
Iran Israel War| ಇರಾನ್ ಯುದ್ಧದ ಭೀತಿ: ಅಬುದಾಬಿ ಏರ್‌ಪೋರ್ಟ್‌ನಲ್ಲಿ ಸಿಲುಕಿದ ಡ್ರೋನ್ ಪ್ರತಾಪ್
ಇರಾನ್‌ನಲ್ಲಿರುವ ಅಲಿಪುರದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳ ಸಂಪರ್ಕ ಕಡಿತಗೊಂಡಿದ್ದು, ಪೋಷಕರಲ್ಲಿ ಆತಂಕ ಮನೆಮಾಡಿದೆ.
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ಇರಾನ್ ಮೇಲೆ ನಡೆಸಿದ ವೈಮಾನಿಕ ದಾಳಿಯಿಂದಾಗಿ ಮಧ್ಯಪ್ರಾಚ್ಯದಾದ್ಯಂತ ವಿಮಾನ ಸಂಚಾರ ಅಸ್ತವ್ಯಸ್ತಗೊಂಡಿದೆ. ಈ ಬಿಕ್ಕಟ್ಟಿನಿಂದಾಗಿ ಅಬುದಾಬಿಯಿಂದ ಬೆಂಗಳೂರಿಗೆ ಮರಳಬೇಕಿದ್ದ ನೂರಾರು ಪ್ರಯಾಣಿಕರು ವಿಮಾನ ನಿಲ್ದಾಣದಲ್ಲೇ ಬಾಕಿಯಾಗಿದ್ದಾರೆ. ಅವರಲ್ಲಿ ಬಿಗ್ ಬಾಸ್ ಸೀಸನ್ 10ರ ರನ್ನರ್ ಅಪ್ ಡ್ರೋನ್ ಪ್ರತಾಪ್ ಕೂಡ ಒಬ್ಬರು.
ಅಬುದಾಬಿ ಏರ್‌ಪೋರ್ಟ್‌ನಿಂದ ಸೆಲ್ಫಿ ವಿಡಿಯೋ ಹಂಚಿಕೊಂಡಿರುವ ಪ್ರತಾಪ್, "ಇರಾನ್-ಇಸ್ರೇಲ್ ಯುದ್ಧದ ಕಾರಣದಿಂದಾಗಿ ಇತಿಹಾದ್ ಏರ್‌ಲೈನ್ಸ್ ಸೇರಿದಂತೆ ಮುಂದಿನ 12 ಗಂಟೆಗಳ ಕಾಲ ಹೊರಡಬೇಕಿದ್ದ ಎಲ್ಲಾ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ನೂರಾರು ಪ್ರಯಾಣಿಕರು ಏನು ಮಾಡಬೇಕೆಂದು ತಿಳಿಯದೆ ಕಾಯುತ್ತಿದ್ದಾರೆ" ಎಂದು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಇರಾನ್‌ನಲ್ಲಿ ಕನ್ನಡಿಗರ ಸಂಪರ್ಕ ಕಟ್-ಕುಟುಂಬಸ್ಥರು ಆತಂಕ
ಒಂದೆಡೆ ವಿಮಾನ ಸಂಚಾರ ಸ್ಥಗಿತವಾಗಿದ್ದರೆ, ಮತ್ತೊಂದೆಡೆ ಇರಾನ್‌ನ ಒಳಗಿರುವ ಕನ್ನಡಿಗರ ಸುರಕ್ಷತೆಯ ಬಗ್ಗೆ ಆತಂಕ ಎದುರಾಗಿದೆ. ಇರಾನ್‌ನ ತೆಹ್ರಾನ್ ಹಾಗೂ ಕುಮ್ಮು ನಗರಗಳಲ್ಲಿ ಸುಮಾರು 150ಕ್ಕೂ ಹೆಚ್ಚು ಕನ್ನಡಿಗರು ನೆಲೆಸಿದ್ದಾರೆ. ವಿಶೇಷವಾಗಿ ಚಿಕ್ಕಬಳ್ಳಾಪುರದ ಗೌರಿಬಿದನೂರು ತಾಲೂಕಿನ ಅಲಿಪುರ ಗ್ರಾಮದ 100ಕ್ಕೂ ಹೆಚ್ಚು ವಿದ್ಯಾರ್ಥಿಗಳು ಇರಾನ್‌ನಲ್ಲಿ ಎಂಬಿಬಿಎಸ್ ವ್ಯಾಸಂಗ ಮಾಡುತ್ತಿದ್ದಾರೆ.
ಸಂಪರ್ಕ ಕಡಿತ: ಇರಾನ್ ಸರ್ಕಾರ ಇಂಟರ್ನೆಟ್ ಸ್ಥಗಿತಗೊಳಿಸಿರುವುದರಿಂದ ಮಧ್ಯಾಹ್ನದ ನಂತರ ಪೋಷಕರಿಗೆ ಮಕ್ಕಳೊಂದಿಗೆ ಮಾತನಾಡಲು ಸಾಧ್ಯವಾಗುತ್ತಿಲ್ಲ. ಫೋನ್ ಕರೆ ಮತ್ತು ಮೆಸೇಜ್‌ಗಳು ತಲುಪದ ಕಾರಣ ಅಲಿಪುರದ ಮನೆಮನೆಗಳಲ್ಲಿ ಪೋಷಕರು ಕಣ್ಣೀರು ಹಾಕುತ್ತಿದ್ದಾರೆ.
ಇಂಡೋ-ಇರಾನ್ ಚೇಂಬರ್ಸ್ ಪ್ರತಿಕ್ರಿಯೆ
ಇಂಡೋ-ಇರಾನ್ ಚೇಂಬರ್ಸ್ ಆಫ್ ಕಾಮರ್ಸ್‌ನ ರಾಷ್ಟ್ರೀಯ ಅಧ್ಯಕ್ಷ ಹಕೀಮ್ ರಾಜಾ ಅವರು ಮಾತನಾಡಿ, "ಮಧ್ಯಾಹ್ನದವರೆಗೆ ಎಲ್ಲರ ಜೊತೆ ಸಂಪರ್ಕವಿತ್ತು, ನಮ್ಮವರು ಸುರಕ್ಷಿತವಾಗಿದ್ದಾರೆ. ಆದರೆ ಈಗ ಇಂಟರ್ನೆಟ್ ಇಲ್ಲದ ಕಾರಣ ಮುಂದಿನ ಮಾಹಿತಿ ಲಭ್ಯವಾಗುತ್ತಿಲ್ಲ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಅಲ್ಲಿರುವ ಭಾರತೀಯರನ್ನು ಸುರಕ್ಷಿತವಾಗಿ ಕರೆತರಲು ಕ್ರಮ ಕೈಗೊಳ್ಳಬೇಕು" ಎಂದು ಮನವಿ ಮಾಡಿದ್ದಾರೆ.

