ಸಿಸಿಬಿ ಪೊಲೀಸರಿಂದ ತಡರಾತ್ರಿವರೆಗೂ ಸ್ನೇಹಮಯಿ ಕೃಷ್ಣ ವಿಚಾರಣೆ
x
ಸಿಸಿಬಿ ಪೊಲೀಸರ ವಶದಲ್ಲಿರುವ ಸ್ನೇಹಮಯಿ ಕೃಷ್ಣ

ಸಿಸಿಬಿ ಪೊಲೀಸರಿಂದ ತಡರಾತ್ರಿವರೆಗೂ ಸ್ನೇಹಮಯಿ ಕೃಷ್ಣ ವಿಚಾರಣೆ

ನಕಲಿ ದಾಖಲೆ ಸೃಷ್ಟಿ, ಫೋರ್ಜರಿ ಮತ್ತು ಮಾನಹಾನಿಯಂತಹ ಗಂಭೀರ ಆರೋಪಗಳ ಹಿನ್ನೆಲೆಯಲ್ಲಿ ಸಿಸಿಬಿ ಪೊಲೀಸರು ಕೃಷ್ಣ ಅವರನ್ನು ವಶಕ್ಕೆ ಪಡೆದು ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಿದೆ.


ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರ ಹೆಸರಿನಲ್ಲಿ ಸ್ಫೋಟಕ ಆಡಿಯೋ ಬಿಡುಗಡೆ ಮಾಡಿ ಸಂಚಲನ ಮೂಡಿಸಿದ್ದ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ಅವರಿಗೆ ಈಗ ಕಾನೂನಿನ ಸಂಕಷ್ಟ ಎದುರಾಗಿದೆ. ನಕಲಿ ದಾಖಲೆ ಸೃಷ್ಟಿ ಮತ್ತು ಮಾನಹಾನಿಯ ಆರೋಪದ ಮೇಲೆ ಬೆಂಗಳೂರಿನ ಸಿಸಿಬಿ ಪೊಲೀಸರು ಎಫ್‌ಐಆರ್ ದಾಖಲಿಸಿ ಅವರನ್ನು ವಶಕ್ಕೆ ಪಡೆದಿದ್ದು, ಡಿಸಿಪಿ ಖಾಸಿಂ ನೇತೃತ್ವದಲ್ಲಿ ತಡರಾತ್ರಿಯವರೆಗೂ ಸುದೀರ್ಘ ವಿಚಾರಣೆ ನಡೆಸಲಾಗಿದೆ.

ಸಿಸಿಬಿ ತನಿಖೆ ಮತ್ತು ವಿಚಾರಣೆ

ಬೆಂಗಳೂರು ಸಿಸಿಬಿ ಡಿಸಿಪಿ ಖಾಸಿಂ ನೇತೃತ್ವದ ತಂಡವು ಸ್ನೇಹಮಯಿ ಕೃಷ್ಣ ಅವರನ್ನು ವಶಕ್ಕೆ ಪಡೆದು ಸೈಬರ್ ಕ್ರೈಂ ಠಾಣೆಯಲ್ಲಿ ರಾತ್ರಿಯಿಡೀ ವಿಚಾರಣೆ ನಡೆಸಿದೆ. ನಟೇಶ್ ಅವರ ಫೋಟೋಗಳನ್ನು ಬಳಸಿ ನಕಲಿ ಆಡಿಯೋ ಮತ್ತು ದಾಖಲೆಗಳನ್ನು ಸೃಷ್ಟಿಸಿ, ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳುವ ಮೂಲಕ ಅಧಿಕಾರಿಯ ವ್ಯಕ್ತಿತ್ವಕ್ಕೆ ಧಕ್ಕೆ ತಂದಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ.

