LIVE Iran Israel War Live Updates: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ
x
ಇರಾನ್‌-ಇಸ್ರೇಲ್‌ ಯುದ್ಧ

Iran Israel War Live Updates: ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ

ಇರಾನ್ ಸುಪ್ರೀಂ ಲೀಡರ್ ಆಯತೊಲ್ಲಾ ಅಲಿ ಖಮೇನಿ ಅಮೆರಿಕ-ಇಸ್ರೇಲ್ ವಾಯುದಾಳಿಯಲ್ಲಿ ಹತ್ಯೆ. ಇರಾನ್‌ನಲ್ಲಿ ತುರ್ತು ಆಡಳಿತ ಮಂಡಳಿ ರಚನೆ. ಯುದ್ಧದ ಭೀತಿಯಲ್ಲಿ ಮಧ್ಯಪ್ರಾಚ್ಯ. ಕ್ಷಣ ಕ್ಷಣ ಮಾಹಿತಿ ಇಲ್ಲಿದೆ.


Click the Play button to hear this message in audio format

ಇರಾನ್ ರಾಜಧಾನಿ ತೆಹ್ರಾನ್ ಮೇಲೆ ಅಮೆರಿಕ ಮತ್ತು ಇಸ್ರೇಲ್ ನಡೆಸಿದ ಜಂಟೀ ವಾಯುದಾಳಿಯಲ್ಲಿ ಇರಾನ್‌ನ ಪರಮೋಚ್ಚ ನಾಯಕ (Supreme Leader) ಆಯತೊಲ್ಲಾ ಅಲಿ ಖಮೇನಿ ಹತ್ಯೆಯಾಗಿದ್ದಾರೆ ಎಂದು ಇರಾನ್ ಸರ್ಕಾರಿ ಮಾಧ್ಯಮಗಳು ಖಚಿತಪಡಿಸಿವೆ. ಈ ಬೆಳವಣಿಗೆಯ ಬೆನ್ನಲ್ಲೇ, ಹೊಸ ಪರಮೋಚ್ಚ ನಾಯಕನನ್ನು ಆಯ್ಕೆ ಮಾಡುವವರೆಗೆ ದೇಶವನ್ನು ಆಳಲು ಇರಾನ್ ಮೂವರು ಸದಸ್ಯರ ಮಂಡಳಿಯನ್ನು ರಚಿಸಿದೆ.

ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಖಮೇನಿ ಸಾವನ್ನು ಖಚಿತಪಡಿಸಿದ್ದು, ಈ ಕ್ರಮವನ್ನು "ನ್ಯಾಯ" ಎಂದು ಬಣ್ಣಿಸಿದ್ದಾರೆ. ಇಸ್ರೇಲ್ ಸಹಯೋಗದೊಂದಿಗೆ ಸುಧಾರಿತ ಗುಪ್ತಚರ ವ್ಯವಸ್ಥೆಗಳನ್ನು ಬಳಸಿ ಹಿರಿಯ ನಾಯಕರನ್ನು ಗುರಿಯಾಗಿಸಿಕೊಂಡು ಈ ಕಾರ್ಯಾಚರಣೆ ನಡೆಸಲಾಗಿದೆ ಎಂದು ಅವರು ತಿಳಿಸಿದ್ದಾರೆ.

Live Updates

  • 1 March 2026 1:24 PM IST

    ಕರಾಚಿಯಲ್ಲಿ ಅಮೆರಿಕ ರಾಯಭಾರ ಕಚೇರಿಗೆ ನುಗ್ಗಿದ ಪ್ರತಿಭಟನಾಕಾರರು: ಕಲ್ಲು ತೂರಾಟ, ಅಶ್ರುವಾಯು ಪ್ರಯೋಗ!

