
ಜಗ್ಗದ ಇರಾನ್, ಜಿದ್ದು ಬಿಡದ ಟ್ರಂಪ್ : ಜಗತ್ತು ಕಾದಿದೆ ಆತಂಕದಿಂದ
ರಾಜತಾಂತ್ರಿಕ ಬಾಗಿಲುಗಳು ಒಂದೊಂದಾಗಿ ಮುಚ್ಚುತ್ತಿವೆ. ಟ್ರಂಪ್ ಜಿದ್ದಿಗೆ ಬಿದ್ದಿದ್ದಾರೆ. ʼಪರಮಾಣು ಮೋಹಿʼ ಎಂಬ ಪಟ್ಟ ಕಟ್ಟಿಕೊಂಡಿರುವ ಇರಾನ್ ಮೇಲೆ ದಾಳಿ ಮಾಡಲು ಅವರು ಟೊಂಕಕಟ್ಟಿದಂತೆ ಕಾಣುತ್ತಿದೆ.
ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಠಕ್ಕೆ ಬಿದ್ದಿದ್ದಾರೆ. ಇರಾನ್ ತನ್ನ ಪರಮಾಣು ಮಹತ್ವಾಕಾಂಕ್ಷೆಯನ್ನು ಈಗ ಮಾತ್ರವಲ್ಲದೆ ಶಾಶ್ವತವಾಗಿ ಕೈಬಿಡಬೇಕು ಎಂಬುದು ಅವರ ತಾಕೀತು. ಇದನ್ನು ಇನ್ನೂ ಸ್ಪಷ್ಟವಾಗಿ ಹೇಳಬೇಕೆಂದರೆ ಇರಾನ್ ಯಾವುದೇ ಕಾರಣಕ್ಕೂ ವಿದಳನಕಾರಿ ಪದಾರ್ಥಗಳನ್ನು ಪುಷ್ಟೀಕರಿಸಬಾರದು ಎಂಬುದು ಇದರ ಅರ್ಥ.
ತನ್ನ ಈ ಗುರಿಯನ್ನು ಶತಾಯಗತಾಯ ಕಾರ್ಯರೂಪಕ್ಕೆ ತರಲು ಬಲಪ್ರಯೋಗಕ್ಕೂ ಅಂಜುವುದಿಲ್ಲ ಎಂಬ ಸಂದೇಶವನ್ನೂ ಅವರು ಇರಾನ್ ನಾಯಕತ್ವಕ್ಕೆ ರವಾನಿಸಿದ್ದಾರೆ. ಇಷ್ಟು ಮಾತ್ರವಲ್ಲದೆ ತಮ್ಮ ಉದ್ದೇಶ ಅತ್ಯಂತ ಗಂಭೀರ ಮಟ್ಟದ್ದು ಎಂಬುದನ್ನು ತೋರಿಸಲು ಅವರು ಪರ್ಷಿಯನ್ ಗಲ್ಫ್, ಅರೇಬಿಯನ್ ಸಮುದ್ರ ಮತ್ತು ಇನ್ನೂ ಇತರ ಪ್ರದೇಶಗಳಲ್ಲಿ ಪ್ರಮುಖ ನೌಕಾಪಡೆಗಳು ಸಿದ್ಧತೆ ಮಾಡಿಕೊಳ್ಳಬೇಕು ಎಂದೂ ಆದೇಶಿಸಿದ್ದಾರೆ.
ಟ್ರಂಪ್ ಆದೇಶ ಹೊರಡಿಸಿದ ತಕ್ಷಣವೇ ಇರಾನ್ ಮೇಲೆ ಮುಗಿ ಬೀಳಲು ತಯಾರಿ ನಡೆಸಲಾಗಿದೆ. ಅಮೆರಿಕ ನೌಕಾಪಡೆಯು ಇತರ ಯುದ್ಧ ಸಾಮಗ್ರಿಗಳ ಜೊತೆಗೆ ಎರಡು ವಿಮಾನ ವಾಹಕ ನೌಕೆಗಳನ್ನು ಈ ಪ್ರದೇಶಕ್ಕೆ ಸ್ಥಳಾಂತರಿಸಿರುವುದು ಗಮನಾರ್ಹ. ಅಮೆರಿಕದ ಯುದ್ಧ ವಿಮಾನಗಳು ಈ ವಲಯದಲ್ಲಿರುವ ಅಮೆರಿಕದ ನೆಲೆಗಳಿಗೆ ಸ್ಥಳಾಂತರಗೊಂಡಿರುವುದನ್ನು ಗಮನಿಸಿದರೆ ಪರಿಸ್ಥಿತಿ ಅಪಾಯಕಾರಿಯಾಗಿದೆ ಎಂಬುದು ಸ್ಪಷ್ಟ.
