Former Assam Congress president Bhupen Bora joins BJP ahead of assembly elections
x

ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ ಸೇರ್ಪಡೆಯಾದರು. 

ವಿಧಾನಸಭೆ ಚುನಾವಣೆಗೂ ಮುನ್ನ ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಭೂಪೇನ್ ಬೋರಾ ಬಿಜೆಪಿಗೆ

ಭೂಪೇನ್ ಬೋರಾ ಜೊತೆಗೆ, ಮಾಜಿ ಕಾಂಗ್ರೆಸ್ ನಾಯಕರಾದ ಸಂಜು ಬೋರಾ, ರಾಜೇಶ್ ಕುಮಾರ್ ಜೋಶಿ, ಕಂಗಕನ್ ದಾಸ್ ಹಾಗೂ ಗಗನ್ ಚಂದ್ರ ಬೋರಾ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಕಾರ್ಯಕರ್ತರು ಕೂಡ ಬಿಜೆಪಿ ಪ್ರವೇಶ ಮಾಡಿದ್ದಾರೆ.


Click the Play button to hear this message in audio format

ಅಸ್ಸಾಂ ಕಾಂಗ್ರೆಸ್‌ನ ಮಾಜಿ ಅಧ್ಯಕ್ಷ ಮತ್ತು ಹಿರಿಯ ನಾಯಕ ಭೂಪೇನ್ ಕುಮಾರ್ ಬೋರಾ ಪಕ್ಷ ತೊರೆದ ಕೆಲವೇ ದಿನಗಳ ಬಳಿಕ ಭಾನುವಾರ (ಫೆ. 22) ಆಡಳಿತ ಪಕ್ಷ ಬಿಜೆಪಿ ಸೇರ್ಪಡೆಯಾಗಿದ್ದಾರೆ. ರಾಜ್ಯ ಬಿಜೆಪಿ ಅಧ್ಯಕ್ಷ ದಿಲೀಪ್ ಸೈಕಿಯಾ ಅವರ ಉಪಸ್ಥಿತಿಯಲ್ಲಿ, ಬಿಜೆಪಿಯ ರಾಜ್ಯ ಕಚೇರಿ 'ವಾಜಪೇಯಿ ಭವನ'ದಲ್ಲಿ ನಡೆದ ವಿಶೇಷ ಕಾರ್ಯಕ್ರಮದಲ್ಲಿ ಅವರು ಅಧಿಕೃತವಾಗಿ ಬಿಜೆಪಿ ಸದಸ್ಯತ್ವ ಪಡೆದರು. ಮಾರ್ಚ್-ಏಪ್ರಿಲ್‌ನಲ್ಲಿ ನಡೆಯಲಿರುವ 126 ಸ್ಥಾನಗಳ ಅಸ್ಸಾಂ ವಿಧಾನಸಭೆ ಚುನಾವಣೆಗೂ ಮುನ್ನ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಮಹತ್ವದ ತಿರುವು ಮೂಡಿಸಿದೆ.

ಭೂಪೇನ್ ಬೋರಾ ಜೊತೆಗೆ, ಮಾಜಿ ಕಾಂಗ್ರೆಸ್ ನಾಯಕರಾದ ಸಂಜು ಬೋರಾ, ರಾಜೇಶ್ ಕುಮಾರ್ ಜೋಶಿ, ಕಂಗಕನ್ ದಾಸ್ ಹಾಗೂ ಗಗನ್ ಚಂದ್ರ ಬೋರಾ ಸೇರಿದಂತೆ ಒಂದು ಡಜನ್‌ಗೂ ಹೆಚ್ಚು ಕಾರ್ಯಕರ್ತರು ಕೂಡ ಬಿಜೆಪಿ ಪ್ರವೇಶ ಮಾಡಿದ್ದಾರೆ. ಈ ಮೂಲಕ, ಅಸ್ಸಾಂ ಕಾಂಗ್ರೆಸ್‌ನ ಒಂದು ಪ್ರಮುಖ ಬಣಕ್ಕೆ ಸೇರಿದ ನಾಯಕರು ಏಕಕಾಲಕ್ಕೆ ಆಡಳಿತ ಪಕ್ಷ ಸೇರ್ಪಡೆಯಾದ ಈ ಬೆಳವಣಿಗೆ, ಚುನಾವಣಾ ಪೂರ್ವ ಸನ್ನಿವೇಶದಲ್ಲಿ ಕಾಂಗ್ರೆಸ್​​ಗೆ ಹಿನ್ನಡೆ ಎಂದು ಹೇಳಲಾಗುತ್ತಿದೆ.

ಬೋರಾ ರಾಜೀನಾಮೆ ಮತ್ತು ರಾಜಕೀಯ ಬೆಳವಣಿಗೆಗಳು

ಭೂಪೇನ್ ಬೋರಾ ಅವರು ಫೆಬ್ರವರಿ 16ರಂದು ಕಾಂಗ್ರೆಸ್‌ನಿಂದ ರಾಜೀನಾಮೆ ನೀಡಿದ್ದರು. ಆರಂಭದಲ್ಲಿ ಕಾಂಗ್ರೆಸ್ ಹೈಕಮಾಂಡ್ ಅವರ ರಾಜೀನಾಮೆ ಸ್ವೀಕರಿಸದೆ, ಹಿರಿಯ ನಾಯಕರನ್ನು ಅವರ ಮನೆಗೆ ಕಳುಹಿಸಿ ಮನವೊಲಿಸಲು ಯತ್ನಿಸಿತ್ತು. ರಾಹುಲ್ ಗಾಂಧಿ (Rahul Gandhi) ಕೂಡ ಬೋರಾ ಅವರೊಂದಿಗೆ ನೇರ ಮಾತನಾಡಿದ್ದರು ಎಂದು ಹೇಳಲಾಗಿದೆ. ಆದರೆ, ಮರುದಿನ ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ (Himanta Biswa Sarma) ಅವರೇ ಬೋರಾ ಅವರ ನಿವಾಸಕ್ಕೆ ಭೇಟಿ ನೀಡಿ, ಅವರು ಫೆಬ್ರವರಿ 22ರಂದು ಬಿಜೆಪಿ ಸೇರ್ಪಡೆಯಾಗಲಿದ್ದಾರೆ ಎಂದು ಘೋಷಿಸಿಬಿಟ್ಟಿದ್ದರು.