    ಖಮೇನಿ ಅವರ ಸಾವಿನ ಸುದ್ದಿಯಿಂದ ಆಕ್ರೋಶಗೊಂಡ ನೂರಾರು ಪ್ರತಿಭಟನಾಕಾರರು ಕರಾಚಿಯಲ್ಲಿರುವ ಅಮೆರಿಕದ ರಾಯಭಾರ ಕಚೇರಿಯ ಆವರಣಕ್ಕೆ ನುಗ್ಗಿ ದಾಂಧಲೆ ನಡೆಸಿದ್ದಾರೆ. ರಾಯಭಾರ ಕಚೇರಿಯ ಮುಖ್ಯ ದ್ವಾರದ ಗೇಟ್ ಮುರಿದು ಒಳನುಗ್ಗಿದ ಪ್ರತಿಭಟನಾಕಾರರು, ಮುಖ್ಯ ಕಟ್ಟಡದ ಕಿಟಕಿ ಮತ್ತು ಬಾಗಿಲುಗಳ ಗಾಜುಗಳನ್ನು ಪುಡಿಪುಡಿ ಮಾಡಲು ಯತ್ನಿಸಿದರು. ಪರಿಸ್ಥಿತಿ ವಿಕೋಪಕ್ಕೆ ಹೋದಾಗ ಪೊಲೀಸರು ಮತ್ತು ಪ್ರತಿಭಟನಾಕಾರರ ನಡುವೆ ಭೀಕರ ಘರ್ಷಣೆ ಸಂಭವಿಸಿದ್ದು, ಜನರನ್ನು ಚದುರಿಸಲು ಪೊಲೀಸರು ಅಶ್ರುವಾಯು ಪ್ರಯೋಗಿಸಿದ್ದಾರೆ. ಇದಕ್ಕೆ ಪ್ರತಿಯಾಗಿ ಪ್ರತಿಭಟನಾಕಾರರು ಪೊಲೀಸರ ಮೇಲೆ ಕಲ್ಲು ತೂರಾಟ ನಡೆಸಿದ್ದಾರೆ. ಸದ್ಯ ಕರಾಚಿಯ ರಾಯಭಾರ ಕಚೇರಿ ಪ್ರದೇಶದಲ್ಲಿ ಬಿಗುವಿನ ವಾತಾವರಣವಿದ್ದು, ಭದ್ರತೆಯನ್ನು ಹೆಚ್ಚಿಸಲಾಗಿದೆ.

  • 1 March 2026 1:21 PM IST

    ಲಕ್ನೋದಲ್ಲಿ ಖಮೇನಿ ಹತ್ಯೆ ಕಿಚ್ಚು: ಶಿಯಾ ಸಮುದಾಯದಿಂದ ಬೃಹತ್ ಪ್ರತಿಭಟನೆ

    ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯನ್ನು ಖಂಡಿಸಿ ಉತ್ತರ ಪ್ರದೇಶದ ಲಕ್ನೋದಲ್ಲಿ ಶಿಯಾ ಸಮುದಾಯದ ಧರ್ಮಗುರುಗಳು ಬೃಹತ್ ಪ್ರತಿಭಟನೆಗೆ ಕರೆ ನೀಡಿದ್ದಾರೆ. ಶಿಯಾ ಧರ್ಮಗುರು ಮೌಲಾನಾ ಕಲ್ಬೆ ಸಾದಿಕ್ ಅವರು ಮೂರು ದಿನಗಳ ಕಾಲ ಶೋಕಾಚರಣೆಯನ್ನು ಘೋಷಿಸಿದ್ದು, ಈ ಅವಧಿಯಲ್ಲಿ ಶಿಯಾ ಮುಸ್ಲಿಮರು ತಮ್ಮ ಮನೆ ಮತ್ತು ಅಂಗಡಿಗಳ ಮೇಲೆ ಕಪ್ಪು ಬಾವುಟಗಳನ್ನು ಪ್ರದರ್ಶಿಸುವ ಮೂಲಕ ಆಕ್ರೋಶ ವ್ಯಕ್ತಪಡಿಸಲಿದ್ದಾರೆ.

    ಭಾನುವಾರ ರಾತ್ರಿ 9 ಗಂಟೆಗೆ ಲಕ್ನೋದ ಐತಿಹಾಸಿಕ 'ಛೋಟಾ ಇಮಾಂಬರಾ'ದಲ್ಲಿ ಬೃಹತ್ ಪ್ರತಿಭಟನಾ ಪ್ರದರ್ಶನ ನಡೆಯಲಿದ್ದು, ಮುಂದಿನ ಮೂರು ದಿನಗಳ ಕಾಲ ಈ ಭಾಗದ ಅಂಗಡಿ ಮುಂಗಟ್ಟುಗಳು ಬಂದ್ ಆಗಲಿವೆ. ಅಲ್ಲದೆ, ಖಮೇನಿ ಅವರ ಸ್ಮರಣಾರ್ಥವಾಗಿ ವಿವಿಧೆಡೆ ಶೋಕ ಪ್ರಾರ್ಥನಾ ಸಭೆಗಳನ್ನು (ಮಜ್ಲಿಸ್) ಆಯೋಜಿಸಲಾಗಿದ್ದು, ಲಕ್ನೋದಾದ್ಯಂತ ಬಿಗಿ ಭದ್ರತೆಯನ್ನು ಏರ್ಪಡಿಸಲಾಗಿದೆ.