ಈ ಎಲ್ಲ ಕಾರಣಗಳಿಂದಾಗಿ ಅಂತಾರಾಷ್ಟ್ರೀಯ ಸಮುದಾಯವು ತೀವ್ರ ಆತಂಕಕ್ಕೆ ಒಳಗಾಗಿದೆ. ಈ ನಡುವೆ ʼವಾಣಿಜ್ಯ ವಿಮಾನಗಳು ಸೇರಿದಂತೆ ಲಭ್ಯವಿರುವ ಯಾವುದೇ ಸಾರಿಗೆ ವಿಧಾನಗಳ ಮೂಲಕ ದೇಶ ತೊರೆದುಬಿಡಿ,ʼ ಎಂದು ಟೆಹ್ರಾನ್-ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಇರಾನ್-ನಲ್ಲಿರುವ ಎಲ್ಲ ಭಾರತೀಯ ಪ್ರಜೆಗಳಿಗೆ ತಿಳಿಸಿದ್ದಾಗಿದೆ.
ನಂಬಲಾಗದ ಇರಾನ್ ಹೇಳಿಕೆಗಳು
ಇರಾನ್ ಪರಮಾಣು ಶಸ್ತ್ರಾಸ್ತ್ರಗಳನ್ನು ಹೊಂದುವ ವಿಚಾರದಲ್ಲಿ ಅಂತಾರಾಷ್ಟ್ರೀಯ ಸಮುದಾಯ ಮೈಕೊಡವಿಕೊಂಡಿದೆ ಎಂಬುದು ಮಾತ್ರ ವಾಸ್ತವ. ಆದರೆ ತನಗೆ ಪರಮಾಣು ಶಸ್ತ್ರಾಸ್ತ್ರ ತಯಾರಿಸುವ ಉದ್ದೇಶವೇ ಇಲ್ಲ ಎಂದು ಇರಾನ್ ಕಳೆದ ಎರಡೂವರೆ ದಶಕಗಳಿಂದ ಸತತವಾಗಿ ಪ್ರತಿಪಾದಿಸುತ್ತ ಬಂದಿದೆ. ಆದಾಗ್ಯೂ ಅದು ಹೇಳುತ್ತಿರುವ ಮಾತುಗಳನ್ನು ನಂಬಲು ಯಾರೂ ಸಿದ್ಧರಿಲ್ಲ. ಇದಕ್ಕೆ ಕಾರಣವೂ ಇದೆ. ಇರಾನಿನ ಪರಮಾಣು ಪುಷ್ಟೀಕರಣ ಕೇಂದ್ರಗಳಲ್ಲಿ ಅದರ ಚಟುವಟಿಕೆಗಳು ಆತಂಕಕಾರಿಯಾಗಿವೆ ಎಂದು ಸ್ವತಃ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆಯೇ ಆಗಾಗ ಹೇಳುತ್ತ ಬಂದಿರುವುದು ಅದರ ಹೇಳಿಕೆಗಳು ಎಷ್ಟು ಟೊಳ್ಳು ಎಂಬುದು ಸಾಬೀತಾಗಿದೆ.