ಪ್ರಕರಣದ ಹಿನ್ನೆಲೆ ಮತ್ತು ಎಫ್‌ಐಆರ್

ಮುಡಾ ಮಾಜಿ ಆಯುಕ್ತ ಡಿ.ಬಿ. ನಟೇಶ್ ಅವರು ನೀಡಿದ ದೂರಿನ ಮೇರೆಗೆ ಫೆಬ್ರವರಿ 18ರಂದು ಬೆಂಗಳೂರು ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಅದರ ಅನ್ವಯ ಸಾಮಾಜಿಕ ಕಾರ್ಯಕರ್ತ ಸ್ನೇಹಮಯಿ ಕೃಷ್ಣ ವಿರುದ್ಧ ಮುಖ್ಯವಾಗಿ ಭಾರತೀಯ ನ್ಯಾಯ ಸಂಹಿತೆಯ (BNS) ಮೂರು ಪ್ರಮುಖ ಸೆಕ್ಷನ್‌ಗಳ ಅಡಿಯಲ್ಲಿ ಕೇಸ್ ದಾಖಲಿಸಲಾಗಿದೆ. ಫೋರ್ಜರಿ ಅಥವಾ ನಕಲಿ ದಾಖಲೆ ಸೃಷ್ಟಿಗೆ ಸಂಬಂಧಿಸಿದ ಸೆಕ್ಷನ್ BNS 336, ವಂಚನೆಯ ಉದ್ದೇಶದಿಂದ ನಕಲಿ ದಾಖಲೆಗಳನ್ನು ತಯಾರಿಸಿದ್ದಕ್ಕಾಗಿ BNS 335 ಮತ್ತು ಅಧಿಕಾರಿಯ ವ್ಯಕ್ತಿತ್ವಕ್ಕೆ ಧಕ್ಕೆ ತರುವಂತಹ ಮಾನಹಾನಿಕರ ದಾಖಲೆಗಳನ್ನು ಬಳಕೆ ಮಾಡಿದ್ದಕ್ಕಾಗಿ BNS 340 ಅಡಿಯಲ್ಲಿ ಎಫ್‌ಐಆರ್ ದಾಖಲಿಸಿ ಸಿಸಿಬಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಆರೋಪಕ್ಕೆ ಬದ್ಧ ಎಂದ ಸ್ನೇಹಮಯಿ ಕೃಷ್ಣ

ವಿಚಾರಣೆಯ ವೇಳೆ ಸ್ನೇಹಮಯಿ ಕೃಷ್ಣ ಅವರು ತಾನು ಮಾಡಿರುವ ಆರೋಪಗಳಿಗೆ ಬದ್ಧನಾಗಿದ್ದೇನೆ ಎಂದು ಹೇಳಿದ್ದಾರೆ. ಸೋಷಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿರುವ ಆಡಿಯೋದಲ್ಲಿ ಇರುವುದು ಅಧಿಕಾರಿ ನಟೇಶ್ ಅವರ ಧ್ವನಿಯೇ ಎಂದು ಅವರು ಪ್ರತಿಪಾದಿಸುತ್ತಿದ್ದಾರೆ. ಸದ್ಯ ಸಿಸಿಬಿ ಪೊಲೀಸರು ಆಡಿಯೋದಲ್ಲಿದ್ದ ಮತ್ತೋರ್ವ ವ್ಯಕ್ತಿ (ಮೈಸೂರು ಮೂಲದವರು ಎನ್ನಲಾದ) ನನ್ನು ಪತ್ತೆಹಚ್ಚಿ ವಿಚಾರಣೆಗೆ ಒಳಪಡಿಸಲು ಸಿದ್ಧತೆ ನಡೆಸಿದ್ದಾರೆ.

ಇಂದು (ಶನಿವಾರ) ಸಿಸಿಬಿ ಪೊಲೀಸರು ಸ್ನೇಹಮಯಿ ಕೃಷ್ಣ ಅವರನ್ನು ನ್ಯಾಯಾಧೀಶರ ಮುಂದೆ ಹಾಜರುಪಡಿಸಲಿದ್ದಾರೆ. ಈ ಪ್ರಕರಣವು ರಾಜಕೀಯ ವಲಯದಲ್ಲಿ ಮತ್ತು ಸಾಮಾಜಿಕ ಹೋರಾಟಗಾರರ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

Read More
Next Story