  • 1 March 2026 12:29 PM IST

    ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ

    ಕುವೈತ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಮೇಲೆ ಡ್ರೋನ್ ದಾಳಿ ನಡೆದಿದ್ದು, ಘಟನೆಯಲ್ಲಿ ಹಲವು ಸಿಬ್ಬಂದಿಗಳಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಕುವೈತ್‌ನ ನಾಗರಿಕ ವಿಮಾನಯಾನ ಪ್ರಾಧಿಕಾರ ತಿಳಿಸಿದೆ. ನಿಲ್ದಾಣದ ಪ್ರಯಾಣಿಕರ ಕಟ್ಟಡ (T1) ಭಾಗಶಃ ಹಾನಿಗೊಳಗಾಗಿದ್ದು, ದಾಳಿ ನಡೆದ ತಕ್ಷಣವೇ ತುರ್ತು ರಕ್ಷಣಾ ಕಾರ್ಯವಿಧಾನಗಳನ್ನು ಜಾರಿಗೆ ತರಲಾಗಿದೆ ಎಂದು ವಕ್ತಾರ ಅಬ್ದುಲ್ಲಾ ಅಲ್-ರಾಜಿ ಸ್ಪಷ್ಟಪಡಿಸಿದ್ದಾರೆ.

    ಪ್ರಸ್ತುತ ಪರಿಸ್ಥಿತಿ ಸಂಪೂರ್ಣ ಹತೋಟಿಯಲ್ಲಿದ್ದು, ಗಾಯಾಳುಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ ಮತ್ತು ಹಾನಿಗೊಳಗಾದ ಪ್ರದೇಶದ ದುರಸ್ತಿ ಕಾರ್ಯದೊಂದಿಗೆ ಕಾರ್ಯಾಚರಣೆಯನ್ನು ಪುನರ್ ಸಂಘಟಿಸಲಾಗುತ್ತಿದೆ. ಪ್ರಯಾಣಿಕರು ಮತ್ತು ನೌಕರರ ಸುರಕ್ಷತೆಗೆ ಮೊದಲ ಆದ್ಯತೆ ನೀಡಲಾಗಿದ್ದು, ಗರಿಷ್ಠ ಸುರಕ್ಷತಾ ಮಾನದಂಡಗಳೊಂದಿಗೆ ವಿಮಾನ ನಿಲ್ದಾಣದ ಕಾರ್ಯಕಲಾಪಗಳನ್ನು ಮುಂದುವರಿಸಲಾಗುತ್ತಿದೆ ಎಂದು ಪ್ರಾಧಿಕಾರ ಖಚಿತಪಡಿಸಿದೆ.

  • 1 March 2026 12:27 PM IST

    ಇರಾನ್, ಇಸ್ರೇಲ್ ಸೇರಿ 11 ದೇಶಗಳ ಆಕಾಶ ಮಾರ್ಗ ಬಳಸದಂತೆ ಭಾರತೀಯ ವಿಮಾನಗಳಿಗೆ ಸೂಚನೆ!