ಇರಾನ್ ಪರಮಾಣು ಪ್ರಸರಣ ರಹಿತ ಒಪ್ಪಂದಕ್ಕೆ (NPT) ಸಹಿ ಹಾಕಿದ ದೇಶ. ಈ ಒಪ್ಪಂದವು ಪರಮಾಣು ಶಸ್ತ್ರಾಸ್ತ್ರ ಹೊಂದಿರದ ರಾಷ್ಟ್ರಗಳು (NNWS) ಯುರೇನಿಯಂ ಅನ್ನು ಶಾಂತಿಯುತ ಉದ್ದೇಶಗಳಿಗಾಗಿ ಬಳಸುವುದನ್ನು ಪುಷ್ಟೀಕರಿಸಲು ಅನುಮತಿ ನೀಡುತ್ತದೆ. ಇಂತಹ ರಾಷ್ಟ್ರಗಳು ಕಾಲಕಾಲಕ್ಕೆ ಅಂತಾರಾಷ್ಟ್ರೀಯ ಪರಮಾಣು ಶಕ್ತಿ ಸಂಸ್ಥೆ (IAEA)ಯ ತಪಾಸಣೆಗೆ ಒಳಪಡುತ್ತವೆ. ಒಂದು ದೇಶದ ಪುಷ್ಟೀಕರಣದ ದಾಖಲೆಯ ಬಗ್ಗೆ IAEA ವರದಿಗಳ ಮಹತ್ವವು ಇಲ್ಲಿಯೇ ಮುನ್ನೆಲೆಗೆ ಬರುತ್ತದೆ ಮತ್ತು ಮೇಲೆ ಉಲ್ಲೇಖಿಸಿದಂತೆ, ಇರಾನ್ ಈ ವಿಚಾರದಲ್ಲಿ ವಿಫಲವಾಗಿದೆ.
ಅಮೆರಿಕದ ಮಿಲಿಟರಿ ಸಜ್ಜುಗೊಳ್ಳುತ್ತಿರುವುದರ ನಡುವೆಯೇ, ರಾಜತಾಂತ್ರಿಕತೆಯ ಬಾಗಿಲುಗಳು ಮುಚ್ಚುತ್ತಿವೆ. ಈ ಹಿನ್ನೆಲೆಯಲ್ಲಿ ಅಮೆರಿಕ ಮತ್ತು ಇರಾನ್ ಪ್ರತಿನಿಧಿಗಳ ನಡುವಿನ ಪರೋಕ್ಷ ಸಭೆಯ ಮೇಲೆ ಎಲ್ಲರ ಕಣ್ಣು ನೆಟ್ಟಿದೆ. ಈ ಸಭೆಯಲ್ಲಿ ಓಮನ್ ಮಧ್ಯಸ್ಥಿಕೆ ವಹಿಸುತ್ತಿದೆ. ಮಾಧ್ಯಮ ವರದಿಗಳ ಪ್ರಕಾರ, ಇರಾನ್ ಅಧ್ಯಕ್ಷ ಮಸೂದ್ ಪೆಜೆಶ್ಕಿಯಾನ್ ಅವರು ಅಮೆರಿಕವು 'ಉತ್ತೇಜಕ' ಸಂಕೇತಗಳನ್ನು ನೀಡುತ್ತಿದೆ ಎಂದು ಹೇಳಿದ್ದಾರೆ, ಆದರೆ ಇರಾನ್ ಯಾವುದೇ ಪರಿಸ್ಥಿತಿಯನ್ನು ಎದುರಿಸಲು ಸಿದ್ಧ ಎಂಬ ಮಾತನ್ನೂ ಹೇಳಿದ್ದಾರೆ.
ಇವೆಲ್ಲದರ ನಡುವೆಯೇ ಮಧ್ಯಪ್ರಾಚ್ಯದ ಅಮೆರಿಕದ ವಿಶೇಷ ದೂತ ಸ್ಟೀವ್ ವಿಟ್ಕಾಫ್ ಅವರು ಫೆಬ್ರವರಿ 19 ರಂದು ರೆಕಾರ್ಡ್ ಮಾಡಿ ಮೂರು ದಿನಗಳ ನಂತರ ಪ್ರಸಾರವಾದ ಟಿವಿ ಕಾರ್ಯಕ್ರಮದಲ್ಲಿ, ಅಮೆರಿಕದ ಒತ್ತಡಕ್ಕೆ ಇರಾನಿಯನ್ನರು ಏಕೆ ಶರಣಾಗಿಲ್ಲ ಎಂಬ ಬಗ್ಗೆ ಟ್ರಂಪ್ ಅವರಿಗೆ 'ಕುತೂಹಲ'ವಿದೆ ಎಂದು ಕೆಣಕಿದ್ದಾರೆ. ವಿದೇಶಿ ಒತ್ತಡಕ್ಕೆ ಸುಲಭವಾಗಿ ಮಣಿಯದ ಪುರಾತನ ಮತ್ತು ಹೆಮ್ಮೆಯ ನಾಗರಿಕತೆ ಇರಾನ್ ಎಂಬುದು ಟ್ರಂಪ್ ಅವರಿಗೆ ತಿಳಿದಿರಬೇಕು. ಅದು ದಶಕಗಳಿಂದ ಅಮೆರಿಕದ ನಿರ್ಬಂಧಗಳನ್ನು ಸಹಿಸಿಕೊಂಡು ಬಂದಿದೆ ಎಂಬುದೂ ಗಮನಿಸಬೇಕಾದ ಸಂಗತಿ.
