ಸ್ನೇಹಮಯಿ ಕೃಷ್ಣ ಬಂಧನಕ್ಕೆ ಆಕ್ರೋಶ: ಮುಡಾ ಕೇಸ್‌ ಮುಚ್ಚಿಹಾಕಲು ಸಿಎಂ ಕುಮ್ಮಕ್ಕು ಎಂದ ವಿಜಯೇಂದ್ರ
x

ಸ್ನೇಹಮಯಿ ಕೃಷ್ಣ ಬಂಧನಕ್ಕೆ ಆಕ್ರೋಶ: ಮುಡಾ ಕೇಸ್‌ ಮುಚ್ಚಿಹಾಕಲು ಸಿಎಂ ಕುಮ್ಮಕ್ಕು ಎಂದ ವಿಜಯೇಂದ್ರ

ಮುಡಾ ಹಗರಣದ ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನು ನಕಲಿ ದಾಖಲೆ ಸೃಷ್ಟಿ ಮತ್ತು ಮಾನಹಾನಿ ಆರೋಪದಡಿ ಸಿಸಿಬಿ ಪೊಲೀಸರು ಬಂಧಿಸಿರುವುದನ್ನು ಬಿಜೆಪಿ ಟೀಕಿಸಿದೆ.


Click the Play button to hear this message in audio format

ಮುಡಾ ಹಗರಣ ಸೇರಿದಂತೆ ಸರ್ಕಾರದ ವಿರುದ್ಧ ದನಿ ಎತ್ತಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರ ಬಂಧನವನ್ನು ಬಿಜೆಪಿ ಉಗ್ರವಾಗಿ ಖಂಡಿಸಿದೆ. ಕಾಂಗ್ರೆಸ್ ಸರ್ಕಾರವು ಸೇಡಿನ ರಾಜಕಾರಣ ಮಾಡುತ್ತಿದೆ ಎಂದು ಆರೋಪಿಸಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಸೇರಿದಂತೆ ಪಕ್ಷದ ಪ್ರಮುಖ ನಾಯಕರು, ಸೋಷಿಯಲ್ ಮೀಡಿಯಾ ಮೂಲಕ ಸರ್ಕಾರದ ವಿರುದ್ಧ ಕೆಂಡಕಾರಿದ್ದಾರೆ. ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ದನಿ ಎತ್ತುವವರನ್ನು ಹತ್ತಿಕ್ಕುವ ಪ್ರಯತ್ನ ನಡೆಯುತ್ತಿದೆ ಎಂದು ಬಿಜೆಪಿ ಕರ್ನಾಟಕ ಘಟಕವು ಆಕ್ರೋಶ ಹೊರಹಾಕಿದ್ದು, ಈ ಬಂಧನವು ಪ್ರಜಾಪ್ರಭುತ್ವ ವಿರೋಧಿ ನಡೆ ಎಂದು ಬಣ್ಣಿಸಿದೆ.

ಮುಡಾ ಹಗರಣದ ವಿರುದ್ಧ ಕಾನೂನು ಹೋರಾಟ ನಡೆಸುತ್ತಿದ್ದ ಸ್ನೇಹಮಹಿ ಕೃಷ್ಣ ಅವರು, ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೆಸರಿನಲ್ಲಿ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿದ್ದರು. ಈ ಆಡಿಯೋ ಸಂಬಂಧ ನಕಲಿ ದಾಖಲೆ ಸೃಷ್ಟಿ ಮತ್ತು ಮಾನಹಾನಿಯ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿ ಅವರನ್ನು ಬಂಧಿಸಿದ್ದರು.

ಈ ಬಗ್ಗೆ ಬಿ.ವೈ.ವಿಜಯೇಂದ್ರ ತಮ್ಮ ಎಕ್ಸ್‌ ಖಾತೆಯಲ್ಲಿ ಪೋಸ್ಟ್‌ ಮಾಡಿದ್ದು, "ಕಾಂಗ್ರೆಸ್ ಸರ್ಕಾರವು ಪೊಲೀಸ್ ವ್ಯವಸ್ಥೆಯನ್ನು ನ್ಯಾಯದ ಪರವಾಗಿ ಹೋರಾಡುವವರ ವಿರುದ್ಧ ಬಳಸಿಕೊಳ್ಳುತ್ತಿದೆ. ಮುಡಾ ಲೂಟಿಯ ವಿರುದ್ಧ ದೂರು ನೀಡಿರುವ ಸ್ನೇಹಮಯಿ ಕೃಷ್ಣ ಅವರನ್ನು ಆರೋಪಿತ ಅಧಿಕಾರಿಯ ದೂರಿನ ಮೇರೆಗೆ ಸಿಸಿಬಿ ಪೊಲೀಸರು ಕ್ರಮ ಅನುಸರಿಸದೆ ಬಂಧಿಸಿರುವುದು ಸೇಡು ತೀರಿಸಿಕೊಳ್ಳುವ ದುರುದ್ದೇಶದಿಂದ ಕೂಡಿದೆ. ನ್ಯಾಯಾಲಯದಲ್ಲಿ ವಿಚಾರಣೆ ನಡೆಯುತ್ತಿರುವಾಗಲೇ ಹೊರಗಡೆ ಬಂಧಿಸಿರುವುದು ಪ್ರಜಾಪ್ರಭುತ್ವ ವ್ಯವಸ್ಥೆಯನ್ನು ದಮನ ಮಾಡುವ ನಾಚಿಕೆಗೇಡಿನ ಪರಮಾವಧಿ" ಎಂದಿದ್ದಾರೆ.

