ಗೌರವ್ ಗೊಗೊಯ್‌ಗೆ ಪಾಕಿಸ್ತಾನ ಲಿಂಕ್ ವಿವಾದ: ಹಿಮಂತ ಬಿಸ್ವಾಗೆ ಕಾಂಗ್ರೆಸ್‌ ತಿರುಗೇಟು
x
ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಸುದ್ದಿಗೋಷ್ಠಿ

ಗೌರವ್ ಗೊಗೊಯ್‌ಗೆ ಪಾಕಿಸ್ತಾನ ಲಿಂಕ್ ವಿವಾದ: ಹಿಮಂತ ಬಿಸ್ವಾಗೆ ಕಾಂಗ್ರೆಸ್‌ ತಿರುಗೇಟು

ಅಸ್ಸಾಂ ಸಂಸದ ಗೌರವ್ ಗೊಗೊಯ್ ಅವರಿಗೆ ಪಾಕಿಸ್ತಾನದ ನಂಟು ಇದೆ ಎಂಬ ಸಿಎಂ ಹಿಮಂತ ಬಿಸ್ವಾ ಶರ್ಮಾ ಅವರ ಆರೋಪ ರಾಜಕೀಯ ಸಂಚಲನ ಮೂಡಿಸಿದೆ.


ಅಸ್ಸಾಂ ರಾಜಕಾರಣದಲ್ಲಿ ಈಗ 'ಪಾಕಿಸ್ತಾನದ ನಂಟು' ಎಂಬ ಗಂಭೀರ ಆರೋಪವೊಂದು ದೊಡ್ಡ ಸಂಚಲನ ಮೂಡಿಸಿದೆ. ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಕಾಂಗ್ರೆಸ್‌ನ ಪ್ರಭಾವಿ ನಾಯಕ ಗೌರವ್ ಗೊಗೊಯ್ ವಿರುದ್ಧ ದೇಶದ್ರೋಹದ ಮಟ್ಟದ ಆರೋಪಗಳನ್ನು ಮಾಡಿದರೆ, ಕಾಂಗ್ರೆಸ್ ಇದನ್ನು ಸಿಎಂ ಅವರ "ಮಾನಸಿಕ ಅಸ್ಥಿರತೆ" ಎಂದು ವ್ಯಂಗ್ಯವಾಡುತ್ತಿದೆ.

ವಿವಾದದ ಮೂಲವೇನು?

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಅವರು ಇತ್ತೀಚೆಗೆ ಒಂದು ಗಂಭೀರ ಆರೋಪ ಮಾಡಿದರು. ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ ಅವರಿಗೆ ಪಾಕಿಸ್ತಾನದ ಪ್ರಜೆಯೊಬ್ಬನೊಂದಿಗೆ ರಹಸ್ಯ ಸಂಬಂಧವಿದೆ ಮತ್ತು ಆತನ ಮೂಲಕ ಭಾರತದ ಗುಪ್ತಚರ ಮಾಹಿತಿಗಳು ಸೋರಿಕೆಯಾಗಿವೆ ಎಂದು ಅವರು ದೂರಿದ್ದಾರೆ. ಈ ಸಂಬಂಧವಾಗಿ ರಾಜ್ಯ ಸರ್ಕಾರವು ವಿಶೇಷ ತನಿಖಾ ತಂಡವನ್ನು (SIT) ರಚಿಸಿತ್ತು.

ಮುಖ್ಯಮಂತ್ರಿಯವರ ವಾದವೇನು?

ಗೌರವ್ ಗೊಗೊಯ್ ಅವರ ಪತ್ನಿ (ಬ್ರಿಟಿಷ್ ಮೂಲದವರು) ಮತ್ತು ಪಾಕಿಸ್ತಾನದ ಅಲಿ ತೌಕೀರ್ ಶೇಖ್ ಎಂಬಾತನ ನಡುವೆ ನಿಕಟ ಸಂಪರ್ಕವಿದೆ. 2013ರಲ್ಲಿ ಗೌರವ್ ಪಾಕಿಸ್ತಾನಕ್ಕೆ ಭೇಟಿ ನೀಡಿದ್ದರು ಎಂಬುದು ಅವರ ಆರೋಪ. ತನಿಖಾ ತಂಡಕ್ಕೆ ಸಿಕ್ಕಿರುವ ಮಾಹಿತಿಯ ಪ್ರಕಾರ, ಗೌರವ್ ದೇಶವಿರೋಧಿ ಜಾಲದ ಪ್ರಮುಖ ವ್ಯಕ್ತಿ ಎಂದು ಶರ್ಮಾ ಬಣ್ಣಿಸಿದ್ದಾರೆ. ಆದರೆ, ಸಂಪೂರ್ಣ ಸಾಕ್ಷ್ಯ ನೀಡುವ ಬದಲು ಇದನ್ನು "ಜನತಾ ನ್ಯಾಯಾಲಯ"ಕ್ಕೆ ಬಿಡುತ್ತಿರುವುದಾಗಿ ಹೇಳಿದ್ದಾರೆ.

