Attack on Iran: Congress slams Modi
x

ಕಾಂಗ್ರೆಸ್‌ ಪ್ರಧಾನ ಕಾರ್ಯದರ್ಶಿ ಜೈ ರಾಮ್‌ ರಮೇಶ್‌

ಇರಾನ್ ಮೇಲಿನ ದಾಳಿ: ಮೋದಿ ವಿದೇಶಾಂಗ ನೀತಿಯನ್ನು 'ದ್ರೋಹ' ಎಂದು ಜರಿದ ಕಾಂಗ್ರೆಸ್

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿಯವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ.


Click the Play button to hear this message in audio format

ಇರಾನ್ ಮೇಲೆ ಅಮೆರಿಕ ಹಾಗೂ ಇಸ್ರೇಲ್ ಪಡೆಗಳು ನಡೆಸಿದ ಭೀಕರ ವೈಮಾನಿಕ ದಾಳಿಯ ಬಗ್ಗೆ ಮೌನ ವಹಿಸಿರುವ ಪ್ರಧಾನಿ ನರೇಂದ್ರ ಮೋದಿ ಅವರ ವಿದೇಶಾಂಗ ನೀತಿಯ ವಿರುದ್ಧ ಕಾಂಗ್ರೆಸ್ ತೀವ್ರ ವಾಗ್ದಾಳಿ ನಡೆಸಿದೆ. ಇರಾನ್ ಮೇಲಿನ ಯುದ್ಧಕ್ಕೆ ಕೇಂದ್ರ ಸರ್ಕಾರದ ಪ್ರತಿಕ್ರಿಯೆಯು ಭಾರತದ ಮೌಲ್ಯಗಳು, ತತ್ವಗಳು ಮತ್ತು ಹಿತಾಸಕ್ತಿಗಳಿಗೆ ಬಗೆದ ದ್ರೋಹವಾಗಿದೆ ಎಂದು ಕಾಂಗ್ರೆಸ್ ಆಕ್ರೋಶ ವ್ಯಕ್ತಪಡಿಸಿದೆ. ಪ್ರಧಾನಿ ಮೋದಿಯವರ ವಿದೇಶಾಂಗ ನೀತಿಯ ಶೈಲಿ ಮತ್ತು ಸಾರಾಂಶ ಎರಡಕ್ಕೂ ದೇಶವು ಇಂದು ಭಾರಿ ಬೆಲೆ ತೆರುತ್ತಿದೆ ಎಂದು ಆರೋಪಿಸಿದೆ.

ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಜೈರಾಮ್ ರಮೇಶ್ ಅವರು ಎಕ್ಸ್ (X) ಖಾತೆಯಲ್ಲಿ ಸುದೀರ್ಘ ಪೋಸ್ಟ್ ಮಾಡಿದ್ದು, ಪ್ರಧಾನಿ ಮೋದಿಯವರ ನಡೆಯನ್ನು ಕಟುವಾಗಿ ಟೀಕಿಸಿದ್ದಾರೆ. ಇರಾನ್‌ನಲ್ಲಿ ಆಡಳಿತ ಬದಲಾವಣೆಗಾಗಿ ಅಮೆರಿಕ ಮತ್ತು ಇಸ್ರೇಲ್ ಮಿಲಿಟರಿ ದಾಳಿ ಸನ್ನಿಹಿತವಾಗಿದೆ ಎಂಬುದು ಇಡೀ ಜಗತ್ತಿಗೆ ತಿಳಿದಿದ್ದರೂ, ಫೆಬ್ರವರಿ 25-26 ರಂದು ಮೋದಿ ಇಸ್ರೇಲ್‌ಗೆ ಭೇಟಿ ನೀಡಿದ್ದರು. ಅವರು ಇಸ್ರೇಲ್‌ನಿಂದ ನಿರ್ಗಮಿಸಿದ ಕೇವಲ ಎರಡೇ ದಿನಗಳಲ್ಲಿ ಈ ಭೀಕರ ದಾಳಿ ಶುರುವಾಗಿದೆ. ಇಸ್ರೇಲ್ ಸಂಸತ್ 'ನೆಸೆಟ್'ನಲ್ಲಿ ಮೋದಿ ಮಾಡಿದ ಭಾಷಣವು ನಾಚಿಕೆಗೇಡಿನ ನೈತಿಕ ಹೇಡಿತನದ ಪ್ರದರ್ಶನವಾಗಿದೆ. ಇರಾನ್‌ನ ಸರ್ವೋಚ್ಚ ನಾಯಕ ಅಯತೊಲ್ಲಾ ಅಲಿ ಖಮೇನಿ ಹತ್ಯೆಯನ್ನು ಒಳಗೊಂಡಿರುವ ಈ ಯುದ್ಧದ ಬಗ್ಗೆ ಮೋದಿ ಸರ್ಕಾರದ ಪ್ರತಿಕ್ರಿಯೆಯು ಭಾರತದ ಕಾಳಜಿ ಮತ್ತು ಹಿತಾಸಕ್ತಿಗಳಿಗೆ ಮಾಡಿದ ದ್ರೋಹವಾಗಿದೆ ಎಂದು ಅವರು ಜರಿದಿದ್ದಾರೆ.