ಪ್ರಸ್ತುತ, ಅಮೆರಿಕದ ಬೇಡಿಕೆಗಳೇನಿದ್ದರೂ ಇರಾನ್ನ ಪರಮಾಣು ಕಾರ್ಯಕ್ರಮಕ್ಕೆ ಸಂಬಂಧಿಸಿದ್ದಾಗಿವೆ. ಇರಾನ್ ಶೇ. 60ರಷ್ಟು ಪುಷ್ಟೀಕರಿಸಿದ ಯುರೇನಿಯಂ ಹೊಂದಿದೆ ಮತ್ತು ಅದನ್ನು ಶಸ್ತ್ರಾಸ್ತ್ರ ದರ್ಜೆಯ ವಸ್ತುವನ್ನಾಗಿ ಪರಿವರ್ತಿಸಲು ಕೇವಲ ಒಂದೇ ಒಂದು ವಾರ ಸಾಕು ಎನ್ನುತ್ತಾರೆ ವಿಟ್ಕಾಫ್. ಇದು ಪರಮಾಣು ವಿಶ್ಲೇಷಕರಲ್ಲಿ ಒಂದು ಪ್ರಶ್ನೆಯನ್ನು ಹುಟ್ಟುಹಾಕಿದೆ: ಜೂನ್ 2025ರಲ್ಲಿ ಫೊಡೋ, ನಟಾಂಜ್ ಮತ್ತು ಇಸ್ಪಹಾನ್ನಲ್ಲಿರುವ ಇರಾನ್ನ ಪರಮಾಣು ಸೌಲಭ್ಯಗಳ ಮೇಲೆ ಅಮೆರಿಕ ನಡೆಸಿದ ದಾಳಿಗಳು ಎಷ್ಟು ಪರಿಣಾಮಕಾರಿಯಾಗಿದ್ದವು? ಆಗ ಅಮೆರಿಕವು ಇರಾನ್ನ ಪರಮಾಣು ಕಾರ್ಯಕ್ರಮದ ಸದ್ದಡಗಿಸಿದ್ದೇವೆ, ವರ್ಷಗಳ ಕಾಲ ಅವುಗಳನ್ನು ಕುಂಠಿತಗೊಳಿಸಿದ್ದೇವೆ ಎಂದು ಪ್ರತಿಪಾದಿಸಿತ್ತು. ಆದ್ದರಿಂದ, ಆ ದಾಳಿಗಳ ದಕ್ಷತೆಯ ಬಗ್ಗೆ ಪ್ರಶ್ನೆ ಎತ್ತುವುದು ನ್ಯಾಯಸಮ್ಮತವೇ ಆಗಿದೆ. ಸಹಜವಾಗಿ, ಯುರೇನಿಯಂ ಅನ್ನು ಶಸ್ತ್ರಾಸ್ತ್ರ ದರ್ಜೆಗೆ ಪುಷ್ಟೀಕರಿಸುವುದು ಎಂದರೆ ತಕ್ಷಣವೇ ಕಾರ್ಯಕ್ಷಮತೆಯುಳ್ಳ ಉಡಾವಣಾ ವ್ಯವಸ್ಥೆಯ ಜೊತೆಗೆ ಪರಮಾಣು ಶಸ್ತ್ರವನ್ನು ತಯಾರಿಸಬಹುದು ಎಂದೇನೂ ಅಲ್ಲ. ಅದಕ್ಕೆ ಇನ್ನು ಕೆಲವು ವರ್ಷಗಳು ಬೇಕಾಗಬಹುದು.