ಕಾಂಗ್ರೆಸ್‌ ತಿರುಗೇಟು

ಕಾಂಗ್ರೆಸ್ ನಾಯಕರು ಈ ಆರೋಪಗಳನ್ನು ಹಾಸ್ಯಾಸ್ಪದ ಮತ್ತು ಆಧಾರರಹಿತ ಎಂದು ಕರೆದಿದ್ದಾರೆ. ಒಂದು ವೇಳೆ ಸಾಕ್ಷ್ಯಗಳಿದ್ದರೆ ಪೊಲೀಸರು ಈವರೆಗೂ ಗೌರವ್ ವಿರುದ್ಧ ಕನಿಷ್ಠ ಒಂದು ಎಫ್‌ಐಆರ್ (FIR) ಕೂಡ ಏಕೆ ದಾಖಲಿಸಿಲ್ಲ? ಎಂದು ಕಾಂಗ್ರೆಸ್ ಪ್ರಶ್ನಿಸಿದೆ.

ಕಾಂಗ್ರೆಸ್‌ ಹಿರಿಯ ನಾಯಕ ಕೆ.ಸಿ. ವೇಣುಗೋಪಾಲ್‌ ಈ ಬಗ್ಗೆ ಪ್ರತಿಕ್ರಿಯಿಸಿದ್ದು, ಗೌರವ್ 2013ರಲ್ಲಿ ಪಾಕಿಸ್ತಾನಕ್ಕೆ ಹೋಗಿದ್ದರೆ, ಕಳೆದ 11 ವರ್ಷಗಳಿಂದ ಕೇಂದ್ರದಲ್ಲಿರುವ ಬಿಜೆಪಿ ಸರ್ಕಾರ ಮತ್ತು ಅದರ ತನಿಖಾ ಸಂಸ್ಥೆಗಳು (CBI, NIA) ಯಾಕೆ ಸುಮ್ಮನಿದ್ದವು? ಈಗ ಚುನಾವಣೆ ಹತ್ತಿರ ಬಂದಾಗ ಮಾತ್ರ ಇದು ನೆನಪಾಗುತ್ತಿದೆಯೇ? ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಹಿಮಂತ ಬಿಸ್ವಾ ಶರ್ಮಾ ಅವರು ಹಿಂದೆ ಗೌರವ್ ಅವರ ತಂದೆ ತರುಣ್ ಗೊಗೊಯ್ ಅವರ ಕೈಕೆಳಗೆ ಕೆಲಸ ಮಾಡಿದ್ದವರು. ಈಗ ರಾಜಕೀಯ ಲಾಭಕ್ಕಾಗಿ ತಮಗೆ ಆಶ್ರಯ ನೀಡಿದ ಕುಟುಂಬದ ಮೇಲೆಯೇ ಸುಳ್ಳು ಆರೋಪ ಮಾಡುತ್ತಿದ್ದಾರೆ ಎಂದು ಕಾಂಗ್ರೆಸ್ ಕಿಡಿಕಾರಿದ್ದಾರೆ

ಸಿಎಂ ಶರ್ಮಾ ಅವರು ಮಾನಸಿಕ ಸಮತೋಲನ ಕಳೆದುಕೊಂಡಿದ್ದಾರೆ ಎಂದಿರುವ ಹಿಮಂತ ಬಿಸ್ವಾ ದೊಡ್ಡ ಪರಮಾಣು ಬಾಂಬ್ ಸಿಡಿಸುತ್ತೇನೆ ಎಂದು ಪತ್ರಿಕಾಗೋಷ್ಠಿ ಕರೆದ ಸಿಎಂ, ಕೊನೆಗೆ ಒಂದು ಚಾಕೊಲೇಟ್ ಬಾಂಬ್ ಕೂಡ ಸಿಡಿಸಲಿಲ್ಲ ಎಂದು ಲೇವಡಿ ಮಾಡಿದ್ದಾರೆ.

Read More
Next Story