂಸದರನ್ನು ಕಳುಹಿಸಿ ಕುರ್ಚಿಗಳನ್ನು ಆಕ್ರಮಿಸಿಕೊಳ್ಳುವುದರಿಂದ ಪ್ರಧಾನಿಯಾಗಲು ಸಾಧ್ಯವಿಲ್ಲ ಎಂದು ಅವರು ತಿರುಗೇಟು ನೀಡಿದ್ದಾರೆ. ತಾಯಂದಿರು ಮತ್ತು ಸಹೋದರಿಯರನ್ನು ಈ ರೀತಿ ಮುಂದೆ ತಳ್ಳುವ ನಿಮ್ಮ ಅನಿವಾರ್ಯತೆ ಏನು, ನೀವು ಅಷ್ಟೊಂದು ಟೊಳ್ಳಾಗಿದ್ದೀರಾ ಎಂದು ಕಿಡಿಕಾರಿರುವ ಅವರು, ಸಂಸತ್ತಿನಲ್ಲಿ ಕಲಾಪ ನಡೆಯಲು ಬಿಡದ ಕಾಂಗ್ರೆಸ್ ಇದೀಗ ದೇಶಕ್ಕೊಂದು ಹೊರೆಯಾಗಿ ಪರಿಣಮಿಸಿದೆ ಎಂದು ಟೀಕಿಸಿದ್ದಾರೆ.

Read More
Next Story