ಅಮೆರಿಕದ ಒಲವು ಮತ್ತು ವ್ಯಾಪಾರ ಒಪ್ಪಂದದ ವೈಫಲ್ಯ

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಪಾಕಿಸ್ತಾನದೊಂದಿಗಿನ ಒಲವನ್ನು ಮುಂದುವರಿಸಿದ್ದಾರೆ. 2025ರ ಏಪ್ರಿಲ್ 22ರಂದು ಪಹಲ್ಗಾಮ್‌ನಲ್ಲಿ ನಡೆದ ಭಯೋತ್ಪಾದಕ ದಾಳಿಗೆ ಪ್ರಚೋದನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನೇ ಟ್ರಂಪ್ ಪದೇ ಪದೇ ಶ್ಲಾಘಿಸುತ್ತಿದ್ದಾರೆ. ಅಫಘಾನಿಸ್ತಾನದ ಮೇಲಿನ ಪಾಕಿಸ್ತಾನದ ಯುದ್ಧಕ್ಕೂ ಅಮೆರಿಕ ಬೆಂಬಲ ವ್ಯಕ್ತಪಡಿಸಿದೆ. ಇದಲ್ಲದೆ, ಅಮೆರಿಕಕ್ಕೆ ರಫ್ತಾಗುವ ಭಾರತೀಯ ವಸ್ತುಗಳ ಮೇಲಿನ ಸುಂಕವನ್ನು ಹೆಚ್ಚಿಸುವ ಬೆದರಿಕೆ ಹಾಕಿ 2025ರ ಮೇ 10ರಂದು ಭಾರತದ 'ಆಪರೇಷನ್ ಸಿಂದೂರ್' ಕಾರ್ಯಾಚರಣೆಯನ್ನು ತಡೆದಿದ್ದಾಗಿ ಟ್ರಂಪ್ ನೂರಾರು ಬಾರಿ ಹೇಳಿಕೊಂಡಿದ್ದಾರೆ. ಆದರೂ ಪ್ರಧಾನಿ ಮೋದಿ ಈ ಬಗ್ಗೆ ತುಟಿಬಿಚ್ಚುತ್ತಿಲ್ಲ ಎಂದಿದ್ದಾರೆ.

ಸಂಸತ್ತಿನಲ್ಲಿ ರಾಹುಲ್ ಗಾಂಧಿ ಎತ್ತಿದ ವಿಷಯಗಳಿಂದ ಜನರ ಗಮನವನ್ನು ಬೇರೆಡೆ ಸೆಳೆಯುವ ಹತಾಶ ಪ್ರಯತ್ನವಾಗಿ, ಮೋದಿ ಅವರ ಕೋರಿಕೆಯ ಮೇರೆಗೆ ಭಾರತ-ಅಮೆರಿಕ ವ್ಯಾಪಾರ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ ಎಂದು ಫೆಬ್ರವರಿ 2ರಂದು ಟ್ರಂಪ್ ಘೋಷಿಸಿದ್ದರು. ಆದರೆ ಈ ಒಪ್ಪಂದಕ್ಕೆ ಆಧಾರವಾಗಿದ್ದ ಟ್ರಂಪ್ ಅವರ ಸುಂಕದ ತಂತ್ರವು ಅಸಂವಿಧಾನಿಕ ಎಂದು ಅಮೆರಿಕದ ಸುಪ್ರೀಂ ಕೋರ್ಟ್ 18 ದಿನಗಳ ನಂತರ ತೀರ್ಪು ನೀಡಿದೆ ಎಂದು ಜೈರಾಮ್ ರಮೇಶ್ ವಿವರಿಸಿದ್ದಾರೆ. ಭಾರತ ಮಾತ್ರ ತನ್ನ ಆಮದು ನಿಯಮಗಳನ್ನು ಸಡಿಲಿಸುವ ಈ ಏಕಮುಖ ಒಪ್ಪಂದಕ್ಕೆ ಮೋದಿ ತಮ್ಮ ರಾಜಕೀಯ ಲೆಕ್ಕಾಚಾರಗಳಿಗಾಗಿ ಒತ್ತಡ ಹೇರಿದ್ದರು ಎಂದು ಅವರು ದೂರಿದ್ದಾರೆ.

