2,200 ಕೋಟಿ ರೂ. ಆನ್‌ಲೈನ್ ಹೂಡಿಕೆ ಹಗರಣ: ಮೂವರ ಬಂಧನ
x

2,200 ಕೋಟಿ ರೂ. ಆನ್‌ಲೈನ್ ಹೂಡಿಕೆ ಹಗರಣ: ಮೂವರ ಬಂಧನ

ಬಂಧಿತ ಮೂವರು ಆರೋಪಿಗಳು ನಕಲಿ ಆನ್‌ಲೈನ್ ಹೂಡಿಕೆ ಹಗರಣ ನಡೆಸುತ್ತಿದ್ದು, ಹೆಚ್ಚಿನ ಆದಾಯದ ಆಮಿಷವೊಡ್ಡಿ ಕೋಟ್ಯಂತರ ರೂ. ವಂಚಿಸಿದ್ದಾರೆ.


ಅಸ್ಸಾಂ ಪೊಲೀಸರು 2,200 ಕೋಟಿ ರೂ.ಗಳ ಬೃಹತ್ ಹಣಕಾಸು ಹಗರಣವನ್ನು ಪತ್ತೆ ಹಚ್ಚಿದ್ದು, ಮೂವರನ್ನು ಬಂಧಿಸಿದ್ದಾರೆ.

ಆರೋಪಿಗಳು ನಕಲಿ ಆನ್‌ಲೈನ್ ಟ್ರೇಡಿಂಗ್ ವಹಿವಾಟು ನಡೆಸುತ್ತಿದ್ದರು. ಹೆಚ್ಚು ಆದಾಯದ ಭರವಸೆ ನೀಡಿ, ಹೂಡಿಕೆದಾರರಿಂದ ಕೋಟ್ಯಂತರ ಸಂಗ್ರಹಿಸಿ, ವಂಚಿಸಿದ್ದಾರೆ. ದಿಬ್ರುಗಢ ನಿವಾಸಿ ವಿಶಾಲ್ ಫುಕಾನ್ (22) ಬಂಧಿತ. 60 ದಿನಗಳಲ್ಲಿ ಶೇ.30ರಷ್ಟು ಆದಾಯದ ಭರವಸೆ ನೀಡಿ, ಭಾರಿ ಮೊತ್ತವನ್ನು ಸಂಗ್ರಹಿಸಿದ್ದಾನೆ ಎಂದು ವರದಿಯಾಗಿದೆ.

ಜನರು ಆನ್‌ಲೈನ್ ಷೇರು ಮಾರುಕಟ್ಟೆ ಹೂಡಿಕೆ ಮಾಡುವಾಗ ಎಚ್ಚರಿಕೆ ವಹಿಸಬೇಕು ಎಂದು ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾ ಹೇಳಿದ್ದಾರೆ.

ಶ್ರೀಮಂತ ಜೀವನಶೈಲಿ: ವಿಶಾಲ್‌ ಅವರ ವಿಲಾಸಿ ಜೀವನಶೈಲಿಯು ಕೆಲವು ಹೂಡಿಕೆದಾರರು ಮತ್ತು ಅಧಿಕಾರಿಗಳಲ್ಲಿ ಸಂಶಯಕ್ಕೆ ಕಾರಣವಾಯಿತು. ಇದು ಅವರ ಮತ್ತು ಅವರ ಮ್ಯಾನೇಜರ್ ಬಂಧನಕ್ಕೆ ಕಾರಣವಾಯಿತು. ವಿಶಾಲ್‌ ವಿವಿಧ ವಲಯಗಳಲ್ಲಿ ನಾಲ್ಕು ಕಂಪನಿ ಸ್ಥಾಪಿಸಿದ್ದಾರೆ. ಅಸ್ಸಾಮಿ ಚಲನಚಿತ್ರೋದ್ಯಮದಲ್ಲಿ ಹೂಡಿಕೆ ಮಾಡಿದ್ದಾರೆ ಮತ್ತು ಹಲವಾರು ಆಸ್ತಿಗಳನ್ನು ಖರೀದಿಸಿದ್ದಾರೆ.

ಸೆಪ್ಟೆಂಬರ್ 2 ರ ರಾತ್ರಿ ಫುಕಾನ್ ಅವರನ್ನು ಬಂಧಿಸಲಾಗಿದೆ. ಅವರ ಜೊತೆ ಸಂಬಂಧ ಹೊಂದಿದ್ದಾರೆಂದು ಹೇಳಲಾದ ನೃತ್ಯ ಸಂಯೋಜಕಿ ಸುಮಿ ಬೋರಾ ಅವರನ್ನು ಪೊಲೀಸರು ಹುಡುಕುತ್ತಿದ್ದಾರೆ.

ಮತ್ತೊಂದು ಹಗರಣ: ಫುಕಾನ್ ಅವರ ಸಹವರ್ತಿ ಸ್ವಪ್ನಿಲ್ ದಾಸ್ ಅವರನ್ನು ಬ್ಲ್ಯಾಕ್ ಸ್ಟೋನ್ ಟ್ರೇಡಿಂಗ್ ಆಪ್‌ಗೆ ಸಂಬಂಧಿಸಿದಂತೆ ಅಸ್ಸಾಂ ಪೊಲೀಸರು ಗುವಾಹಟಿಯಲ್ಲಿ ಬಂಧಿಸಿದ್ದಾರೆ. ಇದೊಂದು ಹೂಡಿಕೆ ಯೋಜನೆಯಾಗಿದ್ದು, ಅನೇಕರನ್ನು ಸಂಕಷ್ಟಕ್ಕೆ ಸಿಲುಕಿಸಿದೆ. ದಾಸ್ ಅವರಿಂದ ಎರಡು ಐಷಾರಾಮಿ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಅಸ್ಸಾಂ ಸಿಎಂ ಎಚ್ಚರಿಕೆ: ಅಸ್ಸಾಂ ಸಿಎಂ, ಇಂಥ ಎಲ್ಲ ಪ್ರಕರಣಗಳ ಸಮಗ್ರ ತನಿಖೆಗೆ ಆದೇಶಿಸಿದ್ದಾರೆ. ಹಣವನ್ನು ದ್ವಿಗುಣಗೊಳಿಸುವ ಯೋಜನೆಗಳು ವಂಚನೆಯಿಂದ ಕೂಡಿರುತ್ತವೆ. ಇಂತಹ ಯೋಜನೆಗಳಲ್ಲಿ ಹೂಡಿಕೆ ಮಾಡಿದವರು ತಕ್ಷಣವೇ ಹೂಡಿಕೆ ನಿಲ್ಲಿಸಬೇಕು. ಷೇರುಪೇಟೆಯಲ್ಲಿ ಹೂಡಿಕೆಗೆ ನಿಯಮಗಳಿರುತ್ತವೆ. ವಂಚಕರಿಗೆ ಬಲಿಯಾಗಬಾರದು ಎಂದು ಮನವಿ ಮಾಡಿದ್ದಾರೆ.

Read More
Next Story