    ಪಶ್ಚಿಮ ಏಷ್ಯಾದಲ್ಲಿ ಉಲ್ಬಣಿಸಿರುವ ಯುದ್ಧದ ಭೀತಿಯ ಹಿನ್ನೆಲೆಯಲ್ಲಿ ಭಾರತೀಯ ವಿಮಾನಯಾನ ಸಂಸ್ಥೆಗಳಿಗೆ ನಾಗರಿಕ ವಿಮಾನಯಾನ ಮಹಾನಿರ್ದೇಶನಾಲಯ (DGCA) ಮಹತ್ವದ ಮುನ್ನೆಚ್ಚರಿಕೆ ನೀಡಿದೆ. ಇರಾನ್ ಮೇಲಿನ ಅಮೆರಿಕ ಮತ್ತು ಇಸ್ರೇಲ್ ದಾಳಿಯ ನಂತರ ಎದುರಾಗಿರುವ ಭದ್ರತಾ ಅಪಾಯಗಳನ್ನು ಪರಿಗಣಿಸಿ, ಇರಾನ್, ಇರಾಕ್, ಇಸ್ರೇಲ್, ಸೌದಿ ಅರೇಬಿಯಾ, ಯುಎಇ, ಕುವೈತ್, ಕತಾರ್, ಬಹ್ರೇನ್, ಓಮನ್, ಜೋರ್ಡಾನ್ ಮತ್ತು ಲೆಬನಾನ್ ಸೇರಿದಂತೆ ಒಟ್ಟು 11 ಮಧ್ಯಪ್ರಾಚ್ಯ ರಾಷ್ಟ್ರಗಳ ಆಕಾಶ ಮಾರ್ಗಗಳನ್ನು (Airspace) ಬಳಸದಂತೆ ಡಿಜಿಸಿಎ ತುರ್ತು ಸಲಹೆ ನೀಡಿದೆ.

    ಮಾರ್ಚ್ 2ರವರೆಗೆ ಈ ನಿರ್ಬಂಧ ಜಾರಿಯಲ್ಲಿರಲಿದ್ದು, ಈ ದೇಶಗಳ ಮೇಲೆ ಹಾರಾಟ ನಡೆಸುವುದರಿಂದ ವಿಮಾನಗಳಿಗೆ ಮತ್ತು ಪ್ರಯಾಣಿಕರಿಗೆ ಅಪಾಯವಿರುವ ಕಾರಣ ಭಾರತೀಯ ವಿಮಾನಯಾನ ಸಂಸ್ಥೆಗಳು ಪರ್ಯಾಯ ಮಾರ್ಗಗಳನ್ನು ಅನುಸರಿಸುವಂತೆ ಸೂಚಿಸಲಾಗಿದೆ. ಈ ಬೆಳವಣಿಗೆಯಿಂದಾಗಿ ಭಾರತದಿಂದ ಯುರೋಪ್ ಮತ್ತು ಅಮೆರಿಕಕ್ಕೆ ತೆರಳುವ ವಿಮಾನಗಳ ಸಂಚಾರದಲ್ಲಿ ವಿಳಂಬ ಉಂಟಾಗುವ ಸಾಧ್ಯತೆಯಿದೆ.

  • 1 March 2026 12:21 PM IST

    ಇರಾನ್‌ನಿಂದ ಯುದ್ಧ ಘೋಷಣೆ! ಅಮೆರಿಕ-ಇಸ್ರೇಲ್ ನೆಲೆಗಳ ಮೇಲೆ ಕ್ಷಿಪಣಿ ದಾಳಿ

    ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಹತ್ಯೆಯ ಬೆನ್ನಲ್ಲೇ ಮಧ್ಯಪ್ರಾಚ್ಯದಲ್ಲಿ ಯುದ್ಧದ ಜ್ವಾಲೆ ಮತ್ತಷ್ಟು ತೀವ್ರಗೊಂಡಿದೆ. ಇರಾನ್‌ನ ಇಸ್ಲಾಮಿಕ್ ರೆವಲ್ಯೂಷನರಿ ಗಾರ್ಡ್ ಕಾರ್ಪ್ಸ್ (IRGC), ಇಸ್ರೇಲ್ ಮತ್ತು ಅಮೆರಿಕದ ಸೇನಾ ನೆಲೆಗಳನ್ನು ಗುರಿಯಾಗಿಸಿಕೊಂಡು ಬೃಹತ್ ಮಟ್ಟದ ದಾಳಿಗಳನ್ನು ಆರಂಭಿಸಿದೆ.

    ಖಮೇನಿ ಸಾವಿನ ನಂತರ ಇರಾನ್‌ನ ಪ್ರಬಲ ಸೇನಾ ಪಡೆಯಾದ IRGC, ಇಸ್ರೇಲ್ ಮತ್ತು ಅಮೆರಿಕದ ವಿರುದ್ಧ ತೀವ್ರ ಎಚ್ಚರಿಕೆ ನೀಡಿದೆ. "ಇತಿಹಾಸದಲ್ಲೇ ಅತ್ಯಂತ ಭೀಕರವಾದ ಆಕ್ರಮಣಕಾರಿ ಕಾರ್ಯಾಚರಣೆ" ನಡೆಸುವುದಾಗಿ ಪ್ರತಿಜ್ಞೆ ಮಾಡಿದ್ದ IRGC, ಈಗ ಅದರ ಭಾಗವಾಗಿ ಗಲ್ಫ್ ಪ್ರದೇಶದಲ್ಲಿರುವ ಅಮೆರಿಕದ ನೆಲೆಗಳು ಮತ್ತು ಇಸ್ರೇಲ್‌ನ ಪ್ರಮುಖ ನಗರಗಳ ಮೇಲೆ ಕ್ಷಿಪಣಿ ಹಾಗೂ ಡ್ರೋನ್ ದಾಳಿಗಳನ್ನು ನಡೆಸುತ್ತಿದೆ.