ಸಾಮಾಜಿಕ ಜಾಲತಾಣಕ್ಕೆ ಸಂಬಂಧಿಸಿದ ಸಾಮಾನ್ಯ ದೂರುಗಳ ಬಗ್ಗೆ ತಾತ್ಸಾರ ತೋರುವ ಪೊಲೀಸರು, ಈ ಪ್ರಕರಣದಲ್ಲಿ ಸ್ನೇಹಮಯಿ ಕೃಷ್ಣ ಅವರನ್ನು ಕ್ರಿಮಿನಲ್ ಅಥವಾ ಭಯೋತ್ಪಾದಕನಂತೆ ನಡೆಸಿಕೊಂಡಿದ್ದಾರೆ. ಭ್ರಷ್ಟ ವ್ಯವಸ್ಥೆಯನ್ನು ರಕ್ಷಿಸಲು ಮತ್ತು ಸರ್ಕಾರದ ವಿರುದ್ಧ ದನಿ ಎತ್ತುವವರಿಗೆ ಎಚ್ಚರಿಕೆ ನೀಡಲು ಈ ಕುತಂತ್ರ ಮಾಡಲಾಗಿದೆ ಎಂದು ರಾಜ್ಯಾಧ್ಯಕ್ಷರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದೇ ವಿಷಯವಾಗಿ ಟ್ವೀಟ್ ಮಾಡಿರುವ ಬಿಜೆಪಿ ಕರ್ನಾಟಕ ಘಟಕ, ನೇರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿರುದ್ಧ ವಾಗ್ದಾಳಿ ನಡೆಸಿದೆ. "ದೂರುದಾರ ಸ್ನೇಹಮಯಿ ಕೃಷ್ಣ ಅವರನ್ನೇ ಬಂಧಿಸುವ ಮೂಲಕ ಸಿಎಂ ಸಿದ್ದರಾಮಯ್ಯ ಅವರು ಮುಡಾ ಹಗರಣವನ್ನು ಮುಚ್ಚಿಹಾಕುವ ಯತ್ನ ನಡೆಸಿದ್ದಾರೆ," ಎಂದು ಆರೋಪಿಸಿದೆ.

ಸ್ನೇಹಮಯಿ ಕೃಷ್ಣ ಪೋಸ್ಟ್‌

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ವಿಧಾನಸೌಧದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ, "ಸ್ನೇಹಮಯಿ ಕೃಷ್ಣ ಅವರ ಬಂಧನವು ದುರಾಡಳಿತದ ಪರಮಾವಧಿಯಾಗಿದೆ. ಈ ಸರ್ಕಾರ ಕರ್ನಾಟಕದಲ್ಲಿ ತುರ್ತು ಪರಿಸ್ಥಿತಿಯನ್ನುತಂದಿದೆ" ಎಂದು ಆಕ್ರೋಶ ವ್ಯಕ್ತಪಡಿಸಿದರು.

"ಮುಡಾ ಹಗರಣದ ವಿರುದ್ಧ ಸ್ನೇಹಮಯಿ ಕೃಷ್ಣ ಹೋರಾಟ ನಡೆಸಿದ್ದರು. ನಾವು ಕೂಡ ಪಾದಯಾತ್ರೆ ಮಾಡಿದ್ದೆವು. ಇದನ್ನು ಸಹಿಸಲಾಗದ ಸರ್ಕಾರ, ನ್ಯಾಯಕ್ಕಾಗಿ ಹೋರಾಟ ಮಾಡುವವರನ್ನು ನ್ಯಾಯಾಲಯದ ಆವರಣದಿಂದಲೇ ಬಂಧಿಸಿದೆ. ಈ ಸರ್ಕಾರ ಗಾಂಧಿ ಆದರ್ಶಗಳ ವಿರುದ್ಧ ನಡೆದುಕೊಳ್ಳುತ್ತಿದ್ದು, ನ್ಯಾಯದ ಕತ್ತು ಹಿಸುಕುವ ಕೆಲಸ ಮಾಡುತ್ತಿದೆ" ಎಂದು ಅವರು ಕಿಡಿಕಾರಿದರು.

ಪ್ರಕರಣದ ಹಿನ್ನಲೆ

ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ನೀಡಿದ ದೂರಿನ ಮೇರೆಗೆ ಫೆಬ್ರವರಿ 18ರಂದು ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಅನ್ವಯ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮುಖ್ಯವಾಗಿ ಭಾರತೀಯ ನ್ಯಾಯ ಸಂಹಿತೆಯ (BNS) ಮೂರು ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಫೋರ್ಜರಿ ಅಥವಾ ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ಸೆಕ್ಷನ್ BNS 336, ವಂಚನೆಯ ಉದ್ದೇಶದಿಂದ ನಕಲಿ ದಾಖಲೆಗಳನ್ನು ತಯಾರಿಸಿದ್ದಕ್ಕಾಗಿ BNS 335 ಮತ್ತು ಅಧಿಕಾರಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಮಾನಹಾನಿಕರ ದಾಖಲೆಗಳನ್ನು ಬಳಕೆ ಮಾಡಿದ್ದಕ್ಕಾಗಿ BNS 340 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.


Read More
Next Story