ರಷ್ಯಾ ತೈಲ ಮತ್ತು ಚೀನಾ ಗಡಿ ವಿಚಾರದಲ್ಲಿ ಮೌನ

ಭಾರತವು ರಷ್ಯಾದಿಂದ ತೈಲ ಖರೀದಿಸುವುದನ್ನು ನಿಲ್ಲಿಸಲು ಒಪ್ಪಿಕೊಂಡಿದೆ ಎಂದು ಅಮೆರಿಕ ಪದೇ ಪದೇ ಹೇಳುತ್ತಲೇ ಬಂದಿದೆ. ಆದರೆ ಮೋದಿ ಸರ್ಕಾರ ಈ ಕುರಿತು ಇದುವರೆಗೂ ಯಾವುದೇ ಸ್ಪಷ್ಟನೆ ನೀಡಿಲ್ಲ. ಮತ್ತೊಂದೆಡೆ, 2020ರ ಜೂನ್ 19ರಂದು ಲಡಾಖ್ ಗಡಿಯಲ್ಲಿ ನಮ್ಮ 20 ಯೋಧರು ಹುತಾತ್ಮರಾದಾಗಲೂ ಪ್ರಧಾನಿ ಮೋದಿ ಅವರು ಚೀನಾಕ್ಕೆ ಕ್ಲೀನ್ ಚಿಟ್ ನೀಡಿದ್ದರು. ಈ ಆಘಾತಕಾರಿ ಹೇಳಿಕೆಯು ಚೀನಾ ಎದುರು ನಮ್ಮ ಚೌಕಾಸಿಯ ಸ್ಥಾನವನ್ನು ತೀವ್ರವಾಗಿ ದುರ್ಬಲಗೊಳಿಸಿತು. ಈಗ ನಾವು ಚೀನಾದ ಷರತ್ತುಗಳಿಗೆ ಒಳಪಟ್ಟು ಸಂಬಂಧವನ್ನು ಸಹಜಗೊಳಿಸಿಕೊಳ್ಳುವ ಅನಿವಾರ್ಯತೆಗೆ ಸಿಲುಕಿದ್ದೇವೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.

ಭಾರತೀಯರ ರಕ್ಷಣೆಗೆ ಕಾಂಗ್ರೆಸ್ ಆಗ್ರಹ

ಶನಿವಾರ ಇರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ದಾಳಿಯನ್ನು ಕಾಂಗ್ರೆಸ್ ಪಕ್ಷವು ತೀವ್ರವಾಗಿ ಖಂಡಿಸಿದೆ. ಮಧ್ಯಪ್ರಾಚ್ಯದಲ್ಲಿ ಹೆಚ್ಚುತ್ತಿರುವ ದ್ವೇಷ ಮತ್ತು ಯುದ್ಧದ ವಾತಾವರಣದ ಬಗ್ಗೆ ಕಳವಳ ವ್ಯಕ್ತಪಡಿಸಿರುವ ವಿರೋಧ ಪಕ್ಷವು, ಈ ಸಂಘರ್ಷವನ್ನು ಕೊನೆಗಾಣಿಸಲು ನೆರವಾಗುವಂತೆ ಹಾಗೂ ಅಲ್ಲಿ ನೆಲೆಸಿರುವ ಎಲ್ಲ ಭಾರತೀಯರ ಸುರಕ್ಷತೆಯನ್ನು ಖಚಿತಪಡಿಸಿಕೊಳ್ಳುವಂತೆ ಭಾರತ ಸರ್ಕಾರವನ್ನು ಒತ್ತಾಯಿಸಿದೆ. 1979ರಿಂದ ಆಳ್ವಿಕೆ ನಡೆಸುತ್ತಿರುವ ಇಸ್ಲಾಮಿಕ್ ನಾಯಕತ್ವದ ವಿರುದ್ಧ ದಂಗೆಯೇಳುವಂತೆ ಟ್ರಂಪ್ ಇರಾನ್ ಜನತೆಗೆ ಕರೆ ನೀಡಿದ ಬೆನ್ನಲ್ಲೇ ಈ ದಾಳಿಗಳು ನಡೆದಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕಳವಳ ಮೂಡಿಸಿದೆ.

Read More
Next Story