  • 1 March 2026 12:17 PM IST

    ಲೈವ್ ಟಿವಿಯಲ್ಲೇ ಬಿಕ್ಕಿ ಬಿಕ್ಕಿ ಅತ್ತ ನ್ಯೂಸ್ ಆ್ಯಂಕರ್

    ಇರಾನ್‌ನ ಪ್ರೆಸ್ ಟಿವಿಯ ಖ್ಯಾತ ನಿರೂಪಕಿ ಮರಿಯಮ್ ಅಜರ್ಚೆರ್ ಅವರು ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಅವರ ಸಾವಿನ ಸುದ್ದಿಯನ್ನು ಲೈವ್ ಟಿವಿಯಲ್ಲಿ ಪ್ರಸಾರ ಮಾಡುವಾಗ ಅತ್ಯಂತ ಭಾವುಕರಾಗಿ ಕಣ್ಣೀರಿಟ್ಟಿದ್ದಾರೆ. ಬಿಕ್ಕಿ ಬಿಕ್ಕಿ ಅಳುತ್ತಲೇ ಈ ಆಘಾತಕಾರಿ ಸುದ್ದಿಯನ್ನು ದೇಶಕ್ಕೆ ತಿಳಿಸಿದ ಅವರು, "ನಮ್ಮ ಇಮಾಮ್ ಖಮೇನಿ ಅವರು ಅಲಿಯಂತೆ ಬದುಕಿದರು ಮತ್ತು ಹುಸೇನ್‌ರಂತೆ ಹುತಾತ್ಮರಾದರು" ಎಂದು ಬಣ್ಣಿಸುವ ಮೂಲಕ ಈ ದುರಂತವನ್ನು ಎದುರಿಸಲು ದೇಶದ ಜನತೆ ಒಗ್ಗಟ್ಟಾಗುವಂತೆ ಮನವಿ ಮಾಡಿದರು. ನಿರೂಪಕಿಯ ಈ ಕಣ್ಣೀರಿನ ದೃಶ್ಯಗಳು ಮತ್ತು ಭಾವುಕ ನುಡಿಗಳು ಇರಾನ್‌ನಾದ್ಯಂತ ಸಂಚಲನ ಮೂಡಿಸಿದ್ದು, ತಮ್ಮ ನೆಚ್ಚಿನ ನಾಯಕನನ್ನು ಕಳೆದುಕೊಂಡ ಅಲ್ಲಿನ ಜನರ ಆಕ್ರೋಶ ಮತ್ತು ಶೋಕ ಮುಗಿಲು ಮುಟ್ಟುವಂತೆ ಮಾಡಿದೆ.