ಬೋರಾ ಅವರ ನೋವು ಮತ್ತು ಆತ್ಮಾವಲೋಕನದ ಕರೆ

ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿದ ಬೋರಾ, "ಕಾಂಗ್ರೆಸ್ ತೊರೆದ ಬಳಿಕ ಬಿಜೆಪಿ ಸೇರಬೇಕೆಂದು ನಿರ್ಧರಿಸಿ ರಾಜೀನಾಮೆ ನೀಡಿರಲಿಲ್ಲ. ಕಾಂಗ್ರೆಸ್‌ನಲ್ಲಿನ ತಪ್ಪುಗಳ ಬಗ್ಗೆ ಒಂದು ಆತ್ಮಾವಲೋಕನ ನಡೆಯಬೇಕು, ಅವನ್ನು ಸರಿಪಡಿಸುವ ಭರವಸೆ ಸಿಗಬೇಕು ಎಂಬ ಆಶಯದಿಂದ ರಾಜೀನಾಮೆ ನೀಡಿದ್ದೆ. ಕಾಂಗ್ರೆಸ್ ಕೂಡ ಅಸ್ಸಾಮಿ ಸಮುದಾಯದ ಭಾವನೆಗಳನ್ನು ಘಾಸಿಗೊಳಿಸಿದೆ. 32 ವರ್ಷಗಳ ಕಾಲ ಸಿದ್ಧಾಂತ, ಆತ್ಮಸಾಕ್ಷಿ ಮತ್ತು ದೇಶಭಕ್ತಿಯ ಹಿನ್ನೆಲೆಯಲ್ಲಿ ಕಾಂಗ್ರೆಸ್ ಸೇವೆ ಮಾಡಿದ್ದೇನೆ. ಆದರೆ ಈಗ ನಾನು ನೊಂದಿದ್ದೇನೆ" ಎಂದು ತಮ್ಮ ಭಾವನೆಗಳನ್ನು ಬಿಚ್ಚಿಟ್ಟರು.

ಬೋರಾ ಅವರನ್ನು ಬಿಜೆಪಿ ಕುಟುಂಬಕ್ಕೆ ಸ್ವಾಗತಿಸಿ ಮಾತನಾಡಿದ ಮುಖ್ಯಮಂತ್ರಿ ಶರ್ಮಾ, "32 ವರ್ಷಗಳ ಕಾಲ ಕಾಂಗ್ರೆಸ್‌ಗೆ ಅಪಾರ ಕೊಡುಗೆ ನೀಡಿ ಪಕ್ಷ ತೊರೆದ ಬೋರಾ ಅವರ ಮನಸ್ಸಿನಲ್ಲಿ ಸ್ವಲ್ಪ ವ್ಯಥೆ ಇರಬಹುದು. ಆದರೆ, ಇಂದಿನಿಂದ ಬಿಜೆಪಿಯಲ್ಲಿ ಅವರಿಗೊಂದು ಹೊಸ ಜೀವನ ಆರಂಭವಾಗಲಿದೆ. ಅವರು ಈಗ ಪಕ್ಷದ ಹೆಮ್ಮೆಯ ಸದಸ್ಯ. ಬಿಜೆಪಿ ಕುಟುಂಬ ಅವರನ್ನು ಪ್ರೀತಿ ಮತ್ತು ಗೌರವದಿಂದ ನೋಡಿಕೊಳ್ಳಲಿದೆ" ಎಂದು ಹೇಳಿದರು. ರಾಜ್ಯ ಬಿಜೆಪಿ ಅಧ್ಯಕ್ಷ ಸೈಕಿಯಾ ಕೂಡ ಬೋರಾ ಸೇರಿದಂತೆ ಪಕ್ಷ ಸೇರ್ಪಡೆಯಾದ ಎಲ್ಲ ಕಾಂಗ್ರೆಸ್ ನಾಯಕರಿಗೆ ಸ್ವಾಗತ ಕೋರಿ, "ಪ್ರಧಾನಿ ನರೇಂದ್ರ ಮೋದಿ ಮತ್ತು ಮುಖ್ಯಮಂತ್ರಿ ಹಿಮಂತ ಬಿಸ್ವ ಶರ್ಮಾ ಅವರ ಕಾರ್ಯಗಳಿಂದ ಪ್ರೇರಣೆ ಪಡೆದು ಇವರೆಲ್ಲ ಪಕ್ಷ ಸೇರಿದ್ದಾರೆ. ಬೋರಾ ಅವರ ರಾಜಕೀಯ ಅನುಭವ ಮತ್ತು ಆಡಳಿತ ಸಾಮರ್ಥ್ಯ ಬಿಜೆಪಿಯನ್ನು ಮತ್ತಷ್ಟು ಬಲಗೊಳಿಸಲಿದೆ" ಎಂದು ಆಶಾವಾದ ವ್ಯಕ್ತಪಡಿಸಿದರು.

Read More
Next Story