ಇರಾನ್ ಪರಮಾಣು ಪುಷ್ಟೀಕರಣ
ಇರಾನ್ ಪರಮಾಣು ಸಾಮರ್ಥ್ಯದ ಜೊತೆಗೆ, ಅಮೆರಿಕವು ಅದರ ಕ್ಷಿಪಣಿ ಕಾರ್ಯಕ್ರಮದ ಮೇಲೆ ಕಠಿಣ ನಿರ್ಬಂಧಗಳನ್ನು ಹೇರಲು ಬಯಸುತ್ತಿದೆ. ಕನಿಷ್ಠಪಕ್ಷ, ಇಸ್ರೇಲ್ ಮೇಲೆ ದಾಳಿ ಮಾಡುವ ಸಾಮರ್ಥ್ಯವಿರುವ ಕ್ಷಿಪಣಿಗಳನ್ನು ಇರಾನ್ ಹೊಂದಿರಬಾರದು ಎಂಬುದು ಅದರ ಉದ್ದೇಶ. ಸಹಜವಾಗಿ, ಇಸ್ರೇಲಿಗಳು ಕೂಡ ತಮಗೆ ಹಾನಿ ಮಾಡುವ ಇರಾನ್ನ ಸಾಮರ್ಥ್ಯಕ್ಕೆ ನಿರ್ಬಂಧ ವಿಧಿಸಲು ಬಯಸುತ್ತಾರೆ. ಇರಾನ್ನಲ್ಲಿ ಹೇಗಾದರೂ ಮಾಡಿ ಆಡಳಿತ ಬದಲಾವಣೆ ಮಾಡುವುದು ಅಮೆರಿಕದ ದೀರ್ಘಕಾಲದ ಮಹತ್ವಾಕಾಂಕ್ಷೆ. ಇದೇ ಕಾರಣಕ್ಕಾಗಿ, 2025ರ ಕೊನೆಯ ದಿನಗಳಲ್ಲಿ ಮತ್ತು 2026ರ ಜನವರಿಯಲ್ಲಿ ಇರಾನ್ನಲ್ಲಿ ನಡೆದ ಪ್ರತಿಭಟನೆಗಳನ್ನು ಅಮೆರಿಕ ಬೆಂಬಲಿಸಿತ್ತು. ಇರಾನ್ ಅಧಿಕಾರಿಗಳು ಕಠಿಣ ಬಲಪ್ರಯೋಗದ ಮೂಲಕ ಇದನ್ನು ಹತ್ತಿಕ್ಕುವಲ್ಲಿ ಯಶಸ್ವಿಯಾಗಿದ್ದರು. ವರದಿಗಳ ಪ್ರಕಾರ ಸಾವಿರಾರು ಜನರು ಸಾವನ್ನಪ್ಪಿದ್ದಾರೆ. 3,117 ಜನರು ಸಾವನ್ನಪ್ಪಿದ್ದಾರೆ ಎಂದು ಇರಾನ್ ಅಧಿಕಾರಿಗಳು ಒಪ್ಪಿಕೊಂಡಿದ್ದಾರೆ. ಆದರೆ ಅಲ್ಲಿನ ಧಾರ್ಮಿಕ ಆಡಳಿತದ ವಿರೋಧಿಗಳು ಸಾವಿನ ಸಂಖ್ಯೆ ಹತ್ತು ಪಟ್ಟು ಹೆಚ್ಚಿದೆ ಎಂಬ ಆರೋಪವನ್ನೂ ಮುಂದಿಡುತ್ತಿದ್ದಾರೆ.