  • 1 March 2026 12:15 PM IST

    ಇರಾನ್ ಅಧಿಕಾರ ಹಸ್ತಾಂತರ ಪ್ರಕ್ರಿಯೆ ಆರಂಭ

    ಆಯತೊಲ್ಲಾ ಅಲಿ ಖಮೇನಿ ಅವರ ನಿಧನದ ಬೆನ್ನಲ್ಲೇ ಇರಾನ್‌ನಲ್ಲಿ ಸಾಂವಿಧಾನಿಕ ಅಧಿಕಾರ ಹಸ್ತಾಂತರ ಪ್ರಕ್ರಿಯೆಯು ಭಾನುವಾರದಿಂದ ಆರಂಭವಾಗಲಿದೆ ಎಂದು ಇರಾನ್‌ನ ಭದ್ರತಾ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಎಎಫ್‌ಪಿ (AFP) ವರದಿಯ ಪ್ರಕಾರ, ಹೊಸ ಪರಮೋಚ್ಚ ನಾಯಕನ ಆಯ್ಕೆಯಾಗುವವರೆಗೆ ದೇಶದ ಆಡಳಿತಾತ್ಮಕ ಜವಾಬ್ದಾರಿಗಳನ್ನು ನಿರ್ವಹಿಸಲು ತಾತ್ಕಾಲಿಕ ಮಂಡಳಿಯೊಂದನ್ನು ರಚಿಸಲಾಗಿದ್ದು, ಇದರಲ್ಲಿ ಇರಾನ್ ಅಧ್ಯಕ್ಷರು, ನ್ಯಾಯಾಂಗ ಇಲಾಖೆಯ ಮುಖ್ಯಸ್ಥರು  ಒಳಗೊಂಡಿರಲಿದ್ದಾರೆ. ಈ ಮಂಡಳಿಯು ಸುಪ್ರೀಂ ಲೀಡರ್ ಅವರ ಕರ್ತವ್ಯಗಳನ್ನು ತಾತ್ಕಾಲಿಕವಾಗಿ ನಿಭಾಯಿಸಲಿದ್ದು, ಇರಾನ್‌ನ ಮುಂದಿನ ರಾಜಕೀಯ ದಿಕ್ಸೂಚಿಯನ್ನು ನಿರ್ಧರಿಸುವಲ್ಲಿ ಈ ಹಂತವು ಅತ್ಯಂತ ನಿರ್ಣಾಯಕವೆಂದು ಪರಿಗಣಿಸಲಾಗಿದೆ.

  • 1 March 2026 12:09 PM IST

    ಇರಾನ್‌ನ ಮುಂದಿನ ನಾಯಕ ಯಾರೆಂದು ನನಗೆ ಗೊತ್ತು! ಟ್ರಂಪ್‌ ಅಚ್ಚರಿಯ ಹೇಳಿಕೆ

    ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರು ಇರಾನ್‌ನ ಪರಮೋಚ್ಚ ನಾಯಕ ಆಯತೊಲ್ಲಾ ಅಲಿ ಖಮೇನಿ ಹತ್ಯೆಯ ಬಳಿಕ ಅಲ್ಲಿನ ಮುಂದಿನ ನಾಯಕತ್ವದ ಬಗ್ಗೆ ಕುತೂಹಲಕಾರಿ ಸುಳಿವು ನೀಡಿದ್ದಾರೆ. ಇರಾನ್‌ನಲ್ಲಿ ಸದ್ಯ ಯಾರು ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಎಂಬ ಪ್ರಶ್ನೆಗೆ, "ಅದು ಯಾರೆಂದು ನನಗೆ ನಿಖರವಾಗಿ ತಿಳಿದಿದೆ, ಆದರೆ ಈಗಲೇ ಹೇಳಲಾರೆ" ಎಂದು ಟ್ರಂಪ್ ಪ್ರತಿಕ್ರಿಯಿಸಿದ್ದಾರೆ.

    ಅಲ್ಲಿ ಕೆಲವು ಉತ್ತಮ ಅಭ್ಯರ್ಥಿಗಳಿದ್ದಾರೆ ಎಂದು ತಿಳಿಸಿದ ಟ್ರಂಪ್‌, "ಯಾರು ಬರುತ್ತಾರೆಂದು ನನಗೆ ತಿಳಿದಿಲ್ಲ, ಆದರೆ ಯಾವುದೋ ಒಂದು ಹಂತದಲ್ಲಿ ನಾನು ಯಾರನ್ನು ಇಷ್ಟಪಡುತ್ತೇನೆ ಎಂದು ಕೇಳಲು ಅವರು ನನಗೇ ಕರೆ ಮಾಡುತ್ತಾರೆ" ಎಂದಿದ್ದಾರೆ. ಇರಾನ್ ಅಧಿಕೃತವಾಗಿ ಖಮೇನಿ ಸಾವನ್ನು ದೃಢಪಡಿಸುವ ಮೊದಲೇ ಈ ಸುದ್ದಿಯನ್ನು ಘೋಷಿಸಿದ್ದ ಟ್ರಂಪ್, 86 ವರ್ಷದ ಖಮೇನಿಯನ್ನು "ಇತಿಹಾಸದ ಅತ್ಯಂತ ದುಷ್ಟ ವ್ಯಕ್ತಿಗಳಲ್ಲಿ ಒಬ್ಬ" ಎಂದು ಕರೆದಿದ್ದಾರೆ.

Read More
Next Story