ಅಮೆರಿಕದ ಗಮನವೇನಿದ್ದರೂ ಈಗ ಇರಾನ್ನ ಪರಮಾಣು ಪುಷ್ಟೀಕರಣದ ವಿಷಯದ ಮೇಲೆ ನೆಟ್ಟಿದೆ. ಎನ್.ಪಿ.ಟಿ ಒಪ್ಪಂದದಲ್ಲಿ ಒದಗಿಸಲಾದ ಯುರೇನಿಯಂ ಪುಷ್ಟೀಕರಿಸುವ ತನ್ನ ಸಾರ್ವಭೌಮ ಹಕ್ಕನ್ನು ಬಿಟ್ಟುಕೊಡಲು ತಾನು ಸಿದ್ಧವಿಲ್ಲ ಎಂದು ಇರಾನ್ ಪ್ರತಿಪಾದಿಸುತ್ತಿದೆ. ಇನ್ನೊಂದೆಡೆ, ಟ್ರಂಪ್ ಈ ವಿಷಯದಲ್ಲಿ ಯಾವುದೇ ಸಡಿಲಿಕೆ ನೀಡಲು ಸಿದ್ಧರಿಲ್ಲ. ಮಾಧ್ಯಮಗಳಲ್ಲಿ ವರದಿಯಾಗುತ್ತಿರುವ ಒಂದು ಸಲಹೆಯೆಂದರೆ, ವೈದ್ಯಕೀಯ ಉದ್ದೇಶಗಳಿಗಾಗಿ ಪರಮಾಣು ವಸ್ತುಗಳನ್ನು ಪುಷ್ಟೀಕರಿಸಲು ಅನುಮತಿಸಿದರೆ ಇರಾನ್ ಒಪ್ಪಬಹುದು ಎಂಬುದು. ಇದು ಇರಾನ್ ತನ್ನ ಸಾರ್ವಭೌಮ ಹಕ್ಕನ್ನು ಬಿಟ್ಟುಕೊಟ್ಟಿಲ್ಲ ಎಂದು ಹೇಳಿಕೊಳ್ಳಲು ಅವಕಾಶ ನೀಡುತ್ತದೆ ಮತ್ತು ಅಮೆರಿಕ ಕೂಡ ತನ್ನ ನೈಜ ಉದ್ದೇಶವನ್ನು ಸಾಧಿಸಿದಂತಾಗುತ್ತದೆ, ಏಕೆಂದರೆ ಅಂತಹ ಪುಷ್ಟೀಕರಣಕ್ಕೆ ಅತ್ಯಂತ ಸಣ್ಣ ಸೌಲಭ್ಯದ ಅಗತ್ಯವಿರುತ್ತದೆ. ಅಂತಹ ಸೌಲಭ್ಯದಲ್ಲಿ ಶಸ್ತ್ರಾಸ್ತ್ರ ದರ್ಜೆಯ ಯಾವುದೇ ವಸ್ತುವನ್ನು ಉತ್ಪಾದಿಸಲು ಸಾಧ್ಯವಿಲ್ಲ. ಆದಾಗ್ಯೂ, ಇದು ಮೇಲ್ನೋಟಕ್ಕೆ ಟ್ರಂಪ್ ಅವರಿಗೆ ಸೋಲಿನಂತೆ ಕಾಣಬಹುದು ಮತ್ತು ಅದನ್ನು ಸಹಿಸಿಕೊಳ್ಳಲು ಅವರಿಗೆ ಸಾಧ್ಯವಾಗದೇ ಇರಬಹುದು.
ವೆನೆಜುವೆಲಾದಂತಹ ಕ್ರಮ ಸುಲಭವಲ್ಲ
ಟ್ರಂಪ್ ಮತ್ತು ಅವರ ಸಲಹೆಗಾರರು ಎದುರಿಸಬೇಕಾದ ನಿಜವಾದ ಪ್ರಶ್ನೆಯೆಂದರೆ, ಅವರು ಇರಾನ್ ವಿರುದ್ಧ ವೈಮಾನಿಕ ದಾಳಿ ಆರಂಭಿಸಿದರೆ ಅದರ ಅಂತಿಮ ಪರಿಣಾಮ ಏನಾಗಬಹುದು ಎಂಬುದು. ಇರಾನ್ ಯುದ್ಧ ಮಾಡುವ ಸಾಮರ್ಥ್ಯವನ್ನು ಕುಂದಿಸಲು ಅವರು ಎಲ್ಲಾ ಮಿಲಿಟರಿ ನೆಲೆಗಳು ಮತ್ತು ಸ್ವತ್ತುಗಳ ಮೇಲೆ ವ್ಯಾಪಕ ಬಾಂಬ್ ದಾಳಿಗೆ ಆದೇಶಿಸಬಹುದು. ಅವರು ಇರಾನ್ ಆರ್ಥಿಕ ಕೇಂದ್ರಗಳ ಮೇಲೂ ಬಾಂಬ್ ದಾಳಿಗೆ ಆದೇಶ ಹೊರಡಿಸಬಹುದು, ಇದರಿಂದ ಜನರಲ್ಲಿ ತೀವ್ರ ಸಂಕಷ್ಟ ಉಂಟಾಗಿ, ಅದು ಪ್ರತಿಭಟನೆ ಮತ್ತು ಅಶಾಂತಿಗೆ ಕಾರಣವಾಗಿ ಸುಪ್ರೀಂ ಲೀಡರ್ ಪತನಕ್ಕೆ ದಾರಿಯಾಗಬಹುದು ಎಂಬುದು ಅವರ ಆಶಯವಾಗಿರಬಹುದು. ಒಂದು ವೇಳೆ ಅದು ಸಂಭವಿಸಿದರೂ 1979ರ ಇರಾನ್ ಕ್ರಾಂತಿಯ ನಂತರ ಅಯತೊಲ್ಲಾ ಖೊಮೇನಿ ಜಾರಿಗೆ ತಂದ 'ವಿಲಾಯತ್-ಎ-ಫಕಿಹ್' ವ್ಯವಸ್ಥೆಯು ಕುಸಿಯುತ್ತದೆಯೇ? ಅದನು ಖಚಿತವಾಗಿ ಹೇಳಲು ಸಾಧ್ಯವಿಲ್ಲ. ಏಕೆಂದರೆ ಅಲ್ಲಿನ ಕ್ರಾಂತಿಕಾರಿ ಪಡೆಗಳ ಹಿಡಿತ ಬಲವಾಗಿದೆ ಮತ್ತು ಕೇವಲ ವೈಮಾನಿಕ ದಾಳಿಯಿಂದ ಅವುಗಳನ್ನು ನಾಶಪಡಿಸಲು ಸಾಧ್ಯವೇ ಎಂಬುದು ಸಂಶಯಾಸ್ಪದವಾಗಿದೆ. ಖಂಡಿತವಾಗಿಯೂ, ಅಮೆರಿಕದ ಮಿಲಿಟರಿ ಇರಾನ್ನಲ್ಲಿ ವೆನೆಜುವೆಲಾದಂತಹ ಕ್ರಮವನ್ನು ಪೂರ್ಣಗೊಳಿಸಲು ಸಾಧ್ಯವಾಗುತ್ತದೆ ಎಂದು ನಿರೀಕ್ಷಿಸುವುದು ಅಸಾಧ್ಯ.
ಟ್ರಂಪ್ ಯಾವ ಕ್ರಮಕ್ಕೆ ಆದೇಶ ನೀಡುತ್ತಾರೆ ಎಂದು ನಿರ್ಧರಿಸುವವರೆಗೆ, ಇಡೀ ಜಗತ್ತು ಆತಂಕದಿಂದ ಕಾಯುತ್ತಿದೆ.
(ಇರಾನ್ ವಿರುದ್ಧ ಯುಎಸ್‌ಎ ಮತ್ತು ಇಸ್ರೇಲ್ ದಾಳಿ ಮಾಡುವ ಕೆಲ ದಿನಗಳ ಹಿಂದೆ ಬರೆದ ಲೇಖನ).
Disclaimer: ವಿವಿಧ ವಲಯಗಳಿಂದ ಅಭಿಪ್ರಾಯಗಳನ್ನು ಕಲೆಹಾಕಿ ಪ್ರಸ್ತುತಪಡಿಸಲು ದ ಫೆಡರಲ್, ಪ್ರಯತ್ನಿಸುತ್ತದೆ. ಲೇಖನಗಳಲ್ಲಿನ ಮಾಹಿತಿ, ಕಲ್ಪನೆಗಳು ಅಥವಾ ಅಭಿಪ್ರಾಯಗಳು ಸಂಪೂರ್ಣವಾಗಿ ಲೇಖಕರದ್ದಾಗಿದ್ದು, ಅವು ʼದ ಫೆಡರಲ್ ಕರ್ನಾಟಕʼದ ದೃಷ್ಟಿಕೋನಗಳನ್ನು ಪ್ರತಿಬಿಂಬಿಸುವುದಿಲ್ಲ. ಮೂಲ ಲೇಖನ 'ದ ಫೆಡರಲ್' ಇಂಗ್ಲಿಷ್ ಜಾಲತಾಣದಲ್ಲಿ ಪ್ರಕಟವಾಗಿದೆ.

